ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿರಂಗಭೂಮಿಯ ಶಿಖರ

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಕನ್ನಡ ರಂಗಭೂಮಿಯನ್ನು ಅತ್ಯಂತ ಸಮೃದ್ಧವಾಗಿ, ಶ್ರಿಮಂತವಾಗಿ ಬೆಳೆಸಿದ ಕೀರ್ತಿ  ಗುಬ್ಬಿ ವೀರಣ್ಣ ಅವರದ್ದು.  ಅವರು ತಮ್ಮ ನಾಟಕಗಳಿಗೆ ಹಿಂದೆಂದೂ ಕಾಣದ ವೈಭವವನ್ನು ತಂದು ಕೊಟ್ಟರು.  ಅದರ್ಲ್ಲಲೂ ಅವರ  `ಕುರುಕ್ಷೇತ್ರ' ನಾಟಕದ ವಿಶೇಷತೆಯೇ ಬೇರೆ. ಅದೇನು ರಂಗವಿನ್ಯಾಸ, ಅದ್ಭುತವಾದ ಪರದೆಗಳು, ನಟ-ನಟಿಯರ ವೇಷಭೂಷಣಗಳು! ಅತ್ಯಂತ  ವಿಸ್ತಾರವಾದ ರಂಗಮಂಚದ ಮೇಲೆ ಆನೆ, ಕುದುರೆಗಳನ್ನು ತಂದು ಅಕ್ಷರಶಃ ಕುರುಕ್ಷೇತ್ರವನ್ನೇ ಸೃಷ್ಟಿಸಿಬಿಟ್ಟಿದ್ದರು.

ಆ ಸಡಗರ ಹಿಂದೆಂದೂ ಯಾವ ನಾಟಕದಲ್ಲಿ ಇರಲಿಲ್ಲ, ಮುಂದೆ ದೊರೆಯುವುದೂ ಕಷ್ಟ.  ಅದೊಂದು ಜನಪ್ರಿಯ ನಾಟಕ.  ಆಂಧ್ರಪ್ರದೇಶದಲ್ಲಿ ಅದಕ್ಕೆ ತುಂಬ ಬೇಡಿಕೆ ಬಂದಿದ್ದರಿಂದ ನಾಟಕವನ್ನು ತೆಲುಗಿಗೆ ಅನುವಾದ ಮಾಡಿಸಿ ಹೈದರಾಬಾದಿನಲ್ಲೂ ಆಡಿದರು. ಅಲ್ಲಿ ದೊರೆತ ಸ್ವಾಗತ, ಮೆಚ್ಚುಗೆ ಅಪರೂಪವಾದದ್ದು, ಅಭೂತಪೂರ್ವವಾದದ್ದು.

ಈ ನಾಟಕದ ಪ್ರಶಂಸೆ ಹೈದರಾಬಾದಿನ ಮೂಲೆಮೂಲೆಗೆ ಹರಡಿತ್ತು. ಈ `ಕುರುಕ್ಷೇತ್ರ' ನಾಟಕದ ಬಗೆಗಿನ ಮಾತುಗಳು ನಿಜಾಮನ ಕಿವಿಯನ್ನೂ ತಲುಪಿದವು. ಅವನ ಕುತೂಹಲವೂ ಕೆರಳಿತು.  ಆತ ತನ್ನ ಕಚೇರಿಯ ಹಿರಿಯರನ್ನು ಗುಬ್ಬಿ ವೀರಣ್ಣನವರ ಕಡೆಗೆ ಕಳುಹಿಸಿ. ಈ ನಾಟಕವನ್ನು ತಮ್ಮ ಅರಮನೆಯಲ್ಲಿ ಆಡಬೇಕೆಂದೂ ಅದರಿಂದ ಜನಾನಾದ ಜನರಿಗೂ ನೋಡಲು ಅನುಕೂಲವಾಗುತ್ತದೆಂದು ಕೋರಿಕೆ ತಲುಪಿಸಿದ. 

ಅದಕ್ಕೆ ವೀರಣ್ಣನವರು,  ಇದು ಸಾಮಾನ್ಯ ನಾಟಕವಲ್ಲ, ಇದರ ವ್ಯವಸ್ಥೆ ಬಹಳ ಕಷ್ಟದ್ದಾಗಿದ್ದು ನಾವು ಅರಮನೆಗೆ ಬಂದು ನಾಟಕ ಆಡಲಾರೆವು. ನಿಜಾಮರು ದಯವಿಟ್ಟು ಇಲ್ಲಿಗೇ ಬಂದು ನಾಟಕವನ್ನು ನೋಡಿ ಪ್ರೋತ್ಸಾಹಿಸಬೇಕು. ಅವರ ಪರಿವಾರದವರಿಗೆಲ್ಲ ಅನುಕೂಲವಾಗುವಂತೆ ವ್ಯವಸ್ಥೆ ನಾನು ಮಾಡುತ್ತೇನೆ  ಎಂದರು.

ನಿಜಾಮರಿಗೆ ಸಿಟ್ಟು ಬಂದಿರಬೇಕು. ಆದರೂ ಇಷ್ಟು ಜನಪ್ರಿಯವಾದ ನಾಟಕ ಹೇಗಿರುತ್ತದೆ ಎಂದು ನೋಡುವ ಕುತೂಹಲವೂ ಇತ್ತು.  ನಿಜಾಮನ ಅಧಿಕಾರಿಗಳಿಗೆ ಒಂದು ಹೆದರಿಕೆಯೆಂದರೆ ನಿಜಾಮನ ಗೌರವಕ್ಕೆ ತಕ್ಕದಾದ ರೀತಿಯಲ್ಲಿ ಸ್ವಾಗತ, ವ್ಯವಸ್ಥೆಯಾದೀತೇ? ಒಂದು ಮೊದಲೇ ತೀರ್ಮಾನವಾದ ದಿನದಂದು ನಿಜಾಮ ತನ್ನ ಸಕಲ ಪರಿವಾರದೊಂದಿಗೆ  ನಾಟಕ ನಡೆಯುವ ಸ್ಥಳಕ್ಕೆ ಹೋದ.

ವೀರಣ್ಣನವರು ನಿಜಾಮನ ಹಾಗೂ ಪರಿವಾರಕ್ಕೆ ಮರ್ಯಾದೆ ತೋರಲು ಮಾಡಿದ ವ್ಯವಸ್ಥೆಯಾದರೂ ಎಂಥದ್ದು? ನಿಜಾಮನ ಕಾರು ನಿಲ್ಲುವ ಸ್ಥಳದಿಂದ ಆತ ಕೂಡ್ರುವ ಸ್ಥಳದವರೆಗೂ ಕೆಂಪುಹಾಸನ್ನು ಹಾಸಲಾಗಿತ್ತು. ಅದರ ಇಕ್ಕೆಲಗಳಲ್ಲಿ ಎಲ್ಲ ನಟ-ನಟಿಯರು ತಮ್ಮ ಪೌರಾಣಿಕ ವೇಷದಲ್ಲಿ ನಿಂತು ನಿಜಾಮನ ಹಾಗೂ ಪರಿವಾರದವರ ಮೇಲೆ ಹೂವಿನ ಪಕಳೆಗಳನ್ನು ತೂರುತ್ತ, ಸುಗಂಧದ್ರವ್ಯವನ್ನು ಸಿಂಪಡಿಸುತ್ತಿದ್ದರು. ಮುಂದೆ ಜೋಡಿ ಓಲಗ.  ನಿಜಾಮ ರಂಗಮಂದಿರದೊಳಗೆ ಬಂದೊಡನೆ ನಗಾರಿ, ಭೇರಿ, ಶಂಖ, ತುತ್ತೂರಿಗಳ ಧ್ವನಿ ಮೊಳಗಿತು. ನಿಜಾಮ ಕೂಡ ಬೆರಗಾಗಿ ಹೋದ.

ಆತ ಇಡೀ ನಾಟಕವನ್ನು ತದೇಕಚಿತ್ತದಿಂದ ನೋಡಿದ. ನಂತರ ನಾಟಕ ಮುಗಿದ ಮೇಲೆ ತಾನೇ ಸಂತೋಷದಿಂದ ವೇದಿಕೆಯ ಮೇಲೆ ಬಂದು ನಾಟಕವನ್ನು ಬಹುವಾಗಿ ಹೊಗಳಿದ. ವೀರಣ್ಣನವರ ದೊಡ್ಡತನದ ಬಗ್ಗೆ ಮೆಚ್ಚುಗೆ ಸೂಸಿದ. ಅಷ್ಟೇ ಅಲ್ಲದೇ `ಕರ್ನಾಟಕಾಂಧ್ರ ನಾಟಕ ಸಾರ್ವಭೌಮ' ಎಂದು ಬಿರುದುಕೊಟ್ಟು ವಿಶೇಷವಾಗಿ ಸನ್ಮಾನಿಸಿದ. ಈಗ ಅಂಥದ್ದನ್ನು ಕಲ್ಪನೆ ಮಾಡಲೂ ಸಾಧ್ಯವಿಲ್ಲದಂತಾಗಿದೆ.

ಗುಬ್ಬಿ ವೀರಣ್ಣ ಅವರು ಮರೆಯಾದ ಮೇಲೆ ಕರ್ನಾಟಕ ವೃತ್ತಿರಂಗಭೂಮಿಯ ಬಹುದೊಡ್ಡ ಶಿಖರವೊಂದು ಕರಗಿ ಹೋದಂತಾಯಿತು. ವೀರಣ್ಣನವರ ಸಾಧನೆಯ ಛಲ, ಎಂಥ ತೊಂದರೆ ಬಂದರೂ ಅದನ್ನು ಎದುರಿಸುವ ತಾಳ್ಮೆ, ಜಾಣ್ಮೆ, ವೃತ್ತಿಯ ಬಗೆಗಿನ ಅಭಿಮಾನ ಇವೆಲ್ಲ ದಂತಕಥೆಗಳಾದವು.   ಬಹುಶಃ ಯಾವುದೇ ಕ್ಷೇತ್ರದ ಕೆಲಸದಲ್ಲಿ ತೊಡಗಿದವರಿಗೆ ಈ ಗುಣಗಳಿದ್ದರೆ ಅವರು ಕೂಡ ಆ ಕ್ಷೇತ್ರದಲ್ಲಿ ಮಾರ್ಗದರ್ಶಿ ನಕ್ಷತ್ರವಾಗಿ ನಿಲ್ಲಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT