ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಪ್ಪನ್ ರಾಬಿನ್‌ಹುಡ್ ಆದದ್ದು

Last Updated 23 ಜುಲೈ 2011, 19:30 IST
ಅಕ್ಷರ ಗಾತ್ರ

ವ್ಯವಸ್ಥೆಯಲ್ಲಿನ ಹುಳುಕುಗಳಿಂದ ದಂಧೆ ಕೋರರಿಗೆ ಲಾಭವಾಗುವ ಹಲವಾರು ಪ್ರಸಂಗಗಳನ್ನು ನಾನು ವಿವರಿಸಿದ್ದೇನೆ. ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವಂತಹ ಶಸ್ತ್ರಾಸ್ತ್ರ ಕಳವು ಪ್ರಕರಣಗಳು ನಡೆದ ನಂತರವೂ ಇಲಾಖೆಯಲ್ಲಿರುವ ತಪ್ಪಿತಸ್ಥರಿಗೆ ಶಿಕ್ಷೆಯಾದದ್ದೇ ವಿರಳ.
 
ಅಮಾನತುಗೊಂಡು, ವಿಚಾರಣೆ ಎದುರಿಸುವ ಪ್ರಸಂಗಗಳು ನಡೆದ ನಂತರವೂ ಕೆಲವರು ಭಂಡತನದಿಂದ ವರ್ತಿಸಿದ್ದುಂಟು. ಹೀಗಾದಾಗ ನಮ್ಮ ಕಾನೂನು ರಕ್ಷಣಾ ವ್ಯವಸ್ಥೆಯ ಮೇಲೆಯೇ ಜನರಿಗೆ ನಂಬಿಕೆ ಹೊರಟುಹೋಗುತ್ತದೆ.

ನ್ಯಾಯಾಂಗದ ವಿಳಂಬ ಧೋರಣೆ ಕಂಡು ಬೇಸತ್ತವರೂ ಅನೇಕ. ಎಷ್ಟೋ ಸಲ ಕಾನೂನು ಮತ್ತು ಸುವ್ಯವಸ್ಥೆಗೆಂದೇ ಕೂತವರ ಕೈಗಳನ್ನು ರಾಜಕಾರಣಿಗಳು ಕಟ್ಟಿಹಾಕಿ ಬಿಡುತ್ತಾರೆ.

ಹೀಗಾದಾಗ ಸಹಜವಾಗಿಯೇ ಜನರು ಆಧುನಿಕ ಜಗತ್ತಿನ ರಾಬಿನ್‌ಹುಡ್‌ಗಳನ್ನು ಹುಡುಕಿಕೊಂಡು ಹೋಗುತ್ತಾರೆ. ವೀರಪ್ಪನ್ ತರಹದವರು ಜನಮನ್ನಣೆ ಗಳಿಸಿದ್ದೇ ಈ ಕಾರಣಕ್ಕೆ. ಅದಕ್ಕೆ ಪುಷ್ಟಿ ಕೊಡುವ ಘಟನೆಯೊಂದನ್ನು ನಾನೀಗ ಮೆಲುಕು ಹಾಕುತ್ತೇನೆ.

1990ರ ದಶಕದಲ್ಲಿ ಹೊಗೇನಕಲ್ ಜಲಪಾತದ ಬಳಿ ಜಗನ್ನಾಥನ್, ರಾಮಲಿಂಗು ಮತ್ತಿತರ ಪೊಲೀಸ್ ಅಧಿಕಾರಿಗಳನ್ನು ವೀರಪ್ಪನ್ ಕೊಂದ. ಆ ನಂತರ ಪೊಲೀಸ್ ಇಲಾಖೆಯು ಅವನನ್ನು ಹಿಡಿಯುವ ಪ್ರಕ್ರಿಯೆಯನ್ನು ಚುರುಕುಗೊಳಿಸಿತು.
 
ಪೊಲೀಸ್ ಅಧಿಕಾರಿಗಳಾದ ಹರಿಕೃಷ್ಣ ಹಾಗೂ ಶಕೀಲ್ ಅಹಮದ್ ಅವರನ್ನು ಮೊದಲು ಕಳುಹಿಸಿಕೊಟ್ಟಿತು. ನಾನೂ ಸೇರಿದಂತೆ ಇನ್ನೂ ಕೆಲವರು ಆಮೇಲೆ ಅವರ ತಂಡವನ್ನು ಸೇರಿಕೊಂಡೆವು.
 
ಆಗ ಕೆ.ಆರ್. ಶ್ರೀನಿವಾಸನ್ ಮೈಸೂರಿನ ಪೊಲೀಸ್ ಅಧಿಕಾರಿಯಾಗಿದ್ದರು. ಅವರದ್ದು ಮಾಹಿತಿದಾರರ ದೊಡ್ಡ ಸಂಪರ್ಕಜಾಲ. ಇದ್ದ ಜಾಗದಲ್ಲೇ ವೀರಪ್ಪನ್ ಸಹಚರರು ಯಾರ‌್ಯಾರಿದ್ದಾರೆ ಎಂಬ ಮಾಹಿತಿಯನ್ನು ಅವರು ಕಲೆಹಾಕುತ್ತಿದ್ದರು.

ಆ ಮಾಹಿತಿಯ ಆಧಾರದ ಮೇಲೆಯೇ ಒಬ್ಬ ಹುಡುಗ ನಮಗೆ ಸಿಕ್ಕಿದ. ವೀರಪ್ಪನ್ ಜೊತೆ ಹೆಚ್ಚು ಕಾಲ ಓಡಾಡಿಕೊಂಡಿದ್ದ ಆ ಹುಡುಗನಿಗೆ ಸಣ್ಣಪುಟ್ಟ ವಿಷಯಗಳೂ ಗೊತ್ತಿದ್ದವು. `ನೀವು ಕಾಡಿನಲ್ಲಿ ನಡೆದಾಡುವುದನ್ನು ನಮ್ಮ ತಂಡದವರೆಲ್ಲಾ ನೋಡಿದ್ದೇವೆ.

ನಾವು ಪೊದೆಗಳಲ್ಲಿ ಅವಿತುಕೊಂಡೇ ನಿಮ್ಮ ಚಲನವಲನಗಳನ್ನು ಗಮನಿಸುತ್ತಿದ್ದೆವು. ನಮಗೆ ಗೊತ್ತಿರುವಷ್ಟು ಕಾಡಿನ ಪರಿಚಯ ನಿಮಗಿಲ್ಲ. ಹಾಗಾಗಿ ತಪ್ಪಿಸಿಕೊಳ್ಳುವುದು ನಮಗೆ ಸುಲಭ~ ಎಂದೆಲ್ಲಾ ಅವನು ಹೇಳಿದ್ದ.

ವೀರಪ್ಪನ್ ಯಾವ ಯಾವ ದಂಧೆ ನಡೆಸುತ್ತಾನೆ, ಅವನ ಆಪ್ತ ಬಂಟರು ಯಾರು, ಯಾರುಯಾರಿಗೆ ಅವನು ಸಹಾಯ ಮಾಡಿದ್ದಾನೆ, ಅವರೆಲ್ಲಾ ಎಲ್ಲಲ್ಲಿ ಇದ್ದಾರೆ ಮೊದಲಾದ ಸಂಗತಿಗಳು ಪಟಪಟನೆ ಮಾತನಾಡುತ್ತಿದ್ದ ಆ ಹುಡುಗನಿಗೆ ಗೊತ್ತಿತ್ತು. ಅವನ ಬಾಯಿ ಬಿಡಿಸಿದಾಗ ನಮಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿತು.

ಕರ್ನಾಟಕ-ತಮಿಳುನಾಡು ಗಡಿ ಭಾಗಗಳಾದ ಗೋವಿಂದಪಾಡಿ, ಹೊಗೇನಕಲ್, ಪೆನ್ನಾಗರಂ ಮೊದಲಾದ ಊರುಗಳ ಜನರಿಗೆ ವೀರಪ್ಪನ್ ಸಹಾಯ  ಮಾಡಿದ್ದ. ಅವನಿಂದ ಯಾರೆಲ್ಲಾ ಸಹಾಯ ಪಡೆದಿದ್ದಾರೆ ಎಂದು ಕೇಳಿದಾಗ, ಒಬ್ಬ ಮಹಿಳೆಯ ಹೆಸರು ಹೇಳಿದ. ಆಕೆಯ ಕಥೆ ಕುತೂಹಲ ಹುಟ್ಟಿಸುವಂತಿತ್ತು.
 
ಕೆ.ಆರ್.ಶ್ರೀನಿವಾಸನ್ ಆ ಮಹಿಳೆಯನ್ನು ಕರೆಸಿದರು. ಆಕೆಯ ವಿಚಾರಣೆ ನಡೆಯಿತು. ತನಗೆ ವೀರಪ್ಪನ್ ಪರಿಚಯವಾದ ಕಥೆಯನ್ನು ಆ ಮಹಿಳೆ ಸಣ್ಣಸಣ್ಣ ವಿವರಗಳ ಸಹಿತ ಬಣ್ಣಿಸಿದರು.

ಗಂಡನನ್ನು ಕಳೆದುಕೊಂಡ ಆ ಮಹಿಳೆಗೆ ಬೆಳೆ ತೆಗೆಯಲು ಒಂದಿಷ್ಟು ಭೂಮಿ ಇತ್ತು.ರಾಜಕಾರಣಿಯ ಬೆಂಬಲಿಗನೊಬ್ಬ ಆಕೆಯ ಸುಮಾರು ಅರ್ಧ ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಬಿಟ್ಟ. ಇದ್ದಕ್ಕಿದ್ದಂತೆ ತನ್ನ ಜಾಗಕ್ಕೆ ಯಾರೋ ಬೇಲಿ ಹಾಕಿದ್ದು ಆ ಮಹಿಳೆಗೆ ಘಾಸಿ ಉಂಟುಮಾಡಿತು.
 
ತನಗಾಗಿರುವ ಅನ್ಯಾಯವನ್ನು ಊರ ಜನರಿಗೆ ಹೇಳಿದ್ದಾಯಿತು. ತಾಲ್ಲೂಕು ಆಫೀಸಿಗೆ ಹೋಗಿ ವಿಚಾರಿಸಿದ್ದಾಯಿತು. ಆದರೆ, ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಯಾಕೆಂದರೆ, ಒತ್ತುವರಿ ಮಾಡಿಕೊಂಡಿದ್ದವನು ದೊಡ್ಡ ಜಮೀನ್ದಾರ.

ರಾಜಕಾರಣಿಗಳ ಬೆಂಬಲ ಅವನಿಗಿತ್ತು. ಕೊನೆಗೆ ವಿಧಿಯಿಲ್ಲದೆ ಹೊಗೇನಕಲ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರು. ಅಲ್ಲಿ ಒಬ್ಬ ಸಜ್ಜನ ಸಬ್ ಇನ್ಸ್‌ಪೆಕ್ಟರ್ ಇದ್ದರು.
 
ಇದು ಸಿವಿಲ್ ಪ್ರಕರಣವಾದರೂ ಏಕಾಂಗಿಯಾಗಿ ಅನ್ಯಾಯವನ್ನು ಪ್ರತಿಭಟಿಸಿದ ಆ ಮಹಿಳೆಗೆ ನ್ಯಾಯ ಕೊಡಿಸ ಬೇಕೆಂಬುದು ಅವರ ಬಯಕೆ. ಆ ಜಮೀನ್ದಾರನಿಗೆ, ಅವನ ಕಡೆಯವರಿಗೆ ಬುದ್ಧಿ ಹೇಳಲು ಯತ್ನಿಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ.
 
ಪದೇಪದೇ ಆ ಮಹಿಳೆ ತನ್ನ ದೂರು ಏನಾಯಿತೆಂದು ಕೇಳಲು ಠಾಣೆಗೆ ಹೋಗುತ್ತಿದ್ದಳು. ಆಕೆಗೆ ನ್ಯಾಯ ಕೊಡಿಸಲು ಸಬ್ ಇನ್ಸ್‌ಪೆಕ್ಟರ್ ತಮ್ಮ ಬುದ್ಧಿಯನ್ನೆಲ್ಲಾ ಉಪಯೋಗಿಸಿದರೂ ಸಾಧ್ಯವಾಗಲಿಲ್ಲ.
 
ಕರ್ನಾಟಕ ಹಾಗೂ ತಮಿಳುನಾಡಿನ ರಾಜಕಾರಣಿಗಳಿಂದ ನೇರವಾಗಿ ಅವರ ಮೇಲೆ ಒತ್ತಡ ಬಂತು. ಯಾವುದೇ ಕಾರಣಕ್ಕೂ ಆ ಜಮೀನ್ದಾರನ ತಂಟೆಗೆ ಹೋಗಕೂಡದು ಎಂದು ಎಲ್ಲರೂ ತಾಕೀತು ಮಾಡಿದವರೇ.
 
ಆ ಸಬ್ ಇನ್ಸ್‌ಪೆಕ್ಟರ್ ಕೂಡ ಜಮೀನ್ದಾರನ ದೊಡ್ಡ ಕೋಟೆಯನ್ನು ಏಕಾಂಗಿಯಾಗಿ ಭೇದಿಸುವುದು ಸಾಧ್ಯವಿರಲಿಲ್ಲ. ಮತ್ತೊಮ್ಮೆ ಆ ಮಹಿಳೆ ಬಂದು ಅಳತೊಡಗಿದಾಗ, ಅವರಿಗೆ ಏನು ಹೇಳಬೇಕೆಂದು ಮೊದಲು ತೋಚಲಿಲ್ಲ.

ಸಾಕಷ್ಟು ಯೋಚಿಸಿದ ನಂತರ ಅವರಿಗೆ ಹೊಳೆದದ್ದು ಒಂದೇ ಹೆಸರು-ವೀರಪ್ಪನ್. ಹೇಗಾದರೂ ಮಾಡಿ ವೀರಪ್ಪನ್‌ನನ್ನು ಭೇಟಿ ಮಾಡಿ, ಅವನಲ್ಲಿ ಕಷ್ಟ ಹೇಳಿಕೊಂಡರೆ ಖಂಡಿತ ಸಹಾಯ ಮಾಡುತ್ತಾನೆ ಎಂದು ಆ ಸಬ್ ಇನ್ಸ್‌ಪೆಕ್ಟರ್ ಹೇಳಿಬಿಟ್ಟರು.
 
ವ್ಯವಸ್ಥೆಯಲ್ಲಿನ ಕಳ್ಳರಿಗಿಂತ ಕಾಡುಗಳ್ಳನೇ ಬಡವರ ವಿಷಯದಲ್ಲಿ ವಾಸಿಯೆಂಬುದು ಅವರಿಗೆ ಗೊತ್ತಿತ್ತು. ವೀರಪ್ಪನ್‌ನನ್ನು ಹೇಗೆ ಭೇಟಿಯಾಗುವುದು ಎಂಬ ಪ್ರಶ್ನೆ ಆ ಮಹಿಳೆಯಲ್ಲಿತ್ತು.

ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಚಾರಿಸಿದಳು. ಗೋಪಿನಾಥಂ ಎಂಬ ಊರಿಗೆ ಆಗಾಗ ವೀರಪ್ಪನ್ ಬರುತ್ತಿದ್ದ. ಆದರೆ, ಯಾವಾಗಲೂ ಅಲ್ಲಿರುತ್ತಿರಲಿಲ್ಲ. ಅವನು ಒಂದು ಕಡೆ ನಿಲ್ಲುವವನೇ ಆಗಿರಲಿಲ್ಲ.
 
ಪೊಲೀಸರೆಲ್ಲಾ ತನ್ನ ಬೆನ್ನುಹತ್ತಿರುವುದು ಗೊತ್ತಿದ್ದರಿಂದ ಇನ್ನಷ್ಟು ವ್ಯಾಪಕವಾಗಿ ಅವನು ಕಾಡಿನಲ್ಲಿ ಓಡಾಡುತ್ತಿದ್ದ. ಆದರೂ ಆ ಮಹಿಳೆ ಛಲ ಬಿಡಲಿಲ್ಲ. ಕಾಡಿನಲ್ಲಿ ಓಡಾಡುತ್ತಿದ್ದ ಬೆಟ್ಟದ ನೆಲ್ಲಿಕಾಯಿ, ಸೀಗೇಕಾಯಿ ಕಂಟ್ರಾಕ್ಟರ್‌ಗಳನ್ನು ಪತ್ತೆಮಾಡಿದಳು. ಅವರು ತೋರಿಸಿದ ದಾರಿಹಿಡಿದಳು.

ಹಾಗೆಯೇ ಒಬ್ಬರಿಂದ ಒಬ್ಬರನ್ನು ಕೇಳುತ್ತಾ ವೀರಪ್ಪನ್ ಇರುವ ಜಾಗವನ್ನು ಪತ್ತೆಮಾಡಿದಳು. ಮೊದಲಿಗೆ ವೀರಪ್ಪನ್ ಅವಳು ಹೇಳಿದ ಕಥೆಯನ್ನು ನಂಬಲಿಲ್ಲ. ಅವನು ಒಂದು ದಿನ ಅವಳನ್ನು ತನ್ನಲ್ಲೇ ಇರುವಂತೆ ಮಾಡಿದ.

ಪೊಲೀಸರು ಕಳಿಸಿರುವ ಮಹಿಳೆ ಹೌದೋ ಅಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳುವ ಕಾರಣಕ್ಕೆ ಅವನು ಹಾಗೆ ಮಾಡಿದ್ದು. ಅವಳು ಯಾವ ಊರಿನವಳು ಎಂಬುದನ್ನು ತಿಳಿದುಕೊಂಡು, ಅಲ್ಲಿಗೆ ವಿಚಾರಿಸಿ ಕೊಂಡು ಬರಲು ತನ್ನ ಒಬ್ಬ ಹುಡುಗನನ್ನು ಕಳುಹಿಸಿದ.

ಒಂದು ದಿನವಾದರೂ ಯಾರೂ ಆ ಮಹಿಳೆಯನ್ನು ಹುಡುಕಿಕೊಂಡು ಬರಲಿಲ್ಲ. ಅವಳ ಊರಿಗೆ ಹೋಗಿಬಂದ ಹುಡುಗನೂ ಪೊಲೀಸರು ಆಕೆಯನ್ನು ಕಳುಹಿಸಿಲ್ಲ ಎಂಬುದನ್ನು ಖಾತರಿಪಡಿಸಿದ. ಆಗ ವೀರಪ್ಪನ್ ಅವಳಿಗೆ ಹೊಟ್ಟೆತುಂಬಾ ಊಟ ಹಾಕಿ, ಏನು ಕಷ್ಟ ಎಂಬುದನ್ನು ಕೇಳಿದ. 

ಇಷ್ಟೆಲ್ಲಾ ಆಗುವಷ್ಟರಲ್ಲಿ ಆ ಮಹಿಳೆಗೆ ಜೀವ ಬಾಯಿಗೆ ಬಂದಿತ್ತು. ಪೊಲೀಸರೂ ತನಗೆ ಸಹಾಯ ಮಾಡಲಿಲ್ಲ. ಇಲ್ಲಿ ನರಹಂತಕ ಕೊಂದುಬಿಟ್ಟರೇನು ಗತಿ ಎಂದು ಬೆದರಿದ್ದಳು. ಅವಳ ಪುಣ್ಯಕ್ಕೆ ವೀರಪ್ಪನ್, `ಚಿಂತಿಸಬೇಡ. ನಿನ್ನ ಸಮಸ್ಯೆ ಬಗೆಹರಿಯಿತು ಎಂದುಕೋ~ ಎಂದು ಅವಳನ್ನು ಮನೆಗೆ ಕಳುಹಿಸಿದ.

ನಾಲ್ಕೈದು ದಿನಗಳಾದರೂ ಏನೂ ಬದಲಾವಣೆ ಆಗಲಿಲ್ಲ. ವೀರಪ್ಪನ್ ತನ್ನ ಸಮಸ್ಯೆ ಬಗೆಹರಿಸುವನೋ ಇಲ್ಲವೋ ಎಂದು ಮಹಿಳೆ ತಹತಹಿಸುತ್ತಿದ್ದಳು. ಅಷ್ಟರಲ್ಲಿ ಅವಳ ಜಮೀನು ಒತ್ತುವರಿ ಮಾಡಿಕೊಂಡಿದ್ದ ಜಮೀನ್ದಾರನ ಅಪಹರಣವಾಯಿತು.

ವೀರಪ್ಪನ್ ತಂಡವೇ ಅವನನ್ನು ಅಪಹರಿಸಿತ್ತು. ಐದು ದಿನಗಳ ನಂತರ ಆ ಜಮೀನ್ದಾರ ಮತ್ತೆ ವಾಪಸ್ಸಾದ. ವೀರಪ್ಪನ್ ಅವನನ್ನು ಚೆನ್ನಾಗಿಯೇ ವಿಚಾರಿಸಿಕೊಂಡಿದ್ದ.
 
ಹಾಗಾಗಿ ಬಂದವನೇ ಆ ಮಹಿಳೆಯ ಜಮೀನಿಗೆ ಹಾಕಿದ್ದ ಬೇಲಿ ತೆಗೆಸಿ, ತನ್ನದೇ ಇನ್ನಷ್ಟು ಜಾಗವನ್ನು ಸೇರಿಸಿ ಹೊಸದಾಗಿ ಬೇಲಿ ಹಾಕಿಸಿಕೊಟ್ಟ. ಇನ್ನು ಮುಂದೆ ಅವಳ ತಂಟೆಗೆ ಬರುವುದಿಲ್ಲ ಎಂದು ಮಾತುಕೊಟ್ಟ. ಇಷ್ಟಾದ ನಂತರ ಮತ್ತೆ ಆ ಮಹಿಳೆಗೆ ವೀರಪ್ಪನ್ ಸಿಕ್ಕಿರಲಿಲ್ಲ.

ಮಹಿಳೆ ಹೇಳಿದ ಈ ಘಟನೆ ಕೇಳಿದ ನಂತರ ನಾವು ಹೊಗೇನಕಲ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹತ್ತಿರ ನಡೆದ ಸಂಗತಿಯನ್ನು ಸ್ಪಷ್ಟಪಡಿಸಿಕೊಂಡೆವು. ಅವರು ಕೂಡ ಅದನ್ನು ಅನುಮೋದಿಸಿದರು. ಕರ್ನಾಟಕ ಹಾಗೂ ತಮಿಳುನಾಡಿನ ಶಾಸಕರೇ ಅಡ್ಡಗಾಲು ಹಾಕಿ ಆ ಜಮೀನ್ದಾರನ ಪರವಾಗಿ ಮಾತನಾಡಿದ್ದನ್ನು ಹೇಳಿಕೊಂಡರು.
 
ಆ ಘಟನೆಯಿಂದ ನಿಜಕ್ಕೂ ಅವರಿಗೆ ಬೇಸರವಾಗಿತ್ತು. ವಿಧಿಯಿಲ್ಲದೆ ವೀರಪ್ಪನ್ ಹತ್ತಿರ ಹೋಗು ಎಂದು ತಾವೇ ಸಲಹೆ ಕೊಟ್ಟಿದ್ದಾಗಿ ಒಪ್ಪಿಕೊಂಡರು. ವೀರಪ್ಪನ್ ತರಹದ ನರಹಂತಕರು ಇಂಥ ಘಟನೆಗಳಿಂದಲೇ `ರಾಬಿನ್‌ಹುಡ್~ ಎನ್ನಿಸಿ ಕೊಳ್ಳುವುದು.

ಅವನಂತೆ ಭೂಗತಲೋಕದ ಎಷ್ಟೋ ಜನರಲ್ಲಿಗೆ ಹೋಗಿ ಅಮಾಯಕರು ತಮ್ಮ ಕಷ್ಟ ನಿವೇದನೆ ಮಾಡಿಕೊಳ್ಳುವಂತೆ ಹೇಳಿರುವ ಪೊಲೀಸರೂ ಇದ್ದಾರೆ. ವ್ಯವಸ್ಥೆ ಕೈಕಟ್ಟಿ ಹಾಕುವುದ ರಿಂದ ಹೀಗೆ ಅಡ್ಡದಾರಿಯಲ್ಲಿ ಮುಗ್ಧ ಜನರಿಗೆ ಪರಿಹಾರ ಕೊಡಿಸುವ ಉಮೇದು ಹುಟ್ಟುತ್ತದೆ.

ಇದರಿಂದ ಘಾತುಕಶಕ್ತಿಗಳ ಕೈ ಬಲವಾಗುತ್ತದೆ. ಒಂದು ವೇಳೆ ಹೊಗೇನಕಲ್ ಸಬ್ ಇನ್ಸ್‌ಪೆಕ್ಟರ್ ಮೇಲೆ ರಾಜಕಾರಣಿಗಳು ಒತ್ತಡ ಹಾಕದೇ ಇದ್ದರೆ `ಪೊಲೀಸರಿಗಿಂತ ವೀರಪ್ಪನ್ ವಾಸಿ~ ಎಂಬ ಭಾವನೆ ಜನರಲ್ಲಿ ಮೂಡುತ್ತಿರಲಿಲ್ಲ.

ಮುಂದಿನ ವಾರ: ಮನೆ ಖಾಲಿ ಮಾಡಿಸಲು ಜಯರಾಜ್ ಮೊರೆ ಇಟ್ಟವರು
ಶಿವರಾಂ ಅವರ ಮೊಬೈಲ್ ನಂಬರ್; 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT