ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತ ಸಾಗರದ ಪ್ರಶಾಂತ ಸೂರ್ಯಾಸ್ತ

Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸೂರ್ಯೋದಯಗಳಂತೆಯೇ ಸೂರ್ಯಾಸ್ತಕ್ಕೂ ವಿಶಿಷ್ಟ ಚೆಲುವಿದೆ. ಎರಡಕ್ಕೂ ನಿಚ್ಚಳವಾದ ವ್ಯತ್ಯಾಸವಿದೆ. ಆದರೆ ಕ್ಯಾಮೆರಾ ಕಣ್ಣಿನಲ್ಲಿ ಇವುಗಳ ಅಂತರ ತಿಳಿಯುವುದಿಲ್ಲ. ಸಿನಿಮಾದಲ್ಲಿ ಸೂರ್ಯೋದಯ- ಸೂರ್ಯಾಸ್ತಗಳ ಚಿತ್ರಿಕೆಗಳನ್ನು ಅದಲು ಬದಲು ಮಾಡಬಹುದು. ಕಥೆಯ ಓಘ, ಪೂರಕ ಸಂಗೀತದ ಬಳಕೆಯಿಂದ ಅರ್ಥ ಸಂವಹನವಾಗುತ್ತದೆ.

ಸೂರ್ಯಾಸ್ತದ ಚಿತ್ರಿಕೆಯ ಮೇಲೆ ದೇವಸ್ಥಾನದ ಗಂಟೆಯ ನಿನಾದ, ಕೌಸಲ್ಯಾ ಸುಪ್ರಜಾ ರಾಮಾ, ಮಸೀದಿಯ ಪ್ರಾರ್ಥನೆಯ ಕೂಗು ಮುಂತಾದ ಪ್ರಾಂತಃಕಾಲ ಸೂಚಿ ಸದ್ದುಗಳು ಮೂಡಿದರೆ ಅದು ಪ್ರೇಕ್ಷಕನಿಗೆ ಸೂರ್ಯೋದಯದ ಭಾವ ತುಂಬಿಕೊಡುತ್ತದೆ. ಸಿನಿಮಾ ವೃತ್ತಿಯಲ್ಲಿರುವ ಕಲಾತ್ಮಕ ಚೀಟಿಂಗ್‌ಗಳಲ್ಲಿ ಇದೂ ಒಂದು. ಪ್ರೇಕ್ಷಕ ತೆರೆಯ ಮೇಲೆ ಪರಿಭಾವಿಸುವ ಕಾಲಮಾನ ಚಿತ್ರೀಕರಣದಲ್ಲಿ ಬೇರೆಯೇ ಆಗಿರಲು ಸಾಧ್ಯ.‘ಅಮೃತಧಾರೆ’ ಚಿತ್ರದಲ್ಲಿ ಬೆಳದಿಂಗಳ ತಂಪು ಬೆಳಕಿನಲ್ಲಿ ತಾಜ್‌ಮಹಲ್ ಕಂಡು ಪ್ರೇಕ್ಷಕ ಆಹಾ ಎಂದು ಉದ್ಗರಿಸುತ್ತಾನೆ. ಆದರೆ ಅದು ರಣರಣ ಬಿಸಿಲಿನ ನಡು ಮಧ್ಯಾಹ್ನದಲ್ಲಿ ಚಿತ್ರೀಕರಿಸಿದ್ದು. ಏಕೆಂದರೆ ಪುರಾತತ್ವ ಇಲಾಖೆಯವರು ಸಂಜೆಯಾಗುತ್ತಿದ್ದಂತೆ ತಾಜ್‌ಮಹಲ್ ಆವರಣದಿಂದ ಒಂದು ನೊಣವನ್ನೂ ಬಿಡದೆ ಆಚೆಗೆ ದಬ್ಬುತ್ತಾರೆ. ಅಂದು ನಾನು ಹಡಗಿನ ಮೇಲ್ತುದಿಯಿಂದ ಕಂಡ ಆ ಚೆಲುವಾದ ಸೂರ್ಯಾಸ್ತವನ್ನು ಎಂದೂ ಮರೆಯಲಾರೆ.

ಹಡಗೂ, ಭೂಮಿಯೂ ಬೇರೆ ಬೇರೆ ವೇಗದಲ್ಲಿ ಚಲಿಸುತ್ತಿದ್ದುದರಿಂದ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಭವ್ಯವಾದ ಸೂರ್ಯಾಸ್ತ. ಮನೋಭಿತ್ತಿಯ ಮೇಲೆ ಚಿರಮುದ್ರೆಗಳನ್ನು ಒತ್ತುತ್ತಿದ್ದ ನಶ್ವರ ಸೂರ್ಯಾಸ್ತವನ್ನು ಅಸಂಖ್ಯ ಛಾಯಾಚಿತ್ರಗಳಲ್ಲಿ ದಾಖಲಿಸತೊಡಗಿದೆ. ಬರಾರ್ಡ್ ಕೊಲ್ಲಿಯನ್ನು ದಾಟಿ, ಲಯನ್ಸ್ ಸೇತುವೆಯನ್ನು ಹಿಂದಿಕ್ಕಿ, ಸಾವಕಾಶವಾಗಿ ಪೆಸಿಫಿಕ್ ನಡುಗಡಲಿಗೆ ಪ್ರವೇಶ ಮಾಡಿದ್ದ ಡೈಮಂಡ್ ಪಿನ್ಸೆಸ್ ಕ್ರೂಸ್ ಕೆಲವೊಮ್ಮೆ ಉತ್ತರಕ್ಕೆ, ಕೆಲವೊಮ್ಮೆ ತುಸು ಪಶ್ಚಿಮಕ್ಕೆ, ಒಟ್ಟಾರೆ ವಾಯವ್ಯ ದಿಕ್ಕಿನೆಡೆಗೆ ಸಾಗುತ್ತಿದ್ದುದರಿಂದ ಅಲ್ಲಿ ಅಯಾಚಿತವಾಗಿ ಸೂರ್ಯಾಸ್ತವು ಪ್ರಾಪ್ತವಾಗಿ ಸುವಿಸ್ತಾರ ಶಾಂತ ಕಡಲಿನ ಮೇಲೆ ಬೆಳ್ಳಿತಗಡು ಸೀಮಾತೀತವಾಗಿ ಹೊಳೆಯುತ್ತ ಮಲಗಲು ಅಣಿಯಾಗಿತ್ತು. ನಾನು ಕಂಡಿರುವ ಅನೇಕ ಸೂರ್ಯಾಸ್ತಗಳ ನೆನಪು ಮಾಡಿಕೊಂಡೆ. ಆಗುಂಬೆಯಿಂದ ಹಿಡಿದು ಹಿಮಾಲಯ ಗಿರಿ ಶ್ರೇಣಿಗಳವರೆಗೆ ಹತ್ತಾರು ನೆನಪಾದವು. ಶಾಂತಸಾಗರದ ಪ್ರಶಾಂತ ಸೂರ್ಯಾಸ್ತವು ಆ ಪಟ್ಟಿಗೆ ಸೇರ್ಪಡೆಯಾಯಿತು. ಅನಂತರದ ಸೂರ್ಯರಹಿತ ಮುಸ್ಸಂಜೆಯ ಕಂಪು ಕೆಲವೇ ಗಳಿಗೆ. ಕತ್ತಲೂ, ಚಳಿಯೂ ಆವರಿಸತೊಡಗಿದವು. ಸುತ್ತ ಗಿಜಿಗಿಜಿ. ನಾನೊಬ್ಬನೇ ಒಂಟಿ. ಹಸಿವು ವಾಸ್ತವಕ್ಕೆ ತಂದಿತು. ಅನ್ನ ರೊಟ್ಟಿಗಳು ಇರಬಹುದಾದ ರೆಸ್ಟೋರೆಂಟ್ ಹುಡುಕುತ್ತ ಹೊರಟೆ.

ನನ್ನೆದುರು ಎರಡು ಜೋಡಿಗಳು ಕುಳಿತಿದ್ದವು. ಇಂಥ ಪ್ರವಾಸಕ್ಕೆ ಯಾರೂ ಒಂಟಿಯಾಗಿ ಬರುವುದಿಲ್ಲವಂತೆ. ಅವರು ಕೊಂಚ ವಿಲಕ್ಷಣವಾಗಿ ನೋಡಿದರು. ಯಾರೇ ಪರಿಚಯವಾದರೂ ಮೊದಲ ಪ್ರಶ್ನೆ ಒಬ್ಬರೇನಾ? ಎಂಬುದಾಗಿರುತ್ತಿತ್ತು. ಅವರಿಗೆಲ್ಲ ಮತ್ತೆ ಮತ್ತೆ ಜಕ್ಕೇನಹಳ್ಳಿ ವೀಸಾ ತಿರಸ್ಕೃತ ಪ್ರಕರಣ ಅಥವಾ ಹುಸಿ ಹೃದಯಾಘಾತದ ಸ್ಕ್ರೀನ್ ಪ್ಲೇ ವಿವರಿಸುವುದು ಸುತರಾಂ ನನಗಿಷ್ಟವಿರಲಿಲ್ಲ. ಕೆಲವು ಸಮಾರಂಭಗಳಲ್ಲಿ ಬಾರದಿರುವ ಅತಿಥಿಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುವಂತೆ ಇಲ್ಲೂ ಆಗತೊಡಗಿತು. ಮಾತಿನ ದಿಕ್ಕು ಬದಲಿಸುವುದರ ಮೂಲಕ ಈ ಪುನರಾವರ್ತನೆಯ ಹರಿಕಥೆಯಿಂದ ಪಾರಾಗತೊಡಗಿದೆ. ಅವೆರಡೂ ಮಧ್ಯವಯಸ್ಸಿನ ಜೋಡಿಗಳು. ಇಡೀ ಕ್ರೂಸ್‌ನಲ್ಲಿ ಮಧ್ಯವಯಸ್ಸು ಮತ್ತು ಇಳಿವಯಸ್ಸಿನ ಜೋಡಿಗಳೇ. ಮಧುಚಂದ್ರದ ದಂಪತಿಗಳು ಅಪರೂಪ. ಮಕ್ಕಳೂ ಅಪರೂಪ. ಮೌನ ತುಂಬಲು, ಊಟ ಹೇಗಿದೆ? ಎಂಬ ಔಪಚಾರಿಕ ಪ್ರಶ್ನೆಯನ್ನು ಎಸೆದೆ. ಮಾತಿಗಿಳಿಯಲು ಇಂಥ ಕ್ಲೀಷಾ ಪ್ರಶ್ನೆಗಳು ನೆರವಾಗುತ್ತವೆ. ಎದುರಿನವರು ವಾಚಾಳಿಗಳಾಗಿದ್ದರಂತೂ ಮಾತನಾಡಲು ತವಕದಿಂದಿರುತ್ತಾರೆ.

ಕ್ಷುಲ್ಲಕ ಪ್ರಶ್ನೆಯನ್ನೂ ಅತ್ಯುತ್ಸಾಹದಿಂದ ಸ್ವೀಕರಿಸಿ ತಮ್ಮ ಅನುಭವವನ್ನು ಹಂಚಲು ತುದಿಗಾಲಿನಲ್ಲಿರುತ್ತಾರೆ. ಅದು ನಿರುಪಯುಕ್ತ ಮಾಹಿತಿ ಆಗಿರಬಹುದು. ಆದರೆ ಒಂದು ಹೊಸ ಅನುಭವದ ಚಿತ್ರ ನಮ್ಮ ಆಲ್ಬಮ್ಮಿಗೆ ಸೇರುತ್ತದೆ. ಮಾತು ತೀರಾ ಅತಿಯಾದರೆ, ಬೋರು ಹೊಡೆಸಿದರೆ, ಎಕ್ಸ್‌ಕ್ಯೂಸ್ ಮಿ ಎಂದು ಎದ್ದು, ಶೌಚಾಲಯದ ಕಡೆ ಹೋದಂತೆ ನಟಿಸಿ, ಮತ್ತೆ ಅತ್ತಕಡೆಗೆ ತಲೆ ಹಾಕದಿರುವ ತಂತ್ರ ಮತ್ತು ಸ್ವಾತಂತ್ರ್ಯವಿದ್ದೇ ಇರುತ್ತದೆ. ಕುಡುಕರ ಸಂಗದಲ್ಲಿ ಇದನ್ನು ನಾನು ಹೆಚ್ಚು ಬಳಸುತ್ತೇನೆ. ಆದರೂ ಹೊಸ ಮನುಷ್ಯರ ಹೊಸ ಮಾತುಗಳನ್ನು ಕೇಳಲು ನನ್ನಲ್ಲಿ ಕುತೂಹಲವೆಂಬುದು ಅಗತ್ಯಕ್ಕಿಂತ ಅಧಿಕ. ಆ ಗೃಹಿಣಿಯ ಮಾತುಗಳ ಸಾರಾಂಶವನ್ನಿಲ್ಲಿ ದಾಖಲಿಸುತ್ತಿದ್ದೇನೆ.

ಆಕೆ ಅಡುಗೆ ಮಾಡುವುದನ್ನು ನಿಲ್ಲಿಸಿ ಹಲವು ವರ್ಷಗಳಾಯಿತಂತೆ. ಕೆಲವು ಅಮೆರಿಕನ್ ಗೃಹಿಣಿಯರು ಹೀಗೆ ಅಡುಗೆ ಮನೆಯನ್ನು ತ್ಯಜಿಸಿದ್ದಾರಂತೆ. ರೆಫ್ರಿಜರೇಟರ್‌ನಲ್ಲಿ ಹಾಲು, ಹಣ್ಣಿನ ರಸ ಇಟ್ಟುಕೊಳ್ಳುವುದನ್ನು ಬಿಟ್ಟರೆ ದಿನಸಿ, ತರಕಾರಿ ತರುವ ಯೋಚನೆಯೇ ಇಲ್ಲವಂತೆ. ಅಡುಗೆ ನಿಲ್ಲಿಸಿರುವುದು
ಸ್ತ್ರೀ ಸ್ವಾತಂತ್ರ್ಯ, ಪುರುಷ ವಿರೋಧ ಎಂಬ ಕಾರಣಗಳಿಗಾಗಿ ಅಲ್ಲ. ಅವರ ಪ್ರಕಾರ ಅಡುಗೆ ಸೋ ಬೋರಿಂಗ್. ಎಷ್ಟು ಶ್ರಮ ಹಾಕುತ್ತೇವೋ ಅಷ್ಟೂ ಫಲ ದೊರಕದ ವೃತ್ತಿ. ಬೇಕಾದ ಎಲ್ಲವನ್ನೂ ತಯಾರಿಸಿಕೊಳ್ಳಲು ಪುರುಸೊತ್ತಿರುವುದಿಲ್ಲ. ಬೇಯಿಸಿದ್ದನ್ನೇ ತಿನ್ನಬೇಕು ಎಂಬ ಅನಿವಾರ್ಯತೆ. ಅಡುಗೆ ಕೆಟ್ಟರೆ ಎಲ್ಲ ವ್ಯರ್ಥ. ದಿನದಿನವೂ ರುಚಿರುಚಿಯಾದ, ವೈವಿಧ್ಯವಾದ ಖಾದ್ಯಗಳನ್ನು ಕಡಿಮೆ ಖರ್ಚಿನಲ್ಲಿ ಸವಿಯುವುದು ಹೇಗೆ? ಇಂಥ ಪ್ರಶ್ನೆಗಳು ಹೋಟೆಲ್ ಉದ್ಯಮ ನಡೆಸುವವರಿಗಲ್ಲದೆ ಬೇರೆಯವರಿಗೆ ಎಲ್ಲಿ ಹೊಳೆಯುತ್ತವೆ? ಅಮೆರಿಕಾದ ಕೆಲವು ಹೋಟೆಲ್ ಮಾಲೀಕರು ಇಂಥ ಪ್ರಶ್ನೆಗಳನ್ನು ಸೋಮಾರಿ ಸದ್ಗೃಹಿಣಿಯರಿಗೆ ಹಾಕಿ ಒಂದು ಒಳ್ಳೆಯ ಪರಿಹಾರ ಸೂಚಿಸಿದ್ದಾರೆ. ಅದೇನೆಂದರೆ ಅವರು ರಿಯಾಯಿತಿ ದರದಲ್ಲಿ ಕೂಪನ್ ಹಂಚುತ್ತಾರೆ.

ಬೆಳಗಿನ ಉಪಾಹಾರ, ಲಂಚ್ ಮತ್ತು ಡಿನ್ನರ್‌ಗಳಿಗೆ ನಿಮಗೆ ಬೇಕಾದ ರೆಸ್ಟೋರೆಂಟಿಗೆ ಹೋಗಬಹುದು. ನಿಮಗೆ ಬೇಕಾದ ಮೆನು ಆರಿಸಿಕೊಳ್ಳಬಹುದು. ಮನೆಯ ಆಸುಪಾಸಿನಲ್ಲೇ ಎಲ್ಲ ರೆಸ್ಟೋರೆಂಟುಗಳೂ ಸಾಮಾನ್ಯವಾಗಿ ಇದ್ದೇ ಇರುತ್ತವೆ. ವರ್ಷಕ್ಕೊಂದು ಸಲ ಕೂಪನ್ ಪಡೆದರೆ, ವರ್ಷವಿಡೀ ಹೋಟೆಲ್ ಊಟ. ಮೆಕ್ಸಿಕನ್ ಅಡುಗೆ ಬೋರಾದರೆ ಇಟಾಲಿಯನ್, ಅದೂ ಬೋರಾದರೆ ಥಾಯ್, ಅದೂ ಸಾಕೆನಿಸಿದರೆ ಚೈನೀಸ್ ಅಡುಗೆ. ತರಕಾರಿ ಹಚ್ಚಿ ಬೇಯಿಸುತ್ತ ಕೂರುವ ಬದಲು, ಕಾರಿನಲ್ಲಿ ಕೂತರೆ ಹತ್ತಿಪ್ಪತ್ತು ನಿಮಿಷದಲ್ಲಿ ಹೋಟೆಲ್ ಇದ್ದೇ ಇರುತ್ತದೆ. ನೆಂಟರು ಬಂದರೆ ಅವರಿಗೂ ಇದೇ ಕೂಪನ್ ಆತಿಥ್ಯ. ಹೊರಗೆ ಹೋಗಲು ಮೂಡ್ ಇಲ್ಲ ಅನ್ನಿಸಿದರೆ ಹೋಟೆಲ್‌ನವರು ಊಟವನ್ನು ಮನೆಗೇ ಕಳುಹಿಸುತ್ತಾರೆ. ಕಾಫಿ ಮಾಡುವುದಕ್ಕೆ ಹೊರತಾಗಿ ಮನೆಯಲ್ಲಿ ಒಲೆ ಹಚ್ಚಿ ಎಷ್ಟೋ ವರ್ಷವಾಯಿತು ಎಂದಳು ಆಕೆ. ಪ್ರತಿ ಭಾನುವಾರ ನಾಯಿಯನ್ನೂ ಗಂಡನನ್ನೂ ಬೆಳಗಿನ ಉಪಹಾರಕ್ಕೆ ನಮ್ಮ ಬನಶಂಕರಿ ಎಸ್ಸೆಲ್ವಿ ಮತ್ತು ಜಯನಗರದ ಮೈಯ್ಯಾಸ್‌ಗೆ ಎಳೆದು ತರುವ ಗೃಹಿಣಿಯರನ್ನು ಕಂಡಿದ್ದೇನೆ. ಅವರಿಗೆಲ್ಲ ಈ ಯೋಜನೆಯನ್ನು ವಿಸ್ತರಿಸಿದರೆ ಹೇಗಿರುತ್ತದೆ ಎಂಬ ಸ್ತ್ರೀಉಪಯೋಗಿ ದುಷ್ಟ ಯೋಚನೆ ಸುಳಿದು ಹೋಯಿತು. ಹೆಂಗಸರೇ ಮನೆಯಲ್ಲಿ ಅಡುಗೆ ಮಾಡಬೇಕು ಎಂಬ ಅಪ್ರಸ್ತುತ ವಾದವಿರಲಿ; ಮನೆಯಲ್ಲೇ ಅಡುಗೆಯನ್ನು ಏಕೆ ಮಾಡಬೇಕು ಎಂಬ ದಿನಗಳು ಬಂದಿವೆ.

ನಾನು ಬೆಚ್ಚಿ ಬೀಳಬೇಕಾದ ಇನ್ನೊಂದು ಸಂಗತಿಯನ್ನು ಆ ನಾಲ್ವರು ಹೇಳಿದರು. ಅವರು ಹದಿನೈದೂ ದಿನ ತಪ್ಪಿಯೂ ಹಡಗಿನಿಂದ ಕೆಳಗಿಳಿಯುವುದಿಲ್ಲವಂತೆ. ಪ್ರತಿ ರೆಸ್ಟೋರೆಂಟಿಗೂ ಹೋಗಿ ಖಾದ್ಯಗಳನ್ನು ಸವಿಯುವುದು ಅವರ ಏಕಮಾತ್ರ ಉದ್ದೇಶವಂತೆ. ಅದಕ್ಕಾಗಿಯೇ ಅವರು ಕ್ರೂಸ್‌ಗೆ ಬರುತ್ತಾರಂತೆ. ಕೊರೆವ ಚಳಿಯಲ್ಲಿ ನಡೆದು ಗಡಗಡ ನಡುಗುತ್ತಾ ಗ್ಲೇಸಿಯರ್‌ಗಳನ್ನು ನೋಡುವುದಕ್ಕಿಂತ, ಒಳಗೆ ಬೆಚ್ಚಗೆ ಕುಳಿತು ಗಾಜಿನ ಮೂಲಕವೇ ಗ್ಲೇಸಿಯರ್‍್ಸ್‌ಗಳನ್ನು ನೋಡುತ್ತಾ ವೈನ್ ಜತೆಗೆ ಬಿಸಿಯೂಟ ಉಣ್ಣುವುದು ಯೋಗ್ಯವಲ್ಲವೇ? ಎಂಬುದು ಅವರ ರುಚಿಕರ ತರ್ಕ. ಇವರ ಮೈಕಾಂತಿ ಹೀಗೆ ಲಕಲಕ ಅನ್ನುತ್ತಿರುವುದರ ರಹಸ್ಯ ಬಹು ರೆಸ್ಟೋರೆಂಟುಗಳ ವಿವಿಧ ಖಾದ್ಯಾಸ್ವಾದವೇ ಇರಬೇಕೆಂದು ದಿಟ್ಟಿಸಿ ನೋಡಿದೆ. ಆಕೆ ಅದನ್ನು ಹೇಗೆ ಭಾವಿಸಿಕೊಂಡಳೋ, ಏನೋ, ‘ನೀನೂ ಈ ಗ್ರೂಪ್‌ಗೆ ಸೇರುವಂತಿದ್ದರೆ ಸ್ವಾಗತ. ವರ್ಷದ ಕೂಪನ್ ಕೊಂಡರೆ ಒಳ್ಳೆಯ ರಿಯಾಯಿತಿ ಸಿಗಲಿದೆ. ಏಕೆ ಪ್ರಯತ್ನಿಸಬಾರದು?’ ಎಂದಳು. ಗಾಬರಿಬಿದ್ದೆ. ನನಗೆ ಆರ್ಗ್ಯಾನಿಕ್ ನಾಮಾಂಕಿತ ಕೆಂಪಕ್ಕಿ ಅನ್ನ, ನೀರಸ ಗಂಜಿ ಮತ್ತು ಹಸಿ ತರಕಾರಿಯನ್ನು ನನ್ನ ಹೆಂಡತಿ ಕಳೆದ ಒಂದು ಶತಮಾನದಿಂದ ಬಡಿಸುತ್ತ ಬಂದಿದ್ದರೂ ಹೊಟ್ಟೆ ಕರಗಿಸಲಾಗಿಲ್ಲ. ಇಂಥ ಹೊತ್ತಲ್ಲಿ ನಾನಿವರ ಕೂಪನ್ ತೆಗೆದುಕೊಂಡು ದಿನಕ್ಕೆ ಮೂರು ಹೋಟೆಲಿನಲ್ಲಿ ತಿನ್ನುತ್ತಾ ಅಮೆರಿಕಾದಲ್ಲಿ ಉಳಿದರೆ ನನ್ನ ಗತಿ ಏನಾಗಬಹುದು ಎಂದು ಊಹಿಸಿ, ಎಕ್ಸ್‌ಕ್ಯೂಸ್ ಮಿ ತಂತ್ರ ಬಳಸಿ ಕಳಚಿಕೊಂಡೆ. ಆ ಎರಡು ಜೋಡಿಗಳು ಅಲಾಸ್ಕ ಯಾತ್ರೆಯಲ್ಲಿ ನನಗೆ ಎಲ್ಲೂ ಕಾಣಲಿಲ್ಲ.

ಐದನೇ ಡೆಕ್‌ನ ಏಟ್ರಿಯಂಗೆ ಬಂದವನು ಸಂಗೀತಕ್ಕೆ ಕಿವಿಯೊಡ್ಡಿದೆ. ಸಮೂಹ ವಯಲಿನ್ ವಾದನವಿತ್ತು. ಗುಂಪಾಗಿ ನುಡಿಸುವ ವಾದ್ಯಗೋಷ್ಠಿ ಕಣ್ಣಿಗೂ ಕಿವಿಗೂ ಮೋಹಕ. ನನಗೆ ಶಾಸ್ತ್ರೀಯ ಸಂಗೀತ- ಇಲ್ಲಿಯದು ಮತ್ತು ಅಲ್ಲಿಯದು- ಪಾಂಡಿತ್ಯವಿಲ್ಲದಿದ್ದರೂ ಪಾಮರನಾಗಿ ಇಷ್ಟ. ಕೇಳುತ್ತ ಮೈಮರೆಯುತ್ತೇನೆ. ಪಾಶ್ಚಾತ್ಯ ಸಂಗೀತದ ದ್ವಾರವನ್ನು ನನಗೆ ತೆರೆದಿಟ್ಟವನು ಮೊಜಾರ್ಟ್. ಅವನ ರಚನೆಗಳಲ್ಲಿರುವ ನಾಟಕೀಯ ತಿರುವು ಚಕಿತಗೊಳಿಸುತ್ತದೆ. ಮನುಷ್ಯರ ಕಂಠಸಿರಿಯ ಗಾಯನ ಸಾಧ್ಯತೆಗಳನ್ನೆಲ್ಲ ಮೀರಿಸುವ ಪ್ರಯತ್ನದಂತಿವೆ ಅವನ ಸಂಯೋಜನೆಗಳು. ಅಲ್ಲಿದ್ದ ವಾದಕರೆಲ್ಲ ತೊಟ್ಟಿದ್ದ ಉಡುಪು, ಕುಳಿತಿದ್ದ ಭಂಗಿ, ಆ ವಯಲಿನ್‌ಗಳ ನುಣುಪು ಮೆಚ್ಚುಗೆಯಾಯಿತು. ಕೇಳುಗರ ಸಂಖ್ಯೆ ಹೆಚ್ಚಿರಲಿಲ್ಲ. ಹಾಗೆ ನೋಡಿದರೆ ಊಟದ ಮನೆ, ಜೂಜುಕಟ್ಟೆ, ಜಾದೂ ಪ್ರದರ್ಶನ, ನೃತ್ಯ ಪ್ರದರ್ಶನಗಳಲ್ಲಿರುತ್ತಿದ್ದ ಜನದಟ್ಟಣೆ, ಗ್ರಂಥಾಲಯ ಮತ್ತು ಸಂಗೀತ ಗೋಷ್ಠಿಗಳಲ್ಲಿರುತ್ತಿರಲಿಲ್ಲ. ಆದರೂ ಆ ವಾದಕರೆಲ್ಲ ತನ್ಮಯತೆಯಿಂದ ತಮ್ಮ ಪಾಡಿಗೆ ತಾವು ಎಂಬಂತೆ ಅದ್ಭುತ ಸಂಗೀತಸೃಷ್ಟಿಯಲ್ಲಿ ತೊಡಗಿದ್ದರು. ಬರಹಗಾರನಾಗಿ ನನ್ನದೂ ಅದೇ ತತ್ವ. ಓದುವವರ ಸಂಖ್ಯೆ ಅಸಂಖ್ಯವಾಗಿರಲಿ ಅಥವಾ ಅವರು ಒಬ್ಬರೇ ಒಬ್ಬರಿರಲಿ ಬರೆಯುವವನು ಮಾತ್ರ ಜೀವ ತೇಯ್ದುಕೊಂಡು, ನೋವಿಗೊಡ್ಡಿಕೊಂಡು, ಪೂರ್ಣವಾಗಿ ತೊಡಗಿಸಿಕೊಂಡು ಬರೆಯಬೇಕು. ಕಲೆ ಚೌಕಾಸಿಯಲ್ಲಿ ಹುಟ್ಟಲಾರದು. ಆ ವಯಲಿನ್ ವಾದಕರು ಯಾರು ಕಿವಿ ಮುಚ್ಚಿದರೂ ಎಮಗಿಲ್ಲ ಚಿಂತೆ ಎಂಬಂತೆ ಒಂದೂವರೆ ಗಂಟೆ ಧ್ಯಾನಾಸಕ್ತರಾಗಿ ನುಡಿಸಿದರು.

ಮಲಗುವ ಮುನ್ನ ಪುಸ್ತಕ ತೆರೆದೆ. ಐದು ನೂರು ಪುಟಗಳ ದೈತ್ಯ ಪುಸ್ತಕ. ‘ದಿ ಮ್ಯೂಸಿಯಂ ಆಫ್ ಇನ್ನೋಸೆನ್ಸ್’. ಮುಖಪುಟದಲ್ಲೇ ‘ವಾಷಿಂಗ್‌ಟನ್ ಪೋಸ್ಟ್’ ಪತ್ರಿಕೆ ಒರ್‌ಹಾನ್ ಪಮುಕ್‌ನನ್ನು ತನ್ನ ತಲೆಮಾರಿನ ಮುಖ್ಯ ಲೇಖಕ ಎಂದು ಕೊಂಡಾಡಿತ್ತು. ದಿನಕ್ಕೆ ಆರು ಅಧ್ಯಾಯಗಳನ್ನಾದರೂ ಓದಬೇಕೆಂದು ಹಟ ತೊಟ್ಟೆ. ಮೇ ೨೬, ಸೋಮವಾರ, ೧೯೭೫ರ ಮಧ್ಯಾಹ್ನ ಎರಡೂ ಮುಕ್ಕಾಲು ಗಂಟೆಗೆ ನಾನು ನನ್ನ ಪ್ರಿಯತಮೆ ಫುಸನ್‌ಳನ್ನು ಗಾಢವಾಗಿ ಚುಂಬಿಸಿದೆ ಎಂಬ ನಾಯಕನ ಪ್ರೇಮ ನಿವೇದನೆಯೊಂದಿಗೆ ಈ ಘನವಾದ ಕಾದಂಬರಿ ಆರಂಭವಾಗುತ್ತದೆ. ಅಲಾಸ್ಕ ಯಾತ್ರೆಗೂ ಈ ಕಾದಂಬರಿಯ ವಸ್ತುವಿಗೂ ಏನೇನೂ ಸಂಬಂಧವಿರಲಿಲ್ಲ. ಹೀಗೆ ಅಸಂಬಂಧಿಯಾಗಿ ಮತ್ತು ಅಸಂಗತವಾಗಿ ನಾನು ಕೆಲವೊಮ್ಮೆ ಕಳೆದುಹೋಗುವುದುಂಟು. ಸತತವಾಗಿ ಎರಡು ದಿನಗಳಿಂದ ತೇಲುತ್ತ, ತೀರ ಹುಡುಕುತ್ತ ನಮ್ಮ ಹಡಗು ತಹತಹಿಸುತ್ತಿರುವಂತೆಯೇ ನಾನೂ ಹೀಗೆಯೇ ಎಲ್ಲೆಲ್ಲೋ ಎಡತಾಕುತ್ತಿದ್ದೇನೆ ಎನಿಸಿತು.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT