ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಡಿ ಪ್ರಸಂಗ: ಅಭಿವ್ಯಕ್ತಿ ಸ್ವಾತಂತ್ರ್ಯದ ಸುತ್ತ

Last Updated 27 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಅಪರಿಮಿತ ಸ್ವಾತಂತ್ರ್ಯದ ಸೋಗು ಹಾಕುವ ‘ಮುಕ್ತ’ ಮಾರುಕಟ್ಟೆಯ ಬುನಾದಿಯ ಮೇಲೆ ನಾವು ಮರುನಿರ್ಮಿಸುತ್ತಿರುವ ಗೋಳೀಕ ರಣದ ಮತ್ತು ಅದರೊಂದಿಗೆ ಶಾಮೀಲಾಗಿ­ರುವ ಪ್ರಜಾಪ್ರಭುತ್ವದ ಮೌಲ್ಯಗಳ ಅಂತರ್‌­ವಿರೋಧವು ವೆಂಡಿ ಡೋನಿಗರ್‌ ಅವರ ‘ದಿ ಹಿಂದುಸ್: ಆ್ಯನ್‌ ಆಲ್ಟರ್‌ನೇಟಿವ್‌ ಹಿಸ್ಟರಿ’ ಕೃತಿ ಕುರಿತ ವಿವಾದದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಕೋರ್ಟಿನ ಆದೇಶ ಬರುವುದಕ್ಕೂ ಕಾಯದೆ ಪುಸ್ತಕದ ಪ್ರಕಾಶಕರಾದ ಪೆಂಗ್ವಿನ್‌ನವರು ಫಿರ್ಯಾದುದಾರರಿಗೆ ಶರಣಾಗಿ ಪುಸ್ತಕದ ಉಳಿದ ಪ್ರತಿಗಳನ್ನು ಹಿಂತೆಗೆದುಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದಾರೆ.

ತಾವೇ ಪ್ರಕಟಿಸಿದ ಜನಪ್ರಿಯ ಮತ್ತು ವಿದ್ವತ್ಪೂರ್ಣ ಕೃತಿಯನ್ನು ಪೆಂಗ್ವಿನ್‌ನಂಥ ಅಪಾರ ಆರ್ಥಿಕ ಬಲ ಮತ್ತು ಪ್ರಭಾವವಿರುವ ಪ್ರಕಾಶಕರು ಕಾನೂನು ರೀತ್ಯಾ ಯಾಕೆ ಸಮರ್ಥಿಸಿಕೊಳ್ಳಬಾರದಾಗಿತ್ತು ಎಂಬ ಪ್ರಶ್ನೆಯನ್ನು ಅರುಂಧತಿ ರಾಯ್‌ ಅವರಂಥ ಪ್ರಭಾವಿ ಚಿಂತಕರು ಕೇಳುತ್ತಿದ್ದಾರೆ. ಯಾವುದೇ ಧರ್ಮದವರ ಮನ ನೋಯಿಸುವ ಪ್ರಯತ್ನವನ್ನು ಪ್ರೋತ್ಸಾಹಿಸುವುದು ಅಪರಾಧ ಎಂಬ ಕಾನೂನು ಇರುವ  ದೇಶದಲ್ಲಿ ಆ ದೇಶದ ಕಾನೂನನ್ನು ಗೌರವಿಸಬೇಕಾದ ಅನಿವಾರ್ಯ­ದಿಂದ ಈ ತೀರ್ಮಾನ ಕೈಗೊಳ್ಳಬೇಕಾಯಿತು ಎಂಬುದು ಪ್ರಕಾಶಕರ ವಾದ. ಏತನ್ಮಧ್ಯೆ ಬರಹಗಾರ್ತಿ ವೆಂಡಿ ಡೋನಿಗರ್‌ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯಕ್ಕೊಳ­ಗಾಗಿ­ರುವುದರ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮದ ನಡುವಿನ ಸಂಘರ್ಷ ನಮ್ಮ ನಡುವೆ ಮತ್ತೆ ಮತ್ತೆ ತಲೆಯೆತ್ತುತ್ತಿರುವುದರಿಂದ ಈ ಸಮಸ್ಯೆಯನ್ನು ಕೂಲಂಕಷವಾಗಿ ನೋಡಬೇಕಾಗಿದೆ.

ಈ ತೆರನ ಇನ್ನೊಂದು ಪ್ರಸಂಗವನ್ನು ಇಲ್ಲಿ ನೆನಪು ಮಾಡಿಕೊಳ್ಳೋಣ. ಸಲ್ಮಾನ್ ರಶ್ದಿ ಅವರ ‘ಸಟಾನಿಕ್‌ ವರ್ಸಸ್’ ಅನ್ನು ಮುಸ್ಲಿಮರ ಮನಸ್ಸು ನೋಯಿಸುತ್ತದೆಂಬ ಕಾರಣದಿಂದ ಭಾರತ ಸರ್ಕಾರ ಮುಟ್ಟುಗೋಲು ಹಾಕಿತ್ತು. ಆ ತೀರ್ಮಾನವನ್ನು ಅಂದು ಸಮರ್ಥಿಸಿದ್ದ ಬುದ್ಧಿ­ಜೀವಿ ರಾಜಕಾರಣಿ ಮಣಿಶಂಕರ್ ಅಯ್ಯರ್ ಅವರು ವೆಂಡಿ ಅವರ ಪುಸ್ತಕ ಬಗೆಗಿನ ವಿರೋಧ­ವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಅಪಮಾನ­ವೆಂದಿದ್ದಾರೆ. ಈ ಎರಡು ಪುಸ್ತಕಗಳಿಗಿರುವ ವ್ಯತ್ಯಾಸವನ್ನು ಅವರು ಹೀಗೆ ಗುರುತಿಸಿದ್ದಾರೆ:

ರಶ್ದಿ ಅವರ ಪುಸ್ತಕ ಇಸ್ಲಾಮನ್ನು ಲೇವಡಿ ಮಾಡುವ ಉದ್ದೇಶದಿಂದ ರಚಿತವಾಗಿದೆ. ಆದರೆ ವೆಂಡಿ ಅವರ ಪುಸ್ತಕ ಅತ್ಯಂತ ವಿದ್ವತ್ಪೂರ್ಣ­ವಾದ ಅಧ್ಯಯನವಾಗಿದೆ.

ಅವರ ವಾದ ನಿಜವಾದರೂ ಮುಜುಗರ ಉಂಟು ಮಾಡುವ ಸತ್ಯವೊಂದನ್ನು ಅವರು ಮರೆತಂತೆ ಅಥವಾ ಮರೆಸುವಂತೆ ತೋರುತ್ತದೆ. ಒಂದು ಕೋಮಿನವರ ಭಾವನೆಗಳನ್ನು ನೋಯಿ­ಸುವ ಕಾರಣದಿಂದ ಪುಸ್ತಕವೊಂದನ್ನು ಮುಟ್ಟು ­ಗೋಲು ಹಾಕಿದ ಮೇಲೆ ಇನ್ನೊಂದು ಕೋಮಿ­ನವರ ಭಾವನೆಗಳಿಗೆ ಅಗೌರವ ತೋರಿಸುವ ಪುಸ್ತಕವನ್ನು ಹೇಗೆ ಸಮರ್ಥಿಸಿಕೊಳ್ಳುವುದು? ಅಲ್ಪಸಂಖ್ಯಾತ ಕೋಮಿನ ವಿಶ್ವಾಸವನ್ನು ಅವ­ಮಾನಿಸುವ ಪುಸ್ತಕಗಳು ಖಂಡನಾರ್ಹವಾದರೆ ಬಹುಸಂಖ್ಯಾತ ಕೋಮಿನ ಭಾವನೆಗಳನ್ನು ಕೆಣಕುವ ಕೃತಿಗಳನ್ನು ಖಂಡಿಸದೆ ಹೇಗಿರುವುದು? ಇಂಥ ಇಬ್ಬಂದಿ ನೀತಿಯಿಂದ ಈಗಾಗಲೇ ವಿಕೃತವಾಗಿರುವ ಧಾರ್ಮಿಕ ಅಸಹನೆಗೆ ಇನ್ನೂ ಹೆಚ್ಚಿನ ಕುಮ್ಮಕ್ಕು ಕೊಟ್ಟಂತಾಗುವುದಿಲ್ಲವೆ?

ಈ ಸಂದರ್ಭದಲ್ಲಿ ಇಂಥ ಕೃತಿಗಳ ವಿರೋಧಿಗಳ ಅಧಿಕಾರವೂ ಚರ್ಚಾಸ್ಪದ. ರಶ್ದಿ ಅವರದು ಸೃಜನ ಪ್ರತಿಭೆಯೆಂದೂ ವೆಂಡಿ ಅವರದು ವಿದ್ವತ್ ಪ್ರತಿಭೆಯೆಂದೂ ಒಪ್ಪೋಣ. ಆದರೆ ರಶ್ದಿ ಅವರ ಕೃತಿಯನ್ನು ವಿರೋಧಿಸಿ­ದವರು ಸಾಹಿತ್ವದ ಸೂಕ್ಷ್ಮ ಓದುಗರಲ್ಲ. ಬಹುಶಃ ಅವರಲ್ಲಿ ಬಹುತೇಕರು ಸಟಾನಿಕ್‌ ವರ್ಸಸ್ ಅನ್ನು ಓದಿರುವುದಿರಲಿ, ನೋಡಿಯೂ ಇರುವುದಿಲ್ಲ. ವೆಂಡಿಯವರ ವಿರೋಧಿ ಫಿರ್ಯಾದುದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಟೀಕೆಗಳ ಪಟ್ಟಿಯಿಂದ ಆ ಪ್ರಭೃತಿಗಳು  ವೆಂಡಿಯವರ ಪುಸ್ತಕವನ್ನು ಗಮನ ಕೊಟ್ಟು ಓದಿಲ್ಲವೆಂದು ಸ್ಪಷ್ಟವಾಗಿದೆ. ಇಂಥಾ ಬೆಳವಣಿಗೆಗಳು ಮುಂದುವರಿದರೆ ಮತ್ತು ಇಂಥಾ ಅನಧಿಕೃತ ವಿರೋಧಗಳಿಗೆ ಕಾನೂನು ಶರಣಾದರೆ ನಾವು ಎಲ್ಲಿಗೆ ಮುಟ್ಟಬಹುದು? -ಸ್ವಲ್ಪ ಊಹಿಸಿ.

ವಚನಕಾರರು ವೇದ-ಪುರಾಣಗಳನ್ನು ನಿಂದಿ­ಸುತ್ತಾರೆಂಬ ಕಾರಣದಿಂದ ಹಿಂದೂ ಮತೀ­ಯರು ವಚನಗಳನ್ನು ಮುಟ್ಟುಗೋಲು ಹಾಕ­ಬೇಕೆಂದು ವಾದಿಸಬಹುದು; ಆದಿವಾಸಿ ಮಹಾ­ಭಾರತಗಳಲ್ಲಿ ಸಂಸ್ಕೃತ ಮಹಾಭಾರತಕ್ಕಿಂತ ಭಿನ್ನ ರೀತಿಯಲ್ಲಿ ನಾಯಕ-–ನಾಯಕಿಯರ ಲೈಂಗಿಕ ಸಂಬಂಧವನ್ನು ಚಿತ್ರಿಸಿದೆಯೆಂಬ ಕಾರಣದಿಂದ ಆ ಮಹಾಭಾರತಗಳನ್ನು ಪ್ರತಿಬಂಧಿಸಬೇಕೆಂದು ವಾದಿಸಬಹುದು; ಕಾಳಿದಾಸನ ‘ಕುಮಾರ ಸಂಭವ’ದಲ್ಲಿ ಶಿವ-ಪಾರ್ವತಿಯರ ದೇಹ ಸಂಬಂಧದ ನಿರ್ಭಿಡೆಯಾದ ಚಿತ್ರಣವಿರು­ವುದರಿಂದ ಕಾಳಿದಾಸ ಅಶ್ಲೀಲ ಬರಹಗಾರ­ನಾಗಿದ್ದು ‘ಕುಮಾರ ಸಂಭವ’ವನ್ನು ಮುಟ್ಟು­ಗೋಲು ಹಾಕಬೇಕೆಂದು ಹಟ ಹಿಡಿಯಬಹುದು; ಜಯ­ದೇವನ ‘ಗೀತಗೋವಿಂದ’ದಲ್ಲಿ ಕೃಷ್ಣ- ರಾಧೆ­ಯರ ಸಂಭೋಗದ ಚಿತ್ರಣವಿರುವುದರಿಂದ ಅದನ್ನೂ ಪೋಲಿ ಕಾವ್ಯವೆಂದು ಘೋಷಿಸಬಹುದು.

ಈ ವಿರೋಧಗಳ ಪರಂಪರೆಗೆ ಕೊನೆ ಎಲ್ಲಿ?
ಇಂಥ ವಿರೋಧಿಗಳಿಗೆ ಯಾವಾಗಲೂ ವಿವೇಕ ಕಡಿಮೆ. ಭಾರತೀಯ ಧಾರ್ಮಿಕ ಸಂಕೇತಗಳು ಲೈಂಗಿಕತಾಮುಕ್ತವೆಂದು ಕೆಲವು ಮಡಿವಂತರು ನಂಬಿಕೊಂಡು ಕೂತರೆ ಅದು ಅವರ ಹಣೆಬರಹ. ಅವರ ವಿಶ್ವಾಸ ಅಷ್ಟು ಅಚಲವಾಗಿದ್ದರೆ  ವಿದೇಶಿ ವಿದ್ವಾಂಸರೊಬ್ಬರು ಆ ಸಂಕೇತಗಳ ಲೈಂಗಿಕ ಅರ್ಥಗಳನ್ನು ತೆರೆದಿಟ್ಟಾಗ ಯಾಕಿಷ್ಟು ವಿಚಲಿತ­ರಾಗಬೇಕು?  ಅದು ನಿಜವಿದ್ದು ಆ ಸತ್ಯ ಹೊರ­ಬೀಳಬಹುದೆಂಬ ಒಳಭೀತಿ ಆ ನಂಬಿಕಸ್ಥ­ರಿಗಿ­ರಬಹುದೆ? ಕ್ರೈಸ್ತ ಧರ್ಮದ ಪವಿತ್ರ ಸಂಕೇತಗಳು ಲೈಂಗಿಕ ಮೂಲದವೆಂದು ಸಿಗ್ಮಂಡ್ ಫ್ರಾಯ್ಡ್ ವಾದಿಸಿದ್ದರಿಂದ ಚರ್ಚುಗಳಿಗೆ ಹೋಗುವ ಕ್ರೈಸ್ತ ಬಾಂಧವರ ಸಂಖ್ಯೆ ಕಡಿಮೆಯಾಯಿತೆ?

ವೆಂಡಿಯವರ ಬಗೆಗಿನ ಮುಖ್ಯ ವಿರೋಧ ಅವರ ಲೈಂಗಿಕತಾಪ್ರಧಾನ ದೃಷ್ಟಿಕೋನವನ್ನು ಕುರಿತದ್ದು. ಉದಾಹರಣೆಗೆ ಅವರು ಶಿವಲಿಂಗ­ವನ್ನು ಪುರುಷ ಲಿಂಗದ ಸಂಕೇತವೆನ್ನುತ್ತಾರೆ. ಇದು ಹಿಂದೂ ನಂಬಿಕಸ್ಥರಿಗೆ ನೋವುಂಟು ಮಾಡುತ್ತದೆ. ಆದರೆ ಈ ವಿದೇಶಿ ವಿದ್ವಾಂಸೆ ಹೀಗೆ ವಾದಿಸುವುದಕ್ಕೆ ಬಹು ಮುಂಚಿತವಾಗಿ ನಮ್ಮ­ವರೇ ಆದ ಶಂ.ಬಾ. ಜೋಶಿ ಅವರು ಶಿವಲಿಂಗ­ವನ್ನೂ ಒಳಗೊಂಡು ಹಿಂದೂ ಧರ್ಮದ ಬಹುತೇಕ ಆಕೃತಿಗಳು, ಧಾರಣೆಗಳು ಲೈಂಗಿಕ ಪಾತಳಿಯವೆಂದು ತಮ್ಮ ವಿದ್ವತ್ಪೂರ್ಣ ವಾದ ಮಂಡಿಸಿ, ನಮ್ಮ ನಾಗರಿಕತೆಯ ಪತನಕ್ಕೆ ಈ ನೇತ್ಯಾ­ತ್ಮಕ ಸಂಕೇತಗಳೇ ಕಾರಣ ಎಂದು ವಾದಿಸಿದ್ದರು. ಶಂಬಾ ಅವರ ಬರಹಗಳು ಅತ್ಯಂತ ವಿದ್ವತ್ಪೂರ್ಣವಾಗಿದ್ದು ಸುಲಭ ಓದಿಗೆ ದಕ್ಕುವುದಿಲ್ಲವಾದ್ದರಿಂದಲೋ ಏನೋ ಕಟ್ಟಾ ಹಿಂದೂಗಳ ಲಾಠಿಪ್ರಹಾರದಿಂದ ಬಚಾವಾದವು.

ಧಾರ್ಮಿಕ ಸಂಕೇತಗಳು ಸಂಕೀರ್ಣ ಧ್ವನಿ­ಗಳನ್ನು ಹೊಂದಿರುವುದರಿಂದ ಅವನ್ನು ವೆಂಡಿ­ಯವರಂತೆ ಅಥವಾ ಶಂಬಾ ಅವರಂತೆ ಒಂದು ಅರ್ಥಕ್ಕೆ ಸೀಮಿತಗೊಳಿಸುವುದು ಅದೆಷ್ಟು ಸರಿ ಎಂಬುದು ಚರ್ಚಾಸ್ಪದ. ಅದೇ ರೀತಿ ಆ ಸಂಕೇತ­ಗಳಿಗೆ ಲೈಂಗಿಕಮುಕ್ತವಾದ ಮಡಿವಂತ ಅರ್ಥ­ಗಳು ಮಾತ್ರ ಇವೆಯೆನ್ನುವ ಮತೀಯವಾದಿ ಟೀಕಾಕಾರರ ವಿಚಾರವೂ ಬುಡವಿಲ್ಲದ್ದು. ಆ ಸಂಕೇತಗಳಿಗೆ ಲೈಂಗಿಕ ಅರ್ಥಗಳೂ ಇವೆಯೆಂಬ ಸೂಚನೆಯಿಂದ ಇಂಥವರ ಎದೆ ನಡುಗಿ, ಕೋಪ ಕೆರಳಿದರೆ ಅದು ಒಂದು ಸಾಮೂಹಿಕ ಮನೋ­ರೋಗದ ಆಧುನಿಕ ವಿಕಾರವೆಂದೇ ಹೇಳಬೇಕಾ­ಗುತ್ತದೆ. ಮನುಷ್ಯ ಜೀವನದ ಅನಿವಾರ್ಯ ಮತ್ತು ಕೌತುಕದ ಆಗರವಾದ ಲೈಂಗಿಕತೆಯ ಬಗೆಗಿನ ಮಡಿವಂತರ ಭೀತಿಗೆ ಸಮಣ ಪರಂ­ಪರೆಯನ್ನು ಹೊರತುಪಡಿಸಿ ಇನ್ಯಾವ ಆಧ್ಯಾತ್ಮಿಕ ಪರಂಪರೆಯಲ್ಲಿಯೂ ಜಾಗವಿಲ್ಲ.

ಲೈಂಗಿಕತೆಯ ಈ ಭೀತಿ ಎಲ್ಲಿಂದ ಶುರು­ವಾಯಿತು? ಆಧುನಿಕ ಮಡಿವಂತಿಕೆ ವಸಾಹತು ಯುಗದ ವಿಕ್ಟೋರಿಯನ್ ಪ್ರಭಾವಗಳಿಂದ ಬಂದಿತೆನ್ನುವುದು ನಿಜ. ಆದರೆ ಶತಮಾನಗಳ ಹಿಂದೆ ಹುಟ್ಟಿದ ಸಮಣ ಪಂಥಗಳ ಲೋಕದೃಷ್ಟಿ ಆ ಪ್ರಭಾವಕ್ಕೆ ತಕ್ಕ ಭೂಮಿಕೆಯನ್ನು ತಯಾರು ಮಾಡಿತ್ತು.

ಲೈಂಗಿಕತೆಯನ್ನು ಬಂಧನದ ಜೊತೆಗೂ ಬ್ರಹ್ಮಚರ್ಯವನ್ನು ಮೋಕ್ಷದ ಜೊತೆಗೂ ಗುರುತಿಸಲಾಯಿತು. ಆದರೆ ಪುರಾಣ­ಗಳಲ್ಲಾಗಲಿ ನಿಜಜೀವನದಲ್ಲಾಗಲಿ ಮನ್ಮಥ­ಮರ್ದನ ತಾತ್ಕಾಲಿಕವಾದುದು. ಶಿವನು ತಪಕ್ಕೆ ಭಂಗ ತಂದನೆಂಬ ಸಿಟ್ಟಿನಿಂದ ಮನ್ಮಥನನ್ನು ಬೂದಿ ಮಾಡಿದ ವಿಕ್ರಮ ಅಲ್ಪಕಾಲೀನ­ವಾದುದು. ತನ್ನ ದೇಹದಿಂದ ಆ ಮೂಲಕ ಬಿಡುಗಡೆ ಹೊಂದಿದ ಮನ್ಮಥ ಅನಂಗನಾಗಿ ಶಿವನ ಅಂಗವನ್ನು ಹೊಕ್ಕು ಕಾಮಾರಿಯನ್ನು ಕಾಮೇಶ್ವರನಾಗಿಸಿ ತನ್ನ ವಿಜಯವನ್ನು ಸಾಧಿಸಿ­ಯೇಬಿಟ್ಟ. ಶಿವ ಕಾಮೇಶ್ವರಿಯಾದ ಪಾರ್ವತಿ­ಯಲ್ಲಿ ತಲ್ಲೀನನಾಗಿ ಹೋದ. ಧಾರ್ಮಿಕ ಇತಿಹಾಸದಲ್ಲೂ ಇದರ ಪುನರುಕ್ತಿಯಾಯಿತು. ತಾಂತ್ರಿಕ ಪಂಥಗಳು ಬಂಧನದ ಕೂಪವೆಂದು ಬಗೆಯಲಾದ ಲೈಂಗಿಕತೆಯನ್ನು ಮೋಕ್ಷದ ದ್ವಾರ­ವನ್ನಾಗಿಸಿದವು. ಭಕ್ತಿಪಂಥಗಳು ಅದನ್ನು ಪ್ರೇಮ­ವನ್ನಾಗಿ ಪರಮ ಪ್ರೇಮವನ್ನಾಗಿ ಪರಿವರ್ತಿ ಸಿದವು. ‘ಹಾವಿನ ಬಾಯ ಹಲ್ಲ ಕಳೆದು ಹಾವ­ನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ’-– ಅಕ್ಕನ ಮಾತುಗಳಲ್ಲಿ. ಹೀಗೆ ಪ್ರೇಮ­ರಸಾಯನವಾಗಿರುವ ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ವೆಂಡಿಯವರು ಫ್ರಾಯ್ಡನ ರಂಗುಗಳನ್ನು ಕಂಡರೆ ಹೌಹಾರಬೇಕಾದ ಕಾರಣವೇ ಇಲ್ಲ.

ಆದರೆ ಪ್ರೇಮದ ಅಣಕವಾಗಿರುವ ನೀರಸ ಸಮಣರು ಹೊಸರೂಪಗಳಲ್ಲಿ ಬಂದು ತಮ್ಮ ಅತೃಪ್ತ ಅಹಮಿಕೆಯನ್ನು ಇಡೀ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯ ಮೇಲೆ ಹೇರುತ್ತಿರುವುದು ಇಂದಿನ ವಿಪರ್ಯಾಸ. ಕೋನಾರ್ಕ್-, ಖಜು­ರಾಹೊಗಳ ಮಿಥುನ ಮೂರ್ತಿಗಳು ಅವರನ್ನು ನೋಡಿ ಅಪಹಾಸ್ಯ ಮಾಡುತ್ತಿವೆ.

ವೆಂಡಿಯವರ ಲೈಂಗಿಕಾರ್ಥಪ್ರಧಾನ ವಿವರಣೆ ನಮ್ಮನ್ನು ಕೆರಳಿಸುವುದಕ್ಕೆ ಕಾರಣವಾಗಬೇಕಿಲ್ಲ ಎಂದು ಸೂಚಿಸಲು ಇಷ್ಟೆಲ್ಲಾ ಹೇಳಬೇಕಾ­ಯಿತು. ಆದರೆ ವೆಂಡಿಯವರ ಪುಸ್ತಕ ಒಂದು ಅಶ್ಲೀಲ ಕರಪತ್ರದ ಹಾಗೂ ಇಲ್ಲ.  ಬಹುಮುಖಿ­ಯಾದ ಭಾರತೀಯ ಧಾರ್ಮಿಕ ಪರಂಪರೆಯ  ಹಲಬಗೆಯ ಸಾಧನೆಗಳನ್ನು ಅದು ಅತ್ಯಂತ ಸ್ವಾರಸ್ಯವಾಗಿ ಅತ್ಯಂತ ಧ್ವನಿಪೂರ್ವಕವಾಗಿ  ಕಥಿ­ಸುತ್ತದೆ. ಏಕಮುಖಿಯಾದ ವಿವರಣೆಗಳಿಗೆ ಸವಾಲು ಹಾಕಿ ಬದಲಿ ಇತಿಹಾಸವನ್ನು ರೂಪಿಸಿದೆ. ಅಪಾರ ವಿದ್ವತ್ತು ಪುಟಪುಟಗಳಲ್ಲಿ ಮಿಂಚುವ ಈ ಕೃತಿಯ ಹಲಬಗೆಯ ರುಚಿಗಳನ್ನು ಸವಿಯುವ ಅಭಿರುಚಿ, ಕ್ಷಮತೆಗಳು ದೇವರು -ಧರ್ಮ-ಲೋಕಗಳ ಬಗ್ಗೆ ಎಲ್ಲವನ್ನೂ ಬಲ್ಲೆವೆಂಬ ಕಣ್ಣುಪಟ್ಟಿ ಹಾಕಿಕೊಂಡವರಿಗೆ ಎಲ್ಲಿ ಸಾಧ್ಯ? ಒಂದು ಕೃತಿಯನ್ನು ಓದಿ ಮೆಚ್ಚಬೇಕಾದರೆ, ಪರೀಕ್ಷಿಸಿ ನೋಡಬೇಕಾದರೆ ಕೃತಿಕಾರರ  ತೀರ್ಮಾನಗಳನ್ನು ಒಪ್ಪಬೇಕಿಲ್ಲವೆಂಬ ಕನಿಷ್ಠ ವಿವೇಕವೂ ಅವರಿಗಿಲ್ಲ.

ಮತ್ತೆ ಮತ್ತೆ ನಮಗೆದುರಾಗುತ್ತಿರುವ ಕಲಾ­ವಿದ- ಬರಹಗಾರ -ಚಿಂತಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯ ಬಗ್ಗೆ ಯಥಾವತ್ತಾಗಿ ಮರು ಆಲೋಚಿಸುವ ಅಗತ್ಯ ಇಂದು ಎಂದಿ­ಗಿಂತಲೂ ಜರೂರಿಯಾಗಿದೆ. ವೆಂಡಿಯವರು ಭಾರತ­ದಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆಯ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಆದರೆ ಅಪರಿಮಿತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತದಲ್ಲಾಗಲಿ, ಅವರ ಅಮೆರಿಕಾದಲ್ಲಾಗಲಿ ಇದೆಯೆಂದು ಯಾರು ಹೇಳಿದರು? ಚಿಂತನಾ­ಧೀರರಿಗೆ ಅಗತ್ಯವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಈಗಿರುವ ತಥ್ಯವಲ್ಲ, ನಾವಿನ್ನೂ ಪಡೆದುಕೊಳ್ಳ­ಬೇಕಾಗಿರುವ ಇನ್ನೊಂದು ಅವಕಾಶ. ಮಾರು­ಕಟ್ಟೆಯ ಸ್ವಾತಂತ್ರ್ಯ ಯುಗದಲ್ಲಿ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅದೆಷ್ಟೋ ಅಸ್ವಾತಂತ್ರ್ಯದ ನೆಲೆಗಳು ಅಡಗಿವೆ. ಕ್ಯಾನ್ಸರ್‌ ಜನಕವಾದ ಬಿಳಿಸಕ್ಕರೆಯ ಅಪಾರ ಅಪಾಯಗಳನ್ನು ವಸ್ತುನಿಷ್ಠವಾಗಿ ಸಾಬೀತುಪಡಿಸಿದ ವೈದ್ಯಕೀಯ ಸಂಶೋಧನೆಯ ವಿವರಗಳನ್ನು ಕಿಮಕ್ಕನ್ನದೆ ಹತ್ತಿಕ್ಕಿ ಈ ಸಿಹಿವಿಷವನ್ನು ಜಗತ್ತಿನಾದ್ಯಂತ ತಿನ್ನಿಸಿ ತಮ್ಮ ಬಕಾಸುರೋದರವನ್ನು ತುಂಬಿಕೊಳ್ಳುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳ ಆಳ್ವಿಕೆಗೆ ಒಳಗಾ­ಗಿರುವ  ಅಮೆರಿಕದಲ್ಲಿ ವೈದ್ಯಕೀಯ ವಿಜ್ಞಾನಿ­ಗಳಿಗೆ ಸ್ವಾತಂತ್ರ್ಯ ಎಲ್ಲಿದೆ?

ಅಥವಾ ಮುಕ್ತಮಾರುಕಟ್ಟೆಯ ಕಡೆಗೆ ದಡದಡಾ ದೌಡಾಯಿಸುತ್ತಿರುವ ಮನಮೋಹಕ ಭಾರತದಲ್ಲಿ ತಾನೆ ಎಲ್ಲಿದೆ? ಉದಾಹರಣೆಗೆ ಮುಂಬೈನಲ್ಲಿ ಜರುಗಿದ ಒಂದು ವಿಶ್ವವಿಖ್ಯಾತ ಘಟನೆಯನ್ನು ನೋಡಿ.

ನನ್ನ ಸನ್ಮಿತ್ರರಾದ ಸನಲ್ ಎಡಮುರುಕು ಅವರು ಅಂತರರಾಷ್ಟ್ರೀಯ ಖ್ಯಾತಿಯ ವಿಚಾರ­ವಾದಿ ಆಂದೋಲನಕಾರರು. ಎಲ್ಲೆಡೆ ಹೋಗಿ ಮೂಢನಂಬಿಕೆಗಳ ಮೂಲೋತ್ಪಾಟನ ­ನಿರತ­ರಾದ ಸನಲ್ ಅವರಿಗೆ ಮುಂಬೈಯಲ್ಲಿ ನಡೆಯುತ್ತಿರುವ ಒಂದು ‘ಪವಾಡ’ ಗಮನಕ್ಕೆ ಬಂತು.

ಚರ್ಚೊಂದರಲ್ಲಿ ಪವಿತ್ರ ಶಿಲುಬೆಯಿಂದ ಪವಿತ್ರ ತೀರ್ಥ ಜಿನುಗತೊಡಗಿ ಅದನ್ನು ಕುಡಿದ­ವರಿಗೆ ಸಕಲರೋಗ ನಿವಾರಣೆಯೆಂಬ ಪುಕಾರು ಹರಡಿಸಲಾಯಿತು. ಆದರೆ ಸನಲ್‌ ಅವರು ಮುಂಬೈಗೆ ಹೋಗಿ ವಿಚಾರಿಸಿ ನೋಡಲಾಗಿ ಆ ಪವಿತ್ರಜಲವನ್ನು ಕುಡಿದವರು ಹೊಟ್ಟೆ ಕಾಯಿಲೆ­ಗಳಿಗೆ ತುತ್ತಾಗಿದ್ದನ್ನು ಗಮನಿಸಿ, ಈ ಪವಾಡದ ಸತಾಸತ್ಯಗಳನ್ನು ಅನ್ವೇಷಿಸಲು ಆ ಪವಿತ್ರಕ್ಷೇತ್ರಕ್ಕೆ ಹೋಗಿ ಕೂಲಂಕಷವಾಗಿ  ಪರೀಕ್ಷಿಸಿದಾಗ ಆ ಪವಿತ್ರಜಲ ಒಡೆದುಹೋಗಿದ್ದ ಚರಂಡಿಯ ನೀರೆಂದು ಅದನ್ನು ಕುಡಿದವರಿಗೆ ರೋಗ ತಪ್ಪದೆಂದು ಸಾಬೀತು ಮಾಡಿದರು.

ಆದರೆ ಸದರಿ ಧಾರ್ಮಿಕ ನಾಯಕರು ಕೂಡಲೇ  ಸನಲ್ ಅವರ ಮೇಲೆ ಬ್ರಿಟಿಷರ ಕಾಲದ ಕಾನೂನಿನ ಅನ್ವಯ ಒಂದು ಕ್ರಿಮಿನಲ್ ದೂರನ್ನು ಮುಂಬೈ ಪೋಲಿಸರಿಗೆ ನೀಡಿದರು. ಆ ಕಾನೂನಿನ ಪ್ರಕಾರ ಇತರ ಧರ್ಮದವರ ನಂಬಿಕೆಗೆ ಧಕ್ಕೆಯುಂಟು ಮಾಡುವುದು ಘೋರ ಅಪರಾಧ. ಈ ವಿಷಯ ಕೋರ್ಟಿಗೆ ಬಂದರೆ ಸನಲ್ ಅವರಿಗೆ ಶಿಕ್ಷೆಯಾದೀತೆಂಬ ಕಾರಣದಿಂದ ಆ ಮಟ್ಟಕ್ಕೆ ದೂರು ಹೋಗದಂತೆ ನೋಡಿ­ಕೊಂಡರು. ಈ ಕಾನೂನಿನಿಂದ ಬಚಾವಾಗಲು ತಮ್ಮ ವಿಚಾರ­ವಾದಿ ಹೋರಾಟವನ್ನು ಮುಂದು­ವರಿಸಲು ಈಗ ಸನಲ್ ಫಿನ್ಲೆಂಡ್‌ನಲ್ಲಿ  ಆಶ್ರಯ ಪಡೆದಿದ್ದಾರೆ. ಈ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಚರ್ಚೆಗಳು ನಡೆದಿದ್ದರೂ ಅವರು ಭಾರತಕ್ಕೆ ಕಾಲಿಕ್ಕದ ಹಾಗೆ ಈ ದೂರು ಅಡ್ಡಬಂದಿದೆ.

ಇಂದಿನ ಪ್ರಜಾಪ್ರಭುತ್ವದ ಆದರ್ಶಕ್ಕೆ ಸಲ್ಲದ ಲಾಗಾಯ್ತಿನ ಕಾನೂನುಗಳು, ಕಾನೂನು ಬಾಹಿರ ಲಾಭಕೋರ ಶಕ್ತಿಗಳು, ಸಾಂಪ್ರ­ದಾಯಿಕ ಮತ್ತು ಅಸಾಂಪ್ರದಾಯಿಕ ಪ್ರವೃತ್ತಿ­ಗಳು ಗೋಚರವಾಗಿ, ಅಗೋಚರವಾಗಿ ವ್ಯಕ್ತಿ­ಗಳ, ಇಡೀ ಸಮುದಾಯಗಳ, ಜೀವಜಾತಗಳ ಬದುಕುವ ಸ್ವಾತಂತ್ರ್ಯವನ್ನೇ ಕೊಚ್ಚಿಹಾಕುತ್ತಿವೆ. ಇಂಥ ಸಂದರ್ಭದಲ್ಲಿ ಹಲವರಿಗೆ  ಬದುಕುವ ಅಥವಾ ಕನಸುವ ಸ್ವಾತಂತ್ರ್ಯವಿಲ್ಲದಾಗ ಬುದ್ಧಿ­ಜೀವಿಗಳಿಗೆ ವಿಶೇಷವಾದ ಸ್ವಾತಂತ್ರ್ಯ ಎಲ್ಲಿ ಸಿಗಬಲ್ಲುದು? ಆ ಸಂಪೂರ್ಣ ಸ್ವಾತಂತ್ರ್ಯಕ್ಕೆ ಬದುಕು -ಬರಹ-ಚಿಂತನೆಗಳು ದುಡಿಯ­ಬೇಕಾ­ಗಿದೆ. ವೆಂಡಿಯವರ ಅಥವಾ ಸನಲ್ ಅವರ ಮೇಲೆ ಹೇರಲಾಗು­ತ್ತಿರುವ ನಿರ್ಬಂಧಗಳು ಮಾರುಕಟ್ಟೆ ಯುಗದ ಢೋಂಗಿ ಸ್ವಾತಂತ್ರ್ಯದ ಅಸಂಖ್ಯ ಅಂತರ್‌­ವಿರೋ­ಧ­ಗಳ ಭಾಗಗಳೆಂದು ನೋಡುವ ಅಗತ್ಯವಿದೆ.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT