ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಗಳ್ಳರ ಲೋಕದಲ್ಲಿ...

Last Updated 16 ಜುಲೈ 2011, 19:30 IST
ಅಕ್ಷರ ಗಾತ್ರ

ನಾನು ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ 1990-93ರ ಅವಧಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡಿದೆ. ಆಗ ಬೆಂಗಳೂರು ನಗರದಿಂದ ದಕ್ಷಿಣ ಭಾರತದ ಹಲವೆಡೆಗೆ ನಕಲಿ ಮದ್ಯ ಹಾಗೂ ಸ್ಪಿರಿಟ್ ಸರಬರಾಜಾಗುತ್ತಿತ್ತು.

ಈ ದಂಧೆಯಲ್ಲಿ ತೊಡಗಿದ್ದ ಕಾರ್ಗೋ ಮೂರ್ತಿಯಂಥವರ ಸಂತತಿ ಹೆಚ್ಚಾಗಿತ್ತು. ಡಿಸ್ಟಿಲರಿಗಳಿಂದ ಸ್ಪಿರಿಟ್ ಕದ್ದು ಮಾರುವುದು, ತೆರಿಗೆ ಕದ್ದು ಮದ್ಯ ವ್ಯಾಪಾರ ಮಾಡುವುದು, ನಕಲಿ ಮದ್ಯ ಬಿಕರಿಯಾಗುವುದು ವ್ಯಾಪಕವಾಗಿತ್ತು.

ತಮಿಳುನಾಡಲ್ಲಿ ಇಂಥ ದಂಧೆಕೋರನೊಬ್ಬನ ಕಾರನ್ನು ವಶಪಡಿಸಿಕೊಳ್ಳಲಾಯಿತು. ಅದನ್ನು ಹುಡುಕಿದಾಗ ಒಂದು ರಿವಾಲ್ವರ್ ಸಿಕ್ಕಿತು. ತಮಿಳುನಾಡು ಪೊಲೀಸರು ಆ ರಿವಾಲ್ವರ್ ಕಾರಣಕ್ಕೆ ವಿಚಾರಣೆಗೆಂದು ನಮ್ಮಲ್ಲಿಗೆ ಬಂದರು.

ಯಾಕೆಂದರೆ, ಸಿಕ್ಕಿದ್ದ ದಂಧೆಕೋರರ ಮುಖ್ಯಸ್ಥನು ಕಾರ್ಗೋ ಮೂರ್ತಿಯ ಕಡೆಯವನಾಗಿದ್ದು, ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯ ನಿವಾಸಿಯಾಗಿದ್ದ.

ರಿವಾಲ್ವರ್ ಸೇರಿದಂತೆ ಯಾರ‌್ಯಾರಿಗೆ ಶಶ್ತ್ರಾಸ್ತ್ರಗಳ ಪರವಾನಗಿ ನೀಡಲಾಗಿದೆ ಎಂಬುದು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ಆದರೆ, ಆ ಪೊಲೀಸರು ಹೇಳಿದ ಹೆಸರಿನ ಯಾರಿಗೂ ವಿಲ್ಸನ್‌ಗಾರ್ಡನ್ ಠಾಣೆಯಲ್ಲಿ ರಿವಾಲ್ವರ್ ಪರವಾನಗಿ ಮಂಜೂರಾಗಿರಲಿಲ್ಲ.

ಕಮಿಷನರ್ ಕಚೇರಿಯಲ್ಲಿ ಪರಿಶೀಲಿಸಲಾಗಿ, ಅಲ್ಲಿ ಮಾತ್ರ ಹೆಸರು ನಮೂದಾಗಿತ್ತು. ಸಂಬಂಧಪಟ್ಟ ಠಾಣೆಯ ಇನ್ಸ್‌ಪೆಕ್ಟರ್ ಅಥವಾ ಸಬ್ ಇನ್‌ಸ್ಪೆಕ್ಟರ್ ಯಾವುದೇ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದ ನಂತರವಷ್ಟೇ ಕಮಿಷನರ್ ಕಚೇರಿಯಲ್ಲಿ ರಿವಾಲ್ವರ್ ಪರವಾನಗಿ ನೀಡುವುದು ನಿಯಮ.

ಈ ನಿಯಮವನ್ನು ಗಾಳಿಗೆ ತೂರಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಯಿತು. ಅದನ್ನಿಟ್ಟುಕೊಂಡು ಆಳವಾಗಿ ತನಿಖೆ ಮಾಡತೊಡಗಿದೆವು. ಕಮಿಷನರ್ ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರ ಬಗ್ಗೆ ಗುಮಾನಿ ಬಂತು. ಬಹಳ ಚಾಲೂ ಆಗಿದ್ದ ಆ ಮಹಿಳೆಯ ನಡವಳಿಕೆ ಪ್ರಶ್ನಾರ್ಹವಾಗಿತ್ತು.

ನಾವು ತನಿಖೆ ಚುರುಕುಗೊಳಿಸಿದ್ದು ಗೊತ್ತಾದ ನಂತರವಂತೂ ಆ ಮಹಿಳೆ, ವಶಪಡಿಸಿಕೊಂಡ ರಿವಾಲ್ವರ್ ಇಂಥವರ ಹೆಸರಲ್ಲಿದೆ ಎಂದೂ ನಮ್ಮ ಠಾಣೆಯ ರಿಜಿಸ್ಟರ್‌ನಲ್ಲಿ ಆ ಹೆಸರನ್ನು ದಾಖಲಿಸುವಂತೆಯೂ ನನ್ನ ಮೇಲೆ ಬೇರೆಯವರ ಮೂಲಕ ಒತ್ತಾಯ ಹೇರಲಾರಂಭಿಸಿದರು.

ದೈಹಿಕ ಆಮಿಷದಿಂದ ಹಿಡಿದು ಏನೇನು ಸಾಧ್ಯವೋ ಎಲ್ಲಾ ಬಗೆಯ ಆಮಿಷಗಳನ್ನೂ ಒಡ್ಡಿದರು. ನಾನು ಮಾತ್ರ ಜಗ್ಗಲಿಲ್ಲ. ಆಗಿನ ಕಾಲಕ್ಕೆ ರಿವಾಲ್ವರ್ ಪರವಾನಗಿ ನೀಡಲು ಬಹಳ ಗಟ್ಟಿಯಾದ ವ್ಯವಸ್ಥೆ ಇತ್ತು. ಕಮಿಷನರ್ ಕಚೇರಿಗೆ ಮೊದಲು ಅರ್ಜಿ ಹೋಗುತ್ತಿತ್ತು.

ಪೂರ್ವ ಹಾಗೂ ಪಶ್ಚಿಮ ವಲಯದ ಡಿಸಿಪಿಗಳಿಗೆ ಅಲ್ಲಿಂದ ಆದೇಶ ಬಂದು, ಎಸಿಪಿಗಳಿಗೆ ತಲುಪಿ, ಅಲ್ಲಿಂದ ಪರವಾನಗಿ ಮಂಜೂರು ಮಾಡಬಹುದೆಂಬ ಅನುಮತಿ ಸಂಬಂಧಪಟ್ಟ ಠಾಣೆಗೆ ಸಿಗುತ್ತಿತ್ತು.

ಆದರೆ ಕಮಿಷನರ್ ಕಚೇರಿಯ ಕಡತಗಳನ್ನು ಗಮನಿಸಿದಾಗ, ಸುಮಾರು ಹತ್ತಿಪ್ಪತ್ತು ಜನರಿಗೆ ಅನುಮಾನಾ ಸ್ಪದವಾಗಿ ಪರವಾನಗಿ ಮಂಜೂರಾಗಿರುವುದು ಸ್ಪಷ್ಟವಾಯಿತು. ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್, ಎಸಿಪಿ, ಡಿಸಿಪಿ ಯಾರ ಗಮನಕ್ಕೂ ತಾರದೆ ಈ ರೀತಿ ಮಾಡಿರುವುದು ಪಕ್ಕಾ ಆಯಿತು.

ಶಸ್ತ್ರ ಪರವಾನಗಿಗೆಂದೇ ಇರುವ ಘಟಕದಲ್ಲಿನ ಮೊದಲ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರಲ್ಲಿ ಮೂರ‌್ನಾಲ್ಕು ಮಂದಿ ಸೇರಿಕೊಂಡು ತಾವಾಗಿಯೇ ಹೀಗೆ ಅಕ್ರಮವಾಗಿ ಶಸ್ತ್ರ ಪರವಾನಗಿಗಳನ್ನು ಕೊಟ್ಟಿದ್ದರು.

ದಂಧೆಕೋರರು, ರೌಡಿಗಳು, ವಿಳಾಸವೇ ಇಲ್ಲದವರು ಕೂಡ ಹೀಗೆ ಪರವಾನಗಿ ಪಡೆದವರಲ್ಲಿ ಸೇರಿದ್ದರು. ವ್ಯಾಪಾರಿಗಳು ಎಂದು ನಮೂದಿಸಿ, ಸುಳ್ಳು ಹೆಸರಿನಲ್ಲಿ ಅನೇಕರಿಗೆ ಪರವಾನಗಿಗಳು ಮಂಜೂರಾಗಿದ್ದವು. ಅಧಿಕೃತ ಪರವಾನಗಿ ಪಡೆದ ಮೇಲೆ ಕೊಳ್ಳುವ ಶಸ್ತ್ರವು ಕಾನೂನುಬದ್ಧವಾಗುತ್ತದೆ.

ಕೊಂಡುಕೊಂಡ ಶಸ್ತ್ರದ ಮಾದರಿಯನ್ನೂ ಪರವಾನಗಿ ಮಂಜೂರಾತಿ ದಾಖಲೆಗಳಲ್ಲಿ ನಮೂದಿಸ ಬೇಕಾಗುತ್ತದೆ. ಮೂರು ವರ್ಷಕ್ಕೊಮ್ಮೆ ಅದು ನವೀಕರಣವಾಗಬೇಕಾದದ್ದೂ ಕಡ್ಡಾಯ.

ಇವೆಲ್ಲವೂ ಕಮಿಷನರ್ ಕಚೇರಿಯ ದಾಖಲೆ ಪುಸ್ತಕದಲ್ಲಿ ನಮೂದಾಗಿತ್ತು. ಹಿರಿಯ ಅಧಿಕಾರಿಗಳ ಗಮನಕ್ಕೆ ಬರದಂತೆ ಈ ರೀತಿ ಶಸ್ತ್ರಗಳ ಪರವಾನಗಿಯನ್ನು ಮಂಜೂರು ಮಾಡಿದ್ದವರ ಬಗ್ಗೆ ಮಾಧ್ಯಮದಲ್ಲೂ ವರದಿಗಳು ಪ್ರಕಟವಾದವು.

ನಾನು ಮಾತ್ರ ಯಾವುದೇ ಕಾರಣಕ್ಕೂ ಠಾಣೆಯ ರಿಜಿಸ್ಟರ್‌ನಲ್ಲಿ ಅಕ್ರಮ ಪರವಾನಗಿದಾರರ ಹೆಸರನ್ನು ಸೇರಿಸಲು ಒಪ್ಪಲೇ ಇಲ್ಲ. ಈ ಪ್ರಕರಣದ ಬಗ್ಗೆ ಇಲಾಖಾ ತನಿಖೆ ನಡೆಯಿತು.
 
ಸಹಜವಾಗಿಯೇ ನಾನೂ ಸಾಕ್ಷಿದಾರನಾಗಿದ್ದೆ. ಆದರೆ, ಇದುವರೆಗೆ ನನ್ನನ್ನು ವಿಚಾರಣೆಗೆ ಕರೆದೇ ಇಲ್ಲ. ಬಹುಶಃ ಆ ಪ್ರಕರಣವನ್ನು ಮುಚ್ಚಿಹಾಕಿರಬೇಕು. ಯಾವ್ಯಾವ ಸಿಬ್ಬಂದಿ ಪರವಾನಗಿ ನೀಡುವಲ್ಲಿ ಕೈಚಳಕ ತೋರಿಸಿದ್ದರೋ ಅವರಲ್ಲಿ ಬಹುತೇಕರು ರಾಜಾರೋಷವಾಗಿ ಓಡಾಡಿಕೊಂಡೇ ಸೇವಾವಧಿ ಪೂರೈಸಿದರು.

ನನ್ನ ಮೇಲೆ ಒತ್ತಡ ತಂದಿದ್ದ ಮಹಿಳೆ ಯಂತೂ ಏನೂ ತಪ್ಪೇ ಮಾಡಿಲ್ಲವೇನೋ ಎಂಬಷ್ಟು ಸಹಜವಾಗಿ ಇದ್ದರು. ಪಾತಕಲೋಕದ ಒಬ್ಬನೇ ವ್ಯಕ್ತಿ ನಾಲ್ಕು ಪಾಸ್‌ಪೋರ್ಟ್ ಪಡೆದುಕೊಂಡಿರುವ ಉದಾಹರಣೆಗಳನ್ನು ಈ ಹಿಂದೆ ನಾನು ಕೊಟ್ಟಿದ್ದೇನೆ. ಅಂಥವರಿಗೆ ಶಸ್ತ್ರ ಪರವಾನಗಿಯೂ ಇಂಥವರಿಂದಲೇ ದೊರೆಯುತ್ತ ದೆಂಬುದು ನಮ್ಮ ವ್ಯವಸ್ಥೆಯಲ್ಲಿರುವ ಹುಳುಕುಗಳಿಗೆ ಸಾಕ್ಷಿ.

ಈ ಸಹಸ್ರಮಾನದ ಪ್ರಾರಂಭದಲ್ಲಿ ಬೆಳಗಾವಿ ಶಸ್ತ್ರಾಸ್ತ್ರ ಕೋಠಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ನಾಪತ್ತೆಯಾದವು. ಈ ಕುರಿತು ಸಿಓಡಿ ತನಿಖೆ ನಡೆಯಿತು. ಕೆಲವು ದಿನಗಳ ನಂತರ ಮಲೆನಾಡು ಪ್ರದೇಶದ ರೌಡಿಗಳನ್ನು ನಮ್ಮ ತಂಡ ಹಿಡಿದಾಗ, ಒಬ್ಬನ ಕೈಲಿ ಶಸ್ತ್ರಾಸ್ತ್ರ ಸಿಕ್ಕಿತು.
 
ಅದು ಬೆಳಗಾವಿಯ ಕೋಠಿಯಿಂದ ನಾಪತ್ತೆಯಾದದ್ದೇ ಆಗಿತ್ತು. ಆ ಶಸ್ತ್ರವನ್ನು ಇಟ್ಟುಕೊಂಡವನು ಮೇಧಾವಿ ವ್ಯಕ್ತಿತ್ವದ, ನ್ಯಾಯಾಂಗದಲ್ಲಿ ಬಹಳ ಪ್ರಸಿದ್ಧಿ ಪಡೆದ ವ್ಯಕ್ತಿಯ ಸೋದರ ಸಂಬಂಧಿಯಾಗಿದ್ದ.

ನಾನು ಈ ವಿಷಯವನ್ನೂ ಉನ್ನತ ಅಧಿಕಾರಿಗಳ ಗಮನಕ್ಕೆ ತಂದೆ. ಸಿಕ್ಕಿ ಬಿದ್ದವನ ವಿರುದ್ಧ ಪ್ರಕರಣಗಳೂ ದಾಖಲಾದವು. ಆ ಕಾಲದಲ್ಲಿ ಇದೂ ಸುದ್ದಿಯಾಯಿತು. ಅಷ್ಟೇ ಬೇಗ ತಣ್ಣಗೂ ಆಯಿತು. ಆ ಪ್ರಕರಣದಲ್ಲೂ  ತಪ್ಪಿತಸ್ಥರಿಗೆ ಶಿಕ್ಷೆಯಾದಂತಿಲ್ಲ. ನನ್ನನ್ನಂತೂ ಇನ್ನೂ ಸಾಕ್ಷಿಯಾಗಿ ಕರೆಸಿಲ್ಲವಾದ್ದರಿಂದ ಈ ಸಾಧ್ಯತೆಯನ್ನು ಊಹಿಸುತ್ತಿದ್ದೇನೆ.

ಶಸ್ತ್ರಾಸ್ತ್ರಗಳನ್ನು ನಾಪತ್ತೆಯಾಗಿಸುವ ಹಾಗೂ ಅನರ್ಹರಿಗೆ ಪರವಾನಗಿ ಒದಗಿಸುವ ಕೆಲಸ ಮಾಡುವ ಪೊಲೀಸರಂತೆಯೇ ಲೈವ್‌ಬ್ಯಾಂಡ್‌ಗಳನ್ನು ಉದ್ಧರಿಸಿದ ಸಿಬ್ಬಂದಿಯನ್ನೂ ನಾನು ಕಂಡಿದ್ದೇನೆ.

2000ನೇ ದಶಕದ ಪ್ರಾರಂಭದಲ್ಲಿ ಲೈವ್‌ಬ್ಯಾಂಡ್ ಹಾವಳಿ ಅತಿಯಾಯಿತು. ಅವುಗಳ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಯಿತು. ಅನೇಕರು ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಪಟ್ಟುಹಿಡಿದರು. ಆಗ ಲೈವ್‌ಬ್ಯಾಂಡ್ ಪರವಾನಗಿಯ ನಿಯಮಗಳನ್ನು ಬಿಗಿಗೊಳಿಸಲಾಯಿತು.
 
ಫೈರ್ ಬ್ರಿಗೇಡ್, ಕೆಪಿಟಿಸಿಎಲ್ ಹೀಗೆ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯುವುದೂ ಸೇರಿದಂತೆ ಹಲವು ಅಗತ್ಯಗಳನ್ನು ಲೈವ್‌ಬ್ಯಾಂಡ್ ಮಾಲೀಕರು ಪೂರೈಸಬೇಕಿತ್ತು.

ಪ್ರತಿವರ್ಷ ಡಿಸೆಂಬರ್ 31ರೊಳಗೆ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕಿತ್ತು. ಮನರಂಜನೆಗಾಗಿ ಕರ್ನಾಟಕ ಪೊಲೀಸ್ ಕಾಯ್ದೆಯ ಅಡಿಯಲ್ಲಿ ಅನುಮತಿ ಪಡೆಯಬೇಕಾದದ್ದು ಕಡ್ಡಾಯವಾಗಿತ್ತು.

ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಅನುಮತಿ ಪಡೆಯಬೇಕಿತ್ತು. ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಅವರಿಗೆ ಅನುಮತಿ ನೀಡುವ ಅವಕಾಶವಿದೆ. 

ಕಠಿಣವಾದ ನಿಯಮಗಳನ್ನು ಪೂರೈಸುವುದರ ಬದಲು ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರನ್ನು ಲೈವ್‌ಬ್ಯಾಂಡ್ ಮಾಲೀಕರು ತಮ್ಮ ಕಡೆಗೆ ಮಾಡಿಕೊಂಡರು. ಪರವಾನಗಿ ನವೀಕರಣಕ್ಕಾಗಿ ಅರ್ಜಿ ಪಡೆದು, ಅದನ್ನು ಪಡೆದದ್ದಕ್ಕೆ ಸ್ವೀಕೃತಿ ಚೀಟಿಯನ್ನು ನೀಡುವುದು ಅವರ ಕೆಲಸ.

ಹಾಗೆ ಪಡೆದ ಅರ್ಜಿಯ ಕಡತವನ್ನು ಬೇಗ ಕಮಿಷನರ್ ಮೇಜಿಗೆ ಕಳಿಸಿದರೆ ಸರಿಯಾದ ಕಾಲಕ್ಕೆ ಅವರ ಗಮನಕ್ಕೆ ಬರುತ್ತದೆಂಬ ಕಾರಣಕ್ಕೆ ಅಡ್ಡದಾರಿ ಕಂಡುಕೊಂಡರು.

ಅನುಕೂಲ ಮಾಡಿಕೊಡಬೇಕಾದ ಲೈವ್‌ಬ್ಯಾಂಡ್ ಮಾಲೀಕರ ಕಡತಗಳನ್ನು ಡಿಸೆಂಬರ್ 31ರಂದು ಕಮಿಷನರ್ ಎದುರು ರಾಶಿಯಾದ ಫೈಲುಗಳ ಕೆಳಗೆ ಇಟ್ಟುಬಿಡುತ್ತಿದ್ದರು. ಅವರು ಬೆಳಗಿನಿಂದ ರಾತ್ರಿವರೆಗೆ ಸಹಿ ಹಾಕಿದರೂ ಅಷ್ಟೊಂದು ಕಡತಗಳ ವಿಲೇವಾರಿ ಒಂದೇ ದಿನ ಸಾಧ್ಯವಾಗುತ್ತಿರಲಿಲ್ಲ.

ನವೀಕರಣಕ್ಕೆ ಅರ್ಜಿ ಕೊಟ್ಟ ಲೈವ್‌ಬ್ಯಾಂಡ್ ಮಾಲೀಕರು ಜನವರಿ ಮೊದಲ ವಾರದಲ್ಲೇ ಹೈಕೋರ್ಟ್ ಮೆಟ್ಟಿಲು ಹತ್ತುತ್ತಿದ್ದರು. ಒಂದು ತಿಂಗಳ ಮೊದಲೇ ನವೀಕರಣಕ್ಕೆ ಅರ್ಜಿ ಕೊಟ್ಟರೂ ಅದನ್ನು ಮಂಜೂರು ಮಾಡಲಾಗಿದೆ ಎಂದಾಗಲೀ ನಿರಾಕರಿಸಿದೆ ಎಂದಾಗಲೀ ಸರ್ಕಾರವು ತಿಳಿಸಿಯೇ ಇಲ್ಲ.

ಹದಿನೈದು ದಿನದಲ್ಲಿ ವಿಲೇವಾರಿಯಾಗಬೇಕಾದ ಅರ್ಜಿಯು ಅಷ್ಟು ದಿನವಾದರೂ ಹಾಗೇ ಉಳಿದಿದೆ. ಹಾಗಾಗಿ ತಮಗೆ `ಡೀಮ್ಡ ಲೈಸೆನ್ಸ್~ ಕೊಡಿಸಬೇಕು ಎಂದು ಮಾಲೀಕರು ಪಟ್ಟು ಹಿಡಿಯುತ್ತಿದ್ದರು.

ಪೊಲೀಸ್ ಇಲಾಖೆಯ ಸಹಾಯಕರು ಬೇಕೆಂದೇ ಕೊನೆಕ್ಷಣದವರೆಗೆ ಕಡತವನ್ನು ತಮ್ಮಲ್ಲೇ ಇಟ್ಟುಕೊಂಡು ಇಂಥ ಕೇಸುಗಳನ್ನು ಹಾಕುವವರಿಗೆ ಅನುಕೂಲ ಮಾಡಿ ಕೊಡುತ್ತಿದ್ದರು. ಕಾನೂನಿನ ಪ್ರಕಾರ ಹೈಕೋರ್ಟ್ ಅರ್ಜಿ ಹಾಕಿದ ಲೈವ್‌ಬ್ಯಾಂಡ್ ಮಾಲೀಕರ ಪರವಾಗಿ ನಿಲ್ಲದೆ ಬೇರೆ ವಿಧಿಯೇ ಇಲ್ಲ.

ಕಮಿಷನರ್ ಕಚೇರಿಯ ಅಧಿಕಾರಿಗಳ ಮೇಲೆ ಈ ಬೆಳವಣಿಗೆ ಬಹಳ ಕೆಟ್ಟ ಪರಿಣಾಮ ಬೀರತೊಡಗಿತು. ಅಲ್ಲಿನ ಅಧಿಕಾರಿಗಳೆಲ್ಲಾ ಸೂಕ್ಷ್ಮವಾಗಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿದಾಗ, ಸಹಾಯ ಕನೊಬ್ಬನ ಪಿತೂರಿಯಿಂದಾಗಿಯೇ ಕಡತಗಳು ಸರಿಯಾದ ಸಮಯಕ್ಕೆ ಅಧಿಕಾರಿಗಳ ಮೇಜಿಗೆ ಬರುತ್ತಿಲ್ಲವೆಂಬುದು ಸ್ಪಷ್ಟವಾಯಿತು.

ಮುಂದೆ ಈ ಸತ್ಯವು ಹೈಕೋರ್ಟ್‌ನಲ್ಲೂ ಪ್ರಸ್ತಾಪವಾಯಿತು. ಅಷ್ಟು ಹೊತ್ತಿಗೆ ಅನೇಕ ಲೈವ್‌ಬ್ಯಾಂಡ್ ಮಾಲೀಕರು ತಮ್ಮ ಬೇಳೆ ಬೇಯಿಸಿಕೊಂಡು ಆಗಿತ್ತೆಂಬುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT