ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ ಶೆಟ್ಟಿಯವರ ನೇಮಕಕ್ಕೆ ರಾಜ್ಯಪಾಲರು ಒಪ್ಪಬೇಕಿತ್ತು...!

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಮೊದಲೇ ಸ್ಪಷ್ಟಪಡಿಸಿ ಬಿಡುತ್ತೇನೆ: ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು ನನಗೆ ಪರಿಚಯವಿಲ್ಲ. ಅವರನ್ನು ನಾನು ಎಂದೂ ಭೇಟಿ ಮಾಡಿಲ್ಲ. ಮತ್ತು ಅವರ ಜೊತೆಗೆ ಎಂದೂ ಮಾತನಾಡಿಯೂ ಇಲ್ಲ. ಕರ್ನಾಟಕ ಹೈಕೋರ್ಟಿನಲ್ಲಿ ಹತ್ತು ವರ್ಷಗಳಿಗಿಂತ ಹೆಚ್ಚು ಅವಧಿಗೆ ನ್ಯಾಯಮೂರ್ತಿಯಾಗಿದ್ದ ಶೆಟ್ಟಿಯವರು ಸದ್ಯ ಸುಪ್ರೀಂ ಕೋರ್ಟಿನಲ್ಲಿ ವಕೀಲರಾಗಿದ್ದಾರೆ ಹಾಗೂ ಅವರ ಹೆಸರನ್ನು ಕರ್ನಾಟಕ ಲೋಕಾಯುಕ್ತ ಹುದ್ದೆಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ರಾಜ್ಯಪಾಲರು ಆ ಹೆಸರನ್ನು ಪುನರ್‌ಪರಿಶೀಲನೆ ಮಾಡಬೇಕು ಎಂದು ಸರ್ಕಾರಕ್ಕೆ ವಾಪಸು ಕಳಿಸಿದ್ದಾರೆ. ಮುಖ್ಯಮಂತ್ರಿಗಳು, ‘ಶೆಟ್ಟಿಯವರ ಹೆಸರನ್ನು ವಾಪಸು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ, ರಾಜ್ಯಪಾಲರಿಗೆ ಅಗತ್ಯ ವಿವರಣೆ ನೀಡಲಾಗುವುದು’ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾನೂನಿನ ಪ್ರಕಾರ, ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ, ವಿಧಾನ ಮಂಡಲದ ಉಭಯ ಸದನಗಳ ಅಧ್ಯಕ್ಷರು ಮತ್ತು ವಿರೋಧ ಪಕ್ಷಗಳ ನಾಯಕರ ಜೊತೆಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿ ಲೋಕಾಯುಕ್ತ ಹುದ್ದೆಗೆ ಸೂಕ್ತವಾದ ಹೆಸರನ್ನು ಶಿಫಾರಸು ಮಾಡಬೇಕು. ವಿಶ್ವನಾಥ ಶೆಟ್ಟಿಯವರ ಹೆಸರೂ ಸೇರಿದಂತೆ ಕೆಲವು ಹೆಸರುಗಳ ಕುರಿತು ಚರ್ಚೆ ಮಾಡಲು ಮುಖ್ಯಮಂತ್ರಿಗಳು ಕರೆದ ಸಭೆಗೆ ಈ ಎಲ್ಲ ಸದಸ್ಯರು ಬಂದಿದ್ದರು ಹಾಗೂ ಸರ್ವಾನುಮತದಿಂದ ಶೆಟ್ಟಿಯವರ ಹೆಸರನ್ನು ಅವರು ಶಿಫಾರಸು ಮಾಡಿದ್ದರು.

1986ರಲ್ಲಿ ಆಗಿನ ಜನತಾದಳ ಸರ್ಕಾರ ನೇಮಕ ಮಾಡಿದ್ದ ಮೊದಲ ಲೋಕಾಯುಕ್ತ ನ್ಯಾಯಮೂರ್ತಿ ಎ.ಡಿ.ಕೋಶಲ್‌ ಅವರಿಂದ ಹಿಡಿದು ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಅವರ ವರೆಗೆ ಎಲ್ಲರೂ ಪ್ರಧಾನವಾಗಿ ಮುಖ್ಯಮಂತ್ರಿಗಳ ಆಯ್ಕೆಯೇ ಆಗಿದ್ದರು. ಇದುವರೆಗಿನ ಕೊನೆಯ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್‌ ಮಾತ್ರ ಆಗಿನ ರಾಜ್ಯಪಾಲ ಎಚ್‌.ಆರ್.ಭಾರದ್ವಾಜರ ಆಯ್ಕೆಯಾಗಿದ್ದರು. ಆಗಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಅದಕ್ಕೆ ಮೌನ (?) ಸಮ್ಮತಿ ಸೂಚಿಸಿದ್ದರು.

ಭಾಸ್ಕರ ರಾವ್‌ ನೇಮಕಕ್ಕೆ ಭಾರದ್ವಾಜರು ಏಕೆ ಪಟ್ಟು ಹಿಡಿದರು ಎಂದು ಗೊತ್ತಿಲ್ಲ. ಗಾಳಿಯಲ್ಲಿ ಇರುವ ಮಾತುಗಳನ್ನೆಲ್ಲ ನಂಬಲಾಗದು; ಬರೆಯಲಾಗದು. ಆದರೆ, ಅದರಿಂದ ಕರ್ನಾಟಕಕ್ಕೂ ಒಳ್ಳೆಯದಾಗಲಿಲ್ಲ. ಲೋಕಾಯುಕ್ತಕ್ಕೂ ಒಳಿತಾಗಲಿಲ್ಲ. ಮೊದಲ ಬಾರಿಗೆ ಕರ್ನಾಟಕ ಲೋಕಾಯುಕ್ತ ಹುದ್ದೆಯ ಮಾನ ಮೂರು ಕಾಸಿಗೆ  ಹರಾಜು ಆಯಿತು. ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ನಿವಾರಿಸಲು ಹುಟ್ಟಿಕೊಂಡ ಸಂಸ್ಥೆಯಲ್ಲಿಯೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವುದು ಬಯಲಿಗೆ ಬಂತು. ಭಾಸ್ಕರ ರಾವ್‌ ಅವರ ವಿರುದ್ಧವೇ ಈಗ ತನಿಖೆ ನಡೆಯುತ್ತಿದೆ. ಅವರ ಮಗ ಜೈಲಿಗೆ ಹೋಗಿ ಬಂದಿದ್ದಾರೆ. ಇದಾಗಿ ಒಂದು ವರ್ಷ ಒಂದು ತಿಂಗಳು ಕಳೆದು ಹೋಗಿದೆ. ಆದರೆ, ಇದುವರೆಗೆ ಭಾಸ್ಕರ ರಾವ್‌ ಅವರ ಹುದ್ದೆಯನ್ನು ತುಂಬಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ನ್ಯಾಯಮೂರ್ತಿ ಎನ್‌.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಬರುವ ವರೆಗೆ ಆ ಹುದ್ದೆಯಲ್ಲಿ ಕನ್ನಡಿಗರು ಇರಲಿಲ್ಲ. ಇದ್ದವರೆಲ್ಲ ಬೇರೆ ರಾಜ್ಯದವರೇ ಆಗಿದ್ದರು ಅಥವಾ ಅವರು ಕನ್ನಡ ಭಾಷೆ ಬಲ್ಲವರು ಆಗಿರಲಿಲ್ಲ. ವೆಂಕಟಾಚಲ ಅವರು ಲೋಕಾಯುಕ್ತರಾಗಿ ಎರಡು ಕೆಲಸ ಮಾಡಿದರು. ಒಂದು, ಭ್ರಷ್ಟ ಅಧಿಕಾರಿಗಳಿಗೆ ಅವರು ಸಿಂಹಸ್ವಪ್ನವಾದರು. ಅನೇಕ ಸಾರಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅವರು ನಡೆದುಕೊಂಡರು ಎಂದು ಅನಿಸಿದರೂ ಲೋಕಾಯುಕ್ತ ಸಂಸ್ಥೆ ಏನು ಮಾಡಬಲ್ಲುದು ಎಂದು ಅವರು ತೋರಿಸಿಕೊಟ್ಟರು. ಅವರು ಮಾಡಿದ ಎರಡನೇ ಕೆಲಸ ಸಾಮಾನ್ಯ ಜನರು ತಮ್ಮ ಕಷ್ಟ ನಿಷ್ಠುರಗಳನ್ನು ಹೇಳಿಕೊಂಡು ಲೋಕಾಯುಕ್ತ ಸಂಸ್ಥೆಗೆ ಬಂದು ಪರಿಹಾರ  ಹೇಳಿಕೊಳ್ಳಲು ಅವಕಾಶ ಕಲ್ಪಿಸಿದರು. ಅದು ಅವರು ಮಾಡಿದ ಬಹಳ ದೊಡ್ಡ  ಕೆಲಸ. ಸರ್ಕಾರಿ ಆಸ್ಪತ್ರೆಗೆ ಹೋದ ಒಬ್ಬ ಬಡ ವ್ಯಕ್ತಿಗೆ ಅಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಇದ್ದರೆ ಆತ ನೇರವಾಗಿ ವೆಂಕಟಾಚಲ ಅವರಿಗೆ ಕರೆ ಮಾಡಬಹುದಿತ್ತು. ಇದು ಅವರ ಉತ್ತರಾಧಿಕಾರಿಯಾಗಿ ಬಂದ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ಕಾಲದಲ್ಲಿ ಇನ್ನೂ ಹೆಚ್ಚು ಸಮರ್ಥವಾಗಿ  ಮುಂದುವರಿಯಿತು.

ವೆಂಕಟಾಚಲ ಅವರ ಜೊತೆಗೇ ಉಪಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಪತ್ರಿ ಬಸವನಗೌಡರು, ಸಂತೋಷ್‌ ಹೆಗ್ಡೆ ಕಾಲದಲ್ಲಿಯೂ ಅದೇ ಹುದ್ದೆಯಲ್ಲಿ ಇದ್ದರು. ಹೆಗ್ಡೆ ಮತ್ತು ಪತ್ರಿಯವರು ದಿನದ 24 ಗಂಟೆಗಳ ಕಾಲ ತಮ್ಮ ಮೊಬೈಲ್‌ ಅನ್ನು ‘ಆನ್‌’ ಮಾಡಿ ಇಟ್ಟುಕೊಂಡಿರುತ್ತಿದ್ದರು. ಹಾಗೂ ನೆರವು ಕೇಳಿ ಕರೆ ಮಾಡಿದವರಿಗೆ ತಕ್ಷಣ ಸಹಾಯ ಮಾಡುತ್ತಿದ್ದರು. ‘ಲೋಕಾಯುಕ್ತ ಸಂಸ್ಥೆ ಸಾಮಾನ್ಯ ಜನರ ನೆರವಿಗೆ ಇರುವ ಒಂದು ಸಂಸ್ಥೆ’ ಎಂದು ಹೆಸರು ಗಳಿಸಿದ್ದು ಹೆಗ್ಡೆ ಮತ್ತು ಪತ್ರಿಯವರ ಕಾಲದಲ್ಲಿ. ಪತ್ರಿಕೆಗಳಲ್ಲಿ, ಇತರ ಸಮೂಹ ಮಾಧ್ಯಮಗಳಲ್ಲಿ ಸಾರ್ವಜನಿಕ ಸೇವೆಗಳಲ್ಲಿನ ಕೊರತೆಗಳ ಬಗ್ಗೆ ವರದಿ ಬಂದರೆ ತಕ್ಷಣ ಇಬ್ಬರೂ ಪ್ರತಿಕ್ರಿಯಿಸುತ್ತಿದ್ದರು. ಮತ್ತು ಕ್ರಮ ಜರುಗಿಸುತ್ತಿದ್ದರು.

ಹೆಗ್ಡೆಯವರ ನಂತರ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಶಿವರಾಜ್‌ ಪಾಟೀಲರು ಕೇವಲ ಮೂರು ತಿಂಗಳಲ್ಲಿ ರಾಜೀನಾಮೆ  ಕೊಟ್ಟು ಹೊರಟು ಹೋದರು. ಅವರು ರಾಜೀನಾಮೆ ಕೊಡುವಂತೆ ಏನೆಲ್ಲ ರಾಜಕಾರಣ ನಡೆಯಿತು ಎಂದು ನನಗೆ ಗೊತ್ತು. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿ ಪಾಟೀಲರು ನಿಷ್ಕಳಂಕವಾಗಿ ನಡೆದುಕೊಂಡಿದ್ದರು. ಲೋಕಾಯುಕ್ತಕ್ಕೆ ಅವರ ಹೆಸರು ಶಿಫಾರಸು ಆಗುತ್ತಿದ್ದಂತೆಯೇ ಅವರ ಸಮುದಾಯದವರೇ ಅವರ ಬೆನ್ನಿಗೆ ಬಿದ್ದರು. ಮತ್ತು ಹಳೆಯ ಕಡತಗಳನ್ನು ಹೊರಗೆ ತೆಗೆದರು. ಈಗ ಎಂಥ ಸ್ಥಿತಿ ಇದೆ ಎಂದರೆ ‘ದಯಮಾಡಿ ನಮ್ಮ ಹೆಸರನ್ನು ಲೋಕಾಯುಕ್ತ ಅಥವಾ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಶಿಫಾರಸು ಮಾಡಬೇಡಿ’ ಎಂದು ಸರ್ಕಾರಕ್ಕೆ ಕೈ ಜೋಡಿಸಿ ಬೇಡಿಕೊಳ್ಳಬೇಕಾದ ಸಂದರ್ಭ ನಿರ್ಮಾಣವಾಗಿದೆ!

ಒಂದು ಮಾತು ಸ್ಪಷ್ಟ : ಕರ್ನಾಟಕ ಲೋಕಾಯುಕ್ತ ಹುದ್ದೆ ಎಷ್ಟೇ ಹಲ್ಲು ಇಲ್ಲದ ಹಾವು ಎಂದು ಅನಿಸಿದರೂ ಅದು ಮನಸ್ಸು ಮಾಡಿದರೆ ಒಬ್ಬ ಮುಖ್ಯಮಂತ್ರಿಯನ್ನು ಮನೆಗೆ ಕಳುಹಿಸುವಷ್ಟು ಬಲಯುತವಾಗಿದೆ. ಅದನ್ನು ಸಂತೋಷ್‌ ಹೆಗ್ಡೆಯವರು ತೋರಿಸಿ ಕೊಟ್ಟಿದ್ದಾರೆ. ಆದರೆ, ಲೋಕಾಯುಕ್ತ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಬರೆದ ಹೆಗ್ಡೆಯವರು ಕೂಡ ತಮ್ಮನ್ನು ನೇಮಕ ಮಾಡಿದ ಮುಖ್ಯಮಂತ್ರಿಯನ್ನು ರಕ್ಷಿಸಿದರು ಎಂಬ ಆರೋಪವನ್ನು ಎದುರಿಸಿದರು. ಅವರು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನೇಮಕವಾಗಿದ್ದರು. ಅಂದರೆ ಕೋಶಲ್‌ ಅವರಿಂದ ಹಿಡಿದು ಎಲ್ಲ ಲೋಕಾಯುಕ್ತರು ಮುಖ್ಯಮಂತ್ರಿಗಳ ಮನುಷ್ಯರೇ ಆಗಿದ್ದರು. ಕೋಶಲ್‌ ಅವರಿಗೆ ‘ಹೆಗಡೆ(ರಾಮಕೃಷ್ಣ ) ಮನುಷ್ಯ’ ಎಂಬ ಬಿರುದು ಅಂಟಿಕೊಂಡಿತ್ತು. ಹೀಗೆಯೇ ಮುಂದುವರಿಸಿ ಹೇಳುವುದಾದರೆ ಭಾಸ್ಕರ ರಾವ್‌ ಮಾತ್ರ (ರಾಜ್ಯಪಾಲ ಭಾರದ್ವಾಜರ ಮನುಷ್ಯ) ಆಗಿದ್ದರು!

ಭಾಸ್ಕರರಾವ್‌ ಅವರು ರಾಜೀನಾಮೆ ಕೊಟ್ಟ ನಂತರ ಅವರ ಜಾಗ ತುಂಬಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತಮ್ಮ ಮನುಷ್ಯನನ್ನು ಹುಡುಕುತ್ತಿದ್ದರೆ ಅದು ಅರ್ಥ ಮಾಡಿಕೊಳ್ಳುವಂಥದು. ಯಾರೂ ತಮ್ಮ ತಲೆ ಮೇಲೆ ತಿಳಿದೂ ತಿಳಿದೂ ಚಪ್ಪಡಿ ಎಳೆದುಕೊಳ್ಳಲು ಬಯಸುವುದಿಲ್ಲ. ಕೇಂದ್ರ ತನಿಖಾ ದಳದ (ಸಿಬಿಐ) ಮುಖ್ಯಸ್ಥರ ನೇಮಕಕ್ಕೆ ನಿನ್ನೆ ಮೊನ್ನೆ ನಡೆದ ಕಸರತ್ತು ಮತ್ತು ತೆರೆಯ ಮರೆಯ ಹುನ್ನಾರಗಳನ್ನು ನೋಡಿದರೆ ‘ಭ್ರಷ್ಟಾಚಾರದ ಯಾವ ಕಳಂಕವೂ ಇಲ್ಲದ’ ಕೇಂದ್ರ ಸರ್ಕಾರ, ರೂಪಕ್‌ ಕುಮಾರ್‌ ದತ್ತ ಅವರಂಥ ಪ್ರಾಮಾಣಿಕ ಅಧಿಕಾರಿ ಹೆಸರನ್ನು ಪರಿಗಣಿಸಲಿಲ್ಲ ಎಂಬುದನ್ನು ಗಮನಿಸಬೇಕು. ಅಂದರೆ ಇಂಥ ಸೂಕ್ಷ್ಮ ಹುದ್ದೆಗಳಲ್ಲಿ ತಮ್ಮ ವಿರುದ್ಧ ಹೋಗದವರು ಇರಬೇಕು ಎಂದು ಎಲ್ಲರೂ ಬಯಸುತ್ತಾರೆ.

ತಮ್ಮ ಸಹಪಾಠಿ ಎಂದೋ, ಅಹಿಂದ ವರ್ಗದವರು ಎಂದೋ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಎಸ್‌.ಆರ್.ನಾಯಕರ ಹೆಸರು ಸೂಚಿಸಿದ್ದ ಮುಖ್ಯಮಂತ್ರಿಗಳು ಆ ಹೆಸರಿಗೆ ಸಮ್ಮತಿ ಸಿಗದೇ ಇದ್ದ ಕಾರಣ ಈಗ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರ ಹೆಸರನ್ನು ಕಳುಹಿಸಿಕೊಟ್ಟಿದ್ದಾರೆ. ಗಮನಿಸಬೇಕಾದ ಒಂದು ವ್ಯತ್ಯಾಸ ಎಂದರೆ ನಾಯಕರ ಹೆಸರಿಗೆ ಆಯ್ಕೆ ಸಮಿತಿಯಲ್ಲಿ ಸರ್ವ ಸಮ್ಮತಿ ಇರಲಿಲ್ಲ. ವಿಶ್ವನಾಥಶೆಟ್ಟಿಯವರ ಹೆಸರನ್ನು ಸರ್ವ ಸಮ್ಮತಿಯಿಂದ ಶಿಫಾರಸು ಮಾಡಲಾಗಿದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ಮುಖ್ಯಮಂತ್ರಿಗಳು ಶಿಫಾರಸು ಮಾಡಿದ ಹೆಸರನ್ನು ತಿರಸ್ಕರಿಸಲು ರಾಜ್ಯಪಾಲರಿಗೆ  ಅಧಿಕಾರವಿಲ್ಲ. ಅವರು ಆ ಹೆಸರಿಗೆ ಅಂಗೀಕಾರ ನೀಡದೆ ಹಾಗೆಯೇ ಇಟ್ಟುಕೊಳ್ಳಬಹುದು ಅಥವಾ ಒಂದಿಷ್ಟು ವಿವರಣೆಗಳನ್ನು ಕೇಳಬಹುದು.

ಪ್ರಜಾಪ್ರಭುತ್ವದಲ್ಲಿ ಕೆಲವು ಸೂಕ್ಷ್ಮಗಳು ಇರುತ್ತವೆ ಮತ್ತು ಕೆಲವು ಪರಂಪರೆಗಳು ಇರುತ್ತವೆ. ಲೋಕಾಯುಕ್ತ ಕಾಯ್ದೆ ಪ್ರಕಾರ ಆ ಹುದ್ದೆಗೆ ನೇಮಕ ಆಗುವವರ ಹೆಸರು ಪರಿಶೀಲಿಸಿ ಶಿಫಾರಸು ಮಾಡಲು ಒಂದು ಸಮಿತಿ ಇರುತ್ತದೆ. ಆ ಸಮಿತಿಯ ಸಭೆಯಲ್ಲಿ ಮುಖ್ಯಮಂತ್ರಿಗಳು ಎಲ್ಲರ ಜೊತೆಗೆ ‘ಅರ್ಥಪೂರ್ಣ ಚರ್ಚೆ’ ನಡೆಸಿ ಸೂಕ್ತ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು. ಅದನ್ನು ರಾಜ್ಯಪಾಲರು ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳದೇ ಇದ್ದರೆ ಅವರು ಮುಖ್ಯಮಂತ್ರಿ, ವಿಧಾನ ಮಂಡಲದ ಉಭಯ ಸದನಗಳ ಅಧ್ಯಕ್ಷರು, ವಿರೋಧ ಪಕ್ಷಗಳ ನಾಯಕರು ಹಾಗೂ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ವಿವೇಕವನ್ನು ಪ್ರಶ್ನಿಸಿದಂತೆ ಆಗುವುದಿಲ್ಲವೇ? ವಿಶ್ವನಾಥ ಶೆಟ್ಟಿಯವರ ಹೆಸರನ್ನು ಎಲ್ಲರೂ ಸರ್ವಾನುಮತದಿಂದ ಶಿಫಾರಸು ಮಾಡಿದ್ದಾರೆ. ಹಾಗಾದರೆ ರಾಜ್ಯಪಾಲರು ಏನನ್ನು ಹೇಳಲು ಹೊರಟಿದ್ದಾರೆ? ಅವರಿಗೆ ಸೂಕ್ತ ಎನಿಸುವಂಥ ಹೆಸರನ್ನು ಮಾತ್ರ ಈ ಸಮಿತಿ ಶಿಫಾರಸು ಮಾಡಲು ಆಗುತ್ತದೆಯೇ? ಹಾಗೆ ಮಾಡಿ ಈಗಾಗಲೇ ಇಡೀ ಲೋಕಾಯುಕ್ತಕ್ಕೇ ಕಳಂಕ ಹಚ್ಚಿದ್ದಾಯಿತಲ್ಲ!

ಲೋಕಾಯುಕ್ತರ ಹೆಸರನ್ನು ಶಿಫಾರಸು ಮಾಡುವ ಅಧಿಕಾರವನ್ನು ಸುಪ್ರೀಂ ಕೊರ್ಟು ಕೂಡ ಮುಖ್ಯಮಂತ್ರಿಗಳ ಅಧಿಕಾರ ಎಂದೇ ತಿಳಿಸಿದೆ. ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರನ್ನು ಉಪಲೋಕಾಯುಕ್ತ ಹುದ್ದೆಗೆ ನೇಮಿಸಿ ಅದು ರದ್ದುಗೊಂಡ ವಿಚಾರ ಸುಪ್ರೀಂ ಕೋರ್ಟಿನ ಮೆಟ್ಟಿಲು ಏರಿದಾಗ ಇದೇ ತೀರ್ಪು ಬಂದಿದೆ. ಅಂದರೆ ರಾಜ್ಯಪಾಲರಿಗೆ ಅಲ್ಲಿ ಹೆಚ್ಚಿನ ಅಧಿಕಾರ ಇಲ್ಲ ಎಂದೇ ಅರ್ಥ.

ವಿಶ್ವನಾಥ ಶೆಟ್ಟಿಯವರು  ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ತೆಗೆದುಕೊಂಡಿದ್ದಾರೆ ಎಂಬ ವಿಚಾರವನ್ನು ನಾನು ಇಲ್ಲಿ ಬೇಕೆಂತಲೇ ಕೊನೆಯಲ್ಲಿ ಪ್ರಸ್ತಾಪಿಸುತ್ತಿರುವೆ. ಕರ್ನಾಟಕದಿಂದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಹಾಗೂ ಮುಖ್ಯ ನ್ಯಾಯಮೂರ್ತಿ ಹುದ್ದೆಯ ವರೆಗೆ ಹೋದ ಎಷ್ಟು ಜನರು ನ್ಯಾಯಾಂಗ ಬಡಾವಣೆಯಲ್ಲಿ ಹೆಚ್ಚುವರಿ ನಿವೇಶನ ಹೊಂದಿಲ್ಲ?  ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಹೊಂದಿದ್ದರೂ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಅಥವಾ ಮುಖ್ಯನ್ಯಾಯಮೂರ್ತಿ ಆಗಲು ಅಡ್ಡಿಯಿಲ್ಲ ಎನ್ನುವುದಾದರೆ ಕರ್ನಾಟಕ  ಲೋಕಾಯುಕ್ತ ಆಗಲು ಏಕೆ ಅಡ್ಡಿ ಇರಬೇಕು? ಲೋಕಾಯುಕ್ತ ಹುದ್ದೆ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಮತ್ತು ಮುಖ್ಯ ನ್ಯಾಯಮೂರ್ತಿ ಹುದ್ದೆಗಿಂತ ದೊಡ್ಡ  ಹುದ್ದೆಯೇನೂ ಅಲ್ಲವಲ್ಲ? ಶೆಟ್ಟಿಯವರು ಸುಪ್ರೀಂ ಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದಾಗ ಡಿ.ಕೆ.ಶಿವಕುಮಾರ್‌ ಮತ್ತು ಜನಾರ್ದನ ರೆಡ್ಡಿಯವರ ಪರವಾಗಿ ವಾದಿಸಿದ್ದರು ಎಂಬುದು ಅವರ ವಿರುದ್ಧ ಇರುವ ಇನ್ನೊಂದು ಆರೋಪ.

ಪಾಕ್‌ ಉಗ್ರ ಕಸಬ್‌ ಪರವಾಗಿಯೇ ವಾದ ಮಾಡಬಹುದಾದರೆ ಶಿವಕುಮಾರ್‌ ಮತ್ತು ರೆಡ್ಡಿಯವರ ಪರವಾಗಿ ಏಕೆ ವಾದ ಮಾಡಬಾರದು? ಅಪರಾಧಿ ಎಂದು ಸಾಬೀತು ಆಗುವ ವರೆಗೆ ಎಲ್ಲರೂ ನಿರಪರಾಧಿಗಳು ಹಾಗೂ ಅವರ ಪರವಾಗಿ ವಾದ ಮಾಡಲು ಎಲ್ಲರಿಗೂ ಹಕ್ಕು ಇದೆ. ಶೆಟ್ಟಿಯವರು ತಾವು ವಾದ ಮಾಡಿದ ಪ್ರಕರಣದಲ್ಲಿಯೇ ತೀರ್ಪು ನೀಡುವಂಥ ಸ್ಥಾನದಲ್ಲಿ ಕುಳಿತುಕೊಳ್ಳುವ ಸಂದರ್ಭ ಬಂದರೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಮಾತ್ರ ಖಂಡಿತವಾಗಿ  ಗಮನಿಸಬೇಕಾದ ಸಂಗತಿ. ಕರ್ನಾಟಕ ನ್ಯಾಯಾಂಗದ ಈಚಿನ  ಇತಿಹಾಸದಲ್ಲಿ ಯಾವ ಯಾವ ಪ್ರಕರಣಗಳಲ್ಲಿ ಯಾವ ಯಾವ ನ್ಯಾಯಮೂರ್ತಿಗಳು ವಿಚಾರಣೆಯಿಂದ ಕಾರಣ ಕೊಡದೇ ಹಿಂದೆ ಸರಿದರು ಎಂಬುದು ನಮಗೆ ಗೊತ್ತೇ ಇದೆ!

ನ್ಯಾಯಮೂರ್ತಿಯಾಗಿ ಒಬ್ಬ ವ್ಯಕ್ತಿ ಹೇಗೆ ನಡೆದುಕೊಂಡಿದ್ದಾರೆ ಮತ್ತು ನ್ಯಾಯದೇವತೆಯ ಸಾಕ್ಷಿಯಾಗಿ ಹೇಗೆ ನಿಷ್ಪಕ್ಷಪಾತವಾಗಿ ತೀರ್ಪು ನೀಡಿದ್ದಾರೆ ಎಂದು ನೋಡಿ ಅವರನ್ನು ಇಂಥ ಹುದ್ದೆಗಳಿಗೆ ನೇಮಕ ಮಾಡಬೇಕು. ಶೆಟ್ಟಿಯವರು ಹೈಕೋರ್ಟಿನ ನ್ಯಾಯಮೂರ್ತಿಯಾಗಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದರು ಎಂದು ನಾನು ನನ್ನ ಪರಿಚಯದ ಕೆಲವರು ನ್ಯಾಯಮೂರ್ತಿಗಳಿಂದ ಹಾಗೂ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಯಾಗಿ ಮತ್ತು ಉಪಲೋಕಾಯುಕ್ತರಾಗಿ ಅತ್ಯಂತ ನಿಸ್ಪೃಹರಾಗಿ ಕೆಲಸ  ಮಾಡಿದವರಿಂದ ಕೇಳಿ ತಿಳಿದೆ. ಅವರು ಲೋಕಾಯುಕ್ತರಾಗಲು ಅದೇ ದೊಡ್ಡ ಅರ್ಹತೆ. ಒಂದು ವೇಳೆ ಶೆಟ್ಟಿಯವರ ನೇಮಕ ಆಗದೇ ಇದ್ದರೆ ಅವರಿಗೆ ಆರ್ಥಿಕವಾಗಿ ನಷ್ಟವೇನೂ ಆಗುವುದಿಲ್ಲ. ಅವರು ಸುಪ್ರೀಂ ಕೋರ್ಟಿನ ವಕೀಲರಾಗಿ ಬೇಕಾದಷ್ಟು ಹಣ ಗಳಿಸಬಹುದು.

ಶಿವರಾಜ್‌ ಪಾಟೀಲರು ಲೋಕಾಯುಕ್ತರಾಗಲಿಲ್ಲ ಎಂದು ಅವರಿಗೇನು ನಷ್ಟವೂ ಆಗಲಿಲ್ಲ;  ಅವರ ಸಾರ್ವಜನಿಕ ಜೀವನವೂ ಮುಗಿಯಲಿಲ್ಲ. ಆದರೆ, ಜನರ ಕಷ್ಟಗಳಿಗೆ ಪರಿಹಾರ ಒದಗಿಸಬೇಕಿದ್ದ ಲೋಕಾಯುಕ್ತ ಸಂಸ್ಥೆ ಮುಖ್ಯಸ್ಥರಿಲ್ಲದೇ ಸೊರಗಿತು. ಈಗ ಶೆಟ್ಟಿಯವರ ನೇಮಕವೂ ಆಗದೇ ಇದ್ದರೆ ಇನ್ನೂ ಸೊರಗಬಹುದು. ಹಾಗೂ ಲೋಕಾಯುಕ್ತ ನೇಮಕ ಮಾಡಲು ಆಗದೇ ಇರುವುದಕ್ಕೆ ರಾಜ್ಯಪಾಲರೇ ಕಾರಣ ಎಂದು ರಾಜ್ಯ ಸರ್ಕಾರ ದೂರುತ್ತ ಇರಬಹುದು.

ಮುಗಿಸುವ ಮುನ್ನ ಒಂದು ಮಾತು : ರಾಜ್ಯಪಾಲ ವಜುಭಾಯಿ ವಾಲಾ ಅವರು ತಮ್ಮ ಅವಧಿಯಲ್ಲಿ ಪ್ರಶ್ನಾರ್ಹವಾದ ನೇಮಕವನ್ನು ಅಥವಾ ನೇಮಕಗಳನ್ನು ಮಾಡಿಯೇ ಇಲ್ಲವೇ? ಮಾಡಿದ್ದಾರಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT