ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಒಳನುಡಿ

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

`ವಿಶ್ವದ ಒಳನುಡಿ~ ಅನ್ನುವುದು ಕವಿ ಬೇಂದ್ರೆಯವರ ಕಾಣ್ಕೆ. `ಕನ್ನಡವು ಕನ್ನಡವ ಕನ್ನಡಿಸುತಿರಬೇಕು~ ಅನ್ನುವುದು ಅಪೇಕ್ಷೆ. ನಿಜವಾಗಿ ಇರುವುದು ಒಂದೇ ಭಾಷೆ, ಮನುಷ್ಯ ಒಬ್ಬನೇ ಅನ್ನುವ ಹಾಗೆ. ಒಂದೊಂದು ಊರಲ್ಲು ಒಂದೊಂದು ಭಾಷೆ ಇದ್ದರೂ ವಿಶ್ವದ ಎಲ್ಲ ಭಾಷೆಗಳೂ ಒಳನುಡಿಯೊಂದನ್ನು ಪ್ರತಿಫಲಿಸುತ್ತಿವೆಯೇ? ವ್ಯಕ್ತವಾಗುವ ಕನ್ನಡ ವಿಶ್ವದ ಒಳನುಡಿಯ ಅಂಶವೇ ಆಗಿರುವ ಕನ್ನಡದ ಪ್ರತಿಬಿಂಬ.
 
ಹೌದೇ? ಮನುಷ್ಯನ ಮನಸ್ಸು ಈ ಪ್ರಶ್ನೆಗೆ ರೂಪಕದ ಹಾದಿ ಹಿಡಿದು, ಪುರಾಣ ಕಲ್ಪನೆಗಳಲ್ಲಿ ಬೆಳೆದು, ತತ್ವಶಾಸ್ತ್ರದ ಅರಣ್ಯದಲ್ಲಿ ಅಲೆದು, ವಿಜ್ಞಾನ ಒಪ್ಪುವ ಪ್ರಯೋಗದ ಹಾದಿಯಲ್ಲಿ ಏಳುತ್ತ ಬೀಳುತ್ತ ಖಚಿತ ಉತ್ತರ ಪಡೆಯಲು ಹೆಣಗಿದೆ. 

ಆಧುನಿಕರೆಂದು ಭಾವಿಸುವ ನಾವು ಲೋಕವನ್ನು ತಿಳಿಯುವ ಕ್ರಮವೇ ಬೇರೆ. ಇಲ್ಲಿ ನಾನು ಹೇಳುತ್ತಿರುವ ಮಾತುಗಳೆಲ್ಲವೂ ನಮ್ಮ ಕಾಲದ ತಿಳಿವಳಿಕೆಯನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಪ್ರಾಚೀನಕ್ಕೆ ಹೊಂದಿಸುವ ಪ್ರಯತ್ನ. ಹೀಗೆ ಪ್ರಯತ್ನಪಟ್ಟಾಗಲೇ ಎಂಥ ಕಣ್ಣಿಗೆ ಕಾಣದ ಸಂಗತಿಯನ್ನೂ ಚಿತ್ರವಾಗಿಸಿಕೊಳ್ಳುವ ಮನುಷ್ಯ ಮನಸ್ಸಿನ ಶಕ್ತಿಯ ಬಗ್ಗೆ ಬೆರಗು ಕೂಡ ಹುಟ್ಟುತ್ತದೆ.

ಮಾತಾಡುವ ಮರದ ಕಲ್ಪನೆಯನ್ನು ಕಾಣೋಣ. ಅಲೆಕ್ಸಾಂಡರ್ ಭಾರತಕ್ಕೆ ಬರುತಿದ್ದ. ಯಾರೇ ಆಗಲಿ ಯಾವುದೇ ಭಾಷೆಯಲ್ಲಿ ಏನೇ ಪ್ರಶ್ನೆ ಕೇಳಲಿ ಅವರ ಭಾಷೆಯಲ್ಲೇ ಉತ್ತರ ಹೇಳುವಂಥ ಮರದ ಹತ್ತಿರಕ್ಕೆ ಅವನನ್ನು ಯಾರೋ ನಡುರಾತ್ರಿಯಲ್ಲಿ ಕರೆದುಕೊಂಡು ಹೋದರು. ಮರದ ಕಾಂಡವೆಲ್ಲ ಹಾವುಗಳು; ಕೊಂಬೆಗಳಿಗೆ ಪ್ರಾಣಿ ಶಿರಗಳು; ಸೂರ್ಯ ಚಂದ್ರರ ಸ್ತೋತ್ರ ಹಾಡುತಿದ್ದ ಸುಂದರ ಹೆಣ್ಣು ಮುಖದ ಹಣ್ಣುಗಳು.

ಇಸ್ಲಾಂ ಪರಂಪರೆಯಲ್ಲಿ ವಾಖ್ ವಾಖ್ ಅನ್ನುವ ಮರದ ಕಲ್ಪನೆ ಇದೆ. ಹರಪ್ಪ ಮುದ್ರೆಗಳಲ್ಲೂ ಇದರ ಚಿತ್ರ ಇದೆ ಅನ್ನುತ್ತಾರೆ. ಇದರ ಒಂದು ಬದಿ ಹಸಿರು, ಇನ್ನೊಂದು ಬದಿ ಬಿಳುಪು. ಸುತ್ತಮುತ್ತ ನೂರು ಮೈಲು ದೂರದಲ್ಲಿ ಬೇರೆ ಮರವಿಲ್ಲ. ಮಾರ್ಚ್ ತಿಂಗಳಲ್ಲಿ ತಾಳೆ ಹಣ್ಣಿನಂತ ಹಣ್ಣು, ಅದರ ಬುಡದಲ್ಲಿ ಹೆಣ್ಣಿನ ಕಾಲು; ಎರಡನೆಯ ದಿನ ಮೀನಖಂಡ, ಮೊಳಕಾಲು; ಮೂರನೆಯ ದಿನ ಎರಡು ತೊಡೆ; ಹೀಗೇ ದಿನದಿನ ಬೆಳೆಯುತ್ತ ಏಪ್ರಿಲ್ ಕೊನೆಯ ಹೊತ್ತಿಗೆ ವಕ್ಷಸ್ಥಲ ಮೂಡಿ ಮೇ ತಿಂಗಳಲ್ಲಿ ತಲೆ, ಆಸೆ ಹುಟ್ಟಿಸುವ ಚೆಲುವಿನ ಇಡೀ ಮೈ ಪೂರ್ಣವಾಗಿ, ಕೇಶರಾಶಿ ಕೊಂಬೆಗೆ ಗಂಟಾಗಿ ತೂಗಾಡುತ್ತವೆ.

ಜೂನ್ ತಿಂಗಳ ಮಧ್ಯಕ್ಕೆ ಉದುರುತ್ತ, ತಿಂಗಳ ಕೊನೆಗೆ ಒಂದೂ ಉಳಿದಿರುವುದಿಲ್ಲ ಮರದಲ್ಲಿ. ಬೀಳುವಾಗ ಎರಡು ಸಾರಿ ವಾಖ್ ವಾಖ್ ಅನ್ನುತ್ತವೆ. ನೆಲ ಮುಟ್ಟಿತೋ ಬರೀ ಮಾಂಸ, ಮೂಳೆ ಇಲ್ಲ. ಮಾತಿಗೆ ಮೀರಿದ ಚೆಲುವಿದ್ದರೂ ಜೀವವಿಲ್ಲ. ನೆಲದಲ್ಲಿ ಹೂತು, ಯಾರೂ ಹತ್ತಿರ ಹೋಗದಷ್ಟು ದುರ್ವಾಸನೆ.

ಅಲೆಕ್ಸಾಂಡರ್ ಸಾಯುತ್ತಾನೆ ಅನ್ನುವ ಉತ್ತರ ಸಿಕ್ಕಿತಂತೆ. ಭಾಷೆಯ ನೈಸರ್ಗಿಕ ಗುಣ, ಜಟಿಲತೆ, ಭಾಷೆ ಹುಟ್ಟಿಸುವ ವ್ಯಾಮೋಹ, ಭಾಷೆಯ ಗಡಿ, ಭಾಷೆಯ ಬೆಳವಣಿಗೆ, ಸಮೃದ್ಧಿ, ನಾಶಕ್ಕೂ ಬದುಕಿನ ನಶ್ವರತೆಗೂ ಇರುವ ಸಂಬಂಧಗಳನ್ನೆಲ್ಲ ಈ ಕಲ್ಪನೆ ಹೇಳುತ್ತದೆ. ಯಾವುದೇ ಭಾಷೆಯಲ್ಲಿ ಪ್ರಶ್ನೆ ಕೇಳಿದರು ಅದೇ ಭಾಷೆಯಲ್ಲಿ ದೊರೆಯುವ ಉತ್ತರ ಎಲ್ಲ ಭಾಷೆಗಳ ಒಳನುಡಿಯ ಸೂಚನೆ; ಹಾಗೆಯೇ ಮೂಡುವ ಪ್ರಶ್ನೆ ದೊರೆಯುವ ಉತ್ತರ ಎರಡೂ ಭಾಷೆಯ ಸೃಷ್ಟಿಗಳೇ ಅನ್ನುವುದನ್ನೆಲ್ಲ ಹೇಳುವ ಹಾಗಿದೆ ಈ ಮಾತಿನ ಮರ.

ಇನ್ನೊಂದು ಮರ ಇದೆ, ಅದು ಅರಿವಿನ ಮರ. ಅದರ ಬಗ್ಗೆ ಬಂದಿರುವ ಕತೆಗಳೂ ವಿವರಗಳೂ ಸಾಕಷ್ಟಿವೆ. ಅರಿವಿನ ಮರ ಇಡೀ ವಿಶ್ವದ ರೂಪ. ಅನಂತತೆಯ ನೀರು ಹೀರುವಷ್ಟು ಆಳ ಅದರ ಬೇರು; ಶೂನ್ಯದ ಗಾಳಿಯಲ್ಲಿ ತೂಗುವ ಕೊಂಬೆಗಳು; ಸ್ವಚ್ಛ ಬೆಳಕಿನಲ್ಲಿ ಥಳಥಳಿಸುವ ಗಾಢ ಹಸಿರು ಎಲೆಗಳು; ತೊಗಟೆಗೆ ಕತ್ತಲಿನ ಕಪ್ಪು, ಕಾಡಿನ ಕಂಪು. ಆಸೆಯ ಹುಲಿಗಳಿಂದ ರಕ್ಕಸರಿಂದ ಕಾಪಾಡುವ ತಾವು ಅದು. ಅರಿವು ಅಥವ ಬೋಧ ಅದರ ಹಣ್ಣು. ಆ ಮರಕ್ಕೆ ಯಾವ ಕಾವಲೂ ಇಲ್ಲ. ಅರಿವು ಬಯಸುವ ಯಾರು ಬೇಕಾದರೂ ಮೆಲ್ಲಬಹುದು.

ಈ ಅರಿವಿನ ಮರದ ಕೆಳಗಿನ ಕೊಂಬೆಯ ಹಣ್ಣುಗಳು ಒಳಿತು ಕೆಡುಕಿನ ಜ್ಞಾನ ಕೊಡುತ್ತವೆ, ಜನ್ಮಾಂತರಗಳ ಅರಿವು ಮೂಡಿಸುತ್ತವೆ; ಮರದ ತೀರ ಮೇಲೆ ಐಕ್ಯತೆಯ, ಅಮರತ್ವದ ಫಲಗಳು. ಆ ಫಲವನ್ನು ತಿನ್ನದೆ ಕೆಳಗಿನ ಕೊಂಬೆಗೇ ತೃಪ್ತರಾದವರು ತಮಗೆ ತಿಳಿದಿರುವುದಷ್ಟೇ ಜ್ಞಾನ ಅಂದುಕೊಳ್ಳುತ್ತಾರೆ.

ಅವರು ಮುಗ್ಧರಿರಬಹುದು, ಆದರೆ ಅಜ್ಞಾನಿಗಳು. ಈ ಬೋಧಿಯ ಮರದ ಆಸರೆ ದೊರೆಯಲು ಬಲು ದೂರದ ದಾರಿ ಕ್ರಮಿಸಬೇಕು. ನಡೆಯುವವರು ಇಂದಿನ ಬದುಕಿನ ಸಿಕ್ಕು, ಹಿಂದಿನ ಬದುಕಿನ ತೊಡಕು ನೀಗಿಕೊಳ್ಳಬೇಕು. ಬದುಕಿನ ಬಟ್ಟೆಯ ಒಂದೊಂದೂ ಎಳೆ ಹೇಗೆ ಹೆಣೆದುಕೊಂಡಿದೆ ಅನ್ನುವುದನ್ನು ಅರಿತು ಮರದ ನೆರಳಿಗೆ ಹೋಗಬೇಕು.

ಈ ಮರಕ್ಕೆ ಪ್ರತಿಫಲನವೂ ಇದೆ. ಮರದ ಹೊರರೂಪ ಆಸೆ, ದುಃಖ, ಅಜ್ಞಾನ ತುಂಬಿದ ಬಹಿರಂಗದ ಬದುಕು. ಮರದ ಪ್ರತಿಫಲನ ಬದುಕಿನ ಪೂರ್ಣತೆಯ ಸ್ವಚ್ಛ ಶುಭ್ರ ಅರಿವು ಮೂಡಿದಾಗ ಕಾಣುವ ಪರಿಪೂರ್ಣತೆಯ ರೂಪ. ಸ್ಥಿರವಾಗಿ ಶಾಶ್ವತವಾಗಿ ಕಾಣುವ ಮರದ ಅಸ್ಥಿರತೆ, ಚಂಚಲತೆ ಕಾಣುವುದು ಪ್ರತಿಫಲನದಲ್ಲೇ, ಮನಸ್ಸಿನ ನೀರಿನಲ್ಲಿ ಮರದ ವೇದನೆ, ನಶ್ವರತೆಗಳ ಬಿಂಬ ಮೂಡುತ್ತದೆ.

ಈ ಯಾನದ ರೂಪಕವೇ ಬೋಧಿ. ಸಾಸುವೆ ಕಾಳಿಗಿಂತ ಪುಟ್ಟ ಬೀಜ ನೆಲ ಬಿಟ್ಟು ಮುಕ್ತ ಮಹಾವೃಕ್ಷವಾಗಿ ಬೆಳೆಯುವ ಹಾಗೆ ವ್ಯಕ್ತಿ ಬೆಳೆಯಬೇಕು. ಕೊಂಬೆಗಳು ಆಕಾಶದತ್ತ, ಬಿಳಿಲು ಭೂಮಿಯತ್ತ. ಇದು ಮನುಷ್ಯ ಸ್ಥಿತಿ. ಎರಡು ದಿಕ್ಕುಗಳ ಸೆಳೆತ- ಒಂದೆಡೆಗೆ ಸ್ವಾತಂತ್ರ್ಯ, ಬಿಡುಗಡೆ, ಇನ್ನೊಂದೆಡೆಗೆ ಬೇರು ಬಿಟ್ಟು ಸ್ಥಿರವಾಗಿರುವ ಕ್ಷೇಮ ಸುಖ ಪರಂಪರೆಯ ಕಾತರ.

ಈ ಮರವೂ ಮಾತಾಡುತ್ತದೆ. ಅದು ಇಡೀ ಸೃಷ್ಟಿಯ ಮಾತು. ಬದುಕು ಅನ್ನುವುದು ಮರವಾಗಿ, ಹಕ್ಕಿಯಾಗಿ, ನದಿಯಾಗಿ, ಬೆಟ್ಟವಾಗಿ ವ್ಯಕ್ತವಾಗುತ್ತಲೇ ಇರುತ್ತದೆ, ನಮ್ಮಡನೆ ನುಡಿಯಬಯಸುತ್ತದೆ. ಈ ಎಲ್ಲ ಉಕ್ತಿಯಲ್ಲಿರುವ ಅರ್ಥ ನಮಗೆ ಆಗುವುದಿಲ್ಲ. ಧ್ಯಾನಮಗ್ನ ಬುದ್ಧ ನೋಡಿದ. ಅಚ್ಚರಿಯೋ ಅಚ್ಚರಿ. ಮರದ ತುದಿ, ಮೊದಲು ಎಲ್ಲಿ? ಅದರ ಬೇರು ಬೆಳೆಯುತ್ತ ಬೆಳೆಯುತ್ತ ತುದಿಯವರೆಗೂ ಹೋಗಿ ಮತ್ತೆ ಕೆಳಗಿಳಿದು, ಮರದ ಕಾಂಡವನ್ನೂ ಅಪ್ಪುತ್ತಾ ನೂರಾರು ವರ್ಷ ಬೆಳೆದ ಬೋಧಿಗಳಲ್ಲಿ ಬೇರು ತಾನೇ ಕೊಂಬೆಯಾಗಿ ಕೊಂಬೆಯೇ ಬೇರು ಆಗಿರುವಾಗ ಯಾವುದನ್ನು ಯಾವುದು ಅನ್ನಬೇಕು? ಇಡೀ ಜೀವನಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ.
 
ಇದು ಸದಾ ವಿಸ್ತರಿಸುವ, ಅನಂತತೆ. ಆಳ ಧ್ಯಾನದಲ್ಲಿ ಬುದ್ಧನಿಗೆ ಸತ್ಯ ಮನದಟ್ಟಾಯಿತು. ಅರಿವಿನ ಬೆಳಕು ಮೂಡಿತು. ಮತ್ತೆ ಸಹಜನಾದ, ಮತ್ತೆ ಮುಗ್ಧನಾದ. ಅತ್ಯಂತ ಸಹಜನಾಗಿ ನಿಸರ್ಗದ ಶ್ರುತಿಗೆ ಹೊಂದಿ ಬದುಕಿದ. ವಿಶ್ವದೊಡನೆ ಒಂದಾದ. ಎದೆ ಬಡಿತ ಸೃಷ್ಟಿ ಕಂಪನದೊಂದಿಗೆ ಮೇಳೈಸಿ ನಿಸರ್ಗದ ಒಳನುಡಿಯನ್ನು ಅರಿತು ಅನುಭವಿಸಿದ. ಅವನಿಗೆ ಎಲ್ಲ ಭಾಷೆಗಳಲ್ಲೂ ಮಾತಾಡುವ ಶಕ್ತಿ ಇತ್ತು ಅನ್ನುವುದು ಆಮೇಲೆ ಹುಟ್ಟಿದ ಕಥೆ.
ಮನುಷ್ಯ ಭಾಷೆಯಾಚೆಯ, ಎಲ್ಲ ಭಾಷೆಗಳ ಒಳನುಡಿಯಾದ ಸೃಷ್ಟಿ-ಭಾಷೆಯ ರೂಪಕವಾಗಿ ಬೋಧಿಯ ಮರ ಕಾಣುತ್ತದೆ. ಕೈಗೆಟಕುವ ಹಣ್ಣು ತಿಂದು ಅದೇ ಜ್ಞಾನವೆಂದುಕೊಂಡಾಗ ಶಾಸ್ತ್ರಗಳ ಭಾಷೆಯ ವಾಗ್ವಾದವಾಗುತ್ತದೆ; ಅರಿವಿನ ಹಣ್ಣನ್ನೇ ಮೆದ್ದಾಗಷ್ಟೇ ಸಾಮರಸ್ಯದ ಒಳನುಡಿ. ಈ ಒಳನುಡಿ ಅರಿವಾಗಲು ನಾವು ನಿಜ ಅಂದುಕೊಂಡಿರುವ ಎಲ್ಲ ಸಂಗತಿಗಳು ಸಾಯಬೇಕು ಅಥವ ನಿರ್ವಾಣವಾಗಬೇಕು; ಬೋಧಿಯ ಎಚ್ಚರವೂ ಬೇಕು. ಈ ಎರಡೂ ವಿರುದ್ಧಗಳು ಬೆಸೆದುಕೊಂಡೇ ಇವೆ ಈ ಕಲ್ಪನೆಯಲ್ಲಿ.

ಇನ್ನು ಸರಸ್ವತಿ, ಎಲ್ಲ ಭಾಷೆಗಳನ್ನೂ ಒಳಗೊಂಡವಳು; ಮಂಜು ಹನಿಯಷ್ಟು ಸ್ವಚ್ಛ ಬಿಳಿಯುಡುಗೆಯವಳು. ಭಾಷೆಯಲ್ಲಿ ಮಲಿನತೆ ಇಲ್ಲ, ಮಾಲಿನ್ಯ ಏನಿದ್ದರೂ ಅರ್ಥಗಳಿಗೆ ನಾವು ಆರೋಪಿದ್ದು ಅಷ್ಟೇ. ಹರಿವ ನೀರಿನಲ್ಲಿ ತಾವರೆಯ ಮೇಲೆ ಕೂತವಳು. ಒಂದೆಡೆಯಲ್ಲಿ ಅಲುಗದೆ ನಿಂತ ತಾವರೆಯ ಹಾಗೆ ಭಾಷೆ ಸ್ಥಿರ ಅನ್ನಿಸುತ್ತಿರುತ್ತದೆ, ಗೊತ್ತೇ ಆಗದೆ ನದಿಯ ಹಾಗೆ ಪ್ರವಹಿಸುತ್ತಲೂ ಇರುತ್ತದೆ.
 
ಕೈಯಲ್ಲಿ ವೀಣೆ, ಪುಸ್ತಕ ಹಿಡಿದವಳು ಭಾಷೆಯ ನಾದ, ಶಬ್ದ ಗುಣವನ್ನೂ ಸೂಚಿಸುತ್ತಾಳೆ. ಹೃದಯದಲ್ಲಿರುವವಳು, ಕಂಠಸ್ಥಳಾಗಿರುವವಳು ಅನ್ನುವ ವಿವರಣೆ ಭಾಷೆ ಹೇಗೆ ಮನುಷ್ಯರಿಗೆ ನಿರಾಯಾಸ ಅನ್ನುವುದನ್ನೇ ಹೇಳುತ್ತದೆ. ಆಕೆ ಬ್ರಹ್ಮನ ಮಗಳೂ ಹೌದು, ಹೆಂಡತಿಯೂ ಹೌದು. ಈ ಕಾಣ್ಕೆ ಭಾಷೆಯಿಂದ ಲೋಕವೋ ಲೋಕದಿಂದ ಭಾಷೆಯೋ ಅನ್ನುವ ಸಂದಿಗ್ಧಕ್ಕೆ ಒಡ್ಡಿದ ರೂಪಕ.

ಇವೆಲ್ಲಕ್ಕಿಂತ ಬೇರೆಯಾಗಿ ಭಾಷೆಯನ್ನು ಆಲಯವಾಗಿ, ರಚನೆಯಾಗಿ ಕಂಡ ಸಮವಸರಣದ ಕಲ್ಪನೆ ಇದೆ. ತೀರ್ಥಂಕರನು ಕೇವಲ ಜ್ಞಾನ ಪಡೆದ ನಂತರ ಸಕಲ ಜೀವರಾಶಿಗಳು, ದೇವ ದೇವತೆಗಳು ಸಮವಸರಣ ಮಂಟಪದಲ್ಲಿ ನೆರೆಯುತ್ತಾರೆ. ಅದರ ವರ್ಣನೆ ಈ ಲೋಕದ ಎಲ್ಲ ಚೆಲುವು, ಶ್ರಿಮಂತಿಕೆ ಸಮೃದ್ಧಿಗಳನ್ನು ಒಳಗೊಂಡ ಅದ್ಭುತ. ಮುಖ್ಯವಾದ ಮಾತೆಂದರೆ ತೀರ್ಥಂಕರನು `ದಿವ್ಯ ಧ್ವನಿ~ಯ ಮೂಲಕ ಮಾಡುವ ಬೋಧನೆ ಆಯಾ ಜೀವಿಗಳಿಗೆ ಆಯಾ ಭಾಷೆಗಳಲ್ಲೇ ಅರ್ಥವಾಗುತ್ತದೆ ಅನ್ನುವ ಗ್ರಹಿಕೆ.

ಸಮವಸರಣವೇ ಒಂದು ನಿರ್ಮಾಣ, ಒಂದು ರಚನೆ. ಭಾಷೆಯ ರಾಚನಿಕ ಗುಣವನ್ನೂ ಎಲ್ಲ ಭಾಷೆಗಳಿಗೆ ಅನ್ವಯವಾಗಬಹುದಾದ ರಾಚನಿಕ ಲಕ್ಷಣಗಳನ್ನೂ ಇದು ಸೂಚಿಸುತ್ತದೆ ಅನ್ನಿಸಿದೆ.

ಇನ್ನು ಋಗ್ವೇದ, ಸಂಸ್ಕೃತ ವ್ಯಾಕರಣಕಾರರು ವಾಕ್ ಅಥವ ಭಾಷೆಯ ನಾಲ್ಕು ರೂಪಗಳನ್ನು ಚರ್ಚಿಸಿದ್ದಾರೆ. ಪರಾ ಮತ್ತು ಪಶ್ಯಂತೀ ಅನ್ನುವ ಎರಡು ರೂಪಗಳು ತೀರ ಸೂಕ್ಷ್ಮ; ಮಧ್ಯಮಾ ವೈಖರೀ ಅನ್ನುವ ಇನ್ನೆರಡು ರೂಪಗಳು ಭಾಷೆಯ ಸ್ಥೂಲ ಸ್ಥಿತಿಗಳು. ವೈಖರೀ ಅನ್ನುವುದು ಪದಗಳಲ್ಲಿ ಆಲೋಚಿಸುವ, ವ್ಯಕ್ತಪಡಿಸುವ ಸಾಮರ್ಥ್ಯ; ಮಧ್ಯಮಾ ಅನ್ನುವುದು ವಿಚಾರಗಳ ರೂಪವನ್ನು ಗ್ರಹಿಸುವ ವ್ಯಕ್ತಪಡಿಸುವ ಸಾಮರ್ಥ್ಯ; ಪಶ್ಯಂತೀ ಅನ್ನುವುದು ಚಿತ್ರರೂಪದ ಗ್ರಹಿಕೆಯ ಸಾಮರ್ಥ್ಯ, ಪರಾ ಅನ್ನುವುದು ಎಲ್ಲ ಭಾಷೆಗಳಾಚೆಗೆ ಇರುವ, ಎಲ್ಲ ಭಾಷೆಗಳ ಅದೃಶ್ಯ ಭಿತ್ತಿಯಾಗಿರುವ ಸ್ಪಂದನದಂಥ ಸ್ಥಿತಿ ಎಂದು ಶ್ರಿಮಾತಾ ಒಂದೆಡೆ ವಿವರಿಸಿದ್ದಾರೆ.

ವಿಶ್ವದ ಒಳನುಡಿಯಾದ ವಿಶ್ವಾತ್ಮಕ ಭಾಷೆ ಇದ್ದರೆ ಅದು `ಮೊಳೆಯದಲೆಗಳ ಮೂಕ ಮರ್ಮರ~ದಂಥ ಸ್ಥಿತಿ. ಅಂಥದ್ದು ಇರಲು ಸಾಧ್ಯವೇ, ಇದ್ದರೆ ಅದರ ಸ್ವರೂಪವೇನು ಅನ್ನುವ ವಾಗ್ವಾದ ಇನ್ನೂ ಬಗೆಹರಿದಿಲ್ಲ. ವಾಗ್ವಾದ ಅನಿವಾರ್ಯ. ಅಲ್ಲಮ ಹೇಳಲಿಲ್ಲವೇ `ಉಲಿಯ ವೃಕ್ಷದ ಅಡಿಯಲಿದ್ದು ಗಲಭೆಯನ್ನೊಲ್ಲೆನೆಂದಡೆ ಎಂತಯ್ಯ!~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT