ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನೋತ್ಸವ ಕಂಡ ರಷ್ಯಾ ಕ್ರಾಂತಿ

Last Updated 19 ಅಕ್ಟೋಬರ್ 2017, 19:08 IST
ಅಕ್ಷರ ಗಾತ್ರ

ಅಕ್ಟೋಬರ್ 24, 1917ರ ರಾತ್ರಿ, ಸುಮಾರು 10 ಗಂಟೆ. ಪೆತ್ರೊಗ್ರಾಡ್ ನಗರದಲ್ಲಿ ತಾನು ಅಡಗಿದ್ದ ಸ್ಥಳದಿಂದ ವ್ಲಾದಿಮಿರ್ ಇಲ್ಯಿಚ್ ಲೆನಿನ್ ಮಾರುವೇಷದಲ್ಲಿ ಹೊರಬಂದು, ಸೋವಿಯತ್ ಕಾಂಗ್ರೆಸ್‌ನ ಮುಖ್ಯ ಕಚೇರಿಯಿದ್ದ ಸ್ಮೋಲ್ನಿ ಸಂಸ್ಥೆಯ ಕಡೆಗೆ ಹೊರಟರು. ರಷ್ಯನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಪೆತ್ರೊಗ್ರಾಡ್ ನಗರವು ಮೊದಲು ಸೇಂಟ್ ಪೀಟರ್ಸ್‌ಬರ್ಗ್ ಎಂದು ಪ್ರಖ್ಯಾತವಾಗಿತ್ತು ಮತ್ತು 1914ರಲ್ಲಿ ತನ್ನ ಹೊಸ ಹೆಸರನ್ನು ಪಡೆದಿತ್ತು. ಆ ರಾತ್ರಿ ಲೆನಿನ್ ತಲೆಗೆ ವಿಗ್ ಧರಿಸಿ, ಕಾರ್ಮಿಕನ ಟೋಪಿಯೊಂದನ್ನು ಹಾಕಿಕೊಂಡಿದ್ದರು. ಅವರ ತಲೆಯ ಸುತ್ತ ಗಾಯವೊಂದನ್ನು ಮುಚ್ಚುವಂತೆ ಪಟ್ಟಿ ಕಟ್ಟಲಾಗಿತ್ತು.

ರಸ್ತೆ ರೈಲು (ಟ್ರಾಮ್) ಹಿಡಿದು ಸ್ಮೋಲ್ನಿ ಸಂಸ್ಥೆಯನ್ನು ತಲುಪುವ ಹೊತ್ತಿಗೆ ಮಧ್ಯರಾತ್ರಿಯಾಗುತ್ತಿತ್ತು. ರೈಲ್ವೆ ನಿಲ್ದಾಣಗಳ ಮತ್ತು ರಸ್ತೆಗಳ ನಿಯಂತ್ರಣಕ್ಕೆ ದಾರಿಯುದ್ದಕ್ಕೂ ವಿವಿಧ ಬಣಗಳಿಗೆ ಸೇರಿದ ಸೈನಿಕರು ಸೆಣಸುತ್ತಿದ್ದರು. ರೈಲಿನಿಂದ ಹೊರಬಂದು, ರಸ್ತೆಯಲ್ಲಿ ನಡೆಯುತ್ತಿರುವಾಗ ಲೆನಿನ್‌ರನ್ನು ಸರ್ಕಾರದ ಗಸ್ತುದಳದವರು ತಡೆದರು. ಗಸ್ತುದಳದ ಪೊಲೀಸರು ಅಂದಿನ ಸರ್ಕಾರದ ಮುಖ್ಯಸ್ಥ ಅಲೆಗ್ಸಾಂಡರ್ ಕರೆನ್ಸ್ಕಿಗೆ ನಿಷ್ಠರಾಗಿದ್ದವರು. ಲೆನಿನ್‌ರನ್ನು ನಿರುಪದ್ರವಿ ಕುಡುಕನೆಂದು ಭಾವಿಸಿ ಬಿಟ್ಟುಬಿಟ್ಟರು.

ಸ್ಮೋಲ್ನಿ ಸಂಸ್ಥೆಯೊಳಗೆ ಹೋಗಲು ಲೆನಿನ್‌ರ ಬಳಿ ರಹದಾರಿಯಿರಲಿಲ್ಲ. ಸೋವಿಯತ್ ಬಣದ ಕೆಂಪು ಸೈನಿಕರು, ಸೋವಿಯತ್ ಮುಖ್ಯ ಕಚೇರಿಯನ್ನು ಪ್ರವೇಶಿಸಲು ಬಯಸುತ್ತಿದ್ದ ಎಲ್ಲರ ರಹದಾರಿಗಳನ್ನು ಪರಿಶೀಲಿಸಿಯೇ ಹೊರಬಿಡುತ್ತಿದ್ದರು. ಗುಂಪಿನ ಮಧ್ಯದಲ್ಲಿ ಹೇಗೊ ನುಗ್ಗಿದ ಲೆನಿನ್, ಕಡೆಗೂ ಕಟ್ಟಡದೊಳಗೆ ಪ್ರವೇಶಿಸುವುದರಲ್ಲಿ ಯಶಸ್ವಿಯಾದರು. 36ನೇ ಸಂಖ್ಯೆಯ ಕೊಠಡಿಯಲ್ಲಿ ನಡೆಯುತ್ತಿದ್ದ ಬೋಲ್ಷೆವಿಕ್ ಪಕ್ಷದ ಸಭೆಯೊಳಗೆ ಹೋಗಿ, ಕೇಂದ್ರ ಸಮಿತಿಯ ಸಭೆಯನ್ನು ಕರೆಯುವಂತೆ ಒತ್ತಾಯಿಸಿದರು. ತಕ್ಷಣವೇ ಪ್ರಾರಂಭವಾದ ಸಭೆಯಲ್ಲಿ, ಲೆನಿನ್, ಬೋಲ್ಷೆವಿಕರು ಕೂಡಲೇ ಬಂಡಾಯವನ್ನು ಆರಂಭಿಸುವ ನಿರ್ಧಾರವನ್ನು ಮಾಡಿಸಿದರು.

1917ರ ಅಕ್ಟೋಬರ್ ಕ್ರಾಂತಿ ಪ್ರಾರಂಭವಾದುದು ಹೀಗೆ. ಅಂದಿನ ಮಧ್ಯರಾತ್ರಿ ಗಸ್ತುದಳದವರು ಲೆನಿನ್‌ರನ್ನು ಗುರುತಿಸಿ ಬಂಧಿಸಿದ್ದರೆ ಅಥವಾ ಲೆನಿನ್‌ ಅವರಿಗೆ ಸ್ಮೋಲ್ನಿ ಸಂಸ್ಥೆಯ ಕಟ್ಟಡವನ್ನು ಪ್ರವೇಶಿಸಲು ಆಗದಿದ್ದರೆ, ಬಹುಶಃ ಪೆತ್ರೊಗ್ರಾಡಿನಲ್ಲಿ ಬಂಡಾಯ ಪ್ರಾರಂಭವಾಗುತ್ತಿರಲಿಲ್ಲ, ಕ್ರಾಂತಿಯೂ ಸಂಭವಿಸುತ್ತಿರಲಿಲ್ಲ ಎಂದರೆ ಅಸಮಂಜಸವಾಗದು. ಇದಕ್ಕೆ ಕಾರಣವಿಷ್ಟೆ. ಬೋಲ್ಷೆವಿಕ್ ಪಕ್ಷದ ಇತರ ಹಿರಿಯ ನಾಯಕರು ತಕ್ಷಣವೇ ರಾಜ್ಯಾಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹೋರಾಟ ಆರಂಭಿಸಲು ಸಿದ್ಧರಾಗಿರಲಿಲ್ಲ. ಪೆತ್ರೊಗ್ರಾಡ್ ಸೋವಿಯತ್‍ನ ಮುಖ್ಯಸ್ಥ ಟ್ರಾಟ್‌ಸ್ಕಿ ಮಾತ್ರ ಲೆನಿನ್‍ರ ಪರವಾಗಿದ್ದರು. ಲೆನಿನ್ ಮತ್ತು ಟ್ರಾಟ್‌ಸ್ಕಿ ಇಬ್ಬರೂ ಹಲವಾರು ವರ್ಷಗಳಿಂದ ದೇಶಭ್ರಷ್ಟರಾಗಿದ್ದರು. ಕ್ರಮವಾಗಿ ಸ್ವಿಟ್ಜರ್ಲೆಂಡ್ ಮತ್ತು ಅಮೆರಿಕಗಳಲ್ಲಿ ನೆಲೆಸಿದ್ದರು. 1917ರ ಪ್ರಾರಂಭದಲ್ಲಿ ರಷ್ಯಾದಲ್ಲಿ ಗಲಭೆಗಳು ಪ್ರಾರಂಭವಾದಾಗ, ಇಬ್ಬರೂ ದೇಶದ ಹೊರಗೆಯೇ ಇದ್ದರು. 1917ರ ಏಪ್ರಿಲ್‌ನ ನಂತರ ರಷ್ಯಾಕ್ಕೆ ವಾಪಸಾಗಿದ್ದರು. ಆದರೆ ಇಬ್ಬರನ್ನೂ ಕರೆನ್ಸ್ಕಿ ನೇತೃತ್ವದ ತಾತ್ಕಾಲಿಕ ಸರ್ಕಾರವು ಬಹಿರಂಗವಾಗಿ ತಮ್ಮ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಬಿಟ್ಟಿರಲಿಲ್ಲ.

ಹಾಗಾಗಿ ಬೋಲ್ಷೆವಿಕ್ ಪಕ್ಷದ ಪ್ರತಿದಿನದ ಚಟುವಟಿಕೆಗಳಲ್ಲಿ ಮತ್ತು ಹೋರಾಟಗಳಲ್ಲಿ ಲೆನಿನ್ ಸಕ್ರಿಯವಾಗಿ ಭಾಗವಹಿಸಲು ಆಗಿರಲಿಲ್ಲ. ಅವರಿಗೆ 24ರ ಮಧ್ಯರಾತ್ರಿಯ ಕೇಂದ್ರ ಸಮಿತಿ ಸಭೆಯಲ್ಲಿ ಹೆಚ್ಚಿನ ಬೆಂಬಲ ದೊರೆಯದೆ ಇದ್ದಿದ್ದರೆ ಅದು ಆಶ್ಚರ್ಯದ ಮಾತಾಗುತ್ತಿರಲಿಲ್ಲ. ಬೋಲ್ಷೆವಿಕರು ತಮ್ಮ ಇತರ ಸಮಕಾಲೀನ ಪಕ್ಷಗಳಿಗಿಂತ ಹೆಚ್ಚು ರ‍್ಯಾಡಿಕಲ್ ಆದ ಮೂಲಭೂತ ಬದಲಾವಣೆಗಳನ್ನು ಆಶಿಸುತ್ತಿದ್ದರೂ, ಅಧಿಕಾರವನ್ನು ವಶಪಡಿಸಿಕೊಳ್ಳಲು ಬಂಡಾಯ ಏಳಲು ಸಿದ್ಧರಿರಲಿಲ್ಲ. ಸದ್ಯದಲ್ಲಿಯೇ ಸಭೆ ಸೇರಬೇಕಿದ್ದ ಸೋವಿಯತ್ ಕಾಂಗ್ರೆಸ್ ಅಧಿವೇಶನದಲ್ಲಿ ತಮ್ಮ ಮುಂದಿನ ರಾಜಕೀಯ ದಾಳವನ್ನು ಹಾಕಲು ಬಹುಪಾಲು ಸದಸ್ಯರು ತೀರ್ಮಾನಿಸಿದ್ದರು. ಇಂತಹ ಸಂದರ್ಭದಲ್ಲಿ ಲೆನಿನ್, ಕೇಂದ್ರ ಸಮಿತಿಯ ಸದಸ್ಯರ ಮನವೊಲಿಸಿ, ಅಂದಿನ ರಾತ್ರಿಯೇ ಕರೆನ್ಸ್ಕಿ ಸರ್ಕಾರವನ್ನು ಪತನಗೊಳಿಸಲು ಹೋರಾಟ ಆರಂಭಿಸಿದರು.

ಲೆನಿನ್ ರಷ್ಯಾದ ಜಾರ್ ಚಕ್ರವರ್ತಿಗಳ ಆಳ್ವಿಕೆಯ ಸಮಯದಲ್ಲಿ ಹಾಗೂ 1917ರ ಫೆಬ್ರುವರಿ-ಮಾರ್ಚ್ ತಿಂಗಳುಗಳಲ್ಲಿ ಚಕ್ರವರ್ತಿ ನಿಕೊಲಾಸ್ ಅಧಿಕಾರವನ್ನು ಬಿಟ್ಟುಕೊಟ್ಟ ನಂತರ ಸಹ ದೇಶಭ್ರಷ್ಟರಾಗಿದ್ದರು ಇಲ್ಲವೇ ಅಡಗಿಕೊಂಡಿದ್ದರು. ಹಾಗಾಗಿ ಅವರು ಯಾವುದೇ ರಾಜಿ- ಹೊಂದಾಣಿಕೆಗಳಿಗೆ ಸಿದ್ಧರಿಲ್ಲದೆ, ಹೋರಾಟವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದರು. ಟ್ರಾಟ್‌ಸ್ಕಿ ಹೊರತುಪಡಿಸಿ, ಇತರ ಬೋಲ್ಷೆವಿಕ್ ನಾಯಕರು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಹಾಗಾಗಿ ಬದಲಾವಣೆಗಳು ನಿಧಾನವಾಗಿ ಆಗಲಿ ಎನ್ನುವ ನಿಲುವನ್ನು ತಳೆದಿದ್ದರು. ತಕ್ಷಣವೇ ಬಂಡಾಯವನ್ನು ಪ್ರಾರಂಭಿಸಬೇಕು ಎನ್ನುವ ನಿಲುವನ್ನು ಲೆನಿನ್ ತಳೆಯಲು ಒಂದು ಮುಖ್ಯ ಕಾರಣವೆಂದರೆ ‘ಸಂಪೂರ್ಣ ಕ್ರಾಂತಿಯಿಂದಲೇ ಬದಲಾವಣೆ ಸಾಧ್ಯ’ ಎಂಬ ಅವರ ತಾತ್ವಿಕ ನಂಬಿಕೆ. ಇದು ಸಮಾಜವಾದಿ ಸೈದ್ಧಾಂತಿಕ ನೆಲೆಯಿಂದ ಹುಟ್ಟಿತ್ತು. ಇದರ ಜೊತೆಗೆ ಲೆನಿನ್ ತಮ್ಮ ಒಳಗಣ್ಣಿನಿಂದ ಕಂಡದ್ದು ರಷ್ಯಾ ಬದಲಾವಣೆಗೆ ಸಿದ್ಧವಾಗಿದೆ ಎನ್ನುವ ಅಂಶವನ್ನು. ತಮ್ಮ ಅಡಗುತಾಣಗಳಿಂದಲೇ ಬಂಡಾಯದ ಪರವಾದ ವಾದಗಳನ್ನು ಲೆನಿನ್ ಕೆಲವು ತಿಂಗಳ ಕಾಲ ಮಂಡಿಸಿದರು. ಆದರೆ ಕೇಂದ್ರ ಸಮಿತಿಯ ಸಭೆಯಲ್ಲಿ ಸ್ವತಃ ಭಾಗವಹಿಸಲು ಸಾಧ್ಯವಾದಾಗ, ಲೆನಿನ್ ಇತರರ ಮನವೊಲಿಸುವಲ್ಲಿ ಯಶಸ್ವಿಯಾದರು. ಹೀಗೆ ಸೈದ್ಧಾಂತಿಕತೆ ಮತ್ತು ಅಂತರ್ಬೋಧೆಗಳೆರಡೂ ಲೆನಿನ್ 24ರ ರಾತ್ರಿ ಬಂಡಾಯದ ಪರವಾಗಿ ವಾದಿಸಲು ಕಾರಣವಾದವು.

ಅಕ್ಟೋಬರ್ ಕ್ರಾಂತಿಯ ಇತಿಹಾಸವೇ 1917ರ ರಷ್ಯಾದ ಕ್ರಾಂತಿಯ ಕಥನವಲ್ಲ. ವಾಸ್ತವದಲ್ಲಿ 1917ರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ನಡೆದ ಬೆಳವಣಿಗೆಗಳು ಅಕ್ಟೋಬರ್ ಕ್ರಾಂತಿಯಷ್ಟೆ ಮುಖ್ಯವಾದವುಗಳು. 1917ರ ಎರಡನೆಯ ಭಾಗದಲ್ಲಿ ರಷ್ಯಾ ದುಃಸ್ಥಿತಿಯಲ್ಲಿತ್ತು.  ಮಹಾಯುದ್ಧದಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿತ್ತು. ಸೈನಿಕರಲ್ಲಿ ತೀವ್ರ ಅಸಮಾಧಾನ ಬೆಳೆದಿತ್ತು. ಆಹಾರ ಪದಾರ್ಥಗಳ ಅಲಭ್ಯತೆ ಇಡೀ ರಷ್ಯಾದ ಸಮಾಜವನ್ನು ರೊಚ್ಚಿಗೇಳಿಸಿತ್ತು. 1917ರ ಫೆಬ್ರುವರಿಯಲ್ಲಿ ಗೃಹಿಣಿಯರು, ಸೈನಿಕರು, ಕಾರ್ಮಿಕರು ಬೀದಿಗಿಳಿದು, ನಿಕೊಲಾಸ್ ಚಕ್ರವರ್ತಿಯನ್ನು ಪದಚ್ಯುತಿಗೊಳಿಸಿದರು. ‘ಫೆಬ್ರುವರಿ ಕ್ರಾಂತಿ’ಯೆಂದೇ ಹೆಸರಾಗಿರುವ ಈ ಬೆಳವಣಿಗೆಗಳು ರೊಟ್ಟಿ, ಶಾಂತಿ ಮತ್ತು ಭೂಮಿ ಇವುಗಳ ಸುತ್ತ ಹೊಸ ರಾಜಕಾರಣವೊಂದು ಪ್ರಾರಂಭವಾಗುವ ಸಾಧ್ಯತೆಯನ್ನು ತೋರಿಸಿದವು. ಕರೆನ್ಸ್ಕಿ ನೇತೃತ್ವದ ತಾತ್ಕಾಲಿಕ ಸರ್ಕಾರವು ಇಂತಹ ಸಂಕ್ರಮಣದ ಸಂದರ್ಭದಲ್ಲಿಯೂ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಹುಟ್ಟುಹಾಕುವ ಭರವಸೆಯನ್ನು ಮೂಡಿಸಿದ್ದವು. ಸ್ವತಃ ಲೆನಿನ್ ರಷ್ಯಾಕ್ಕೆ ಏಪ್ರಿಲ್ 1917ರಲ್ಲಿ ವಾಪಸಾದಾಗ, ಜಗತ್ತಿನ ಇತಿಹಾಸದಲ್ಲಿ ಇಷ್ಟು ಸ್ವಾತಂತ್ರ್ಯವಿದ್ದ ಮತ್ತೊಂದು ದೇಶ ಹುಟ್ಟಿರಲಿಲ್ಲ ಎಂದಿದ್ದರು.

ಹೀಗೆ ಹೇಳಿದ ಕೆಲವೇ ದಿನಗಳಲ್ಲಿ ಲೆನಿನ್ ಮತ್ತೆ  ಫಿನ್ಲೆಂಡಿನಲ್ಲಿ ಅಡಗಿಕೊಳ್ಳಬೇಕಾಯಿತು. ಕರೆನ್ಸ್ಕಿ ಸರ್ಕಾರವು ರಷ್ಯನ್ನರ ನಿರೀಕ್ಷೆಗಳನ್ನು ಪೂರೈಸಲು ಆಗಲಿಲ್ಲ. ರಷ್ಯಾ ಮೊದಲನೆಯ ಮಹಾಯುದ್ಧದಿಂದ ಕ್ಷಿಪ್ರವಾಗಿ ಹೊರಬರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ವರೂಪ ಸ್ಪಷ್ಟವಾಗಲು ಮತ್ತು ಅದು ನೆಲೆಯೂರಲು ಮತ್ತಷ್ಟು ಸಮಯ ಬೇಕಿತ್ತು. ಅದಕ್ಕೆ ಲೆನಿನ್ ಅವಕಾಶ ನೀಡಲಿಲ್ಲ. 1917ರ ಜುಲೈನ ದಂಗೆ ಯಶಸ್ವಿಯಾಗದಿದ್ದಾಗ, ಇತರ ಬೋಲ್ಷೆವಿಕ್ ನಾಯಕರು ಮತ್ತೊಂದು ವ್ಯರ್ಥ ಪ್ರಯತ್ನ ಮಾಡಲು ಸಿದ್ಧರಿರಲಿಲ್ಲ. ಆದರೂ ಲೆನಿನ್‌ರ ದೃಢಸಂಕಲ್ಪ ಅಕ್ಟೋಬರ್ ಕ್ರಾಂತಿಯನ್ನು ಅನಿವಾರ್ಯವಾಗಿಸಿತು. ಫೆಬ್ರುವರಿ ಕ್ರಾಂತಿಯಂತೆ ಇದರಲ್ಲಿ ಲಕ್ಷಾಂತರ ಜನರ ಭಾಗವಹಿಸುವಿಕೆಯು ಕಾಣುವುದಿಲ್ಲ. ಬದಲಿಗೆ ಬೋಲ್ಷೆವಿಕರು ದಂಗೆಯ ಮೂಲಕ ಅಧಿಕಾರವನ್ನು ವಶಪಡಿಸಿಕೊಂಡರು.

ಅಕ್ಟೋಬರ್ ಕ್ರಾಂತಿಯ ನಂತರ ಯಾವುದೇ ಹೊಂದಾಣಿಕೆಗೆ ಅವಕಾಶವಿರಲಿಲ್ಲ. ಆ ವೇಳೆಗೆ ಬೋಲ್ಷೆವಿಕರು ಮಾತ್ರ ಜನಬೆಂಬಲವಿದ್ದ ಪಕ್ಷವಾಗಿ ಉಳಿದಿದ್ದರು. ಆದರೂ ಮುಂದಿನ ವರ್ಷಗಳಲ್ಲಿ ನಡೆದ ಅಂತರ್ಯುದ್ಧದಲ್ಲಿ ಬೋಲ್ಷೆವಿಕರು ತಮ್ಮ ಎದುರಾಳಿಗಳನ್ನು ಅತ್ಯಂತ ಕ್ರೌರ್ಯದಿಂದ ತೊಡೆದುಹಾಕಿದರು. ರಷ್ಯಾದ ಮುಂದಿದ್ದ ಸವಾಲುಗಳ ಕುರಿತಾಗಿ ಲೆನಿನ್ ಅತ್ಯಂತ ಸ್ಪಷ್ಟವಾದ ನಿಲುವುಗಳನ್ನು ತಳೆದಿದ್ದರು ಹಾಗೂ ಅವುಗಳ ಅನುಷ್ಠಾನವನ್ನು ಯಾವುದೇ ರಾಜಿಯಿಲ್ಲದೆ ಮಾಡಿದರು. ರಷ್ಯಾಕ್ಕೆ ಅವಮಾನವಾಗುವಂತಹ ಷರತ್ತುಗಳನ್ನು ಜರ್ಮನಿ ಹಾಕಿದರೂ ಲೆನಿನ್ ಅವುಗಳನ್ನು ಒಪ್ಪಿ ಮೊದಲನೆಯ ಮಹಾಯುದ್ದದಿಂದ ಹೊರಬಂದರು. ಜಮೀನುದಾರರ ಭೂಮಿಯನ್ನು ಸ್ಥಳೀಯ ಸೋವಿಯತ್‌ಗಳು ವಶಪಡಿಸಿಕೊಂಡು, ಮರುಹಂಚಿಕೆ ಮಾಡಲು ಅವರು ಅವಕಾಶ ನೀಡಿದರು.

ಅಕ್ಟೋಬರ್ ಕ್ರಾಂತಿಯು ನಿಜವಾಗಿ ನಡೆದದ್ದು ನವೆಂಬರ್‌ನಲ್ಲಿ. ಸೋವಿಯತ್ ಒಕ್ಕೂಟ ಸ್ಥಾಪನೆಯಾಗುವ ತನಕ ರಷ್ಯಾ ಜೂಲಿಯನ್ ಕ್ಯಾಲೆಂಡರ್ ಬಳಸುತ್ತಿತ್ತು. ಹಾಗಾಗಿ ಈಗ ವ್ಯಾಪಕವಾಗಿ ಬಳಸುತ್ತಿರುವ ಗ್ರೆಗೋರಿಯನ್ ಕ್ಯಾಲೆಂಡರಿಗಿಂತ 13 ದಿನ ಹಿಂದಿತ್ತು. ಅಂದರೆ ರಷ್ಯಾದ ಅಂದಿನ ಕ್ಯಾಲೆಂಡಿರ್‌ನಲ್ಲಿ ಅಕ್ಟೋಬರ್ 24–26ರವರಗೆ ನಡೆದ ಘಟನೆಗಳು ನಮ್ಮ ಇಂದಿನ ಕ್ಯಾಲೆಂಡರ್‌ನ ಪ್ರಕಾರ ನಡೆದದ್ದು ನವೆಂಬರ್ ಮೊದಲ ವಾರದಲ್ಲಿ. ಆದರೂ ಬೋಲ್ಷೆವಿಕರು ಪ್ರವರ್ಧಮಾನರಾದ ಬೆಳವಣಿಗೆಗಳನ್ನು ಅಕ್ಟೋಬರ್ ಕ್ರಾಂತಿಯೆಂದೇ ಕರೆಯುತ್ತೇವೆ.

ಹೆಸರಿಸುವಲ್ಲಿ ಎಡವಟ್ಟಾಗಿರಬಹುದು. ಆದರೆ ನಾವು ಅಕ್ಟೋಬರ್ ಕ್ರಾಂತಿಯ ಐತಿಹಾಸಿಕ ಪ್ರಾಮುಖ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದು 20ನೆಯ ಶತಮಾನದ ಪ್ರಮುಖ ಘಟನೆಗಳಲ್ಲಿ ಒಂದು ಮತ್ತು 20ನೆಯ ಶತಮಾನದ ಅತ್ಯಂತ ಮುಖ್ಯ ರಾಜಕೀಯ ಪ್ರಯೋಗಕ್ಕೆ ದಾರಿ ಮಾಡಿಕೊಟ್ಟಿತು ಎನ್ನುವುದು ನಿರ್ವಿವಾದ. ಕಾರ್ಮಿಕರ (ಪ್ರೊಲಿಟೇರಿಯಟ್) ಪರಮಾಧಿಕಾರತ್ವವನ್ನು ಸೋವಿಯತ್ ರಷ್ಯಾ ಮತ್ತು ಚೀನಾದಂತಹ ಎರಡು ದೊಡ್ಡ ದೇಶಗಳು ತಮ್ಮ ರಾಜಕೀಯ ವ್ಯವಸ್ಥೆಯಾಗಿ ಸ್ವೀಕರಿಸಿದವು. ಜೊತೆಗೆ ತಮ್ಮ ಕಾಲದ ಅತ್ಯಂತ ದೊಡ್ಡ ಶಕ್ತಿಗಳಾಗಿ ಬೆಳೆದವು. ರಷ್ಯಾದಲ್ಲಿ ಸಮಾಜವಾದಿ ವ್ಯವಸ್ಥೆ ಕುಸಿಯಿತು ಹಾಗೂ ಚೀನಾದಲ್ಲಿ ವ್ಯಾಪಕ ಬದಲಾವಣೆಗಳು ಆಗಿವೆ ಎನ್ನುವುದು ನಿಜವಾದರೂ ಸಮಾಜವಾದದ ಉತ್ಕರ್ಷ 20ನೆಯ ಶತಮಾನದ ಬಹುದೊಡ್ಡ ಪ್ರಯೋಗ. ಉದಾರವಾದಿ ಪ್ರಜಾಪ್ರಭುತ್ವ ತನ್ನ ಪ್ರಬುದ್ಧ ರೂಪವನ್ನು ಹಲವು ದೇಶಗಳಲ್ಲಿ 19ನೆಯ ಶತಮಾನದಲ್ಲಿಯೇ ಕಂಡುಕೊಂಡಿತ್ತು ಎನ್ನುವುದನ್ನು ಸ್ಮರಿಸಬಹುದು.

ಈ ವರ್ಷ ರಷ್ಯಾದ ಕ್ರಾಂತಿಯ ಶತಮಾನೋತ್ಸವ. ಈ ಕ್ರಾಂತಿಯು 20ನೆಯ ಶತಮಾನದ ಅತ್ಯಂತ ಪ್ರಮುಖ ಘಟನೆಯಾಗಿದ್ದರೂ ಇದರ ಬಗ್ಗೆ ರಷ್ಯಾ ಸೇರಿದಂತೆ ಎಲ್ಲಿಯೂ ಅಂತಹ ಸಂಭ್ರಮದಿಂದ ಆಚರಿಸುವ ಉತ್ಸುಕತೆಯೇನೂ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT