ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆ ವಿರೋಧಿ ಸಂಪ್ರದಾಯಶರಣ

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ದೇಶಿ ರಾಜಕಾರಣ ಮತ್ತು ಭ್ರಷ್ಟ ರಾಜಕಾರಣಿಗಳನ್ನು ಗುರಿಯಾಗಿಇರಿಸಿಕೊಂಡು ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಮುಖ್ಯ ಇರಾದೆಯಿಂದ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿನ ಭ್ರಷ್ಟಾಚಾರ ವಿರೋಧಿ ಚಳವಳಿಯು ಎಂಟು ವರ್ಷಗಳ ಹಿಂದೆ ಯುದ್ಧೋನ್ಮಾದ ರೀತಿಯಲ್ಲಿ ಆರಂಭಗೊಂಡಿತ್ತು. ನಮ್ಮ ರಾಜಕೀಯ ವ್ಯವಸ್ಥೆ ಮತ್ತು  ರಾಜಕೀಯ ಮುಖಂಡರ ಬಗ್ಗೆ ನಮ್ಮ ಸಮಾಜ, ಅರ್ಥ ವ್ಯವಸ್ಥೆಯನ್ನಷ್ಟೇ ದೂಷಿಸುವುದು ತಪ್ಪು.

ರಾಜಕೀಯ ಮುಖಂಡ (ನೇತಾ) ಎನ್ನುವ ಶಬ್ದವು ತಿರಸ್ಕಾರಕ್ಕೆ ಇನ್ನೊಂದು ಹೆಸರಾಗಿದೆ. ಬರಹಗಾರ ಚೇತನ್‌ ಭಗತ್‌ ಅವರು, ಅಣ್ಣಾ ಚಳವಳಿಗೆ ಒಂದು ವಿಶಿಷ್ಟ ಪದಪುಂಜವನ್ನು ಆಯ್ಕೆ ಮಾಡಿದ್ದಾರೆ.  ‘ಮೇರಾ ನೇತಾ ಚೋರ್‌ ಹೈ’ (ನನ್ನ ರಾಜಕೀಯ ಮುಖಂಡ ಒಬ್ಬ ಕಳ್ಳನಾಗಿದ್ದಾನೆ).  ಭ್ರಷ್ಟಾಚಾರ ವಿರೋಧಿ ಅಣ್ಣಾ ಚಳವಳಿ ಅಲ್ಪಾವಧಿಯಲ್ಲಿಯೇ ತನ್ನ ತೀವ್ರತೆ ಕಳೆದುಕೊಂಡಿತ್ತು.

ಗಬ್ಬೆದ್ದು ನಾರುತ್ತಿದ್ದ ರಾಜಕೀಯ ವರ್ಗ ಮತ್ತು ವ್ಯವಸ್ಥೆ ಬಗ್ಗೆ ನಗರದ ಪ್ರಜ್ಞಾವಂತ ವೃತ್ತಿನಿರತರೂ ಬಂಡಾಯ ಎದ್ದಿದ್ದರು. ಚಳವಳಿಯು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರ ಬೆಂಬಲ ಗಳಿಸುವಲ್ಲಿಯೂ ಸಫಲವಾಗಿತ್ತು. ಆರ್‌ಎಸ್‌ಎಸ್‌ ಕಾರ್ಯಕರ್ತರು, ಎಡಪಂಥೀಯ ಉದಾರವಾದಿಗಳೂ ಈ ಚಳವಳಿಯ ಪರ ಸಹಾನುಭೂತಿ ಹೊಂದಿದ್ದರು.

ಬಾಬಾ ರಾಮದೇವ್‌ ಅವರಿಂದ ಹಿಡಿದು ಜನರಲ್‌ ವಿ.ಕೆ.ಸಿಂಗ್‌, ಕಿರಣ್ ಬೇಡಿ, ಪ್ರಶಾಂತ್‌ ಭೂಷಣ್‌, ಶಬಾನಾ ಅಜ್ಮಿ, ಓಂಪುರಿ, ಅಮೀರ್‌ ಖಾನ್‌ ಅವರವರೆಗೆ ಬಹುತೇಕರು ಬೆಂಬಲ ನೀಡಿದ್ದರು. ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್‌ ಅವರ  ಕಟ್ಟಾ ಬೆಂಬಲಿಗರು ಈ ವ್ಯವಸ್ಥೆ ವಿರೋಧಿ ಕೋಪೋದ್ರಿಕ್ತ ಬಣವನ್ನು ಸಮರ್ಥವಾಗಿ ಮುನ್ನಡೆಸಿ ಹೊಸ ಆಂದೋಲನವನ್ನೇ ಹುಟ್ಟು ಹಾಕಿದ್ದರು.

ಅಣ್ಣಾ ಹಜಾರೆ ಅವರು ಮಹಾತ್ಮ ಗಾಂಧಿ ಅವರಂತೆ ತಮ್ಮನ್ನು ಬಿಂಬಿಸಿಕೊಂಡಿದ್ದರು. ಹಲ್ಲುಗಿಂಜುವುದನ್ನೇ ಕಾಯಕ ಮಾಡಿಕೊಂಡಿದ್ದ ಕಾರ್ಯಕರ್ತರು, ಚಿಕ್ಕಪುಟ್ಟ ಸಮಾಜವಾದಿಗಳು, ಎಲ್ಲಕ್ಕಿಂತ ಹೆಚ್ಚಾಗಿ ಟೆಲಿವಿಜನ್‌ ಕಾರ್ಯಕ್ರಮ ನಿರೂಪಕರು ಅಣ್ಣಾ ಅವರನ್ನು ಹಾಡಿ ಹೊಗಳಿದ್ದರು. 

ಅಣ್ಣಾ ಕೂಡ ಗಾಂಧೀಜಿಯ ಪ್ರಬಲ ಅಸ್ತ್ರವಾಗಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನೇ ಬಾಡಿಗೆಗೆ ತೆಗೆದುಕೊಂಡಿದ್ದರು. ಆದರೆ, ಅಣ್ಣಾ ಪೂರ್ಣ ಪ್ರಮಾಣದಲ್ಲಿ ಗಾಂಧಿವಾದಿಯಾಗಿ ರೂಪುಗೊಳ್ಳಲಿಲ್ಲ... ಅನೇಕ ಬಗೆಯಲ್ಲಿಯೂ ಅವರು ಗಾಂಧಿವಾದಿಯಾಗಿರಲಿಲ್ಲ. ಕೆಲವೊಮ್ಮೆ ಅವರು ಭಗತ್‌ ಸಿಂಗ್‌, ಸುಭಾಷ್‌ ಚಂದ್ರ ಬೋಸ್‌ ಅವರಂತೆ ಭಾವನೆ ಮೂಡಿಸಿದರೆ, ಇನ್ನು ಕೆಲವೊಮ್ಮೆ ಸಮಕಾಲೀನ ಬಾಲಿವುಡ್‌ ನಟರಂತೆ ಕಂಡು ಬಂದಿದ್ದರು.

ರಾಮಲೀಲಾ ಮೈದಾನದಲ್ಲಿ ತಮ್ಮ ಎರಡೂ ತೋಳುಗಳನ್ನು ಚಾಚಿ, ಹಿಂದಿ ಚಲನಚಿತ್ರ ‘ಕರ್ಮಾ’ದಲ್ಲಿ  ದಿಲೀಪ್‌ ಕುಮಾರ್‌ ಅವರು ‘ದಿಲ್‌ ದಿಯಾ ಹೈ ಜಾನ್‌ ಭೀ ದೇಂಗೆ, ಏ ವತನ್‌ ತೇರೆ ಲಿಯೇ...’ ಹಾಡಿಗೆ ಹೆಜ್ಜೆಹಾಕಿದಂತೆ ಭಾಸವಾಗಿತ್ತು.  ಕಿರಣ್‌ ಬೇಡಿ ಅವರನ್ನು ಪೊಲೀಸ್‌ ವ್ಯಾನ್‌ನಲ್ಲಿ ಕರೆದುಕೊಂಡು ಹೋಗುವಾಗ ಅವರು ಟಿ.ವಿ ಕ್ಯಾಮೆರಾ ಎದುರು ಘೋಷಣೆ ಕೂಗುವಾಗ ‘ಅಬ್‌ ತುಮ್ಹಾರೆ ಹವಾಲೆ ವತನ್‌ ಸಾಥಿಯೊ’ ಹಾಡಿದಂತೆ ಭಾಸವಾಗುತ್ತಿತ್ತು. ಇದನ್ನೆಲ್ಲ ನೋಡಿದಾಗ, ಒಟ್ಟಾರೆ ಚಳವಳಿಯ ಸ್ವರೂಪವು ಅಮಿತಾಭ್‌, ಅಕ್ಷಯ್‌ ಮತ್ತು ಬಾಬಿ ಡಿಯೊಲ್‌ ತಾರಾಗಣದ ಅಸಂಬದ್ಧ ಬಾಲಿವುಡ್‌ ಚಿತ್ರದಂತೆ ಭಾಸವಾಗುತ್ತಿತ್ತು.

ಆದರೆ, ಚಳವಳಿಯು ಒಟ್ಟಾರೆ ವ್ಯವಸ್ಥೆಯನ್ನು ಬದಲಿಸುವ ಸ್ಪಷ್ಟ ಸಂದೇಶ ರವಾನಿಸಿತ್ತು. ಚಳವಳಿಯು ಬರೀ ಹೊಸ ಕಾಯ್ದೆ ಜಾರಿಗೆ ಒತ್ತಾಯಿಸಲು ಸೀಮಿತವಾಗಿರಲಿಲ್ಲ. ರಾಜಕೀಯ ಶಕ್ತಿಯು ಎಲ್ಲರಿಗೂ ದೊರೆಯಬೇಕು ಎನ್ನುವ ಹೊಸ ಕ್ರಾಂತಿಯ ಸಂದೇಶ ನೀಡುವಲ್ಲಿ ಸಫಲವಾಗಿತ್ತು. ಉತ್ತುಂಗದ ದಿನಗಳಿಂದ ಚಳವಳಿಯು ನಂತರದ ದಿನಗಳಲ್ಲಿ ಯಾವ ಮಟ್ಟಕ್ಕೆ ಬಂದು ನಿಂತಿತು ಎನ್ನುವುದನ್ನೂ ನಾವಿಲ್ಲಿ ಮರೆಯುವಂತಿಲ್ಲ.

ಅಣ್ಣಾ ಮೊದಲು ಎಲ್ಲಿದ್ದರೋ ಈಗ ಅಲ್ಲಿಗೇ ಮರಳಿದ್ದಾರೆ. ದೂರದ ರಾಳೆಗಾಂವ್ ಸಿದ್ಧಿಯಲ್ಲಿದ್ದುಕೊಂಡು ಅದೃಶ್ಶ ರಾಕ್ಷಸರ ವಿರುದ್ಧ ಕತ್ತಿ ಝಳಪಿಸುತ್ತ ಕಾಲ ಕಳೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಟ್ಟ ನಿರ್ಧಾರಗಳನ್ನು ಶ್ಲಾಘಿಸುತ್ತ ಇಲ್ಲವೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ತಪ್ಪುಗಳನ್ನೆಲ್ಲ ಟೀಕಿಸುತ್ತ ಆಗೊಮ್ಮೆ ಈಗೊಮ್ಮೆ ಸುದ್ದಿಯಲ್ಲಿ ಇರುತ್ತಾರೆ.

ಹೋರಾಟದ ಆರಂಭದ ದಿನಗಳಲ್ಲಿ ಅವರ ಜತೆಗಿದ್ದ ಒಬ್ಬರೂ ಈಗ ಅವರ ಜತೆಯಲ್ಲಿ ಇಲ್ಲ. ಪ್ರಶಾಂತ್ ಭೂಷಣ್ ಹೊರತುಪಡಿಸಿ, ಕಿರಣ್ ಬೇಡಿ, ಮನಿಷ್ ಸಿಸೋಡಿಯ, ಯೋಗೇಂದ್ರ ಯಾದವ್‌, ಗೋಪಾಲ್ ರೈ, ವಕ್ತಾರೆ ಮೀರಾ ಸನ್ಯಾಲ್, ಮೇಧಾ ಪಾಟ್ಕರ್ ಇವರೆಲ್ಲರೂ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದ್ದಾರೆ. ಅಣ್ಣಾ ಚಳವಳಿಯ ಹಿಂದಿನ ಪ್ರೇರಣೆ, ಅನುಸರಿಸಿದ ವಿಧಾನ, ತುಳಿದ ಮಾರ್ಗದ ಕುರಿತು ನಾನೂ ಸೇರಿದಂತೆ ಅನೇಕರು ಟೀಕೆ ಮಾಡಿದ್ದೆವು. ನಾವೆಲ್ಲ ವ್ಯಕ್ತಪಡಿಸಿದ್ದ ಬೌದ್ಧಿಕ ಆಕ್ಷೇಪದಲ್ಲಿ ನಮಗೆ ಗೆಲುವು ಸಿಕ್ಕಿದೆ ಎಂದು ನಾವು ಈಗ ಹೇಳಿಕೊಳ್ಳಬಹುದು.

ವ್ಯವಸ್ಥೆಯನ್ನು ಬದಲಿಸಲು ಹೊರಟರೆ ಮೊದಲು ನಾವು ಅದನ್ನು ಒಪ್ಪಿಕೊಳ್ಳಬೇಕು. ಬದಲಾವಣೆ ತರಲು ಅಧಿಕಾರ ಇರಲೇಬೇಕು. ಚುನಾವಣೆ ಆಧರಿಸಿದ ರಾಜಕೀಯ ವ್ಯವಸ್ಥೆ ಅದೆಷ್ಟೇ ಕೊಚ್ಚೆಗುಂಡಿಯಾಗಿರಲಿ, ಅಧಿಕಾರಕ್ಕೆ ಬರಲೇಬೇಕು ಎಂದರೆ ಮತಗಟ್ಟೆ ಮೂಲಕ ಜನರ ಬೆಂಬಲ ಗಳಿಸುವುದೂ ಅನಿವಾರ್ಯ. ಚುನಾವಣಾ ಪ್ರಕ್ರಿಯೆ ನ್ಯಾಯಸಮ್ಮತವಾಗಿರಬೇಕು, ಭ್ರಷ್ಟಾಚಾರದಿಂದ ಮುಕ್ತವಾಗಿರಬೇಕು ಮತ್ತು ಜಾಣ ಮತದಾರ ಇರಬೇಕು.

ಎದುರಾಳಿಗಳನ್ನೆಲ್ಲ ಗುಡಿಸಿ ಗುಡ್ಡೆ ಹಾಕಿ ದೆಹಲಿ ಗದ್ದುಗೆ ವಶಪಡಿಸಿಕೊಂಡ ನಂತರ ಪಂಜಾಬ್ ಮತ್ತು ಗೋವಾ ರಾಜ್ಯಗಳಲ್ಲಿ ರಾಷ್ಟ್ರೀಯ ಛಾಪು ಮೂಡಿಸಿರುವ ‘ಎಎಪಿ’  ಈಗ ಗುಜರಾತ್‌ನಲ್ಲಿಯೂ ಅಸ್ತಿತ್ವ ಸಾಬೀತುಪಡಿಸಲು ಹೊರಟಿದೆ.

ನನ್ನಂತಹ ಕೆಲ ದಪ್ಪ ಚರ್ಮದ ಟೀಕಾಕಾರರು ಅಣ್ಣಾ ಚಳವಳಿಯು ರಾಜಕಾರಣವನ್ನು ವಿರೋಧಿಸುವ ಕಪಟ ನಾಟಕವಾಡುತ್ತಿದೆ ಎಂದು ಕಟಕಿಯಾಡಿದ್ದೆವು. ನಾವು ತಳೆದಿದ್ದ ಅಂತಹ ನಿಲುವಿಗೆ ಮತ್ತು ನಮ್ಮ ನಿಲುವು ಮೂಡಿಸಿದ್ದ ಅನುಮಾನಗಳಿಗೆ ನಾನೀಗ ಸ್ಪಷ್ಟನೆ ನೀಡಲು ಬಯಸುತ್ತೇನೆ.

ನಿಮ್ಮ ಉದ್ದೇಶದಲ್ಲಿ ಪ್ರಾಮಾಣಿಕರಾಗಿರಿ, ನಿಮಗೆ ರಾಜಕೀಯ ಅಧಿಕಾರ ಬೇಕಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿರಿ ಎಂಬುದೇ ನಮ್ಮ ನಿಲುವಾಗಿತ್ತು. ಕೇಜ್ರಿವಾಲ್‌ ಅವರ ಭಾಷೆಯಲ್ಲಿಯೇ ಹೇಳುವುದಾದರೆ, ‘ಅಗರ್‌ ರಾಜನೀತಿ ಕರ್ನಿ ಹೈ, ತೋ ಖುಲ್‌ ಕರ್‌ ಸಾಮ್ನೆ ಆವೊ’ (‘ಒಂದು ವೇಳೆ ರಾಜಕೀಯ ಮಾಡುವುದಿದ್ದರೆ, ಬಹಿರಂಗವಾಗಿ ಎದುರಿಗೆ ಬನ್ನಿ’) ಎಂದು ಪಂಥಾಹ್ವಾನ ನೀಡುವಂತಿರಬೇಕು ಎನ್ನುವುದೂ ನಮ್ಮ ನಿಲುವಾಗಿತ್ತು.

ಪಂಜಾಬ್‌ ಚುನಾವಣೆಯಲ್ಲಿ ಎಎಪಿಯು ಮೊದಲ ಅಥವಾ ಎರಡನೇ ಸ್ಥಾನಕ್ಕೆ ಬರಲಿ, ಗೋವಾದಲ್ಲಿನ ಅದರ ಸಾಧನೆ ಏನೇ ಇರಲಿ, ಹೊಸ ರಾಜಕೀಯ ಶಕ್ತಿಯಾಗಿ ಅದು ಮತದಾರರ ಗಮನವನ್ನಂತೂ ತೀವ್ರವಾಗಿ ಸೆಳೆಯುತ್ತಿದೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಗುಜರಾತ್‌ನಲ್ಲಿನ ಅದರ ರಾಜಕೀಯ ಚಟುವಟಿಕೆಗಳೂ ಈ ಮಾತನ್ನು ಪುಷ್ಟೀಕರಿಸುತ್ತವೆ.

ರಾಜಕೀಯ ಅಧಿಕಾರ ಹೊಂದಲು ‘ಎಎಪಿ’ಯು ವ್ಯವಸ್ಥೆ ವಿರೋಧಿ ನಿಲುವನ್ನೇ ತನ್ನ ಸೈದ್ಧಾಂತಿಕವಲ್ಲದ ಪ್ರಮುಖ ದಾಳವನ್ನಾಗಿ ಪರಿಗಣಿಸಿದೆ. ಕೇಜ್ರಿವಾಲ್‌ ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಯಾವುದೇ ನಿರ್ದಿಷ್ಟ ಪಕ್ಷದ ವಿರುದ್ಧ ಅಪರೂಪಕ್ಕೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯವಾಗಿ ಬೇರುಬಿಟ್ಟಿರುವ ಎಲ್ಲ ಪಕ್ಷಗಳಲ್ಲಿನ ರಾಜಕಾರಣಿಗಳ ವಿರುದ್ಧ ಮಾತ್ರ ನಿರಂತರವಾಗಿ ಟೀಕಾಪ್ರಹಾರ ನಡೆಸಿದ್ದಾರೆ.

ಕೇಜ್ರಿವಾಲ್‌ ಮತ್ತು ಅವರ ಎಲ್ಲ ಯುವ ಪ್ರಮುಖ ಹಿಂಬಾಲಕರಿಗೆ ಭ್ರಷ್ಟತೆಯ ಕಳಂಕ ತಟ್ಟಿಲ್ಲ. ಇದು ಅತಿದೊಡ್ಡ ಸಂಖ್ಯೆಯಲ್ಲಿ ಇರುವ ಯುವ ಮತದಾರರ ಮನಗೆಲ್ಲಲು ನೆರವಾಗುತ್ತಿದೆ. ಅವರ ಕೆಲ ಹತ್ತಿರದ ಪ್ರತಿಸ್ಪರ್ಧಿಗಳಾದ ಸುಖಬೀರ್‌ ಬಾದಲ್‌, ರಾಹುಲ್ ಗಾಂಧಿಗೆ ಹೆಚ್ಚು ವಯಸ್ಸಾಗಿಲ್ಲ. ಇವರಿಬ್ಬರೂ ಕೇಜ್ರಿವಾಲ್‌ ಅವರಿಗಿಂತ ಕಿರಿಯರೂ ಆಗಿದ್ದಾರೆ.

ಇವರಿಗೆ ರಾಜಕೀಯದ ದೊಡ್ಡ ಹಿನ್ನೆಲೆ ಇದ್ದರೆ, ಕೇಜ್ರಿವಾಲ್‌ ಸ್ವತಃ ತಮ್ಮ ರಾಜಕೀಯ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ರಾಜಕೀಯ ಪೂರ್ವಾಪರ ಹಾಗೂ ಅನುಭವ ಇಲ್ಲದಿರುವುದನ್ನೇ ತಮ್ಮ ಬಂಡವಾಳವನ್ನಾಗಿ ಬಳಸಿಕೊಂಡಿದ್ದಾರೆ. ರಾಜಕೀಯವಾಗಿ ತಾವೊಬ್ಬ ಮುಗ್ಧ ವ್ಯಕ್ತಿ ಎಂಬಂತೆ ಬಿಂಬಿಸಿಕೊಂಡಿದ್ದಾರೆ. ನಮಗೂ ಒಂದು ಅವಕಾಶ ನೀಡಿ ಎಂದು ಮತದಾರರನ್ನು ಓಲೈಸುತ್ತಿದ್ದಾರೆ. ಇದು ಯುವ ಮತದಾರರ ಮನಸ್ಸು ಗೆಲ್ಲುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿನ ಕಾಂಗ್ರೆಸ್‌ನ ಮತಗಳನ್ನೆಲ್ಲ ತನ್ನ ಬುಟ್ಟಿಗೆ ಹಾಕಿಕೊಂಡಿದ್ದರಿಂದಲೇ ದೆಹಲಿ ಚುನಾವಣೆಯಲ್ಲಿ ಎದುರಾಳಿಗಳನ್ನೆಲ್ಲ ಗುಡಿಸಿಹಾಕಲು ‘ಎಎಪಿ’ಗೆ ಸಾಧ್ಯವಾಯಿತು. ಈಗ ಪಂಜಾಬ್‌ ಚುನಾವಣೆಯಲ್ಲಿಯೂ ಜನಾಭಿಪ್ರಾಯ ಸಮೀಕ್ಷೆಗಳೂ ಹೇಳಿರುವಂತೆ, ‘ಎಎಪಿ’ಯು  ಅಕಾಲಿ– ಬಿಜೆಪಿ ಮೈತ್ರಿಕೂಟದ ಮತಗಳನ್ನೆಲ್ಲ ಬಾಚಿಕೊಳ್ಳಲಿದೆ ಎನ್ನುವ ಲೆಕ್ಕಾಚಾರ ಬಹುತೇಕ ನಿಜವಾಗಲಿದೆ.

ನಿರ್ದಿಷ್ಟ ಸಿದ್ಧಾಂತ ಇಲ್ಲದಿರುವುದೂ ರಾಜಕೀಯ ಪಕ್ಷವೊಂದಕ್ಕೆ ಹೇಗೆ ಅನುಕೂಲವಾಗಲಿದೆ ಎನ್ನುವುದನ್ನು ನಾವಿಲ್ಲಿ ‘ಎಎಪಿ’ ವಿಷಯದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಈಗಾಗಲೇ ತಮ್ಮ ಅಸ್ತಿತ್ವ ಸಾಬೀತುಪಡಿಸಿರುವ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ, ‘ಎಎಪಿ’ ಸಾಕಷ್ಟು ಭಿನ್ನವಾದ ಪಕ್ಷವಾಗಿದೆಯೇ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ.

ರಾಜಕೀಯ ಪಕ್ಷಗಳ ವಿರುದ್ಧದ ಆರೋಪಗಳನ್ನೆಲ್ಲ ಪಟ್ಟಿ ಮಾಡಿದರೆ ಅದರಲ್ಲಿ ಭ್ರಷ್ಟತೆ, ಅಧಿಕಾರಕ್ಕೆ ಏರಲು ಅನುಸರಿಸುವ ತಂತ್ರಗಾರಿಕೆ, ವೈಯಕ್ತಿಕ ಪ್ರಭಾವ, ಹೈಕಮಾಂಡ್‌ ಸಂಸ್ಕೃತಿ, ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದು, ಮಾಧ್ಯಮಗಳ ಟೀಕೆಗೆ ಅಸಹನೆ ತೋರುವುದು, ಭಿನ್ನಾಭಿಪ್ರಾಯ ಮತ್ತು ಪ್ರಶ್ನಿಸುವುದನ್ನು ಸಹಿಸಿಕೊಳ್ಳದಿರುವುದು, ಅಧಿಕಾರವೆಲ್ಲ ಒಬ್ಬನೇ ವ್ಯಕ್ತಿಯಲ್ಲಿ ಕೇಂದ್ರೀಕೃತಗೊಂಡಿರುವ ಅವಗುಣಗಳೆಲ್ಲ ಲೆಕ್ಕಕ್ಕೆ ಬರುತ್ತವೆ.

ಇವುಗಳಲ್ಲಿ ಯಾವುದು ‘ಎಎಪಿ’ಯಲ್ಲಿ ಕಂಡುಬರಲಾರದು ಎನ್ನುವುದನ್ನು ಪರಿಶೀಲಿಸಬೇಕು. ಅದರ ನಾಯಕ ತುಂಬ ಶಕ್ತಿಶಾಲಿಯಾಗಿರುವುದರ ಜತೆಗೆ ಜನಪ್ರಿಯ ವ್ಯಕ್ತಿಯೂ ಆಗಿದ್ದಾನೆ. ದೆಹಲಿಯಲ್ಲಿ ಅಧಿಕಾರ ನಡೆಸಲು ಪ್ರಮಾಣವಚನ ಸ್ವೀಕರಿಸಿದ್ದರೂ, ಚುನಾವಣಾ ಪ್ರಚಾರಕ್ಕಾಗಿ ರಾಜ್ಯದ ಹೊರಗೇ ಹಲವು ತಿಂಗಳು ಕಳೆದಿದ್ದಾನೆ. ದೆಹಲಿ ಮತದಾರರ ಸಂಪರ್ಕಕ್ಕೆ ಸಿಗುತ್ತಿಲ್ಲ.

ಸಂವಿಧಾನಾತ್ಮಕ ಹೊಣೆಗಾರಿಕೆ ಇಲ್ಲದ ಮತ್ತು ಅವರ ಪಕ್ಷಕ್ಕೆ ಸಂಬಂಧಿಸಿದಂತೆ  ಹೇಳುವುದಾದರೂ, ಹೆಚ್ಚು ರಾಜಕೀಯ ಜವಾಬ್ದಾರಿ ಸಹ ಇಲ್ಲದ ರಾಹುಲ್‌ ಗಾಂಧಿ ವರ್ಷಾಂತ್ಯದಲ್ಲಿ ಒಂದು ವಾರ ವಿದೇಶಕ್ಕೆ ಹೋದರೆ, ಆ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿರುವುದು ದೊಡ್ಡ ವಿರೋಧಾಭಾಸವೇ ಸರಿ.

ಅಣ್ಣಾ ಚಳವಳಿ ಆರಂಭವಾಗಿ 8 ವರ್ಷಗಳ ನಂತರ ಆಮ್‌ ಆದ್ಮಿ ಪಾರ್ಟಿ ಸಮರ್ಥ ಮುಖಂಡನ ನೇತೃತ್ವದಲ್ಲಿ, ಹೊಸ ರಾಷ್ಟ್ರೀಯ ರಾಜಕೀಯ ಶಕ್ತಿಯಾಗಿ ಬೆಳೆದು ನಿಂತಿದೆ. ‘ಎಎಪಿ’ಯು  ದೇಶದ ಜಡ್ಡುಗಟ್ಟಿದ್ದ ರಾಜಕೀಯಕ್ಕೆ ಹೊಸ ಆಯಾಮ ನೀಡಿದೆ. ಪತ್ರಕರ್ತರ ರಾಜಕೀಯ ವರದಿಗಾರಿಕೆ ಮತ್ತು ಅಭಿಪ್ರಾಯ ಮೂಡಿಸುವ ಅಂಕಣಕಾರರ ಕೆಲಸವನ್ನೂ ಹೆಚ್ಚು ರಂಜನೀಯ ಮಾಡಿದೆ.

ಪಂಜಾಬ್‌ನಲ್ಲಿ ‘ಎಎಪಿ’ ಹೊಸ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವುದಕ್ಕೆ ಸಂಬಂಧಿಸಿದಂತೆ ಹಿಂದಿನ ವಾರ ನಾನು, ‘ಪಂಜಾಬ್‌ ಗೋಡೆ ಮೇಲಿನ ಬರಹ’ದ ಅಂಕಣ ಬರೆದ ನಂತರ ನನಗೊಂದು ಪ್ರಶ್ನೆ ತುಂಬ ಕಾಡಿತು. ಇತ್ತೀಚೆಗಷ್ಟೇ ಪಕ್ಷದ ಮುಖ್ಯಸ್ಥರು ನನ್ನನ್ನೇ ಗುರಿಯಾಗಿರಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ನಿಂದನೆ ಮಾತುಗಳನ್ನಾಡಿದ್ದರೂ ನಾನು ‘ಎಎಪಿ’ ಬಗ್ಗೆ ಸಕಾರಾತ್ಮಕವಾಗಿ ಏಕೆ ಬರೆದೆ ಎನ್ನುವ ಪ್ರಶ್ನೆ ನನಗೆ ಎದುರಾಗಿತ್ತು.

ಯಾರಾದರೊಬ್ಬರು ನನ್ನನ್ನು ನಿಂದಿಸಿದ್ದಾರೆ ಎನ್ನುವ ಕಾರಣಕ್ಕೆ ನಾನು ಸುಳ್ಳು ಹೇಳಬೇಕೆ? ಅದರಿಂದ ನಾನು ನನ್ನ ಓದುಗರಿಗೆ ವಂಚನೆ ಮಾಡಿದಂತೆ ಆಗುವುದಿಲ್ಲವೇ ಎಂದು ನನ್ನಷ್ಟಕ್ಕೇ ಮರು ಪ್ರಶ್ನೆ ಹಾಕಿಕೊಂಡಿದ್ದೆ.

ರಾಯಿಟರ್ಸ್‌ನ ಮುಖ್ಯ ಸಂಪಾದಕ ಸ್ಟೀವ್‌ ಅಡ್ಲರ್‌, ಡೊನಾಲ್ಡ್ ಟ್ರಂಪ್‌ ಅವರ ಚುನಾವಣೆಯನ್ನು ಹೇಗೆ ವರದಿ ಮಾಡಬೇಕು ಎಂದು  ತಮ್ಮ ಸಿಬ್ಬಂದಿಗೆ ನೀಡಿದ ಹಿತವಚನವನ್ನು ಇಲ್ಲಿ ಉಲ್ಲೇಖಿಸುವುದು ಸರಿ ಎಂದು ನನಗೆ ಅನಿಸುತ್ತದೆ. ‘ವಾಸ್ತವಕ್ಕೆ ಬದ್ಧರಾಗಿರಿ, ನೀವು ಘಟನೆ ಅಥವಾ ಕತೆಯ ಭಾಗವಾಗಿದ್ದೀರಿ ಎಂದು ಭಾವಿಸಲು ಹೋಗಬೇಡಿ.

ದೂರ ನಿಂತುಕೊಂಡೇ ವಾಸ್ತವಿಕ ನೆಲೆಗಟ್ಟಿನಲ್ಲಿ ಘಟನೆಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವುದನ್ನು ಮರೆಯಬೇಡಿ’ ಎನ್ನುವ ಕಿವಿಮಾತು ಹೇಳಿದ್ದಾರೆ. ಟ್ರಂಪ್‌, ನರೇಂದ್ರ ಮೋದಿ ಅಥವಾ ಅರವಿಂದ ಕೇಜ್ರಿವಾಲ್‌ ಅವರ ಚುನಾವಣಾ ಭಾಷಣ ವರದಿ ಮಾಡುವ ಪತ್ರಕರ್ತರಿಗೂ ಈ ಮಾತು ಅನ್ವಯಿಸುತ್ತದೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT