ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದನಿವಾರಕ ಸ್ಟಿರಿಯೊ ಹೆಡ್‌ಸೆಟ್

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೊ ಬೈಲ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಇತ್ಯಾದಿಗಳಲ್ಲಿ ಧ್ವನಿಯನ್ನು ಪುನರುತ್ಪತ್ತಿ ಮಾಡಲು ಬಳಕೆಯಾಗುವುದು ಸ್ಪೀಕರ್ ಅಥವಾ ಇಯರ್‌ಫೋನ್‌ಗಳು. ಮೊಬೈಲ್‌ನಲ್ಲಿ ಮಾತನಾಡಲು ಅದರಲ್ಲೇ ಇರುವ ಮೈಕ್ ಮತ್ತು ಸ್ಪೀಕರ್ ಬಳಸಬಹುದು ಅಥವಾ ಮಾತನಾಡುತ್ತ ಕೈಯಲ್ಲಿ ಬೇರೆ ಕೆಲಸ ಮಾಡಬೇಕಿದ್ದರೆ ಹ್ಯಾಂಡ್ಸ್‌ಫ್ರೀ ಬಳಸಬಹುದು. ಇವುಗಳಲ್ಲಿ ಕೇಬಲ್ ಮೂಲಕ ಜೋಡಣೆಗೊಳ್ಳುವ (ವೈರ್‍ಡ್) ಮತ್ತು ನಿಸ್ತಂತು (ಬ್ಲೂಟೂತ್ ವೈರ್‌ಲೆಸ್) ಎಂಬ ಎರಡು ನಮೂನೆಗಳಿವೆ.

ವೈರ್‍ಡ್ ಹೆಡ್‌ಸೆಟ್‌ಗಳಲ್ಲಿ ಮತ್ತೆ ಹಲವು ನಮೂನೆಗಳಿವೆ. ಕಿವಿಯ ಮೇಲೆ ಕುಳಿತುಕೊಳ್ಳವಂಥವು, ಕಿವಿಕಾಲುವೆಯೊಳಗೆ ಹೋಗುವಂಥವು, ಮೈಕ್ರೋಫೋನ್ ಇರುವಂಥವು ಮತ್ತು ಇಲ್ಲದವು, ಶಬ್ದನಿವಾರಕ ಸವಲತ್ತು ಇರುವಂಥವು –ಹೀಗೆ ಹಲವು ನಮೂನೆಗಳಿವೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಸ್ಯಾಮ್‌ಸಂಗ್ ಲೆವೆಲ್ ಇನ್ ಎಎನ್‌ಸಿ ಸ್ಟಿರಿಯೊ ಹೆಡ್‌ಸೆಟ್ (Samsung Level in ANC).

ಇಯರ್‌ಫೋನ್‌ ಅಥವಾ ಹೆಡ್‌ಸೆಟ್‌ಗಳಲ್ಲಿ ಹಲವು ನಮೂನೆಗಳಿವೆ. ಇತ್ತೀಚೆಗೆ ತುಂಬ ಜನಪ್ರಿಯವಾಗುತ್ತಿರುವವು ಇಯರ್‌ಬಡ್‌ಗಳು. ಇವುಗಳಲ್ಲಿ ಧ್ವನಿಯನ್ನು ಪುನರುತ್ಪತ್ತಿ ಮಾಡುವ ಅಂಗ (ಸ್ಪೀಕರ್) ಕಿವಿಕಾಲುವೆಯೊಳಗೆ ಹೋಗಿ ಕುಳಿತುಕೊಳ್ಳುತ್ತದೆ. ಇಂಥವುಗಳ ಜೊತೆ ಬೇರೆ ಬೇರೆ ಗಾತ್ರದ ಕುಶನ್‌ಗಳನ್ನು ನೀಡುತ್ತಾರೆ. ನಿಮ್ಮ ಕಿವಿಕಾಲುವೆಯ ಗಾತ್ರಕ್ಕೆ ಸರಿಹೊಂದುವ ಕುಶನ್ ಬಳಸುವುದು ಅತೀ ಅಗತ್ಯ. ಕಿವಿಕಾಲುವೆಯ ಗೋಡೆಗೆ ಭದ್ರವಾಗಿ ಅಂಟಿ ಕುಳಿತ ಕುಶನ್ ಬಳಸಿದರೆ ಕಡಿಮೆ ಕಂಪನಾಂಕದ ಧ್ವನಿಯ (bass) ಅನುಭವ ಉತ್ತಮವಾಗಿರುತ್ತದೆ.

ಇಂತಹ ಇಯರ್‌ಬಡ್‌ಗಳಲ್ಲೂ ಹಲವು ನಮೂನೆಗಳಿವೆ. ಮಾಮೂಲಿ ಇಯರ್‌ಬಡ್ ಮತ್ತು ಶಬ್ದನಿವಾರಕ ಎಂಬ ಎರಡು ಪ್ರಮುಖ ನಮೂನೆಗಳನ್ನು ಉದಾಹರಿಸಬಹುದು. ಶಬ್ದನಿವಾರಕ ಹೆಡ್‌ಸೆಟ್‌ಗಳಲ್ಲಿ ಹೊರಗಡೆಯ ಶಬ್ದವನ್ನು ನಿವಾರಿಸಿ ಸಂಗೀತವನ್ನು ಮಾತ್ರವೇ ಕಿವಿಗೆ ತಲುಪಿಸಲಾಗುತ್ತದೆ.

ಇಂತಹ ಹೆಡ್‌ಸೆಟ್‌ಗಳಿಗೆ ಸಾಮಾನ್ಯವಾಗಿ ₹15,000ಕ್ಕಿಂತ ಹೆಚ್ಚು ಬೆಲೆಯಿರುತ್ತದೆ. ಈ ಸಲ ವಿಮರ್ಶೆ ಮಾಡುತ್ತಿರುವ ಸ್ಯಾಮ್‌ಸಂಗ್‌ ಲೆವೆಲ್ ಇನ್ ಎಎನ್‌ಸಿ ಹೆಡ್‌ಸೆಟ್ ಒಂದು ಶಬ್ದನಿವಾರಕ ಹೆಡ್‌ಸೆಟ್. ಆದರೆ ಇದರ ಬೆಲೆ ಕೇವಲ ₹3,799.

ಇದು ವೈರ್‍ಡ್ ಹೆಡ್‌ಸೆಟ್. ಎಡ ಮತ್ತು ಬಲ ಇಯರ್‌ಬಡ್‌ಗಳನ್ನು ಕೇಬಲ್ ಮೂಲಕ 3.5 ಮಿ.ಮೀ. ಇಯರ್‌ಫೋನ್ ಕನೆಕ್ಟರ್‌ಗೆ ಜೋಡಿಸಲಾಗಿದೆ. ಈ ಕನೆಕ್ಟರ್‌ನ ಪಕ್ಕದಲ್ಲಿ ಶಬ್ದನಿವಾರಕ ಮಾಡ್ಯೂಲ್ ಇದೆ. ಇದರೊಳಗಡೆ ರಿಚಾರ್ಜೆಬಲ್ ಬ್ಯಾಟರಿ ಇದೆ. ಅದನ್ನು ಚಾರ್ಜ್ ಮಾಡಲು ಒಂದು ಮೈಕ್ರೊಯುಎಸ್‌ಬಿ ಕಿಂಡಿ ಇದೆ. ಇದನ್ನು ಬಳಸಿ ಚಾರ್ಜ್ ಮಾಡಬಹುದು. ಆದರೆ ಚಾರ್ಜರ್ ನೀಡಿಲ್ಲ. ಇದರಲ್ಲಿ ಒಂದು ಬಟನ್ ಇದೆ. ಅದಕ್ಕೆ ಮೂರು ಆಯ್ಕೆಗಳಿವೆ –ಆಫ್, ಮಾತನಾಡಲು ಮತ್ತು ಶಬ್ದನಿವಾರಕ (ಎಎನ್‌ಸಿ).ಎಎನ್‌ಸಿ (Active Noise Cancellation) ಎಂದು ಆಯ್ಕೆ ಮಾಡಿಕೊಂಡರೆ ಆಗ ಹೊರಗಿನ ಗದ್ದಲವು ಸುಮಾರು 20 ಡೆಸಿಬಲ್‌ಗಳಷ್ಟು ಕಡಿಮೆಯಾಗುತ್ತದೆ. ಈ ಶಬ್ದನಿವಾರಣೆ ಅಂತಹ ಅದ್ಭುತ ಎಂದೇನೂ ಅನ್ನಿಸುವುದಿಲ್ಲ. ಯಾಕೆಂದರೆ ಇದಕ್ಕಿಂತ ಅದ್ಭುತವಾದ ಶಬ್ದನಿವಾರಣೆಯ ಹೆಡ್‌ಸೆಟ್‌ಗಳನ್ನು ನಾನು ಬಳಸಿ ನೋಡಿದ್ದೇನೆ. ಆದರೆ ಈ ಬೆಲೆಗೆ ಶಬ್ದ ನಿವಾರಣೆಯ ಸವಲತ್ತು ನೀಡುತ್ತಿರುವುದು ಬಹುಶಃ ಈ ಹೆಡ್‌ಸೆಟ್ಟೇ ಇರಬಹುದೇನೋ?

ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಬ್ಯಾಟರಿ ಸುಮಾರು 9 ಗಂಟೆಗಳ ಕಾಲ ಶಬ್ದನಿವಾರಕವಾಗಿ ಕೆಲಸ ಮಾಡುತ್ತದೆ. ನಂತರವೂ ಇಯರ್‌ಬಡ್ ಬಳಸಬಹುದು. ಆದರೆ ಆಗ ಶಬ್ದನಿವಾರಕವಾಗಿ ಬಳಸಲು ಆಗುವುದಿಲ್ಲ.

ಬಲ ಸ್ಪೀಕರಿನಿಂದ ಸುಮಾರು 5 ಇಂಚು ದೂರದಲ್ಲಿ ಮೂರು ಬಟನ್‌ಗಳಿರುವ ಮಾಡ್ಯೂಲ್ ಇದೆ. ಇದರಲ್ಲಿರುವ ಬಟನ್‌ಗಳಲ್ಲಿ ಮಧ್ಯದ ಬಟನ್ ಫೋನ್ ಬಳಕೆಯಲ್ಲಿ ಕರೆ ಸ್ವೀಕರಿಸುವ ಮತ್ತು ನಿಲ್ಲಿಸುವ ಬಟನ್ ಆಗಿ ಕೆಲಸ ಮಾಡುತ್ತದೆ. ಸಂಗೀತ ಆಲಿಸುವಾಗ ಇದೇ ಬಟನ್ ಸಂಗೀತವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮತ್ತು ಪುನಃ ಪ್ಲೇ ಮಾಡುವ (pause/play) ಬಟನ್ ಆಗಿ ಕೆಲಸ ಮಾಡುತ್ತದೆ. ಈ ಬಟನ್‌ನ ಒಂದು ಪಕ್ಕದಲ್ಲಿ ವಾಲ್ಯೂಮ್ ಹೆಚ್ಚು ಮಾಡುವ ಮತ್ತು ಇನ್ನೊಂದು ಪಕ್ಕದಲ್ಲಿ ವಾಲ್ಯೂಮ್ ಕಡಿಮೆ ಮಾಡುವ ಬಟನ್ ಇವೆ. ಇದೇ ಬಟನ್‌ಗಳು ಸಂಗೀತ ಆಲಿಸುವಾಗ ಹಿಂದಿನ ಅಥವಾ ಮುಂದಿನ ಹಾಡಿಗೆ ಲಂಘನ ಮಾಡಲೂ ಬಳಕೆಯಾಗುತ್ತವೆ.

ಎಡ ಬಲ ಸ್ಪೀಕರುಗಳ ವಿನ್ಯಾಸ ಚೆನ್ನಾಗಿದೆ. ಕಿವಿ ಕಾಲುವೆಯೊಳಗೆ ತುರುಕಿಸಿದರೆ ಸುಲಭದಲ್ಲಿ ಕಳಚಿ ಬೀಳುವುದಿಲ್ಲ. ಈ ಇಯರ್‌ಬಡ್‌ಗಳಿಗೆ 4 ಪ್ರತಿ ಕುಶನ್ ನೀಡಿದ್ದಾರೆ. ನಿಮ್ಮ ಕಿವಿಕಾಲುವೆಯ ಗಾತ್ರಕ್ಕೆ ಸರಿಹೊಂದುವ ಕುಶನ್ ಬಳಸುವುದು ಅತೀ ಅಗತ್ಯ. ತಪ್ಪಿದಲ್ಲಿ ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿ ತೃಪ್ತಿದಾಯಕವಾಗಿರುವುದಿಲ್ಲ. ಈ ಸ್ಪೀಕರುಗಳಿಗೆ ಜೋಡಿಸಲು ಕಿವಿಯೊಳಗೆ ಸರಿಯಾಗಿ ಕುಳ್ಳಿರಿಸಲು ಎರಡು ರೆಕ್ಕೆ ನೀಡಿದ್ದಾರೆ. ಅವುಗಳಿಂದ ವಿಶೇಷ ಪ್ರಯೋಜನವಿದೆ ಎಂದು ನನಗೆ ಅನ್ನಿಸಲಿಲ್ಲ. ಅವು ಬೇಡ ಎಂದರೆ ಅವನ್ನು ಕಳಚಿಡಬಹುದು.

ಧ್ವನಿಯ ಗುಣಮಟ್ಟ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಧ್ವನಿಯಲ್ಲಿ ನಿಖರತೆ ಇದೆ. ಕಡಿಮೆ ಕಂಪನಾಂಕದ ಧ್ವನಿಯ ಪುನರುತ್ಪತ್ತಿ ಅಷ್ಟು ತೃಪ್ತಿದಾಯಕವಾಗಿಲ್ಲ. ಮಾನವ ಧ್ವನಿಯ ಪುನರುತ್ಪತ್ತಿ ಉತ್ತಮವಾಗಿದೆ, ಅಂದರೆ ಈ ಹೆಡ್‌ಸೆಟ್ ಗಾಯನವನ್ನು ಆಲಿಸಲು ಉತ್ತಮ, ವಾದ್ಯಸಂಗೀತ ಆಲಿಸಲು ಸಾಲದು. ನೀಡುವ ಹಣಕ್ಕೆ ಹೋಲಿಸಿದರೆ ಖಂಡಿತವಾಗಿಯೂ ತೃಪ್ತಿ ನೀಡುವ ಹೆಡ್‌ಸೆಟ್ ಎನ್ನಬಹುದು. ಯಾಕೆಂದರೆ ಇಷ್ಟು ಕಡಿಮೆ ಬೆಲೆಗೆ ಶಬ್ದ ನಿವಾರಣೆಯ ಸವಲತ್ತು ನೀಡುವ ಹೆಡ್‌ಸೆಟ್ ಬೇರೊಂದಿಲ್ಲ.

*


ವಾರದ ಆ್ಯಪ್‌(app): ಬಾಣ ಬಿಡಿ
ಬಾಣ ಬಿಡುವುದರಲ್ಲಿ ಭಾರತೀಯರು ಎತ್ತಿದ ಕೈ ಎನ್ನಬಹುದೇನೋ? ಚಿಕ್ಕಂದಿನಲ್ಲಿ ಬಿಲ್ಲು ಬಾಣ ತಯಾರಿಸಿ ಆಡಿರಬಹುದಲ್ಲವೇ? ಈಗೇನೋ ಅಂಥವೆಲ್ಲ ಅಂಗಡಿಯಲ್ಲೇ ದೊರೆಯುತ್ತವೆ. ಇರಲಿ. ಅದನ್ನೆಲ್ಲ ನಿಮ್ಮ ಆ್ಯಂಡ್ರಾಯ್ಡ್ ಫೋನಿನಲ್ಲೇ ಆಡಬೇಕೇ? ಅದಕ್ಕೂ ಬೇಕಾದಷ್ಟು ಕಿರುತಂತ್ರಾಂಶಗಳು (ಆ್ಯಪ್) ಲಭ್ಯವಿವೆ. ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದಲ್ಲಿ ನಿವು ಗೂಗಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Archery Black ಎಂದು ಹುಡುಕಿ ಅಥವಾ http://bit.ly/gadgetloka321 ಜಾಲತಾಣಕ್ಕೆ ಭೇಟಿ ನೀಡಿ. ಇದೇನೂ ಅದ್ಭುತ ಕಿರುತಂತ್ರಾಂಶವೇನಲ್ಲ. ಸ್ವಲ್ಪ ಸಮಯ ಆಡಿ ಬೇಜಾರಾದಾಗ ಅಳಿಸಿಹಾಕಬಹುದು.

*
ಗ್ಯಾಜೆಟ್‌ ಪದ: e-Book (ಇ-ಬುಕ್) = ವಿದ್ಯುನ್ಮಾನ ಪುಸ್ತಕ
ಇ-ಬುಕ್ ರೀಡರ್, ಲ್ಯಾಪ್‌ಟಾಪ್, ಗಣಕ, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಮುಂತಾದ ಸಾಧನಗಳಲ್ಲಿ ಓದಬಹುದಾದ ವಿದ್ಯುನ್ಮಾನ ರೂಪದ ಪುಸ್ತಕ. ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವಾಗ ಯಾವ ಅನುಭವ ಆಗುತ್ತದೆಯೋ ಅದಕ್ಕೆ ಸಮೀಪವಾದ ಅನುಭವವಾಗುವಂತೆ ಈ ಇ-ಬುಕ್‌ಗಳ ವಿನ್ಯಾಸ ಆಗಿರುತ್ತದೆ. ಪದಸಂಸ್ಕರಣೆ (word processing) ಮತ್ತು ಪುಟವಿನ್ಯಾಸದ (DTP = Desktop Publishing) ತಂತ್ರಾಂಶಗಳಿಂದ ವಿದ್ಯುನ್ಮಾನ ಪುಸ್ತಕ ರೂಪಕ್ಕೆ ಬದಲಾಯಿಸುವ ಹಲವು ತಂತ್ರಾಂಶ ಸವಲತ್ತುಗಳು ಲಭ್ಯವಿವೆ.

*
ಗ್ಯಾಜೆಟ್‌ ತರ್ಲೆ
ಆ್ಯಪಲ್ ಕಂಪನಿ ಇತ್ತೀಚೆಗೆ ಹೋಮ್‌ಪೋಡ್ ಎಂಬ ಗ್ಯಾಜೆಟ್ ಬಿಡುಗಡೆ ಮಾಡಿದೆ. ಇದು ಒಂದು ಸ್ಪೀಕರ್ ಮಾತ್ರವಲ್ಲ ಅಮೆಜಾನ್ ಅಲೆಕ್ಸಾ ಮಾದರಿಯಲ್ಲಿ ಐಫೋನ್‌ನಲ್ಲಿರುವ ಸಿರಿ ತಂತ್ರಾಂಶ ಜೊತೆ ಸೇರಿ ಹಲವು ಕೆಲಸಗಳನ್ನೂ ಮಾಡುತ್ತದೆ. ವಿಷಯ ಅದಲ್ಲ. ಇದರಲ್ಲಿ ಉತ್ತಮ ವೂಫರ್ ಅಂದರೆ ಅತಿ ಕಡಿಮೆ ಕಂಪನಾಂಕದ ಧ್ವನಿಗಳನ್ನು ಪುನರುತ್ಪತ್ತಿ ಮಾಡುವ ಸ್ಪೀಕರ್ ಇದೆ. ಅದರ ಕಂಪನದಿಂದಾಗಿ ಈ ಹೋಮ್‌ಪೋಡ್ ಇಟ್ಟ ಮರದ ಮೇಜಿನ ಮೇಲಿನ ಲ್ಯಾಮಿನೇಶನ್ ಪದರ ಹಾಳಾಗುತ್ತಿವೆ ಎಂಬ ವರದಿ ಅಮೆರಿಕದಿಂದ ಬಂದಿದೆ.

*
ಗ್ಯಾಜೆಟ್‌ ಸಲಹೆ
ಗಣೇಶರ ಪ್ರಶ್ನೆ: ನನ್ನ ಹತ್ತಿರ ಮೈಕ್ರೋಮ್ಯಾಕ್ಸ್ ಕಾನ್ವಾಸ್ 2.2 A114 ಮೊಬೈಲ್ ಇದೆ. ಅದನ್ನು 4g voLTE ಗೆ ಪರಿವರ್ತಿಸಲು ಸಾಧ್ಯವೆ ಮತ್ತು ಅದು ಹೇಗೆ?
ಉ: ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT