ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣು `ಆಪ್ತಮಿತ್ರ' ಆದದ್ದು...

Last Updated 2 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಚಿತ್ರರಂಗದ 51 ವರ್ಷದ ಜೀವನದಲ್ಲಿ 32 ವರ್ಷ ಮದ್ರಾಸ್‌ನಲ್ಲಿ ಬದುಕಿದೆ. ಅಲ್ಲಿ ಕಳೆದ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬಂಗಾಲಿ, ಮರಾಠಿ ಹೀಗೆ ಹಲವು ಭಾಷೆಗಳ ಚಿತ್ರಗಳು ಅಲ್ಲಿ ತಯಾರಾಗುತ್ತಿದ್ದವು. ಮದ್ರಾಸ್‌ನ ಎಲ್ಲಾ ಸ್ಟುಡಿಯೊಗಳಲ್ಲೂ ನಾನು ಚಿತ್ರೀಕರಣ ಮಾಡಿದ್ದೇನೆ.

ಕೋಡಂಬಾಕಂ ರೈಲ್ವೆ ಗೇಟ್ ದಾಟಿದರೆ ಸ್ಟುಡಿಯೊಗಳ ಸಾಲು. ವಿಕ್ರಮ್ ಸ್ಟುಡಿಯೊ ನಮ್ಮ ಬಿ.ಎಸ್.ರಂಗ ಅವರದ್ದು. ವಿಜಯ ವಾಹಿನಿ, ಫಿಲ್ಮ್ ಸೆಂಟರ್, ಮೆಜೆಸ್ಟಿಕ್, ವೀನಸ್, ಅರುಣಾಚಲಂ, ಭರಣಿ, ಕರ್ಪಗಂ, ಪ್ರಕಾಶ್, ಪ್ರಸಾದ್, ಗೋಲ್ಡನ್, ಸತ್ಯಂ, ನ್ಯೂಟೋನ್, ಸಿಟಾಡೆಲ್, ಜೆಮಿನಿ, ಎವಿಎಂ ಮೊದಲಾದ ಸ್ಟುಡಿಯೊಗಳು ಅಲ್ಲಿದ್ದವು.

ನಮ್ಮ ರಾಜ್ಯದಲ್ಲಿ ಪರಂಪರೆ ಇರುವ ಎರಡು ಮೂರು ಸ್ಟುಡಿಯೊಗಳ ಹೆಸರುಗಳಷ್ಟೇ ಸಿಕ್ಕೀತು. ಹಳೆಯ ಮದ್ರಾಸ್‌ನಲ್ಲಿದ್ದ ಎಷ್ಟೋ ಸ್ಟುಡಿಯೊಗಳು ಈಗಿನ ಚೆನ್ನೈನಲ್ಲಿ ಇಲ್ಲ. ಅನೇಕ ಸ್ಟುಡಿಯೊಗಳು ಆಸ್ಪತ್ರೆ, ಹೋಟೆಲ್, ಗೋದಾಮು, ಕಲ್ಯಾಣ ಮಂಟಪಗಳಾಗಿ ಮಾರ್ಪಟ್ಟಿವೆ.

ಮದ್ರಾಸ್ ಬಿಟ್ಟು ಬೆಂಗಳೂರಿಗೆ ನಾನು ಬರಲು ಕಾರಣಗಳು ಎರಡು. ಮೊದಲನೆಯದು: `ಕನ್ನಡ ನಾಡು' ಪಕ್ಷದ ದೊಡ್ಡ ಜವಾಬ್ದಾರಿ ಹೊತ್ತಿದ್ದು. ಎರಡನೆಯದು: ಮೂರನೇ ಮಗ ಗಿರೀಶ್ ಎದುರು ಮನೆ ಹುಡುಗಿಯ ಪ್ರೇಮದಲ್ಲಿ ಬಿದ್ದದ್ದು. ಗಿರೀಶ್ ನಾನು ಮಾಡಿದ್ದ `ಮಜ್ನು' ಚಿತ್ರದ ನಾಯಕ. ಮದ್ರಾಸ್‌ನ ಎದುರು ಮನೆಯ ಚೆಲುವೆಯನ್ನು ಪ್ರೀತಿಸಿದ. ರಾಜಕೀಯ ಕ್ಷೇತ್ರದ ಒಡನಾಟವಿದ್ದ ಕುಟುಂಬದ ಹೆಣ್ಣುಮಗಳು ಆಕೆ. ಆ ಕುಟುಂಬದವರು ತುಂಬಾ ಶ್ರೀಮಂತರು. ಇವೆಲ್ಲಾ ನನ್ನಲ್ಲಿ ಭಯ ಹುಟ್ಟಿಸಿತು.

ಮಾನ, ಮರ್ಯಾದೆ ಪ್ರಶ್ನೆ ಮನಸ್ಸಿನಲ್ಲಿ ಮೂಡಿದ್ದೇ ತಡ ಮದ್ರಾಸ್ ಬಿಡಲು ನಿಶ್ಚಯಿಸಿದೆ. 2003ರಲ್ಲಿ ಸಂಸಾರ ಸಮೇತ ಬೆಂಗಳೂರಿಗೆ ಬಂದೆ. ಅಲ್ಲಿಂದ ಬಂದ ನಮ್ಮ ಸಂಸಾರದ ಜೊತೆ ಎದುರು ಮನೆಯ ಆ ಹೆಣ್ಣುಮಗಳೂ ಬಂದಳು. ಕೊನೆಗೆ ಅವರಿಬ್ಬರ ಮದುವೆ ಬೆಂಗಳೂರಿನ ವುಡ್‌ಲ್ಯಾಂಡ್ಸ್‌ನಲ್ಲಿ ನಡೆಯಿತು. ಆ ಹೆಣ್ಣುಮಗಳ ತಂದೆ-ತಾಯಿಯನ್ನು ಸಮಾಧಾನಪಡಿಸಿ, ಹೆಚ್ಚು ರಾದ್ಧಾಂತವಾಗದಂತೆ ಮಾಡಿದವರು ಆಗ ರಾಜ್ಯದ ಮಂತ್ರಿಯಾಗಿದ್ದ ಎಸ್.ರಮೇಶ್. ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿದ್ದರು.

ನಟ ರವಿಚಂದ್ರನ್ ತಂದೆ ವೀರಾಸ್ವಾಮಿ ನಿಧನರಾಗುವ ಮೊದಲು, `ಲೇ ಕುಳ್ಳ, ನಿನಗೆ ಮದ್ರಾಸ್ ಸರಿಹೋಗುತ್ತಿಲ್ಲ. ಬೆಂಗಳೂರಿಗೆ ಬಾ, ಒಳ್ಳೆಯದಾಗುತ್ತದೆ' ಎಂದು ಕಿವಿಮಾತು ಹೇಳಿದ್ದರು. ಹಾಗಾಗಿ ನಾನು ಬೆಂಗಳೂರಿಗೆ ಬಂದೆ. ಗೆದ್ದೆ. ಅವರ ಆಶೀರ್ವಾದ ನನ್ನ ಮೇಲಿತ್ತು ಎಂದು ಅನೇಕ ಸಲ ಅನ್ನಿಸಿದೆ.

ಗಾಂಧಿನಗರ ಎಂದರೆ ನೆನಪಿಗೆ ಬರುವುದು ವಿಜಯಾ ಪಿಕ್ಚರ್ಸ್‌ ಸರ್ಕ್ಯೂಟ್, ಈಶ್ವರಿ ಪಿಕ್ಚರ್ಸ್‌, ಕೆ.ಸಿ.ಎನ್. ಮೂವೀಸ್, ಈಸ್ಟ್ ಇಂಡಿಯಾದ ಸುಂದರ್‌ಲಾಲ್ ನೆಹತಾ, ವೀನಸ್ ಪಿಕ್ಚರ್ಸ್‌ನ ತ್ಯಾಗರಾಜನ್, ಪಾಲ್ ಎಂಟರ್‌ಪ್ರೈಸಸ್, ಅಮ್ಮಿ ಫಿಲ್ಮ್ಸ್, ಮಯೂರ ಮೂವೀಸ್, ಕೆ.ಎಸ್. ಮೂವೀಸ್, ರಜಸ್ಸು ಕಂಬೈನ್ಸ್, ಮಾಂಡ್ರೆ ಪಿಕ್ಚರ್ಸ್‌. ಇವೆಲ್ಲಾ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಅದೇ ರೀತಿ ನನ್ನ ಹೃದಯದಲ್ಲಿ ಉಳಿದಿರುವುದು `ಉದಯರಂಗ'. ಈ ಸಂಸ್ಥೆಯಿಂದಲೇ ನನ್ನ ಮರುಜನ್ಮವಾಯಿತು.

ಸುಬ್ರಮಣಿ ಹಾಗೂ ಚಿನ್ನೇಗೌಡ `ಉದಯರಂಗ' ಸಂಸ್ಥೆಯವರು. ಚಿನ್ನೇಗೌಡರು ಕಲಾರಸಿಕರು. ಕನ್ನಡದ ಕಲಾವಿದರನ್ನು ಕಂಡರೆ ಅವರಿಗೆ ಅಪಾರ ಗೌರವ. ಮಾವಳ್ಳಿ ಚಿತ್ರಮಂದಿರದ ಮಾಲೀಕರೂ ಟ್ರಾನ್ಸ್‌ಪೋರ್ಟ್ ಸಂಸ್ಥೆಯೊಂದರ ಒಡೆಯರೂ ಆಗಿದ್ದ ಸುಬ್ರಮಣಿ ಕೂಡ ಪರಿಚಯಸ್ಥರು. ಅವರ ತಂದೆಯನ್ನೂ ನಾನು ಬಲ್ಲವನಾಗಿದ್ದೆ. ಹಲವು ಕನ್ನಡ ಚಿತ್ರಗಳಿಗೆ ಹಣ ಸಹಾಯ ಮಾಡಿದ್ದ `ಉದಯರಂಗ' ನನ್ನ ಪ್ರಕಾರ ಅದೃಷ್ಟದ ಸಂಸ್ಥೆ. ಆ ಸಂಸ್ಥೆಯ ಆರ್ಥಿಕ ನೆರವು ಪಡೆದ ಎಷ್ಟೋ ಚಿತ್ರಗಳು ಯಶಸ್ಸು ಸಾಧಿಸಿದ್ದವು. ಅಂಥ ಸಂಸ್ಥೆಯು ನನ್ನತ್ತಲೂ ಅದೃಷ್ಟದ ಕೈ ಚಾಚೀತೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ.

ಯಾವುದಾದರೂ ಸಿನಿಮಾ ಮುಹೂರ್ತ ಅಥವಾ ಸಮಾರಂಭಗಳಲ್ಲಿ ಚಿನ್ನೇಗೌಡರನ್ನೋ ಸುಬ್ರಮಣಿ ಅವರನ್ನೋ ಕಂಡರೆ, `ನೀವು ಬಿಡಿ ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂದು ತಮಾಷೆ ಮಾಡುತ್ತಿದ್ದೆ. ಅದನ್ನು ಕೇಳಿ ಅವರಿಬ್ಬರೂ ನಗುತ್ತಲೇ ಪ್ರತಿಕ್ರಿಯೆ ನೀಡುತ್ತಿದ್ದರು. ನನ್ನ ಯಾವ ಚಿತ್ರಕ್ಕೂ ಅವರು ಹಣ ಸಹಾಯ ಮಾಡಿರಲಿಲ್ಲ. ಈಗಲಾದರೂ ಮಾಡಲಿ ಎಂದು ಪರೋಕ್ಷವಾಗಿ ಅರ್ಜಿ ಸಲ್ಲಿಸುವ ರೀತಿಯಲ್ಲಿ ಅವರನ್ನು ತಮಾಷೆ ಮಾಡುತ್ತಿದ್ದೆ.

ಒಂದು ದಿನ ಅದು ಫಲಿಸಿತು. ಮೈಸೂರಿನಲ್ಲಿ ಯಾವುದೋ ಚಿತ್ರದ ಮುಹೂರ್ತಕ್ಕೆಂದು ಹೊರಟಿದ್ದ ತಂಡದಲ್ಲಿ ನಾನು, ಚಿನ್ನೇಗೌಡರು ಹಾಗೂ ಕಳೆದ ವಾರವಷ್ಟೆ ನಮ್ಮನ್ನು ಅಗಲಿದ ಪತ್ರಕರ್ತ ವಿಜಯ ಸಾರಥಿ ಸೇರಿದ್ದೆವು. ವಿಷ್ಣು ಆಪ್ತರಲ್ಲಿ ವಿಜಯ ಸಾರಥಿ ಕೂಡ ಒಬ್ಬರು. ಮಾತಿನ ನಡುವೆ ಚಿನ್ನೇಗೌಡರು, `ವಿಷ್ಣುವರ್ಧನ್ ಅವರನ್ನು ಒಪ್ಪಿಸಿ, ಸಿನಿಮಾ ಮಾಡಿ. ಆ ಚಿತ್ರಕ್ಕೆ ಹಣದ ನೆರವು ಕೊಡುತ್ತೇನೆ' ಎಂದರು.

ವಿಷ್ಣುವರ್ಧನ್ ಮನೆಗೆ ನನ್ನ ಎರಡನೇ ಮಗ ಯೋಗೀಶ್ ಆಗಾಗ ಹೋಗಿ ಬರುತ್ತಿದ್ದ. `ಅಂಕಲ್, ನಮಗೆ ಒಂದು ಸಿನಿಮಾ ಮಾಡಿಕೊಡಿ' ಎಂದು ಹೋದಾಗಲೆಲ್ಲಾ ಮಾತಿನ ಅರ್ಜಿ ಗುಜರಾಯಿಸಿ ಬರುತ್ತಿದ್ದ. `ಗೌರಿ ಕಲ್ಯಾಣ' ಚಿತ್ರ ಬಂದ ಕಾಲದಿಂದ ಯೋಗೀಶ್ ಚಿತ್ರ ನಿರ್ಮಾಣದ ಕೆಲಸಗಳಲ್ಲಿ ನನ್ನ ಜೊತೆಗೇ ಇದ್ದಾನೆ. ನೂರು ಚಿತ್ರಗಳನ್ನು ನಾಡಿಗೆ ಕೊಡಬೇಕೆಂಬ ನನ್ನ ಬಯಕೆ ಈಡೇರಲು ಇನ್ನೂ 50 ಚಿತ್ರಗಳು ಬಾಕಿ ಇವೆ. ಅದನ್ನು ಅವನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

ಬಹುಶಃ ವಿಜಯ ಸಾರಥಿ ವಿಷ್ಣುವಿನ ಮನ ಒಲಿಸಿದರೋ ಏನೋ, ಒಂದು ದಿನ ಚಿನ್ನೇಗೌಡರು ಬಂದು ಸಂತೋಷದ ವಿಷಯ ಹೇಳಿದರು. ವಿಷ್ಣುವಿಗೆ ಅವರು ಅದಾಗಲೇ ಅಡ್ವಾನ್ಸ್ ಕೊಟ್ಟಿದ್ದರು. ನನ್ನ ಚಿತ್ರದಲ್ಲಿ ವಿಷ್ಣು ಅಭಿನಯಿಸಲು ಸಿದ್ಧವಿರುವ ಸಂಗತಿ ಖುಷಿ ತಂದಿತು.

ತಮಿಳುನಾಡಿನಲ್ಲಿ ಬಹಳ ಹಿಂದಿನಿಂದ ನಿರ್ದೇಶಕ ಪಿ.ವಾಸು ಪರಿಚಿತ. ಆತನ ಮೊದಲ ಚಿತ್ರ `ಎನ್ ತಂಗಚ್ಚಿ ಪಡಿಚವ'ವನ್ನು ನಾನೇ ನಿರ್ಮಿಸಬೇಕಿತ್ತು. ದಿನವೂ ವಾಸು ಆಗ ಮದ್ರಾಸ್‌ನಲ್ಲಿದ್ದ ನಮ್ಮ ಮನೆಗೆ ಹೋಗಿ ಬಂದು ಮಾಡುತ್ತಿದ್ದ. ಸಂಗೀತ ನಿರ್ದೇಶಕ ವಿಜಯ್ ಆನಂದ್ ತಮ್ಮ ಜತೆ ಅವನನ್ನು ಕರೆದುಕೊಂಡು ಬರುತ್ತಿದ್ದರು. ಕಾಲಕ್ರಮೇಣ ವಾಸು ದೊಡ್ಡ ನಿರ್ದೇಶಕನಾಗಿ ಬೆಳೆದ. ವಿಷ್ಣುವಿಗೆ ಹತ್ತಿರವಾಗಿದ್ದ. `ಹೃದಯವಂತ' ಚಿತ್ರವನ್ನು ನಿರ್ದೇಶಿಸಿದ್ದ ಸಂದರ್ಭದಲ್ಲಿಯೇ ನಮ್ಮ ಚಿತ್ರವನ್ನು ಅವನೇ ನಿರ್ದೇಶಿಸುವುದು ಎಂದು ತೀರ್ಮಾನವಾಯಿತು.

ನಾನು, ಯೋಗೀಶ್ ಮೈಸೂರಿಗೆ ಎರಡು ಮೂರು ಸಲ ಓಡಾಡಿದೆವು. ಎಂದಿನಂತೆ ಏಕತಾನವಲ್ಲದ, ವಿಷ್ಣು ವಯಸ್ಸಿಗೆ ಹೊಂದುವಂಥ ಪಾತ್ರ ಸೃಷ್ಟಿಸಬೇಕು ಎಂದು ಸಂಕಲ್ಪವಾಯಿತು. ಒಂದು ಕಡೆ ಚಿತ್ರ ನಿರ್ಮಾಣಕ್ಕೆ ಓಡಾಟ. ಇನ್ನೊಂದು ಕಡೆ ಚುನಾವಣೆಯ ಭರಾಟೆ. ಎರಡನ್ನೂ ಒಟ್ಟಿಗೆ ನಿಭಾಯಿಸಿದೆ.

ವಿಷ್ಣುವಿಗೆ ನಾನು ರಾಜಕೀಯ ಪ್ರವೇಶಿಸಿದ್ದು ಅಷ್ಟು ಇಷ್ಟವಾಗಿರಲಿಲ್ಲ. `ನೀನು ಸಿನಿಮಾಗೆಂದೇ ಹುಟ್ಟಿದವನು. ಈ ತಲೆನೋವೆಲ್ಲಾ ನಿನಗೆ ಬೇಕಾ ದ್ವಾರ್ಕಿ' ಎಂದಿದ್ದ. ಆದರೂ ಮನಸ್ಸು ಗಟ್ಟಿ ಮಾಡಿ ನಾನು ನಾಮಕರಣ ಪತ್ರ ಸಲ್ಲಿಸುವಾಗ ಹುಣಸೂರಿಗೆ ವಿಷ್ಣು ಬಂದಿದ್ದ.

ಯೋಗೀಶ್, ವಾಸು ಇಬ್ಬರೂ ಸೇರಿ `ಮಣಿಚಿತ್ರತಾಳ್' ಎಂಬ ಮಲಯಾಳಂ ಸಿನಿಮಾ ನೋಡಿದ್ದರು. ಕೇರಳದಲ್ಲಿ ಆ ಚಿತ್ರ ತೆರೆಕಂಡು ಹದಿಮೂರು ವರ್ಷವಾಗಿತ್ತು. ಯಾರಿಗೂ ಆ ಚಿತ್ರದ ವಸ್ತುವಿನ ಅರಿವು ಅಷ್ಟಾಗಿ ಇರಲಿಲ್ಲ. ಕೊನೆಗೆ ನಾವು ಅದನ್ನೇ ಮಾಡುವುದು ಎಂದು ತೀರ್ಮಾನವಾಯಿತು. ವಿಷ್ಣು ಕೂಡ ಆ ಚಿತ್ರಕತೆಯನ್ನು ಮೆಚ್ಚಿಕೊಂಡ. ವಿಷ್ಣು ಮಗಳು ಕೀರ್ತಿ ಆ ಚಿತ್ರಕ್ಕೆ `ಆಪ್ತಮಿತ್ರ' ಎಂದು ಹೆಸರಿಟ್ಟಳು. ರಾಜಕೀಯ, ಚುನಾವಣೆ, `ಆಪ್ತಮಿತ್ರ' ಎಲ್ಲಾ ಒಟ್ಟಾಗಿ ಆದವು. ದೇವರು `ರಾಜಕೀಯ ನಿನಗಲ್ಲ, ಸಿನಿಮಾ ನಿನ್ನದು' ಎನ್ನುವಂತೆ ಮಾಡಿದ. ವಿಷ್ಣು ಇಷ್ಟದಂತೆ ಸಿನಿಮಾದಲ್ಲಿ ಗೆದ್ದೆ, ರಾಜಕೀಯದಲ್ಲಿ ಸೋತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT