ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವನ್ನು ಮಹಿಳೆ ಕಣ್ಣಲ್ಲಿ ನೋಡುವುದೆಂದು?

Last Updated 9 ಜನವರಿ 2017, 19:30 IST
ಅಕ್ಷರ ಗಾತ್ರ

2017 ನೇ ಇಸವಿ, ಬೆಂಗಳೂರಿನಲ್ಲಿ  ಕಪ್ಪುಚುಕ್ಕೆಯೊಂದಿಗೆ ಆರಂಭವಾದದ್ದು ದುರದೃಷ್ಟಕರ. ಅದೂ ‘ಪ್ರವಾಸಿ ಭಾರತೀಯ ದಿವಸ್’ ಕಾರ್ಯಕ್ರಮ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ‘ಬ್ರ್ಯಾಂಡ್ ಬೆಂಗಳೂರು’ ಪ್ರತಿಷ್ಠೆಗೆ ಧಕ್ಕೆ ತರುವಂತಹ ಪ್ರಕರಣಗಳು ವರದಿಯಾದವು. ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದುರ್ವರ್ತನೆ, ದೌರ್ಜನ್ಯ ಪ್ರಕರಣಗಳ ವಿವರ, ವಿಡಿಯೊ ದೃಶ್ಯಾವಳಿಗಳು ಜಾಗತಿಕವಾಗಿ ದೊಡ್ಡ ಸುದ್ದಿಯಾಯಿತು. ಯಥಾಪ್ರಕಾರವಾಗಿ ಇಂತಹ ಪ್ರಕರಣಗಳನ್ನು ಲಘು ಧಾಟಿಯಲ್ಲಿ ಪರಿಗ್ರಹಿಸುವ ಪ್ರವೃತ್ತಿ  ನಮ್ಮ ಗೃಹ ಸಚಿವರು ಹಾಗೂ ಪೊಲೀಸರ ಮಾತುಗಳಲ್ಲಿ ವ್ಯಕ್ತವಾಯಿತು. ‘ಇಂತಹ ಘಟನೆಗಳು ನಡೆಯುವುದಕ್ಕೆ ಆಸ್ಪದ ನೀಡುವುದಿಲ್ಲ’ ಎಂಬಂತಹ ಮಾತುಗಳ ಬದಲಿಗೆ ಗೃಹ ಸಚಿವ ಜಿ. ಪರಮೇಶ್ವರ ಅವರು  ‘ಇಂತಹ ಘಟನೆಗಳು ನಡೆಯುತ್ತವೆ. ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಿಸುವುದರಿಂದ  ಸಮಸ್ಯೆಗಳಾಗುತ್ತವೆ’ ಎಂಬಂತಹ ಮಾಮೂಲು ಉತ್ತರವನ್ನೇ ನೀಡಿ ಅಸೂಕ್ಷ್ಮತೆ ಪ್ರದರ್ಶಿಸಿದ ನಂತರ, ಸಮಾಜವಾದಿ ಪಕ್ಷದ ನಾಯಕ  ಅಬು ಅಜ್ಮಿ ಅವರು  ‘ಮಹಿಳೆಯರು ಸಕ್ಕರೆಯಂತಾದ್ದರಿಂದ  ಇರುವೆಗಳು ಮುತ್ತುತ್ತವೆ’ ಎಂದು ಹೇಳಿದ್ದು ಗಾಯದ ಮೇಲೆ ಬರೆ ಎಳೆದಂತಾಗಿತ್ತು.

ಸಂತ್ರಸ್ತರನ್ನು ಸಂತೈಸಿ ಗೂಂಡಾಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳುವ ಬದಲು ಮಹಿಳೆ ಮೇಲೇ ಆರೋಪ ಹೊರಿಸುವ ಈ ಪ್ರವೃತ್ತಿಗೆ ಕೊನೆ ಎಂದು? ತೊಂದರೆ ತಾವಾಗೇ ಆಹ್ವಾನಿಸಿಕೊಳ್ಳುತ್ತಾರೆ ಎಂಬಂಥ ಹಗುರ ಭಾವನೆಗಳಿಗೆ ಏನೆಂದು ಹೇಳಬೇಕು? 

ಮಹಿಳೆಯನ್ನು ಸಹಜೀವಿಯಾಗಿ ಪರಿಗಣಿಸಲು ಸಾಧ್ಯವಾಗದ ಸಮಾಜಕ್ಕೆ  ಕಾನೂನಿನ ಭಯವಾದರೂ ಇರಬೇಕು. ನಮ್ಮ ಕಾನೂನುಗಳು ಸಾಕಷ್ಟು ಸಮಕಾಲೀನ  ಅಗತ್ಯಗಳಿಗೆ ಸ್ಪಂದಿಸುವ ಹಾಗೇ  ತಿದ್ದುಪಡಿಗೊಂಡಿವೆ.  ಆದರೆ ಅವನ್ನು ಜಾರಿ ಮಾಡದಿರುವುದಕ್ಕೆ ಪೊಲೀಸರಲ್ಲಿ ನಿಜಕ್ಕೂ ಏನೇನೂ ಸಮರ್ಥನೆ ಇಲ್ಲ.  ಬದಲಿಗೆ ಇದು ಮನಸ್ಥಿತಿಯ ಸಮಸ್ಯೆ ಎಂದಷ್ಟೇ ಹೇಳಬೇಕಾಗುತ್ತದೆ.

ಜಾಗತಿಕ ನಗರವಾಗಿದೆ ಬೆಂಗಳೂರು. ಮಾಲ್‌ಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಮೆಟ್ರೊಗಳಲ್ಲಿ, ಹೋಟೆಲ್‌ಗಳಲ್ಲಿ ಒಂಟಿ ಮಹಿಳೆಯರು ಸಾಕಷ್ಟು ಕಾಣಿಸಿಕೊಳ್ಳುತ್ತಾರೆ. ಹೀಗಿದ್ದೂ ಪುರುಷರಷ್ಟೇ ಸಮಾನ ನೆಲೆಯಲ್ಲಿ ಮುಕ್ತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಆಕೆ ಇರಲಾಗುವುದಿಲ್ಲ. ಏಕೆ ಹೀಗೆ? ‘ಹೊಸ್ತಿಲು ದಾಟಿದ ಹೆಣ್ಣು’ ಎಂಬುದೊಂದು ನುಡಿಗಟ್ಟಿದೆ ನಮ್ಮಲ್ಲಿ, ಮರ್ಯಾದಸ್ತ ಹೆಣ್ಣುಮಕ್ಕಳು ಮನೆಯೊಳಗೆ  ಇರುವವರು ಎಂಬಂಥ ಪರಿಕಲ್ಪನೆಯನ್ನು ಧ್ವನಿಸುತ್ತದೆ ಅದು. ಆದರೆ ಕಾಲ ಬದಲಾದಂತೆ ಹೆಣ್ಣುಮಕ್ಕಳು ಹೊರಗೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವುದು ಈಗ ದೊಡ್ಡ ಸಂಗತಿಯಲ್ಲ.  ಹೀಗಾಗಿ  ಹೊಸ್ತಿಲು ದಾಟಿ ಹೊರ ಬಂದಿದ್ದರೂ ಸಾರ್ವಜನಿಕ ಸ್ಥಳಗಳು ಈಗಲೂ ಮಹಿಳಾ ಸ್ನೇಹಿಯಾಗಿಲ್ಲ ಎಂಬುದನ್ನು ಮಹಿಳೆ ದಿನನಿತ್ಯ ಎದುರುಗೊಳ್ಳುತ್ತಿರುತ್ತಾಳೆ. ಸಾರ್ವಜನಿಕ ಸ್ಥಳಗಳಲ್ಲಿ ಇರುವುದಕ್ಕೆ ಮಹಿಳೆಗೆ ಒಂದು ನಿರ್ದಿಷ್ಟ  ಉದ್ದೇಶ  ಇದ್ದೇ ಇರಬೇಕು. ಅದೂ ರಾತ್ರಿಯ ವೇಳೆ ಬಸ್ಸಿಗೆ ಕಾಯುತ್ತಿರುವಂತೆ ಬಸ್ ನಿಲ್ದಾಣದಲ್ಲೋ ಮತ್ತೆಲ್ಲೋ ನಿಗದಿತ ಸ್ಥಳಗಳಲ್ಲಷ್ಟೇ ಆಕೆಗೆ ನಿಲ್ಲಲು ಸಾಧ್ಯ. ಸುಮ್ಮನೆ ತಾನೇ ತಾನಾಗಿ ಮನಸೋ ಇಚ್ಛೆ ಸಾರ್ವಜನಿಕ ಸ್ಥಳದಲ್ಲಿ ಒಂಟಿಯಾಗಿ ನಿಲ್ಲುವುದು, ಓಡಾಡುವುದು ಮಹಿಳೆಗೆ ಅಸಾಧ್ಯ. ವೇಶ್ಯೆಯೆಂದು (ವೇಶ್ಯೆ ಎಂದಾಕ್ಷಣ ಆಕೆಗೆ ಹಿಂಸೆ ಕೊಡಬಹುದೆಂದಲ್ಲ) ಭಾವಿಸಿ ಕಾಟ ಕೊಡುವುದು ಶುರುವಾಗುತ್ತದೆ.  

ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಷರತ್ತುಬದ್ಧ ಪ್ರವೇಶ ಮಾತ್ರ ಮಹಿಳೆಗೆ ಇರುವುದು. ತನ್ನೆಲ್ಲಾ ಕ್ರಿಯೆಗಳಲ್ಲಿ ತಾನೆಷ್ಟು ಮರ್ಯಾದಸ್ತಳು ಎಂಬುದನ್ನು ಆಕೆ ಪ್ರದರ್ಶಿಸುತ್ತಲೇ  ಇರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಆಕೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಅದು ಮಹಿಳೆಯ ಸ್ವಯಂಕೃತ ಅಪರಾಧ ಎಂದೇ ಸುತ್ತಲಿನವರು, ಪೊಲೀಸರು ಹಾಗೂ ವ್ಯವಸ್ಥೆ ಬಣ್ಣಿಸುತ್ತದೆ. ಮೊನ್ನೆ  ಬೆಂಗಳೂರಿನಲ್ಲಿ  ಆದದ್ದೂ ಅದೆ.  ತಡರಾತ್ರಿ 2 ಗಂಟೆವರೆಗೆ ಸಾರ್ವಜನಿಕ  ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ  ನಗರದ ಪೊಲೀಸರೇ ಅವಕಾಶ ನೀಡಿದ್ದರು. ಆದರೆ ಹುಡುಗರೊಂದಿಗೆ ಸಮಸಮವಾಗಿ ಹೆಣ್ಣುಮಕ್ಕಳೂ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದು ಸ್ವಯಂಕೃತ ಅಪರಾಧ ಎಂದೇ ಸಮಾಜ ಭಾವಿಸುತ್ತದೆ. ಗಂಡುಮಕ್ಕಳು ಏನು ಬೇಕಾದರೂ ಮಾಡಬಹುದು. ಸಮಾಜದ ಕಣ್ಣಲ್ಲೇಕೆ ಅದು ದೊಡ್ಡ ಅಪರಾಧವಾಗುವುದಿಲ್ಲ? ನಡೆನುಡಿ ವಿಚಾರದಲ್ಲಿ ನಿಮ್ಮ ಹೆಣ್ಣುಮಕ್ಕಳಿಗೆ ಕಟ್ಟುಪಾಡುಗಳನ್ನು ವಿಧಿಸುವಂತೆ ‘ಹೊರಗೆ ಎಲ್ಲಿಗೆ ಹೋಗುತ್ತಿದ್ದೀ ಎಂದು  ಗಂಡುಮಕ್ಕಳಿಗೂ  ತಾಕೀತು ಮಾಡಿ’ ಎಂದು  ಪ್ರಧಾನಿ ಮೋದಿ ನೀಡಿದ ಕರೆ ಜನರ ಮನದಾಳಗಳಿಗೆ ಇನ್ನೂ ಇಳಿಯಬೇಕಿದೆ. ಹೊಸ ವರ್ಷಾಚರಣೆಗಾಗಿ ಪಾಶ್ಚಿಮಾತ್ಯರಂತೆ ಗುಂಪುಗೂಡಿದ ಸಂದರ್ಭದಲ್ಲಿ ಮಾತ್ರವಲ್ಲ ಜಾತ್ರೆಗಳೂ ಸೇರಿದಂತೆ ಜನ ಗುಂಪುಗೂಡಿದ ಎಲ್ಲೆಡೆ, ನೂಕುನುಗ್ಗುಲು ಅಥವಾ  ಸಾರ್ವಜನಿಕ  ಸಾರಿಗೆಗಳಲ್ಲಿ  ಪ್ರಯಾಣಿಸುವಾಗಲೂ ತನ್ನ  ದೇಹದ ಮೇಲೆ  ದುರುದ್ದೇಶಪೂರ್ವಕವಾಗಿ ‘ಕೈ ಹಾಕುವಂತಹ’ ಕಾಟಗಳನ್ನು ಮಹಿಳೆ ನಿವಾರಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. 

ಸರ್ಕಾರಿ ಉದ್ಯೋಗದಲ್ಲಿದ್ದು ಕಾರ್ಯ ನಿಮಿತ್ತ  ಬೇರೆ ಬೇರೆ ಊರುಗಳಿಗೆ ಬಸ್ಸುಗಳಲ್ಲಿ ಓಡಾಡುತ್ತಿದ್ದ ನನ್ನ ಪರಿಚಿತ ಮಹಿಳೆಯೊಬ್ಬರು ತಮಗೆ ಮದುವೆಯಾಗಿರದಿದ್ದರೂ ಕರಿಮಣಿ ಇದ್ದ ಮಂಗಳಸೂತ್ರವನ್ನು ಸದಾ ಧರಿಸಿರುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಲ್ಪಮಟ್ಟಿಗಾದರೂ ಕಾಮಣ್ಣರ ಕಾಟಗಳಿಂದ ಪಾರಾಗಲು ತಾಳಿಯೂ ರಕ್ಷಣೆಯ ಅಸ್ತ್ರವಾಗಬಲ್ಲುದು ಎಂಬುದು ನನಗೆ ಆಗ ಅರಿವಾಗಿತ್ತು.  ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದರೂ ತಾನು ಕುಟುಂಬಸ್ಥೆ ಎಂಬುದನ್ನು ಪದೇ ಪದೇ ಸಂಕೇತಗಳ ಮೂಲಕ ಹೊರ ಜಗತ್ತಿಗೆ ಸಾರಬೇಕಾದ ಅನಿವಾರ್ಯ ಹೆಣ್ಣಿಗಿದೆ. ಆದರೆ ಈ ಅನಿವಾರ್ಯ ಗಂಡಿಗಿಲ್ಲ.  ರಸ್ತೆಯಲ್ಲಿ ಒಂಟಿ  ಮಹಿಳೆ ತಾನೇ ತಾನಾಗಿ ನಿಂತಿರುವುದು ಸಾಧ್ಯವಿಲ್ಲ. ಅಂಗೈಯಲ್ಲಿರುವ  ಫೋನ್‌ನಲ್ಲಿ ನೋಡುತ್ತಲೋ  ಇಯರ್ ಫೋನ್‌ ಹಾಕಿಕೊಂಡು ಸಂಗೀತ ಕೇಳುತ್ತಲೋ ಅಥವಾ ಯಾರಿಗೋ ಕಾಯುತ್ತಿರುವಂತೆಯೋ ಒಟ್ಟಾರೆ ಯಾವುದಾದರೊಂದು ಕೆಲಸದಲ್ಲಿ  ತಾನು  ಬಿಝಿಯಾಗಿರುವಂತೆ ತೋರಿಸಿಕೊಳ್ಳಬೇಕಾಗುವ ಅನಿವಾರ್ಯ ಮಹಿಳೆಗಿರುತ್ತದೆ.

ಮಹಿಳೆ ಮೇಲಿನ ಅಪರಾಧಗಳು ವಾಸ್ತವವಾಗಿ ಹೆಚ್ಚಾಗಿ ಮನೆಗಳೊಳಗೇ ನಡೆಯುತ್ತವೆ.  ಹಾಗೆಯೇ ಬೀದಿ ಕಾಮಣ್ಣರಿಂದ ಕೀಳುಮಟ್ಟದ ಕಿರುಕುಳಗಳಿಗೂ ಅವಳು ಒಳಗಾಗುತ್ತಲೇ ಇರುತ್ತಾಳೆ. ಏನೇನೋ ಮಾತುಗಳನ್ನಾಡುತ್ತಾ ಕಿರುಕುಳ ಕೊಡುವುದು, ಹಿಂಬಾಲಿಸುವುದು, ಅಂಗಾಂಗ ಸ್ಪರ್ಶಿಸುವುದು, ಕೆಟ್ಟದಾಗಿ ದಿಟ್ಟಿಸುವುದು–  ಇವೆಲ್ಲಾ ಬೀದಿಗಳಲ್ಲಿ ದಿನನಿತ್ಯ ಮಹಿಳೆ ಎದುರಿಸುವ ಕಿರಿಕಿರಿಗಳು.  ಇಂತಹವು ಅನೇಕ ಸಂದರ್ಭಗಳಲ್ಲಿ ಮಹಿಳೆಯಲ್ಲಿ ಖಿನ್ನತೆಯನ್ನೂ  ಉಂಟುಮಾಡಬಹುದು. ಬೆಂಗಳೂರಿನ ಚಿತ್ರೋತ್ಸವದಲ್ಲಿ ಮೂರು ವರ್ಷಗಳ ಹಿಂದೆ ಪ್ರದರ್ಶಿತವಾಗಿದ್ದ ಈಜಿಪ್ಟ್‌ನ ‘ಕೈರೊ 6 7 8 ’ ಸಿನಿಮಾದಲ್ಲಿ  ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ನಿರೂಪಿಸಲಾಗಿತ್ತು.  ಅಭದ್ರತೆ, ಕೀಳರಿಮೆ ಹುಟ್ಟುಹಾಕಬಹುದಾದ ಕಿರುಕುಳಗಳನ್ನು ಹಗುರವಾಗಿ ಪರಿಗಣಿಸುವುದು ಸಲ್ಲದು.  ಆದರೆ ನಮ್ಮ ಗೃಹ ಸಚಿವರಿಗೆ ಇದನ್ನು ಅರ್ಥ ಮಾಡಿಸುವುದು ಹೇಗೆ?

ಇಂತಹ  ಕಿರುಕುಳಗಳನ್ನೇ   ಸಾರ್ವಜನಿಕ ಜಾಗಗಳಿಗೆ ಹೆಣ್ಣುಮಕ್ಕಳು   ಹೋಗುವುದಕ್ಕೆ ಬಿಡದಿರಲು ಕುಟುಂಬಗಳು ನೆಪ ಮಾಡಿಕೊಳ್ಳುತ್ತವೆ. ಹೀಗಾಗಿ  ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಜಾಗಗಳು ಮಹಿಳೆಗೆ ನಿಷಿದ್ಧವಾಗಿಯೇ ಉಳಿಯುತ್ತವೆ.  ಕಾಳಜಿಯ ನೆಪದಲ್ಲಿ ಕತ್ತಲಾದ ಮೇಲೆ ಮನೆಯ ಹೆಣ್ಣುಮಕ್ಕಳು ಹೊಸ್ತಿಲು ದಾಟಬಾರದು ಎಂಬ ಅಘೋಷಿತ ನಿಯಮ ಈ ಹಿಂದೆ ಇತ್ತು.  ಜಾಗತೀಕರಣದ ನಂತರ 24 ಗಂಟೆಗಳೂ ದುಡಿಯುವ ಈ ಕಾಲಮಾನದಲ್ಲಿ  ಈಗಲೂ ಅದೇ ಆದರ್ಶವಾಗಿದೆ.  ಅದರಲ್ಲೂ ಮಹಿಳೆ ಮೇಲೆ ಅಪರಾಧಗಳು ನಡೆದಾಗ ಮಹಿಳೆ ಅಷ್ಟು ಹೊತ್ತಲ್ಲಿ ಹೊರಗೆ ಏಕೆ ಇರಬೇಕಿತ್ತು ಎಂಬ ಮಾತು ಪೊಲೀಸರಿಂದಲೇ ಬರುವುದು ಮಾಮೂಲು. ಹಳ್ಳಿಗಳಲ್ಲಂತೂ ಇಂತಹ ಅಭದ್ರತೆಗಳ ನಡುವೆ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳು  ಅರ್ಧದಲ್ಲಿಯೇ  ಶಾಲೆ ಬಿಡಬೇಕಾಗುತ್ತದೆ. ಹೀಗಾಗಿ ಇರುವ ಕಾನೂನುಗಳ ಮೂಲಕ  ಕಠಿಣ ಸಂದೇಶ ರವಾನಿಸುವುದು ಸರ್ಕಾರದ ಕರ್ತವ್ಯವಾಗಬೇಕಲ್ಲವೆ?

ಬೀದಿ ಕಿರುಕುಳ ಮಹಿಳೆಯ ಮನಸ್ಸಿನ ಶಾಂತಿ ಕೆಡಿಸಿ ಆಕೆಯ ಚಲನಶೀಲತೆಯನ್ನೇ ಹತ್ತಿಕ್ಕುತ್ತದೆ. ಇದು ಲಿಂಗ ಸಮಾನತೆಯ ಪ್ರಶ್ನೆ ಎಂಬ ವಾಸ್ತವವನ್ನು 2013ರಲ್ಲಿ ವಿಶ್ವಸಂಸ್ಥೆಯೂ ಗ್ರಹಿಸಿತು. ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಹಿಂಸೆ, ಕಿರುಕುಳದಿಂದ ರಕ್ಷಿಸುವ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ರಾಷ್ಟ್ರಗಳಿಗೆ ಅದು ಕರೆ ನೀಡಿದೆ. ಈ ಬಗ್ಗೆ ಜಾಗೃತಿ ಮೂಡಿಸುವಿಕೆ, ಅಪರಾಧ ತಡೆ ಕಾನೂನು ರಚನೆ, ನೀತಿ ಹಾಗೂ ಕಾರ್ಯಕ್ರಮಗಳು ಮುಖ್ಯ.

ತ್ವರಿತವಾಗಿ ನಗರೀಕರಣಗೊಳ್ಳುತ್ತಿರುವ ಸಂಪ್ರದಾಯನಿಷ್ಠ ಸಮಾಜಗಳಲ್ಲಿ ಮಹಿಳೆಯ ಪ್ರಗತಿಯ ವಿರುದ್ಧದ ಸಾಂಸ್ಕೃತಿಕ ಸಮರಗಳಾಗಿರುತ್ತವೆ ಇವು ಎಂಬುದನ್ನು ಅರಿಯಬೇಕು. ಬೀದಿ ಕಿರುಕುಳ, ಸಮಾಜದಲ್ಲಿ ಬದಲಾಗುತ್ತಿರುವ ಮಹಿಳೆಯ ಸ್ಥಾನಮಾನ ಕುರಿತಾದ ಅಸಹನೆಯ ಸಂಕೇತ.  ತಾವು ದುಡಿಯಬೇಕು ಹಾಗೂ ಹೆಣ್ಣಮಕ್ಕಳು ಮನೆವಾರ್ತೆ ಜೊತೆಗೆ ಮಕ್ಕಳನ್ನು ನೋಡಿಕೊಂಡು ಇರಬೇಕು ಎಂಬಂಥ ಸ್ವೀಕೃತ ಸಾಂಪ್ರದಾಯಿಕ ಮೌಲ್ಯಗಳನ್ನು  ಅಂತರ್ಗತ ಮಾಡಿಕೊಂಡವರಿಗೆ  ಈ ಪಲ್ಲಟವನ್ನು ಅರಗಿಸಿಕೊಳ್ಳುವುದು  ಅಷ್ಟು ಸುಲಭವಾಗಿರುವುದಿಲ್ಲ.

12ನೇ ಶತಮಾನದಲ್ಲಿ  ಅಕ್ಕಮಹಾದೇವಿ ಸಾರ್ವಜನಿಕ ವಲಯದಲ್ಲಿ ಮಹಿಳೆಯ ನೆಲೆಯನ್ನು ವಿಸ್ತರಿಸಿರುವುದಕ್ಕೊಂದು ಸಂಕೇತವಾಗುತ್ತಾಳೆ. ಸಾಂಸಾರಿಕ ಬಂಧನವನ್ನು ಕಿತ್ತೊಗೆದು ಬೆತ್ತಲಾಗಿ ಶಿವನನ್ನು ಅರಸುತ್ತಾ ‘ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳ ಬಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು ಚನ್ನಮಲ್ಲಿ ಕಾರ್ಜುನಯ್ಯ  ಆತ್ಮಸಂಗಾತಕೆ ನೀನೆನಗುಂಟು’ ಎಂದು ಲೋಕದ ಹಂಗನ್ನು ತೊರೆದು ಉಡುತಡಿಯಿಂದ ಕಲ್ಯಾಣದ  ಹಾದಿ ಹಿಡಿದದ್ದು ಸುಲಭದ ಸಂಗತಿಯಲ್ಲ.   ಅನುಭವ ಮಂಟಪದಲ್ಲಿ ಪ್ರಭುದೇವರ ನಿಷ್ಠುರ ಪ್ರಶ್ನೆಗಳಿಗೆ ಉತ್ತರಿಸುತ್ತಾ ವೈರಾಗ್ಯ ನಿಷ್ಠೆಯನ್ನು ಸಾಬೀತುಪಡಿಸಬೇಕಾಗುತ್ತದೆ ಅಕ್ಕ. ಕೇಶಾಂಬರಿಯಾದ ಆಕೆಯ ದಿಗಂಬರತ್ವವನ್ನು ವಿಡಂಬಿಸಿದಾಗ, ಎದುರಿನ ಪುರುಷ ಎದೆಗುಂದಬಾರದೆಂದು ಕೇಶಾಂಬರಿಯಾಗಬೇಕಾಯಿತು ಎಂಬ ಉತ್ತರದಲ್ಲಿದ್ದಂತಹ  ನಿಷ್ಠುರ ಸತ್ಯವನ್ನು  ಗ್ರಹಿಸಬಹುದು. ಅನುಭಾವಿಯಾಗಿ ಎತ್ತರಕ್ಕೇರಿದ ಅಕ್ಕ  ಲೋಕದ ಕಟ್ಟಳೆಗಳನ್ನು ಮೀರಿದಾಗ ಎದುರಿಸಿರಬಹುದಾದ ನಿಂದನೆಗಳ ಕುರಿತಂತೆ ‘ಸ್ತುತಿ, ನಿಂದೆಗಳು ಬಂದೊಡೆ ಸಮಾಧಾನಿಯಾಗಿರಬೇಕು’ ಎಂದು ಹೇಳಿದ್ದಾಳೆ.

ಸಾರ್ವಜನಿಕ ಸ್ಥಳಗಳಲ್ಲಿ ಸಮಾನ ಅವಕಾಶ ಮಹಿಳೆಗೆ ಏಕಿಲ್ಲ ಎಂದು ಮುಂಬೈ ಬೀದಿಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ಮಾಡಿರುವ ‘ವೈ ಲಾಯಿಟರ್’  ಪುಸ್ತಕ   ಪ್ರಶ್ನಿಸುತ್ತದೆ. ಮೂರು ವರ್ಷಗಳ ಸಂಶೋಧನೆ ನಂತರ  ಸಮಾಜಶಾಸ್ತ್ರಜ್ಞೆ ಶಿಲ್ಪಾ ಫಡ್ಕೆ, ಪತ್ರಕರ್ತೆ ಸಮೀರಾ ಖಾನ್ ಹಾಗೂ ವಾಸ್ತುಶಿಲ್ಪಿ ಶಿಲ್ಪಾ ರಾನಡೆ ಅವರು  ಈ ಪುಸ್ತಕ ಬರೆದಿದ್ದಾರೆ. ಬೀದಿಯಲ್ಲಿರುವ ಮಹಿಳೆಯರು ಎಷ್ಟೊಂದು ಕಡಿಮೆ ಎಂಬುದು ಈ ಸಂಶೋಧನೆಯಿಂದ ಗೊತ್ತಾಗುತ್ತದೆ. ಯಾವುದೇ ಸಂದರ್ಭದಲ್ಲಿ ಬೀದಿಗಳಲ್ಲಿ ಮಹಿಳೆಯರ ಪ್ರಮಾಣ ಸರಾಸರಿ ಶೇ 28.
ಸ್ವರಕ್ಷಣೆಗಾಗಿ ಕೈ ಉಗುರು, ಹೇರ್ ಪಿನ್, ಸೇಫ್ಟಿ ಪಿನ್‌ನಿಂದ ಹಿಡಿದು ಈಗ ಮೊಬೈಲ್  ಆ್ಯಪ್‌ಗಳು,  ಪೆಪ್ಪರ್ ಸ್ಪ್ರೇವರೆಗೆ  ಸಾಧನಗಳು ಬದಲಾಗಿವೆ. ನಿಮ್ಮ  ಸ್ಥಳ ಇದಲ್ಲ ಎಂದು ಪುರುಷ ಮೌಲ್ಯಗಳಲ್ಲಿ ಹೇಳುವಂತಹ ಸಾಂಸ್ಕೃತಿಕ ವಾತಾವರಣದ ವಿರುದ್ಧ  ಸೆಣಸುತ್ತಲೇ ಇರುವ  ಪರಿಸ್ಥಿತಿ ಬದಲಾಗಿಲ್ಲ. ಇಂತಹ ಸ್ಥಿತಿಯಲ್ಲೂ ಸುರಕ್ಷತೆಗಾಗಿ ತಂತ್ರಜ್ಞಾನವನ್ನು  ಪರಿಣಾಮಕಾರಿಯಾಗಿ ಬಳಸುವುದು  ಹೊಸ ಭರವಸೆ ಮೂಡಿಸುವಂತಹದ್ದು.  ಅಪರಾತ್ರಿಯಲ್ಲಿ  ಟ್ಯಾಕ್ಸಿಗಳಲ್ಲಿ ಒಂಟಿಯಾಗಿ ಹೋಗಬೇಕಾದರೆ ನಮ್ಮ ಹತ್ತಿರದವರ ಜೊತೆ ಟ್ರ್ಯಾಕಿಂಗ್ ಸಿಸ್ಟಂಗೆ ಅವಕಾಶವಿದೆ. 

ಹೆಣ್ಣುಮಕ್ಕಳ ಮೇಲೆ ಹೇರುವ  ನಿಯಂತ್ರಣಗಳಿಗೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಆಯಾಮಗಳಿವೆ. 2001ರಲ್ಲಿಯೇ  ನಮ್ಮ ಸರ್ಕಾರ ಮಹಿಳಾ ಸಬಲೀಕರಣ ವರ್ಷವೆಂದು ಆಚರಿಸಿದೆ. ಅದರ ಜೊತೆಗೆ ಮಹಿಳೆ ವಿರುದ್ಧದ ಎಲ್ಲಾ ತಾರತಮ್ಯ ನಿವಾರಣೆ ಕುರಿತಾದ ಅಂತರರಾಷ್ಟ್ರೀಯ ನಿರ್ಣಯಗಳನ್ನು 1993ರಲ್ಲಿಯೇ  ಕೇಂದ್ರ ಸರ್ಕಾರ ಅಂಗೀಕರಿಸಿದೆ.  ಇದರ ಪ್ರಕಾರ ತನ್ನ ಪೂರ್ಣ ಸಾಮರ್ಥ್ಯವನ್ನು ಮಹಿಳೆ ಬಳಸಿಕೊಳ್ಳಲು ಪೂರಕವಾಗುವಂತಹ ಆರ್ಥಿಕ, ಸಾಮಾಜಿಕ ನೀತಿಗಳ ಮೂಲಕ ಸಕಾರಾತ್ಮಕ ಪರಿಸರ ಸೃಷ್ಟಿಸುವುದು ಸರ್ಕಾರದ ಕರ್ತವ್ಯ. ‘ವಿಶ್ವವನ್ನು ಮಹಿಳೆಯ ಕಣ್ಣಲ್ಲಿ ನೋಡಿ’ ಎಂಬುದನ್ನು 1995ರಲ್ಲಿ ಬೀಜಿಂಗ್‌ನಲ್ಲಿ ನಡೆದ 4ನೇ ವಿಶ್ವ ಮಹಿಳಾ ಸಮ್ಮೇಳನ ಗುರಿಯಾಗಿ ಹೊಂದಿತ್ತು. ಸಾರ್ವಜನಿಕ ಮೂಲಸೌಕರ್ಯನಿರ್ಮಿಸುವಾಗ ಆಡಳಿತಗಾರರಿಗೆ ಇದು ನೆನಪಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT