ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಅನುಭವಗಳು

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಕೆಲವೊಮ್ಮೆ ತುಂಬ ಸಣ್ಣ ಘಟನೆಗಳು ನಾವು ಜೀವನವನ್ನು ನೋಡುವ ರೀತಿಯನ್ನೇ ಬದಲಿಸಿಬಿಡುತ್ತವೆ.  ಅಂತಹದೊಂದು ಸಂಗತಿ ನನಗೆ ಇತ್ತೀಚಿಗೆ ದೊರೆಯಿತು.  ಅಂದು ನಾನು ಗುರುವಾಯೂರಿನಲ್ಲಿದ್ದೆ. ಅಲ್ಲಿಯ ಶ್ರಿ ಕೃಷ್ಣನ ದೇವಸ್ಥಾನ ಜಗತ್‌ಪ್ರಸಿದ್ಧವಾದದ್ದು.  ಬಹುಶಃ ಹನ್ನೆರಡು ತಿಂಗಳೂ ಜನರ ದಟ್ಟಣೆ ಇದ್ದೇ ಇರುತ್ತದೆ. ರಾತ್ರಿ ಹನ್ನೆರಡು ಗಂಟೆಯವರೆಗೂ ದೇವಸ್ಥಾನದ ಆವರಣದಲ್ಲಿ ಸಂತೆ ನೆರೆದಂತೆ ತೋರುತ್ತದೆ.

ಅಷ್ಟು ಜನ!  ಮತ್ತೆ ಬೆಳಿಗ್ಗೆ ಎರಡೂವರೆಗೇ ಭಕ್ತರು ಬರತೊಡಗುತ್ತಾರೆ.  ಅಂದು ನನ್ನ ಸ್ನೇಹಿತರರೊಂದಿಗೆ ದೇವರ ದರ್ಶನ ಪಡೆದು ಹೊರಬಂದಾಗ ಸುಮಾರು ರಾತ್ರಿ ಹನ್ನೊಂದೂವರೆಯಾಗಿದ್ದಿರಬೇಕು. ಹೊರಗಡೆ ಬಂದು ಸಾಲು ಸಾಲು ಅಂಗಡಿಗಳ ಕಟ್ಟೆಯ ಮೇಲೆ ಕುಳಿತೆವು.  ನನ್ನ ಸ್ನೇಹಿತರು ಏನಾದರೂ ಕೊಳ್ಳಬೇಕೆಂದು ಅಂಗಡಿಗಳಿಗೆ ನುಗ್ಗಿದರು.  ನಾನೊಬ್ಬನೇ ಅವರೆಲ್ಲರ ವಸ್ತುಗಳನ್ನು ಕಾಯುತ್ತ ಕುಳಿತಿದ್ದೆ. ನಾನು ಕುಳಿತಲ್ಲಿಂದ ಸ್ವಲ್ಪವೇ ದೂರದಲ್ಲಿ ಇನ್ನೊಬ್ಬ ವ್ಯಕ್ತಿ ಕುಳಿತಿದ್ದರು.  ಅವರ ವೇಷ ನೋಡಿದರೆ ಸನ್ಯಾಸಿಯಂತೆ ಕಾಣುತ್ತಿತ್ತು. ಆತ ಯಾರೊಂದಿಗೂ ಮಾತನಾಡದೇ ಒಬ್ಬರೇ ಏನನ್ನೋ ನೋಡುತ್ತ ಕುಳಿತಿದ್ದರು.  ಅವರ ಮುಖದಲ್ಲಿ ಅದಾವುದೋ ನೋವಿನ ಛಾಯೆ.  ಆದರೆ ಕಣ್ಣುಗಳಲ್ಲಿ ಮಿನುಗುವ ಹೊಳಪು.  ಯಾಕೋ ಅವರನ್ನು ಮಾತನಾಡಿಸಬೇಕೆನಿಸಿತು.

  `ಮಹಾರಾಜ್ ತಾವು ಇಲ್ಲಿಯವರೇ'  ಎಂದು ಹಿಂದಿಯಲ್ಲಿ ಕೇಳಿದೆ. ಆತ ನಾನು ಮಾತನಾಡಿದ್ದೇ ಅಚ್ಚರಿ ಎಂಬಂತೆ ನೋಡಿ,  `ಇಲ್ಲ, ನಾನು ಕರ್ನಾಟಕದವನು,  ಆದರೆ ಬದರಿಕಾಶ್ರಮದಲ್ಲೇ ನೆಲೆಸಿದ್ದೇನೆ'  ಎಂದರು. ನನಗೆ ಈ ಮಾತು ಎರಡು ಬಗೆಯ ಸಂತೋಷವನ್ನುಂಟು ಮಾಡಿತು.  ಕರ್ನಾಟಕದವನು ಎಂದಾಗ ನಮ್ಮವರೇ ಎಂದು ಹೃದಯ ಬೆಚ್ಚಗಾಯಿತು.  ಬದರಿಕಾಶ್ರಮದಲ್ಲೇ ನೆಲೆಸಿದ್ದೇನೆ ಎಂದಾಗ ವಿಶೇಷವೆನಿಸಿತು, ಯಾಕೆಂದರೆ ನನಗೆ ಬದರಿಕ್ಷೇತ್ರದ ಸೌಂದರ್ಯದ ಬಗ್ಗೆ ವಿಶೇಷ ಒಲವು.  ನಿಧಾನವಾಗಿ ಅವರ ಹತ್ತಿರ ಸರಿದು ಕನ್ನಡದಲ್ಲೇ ಮಾತನಾಡತೊಡಗಿದೆ.  ಆತ ಕನ್ನಡದವರೇ ಆದರೂ ಬಹುವರ್ಷ  ಬಳಸದೇ ಇದ್ದುದರಿಂದ ಮಾತು ತಡೆತಡೆದು ಬರುತ್ತಿತ್ತು. ಅವರ ಕಥೆ ಕುತೂಹಲಕಾರಿಯಾಗಿತ್ತು. ಆತ ತನ್ನ ಹದಿನೈದನೇ ವರ್ಷಕ್ಕೇ ಮನೆಬಿಟ್ಟು ಹಿಮಾಲಯಕ್ಕೆ ಹೋಗಿ ಅಲ್ಲಿ, ಇಲ್ಲಿ ಗೊತ್ತುಗುರಿಯಿಲ್ಲದೆ  ತಿರುಗಾಡಿದರಂತೆ.

  ಯಾರೋ ಅವರಿಗೆ ಬದರಿಕಾಶ್ರಮಕ್ಕೆ ಹೋಗಲು ಸೂಚಿಸಿದರು.  ಅಲ್ಲಿ ಹೋಗಿ ಸುಮಾರು ಆರು ತಿಂಗಳಿನ ನಂತರ ಇವರಿಗೊಬ್ಬ ಮನಸ್ಸಿಗೆ ಹೊಂದುವ ಗುರು ಸಿಕ್ಕರಂತೆ.  ಅವರು ಮಾತನಾಡುವುದೇ ಅಪರೂಪ.  ಇವರಿಗೆ ಆತ ಏನು ಮಾರ್ಗದರ್ಶನ ಮಾಡಿದರೋ ತಿಳಿಯದು.  ಆದರೆ ಈತ ಅವರ ಪರಮಶಿಷ್ಯರಾಗಿಬಿಟ್ಟರು.

ಬದರಿಯಲ್ಲಿ ಚಳಿಗಾಲ ಕಾಲಿಡುತ್ತಿದ್ದಂತೆ ಎಲ್ಲರೂ ಅಲ್ಲಿಂದ ಕೆಳಗಿಳಿದು ಬೆಚ್ಚಗಿನ ಪ್ರದೇಶಗಳನ್ನು ಸೇರಿಕೊಳ್ಳುತ್ತಾರೆ, ದೇವಸ್ಥಾನ  ಮುಚ್ಚಿಬಿಡುತ್ತಾರೆ.  ಮುಂದೆ ಆರು ತಿಂಗಳು ಅಲ್ಲಿ ಯಾರೂ ವಾಸಿಸುವುದು ಸಾಧ್ಯವಿಲ್ಲ ಯಾಕೆಂದರೆ ಎಲ್ಲವೂ ಹಿಮದಿಂದ ಮುಚ್ಚಿ ಹೋಗುತ್ತದೆ.  ಆದರೆ, ಈ ವ್ಯಕ್ತಿಗೆ ಅದೇನು ಪ್ರೇರಣೆ ದೊರಕಿತೋ, ಆತ ಚಳಿಗಾಲದಲ್ಲೂ ಅಲ್ಲಿಯೇ ಇರಲು ತೀರ್ಮಾನ ಮಾಡಿದರು.  ಮುಂದೆ ಹದಿನೈದು ವರ್ಷಗಳ ದೀರ್ಘಕಾಲ ಬದರಿಕಾಶ್ರಮದಿಂದ ಕೆಳಗಿಳಿದು ಬರಲೇ ಇಲ್ಲ. ತಾನಿದ್ದ ವಾಸಸ್ಥಳದಲ್ಲಿ  ಒಂದೆರಡು ಮೂಟೆ ಆಲೂಗಡ್ಡೆ, ಒಂದಿಷ್ಟು ಅಕ್ಕಿ, ಬೇಳೆ, ಕಲ್ಲಿದ್ದಲು ಹೊಂದಿಸಿಕೊಂಡು ಅಲ್ಲಿಯೇ ಒಬ್ಬರೇ ಬದುಕಿದರಂತೆ.  ಅವರು ಹೇಳಿದ ಮಾತು ಅದ್ಭುತ ಎನ್ನಿಸುತ್ತಿತ್ತು.

  ಯಾರೊಬ್ಬರೂ ಇಲ್ಲದ ಸ್ಥಳದಲ್ಲಿ, ಮೈಯಲ್ಲಿಯ ರಕ್ತ ಕೂಡ ಹೆಪ್ಪುಗಟ್ಟುವ ಚಳಿಯಲ್ಲಿ ಇವರು ಆಗಾಗ ಹೊರಬಂದು ಅಲ್ಲೆಲ್ಲ ಸುತ್ತುತ್ತಿದ್ದರಂತೆ.  ಹೀಗೆ ಕಳೆದ ವರ್ಷ ಚಳಿಗಾಲ ಮುಗಿದು ಮತ್ತೆ ದೇವಸ್ಥಾನ ತೆರೆದಾಗ ಸಾವಿರಾರು ಜನ ಭಕ್ತರು ಬರತೊಡಗಿದಾಗ ಯಾರೋ ಒಬ್ಬ ಸಂತರು ಇವರನ್ನು ಕೇಳಿದರಂತೆ, `ನೀವು ಹೀಗೆ ಸದಾ ಇಲ್ಲಿಯೇ ಏಕಾಂತದಲ್ಲಿ ಇರುತ್ತೀರಲ್ಲ, ನಿಮಗೆ ಏನಾದರೂ ವಿಶೇಷ ದರ್ಶನವಾಗಿದೆಯೇ'  ಇವರು, `ಹೌದು, ನಾನು ಒಂದೆರಡು ಬಾರಿ ಭಗವಂತನ ದರ್ಶನ ಪಡೆದಿದ್ದೇನೆ.  ಅದಕ್ಕೆಂದೇ ನಾನು ಚಳಿಯಲ್ಲಿಯೂ ಇಲ್ಲಿಯೇ ಇರುತ್ತೇನೆ. ಆ ದರ್ಶನ ಒಂದು ಅವರ್ಣನೀಯ ಅನುಭವ'  ಎಂದರು.

ಭಕ್ತರು ಹೋದ ಮೇಲೆ ಸಾಮಾನ್ಯವಾಗಿ ಮಾತನ್ನೇ ಆಡದ ಅವರ ಗುರುಗಳು ಈತನನ್ನು ಕರೆದು ಹತ್ತಿರ ಕೂಡ್ರಿಸಿಕೊಂಡು ಕೆನ್ನೆಯ ಮೇಲೆ ರಪ್ಪನೆ ಹೊಡೆದರಂತೆ.  ಇವರು ಆಶ್ಚರ್ಯದಿಂದ, ಗಾಬರಿಯಿಂದ ಅವರ ಮುಖ ನೋಡಿದಾಗ, `ಏ ಹುಚ್ಚನ ಹಾಗೆ ಏನೇನೋ ಬಡಬಡಿಸಬೇಡ.  ನೀನು ಕಂಡದ್ದು ನಿನ್ನ ವೈಯಕ್ತಿಕ ಅನುಭವ.  ನಿಜವಾಗಿ ಕಂಡೆಯೋ, ಭ್ರಮೆಯೋ ಯಾರಿಗೆ ತಿಳಿದದ್ದು? ನೀನು ನಿನಗಾದದ್ದನ್ನು ಮತ್ತೊಬ್ಬರಿಗೆ ತೋರಿಸಬಲ್ಲೆಯಾದರೆ ಮಾತ್ರ ಅದನ್ನು ಪ್ರಪಂಚಕ್ಕೆ ಹೇಳು.

ಸುಮ್ಮನೇ ನಿನ್ನ ಸ್ವಂತ ಅನುಭವವನ್ನು ಮತ್ತೊಬ್ಬರ ಮೇಲೆ ಹೇರಿ ಅವರಲ್ಲಿಯೂ ಭ್ರಮೆ ಹುಟ್ಟಿಸಬೇಡ. ಭಗವಂತನ ದರ್ಶನ ಅದು ನಿನ್ನ ಅತ್ಯಂತ ವೈಯಕ್ತಿಕ ಅನುಭವ ಅಥವಾ ಉನ್ಮಾದ.  ಅದನ್ನು ಅನುಭವಿಸುವುದು ಮಾತ್ರ ಸರಿ.  ಆದರೆ, ಅದನ್ನು ಮತ್ತೊಬ್ಬರಿಗೆ ವರ್ಣಿಸುವುದು ತೋರಿಕೆಯ ಬಡಬಡಿಕೆ. ಬಾಯಿ ಮುಚ್ಚಿಕೊಂಡು ದೇಶ ಸುತ್ತಿ ಬಾ' ಎಂದರು.

  ಅಂದಿನಿಂದ ಮಾತನಾಡುವ ಹುಚ್ಚು ಬಿಟ್ಟು ಅನುಭವಿಸಲು ಊರೂರು ಸುತ್ತುತ್ತಿದ್ದೇನೆ  ಎಂದರು ಸನ್ಯಾಸಿಗಳು. ನಾವೂ ಹೀಗೆಯೇ ನಮ್ಮ ವೈಯಕ್ತಿಕ ಅನುಭವಗಳನ್ನು ಸಾರ್ವತ್ರಿಕ ಮಾಡಲು ಹವಣಿಸುತ್ತೇವೆ. ಸುಮ್ಮಸುಮ್ಮನೇ ಭ್ರಮೆಗಳನ್ನು ಹುಟ್ಟಿಸುತ್ತೇವೆ, ಇಲ್ಲದವರನ್ನು ದೊಡ್ಡವರನ್ನಾಗಿ ಮಾಡುತ್ತೇವೆ. ದೊಡ್ಡವರನ್ನು ನೆಲಕ್ಕೆ ಇಕ್ಕುತ್ತೇವೆ. ಸಾರ್ವತ್ರಿಕವಲ್ಲವಾದದ್ದನ್ನು ಆದಷ್ಟು ವರ್ಣರಂಜಿತವಾಗಿ ಮಾಡದೇ ಮೌನವಾಗಿರುವುದು ಸಮಾಜದ ಆರೋಗ್ಯಕ್ಕೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT