ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರದ್ ಪವಾರ್ ಎಂಬ ರಾಷ್ಟ್ರೀಯ ಶಾಪ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ಪಕ್ಷಾಂತರ, ಭ್ರಷ್ಟಾಚಾರ, ವಿಶ್ವಾಸದ್ರೋಹ, ಆತ್ಮವಂಚನೆ,ಕರ್ತವ್ಯಲೋಪ, ಸ್ವಜನಪಕ್ಷಪಾತ, ....ಹೀಗೆ ರಾಜಕಾರಣಿಗಳಿಗೆ ಇರುವ ಎಲ್ಲ ದುರ್ಗುಣಗಳನ್ನು ಹೊಂದಿಯೂ ಅವು   ಗಳಿಂದ ಯಾವುದೇ ಹಿನ್ನಡೆ ಅನುಭವಿಸದೆ   ದಶಕಗಳ ಕಾಲ ವರ್ಚಸ್ಸನ್ನು ಉಳಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತವಾಗಿ ಉಳಿಯಲು ಸಾಧ್ಯವೇ? ಸಾಧ್ಯ ಇದೆ, ಅದಕ್ಕಾಗಿ   ಶರದ್‌ಚಂದ್ರ ಗೋವಿಂದರಾವ್ ಪವಾರ್   ಅವರಂತಹ ರಾಜಕಾರಣಿ ಆಗಬೇಕಾಗುತ್ತದೆ. ಸುಮಾರು ಅರ್ಧಶತಮಾನದಷ್ಟು ಸುದೀರ್ಘವಾದ ತನ್ನ ರಾಜಕೀಯ ಜೀವನದಲ್ಲಿ ಶರದ್ ಪವಾರ್, ಭಾರತದ ಇಂದಿನ ರಾಜಕಾರಣಿ ಸಾಮಾನ್ಯವಾಗಿ ಮಾಡುತ್ತಿರುವ ಯಾವ ಕೆಟ್ಟ ಕೆಲಸವನ್ನು ಮಾಡದೆ ಬಿಟ್ಟಿಲ್ಲ, ಅವರು ಎದು ರಿಸದ ಆರೋಪಗಳೇ ಇಲ್ಲ. ಆದರೆ ಇದ್ಯಾವುದೂ ಅವರನ್ನು ಏಳುವರ್ಷಗಳ ಕಾಲ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದನ್ನು, ಒಟ್ಟು ಒಂಬತ್ತು ವರ್ಷಗಳ ಕಾಲ ಕೇಂದ್ರ ಸಚಿವರಾಗುವುದನ್ನು, ಬಿಸಿಸಿಐ,ಐಸಿಸಿಐ ಅಧ್ಯಕ್ಷರಾಗುವುದನ್ನು, ಇನ್ನೇನೋ          ಆಗುವುದನ್ನು ತಡೆಯಲಿಲ್ಲ.

ಬೆಲೆ ಏರಿಕೆಯಿಂದ ತತ್ತರಿಸಿಹೋಗಿರುವ ದೇಶದ ಜನ ಬೆಳಿಗ್ಗೆ ಎದ್ದು ಸಚಿವ ಪವಾರ್‌ಗೆ ಶಾಪ ಹಾಕುತ್ತಿದ್ದಾರೆ, ಭುಗಿಲೇಳುತ್ತಿರುವ ಜನಾಕ್ರೋಶದಿಂದ ಯುಪಿಎ ಸರ್ಕಾರ ತಲ್ಲ   ಣಿಸುತ್ತಿದೆ. ಹೀಗಿದ್ದರೂ ಅಧಿಕಾರದಲ್ಲಿರುವ ಸರ್ವಶಕ್ತ ಕಾಂಗ್ರೆಸ್ ಪಕ್ಷ ಅವರನ್ನು ಸಹಿಸಿಕೊಂಡಿದೆ, ವಿರೋಧಪಕ್ಷಗಳು ಅವರನ್ನು ಕಾಟಾಚಾರಕ್ಕೆ ಟೀಕಿಸುತ್ತವೆ. ಮಾಧ್ಯಮಗಳು ಅವರನ್ನು ಬಯಲು ಮಾಡಲು ಹೋಗುವುದಿಲ್ಲ, ಮೆತ್ತಗೆ ಕುಟುಕುತ್ತಾ ಇರುತ್ತವೆ. ದೇಶದ ರಾಜಕೀಯ ಇತಿಹಾಸವನ್ನೆಲ್ಲ ಜಾಲಾಡಿದರೂ ಪವಾರ್ ಜತೆ ಹೋಲಿಸಬಹುದಾದ ಇನ್ನೊಬ್ಬ ‘ಅದೃಷ್ಟಶಾಲಿ’ ರಾಜಕಾರಣಿ ಖಂಡಿತ ಸಿಗಲಾರರು.

ಈ ಮರಾಠ ಸರದಾರನ ರಾಜಕೀಯ ಶಕ್ತಿ, ಅವರಿಗೆ ಇರುವ ಅಪಾರವಾದ ಜನಬೆಂಬಲದಿಂದ ಬಂದಿದೆ ಎಂದು ಹೇಳುವ ಹಾಗೂ ಇಲ್ಲ. ಕರುಣಾನಿಧಿ, ಲಾಲುಪ್ರಸಾದ್, ಮುಲಾಯಂಸಿಂಗ್, ಮಾಯಾವತಿ, ನವೀನ್ ಪಟ್ನಾಯಕ್ ಮೊದಲಾದ ಪ್ರಾದೇಶಿಕ ಪಕ್ಷಗಳ ನಾಯಕರಂತೆ ಶರದ್ ಪವಾರ್ ನಾಯಕರಾಗಿ ಒಂದು ಬಾರಿಯೂ ಮಹಾರಾಷ್ಟ್ರದಲ್ಲಿ  ಯಾವ ಪಕ್ಷವನ್ನೂ ಪೂರ್ಣ ಗೆಲುವಿನ ಹಾದಿಯಲ್ಲಿ ಮುನ್ನಡೆಸಿಲ್ಲ. ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದು ಕೂಡಾ ಒಂದೋ ಪಕ್ಷಾಂತರ ಮಾಡಿ, ಇಲ್ಲವೇ ಬೇರೆ ಪಕ್ಷಗಳನ್ನು ಒಡೆದು,ಇಲ್ಲವೇ ತಮ್ಮ ಪಕ್ಷದವರ ವಿರುದ್ಧವೇ ಪಿತೂರಿ ಮಾಡಿ. ಮಹಾರಾಷ್ಟ್ರದ ಹಿರಿಯ  ನಾಯಕ ವಸಂತದಾದಾ ಪಾಟೀಲ್ ಅವರ ಶಿಷ್ಯರಾಗಿ ರಾಜಕೀಯ ಪ್ರವೇಶಿಸಿದ ಪವಾರ್ ಅವರ ಸಂಪುಟದಲ್ಲಿದ್ದುಕೊಂಡೇ ಕಾಂಗ್ರೆಸ್ ಪಕ್ಷವನ್ನು ಒಡೆದು ಮುಖ್ಯಮಂತ್ರಿಯಾಗುವ ಮೂಲಕ ಗುರುವಿಗೆ ತಿರುಮಂತ್ರ ಹೇಳಿದವರು. ಆದರೆ ಎರಡು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಪವಾರ್ ಪಕ್ಷ ದೂಳೀಪಟವಾಯಿತು. 1985ರ ಚುನಾವಣೆಯಲ್ಲಿ ಎಲ್ಲ ವಿರೋಧ ಪಕ್ಷಗಳು ಬೆಂಬಲಿಸಿದರೂ  ಪವಾರ್ ಪಕ್ಷ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಗೆದ್ದದ್ದು 54 ಸ್ಥಾನ ಮಾತ್ರ. ಒಂದು ವರ್ಷದ ನಂತರ ಅವರು ಮತ್ತೆ ರಾಜೀವ್‌ಗಾಂಧಿ ಪದತಲದಲ್ಲಿದ್ದರು.1988ರಲ್ಲಿ      ಉಳಿದೆಲ್ಲ ಕಾಂಗ್ರೆಸ್ ನಾಯಕರನ್ನು ಪಕ್ಕಕ್ಕೆ ಸರಿಸಿ ಕಾಂಗ್ರೆಸ್ ಪಕ್ಷದಿಂದ ಎರಡನೇ ಬಾರಿ ಮುಖ್ಯಮಂತ್ರಿಯೂ ಆಗಿಬಿಟ್ಟರು.

1990ರಲ್ಲಿ ಶರದ್‌ಪವಾರ್ ನಾಯಕತ್ವದಲ್ಲಿಯೇ ಕಾಂಗ್ರೆಸ್ ವಿಧಾನಸಭಾ ಚುನಾವಣೆಯನ್ನು ಎದುರಿಸಿತು. ಆದರೆ ಬಹುಮತ     ಬರಲಿಲ್ಲ. ಸುಮ್ಮನಿರದ ಪವಾರ್ ಶಿವಸೇನೆಯನ್ನೇ ಒಡೆದು ಬಹುಮತ ಗಳಿಸಿಕೊಂಡು ಮೂರನೇ ಬಾರಿ ಮುಖ್ಯಮಂತ್ರಿಯಾದರು. ಇದಾದ ನಂತರ ಅವರಿಗೆ ದೇಶದ ಪ್ರಧಾನಿ  ಯಾಗುವ ಕನಸು ಬೀಳತೊಡಗಿತ್ತು. ರಾಜೀವ್‌ಗಾಂಧಿ ಹತ್ಯೆಯ ನಂತರ ಪ್ರಧಾನಿಯಾಗುವ ಅವರ ಆಸೆ ಇನ್ನಷ್ಟು ಬಲವಾಗತೊಡಗಿತು. ಅಲ್ಲಿಯ ವರೆಗೆ ಕೇಂದ್ರದಲ್ಲಿ ಸಚಿವರೂ  ಆಗದಿದ್ದ, ಕನಿಷ್ಠ ಕಾಂಗ್ರೆಸ್ ಕಾರ್ಯಕಾರಿ       ಸಮಿತಿಯ ಸದಸ್ಯರೂ ಆಗದ ಪವಾರ್ ಅವರು ಪಿ.ವಿ.ನರಸಿಂಹರಾವ್, ಪ್ರಣಬ್ ಮುಖರ್ಜಿ, ಅರ್ಜುನ್‌ಸಿಂಗ್, ಎನ್.ಡಿ.ತಿವಾರಿ ಮೊದಲಾದ ಹಿರಿತಲೆಗಳನ್ನು ಹಿಂದಕ್ಕಟ್ಟಿ ಪ್ರಧಾನಿ ಪಟ್ಟದತ್ತ ದೃಷ್ಟಿ ನೆಟ್ಟಿದ್ದರು.   ಸಾಮಾನ್ಯವಾಗಿ ರಾಷ್ಟ್ರರಾಜಕಾರಣ ಪ್ರವೇಶಿಸಬಯಸುವ ದಕ್ಷಿಣದ ರಾಜಕಾರಣಿಗಳನ್ನು ಬೆಂಬಲಿಸದ ರಾಷ್ಟ್ರೀಯ ಪತ್ರಿಕೆಗಳು  ಆ ಕಾಲದಲ್ಲಿ ಪವಾರ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸತೊಡಗಿ ಅಚ್ಚರಿ ಮೂಡಿಸಿದ್ದವು.

ಅಷ್ಟು ಹೊತ್ತಿಗೆ ಪವಾರ್ ಬೆಂಬಲಿಗ ಸುಧಾಕರ್ ನಾಯಕ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಇತ್ತ ಪ್ರಧಾನಿಯಾಗುವ ಕನಸು ಭಗ್ನಗೊಂಡಿತ್ತು, ಅತ್ತ ನಾಯಕ್  ನಿಯಂತ್ರಣ ಮೀರಿ ಬೆಳೆಯುತ್ತಿದ್ದರು. ಆ ಸಂದರ್ಭದಲ್ಲಿ ಪವಾರ್ ಮಾಡಿರುವ ರಾಜಕೀಯ ತನಿಖೆಗೆ ಯೋಗ್ಯವಾದುದು. (ಮುಂಬೈ ಬಾಂಬು ಸ್ಫೋಟದ ನಂತರ ಕೋಮುಗಲಭೆ ಸ್ಫೋಟಗೊಂಡಾಗ ಸೇನೆಯನ್ನು ಕಳುಹಿಸಲು ಪವಾರ್ ವಿಳಂಬ ಮಾಡಿದ್ದನ್ನು ಆ ಗಲಭೆ ಬಗ್ಗೆ ನ್ಯಾಯಾಂಗ ತನಿಖೆ ಮಾಡಿದ್ದ ನ್ಯಾಯಮೂರ್ತಿ ಶ್ರಿಕೃಷ್ಣ ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ) ಆಗಲೇ ಗಲಭೆ ನಿಯಂತ್ರಣದಲ್ಲಿ    ಸುಧಾಕರ್ ನಾಯಕ್ ವಿಫಲರಾಗಿದ್ದಾರೆ ಎಂಬ ಸುದ್ದಿಗೆ ರೆಕ್ಕೆಪುಕ್ಕ ಹುಟ್ಟಿಕೊಂಡದ್ದು.  ಕೊನೆಗೆ ಅವರು ರಾಜೀನಾಮೆ ನೀಡಬೇಕಾಯಿತು. ಪವಾರ್ ನಾಲ್ಕನೇ ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದು ಹೀಗೆ. ಆದರೆ ಮರುವರ್ಷ ಪವಾರ್ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಪಕ್ಷ ಸೋತು        ಹೋಯಿತು. ಈ ಮೂಲಕ ಮಹಾರಾಷ್ಟ್ರದಲ್ಲಿ ಮೊದಲ ಬಾರಿ ಶಿವಸೇನೆ-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲು ಪವಾರ್ ಕಾರಣರಾದರು.

ಕಾಂಗ್ರೆಸ್‌ಪಕ್ಷದಲ್ಲಿಯೇ ಇದ್ದುಕೊಂಡು ಪ್ರಾರಂಭದಿಂದಲೂ ಸೋನಿಯಾಗಾಂಧಿ ರಾಜಕೀಯ ಪ್ರವೇಶ ಮಾಡಬೇಕೆಂದು ಒತ್ತಾಯಿಸುತ್ತಿದ್ದವರು ಪವಾರ್. ಆದರೆ 1999ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮೀಪ ಬರುತ್ತಿದ್ದಂತೆಯೇ ಪವಾರ್ ಅವರಿಗೆ ಸೋನಿಯಾಗಾಂಧಿಯವರ ವಿದೇಶಿ ಮೂಲ ಇರುಸುಮುರುಸು ಮಾಡತೊಡಗಿತ್ತು. ಅದನ್ನು ಪ್ರಶ್ನಿಸಿದ ಪವಾರ್ ಅವರನ್ನು ಕಾಂಗ್ರೆಸ್ ಉಚ್ಚಾಟಿಸಿತು. ಬೆಂಬಲಿಗರೊಂದಿಗೆ ನ್ಯಾಷನಲ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿ ಚುನಾವಣೆ ಎದುರಿಸಿದ ಪವಾರ್ ಅವರಿಗೆ  ಬಹುಮತ ಬರಲಿಲ್ಲ. ಆಗ ಅವರಿಗೆ ಮತ್ತೆ ಕಾಂಗ್ರೆಸ್ ನೆನಪಾಗಿದೆ. ತಿಂಗಳುಗಳ ಹಿಂದೆ ತನ್ನನ್ನು ಹೊರಹಾಕಿದ್ದ ಕಾಂಗ್ರೆಸ್ ಪಕ್ಷದ ಜತೆಯಲ್ಲಿಯೇ ಸೇರಿಕೊಂಡು ಸರ್ಕಾರ ರಚಿಸಿದರು. ಆಗ ಸೋನಿಯಾಗಾಂಧಿ ವಿದೇಶಿ ಮೂಲದ ವಿವಾದವನ್ನು ಮರೆತೇಬಿಟ್ಟಿದ್ದರು. ಇದು ಪವಾರ್ ಸಾಗಿಬಂದ ಪಕ್ಷಾಂತರ, ಆತ್ಮವಂಚನೆ, ವಿಶ್ವಾಸದ್ರೋಹದ  ರಾಜಕೀಯದ ಹಾದಿ.

ಪವಾರ್ ಭ್ರಷ್ಟಾಚಾರದ ಬಗ್ಗೆ ಮಹಾರಾಷ್ಟ್ರದಲ್ಲಿ ದಂತಕತೆಗಳಿವೆ. ಕರ್ನಾಟಕದಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ನೋಟಿಫಿ ಕೇಷನ್, ಡಿನೋಟಿಫಿಕೇಷನ್, ಕನವರ್ಶನ್ ಭಾನಗಡಿಗಳೆಲ್ಲ ಮಹಾರಾಷ್ಟ್ರದಲ್ಲಿ ಪವಾರ್ ಕಾಲದಲ್ಲಿ ಎಂದೋ ನಡೆದು ಹೋಗಿದೆ. ಕೋಟ್ಯಂತರ ರೂಪಾಯಿ ಮೊತ್ತದ ಗೋಧಿ ಆಮದು ಹಗರಣ ಮತ್ತು ಪವಾರ್ ಮಾತ್ರವಲ್ಲ ಅವರ ಮಗಳು ಮತ್ತು ಅಳಿಯನನ್ನೊಳಗೊಂಡ ಮಹಾರಾಷ್ಟ್ರ ಕೃಷ್ಣಾ ಕಣಿವೆ ಅಭಿವೃದ್ದಿ ನಿಗಮದ ಅಕ್ರಮದ ಆರೋಪಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಮುಂಬೈ ಭೂಗತ ಜಗತ್ತು ಮತ್ತು ಪವಾರ್ ಸಂಬಂಧ ಜನಜನಿತ. ಇವೆಲ್ಲವನ್ನೂ ಪವಾರ್ ತನಗೆ ಇರುವ ರಾಜಕೀಯ ಬಲದಿಂದ ಅರಗಿಸಿಕೊಂಡಿದ್ದಾರೆ. ಪವಾರ್ ಅಕ್ರಮಗಳನ್ನು ಬಯಲಿಗೆಳೆಯಲು ಹೋದ ಮುಂಬೈ ಮಹಾನಗರಪಾಲಿಕೆಯ ಉಪಆಯುಕ್ತ ಜಿ.ಆರ್.ಖೈರ್ನಾರ್  ಮತ್ತು ಸಮಾಜ ಸೇವಕ ಅಣ್ಣಾ ಹಜಾರೆ ಅವರು ಪವಾರ್ ಪ್ರಭಾವದ ಎದುರು ಒಂಟಿಯಾಗಬೇಕಾಯಿತು. ಇದು ಶರದ್ ಪವಾರ್ ಮಹಾತ್ಮೆ.

 ಶರದ್ ಪವಾರ್ ಕಳೆದ ಏಳು ವರ್ಷಗಳಿಂದ ಕೇಂದ್ರ ಕೃಷಿ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಸಚಿವರು. ಸಾಮಾನ್ಯವಾಗಿ ಯಾವುದೇ ಕ್ಷೇತ್ರದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿದವರನ್ನು  ಆ ಕ್ಷೇತ್ರಕ್ಕೆ ಸಚಿವರನ್ನಾಗಿ ಮಾಡಲಾಗುವುದಿಲ್ಲ. ಶರದ್‌ಪವಾರ್ ಅವರ ಪ್ರಾಥಮಿಕ ಆಸಕ್ತಿ ಇರುವುದೇ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ. ಕೃಷಿ ಆಧರಿತ ಆರ್ಥಿಕತೆಯ ರಾಜ್ಯದಲ್ಲಿ ಸಹಕಾರಿ ರಂಗದ ಪಾತ್ರ ನಿರ್ಣಾಯಕವಾದುದು. ಪವಾರ್ ರಾಜಕೀಯಕ್ಕೆ ಬೇಕಾಗಿರುವ ಶಕ್ತಿ ಪಡೆದುಕೊಂಡಿರುವುದೇ ಮಹಾರಾಷ್ಟ್ರದ ಸಹಕಾರ ಕ್ಷೇತ್ರದ ಮೇಲಿನ ನಿಯಂತ್ರಣದಿಂದ. ಸುಮಾರು ಹನ್ನೆರಡು ಸಾವಿರ ಕೋಟಿ ರೂಪಾಯಿ ಠೇವಣಿ ಹೊಂದಿರುವ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಪವಾರ್ ಮುಷ್ಠಿಯೊಳಗಿದೆ. ಈ ಸಂಘದ ಸದಸ್ಯತ್ವ ಹೊಂದಿರುವ 169 ಸಕ್ಕರೆ ಕಾರ್ಖಾನೆಗಳಲ್ಲಿ 95 ಪವಾರ್ ನಿಯಂತ್ರಣದಲ್ಲಿದೆಯಂತೆ.  ಇಂತಹ ಪವಾರ್ ಇದ್ದಕ್ಕಿದ್ದಂತೆ ಒಂದು ದಿನ ಸಕ್ಕರೆ ಬೆಲೆ ಏರಬಹುದೆಂಬ ಆತಂಕವನ್ನು ದೇಶಕ್ಕೆಲ್ಲ ಗೊತ್ತಾಗುವಂತೆ ಕೂಗಿಕೂಗಿ ವ್ಯಕ್ತಪಡಿಸುತ್ತಾರೆ. ಮರುದಿನ ಸಕ್ಕರೆ ಬೆಲೆ ಗಗನಕ್ಕೇರುತ್ತದೆ, ಈರುಳ್ಳಿ ಬೆಲೆ ಮೂರು ವಾರಗಳ ಕಾಲ ಇಳಿಯಲಾರದು ಎಂದು ಭವಿಷ್ಯ ನುಡಿಯುತ್ತಾರೆ, ಮರುದಿನದಿಂದ ಬೆಲೆ ಇನ್ನಷ್ಟು ಮೇಲೇರುತ್ತದೆ. ಏರುತ್ತಿರುವ ತರಕಾರಿ, ಹಣ್ಣು, ಧಾನ್ಯಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆ ಹಾಹಾಕಾರ ಮಾಡುತ್ತಿದ್ದರೆ ‘ಇವೆಲ್ಲ ನನ್ನೊಬ್ಬನ ಜವಾಬ್ದಾರಿ ಅಲ್ಲ, ಸಾಮೂಹಿಕ ಜವಾಬ್ದಾರಿ’ ಎಂದು ನುಣುಚಿಕೊಳ್ಳುತ್ತಾರೆ. ಇನ್ನೂ ಯಾರಾದರೂ ಪ್ರಶ್ನಿಸಿದರೆ ತಮ್ಮ ಖಾತೆಯ ಭಾರವನ್ನು ಕಡಿಮೆ ಮಾಡಿ ಎಂದು ಪ್ರಧಾನಿಯವರನ್ನೇ ಕೇಳಿದ್ದೇನೆ ಎಂದು ಅಂದುಬಿಡುತ್ತಾರೆ. ಕಾಂಗ್ರೆಸ್ ಕಡೆಯಿಂದ ಒತ್ತಡ ಹೆಚ್ಚಾದರೆ ಮರುದಿನ ಶಿವ  ಸೇನೆಯ ನಾಯಕ ಬಾಳ್ ಠಾಕ್ರೆ ಮನೆಗೆ ಗುಟ್ಟಾಗಿ ಭೇಟಿ ನೀಡಿ, ಅದನ್ನು ಊರೆಲ್ಲ ರಟ್ಟು ಮಾಡಿ ಕಾಂಗ್ರೆಸ್ ಪಕ್ಷವನ್ನು ಬ್ಲಾಕ್‌ಮೇಲ್ ಮಾಡುತ್ತಾರೆ. ಅದರ ನಂತರ ಅವರ ಸಚಿವ ಸ್ಥಾನ ಅಬಾಧಿತವಾಗಿ ಮುಂದುವರಿಯುತ್ತದೆ.

 ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ಅವರ ಕ್ಷೇತ್ರವಾದ ಬಾರಾಮತಿಯನ್ನು ಕೃಷಿ,ವಾಣಿಜ್ಯ, ಕೈಗಾರಿಕೆ ಮತ್ತು ಶಿಕ್ಷಣದ ಕೇಂದ್ರವನ್ನಾಗಿ ಬೆಳೆಸಿದ ಶರದ್ ಪವಾರ್ ಸಾಧನೆ ಯಾವುದೇ ಜನಪ್ರತಿನಿಧಿಗೆ ಮಾದರಿ. ಈ ಸಾಧನೆಯೇ ಅವರನ್ನು ಕೃಷಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರನ್ನಾಗಿ ಮಾಡಲು ಕಾರಣ. ಬ್ರಿಟಾನಿಯಾ, ಟ್ರೋಪಿಕಾನಾ, ನೆಸ್ಲೆ...ಹೀಗೆ ಯಾವುದೇ ಕೃಷಿ ಆಧರಿತ ಕೈಗಾರಿಕೆಗಳ ಹೆಸರು ಹೇಳಿ ಅದು 100-120 ಗ್ರಾಮಗಳನ್ನೊಳಗೊಂಡ ಬಾರಾಮತಿ ಕ್ಷೇತ್ರದಲ್ಲಿದೆ. ದೇಶದ ಉತ್ತಮ ಗುಣಮಟ್ಟದ ವೈನ್ ಉತ್ಪಾದನೆ ನಡೆಯುತ್ತಿರುವುದು ಅಲ್ಲಿಯೇ. ಕೃಷಿ ಉತ್ಪನ್ನಗಳ ಪ್ರಮುಖ ರಫ್ತು ಕೇಂದ್ರವಾಗಿ ಇತ್ತೀಚೆಗೆ ಬಾರಾಮತಿ ಬೆಳೆಯುತ್ತಿದೆ. ನರ್ಸರಿಯಿಂದ ಹಿಡಿದು ಎಂಜಿನಿಯರಿಂಗ್-ವೈದ್ಯಕೀಯ ಕಾಲೇಜುಗಳ ವರೆಗೆ ನೂರಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ವಿದ್ಯಾನಗರಿ ದೇಶದ ಬೇರೊಂದು ಭಾಗದಲ್ಲಿ ಕಾಣಸಿಗದು. ಈಗ ಐಟಿ-ಬಿಟಿ ಉದ್ಯಮ ಕೂಡಾ ಅಲ್ಲಿ   ಕಾಲಿರಿಸಿದೆ. ಶರದ್ ಪವಾರ್ ಈ ಬಾರಾಮತಿ ಅನುಭವವನ್ನು ಧಾರೆಯೆರೆದು ದೇಶದ ಕೃಷಿ ಕ್ಷೇತ್ರದ ಸುಧಾರಣೆ ಮಾಡಬಹುದೆಂಬ ನಿರೀಕ್ಷೆ ಮನಮೋಹನ್‌ಸಿಂಗ್ ಅವರಿಗಿತ್ತೋ ಏನೋ? ಅದು ಹುಸಿಯಾಗಿದೆ.

ಗ್ರಾಮೀಣ ಮೂಲಸೌಕರ್ಯ, ನೀರಾವರಿ, ದಾಸ್ತಾನು ಮಳಿಗೆಗಳ ಸೌಲಭ್ಯ, ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಸ್ಥಳೀಯ ಕೃಷಿ ಮಾರುಕಟ್ಟೆಯ ಕೊರತೆಗಳಿಂದ ಬಳಲುತ್ತಿರುವ ದೇಶದ ಕೃಷಿ ಕ್ಷೇತ್ರ ಪವಾರ್ ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಸಾವಿರಾರು ಟನ್ ಗೋಧಿ  ದಾಸ್ತಾನು ಮಳಿಗೆಯಲ್ಲಿಯೇ ಕೊಳೆತು     ಹೋಗುತ್ತಿರುವುದನ್ನು ಕಂಡ ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೆ ಉಡಾಫೆಯಿಂದ ಪ್ರತಿಕ್ರಿಯಿಸುವಷ್ಟು ಪವಾರ್ ದಪ್ಪಚರ್ಮ ಬೆಳೆಸಿಕೊಂಡಿದ್ದಾರೆ. ಮೈತ್ರಿ ರಾಜಕಾರಣದ ಉರುಳಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಏರುತ್ತಿರುವ ಬೆಲೆ ಇಳಿಸುವುದು ಎಷ್ಟು ಕಷ್ಟವೋ, ಪವಾರ್    ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವುದು ಅಷ್ಟೇ ಕಷ್ಟ. ಈ ಕಷ್ಟ ಬಗೆಹರಿಯುವ ವರೆಗೆ ಜನ ಸಹಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT