ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರ್ಮಿಳಾ: ಉಪವಾಸ, ಪ್ರತಿರೋಧ ಮತ್ತು ಪ್ರೀತಿ

Last Updated 2 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮಣಿಪುರದ ಜನ ‘ಐರನ್ ಶರ್ಮಿಳಾ’ ಎಂದು ಅಭಿಮಾನದಿಂದ ಕರೆಯುವ ಇರೊಮ್ ಶರ್ಮಿಳಾ ತಮ್ಮ ಹದಿನಾರು ವರ್ಷಗಳ ಪ್ರತಿಭಟನೆಯ ಉಪವಾಸಕ್ಕೆ ಕೊನೆ ಹೇಳಿದ್ದಾರೆ. ಮೂಗಿನ ಮೂಲಕ ಒತ್ತಾಯದಿಂದ ದ್ರವರೂಪದ ಆಹಾರ ನೀಡಲಾಗುತ್ತಿದ್ದ ಶರ್ಮಿಳಾರ ಚಿತ್ರವನ್ನು, ಅವರ ಅಪೂರ್ವ ಹೋರಾಟವನ್ನು ನೀವು ಗಮನಿಸಿರಬಹುದು:

2000ನೇ ಇಸವಿಯ ನವೆಂಬರ್ 4ರಂದು ಅಸ್ಸಾಂ ರೈಫಲ್ ಪಡೆ ಮಣಿಪುರದ ಇಂಫಾಲ್ ಬಳಿಯ ಮಾಲಂ ಊರಿನಲ್ಲಿ ಹತ್ತು ಮಂದಿಯನ್ನು ಏಕಾಏಕಿ ಕೊಂದಿತು. ಅವತ್ತು ಗುರುವಾರ. ಅದು ‘ದೇವತೆ ಗುಡಿಯಿಂದ ಹೊರಬರುವ ದಿನ’ವಾದ್ದರಿಂದ ಶರ್ಮಿಳಾ ಪ್ರತಿ ಗುರುವಾರದಂತೆ ಅವತ್ತೂ ಉಪವಾಸದಲ್ಲಿದ್ದರು. ಅಮಾಯಕರ ಹತ್ಯೆಯ ಸುದ್ದಿ ಕೇಳಿದ 27ರ ಹರೆಯದ ಶರ್ಮಿಳಾ ಅಂದಿನಿಂದ ಊಟವನ್ನೇ ಮಾಡಲಿಲ್ಲ.

ಮನೆಯಲ್ಲಿ ರಾತ್ರಿ ಪಿಸುಮಾತಿನ ಕತೆಗಳಲ್ಲಿ ಮಣಿಪುರದ ಹೋರಾಟಗಾರರ ಕಣ್ಮರೆಯ ಬಗೆಗೆ ಕೇಳಿದ್ದ ಶರ್ಮಿಳಾರ ಮನಸ್ಸಿನಲ್ಲಿ ಗರಿಗಟ್ಟಿದ್ದ ಸಿಟ್ಟು ಅವತ್ತು ಸ್ಫೋಟಗೊಂಡಂತಿತ್ತು. ಮಣಿಪುರದಲ್ಲಿ ವಿಚಾರಣೆಯಿಲ್ಲದೆ ಯಾರನ್ನಾದರೂ ಕೊಲ್ಲಲು ಸೇನೆಗೆ ಅವಕಾಶ ಕೊಟ್ಟಿರುವ ಎಎಫ್ಎಸ್‌ಪಿಎ (Armed Forces Special Powers Act) ರದ್ದಾಗುವತನಕ ಅನ್ನನೀರು ಮುಟ್ಟುವುದಿಲ್ಲ ಎಂದು ಶರ್ಮಿಳಾ ಘೋಷಿಸಿದರು. 

ಇಂಡಿಯಾದ ಈಶಾನ್ಯ ಗಡಿಭಾಗದಲ್ಲಿರುವ ಮಣಿಪುರ ಹೇಗಿದೆ, ಎಲ್ಲಿದೆ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಕಳೆದ ದಶಕಗಳಲ್ಲಿ ಮಣಿಪುರದ ಸ್ಥಿತಿ ಕುರಿತು ಕಲ್ಪನಾಶರ್ಮ ಬರೆಯುತ್ತಾರೆ: ‘ಶರ್ಮಿಳಾ ಯಾಕೆ ತಮ್ಮ ಉಪವಾಸಮುಷ್ಕರವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದಕ್ಕೆ ಕಾರಣ ನೀವು ಮಣಿಪುರಕ್ಕೆ ಹೋದರೆ ಗೊತ್ತಾಗುತ್ತದೆ.

ಇಂಡಿಯಾದ ಇತರ ಭಾಗದಲ್ಲಿರುವಷ್ಟಾದರೂ ಸ್ವಾತಂತ್ರ್ಯ ಇಲ್ಲಿನ ಜನರಿಗಿಲ್ಲ. ಮೂಲಭೂತ ಸೌಲಭ್ಯಗಳಿಲ್ಲ. ನೀರು, ವಿದ್ಯುತ್, ಆಹಾರ, ಔಷಧ... ಎಲ್ಲದರ ಕೊರತೆ ಹಲವು ವರ್ಷಗಳಿಂದಲೂ ಹಾಗೇ ಇದೆ. ಬಂದೂಕು ಹಿಡಿದು ಬೀದಿ ಕಾಯುವ ಸೈನಿಕರು, ಕಂಡಲ್ಲಿ ಗುಂಡು ಹಾರಿಸಲು ಕರ್ಫ್ಯೂ ಜಾರಿ, ನಾಗರಿಕರ ಬೇಕಾಬಿಟ್ಟಿ ಹತ್ಯೆಗಳು…ಇದು ಮಣಿಪುರ. ಜನ ಈ ಸ್ಥಿತಿಯಿಂದ ತಪ್ಪಿಸಿಕೊಳ್ಳಲು ಇತರ ನಗರಗಳಲ್ಲಿ ಕೆಲಸಕ್ಕಾಗಿ ಓಡುತ್ತಾರೆ.

ನಾರ್ತ್ಈಸ್ಟ್, ಮಣಿಪುರಗಳು ಇಂಡಿಯಾದ ಜೊತೆ ಬೆರೆಯಬೇಕೆಂದು ನಿತ್ಯ ಭಾಷಣ ಕೊಡುವವರು ನಮ್ಮ ದೇಶದಲ್ಲಿದ್ದಾರೆ; ಆದರೆ ಇಂಡಿಯಾ ಈ ಭಾಗಗಳ ಜೊತೆ ಬೆರೆಯುವುದನ್ನು ಮೊದಲು ಕಲಿಯಬೇಕು.’

ಎರಡು ವರ್ಷಗಳ ಕೆಳಗೆ, ಎಎಫ್ಎಸ್‌ಪಿಎಯ ಹಾವಳಿಯನ್ನು ವ್ಯಂಗ್ಯಮಾಡಿರುವ ತಮ್ಮ ‘ಹೈದರ್’ ಸಿನಿಮಾದ ಡಿ.ವಿ.ಡಿ.ಯನ್ನು ಶರ್ಮಿಳಾಗೆ ಕೊಡಲು ಹೋಗಿದ್ದ ನಿರ್ದೇಶಕ ವಿಶಾಲ್ ಭಾರದ್ವಾಜ್ ಬರೆಯುತ್ತಾರೆ: ‘ಇಂಫಾಲ್ ನೋಡಿದರೆ ಶ್ರೀನಗರ ನೆನಪಾಗುತ್ತದೆ. ಹಾಗನ್ನಿಸುವುದು ಎ.ಕೆ. 47 ರೈಫಲ್‌ಗಳನ್ನು ಹಿಡಿದು ರಸ್ತೆ ಸುತ್ತುವ ಸೈನಿಕರಿಂದಾಗಿಯೋ ಅಥವಾ ಇಡೀ ವಾತಾವರಣದಲ್ಲಿ ತುಂಬಿರುವ ಯಾತನೆ ಅಥವಾ ಭಯದ ಕಾರಣಕ್ಕಾಗಿಯೋ ಗೊತ್ತಾಗುತ್ತಿಲ್ಲ.’

ಕೆಲವು ವರ್ಷಗಳ ಕೆಳಗೆ ಮಣಿಪುರದ ರಂಗನಿರ್ದೇಶಕ ಪ್ರೇಮಚಂದ್, ಜೀನೆಅನೂಯಿಯ ‘ಅಂತಿಗೊನೆ’ ನಾಟಕವನ್ನು ಮಣಿಪುರದ ಕರಾಳಸ್ಥಿತಿಗೆ ಕನ್ನಡಿ ಹಿಡಿಯುವಂತೆ ವ್ಯಾಖ್ಯಾನಿಸಿ ನಿರ್ದೇಶಿಸಿದ್ದರು. ಅನೂಯಿಯ ನಾಟಕ ಸಾಫೋಕ್ಲಿಸನ ಪ್ರಖ್ಯಾತ ದುರಂತ ನಾಟಕ ‘ಅಂತಿಗೊನೆ’ಯ ಮರುವ್ಯಾಖ್ಯಾನ.

ಮೂಲ ನಾಟಕದಲ್ಲಿ ಅಂತಿಗೊನೆಯ ಬಂಡುಕೋರ ಸೋದರ ತನ್ನ ರಾಜ್ಯವಾದ ಥೀಬ್ಸ್ ವಿರುದ್ಧವೇ ಯುದ್ಧ ಮಾಡಿ ಮೃತನಾಗಿದ್ದಾನೆ. ಅವನ ಶವಸಂಸ್ಕಾರ ನಡೆಯಕೂಡದೆಂದು ಥೀಬ್ಸ್‌ನ ರಾಜ ಕ್ರೆಯಾನ್ ಆಜ್ಞೆ ಮಾಡಿದ್ದಾನೆ. ಆದರೆ ಸೋದರನ ಶವಸಂಸ್ಕಾರ ಮಾಡುವ ಕರ್ತವ್ಯವನ್ನು ಬಿಟ್ಟುಕೊಡದ ಅಂತಿಗೊನೆ, ರಾಜಾಜ್ಞೆ ಮೀರಿ ಅವನ ಶವಸಂಸ್ಕಾರ ಮಾಡುತ್ತಾಳೆ.

ರಾಜದಂಡನೆಗೆ ಗುರಿಯಾಗುತ್ತಾಳೆ. ಜೀನೆ ಅನೂಯಿಯ ‘ಅಂತಿಗೊನೆ’ಯ ಮೂಲಕ ಪ್ರೇಮಚಂದ್ ಮಣಿಪುರದ ಜನರ ಖಾಸಗಿ ಬದುಕಿಗೆ ಸೇನೆ ತಂದೊಡ್ಡುತ್ತಿರುವ ದುರಂತವನ್ನು ಪ್ರತಿಧ್ವನಿಸಿದ್ದರು. ಆದರೆ ಕಲೆ, ಸಾಹಿತ್ಯ, ಚಿಂತನೆ, ಪ್ರತಿಭಟನೆ, ಪತ್ರಕರ್ತರು, ವಕೀಲರು, ನ್ಯಾಯಾಧೀಶರುಗಳ ವಿಶ್ಲೇಷಣೆಗಳಿಗೆ ಸರ್ಕಾರಗಳ ಕಲ್ಲುಮನಸ್ಸು ಕರಗಿಲ್ಲ. 

ಇಂಥ ಮಣಿಪುರದಲ್ಲಿ, ಸೈನ್ಯಕ್ಕೆ ಸ್ವೇಚ್ಛಾಧಿಕಾರ ನೀಡಿರುವ ಎಎಫ್ಎಸ್‌ಪಿಎ ರದ್ದಾಗುವ ತನಕ ಉಪವಾಸ ಮಾಡಲು ಹೊರಟ ಶರ್ಮಿಳಾ ಹದಿನಾರು ವರ್ಷ ಇಂಫಾಲ್ ಸರ್ಕಾರಿ ಆಸ್ಪತ್ರೆಯಲ್ಲಿ ಬಂಧನದಲ್ಲಿದ್ದರು. ಮಣಿಪುರದ ಜನ ಹಾಗೂ ಇಂಡಿಯಾದ ಸೂಕ್ಷ್ಮ ಜನರ ಪಾಲಿಗೆ ಆಕೆ ಸ್ವಾತಂತ್ರ್ಯ ಹೋರಾಟಗಾರ್ತಿ; ಆದರೆ ಸರ್ಕಾರದ ಕಣ್ಣಲ್ಲಿ ‘ವಿಚಾರಣಾಧೀನ ಕೈದಿ’! ಉಪವಾಸ ಮಾಡುವ ಮೂಲಕ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆಂದು ‘ಗಾಂಧೀಜಿಯ ದೇಶ’ದಲ್ಲಿ ಆಕೆಯ ಮೇಲೆ ಇಂಡಿಯನ್ ಪೀನಲ್ ಕೋಡ್ 309ರ ಅಡಿ  ಕೇಸ್ ನಡೆಯುತ್ತಲೇ ಇದೆ.

ಶರ್ಮಿಳಾರ ಮೇಲಿನ ಪ್ರಕರಣವೂ ಸೇರಿದಂತೆ ಈಚಿನ ವರ್ಷಗಳಲ್ಲಂತೂ ಇಂಡಿಯನ್ ಪೀನಲ್ ಕೋಡ್‌ನ 309ನೇ  ಸೆಕ್ಷನ್‌ ಅಸಂಗತತೆಯನ್ನೇ ಪತ್ರಕರ್ತರು, ಚಿಂತಕ ಚಿಂತಕಿಯರು, ರಾಜಕಾರಣಿಗಳು ಪ್ರಶ್ನಿಸುತ್ತಲೇ ಇದ್ದಾರೆ. ಜಗತ್ತಿನ ಬಹುತೇಕ ‘ನಾಗರಿಕ’ ರಾಷ್ಟ್ರಗಳಲ್ಲಿ ರದ್ದಾಗಿರುವ ಈ ಅನಾಗರಿಕ ಕಾನೂನು ಇಂಡಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾಗಳಂಥ ಕೆಲವೇ ದೇಶಗಳಲ್ಲಿ ಮಾತ್ರ ಇನ್ನೂ ಇದೆ.

ಪರಿಸ್ಥಿತಿಯ ಒತ್ತಡಗಳಿಂದ ಆತ್ಮಹತ್ಯೆಗೆ ಯತ್ನಿಸುವವರ ವಿರುದ್ಧ ಬಳಸಲಾಗುವ ಈ ಸೆಕ್ಷನ್‌ ರದ್ದು ಮಾಡಲು ಕೇಂದ್ರಸರ್ಕಾರ ಹಲವು ವರ್ಷಗಳಿಂದ ಚಿಂತಿಸುತ್ತಿದೆ. ಹಾಲಿ ಸರ್ಕಾರ ಸಿದ್ಧಪಡಿಸಿರುವ ಮಸೂದೆಯ ಕರಡು ಪಾರ್ಲಿಮೆಂಟ್ ಮುಂದೆ ಬರಲಿದೆ. ಶರ್ಮಿಳಾ ಪ್ರಕರಣದಲ್ಲಿ ಈ ಸೆಕ್ಷನ್‌ನ ದುರುಪಯೋಗದ ನಂತರವಂತೂ ಇಂಡಿಯಾದುದ್ದಕ್ಕೂ ಈ ಕುರಿತ ವ್ಯಾಪಕ ಚರ್ಚೆ ನಡೆದಿದೆ; ಈ ಅಸಂಗತ ಕಾನೂನು ರದ್ದಾಗುವ ಕಾಲ ಕೊನೆಗೂ ಬಂದಿದೆ.

ಶರ್ಮಿಳಾರ ಉಪವಾಸದ ಕಾಲದಲ್ಲೇ, 2004ರಲ್ಲಿ ಮಣಿಪುರದ ಥಂಜಂ ಮನೋರಮಾ ‘ಪೀಪಲ್ ಲಿಬರೇಶನ್ ಆರ್ಮಿ’ಯ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆಂಬ ಆಪಾದನೆ ಹೊರಿಸಿ, ಪ್ಯಾರಾಮಿಲಿಟರಿ ಪಡೆ ಅವರನ್ನು ಮನೆಯಿಂದ ಕರೆದೊಯ್ದಿತು. ಮಾರನೆಯ ದಿನ ಮೈದಾನದಲ್ಲಿ ಬುಲೆಟ್ಟುಗಳಿಂದ ತುಂಬಿದ ಆಕೆಯ ಶವ ಬಿದ್ದಿತ್ತು.

ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಗಿತ್ತು ಎಂದು ನಂತರದ ವೈದ್ಯಕೀಯ ವರದಿಗಳು ಹೇಳಿದವು. ಈ ಘಟನೆ ನಡೆದ ಐದು ದಿನಗಳ ನಂತರ ಇಡೀ ಇಂಡಿಯಾವೇ ನಡುಗಿಹೋಗುವಂಥ ಒಂದು ರುದ್ರಗಂಭೀರ ಪ್ರತಿಭಟನೆ ನಡೆಯಿತು.

ಮಣಿಪುರದ ಮೂವತ್ತು ಜನ ಮಧ್ಯವಯಸ್ಕ ಮಹಿಳೆಯರು ಬೆತ್ತಲಾಗಿ ಇಂಫಾಲ್‌ನ ಬೀದಿಗಳಲ್ಲಿ ನಡೆದು ‘ಅಸ್ಸಾಂರೈಫಲ್ಸ್’ನ ಮುಖ್ಯ ಕಚೇರಿಯ ಎದುರು ನಿಂತು ಕೂಗಿದರು: ‘ಇಂಡಿಯಾದ ಸೇನೆಯೇ, ನಮ್ಮನ್ನೂ ರೇಪ್ ಮಾಡು, ನಾವೆಲ್ಲ ಮನೋರಮಾಳ ತಾಯಂದಿರು.’ ಲೇಖಕಿ ಬಿನೋದಿನಿದೇವಿ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಿ ಮನೋರಮಾಳ ಮೇಲಿನ ಅತ್ಯಾಚಾರವನ್ನು ಪ್ರತಿಭಟಿಸಿದರು. ಇಂಡಿಯಾ ಕೆಲವು ದಿನ ಬೆಚ್ಚಿದಂತಿತ್ತು. ಆದರೂ ಎಎಸ್ಎಫ್‌ಪಿಎ ರದ್ದಾಗಲಿಲ್ಲ.

2014ರಲ್ಲಿ ಸುಪ್ರೀಂಕೋರ್ಟು ಮನೋರಮಾ ಕುಟುಂಬಕ್ಕೆ ₹10 ಲಕ್ಷ ಪರಿಹಾರಧನ ಕೊಡಬೇಕೆಂದು ಆದೇಶಿಸಿತು. ಆದರೆ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆಯೇ ಎಂಬ ಪ್ರಶ್ನೆ ಹಾಗೇ ಉಳಿದಿದೆ. ಕಮಿಟಿಗಳ ಮೇಲೆ ಕಮಿಟಿಗಳ ವರದಿಗಳು ಬಂದಿವೆ. ಆದರೆ ಮಣಿಪುರದ ಜನರ ಬೇಡಿಕೆ ಈಡೇರಿಲ್ಲ. ಇಂಡಿಯಾದ ಇತರ ಭಾಗಗಳಲ್ಲಿರುವ ರೀತಿಯಲ್ಲಿ ಕೊಂಚವಾದರೂ ನೆಮ್ಮದಿಯಿಂದ ಇಲ್ಲಿನ ಜನ ಜೀವಿಸುವ ಸಾಧ್ಯತೆಗಳು ಕಾಣುತ್ತಿಲ್ಲ.

ಇಂಥ ಮಣಿಪುರದ ಬಗ್ಗೆ ಇಂಡಿಯಾದ ಆತ್ಮಸಾಕ್ಷಿಯನ್ನು ಎಚ್ಚರಿಸಲು ನವೆದ ಶರ್ಮಿಳಾ, ಹದಿನಾರು ವರ್ಷಗಳಿಂದ ಕಾಲದ ಪರಿವೆಯಿಲ್ಲದೆ ತನ್ನೊಳಗೇ ಯೋಚಿಸುತ್ತಾ, ಅಕಸ್ಮಾತ್ ಭೇಟಿಗೆ ಬಂದವರ ಜೊತೆಗೆ ನಿಗದಿತ ಇಪ್ಪತ್ತು ನಿಮಿಷಗಳ ಕಾಲ ಒಂದೆರಡು ಮಾತಾಡುತ್ತಾ, ತಮಾಷೆಯ ಶಕ್ತಿಯನ್ನೂ ಉಳಿಸಿಕೊಂಡಿದ್ದರು.

‘ನನ್ನ ಆಲೋಚನೆಗಳೇ ನನ್ನ ಸಂಗಾತಿಗಳು’ ಎನ್ನುತ್ತಿದ್ದರು. ಅವರ ಬಳಿ ಫೋನಾಗಲೀ, ಟೆಲಿವಿಷನ್ ಆಗಲೀ ಇರಲಿಲ್ಲ. ವಾರ್ಡಿನ ಗೋಡೆಯ ಮೇಲೆ ಗಡಿಯಾರ ಕೂಡ ಇರಲಿಲ್ಲ. ವಿಶಾಲ್ ಭಾರದ್ವಾಜ್ ‘ನಿಮ್ಮ ಮೇಲೆ ಸಿನಿಮಾ ಮಾಡುತ್ತೇನೆ’ ಎಂದಾಗ, ‘ನನ್ನದು ಆಧ್ಯಾತ್ಮಿಕ ಪಯಣ. ನನ್ನನ್ನು ಪೀಠದ ಮೇಲಿಟ್ಟು ದೇವತೆಯನ್ನಾಗಿಸುವುದು ಬೇಡ. ಎಲ್ಲರೂ ಅನುಭವಿಸುವ ಭಾವನೆಗಳನ್ನು ಅನುಭವಿಸುತ್ತಾ, ಸಾಮಾನ್ಯವಾದ ಬದುಕನ್ನು ಬದುಕುವುದು ನನಗೆ ಇಷ್ಟ’ ಎಂದಿದ್ದರು ಶರ್ಮಿಳಾ.

ಈ ಏಕಾಂತದಲ್ಲಿ ಶರ್ಮಿಳಾ ಮನಸ್ಸಿನಲ್ಲಿ ಅರಳಿದ ಪ್ರೀತಿ ಕೂಡ ವಿಸ್ಮಯಕರವಾಗಿದೆ. ಗೋವಾ ಮೂಲದ ಬ್ರಿಟಿಷ್- ಇಂಡಿಯನ್ ಡೆಸ್ಮಂಡ್ ಕುಟಿನೋ ಒಂದು ದಿನ ಬೆಂಗಳೂರಿನಲ್ಲಿದ್ದರು. ತಮ್ಮ ತಾಯಿ ಸತ್ತ ಸುದ್ದಿ ಕೇಳಿದ ದಿನವೇ ಪತ್ರಿಕೆಯೊಂದರಲ್ಲಿ ಶರ್ಮಿಳಾ  ಫೋಟೊವನ್ನೂ ನೋಡಿದರು. ಶರ್ಮಿಳಾಗೆ ಪತ್ರ ಬರೆದರು.

ಪ್ರೀತಿ ಶುರುವಾಯಿತು. ಡೆಸ್ಮಂಡ್ ಕಳಿಸಿದ ಬೊಂಬೆಗಳು, ಬರೆದ ಪತ್ರಗಳು ಶರ್ಮಿಳಾರನ್ನು ಬೆಚ್ಚಗಿಡತೊಡಗಿದವು. ಒಮ್ಮೆ ಶರ್ಮಿಳಾರನ್ನು ಭೇಟಿಯಾಗಲು ಬಂದ ಡೆಸ್ಮಾಂಡ್ ಇಂಫಾಲ್‌ನ  ಸ್ಥಳೀಯರ ಅನುಮಾನದ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಗಲಾಟೆಯಾಯಿತು. ಡೆಸ್ಮಂಡ್ ಬಂಧನವಾಯಿತು.

ಸುಳ್ಳು ಕಾರಣದ ಮೇಲೆ ನಡೆದ ಈ ಬಂಧನದಿಂದ ಹೊರಬರಲು ಜಾಮೀನು ಪಡೆಯಲು ಡೆಸ್ಮಂಡ್ ನಿರಾಕರಿಸಿದರು. ಶರ್ಮಿಳಾ ಚೈತನ್ಯ ಡೆಸ್ಮಂಡ್ ಒಳಗೂ ಹಬ್ಬಿದಂತಿತ್ತು.

ಕಳೆದ ವಾರ ಉಪವಾಸಕ್ಕೆ ಕೊನೆ ಹೇಳುತ್ತಾ, ಶರ್ಮಿಳಾ ತಮ್ಮ ಮುಂದಿನ ಎರಡು ಹೆಜ್ಜೆಗಳ ಬಗ್ಗೆ ಹೇಳಿದರು: ಮಣಿಪುರದಲ್ಲಿ ಚುನಾವಣೆಗೆ ನಿಲ್ಲುವುದು ಮತ್ತು ಗೆಳೆಯನೊಂದಿಗೆ ಹೊಸ ಬದುಕನ್ನು ಆರಂಭಿಸುವುದು. ಮಣಿಪುರದ ಜನರ ಬಗ್ಗೆ ಶರ್ಮಿಳಾರೊಳಗೆ ಇರುವ ಅಖಂಡ ಪ್ರೀತಿ ಮತ್ತು ಖಾಸಗಿ ಪ್ರೀತಿ- ಈ ಎರಡು ಬಗೆಯ ಪ್ರೀತಿಗಳ ಬೆಸುಗೆ ‘ಪ್ರೀತಿ’ ಎಂಬ ಪರಿಕಲ್ಪನೆಯನ್ನೇ ಹೊಸದಾಗಿ ನೋಡುವಂತೆ ನಮ್ಮನ್ನು ಒತ್ತಾಯಿಸುತ್ತದೆ.

ವೈದ್ಯರೇ ಅಚ್ಚರಿಪಡುವಂತೆ ಬದುಕಿರುವ ಶರ್ಮಿಳಾ ಉಪವಾಸದ ನಂತರದ ಮಾಮೂಲು ಬದುಕಿಗೆ ಮರಳಲು ಇನ್ನಷ್ಟು ಕಾಲ ಹಿಡಿಯಬಹುದು. ಆದರೆ ಆಕೆಯ ಪ್ರತಿಭಟನೆ ಹುಸಿ ಹೋಯಿತೆಂದು ಭಾವಿಸಬಾರದು. ಮಣಿಪುರದ ಕರಾಳ ಸ್ಥಿತಿಯ ಬಗ್ಗೆ ಇಡೀ ಜಗತ್ತಿನ ಗಮನವನ್ನು ಶರ್ಮಿಳಾ ಸೆಳೆದಿದ್ದಾರೆ. ಇಂಡಿಯಾದ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರೂ ಸೇರಿದಂತೆ ಲಕ್ಷಾಂತರ ಸೂಕ್ಷ್ಮಜ್ಞರನ್ನು ಈ ಬಗ್ಗೆ ಯೋಚಿಸುವಂತೆ ಮಾಡಿದ್ದಾರೆ.

ದೇಶದ ತುಂಬ ಮಣಿಪುರದ ಬಗ್ಗೆ ಅನುಕಂಪ ಹುಟ್ಟುವಂತೆ ಮಾಡಿದ್ದಾರೆ. ‘ಯಾವ ಮಹದಾಸೆಯೂ ಇಲ್ಲದ ಹುಳುವಿನ ಹಾಗೆ ಬದುಕಬಯಸುವೆ’ ಎಂದು ಶರ್ಮಿಳಾ ತಮ್ಮ ಹರೆಯದ ಕವಿತೆಯೊಂದರಲ್ಲಿ ಬರೆದಿದ್ದರು. ಶರ್ಮಿಳಾ ಎಂಬ ಏಕವ್ಯಕ್ತಿಸೇನೆಯ ಮೌನಪ್ರತಿರೋಧ ನಿರ್ದಯ ಸೇನಾಪಡೆಯನ್ನು ಕೊಂಚವಾದರೂ ಹಿಮ್ಮೆಟ್ಟಿಸಿದೆ. ಎಲ್ಲ ಅಸಹಾಯಕರೊಳಗೂ, ಎಂಥ ಸ್ಥಿತಿಯಲ್ಲಾದರೂ ಹೋರಾಡಬಲ್ಲ ಕೆಚ್ಚನ್ನು ತುಂಬಿದೆ. ಈ ಶರ್ಮಿಳಾ ಸ್ಪಿರಿಟ್ಟಿಗೆ ಇಡೀ ಇಂಡಿಯಾ ಒಮ್ಮೆಯಾದರೂ ತಲೆಬಾಗಿ ನಮಿಸಬೇಕು ಎನ್ನಿಸುತ್ತದೆ. 

ಕೊನೆ ಟಿಪ್ಪಣಿ: ಶರ್ಮಿಳಾ ಮತ್ತು ಗಾಂಧೀಜಿ
ಆತ್ಮಹತ್ಯೆಯ ಆಪಾದನೆಯ ಮೇಲೆ ಕೋರ್ಟಿಗೆ ಹಾಜರಾದ ಶರ್ಮಿಳಾ ಹೇಳಿದರು: ‘ನಾನು ಗಾಂಧೀಜಿಯ ಮಾರ್ಗ ಅನುಸರಿಸಿ ಉಪವಾಸ ಸತ್ಯಾಗ್ರಹ ಮಾಡಿದ್ದೇನೆ.’ ಬಿಳಿಯರ ಸರ್ಕಾರಕ್ಕಿದ್ದ ಆತ್ಮಸಾಕ್ಷಿ ಕೂಡ ನಮ್ಮ ಸರ್ಕಾರಗಳಿಗೆ ಇಲ್ಲದೇ ಹೋಗಿರುವ ಕಾಲದಲ್ಲಿ ಶರ್ಮಿಳಾ ಗಾಂಧೀಜಿಯೂ ಮಾಡಲಾಗದಂಥ ಸುದೀರ್ಘ ಸತ್ಯಾಗ್ರಹ ಮಾಡಿದ್ದರು.

‘ನಮ್ಮ ಹಿಂದೆ ಬಹಳ ಜನರ ಹಾಗೂ ಸಂಘಟನೆಗಳ ಬೆಂಬಲವಿಲ್ಲದಿದ್ದಾಗಲೂ, ಹೋರಾಡಲು ಯಾವುದೇ ಆಯುಧವಿಲ್ಲದಿದ್ದರೂ, ಅನ್ಯಾಯ ಹಾಗೂ ದಬ್ಬಾಳಿಕೆಯ ವಿರುದ್ಧ ಸೆಣಸಲು ಹಾಗೂ ಯಾತನೆಯನ್ನು ಗಂಭೀರವಾಗಿ ಸಹಿಸಲು ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲೂ ಏನೋ ಒಂದು ಇದೆ ಎಂಬುದನ್ನು ಗಾಂಧೀಜಿ ತೋರಿಸಿಕೊಟ್ಟರು’ ಎಂದು ಲೋಹಿಯಾ ಬರೆದಿದ್ದನ್ನು ಶರ್ಮಿಳಾ ಮತ್ತೆ ಇಡೀ ದೇಶಕ್ಕೆ ನೆನಪು ಮಾಡಿಕೊಟ್ಟರು. ಗಾಂಧೀಜಿಯನ್ನು ಇಲ್ಲವಾಗಿಸಲು ವಿಕೃತ ಶಕ್ತಿಗಳು ಕೆಲಸ ಮಾಡುತ್ತಿರುವ ಕಾಲದಲ್ಲಿ, ಶರ್ಮಿಳಾರ ಸುದೀರ್ಘ ಹೋರಾಟ ಇಂಡಿಯಾದಲ್ಲಿ ಗಾಂಧೀ ಚೈತನ್ಯ ಬೇರೆಯದೇ ರೀತಿಯಲ್ಲಿ ಬೆಳೆಯುತ್ತಿರುವುದನ್ನು ಮತ್ತೆ ತೋರಿಸಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT