ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರೇ ಹುಬ್ಬಳ್ಳಿ ಬಸ್‌ನಿಲ್ದಾ ಣ ನೋಡಿದ್ದೀರಾ?

Last Updated 1 ಜೂನ್ 2014, 19:37 IST
ಅಕ್ಷರ ಗಾತ್ರ

ಯಾವುದೇ ಊರಿಗಾಗಲಿ ಬಸ್‌ನಿಲ್ದಾಣ ಪ್ರಮುಖ ಹೆಗ್ಗುರುತು. ಇತ್ತೀಚಿನ ದಿನಗಳಲ್ಲಂತೂ ಕೆಲ ಪ್ರಮುಖ ನಗರಗಳಲ್ಲಿ ಅಂತರರಾಷ್ಟ್ರೀಯ ದರ್ಜೆಯ ಬಸ್‌ ನಿಲ್ದಾಣಗಳು ತಲೆ ಎತ್ತುತ್ತಿವೆ. ಇದಕ್ಕೆ ಗುಜರಾತ್‌ ರಾಜ್ಯದ ವಡೋದರ ಒಂದು ನಿದರ್ಶನ. ಬೇರೆಡೆ ಉತ್ತಮ ಸೌಲಭ್ಯ ವುಳ್ಳ, ಪ್ರಯಾಣಿಕ ಸ್ನೇಹಿ ಬಸ್‌ನಿಲ್ದಾಣಗಳು ನಿರ್ಮಾಣ­ವಾಗುತ್ತಿದ್ದರೆ ಉತ್ತರ ಕರ್ನಾಟಕ ಭಾಗದಲ್ಲಿರುವ ಬಸ್‌­ನಿಲ್ದಾಣ­ಗಳ ಸ್ಥಿತಿ ಮಾತ್ರ ಇದಕ್ಕೆ ವ್ಯತಿರಿಕ್ತ.

ಹುಬ್ಬಳ್ಳಿ ನಗರದಲ್ಲಿ ಎರಡು ಬಸ್‌ನಿಲ್ದಾಣಗಳಿವೆ. ಊರು ಬೆಳೆದಂತೆಲ್ಲಾ ದೊಡ್ಡ ಬಸ್‌ನಿಲ್ದಾಣ ಬೇಕಾಗುತ್ತದೆ. ಅದೇ ಉದ್ದೇಶದಿಂದಲೇ ದಶಕಗಳ ಹಿಂದೆಯೇ ಇಲ್ಲಿ ಹೊಸ ಬಸ್‌ನಿಲ್ದಾಣ ನಿರ್ಮಾಣವಾಗಿದೆ. ಆದರೆ ಅದರ ಬಳಕೆಯನ್ನು ನೋಡಿದರೆ ಅಷ್ಟೊಂದು ಹಣ ವಿನಿಯೋಗಿಸಿದ್ದು ವ್ಯರ್ಥ ಎನಿಸುತ್ತದೆ. ಇದು ಬರೀ ಹುಬ್ಬಳ್ಳಿಯ ಕಥೆ ಅಲ್ಲ. ಉತ್ತರ ಕರ್ನಾ­ಟಕದ ಧಾರವಾಡ, ಗೋಕಾಕ, ಬಾಗಲಕೋಟೆ, ಗದಗ, ಶಿರಸಿ ಎಲ್ಲೆಡೆಯೂ ಇದೇ ಸಮಸ್ಯೆ. ಇಲ್ಲೆಲ್ಲಾ ಎರಡೆರಡು ಬಸ್‌ನಿಲ್ದಾಣಗಳಿವೆ.

ಹುಬ್ಬಳ್ಳಿಯ ಹಳೆಯ ಬಸ್‌ನಿಲ್ದಾಣ ಊರಿನ ಮಧ್ಯೆ ಇದ್ದು ಎಲ್ಲರಿಗೂ ಅನುಕೂಲಕರವಾಗಿದೆ. ಆದರೆ ಜನಜಂಗುಳಿ, ವಾಹನ ದಟ್ಟಣೆಯನ್ನು ನೋಡಿದಾಗ ಅಲ್ಲಿಗೆ ಕಾಲಿಡಲೂ ಆಗುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯೂ ಏರಿದೆ. ಆದರೆ ಜಾಗ ದೊಡ್ಡದಿಲ್ಲವಲ್ಲ? ಲಭ್ಯ­ವಿರುವ ಸೀಮಿತ ಜಾಗದಲ್ಲಿಯೇ ಬಸ್ಸುಗಳು ಸಂಚರಿಸಬೇಕು, ತಿರುಗಬೇಕು; ಅವುಗಳ ನಡುವೆ ಜನ ನುಸುಳಬೇಕು; ನುಸುಳುವಾಗ, ಬಸ್ಸಿನಲ್ಲಿ ಕುಳಿತವರು ಹಾರಿಸುವ ಪಿಚಕಾರಿ­ಯಿಂದ (ಉಗುಳು) ತಪ್ಪಿಸಿಕೊಳ್ಳಬೇಕು. ಎಲ್ಲೆಂದರಲ್ಲಿ ಪಿಚಕಾರಿ ಹಾರಿಸುವವರ ಸಂಖ್ಯೆ ಉತ್ತರಕರ್ನಾಟಕದಲ್ಲಿ ಮೊದಲೇ ವಿಪರೀತ. ಪ್ರಯಾಣಿಕರು ಮೈಯೆಲ್ಲಾ ಕಣ್ಣಾಗಿಸಿಕೊಂಡೇ ಓಡಾಡಬೇಕಿದೆ.

ಇನ್ನು ಮಳೆ ಬಂದರಂತೂ ಇಲ್ಲಿ ಬಸ್‌ ಹತ್ತಲೂ ಆಗದು. ತೊಟ್ಟಿಯಂತಿರುವ ಪ್ಲಾಟ್‌ಫಾರಂನಲ್ಲಿ ಅಡಿಗಟ್ಟಲೆ ನೀರು ನಿಂತಿರುತ್ತದೆ. ಷವರ್‌ನಿಂದ ಬೀಳುವಂತೆ ತಾರಸಿಯಿಂದ ಮಳೆ ನೀರು ಸುರಿಯುತ್ತಿರುತ್ತದೆ. ಜನ ತಾವೂ ತೋಯ್ದು, ಲಗ್ಗೇಜನ್ನೂ ತೋಯಿಸಿಕೊಂಡು ಬಸ್‌ ಹತ್ತಿ, ಯಾತನೆ ಪಡುತ್ತಾ ಪ್ರಯಾಣಿಸಬೇಕಾಗಿದೆ.

ಸಾರ್ವಜನಿಕರು ವರ್ಷಗಳಿಂದ ಅನುಭವಿಸುತ್ತಿರುವ ಈ ಯಾತನೆ ಇನ್ನೂ ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಕಾಣಿಸಿಲ್ಲ. ಬಸ್‌ನಿಲ್ದಾಣಕ್ಕೆ ಬಂದರೆ ತಾನೇ ಅವರಿಗೆ ವಾಸ್ತವಿಕ ಪರಿಸ್ಥಿತಿ ಅರಿವಿಗೆ ಬರುವುದು? ಬಸ್‌ನಲ್ಲಿ ಪ್ರಯಾಣ ಮಾಡದ ಅವರಿಗೆ ಅಲ್ಲಿಗೆ ಬರುವ ಅಗತ್ಯವಾದರೂ ಏನಿದೆ? ಆದರೆ ಪ್ರತಿ ಬಸ್‌ನಲ್ಲೂ ಶಾಸಕರಿಗಾಗಿ ಸೀಟು ಕಾಯ್ದಿರಿಸಲಾಗಿರುತ್ತದೆ. ಅವರು ಯಾವ ಕ್ಷಣದಲ್ಲಿ ಬಂದರೂ ಸೀಟು ಗ್ಯಾರಂಟಿ. ಆದರೂ ಬಸ್‌ ಹತ್ತುವ ಶಾಸಕರ ಸಂಖ್ಯೆ ವಿರಳಾತಿವಿರಳ. ಒಂದುವೇಳೆ ಬಂದಿದ್ದರೆ ಆ ಅಸಹ್ಯ, ಕೊಳಕು ಅವರ ಕಣ್ಣಿಗೂ ಬೀಳುತ್ತಿದ್ದವು. ಅಲ್ಲವೆ?

ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಾನಾ ವಿಧದ ಐಷಾರಾಮಿ ಬಸ್‌ಗಳ ಸಂಚಾರ ಆರಂಭಿಸಿದೆ. ಜನರೂ ಇವನ್ನು ಹೆಚ್ಚು ಬಳಸುತ್ತಿದ್ದಾರೆ. ಆದರೆ ಬಸ್‌ನಿಲ್ದಾಣದಲ್ಲಿ ಮಾತ್ರ ಕೂರಲು, ಲಗ್ಗೇಜು ಇಡಲು, ಕನಿಷ್ಠ  ನಿಲ್ಲಲೂ ಸಾಧ್ಯವಾಗದಂತಹ ವಾತಾವರಣ. ಸ್ವಚ್ಛತೆ ಕುರಿತಂತೆ ಸಾರಿಗೆ ಸಂಸ್ಥೆಗೂ ತೀವ್ರ ನಿರ್ಲಕ್ಷ್ಯ. ಆಗೊಮ್ಮೆ ಈಗೊಮ್ಮೆ ಎಂಬಂತೆ ಖಾಸಗಿ ಸಂಘ–ಸಂಸ್ಥೆಗಳ ಕಾರ್ಯಕರ್ತರು ಬಸ್‌ನಿಲ್ದಾಣಕ್ಕೆ ಬಣ್ಣ ಬಳಿಯುವ, ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಾರೆ. ಸ್ವಯಂಸೇವಾ ಸಂಸ್ಥೆಗಳ ಇಂತಹ ಯತ್ನಗಳೂ ಅಧಿಕಾರಿಗಳ ಕಣ್ಣು ತೆರೆಸಿಲ್ಲ ಎಂಬುದು ಹುಬ್ಬಳ್ಳಿ ಹಳೆ ಬಸ್‌ನಿಲ್ದಾಣದ ಗಲೀಜು, ಹಳ್ಳ ಬಿದ್ದ ರಸ್ತೆ, ಮಳೆಯಿಂದ ರಕ್ಷಣೆ ನೀಡದ ತಾರಸಿಗಳನ್ನು ಕಂಡಾಗ ಸ್ಪಷ್ಟವಾಗುತ್ತದೆ.

ಅಧಿಕಾರಿಗಳ ಜತೆಗೆ ಈ ಊರಿನ ಚುನಾಯಿತ ಪ್ರತಿನಿಧಿ­ಗಳೂ ಬಸ್‌ನಿಲ್ದಾಣದ ಬಗ್ಗೆ ತಾತ್ಸಾರ, ಅಲಕ್ಷ್ಯ ತೋರುತ್ತಿ­ರುವುದಾದರೂ ಏಕೆ ಎಂಬುದು ಅರ್ಥವಾಗುವುದಿಲ್ಲ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಈ ನಗರದ ನಿವಾಸಿಯೇ ಆದ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು. ಆದರೂ ಊರ ಬಸ್‌ನಿಲ್ದಾಣ ಮಾತ್ರ ಸುಧಾರಣೆ ಕಾಣಲಿಲ್ಲ. ಐದು ವರ್ಷವೂ ಅಭಿವೃದ್ಧಿ, ಅಭಿವೃದ್ಧಿ ಎಂದೇ ಪಠಿಸಿದರು.

ಮಾತು ಮಾತಿಗೂ ಬಿಜೆಪಿ ಸರ್ಕಾರ ಗುಜರಾತ್‌ ಮಾದರಿ ಅಭಿವೃದ್ಧಿಯ ಘೋಷಣೆ ಮಾಡುತ್ತಿತ್ತು. ಆದರೆ ಹುಬ್ಬಳ್ಳಿ ಬಸ್‌ನಿಲ್ದಾಣದ ಜತೆ ಗುಜರಾತ್‌ ರಾಜ್ಯದ ಕೆಲವೆಡೆ ನಿರ್ಮಿಸಿರುವ ಬಸ್‌ನಿಲ್ದಾಣಗಳನ್ನು ಈ ರಾಜಕಾರಣಿಗಳು ಹೋಲಿಸಿ ನೋಡಬೇಕು. ಹೋಗಲಿ, ಇಲ್ಲಿನ ಚುನಾಯಿತ ಪ್ರತಿನಿಧಿಗಳು ಕನಿಷ್ಠ ಶಿವಮೊಗ್ಗ ಅಥವಾ ಹಾಸನ ಜಿಲ್ಲಾ ಕೇಂದ್ರದ ಬಸ್‌ನಿಲ್ದಾಣಗಳನ್ನಾದರೂ ನೋಡಿ ಪ್ರೇರಣೆ ಪಡೆಯಬಹುದಿತ್ತು. ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಲು ಚುನಾಯಿತ ಪ್ರತಿನಿಧಿಗಳು ಮೊದಲು ಆದ್ಯತೆಯನ್ನು ಗುರುತಿಸಬೇಕು. ಅದನ್ನು ಊರಿನ ಹೆಗ್ಗುರುತಾದ ಬಸ್‌ನಿಲ್ದಾಣದಿಂದಲೇ ಆರಂಭಿಸುವುದು ಒಳಿತು. ದೇಶ ವಿದೇಶಗಳಿಂದ ಬರುವ ಪ್ರಯಾಣಿಕರು ನಮ್ಮೂರಿನ ಬಸ್‌ನಿಲ್ದಾಣ ಕಂಡು ಏನೆಂದುಕೊಳ್ಳುತ್ತಾರೋ ಎಂಬ ಆತಂಕವಾದರೂ ಅವರಿಗೆ ಇರಬೇಡವೇ?

ಹತ್ತಾರು ವರ್ಷಗಳ ಹಿಂದೆಯೇ ಉತ್ತರಕರ್ನಾಟಕದ ವಿವಿಧ ಪ್ರಮುಖ ನಗರಗಳಲ್ಲಿ ಹೊಸ ಬಸ್‌ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆದರೆ ಇಲ್ಲಿಗೆ ಪ್ರಯಾಣಿಕರೇ ಬರುವುದಿಲ್ಲ. ನಗರದ ಮಧ್ಯಭಾಗಕ್ಕೆ ಸ್ವಲ್ಪ ದೂರದಲ್ಲಿದೆ ಎಂಬ ಏಕೈಕ ಕಾರಣಕ್ಕೆ ಜನರು ಇದನ್ನು ಬಳಸದಿರುವುದು ಸರಿಯಲ್ಲ. ಕಿಷ್ಕಿಂಧೆಯಂತಹ ಹುಬ್ಬಳ್ಳಿ ಹಳೆ ಬಸ್‌ನಿಲ್ದಾಣದಲ್ಲಿ ಪರ ಊರುಗಳಿಗೆ ತೆರಳುವ ಎಲ್ಲ ಬಸ್‌ಗಳ ಜತೆಗೆ ನಗರ ಸಾರಿಗೆಯ ಬಸ್‌ಗಳೂ ಬಂದು ನಿಂತು ಹೊರಡುತ್ತವೆ. ಹಾಗಾಗಿ ದಿನದ 24 ತಾಸು ಇಲ್ಲಿ ಜನರ ಓಡಾಟವಿರುತ್ತದೆ. ಅದೇ ಹೊಸ ಬಸ್‌ನಿಲ್ದಾಣದಲ್ಲಿ ಮಟ ಮಟ ಮಧ್ಯಾಹ್ನವೂ ಜನರ ಸಂಚಾರ ಅತಿ ವಿರಳವಾಗಿರುತ್ತದೆ.

ಬಹುಶಃ ಇಲ್ಲೂ ಜನರಿಗೆ ಉತ್ತಮ ಸೌಲಭ್ಯ, ಅಲ್ಲಿಂದ ವಿವಿಧ ಬಡಾವಣೆಗಳಿಗೆ ನಗರ ಸಾರಿಗೆ ಬಸ್‌ ಸೌಕರ್ಯವಿದ್ದಿದ್ದರೆ ಇಲ್ಲೂ ಜನರು ಬಳಕೆ ಮಾಡುತ್ತಿದ್ದರೋ ಏನೋ? ಹಾಗಾಗಿ ಜನರು ಬರುವಲ್ಲಿಗೇ ಬಸ್‌ ಹೋಗಬೇಕಾದ ಅನಿವಾರ್ಯತೆ ಸಂಸ್ಥೆಯದ್ದಾಗಿದೆ. ಇಲ್ಲವಾದಲ್ಲಿ ಸಂಸ್ಥೆಗೆ ವರಮಾನವೇ ಬರುವುದಿಲ್ಲ. ಏಕೆಂದರೆ ಖಾಸಗಿ ಟೆಂಪೊಗಳು, ಬಸ್‌ಗಳು ಪ್ರಯಾಣಿಕರನ್ನು ಸೆಳೆಯಲು ಕಾದುನಿಂತಿರುತ್ತವೆ. ಹಾಗಾಗಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ ಪರ ಊರುಗಳಿಗೆ ತೆರಳುವ ಎಲ್ಲ ಬಸ್‌ಗಳನ್ನು ಕಡ್ಡಾಯವಾಗಿ ಎರಡೂ ಬಸ್‌ನಿಲ್ದಾಣಗಳ ಮೂಲಕ ಹಾದು ಹೋಗುವಂತೆ ಮಾಡಿದೆ. ಆದರೂ ನಷ್ಟ ತಪ್ಪಿಲ್ಲ.

ರಾಜಕೀಯ ನಾಯಕರೂ ಊರ ಹೊರಗೆ, ದೂರದಲ್ಲಿ ತಮ್ಮ ಅಥವಾ ತಮಗೆ ಬೇಕಾದವರ ಜಮೀನಿಗೆ ಮೌಲ್ಯ ಹೆಚ್ಚಾಗಲಿ ಎಂಬ ಭಾವನೆಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು. ಹತ್ತಾರು ವರ್ಷಗಳ ಕಾಲ ಗೋಕುಲ ರಸ್ತೆಯಲ್ಲಿದ್ದ ಹೊಸ ಬಸ್‌ನಿಲ್ದಾಣವನ್ನು ಈಗ ಮತ್ತೆ ಹೊಸೂರು ಡಿಪೊ ಜಾಗಕ್ಕೆ  ಸ್ಥಳಾಂತರಿಸುವ ಮಾತು ಕೇಳಿಬರುತ್ತಿದೆ. ಈ ಕೆಲಸವನ್ನು ಹಿಂದೆಯೇ ಮಾಡಬಹು ದಿತ್ತಲ್ಲವೇ? ಅದು ಜನರಿಗೂ ಉಪಯೋಗವಾಗುತ್ತಿತ್ತು. ರಾಜಕೀಯ ನಾಯಕರ ಲಕ್ಷ್ಯ ಜನ ಉಪಯೋಗಿ ಕೆಲಸಗಳತ್ತ ಇರಬೇಕೇ ಹೊರತು ಸ್ವಾರ್ಥ ಸಾಧನೆಯತ್ತ ಅಲ್ಲ. ಆಗಷ್ಟೇ ಜನರು ಮುಖಂಡರನ್ನು ಸ್ಮರಿಸುತ್ತಾರೆ. ಇದು ಸೇವೆಗೆ ಪಡೆಯುವ ಗೌರವ. ಅದನ್ನು ನಮ್ಮ ನಾಯಕರು ಗಳಿಸುತ್ತಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT