ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರ ಒಂದು ಧರ್ಮಮಾರ್ಗ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಈ ಬಾರಿ ಮಾವಿನಹಣ್ಣಿನ ಸೀಜನ್ ಕಡಿಮೆಯಾಗುತ್ತಿದ್ದಾಗ ನಾನು ಬೆಳಗಾವಿಗೆ ಹೋಗಿದ್ದೆ. ಅಲ್ಲಿ  ರತ್ನಗಿರಿಯಿಂದ ಬರುವ ಆಲ್ಫೋನ್ಸೊ ಮಾವಿನಹಣ್ಣು ಬಹಳ ಪ್ರಸಿದ್ಧ. ತೆಗೆದುಕೊಳ್ಳಲೆಂದು ಅಂಗಡಿಗೆ ಹೋದೆ. ಈ ಅಪರೂಪದ ಹಣ್ಣುಗಳನ್ನು ಹನ್ನೆರೆಡು ಹನ್ನೆರೆಡರಂತೆ ಚೆನ್ನಾಗಿ ಹುಲ್ಲು ಹಾಕಿ ರಟ್ಟಿನ ಪೆಟ್ಟಿಗೆಯಲ್ಲಿ ಜೋಡಿಸಿ ಇಟ್ಟು ಮಾರಾಟ ಮಾಡುತ್ತಾರೆ. ಅವುಗಳ ಬೆಲೆಯೂ ಸ್ವಲ್ಪ ಹೆಚ್ಚೇ.

ಇದ್ದುದರಲ್ಲಿ  ಪರಿಚಯವಿದ್ದ ಅಂಗಡಿಗೆ ಹೋಗಿ,  ಹೇಗಪ್ಪ ಆಲ್ಫೋನ್ಸೊ ಹಣ್ಣು? ಬೆಲೆ ಸ್ವಲ್ಪ ಕಡಿಮೆಯಾಗಿದೆಯೋ?  ಎಂದು ಕೇಳಿದೆ. ಅವನು ಸ್ನೇಹದ ನಗೆ ನಕ್ಕು.  ಬನ್ನಿ ಸರ್, ನಿಮಗೇಕೆ ಹೆಚ್ಚು ಹೇಳಲಿ ? ಇವತ್ತಿನ ರೇಟು ಡಜನ್ನಿಗೆ ನಾಲ್ಕುನೂರು ರೂಪಾಯಿ, ನಿಮಗೆ ಮುನ್ನೂರೈವತ್ತಕ್ಕೆ ಕೊಡುತ್ತೇನೆ  ಎಂದ.

ನಾನು ಮಾರುತ್ತರ ಕೊಡುವಷ್ಟರಲ್ಲಿ ಅಲ್ಲಿ  ಆಗಲೇ ನಿಂತಿದ್ದ ವ್ಯಕ್ತಿಯೊಬ್ಬರು,  ನಿನ್ನಲ್ಲಿ ಯಾವಾಗಲೂ ರೇಟು ಹೆಚ್ಚೇ. ಎಲ್ಲ ಕಡೆಗೆ ಇನ್ನೂರಕ್ಕೇ ಕೊಡುತ್ತಾರೆ  ಎಂದರು. ಆತ,  ಇಲ್ಲ ಸ್ವಾಮಿ, ನಮಗೇ ಅದು ಮುನ್ನೂರು ರೂಪಾಯಿ ಬಿದ್ದಾಗ ನಿಮಗೆ ಹೇಗೆ ಇನ್ನೂರಕ್ಕೆ ಕೊಡಲಿ? ನಾವೂ ಬದುಕಬೇಡವೇ ?  ಎಂದ.

ಇನ್ನೊಬ್ಬ ಗಿರಾಕಿ ಬಹಳ ಚೌಕಾಸಿ ಸ್ವಭಾವದವರು ಎಂದು ತೋರುತ್ತದೆ. ಬೆಲೆಯನ್ನು ಎಳೆದಾಡಿಬಿಟ್ಟರು. ವ್ಯಾಪಾರಿಗೆ ಸಾಕಾಗಿ ಹೋಯಿತು.  ಆಯ್ತು ಸ್ವಾಮಿ, ನಿಮಗೆ ಮಾತ್ರ ಇನ್ನೂರಕ್ಕೇ ಕೊಡುತ್ತೇನೆ, ತೆಗೆದುಕೊಳ್ಳಿ . ಎಂದು ಒಂದು ಪೆಟ್ಟಿಗೆಯನ್ನು ಎತ್ತಿಕೊಂಡು ಅದರಲ್ಲಿನ ಹನ್ನೆರೆಡು ಹಣ್ಣುಗಳನ್ನು ಎಣಿಸಿ ತೋರಿಸಿ ಮತ್ತೊಂದು ರಟ್ಟಿನ ಪೆಟ್ಟಿಗೆಯಲ್ಲಿ  ಹಾಕಿಕೊಟ್ಟ. ಚೆಂದದ ಹಣ್ಣುಗಳು. ಆಕರ್ಷಕವಾಗಿದ್ದವು. ಗಿರಾಕಿ ಪೆಟ್ಟಿಗೆ ಹಿಡಿದು ಯುದ್ಧ ಗೆದ್ದವನಂತೆ ಮುಖಮಾಡಿ ನಡೆದ.

ಅಲ್ಲಪ್ಪ, ನೀವು ಕೊಳ್ಳುವ ಬೆಲೆಯೇ ಮುನ್ನೂರಾದಾಗ ಅವನಿಗೆ ಹೇಗೆ ಇನ್ನೂರಕ್ಕೆ ಕೊಟ್ಟಿರಿ ನೀವು ? ನಿಮಗೆ ನಷ್ಟವಾಗುವುದಿಲ್ಲವೇ?  ಎಂದೆ. ಅದಕ್ಕಾತ ನಗುತ್ತಾ,  ಇವರೆಲ್ಲ ಬಕರಾಗಳು ಸಾರ್. ವ್ಯಾಪಾರ, ಪದಾರ್ಥ ಅರ್ಥವಾಗುವುದಿಲ್ಲ. ಹಣ ಕಡಿಮೆಯಾಯಿತೆಂದು ಖುಷಿ ಪಟ್ಟು ಹೋಗುತ್ತಾರೆ. ಮನೆಗೆ ಹೋದ ಮೇಲೆ ಗೊತ್ತಾಗುತ್ತದೆ ಎಂದ.
 
ನಂತರ ಆ ಪೆಟ್ಟಿಗೆಯೊಳಗಿನ ಹಣ್ಣೊಂದನ್ನು ಹೊರತೆಗೆದು ಚಾಕುವಿನಿಂದ ಕೊಯ್ದ. ಹೊರಗೆ ನೋಡಲು ಚೆಂದವಾಗಿದ್ದ ಹಣ್ಣಿನೊಳಗೆ ಬರೀ ಹುಳುಗಳು!  ನಮಗೆ ಗೊತ್ತು ಯಾವ ಮಾಲು ಹೇಗಿರುತ್ತದೆ ಎಂದು, ಇಂಥ ಕಿರಿಕಿರಿ ಗಿರಾಕಿ ಬಂದಾಗ ಹೀಗೇ ಮಾಡುತ್ತೇವೆ  ಎಂದ.

ತಕ್ಷಣ ನನ್ನ ಮನಸ್ಸಿನಲ್ಲಿ  ಈ ಗಿರಾಕಿ ಮನೆಗೆ ಹೋಗಿ ಹೆಂಡತಿಯ ಮುಂದೆ ಬಡಾಯಿ ಕೊಚ್ಚಿಕೊಂಡು ಹಣ್ಣು ಹೆಚ್ಚಿ, ಹುಳುಕಂಡಾಗ ಅವನ ಮುಖದ ಮೇಲೆ ಮೂಡಬಹುದಾದ ಮುಖಭಾವ ತೇಲಿ ಬಂತು. ನಾನು ಮುನ್ನೂರೈವತ್ತು ಕೊಟ್ಟು ತಂದರೂ ಮನೆಗೆ ಬಂದು ಹಣ್ಣುಗಳನ್ನು ಕತ್ತರಿಸುವವರೆಗೆ ಅನುಮಾನ ಕಾಡಿತ್ತು.

ಈ ಸಂದರ್ಭದಲ್ಲಿ ನಾವು ಹುಡುಗರಾಗಿದ್ದಾಗ ನವಲೂರಿನ ಪೇರಲ ಹಣ್ಣು (ಸೀಬೇ ಹಣ್ಣು) ತಿನ್ನಲು ಹೋಗುತ್ತಿದ್ದ ಪ್ರಸಂಗವೂ ಮನಸ್ಸಿನ ಪರದೆಯ ಮೇಲೆ ಹಾಯ್ದು ಹೋಯಿತು. ನಾವು ಸೈಕಲ್ ಮೇಲೆ ನವಲೂರಿನ ಪೇರಲಹಣ್ಣಿನ ತೋಟಕ್ಕೆ ಹೋಗುತ್ತಿದ್ದೆವು. ಪ್ರವೇಶದ ದರ ನಾಲ್ಕಾಣೆ. ನೀವು ತೋಟದಲ್ಲಿ  ಎಷ್ಟು ಬೇಕಾದರೂ ಹಣ್ಣು ತಿನ್ನಬಹುದು, ಮನೆಗೆ ಒಯ್ಯುವಂತಿಲ್ಲ. ಆದರೆ ತೋಟದ ಯಜಮಾನನ ಪ್ರೀತಿ ಹೃದಯ ತಟ್ಟುತ್ತಿತ್ತು. ಆತ ನಮ್ಮನ್ನು ಕರೆದು,   ಹೇ, ದಡ್ಡಾ ಆ ಮರದ ಹಣ್ಣು ಬೇಡ, ಅದು ಸ್ವಲ್ಪ ಒಗರು. ಆ ಎಡಗಡೆಯ ಮೂರನೆಯ ಗಿಡದ ಹಣ್ಣು ಭಾರೀ ಸಿಹಿ. ಅದನ್ನು ತೆಗೆದುಕೋ. ಜೊತೆಗೆ ಉಪ್ಪು, ಕಾರದ ಪುಡಿ ತಂದಿದ್ದೀಯೋ ಇಲ್ಲವೋ? ಇರದಿದ್ದರೆ ಇಕೋ, ಈ ಡಬ್ಬಿಯಲ್ಲಿ  ಇಟ್ಟಿದ್ದೇನೆ. ಹಚ್ಚಿಕೊಂಡು ತಿನ್ನು, ಬಹಳ ಖುಷಿಯಾಗುತ್ತದೆ  ಎಂದು ತಾನೇ ಒಳ್ಳೆಯ ಹಣ್ಣುಗಳನ್ನು ತಂದುಕೊಡುತ್ತಿದ್ದ.

ಯಾರಾದರೂ ಒಂದೆರೆಡೇ ಹಣ್ಣು ತಿಂದರೆ,  ಏನು ಅಳುಬುರುಕ ಇದ್ದೀಯೋ ನೀನು? ಇನ್ನೊಂದೆರಡು ತಿನ್ನು, ಇಲ್ಲದಿದ್ದರೆ ಈ ನಾಲ್ಕಾಣೆ ವಾಪಸ್ ತೆಗೆದುಕೊಂಡು ಹೋಗು  ಎನ್ನುತ್ತಿದ್ದ. ಮಕ್ಕಳು ಎಷ್ಟು ತಿಂದರೆ, ಸಂತೋಷಪಟ್ಟರೆ ಅವನಿಗೆ ಸಂತೋಷ.

ಗಿರಾಕಿಗಳು ಸಂತೋಷಪಟ್ಟರೆ ಸಂತೋಷಪಡುವಂಥವರು ಇದ್ದರು ಆಗ. ವ್ಯಾಪಾರ ಜೀವನ ನಡೆಸುವುದಕ್ಕೆ, ಆದರೆ ಅದು ಧರ್ಮಮಾರ್ಗವೂ ಆಗಿತ್ತು, ಮತ್ತೊಬ್ಬರಿಗೆ ಟೊಪ್ಪಿಗೆ ಹಾಕಿ ಹೇಗಾದರೂ ಮಾಡಿ ಹಣಗಳಿಸುವ ವೃತ್ತಿ ಆಗಿರಲಿಲ್ಲ. ಈಗ ಎಲ್ಲರೂ ಮೋಸಮಾಡುತ್ತಾರೆಂದಲ್ಲ, ಒಳ್ಳೆಯವರೂ ಇದ್ದಾರೆ. ಆದರೆ ಹುಡುಕಿಕೊಂಡು ಹೋಗುವಷ್ಟು ಅಪರೂಪವಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT