ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಕಗ್ಗಂಟು

Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರಾಜ್ಯದ ವಿಶ್ವವಿದ್ಯಾಲಯಗಳ ಬೋಧಕ ಮತ್ತು ಬೋಧಕೇತರ ವರ್ಗದವರನ್ನು ನೇರವಾಗಿ ನೇಮಿಸಲು ರಾಜ್ಯ ಸರ್ಕಾರವು ಉತ್ಸುಕತೆ ತೋರುತ್ತಿರುವುದು ಮತ್ತೊಮ್ಮೆ ಚರ್ಚೆಗೆ ಬಂದಿದೆ. 2016ರಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಸಭೆಗಳಲ್ಲಿ ಈ ಕುರಿತಾಗಿ ಮಾತುಕತೆಯಾಗಿತ್ತು. ಹೀಗಾಗಿ ಕಳೆದ ವರ್ಷ ಅಕ್ಟೋಬರ್ 21ರಂದು ಪ್ರಕಟವಾದ ನನ್ನ ಅಂಕಣದಲ್ಲಿ ಬೋಧಕರ ನೇಮಕಾತಿಯ ಕೇಂದ್ರೀಕರಣವಲ್ಲ, ವಿಕೇಂದ್ರೀಕರಣದ ಅಗತ್ಯವಿದೆ ಎಂದು ವಾದಿಸಿದ್ದೆ. ‘ನೇಮಕಾತಿಯ ಪ್ರಕ್ರಿಯೆ, ವಿಭಾಗಗಳ ಮಟ್ಟದಲ್ಲಿಯೇ ನಡೆಯುವುದು ಉಚಿತ. ಅಲ್ಲದೆ ನಿಜವಾಗಿಯೂ ಅರ್ಹರನ್ನು ನೇಮಿಸಿಕೊಳ್ಳುವುದಕ್ಕೆ ಅಧಿಕಾರಸ್ಥರು ಬದ್ಧರಾಗಿದ್ದರೆ, ಈ ಪ್ರಕ್ರಿಯೆಯನ್ನು ಪಾರದರ್ಶಕವಾಗುವಂತೆ ಮಾಡುವುದು ಕಠಿಣವಾದ ವಿಚಾರವಲ್ಲ’ ಎನ್ನುವುದು ನನ್ನ ನಿಲುವಾಗಿತ್ತು.

ಇತ್ತೀಚಿನ ದಿನಗಳಲ್ಲಿ ಮತ್ತೆ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಆಗಾಗ ಪತ್ರಿಕೆಗಳಲ್ಲಿ ಆಂಶಿಕ ವರದಿಗಳು ಬರುತ್ತಿವೆ. ಹೊಸ ನೇಮಕಾತಿ ಪ್ರಕ್ರಿಯೆಯನ್ನು ಜಾರಿಗೊಳಿಸಿದರೆ, ಅದರಿಂದ ವಿಶ್ವವಿದ್ಯಾಲಯಗಳ ಸ್ವಾಯತ್ತತೆ ನಷ್ಟವಾಗುತ್ತದೆ, ಯುಜಿಸಿಯ ಮಾರ್ಗದರ್ಶಿ ಸೂತ್ರ ಉಲ್ಲಂಘನೆಯಾಗುತ್ತದೆ ಎನ್ನುವ ಅಂಶಗಳು ಪ್ರಸ್ತಾಪಿತವಾಗಿವೆ. 

ಆದರೆ ಈ ಚರ್ಚೆಯಲ್ಲಿ ಭಾಗಿಯಾಗಿರುವ ಸಚಿವರು, ಅಧಿಕಾರಿಗಳು ಹಾಗೂ ಕುಲಪತಿಗಳು ಯಾರೂ ಸಾರ್ವಜನಿಕವಾಗಿ ತಮ್ಮ ನಿಲುವುಗಳನ್ನು ಪ್ರತಿಪಾದಿಸಿಲ್ಲ. ಪತ್ರಿಕಾಗೋಷ್ಠಿಗಳನ್ನು ನಡೆಸಿಲ್ಲ. ಪತ್ರಿಕೆಗಳಲ್ಲಿ ಅಗ್ರಲೇಖನಗಳನ್ನು ಬರೆದಿಲ್ಲ. ವಿಚಾರ ಸಂಕಿರಣಗಳನ್ನು, ಸಾರ್ವಜನಿಕ ಚರ್ಚೆಗಳನ್ನು ಸಂಘಟಿಸಿಲ್ಲ. ಇಂದಿರುವ ವ್ಯವಸ್ಥೆಯಲ್ಲಿರುವ ಲೋಪದೋಷಗಳೇನು, ಅವುಗಳನ್ನು ಸರಿಪಡಿಸಲು ನಮ್ಮ ಮುಂದಿರುವ ಪರ್ಯಾಯಗಳೇನು ಎನ್ನುವುದರ ಕುರಿತಾಗಿ ಮುಕ್ತ ಚರ್ಚೆಯಾಗಲು ಅನುವು ಮಾಡಿಕೊಟ್ಟಿಲ್ಲ.

ಇದರಿಂದಾಗಿ, ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಏನೋ ಗುಪ್ತ ಚರ್ಚೆ ನಡೆಯುತ್ತಿದೆ ಎನ್ನುವುದಷ್ಟೇ  ಅಲ್ಲ, ವಿಶ್ವವಿದ್ಯಾಲಯಗಳ ನೇಮಕಾತಿಯ ವಿಚಾರದಲ್ಲಿ ಬೇರಾರೂ ಏನನ್ನೂ ಹೇಳಬೇಕಾದ ಅಗತ್ಯವಿಲ್ಲ ಎನ್ನುವ ನಿಲುವನ್ನು ಪ್ರತಿಪಾದಿಸಿದಂತೆ ಆಗುತ್ತದೆ. ಹೀಗೆ ಇಂದಿನ ಚರ್ಚೆಯಲ್ಲಿ ನಿರ್ಲಕ್ಷಿತವಾಗುತ್ತಿರುವ ವರ್ಗಗಳಲ್ಲಿ ಈಗ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಬೋಧಕರು, ಬೋಧಕೇತರ ವರ್ಗದವರು,  ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರುತ್ತಾರೆ. ಈ ಯಾವ ವರ್ಗದವರೂ ನೇಮಕಾತಿ ಪ್ರಕ್ರಿಯೆಯ ವಿಚಾರದಲ್ಲಿ ಅಥವಾ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಬೇರಾವ ವಿಷಯಗಳಲ್ಲಿಯೂ ಪಾಲುದಾರರಲ್ಲ ಎನ್ನುವ ಧೋರಣೆಯನ್ನು ಉನ್ನತ ಶಿಕ್ಷಣ ಪರಿಷತ್ ತೋರಿಸುತ್ತಿದೆ ಎನ್ನುವುದು ಸುಸ್ಪಷ್ಟ.

ಕುಲಪತಿಗಳು ತಮ್ಮ ವಿಶ್ವವಿದ್ಯಾಲಯಗಳನ್ನು ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಪ್ರತಿನಿಧಿಸುತ್ತಾರೆ ಎನ್ನುವುದೇನೊ ನಿಜವೇ. ಆದರೆ ಇಂದಿರುವ ಎಲ್ಲ ಕುಲಪತಿಗಳೂ ತಮ್ಮ ವಿಶ್ವವಿದ್ಯಾಲಯಗಳ ಸ್ವಾಯತ್ತತೆ, ಹಿತಾಸಕ್ತಿ ಕಾಪಾಡಲು ಯಾವುದೇ ಅಪಾಯವನ್ನು ಎದುರಿಸಲು ಸಿದ್ಧರಿದ್ದಾರೆ ಎಂದು ಹೇಳುವುದು ಕಷ್ಟ. ಮಂತ್ರಿಯೊಬ್ಬರ ದಾರ್ಷ್ಟ್ಯದ ಪ್ರಚೋದನೆಯಿಂದ ಕೆರಳಿ ‘ಅಖಂಡ ಕರ್ನಾಟಕ’ ಕವನವನ್ನು ಬರೆದ ಕುವೆಂಪು ಅವರ ನೈತಿಕ ಸ್ಥೈರ್ಯವನ್ನು, ರಾಜಕೀಯ ಸ್ವೋಪಜ್ಞತೆಯನ್ನು ನಾವು ಇಂದಿನ ಕುಲಪತಿಗಳಿಂದ ನಿರೀಕ್ಷಿಸದಿರಬಹುದು. ಆದರೆ ತಮ್ಮ ವಿಶ್ವವಿದ್ಯಾಲಯಗಳ ಸ್ವರೂಪವನ್ನೇ ಬದಲಿಸಬಲ್ಲ ಮುಖ್ಯ ಸವಾಲೊಂದು ಎದುರಾದಾಗ ಸಾರ್ವಜನಿಕವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಲು ಹಿಂಜರಿಯುವವರಿಂದ ನಾವು ಏನು ಪಡೆಯಬಹುದು?

ವಿಶ್ವವಿದ್ಯಾಲಯಗಳ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಕುಸಿದು, ಮುರಿದುಬಿದ್ದಿದೆ ಎನ್ನುವುದು ಯಾರಿಗೂ ಹೊಸ ವಿಷಯವಲ್ಲ. ಈ ಬಿಕ್ಕಟ್ಟಿಗೆ ಎರಡು ಆಯಾಮಗಳಿವೆ. ಮೊದಲನೆಯದು ಮತ್ತು ಹೆಚ್ಚು ವ್ಯಾಪಕವಾಗಿ ಚರ್ಚಿತವಾಗುತ್ತಿರುವುದು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ನೇಮಕಾತಿಯ ಸಂದರ್ಭದಲ್ಲಿ ನಿರ್ಣಾಯಕವಾಗುತ್ತಿರುವ ಜಾತಿ, ಹಣ, ರಾಜಕೀಯಗಳ ಪ್ರಭಾವಗಳು. ಇದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಸಾರ್ವಜನಿಕ ವಲಯದ ಇತರ ಸಂಸ್ಥೆಗಳಲ್ಲಿ ನಡೆಯುತ್ತಿರುವಂತೆ ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿಯೂ ಭ್ರಷ್ಟತೆಯಿದೆ, ಶೈಕ್ಷಣಿಕೇತರ ಮಾನದಂಡಗಳೇ ಕೆಲಸ ಮಾಡುತ್ತಿವೆ.

ಆದರೆ ಇದರ ಜೊತೆಗಿನ ಎರಡನೆಯ ಆಯಾಮವನ್ನು ಗಮನಿಸಿ. ದಶಕಗಳೇ ಕಳೆದರೂ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿಗಳಾಗುತ್ತಿಲ್ಲ. ಇದರ ಪರಿಣಾಮವಾಗಿ ಕಾಯಂ ನೌಕರರ ಸಂಖ್ಯೆ ಬೋಧಕ ಮತ್ತು ಬೋಧಕೇತರ ವರ್ಗಗಳೆರಡರಲ್ಲಿಯೂ ಎಲ್ಲೆಡೆ ಅರ್ಧಕ್ಕಿಂತ ಕಡಿಮೆಯಿದೆ. ಈಗ ತಾನೇ  ಶತಮಾನೋತ್ಸವವನ್ನು ಆಚರಿಸಿಕೊಂಡ ಮೈಸೂರು ವಿಶ್ವವಿದ್ಯಾಲಯದಲ್ಲಿ ಈ ಶೈಕ್ಷಣಿಕ ವರ್ಷದ ನಂತರ ಕಾಯಂ ಬೋಧಕರ ಸಂಖ್ಯೆ ಅಗತ್ಯವಿರುವುದರ ಶೇ 30ರಷ್ಟಕ್ಕೆ ಇಳಿಯಲಿದೆ ಎನ್ನಲಾಗುತ್ತಿದೆ. ಕಳೆದ ದಶಕದಲ್ಲಿ ಪ್ರಾರಂಭವಾಗಿರುವ ಹೊಸ ವಿಶ್ವವಿದ್ಯಾಲಯಗಳಲ್ಲಿ, ಅದರಲ್ಲೂ ಜಾನಪದ, ಸಂಸ್ಕೃತ, ಸಂಗೀತ ಮತ್ತು ಪ್ರದರ್ಶನ ಕಲೆಗಳಂತಹ ಏಕ ವಿಷಯ ವಿಶ್ವವಿದ್ಯಾಲಯಗಳಲ್ಲಿ, ಬೋಧಕ ಮತ್ತು ಬೋಧಕೇತರ ವರ್ಗದವರ ನೇಮಕಾತಿಯಾಗಿಲ್ಲ. ಸದ್ಯದಲ್ಲಿ ಆಗಬಹುದು ಎನ್ನುವ ಖಾತ್ರಿ ಯಾರಿಗೂ ಇಲ್ಲ.

ನೇಮಕಾತಿಯಾಗದಿರುವ ಕಾರಣ ಉದ್ಭವಿಸುತ್ತಿರುವ ಬಿಕ್ಕಟ್ಟನ್ನು ಕೇವಲ ಅಂಕಿಅಂಶಗಳಿಂದ ಅರಿಯಲು ಸಾಧ್ಯವಿಲ್ಲ. ಕೇವಲ ತಾತ್ಕಾಲಿಕ ಅಧ್ಯಾಪಕರನ್ನು ಬಳಸಿಕೊಳ್ಳುತ್ತ ಯಾವ ಉನ್ನತ ಶಿಕ್ಷಣ ಸಂಸ್ಥೆಯೂ ಬಹಳ ಕಾಲ ಕೆಲಸ ಮಾಡಲಾಗುವುದಿಲ್ಲ. ಜೊತೆಗೆ ಇಂದಿನ ಮತ್ತೊಂದು ವಾಸ್ತವವನ್ನು ಗಮನಿಸಿ. ದಶಕಗಳಲ್ಲಿ ಒಮ್ಮೆ ಅಪರೂಪಕ್ಕೆ ನೇಮಕಾತಿಯಾದಾಗ, ಎರಡು ವಿಭಿನ್ನ ತಲೆಮಾರುಗಳಿಗೆ ಸೇರಿದವರು ಒಂದೇ ಶ್ರೇಣಿಯ ಹುದ್ದೆಗೆ ಆಯ್ಕೆಯಾಗುತ್ತಿದ್ದಾರೆ. ಅರ್ಜಿ ಸಲ್ಲಿಸುವ ಅವಕಾಶಕ್ಕಾಗಿಯೇ ಹತ್ತಾರು ವರ್ಷಗಳ ಕಾಲ ಕಾದಿರುವ ಅಭ್ಯರ್ಥಿಗಳೇ ಹೆಚ್ಚು.

ಇಂತಹ ಅಭ್ಯರ್ಥಿಗಳಿಗೆ ತಮ್ಮ ವೈಯಕ್ತಿಕ ಬದುಕನ್ನಾಗಲಿ, ವೃತ್ತಿಪರ ಬದುಕನ್ನಾಗಲಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹವರನ್ನು ಪ್ರಾರಂಭದಿಂದಲೂ ಬಳಸಿಕೊಳ್ಳಲಾಗದ ವಿಶ್ವವಿದ್ಯಾಲಯಗಳು ಸಹ ನಷ್ಟವನ್ನು ಅನುಭವಿಸುತ್ತಿವೆ. ಬೋಧಕೇತರ ವರ್ಗಗಳ ಬಿಕ್ಕಟ್ಟು ಕಡಿಮೆ ಮಹತ್ವದ್ದಲ್ಲ. ಬಹುಮಟ್ಟಿಗೆ ದಿನಗೂಲಿ ಕೆಲಸಗಾರರಾಗಿ ಸೇರಿ, ನಂತರ ಹೇಗೋ  ಕಾಯಂಗೊಂಡ ನೌಕರರೇ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿದ್ದಾರೆ. ಹೀಗಾಗಿ ವಿಶ್ವವಿದ್ಯಾಲಯಗಳ ಕೆಲಸಕಾರ್ಯ, ನಿಯಮಾವಳಿಗಳ ಜ್ಞಾನವಿರುವ ಹಾಗೂ ಯು.ಜಿ.ಸಿ. ಮತ್ತಿತರ ನಿಯಂತ್ರಕ ಸಂಸ್ಥೆಗಳೊಡನೆ ವ್ಯವಹರಿಸುವ ಕ್ಷಮತೆಯುಳ್ಳ ಸಿಬ್ಬಂದಿವರ್ಗ ವಿಶ್ವವಿದ್ಯಾಲಯಗಳಲ್ಲಿ ಇಂದು ಇಲ್ಲ.

ನೇಮಕಾತಿ ನಿಯಮಿತವಾಗಿ ನಡೆಯದಿದ್ದರೆ ಅದಕ್ಕೆ ಕಾರಣಗಳೇನು? ನಾನು ಗಮನಿಸಿರುವಂತೆ ದಿನೇದಿನೇ ನೇಮಕಾತಿ ಪ್ರಕ್ರಿಯೆ ಅತ್ಯಂತ ಸಂಕೀರ್ಣವಾಗುತ್ತಿದೆ. ಮೀಸಲಾತಿಯ ನಿಯಮಗಳು ಹೆಚ್ಚುತ್ತಿವೆ. ರೋಸ್ಟರ್ ನಿಯಮಗಳನ್ನು ಹಿಂದೆ ಅನುಸರಿಸದೆ ಇದ್ದ ಕಾರಣ ಇಂದು ಅದಕ್ಕೆ ಪರಿಹಾರ ಒದಗಿಸಬೇಕಾಗಿದೆ. ನೇಮಕಾತಿ ಪ್ರಕ್ರಿಯೆ ಆರಂಭಿಸಲು ಒಪ್ಪಿಗೆ ಪಡೆಯಬೇಕಿರುವ ಸರ್ಕಾರದ ಇಲಾಖೆಗಳ ಮತ್ತು ಸಂಸ್ಥೆಗಳ ಸಂಖ್ಯೆ ಹೆಚ್ಚಿದೆ. ಇವೆಲ್ಲವೂ ಹುದ್ದೆ ಭರ್ತಿ ಮಾಡಲು ಜಾಹೀರಾತು ನೀಡುವ ಮೊದಲೇ ಕುಲಪತಿ, ಕುಲಸಚಿವರು ಗಮನಿಸಬೇಕಿರುವ ಆಯಾಮಗಳು, ನಿರ್ವಹಿಸಬೇಕಾಗಿರುವ ಹೊಣೆಗಾರಿಕೆಗಳು.

ಈ ನಡುವೆ ಸರ್ಕಾರದ ಇಲಾಖೆಗಳು ಮತ್ತು  ಸಂಸ್ಥೆಗಳಿಂದ ಒಪ್ಪಿಗೆ ಪಡೆಯಬೇಕಿರುವ ಪ್ರಕ್ರಿಯೆ ಭ್ರಷ್ಟಗೊಂಡಿದೆ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಿವೆ. ಇವೆಲ್ಲವುಗಳನ್ನು ಯಶಸ್ವಿಯಾಗಿ ನಿರ್ವಹಿಸಿದಲ್ಲಿ, ನಂತರ ಎಲ್ಲ ಬಗೆಯ ಪ್ರಭಾವಗಳನ್ನು ಸಮತೋಲನ ಮಾಡಿ, ಸಂದರ್ಶನ ನಡೆಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿದರೆ, ರಾಜ್ಯಪಾಲರ ಅನುಮೋದನೆಯನ್ನು ಪಡೆಯುವುದು ಸುಲಭದ ಮಾತಲ್ಲ. ಹಾಗಾಗಿ ಬಹುತೇಕ ಕುಲಪತಿಗಳು ನೇಮಕಾತಿ ವಿಚಾರದಲ್ಲಿ ಯಾವುದೇ  ಕ್ರಮವನ್ನು ತೆಗೆದುಕೊಳ್ಳದೆ ತಮ್ಮ ಅಧಿಕಾರಾವಧಿಯನ್ನು ಕಳೆಯಲು ನಿರ್ಧರಿಸಿಬಿಡುತ್ತಾರೆ. ಕೇವಲ ಚಾಲಾಕುತನ ಮತ್ತು ರಾಜಕೀಯ ಪ್ರಭಾವ ಹೊಂದಿರುವವರು ನೇಮಕಾತಿಯ ಸಾಹಸಕ್ಕೆ ಕೈಹಾಕುತ್ತಾರೆ.

ಈ ಕಗ್ಗಂಟನ್ನು ಬಿಡಿಸುವಲ್ಲಿ ಉನ್ನತ ಶಿಕ್ಷಣ ಇಲಾಖೆಯೇ  ನಾಯಕತ್ವದ ಪಾತ್ರ ವಹಿಸಬೇಕಿತ್ತು. ಆದರೆ ಅದನ್ನು ನಿರ್ವಹಿಸದೆ, ರಾಜ್ಯಮಟ್ಟದ ಆಯ್ಕೆ ಮಂಡಳಿಯನ್ನು ರೂಪಿಸಲು ಇಲಾಖೆಯೇ ಮುಂದಾಗಿದೆ. ಮಿಗಿಲಾಗಿ ಪ್ರಸ್ತಾಪಿತ ರಾಜ್ಯಮಟ್ಟದ ಆಯ್ಕೆ ಮಂಡಳಿಯು ಯಾವ ಹೊಸ ಪಥವನ್ನು ಹುಡುಕಿದೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಗಮನಿಸಿ. ಉನ್ನತ ಶಿಕ್ಷಣ ಇಲಾಖೆಯು ನಿರ್ವಹಿಸಬೇಕಿರುವ ಕುಲಪತಿಗಳ ಆಯ್ಕೆಯು ಸಹ ತಡವಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯೇ ನೇರವಾಗಿ ಸಿಇಟಿ ಮೂಲಕ ನಡೆಸಿದ ಸರ್ಕಾರಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪ್ರಕ್ರಿಯೆಯೂ ಮುಗಿದಿಲ್ಲ. ಈ ವಿಳಂಬಕ್ಕೆ ಕಾರಣಗಳೇನಾದರೂ ಇರಬಹುದು. ಆದರೆ ಈಗ ವಿಶ್ವವಿದ್ಯಾಲಯಗಳಲ್ಲಿ ಖಾಲಿಯಿರುವ ಸಾವಿರಾರು ಹುದ್ದೆಗಳನ್ನು ಎಷ್ಟು ದಕ್ಷತೆಯಿಂದ ತುಂಬಲಾಗುತ್ತದೆ ಎನ್ನುವ ಪ್ರಶ್ನೆ ಸ್ವಾಭಾವಿಕವಾಗಿಯೇ ಏಳುತ್ತಿದೆ. 

ಈ ಕೆಳಗಿನ ಒಂದೆರಡು ಅಂಶಗಳನ್ನು ನಾವು ಮನವರಿಕೆ ಮಾಡಿಕೊಳ್ಳುವುದು ನಮ್ಮ ಚರ್ಚೆಗಳನ್ನು ಪ್ರಾಮಾಣಿಕ ನೆಲೆಗಳಲ್ಲಿ ನಡೆಸಲು ಸಹಾಯಕವಾಗುತ್ತದೆ. ನೇಮಕಾತಿ ಪ್ರಕ್ರಿಯೆಯನ್ನು ಆನ್‌ಲೈನ್ ಪರೀಕ್ಷೆ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಮೂಲಕ ನಡೆಸಲು ಸಾಧ್ಯವಿಲ್ಲ. ಈ ರೀತಿಯ ವಸ್ತುನಿಷ್ಠತೆಯ ಹುಡುಕಾಟ ಅಧ್ಯಾಪಕರ ನೇಮಕಾತಿಯಲ್ಲಿ ಅನವಶ್ಯಕ ಕೂಡ. ಇದಕ್ಕೆ ಕಾರಣವೂ ಸರಳವಾದುದು.

ಅಧ್ಯಾಪಕನೊಬ್ಬನ ಆಯ್ಕೆ ಬಹುಪಾಲು ವ್ಯಕ್ತಿನಿಷ್ಠ (ಸಬ್ಜೆಕ್ಟಿವ್) ನೆಲೆಯ ಮೇಲೆಯೇ ನಡೆಯುತ್ತದೆ. ಅಂದರೆ ಅಭ್ಯರ್ಥಿಯು ಉತ್ತಮ ಅಧ್ಯಾಪಕ- ಸಂಶೋಧಕನಾಗುವನೇ ಎನ್ನುವುದನ್ನು ವಿಷಯತಜ್ಞರು ಮತ್ತು ಆಡಳಿತಗಾರರು ಸೇರಿ ನಿರ್ಣಯಿಸಬೇಕು. ಇದೊಂದು ರೀತಿಯಲ್ಲಿ ಕುದುರೆಗಳ ಮೇಲೆ ಬಾಜಿಕಟ್ಟಿದಂತೆ. ಈ ಪ್ರಕ್ರಿಯೆಗೆ ಅಭ್ಯರ್ಥಿಯ ಶೈಕ್ಷಣಿಕ ಸಾಧನೆ, ಸಂಶೋಧನೆಗಳನ್ನು ಪರಿಗಣಿಸುವ ಮೂಲಕ ಹಾಗೂ ಒಂದೆರಡು ದಿನ ಅಭ್ಯರ್ಥಿಯೊಡನೆ ಕಾಲಕಳೆದು ಅಂತಹ ನಿರ್ಣಯಕ್ಕೆ ಬರಬಹುದು. ಈ ಪ್ರಕ್ರಿಯೆಯಲ್ಲಿ ತಕ್ಕಮಟ್ಟಿನ ವಸ್ತುನಿಷ್ಠತೆ, ಪಾರದರ್ಶಕತೆಗಳನ್ನು ತರುವುದು ಕಷ್ಟವೇನಲ್ಲ. ಅಭ್ಯರ್ಥಿಯ ಸಂದರ್ಶನದ ಕೆಲವು ಭಾಗವನ್ನು ಸಾರ್ವಜನಿಕ ಪರಿಶೀಲನೆಗೂ ಮೀಸಲಿಟ್ಟರೆ ಸಾಕು ನಮ್ಮ ಉದ್ದೇಶ ಸಾಧನೆಯಾಗುತ್ತದೆ.

ಕುವೆಂಪು ಅವರನ್ನು ನೂರು ರೂಪಾಯಿ ಸಂಬಳದ ಶ್ರೇಣಿಯ ಅಧ್ಯಾಪಕನಾಗಿ ನೇಮಕ ಮಾಡಲು ತಕರಾರೆತ್ತಿದ ಗುಮಾಸ್ತನಿಗೆ ಬಿ.ಎಂ.ಶ್ರೀ ಅವರು ಹೇಳಿದರಂತೆ: ‘ರೀ, ಸಾವಿರ ರೂಪಾಯಿ ಸಂಬಳ ಕೊಟ್ಟರೂ ಅವರಂತಹವರು ಸಿಗುವುದಿಲ್ಲ, ಮೊದಲು ನೇಮಕಾತಿಯ ಪತ್ರವನ್ನು ಕಳುಹಿಸಿ’ ಎಂದು. ಕುವೆಂಪು ಆಧುನಿಕ ಕರ್ನಾಟಕದ ಅತ್ಯಂತ ಶ್ರೇಷ್ಠ ಸಾಹಿತಿ ಮಾತ್ರವಲ್ಲ, ಯಾವುದೇ ಮಾನದಂಡಗಳನ್ನು ಬಳಸಿದರೂ ಕುವೆಂಪು ಕರ್ನಾಟಕ ಕಂಡ ಅತ್ಯುತ್ತಮ ಕುಲಪತಿ ಎನ್ನುವುದು ನಿರ್ವಿವಾದ. ಬಿ.ಎಂ.ಶ್ರೀ ಮಾದರಿಯ ಬಾಜಿ ಕಟ್ಟಬಲ್ಲ ಆಯ್ಕೆದಾರರು ನಮಗಿಂದು ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT