ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಮತ್ತು ಭಾಷಾ ಮಾಧ್ಯಮ: ನಾವು ಸಾಗುತ್ತಿರುವುದೆತ್ತ?

Last Updated 28 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ನೆರೆರಾಜ್ಯದ ವಿಶ್ವವಿದ್ಯಾನಿಲಯವೊಂದರಲ್ಲಿ ಸಂದರ್ಶನ ಪ್ರಾಧ್ಯಾಪಕಿಯಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಪನ್ಯಾಸಗಳನ್ನು ನೀಡಲು ತೆರಳಿದ್ದ ನನಗೆ ಆಶ್ಚರ್ಯವೊಂದು ಕಾದಿತ್ತು.

ಹೊರ ರಾಜ್ಯವೊಂದರಿಂದ ಆಹ್ವಾನ ಬಂದಿದ್ದರಿಂದ, ವಿದ್ಯಾರ್ಥಿಗಳಿಗೆ ಆಂಗ್ಲಭಾಷಾ ಮಾಧ್ಯಮದ ಮೂಲಕ ಉಪನ್ಯಾಸಗಳನ್ನು ನೀಡಬೇಕೆಂಬುದು ನನ್ನ ಅನಿಸಿಕೆಯಾಗಿತ್ತು. ಅದಕ್ಕೆ ಪೂರಕವಾದ ತಯಾರಿಯನ್ನು ನಡೆಸಿ ನಾನಲ್ಲಿಗೆ ತಲುಪಿದಾಗ, ಮೊದಲ ಭೇಟಿಯಲ್ಲಿಯೇ ವಿದ್ಯಾರ್ಥಿಗಳ ಗ್ರಹಿಕಾ ಶಕ್ತಿ ಅವರ ಮಾತೃಭಾಷೆಗೆ ಮಾತ್ರ ಸೀಮಿತ ಎಂಬುದು ವೇದ್ಯವಾಯಿತು.

ಕೇಳುವವರಿಗೆ ಅರ್ಥವಾಗುವಂತೆ ಮಾತನಾಡುವಷ್ಟು ಮಟ್ಟಿಗೆ ಆ ವಿದ್ಯಾರ್ಥಿಗಳ ಮಾತೃಭಾಷೆಯ (ರಾಜ್ಯದ ಪ್ರಾದೇಶಿಕ ಭಾಷೆ) ಜ್ಞಾನ ನನಗೆ ಇದ್ದುದರಿಂದ ನಾನು ವಹಿಸಿಕೊಂಡಿದ್ದ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಯಿತು.

ಮರಳಿ ಕರ್ನಾಟಕಕ್ಕೆ ಹೊರಟ ನನ್ನನ್ನು ಹಲವಾರು ಆಲೋಚನೆಗಳು ಹಿಂಬಾಲಿಸಿದವು. ಕಾಕತಾಳೀಯವೋ ಎಂಬಂತೆ ಆ ರಾಜ್ಯದ ಪ್ರಾದೇಶಿಕ ಭಾಷೆಯ ಪರಿಚಯ ನನಗಿತ್ತು ಸರಿ. ಹಾಗೇನಾದರೂ ಇಲ್ಲದಿದ್ದಲ್ಲಿ ಏನಾಗುತ್ತಿತ್ತು ಎಂಬ ಪ್ರಶ್ನೆ ನನ್ನನ್ನು ನಿರಂತರವಾಗಿ  ಕಾಡಿದರೆ, ಬಹು ಕಾಲದಿಂದಲೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿರುವ ಉನ್ನತ ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ವಿಷಯವನ್ನು ಸುತ್ತುವರೆದಿರುವ ಗೊಂದಲಗಳನ್ನು ಸಮರ್ಥವಾಗಿ ಬಗೆಹರಿಸಲು ನಮಗೆ ಸಾಧ್ಯವಾಗಿಲ್ಲವಲ್ಲ ಎಂಬ ಯೋಚನೆ ಮನಸ್ಸನ್ನು ಕುಟುಕುತ್ತಿದೆ.

ನನಗಾದ ಅನುಭವ ದೇಶದ ಯಾವುದೇ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಭಾರತದ ಬಹುತೇಕ ರಾಜ್ಯಗಳಲ್ಲಿ ಕೆಲ ಶಿಕ್ಷಣ ಸಂಸ್ಥೆಗಳನ್ನು ಹೊರತು ಪಡಿಸಿದರೆ, ಹೆಚ್ಚಿನ ಸಂಖ್ಯೆಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳಲ್ಲಿ ಬೋಧನೆ ನಡೆಯುವುದು, ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯುವುದು ಪ್ರಾದೇಶಿಕ ಭಾಷೆಯಲ್ಲೇ.

ಇದು ವಿಶೇಷವಾಗಿ ಅನ್ವಯಿಸುವುದು ಸಾಮಾನ್ಯ ಶಿಕ್ಷಣವನ್ನು ನೀಡುವ ಸಂಸ್ಧೆಗಳಿಗೆ ಹಾಗೂ ಮಾನವಿಕ ಮತ್ತು ಸಮಾಜ ವಿಜ್ಞಾನ ಕೋರ್ಸುಗಳಿಗೆ. ಇಂದು ನರ್ಸರಿ ಮಟ್ಟದಿಂದ ಹಿಡಿದು ಪಿಎಚ್‌ಡಿ ಪದವಿಯವರೆಗೆ ಶಿಕ್ಷಣವನ್ನು ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಪಡೆಯುವ ಅವಕಾಶವಿರುವುದರಿಂದಲೇ ಅನೇಕ ವಿದ್ಯಾರ್ಥಿಗಳು ತಮ್ಮ ಇಡೀ ಶಿಕ್ಷಣವನ್ನು ಪ್ರಾದೇಶಿಕ ಭಾಷೆಯ ಮೂಲಕವೇ ಪಡೆದಿರುತ್ತಾರೆ.

ಪ್ರಾದೇಶಿಕ ಭಾಷೆ ಅತ್ಯಧಿಕ ಸಂದರ್ಭಗಳಲ್ಲಿ ಮಾತೃಭಾಷೆಯೂ ಆಗಿರುವುದರಿಂದ ಶಿಕ್ಷಣದ ಎಲ್ಲ ಹಂತಗಳಲ್ಲೂ ಅದು ಕಲಿಕೆಗೆ ಅತ್ಯಂತ ಪ್ರಶಸ್ತವಾದ ಮಾಧ್ಯಮ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಈ ಆಲೋಚನೆಯ ನಿಟ್ಟಿನಲ್ಲೇ ಉನ್ನತ ಶಿಕ್ಷಣವನ್ನು ಪ್ರಾದೇಶಿಕ ಭಾಷೆಯ ಮೂಲಕವೇ ನೀಡಬೇಕೆಂಬ ಚರ್ಚೆಯೇನೋ ನಾಲ್ಕು ದಶಗಳ ಹಿಂದೆಯೇ ಪ್ರಾರಂಭವಾಯಿತು.

ಆದರೆ ವಿಶ್ವವಿದ್ಯಾನಿಲಯಗಳಲ್ಲಿ ಬೋಧಿಸುವ ಎಲ್ಲ ಅಧ್ಯಯನ ವಿಷಯಗಳ ಜ್ಞಾನ ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಿಲ್ಲದಿರುವ ಕಾರಣ, ಉನ್ನತ ಶಿಕ್ಷಣವನ್ನು ಮಾತ್ರ ಆಂಗ್ಲಭಾಷೆಯಲ್ಲೇ ನೀಡುವುದು ಸೂಕ್ತ ಎಂಬ ವಾದವನ್ನು ಮಂಡಿಸಲಾಯ್ತು. ತರಗತಿಯಲ್ಲಿನ ಬೋಧನೆ ಕಲಿಕೆಗೆ ಎಷ್ಟು ಮುಖ್ಯವೋ ತರಗತಿಗಳ ಹೊರಗೆ ನಡೆಯುವ ಅಧ್ಯಯನವೂ ಅಷ್ಟೇ ಪ್ರಧಾನವಾದುದರಿಂದ ಎಲ್ಲ ಅಧ್ಯಯನ ವಿಷಯಗಳಲ್ಲೂ ಪ್ರಾದೇಶಿಕ ಭಾಷೆಗಳಲ್ಲಿ ಗುಣಮಟ್ಟದ ಕಲಿಕಾ - ಬೋಧನಾ ಸಾಮಗ್ರಿಗಳು ಲಭ್ಯವಿರಬೇಕು.
 
ಆದರೆ ಅಂಥ ಪರಿಸ್ಥಿತಿ ಇನ್ನೂ ಸೃಷ್ಟಿಯಾಗದ ಕಾರಣ ಪ್ರಾದೇಶಿಕ ಭಾಷೆಗಳಲ್ಲಿ ವಿಷಯ ಮೂಲಗಳು ತಯಾರಾಗುವವರೆಗೆ ಉನ್ನತ ಶಿಕ್ಷಣದ ಮಟ್ಟದಲ್ಲಿ ಆಂಗ್ಲಮಾಧ್ಯಮದಲ್ಲೇ ಬೋಧನೆ - ಕಲಿಕೆಯನ್ನು ಮುಂದುವರೆಸಿಕೊಂಡು ಹೋಗುವುದು ಒಳಿತು ಎಂಬ ಭಾವನೆಗೆ ವ್ಯಾಪಕ ಬೆಂಬಲ ದೊರೆಯಿತು. ಇಂದಿನವರೆಗೂ ಇದೇ ವ್ಯವಸ್ಥೆ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣೆ ವೈದ್ಯಕೀಯ ಹಾಗೂ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಮುಂದುವರೆದುಕೊಂಡು ಬಂದಿದೆ.

ಭಾಷೆ ಯಾವುದಾದರೂ ಇರಲಿ, ಗುಣಮಟ್ಟದ ಆಕರ ಗ್ರಂಥಗಳು, ನಿಯತಕಾಲಿಕೆಗಳು ಹಾಗೂ ವಿವಿಧ ಪ್ರಕಾರಗಳ ವಿಷಯ ಮೂಲಗಳು ಪರಿಣಾಮಕಾರಿ ಕಲಿಕೆಗೆ ಮೂಲಾಧಾರ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಇಂಥ ವಿಷಯ ಮೂಲಗಳನ್ನು ತಯಾರಿ ಮಾಡುವ ಜವಾಬ್ದಾರಿ ಯಾರದು ಎನ್ನುವ ಪ್ರಶ್ನೆಗೆ ಇದುವರೆಗೂ ಸ್ಪಷ್ಟವಾದ ಉತ್ತರವನ್ನು ನೀಡಲು ಶಿಕ್ಷಣ ವ್ಯವಸ್ಥೆ ವಿಫಲರಾಗಿರುವುದೇತಕ್ಕೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಸಮರ್ಪಕ ಉತ್ತರವಿದ್ದ ಹಾಗಿಲ್ಲ.

ಪ್ರಾದೇಶಿಕ ಭಾಷೆಗಳಲ್ಲಿ ಅಧ್ಯಯನ - ಸಂಶೋಧನೆಗಳಿಗೆ ಅವಕಾಶ ಒದಗಿಸಿದ ಮೇಲೆ ಅದಕ್ಕೆ ಪೂರಕವಾದ ಗ್ರಂಥ ಭಂಡಾರವನ್ನು ಒದಗಿಸಬೇಕಾದ್ದು ಸಂಬಂಧಿಸಿದವರ ಕರ್ತವ್ಯ. ಆದರೆ ಬಹುತೇಕ ಸಂದರ್ಭಗಳಲ್ಲಿ ಹಾಗಾಗುವುದಿಲ್ಲ. ಪ್ರಾದೇಶಿಕ ಭಾಷೆಯಲ್ಲಿ ಎಲ್ಲ ಬಗೆಯ ಕೋರ್ಸುಗಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಹಾಗೂ ಆ ಭಾಷೆಯಲ್ಲಿಯೇ ಪರೀಕ್ಷೆಗಳನ್ನು ಬರೆಯಲು ಅನುವು ಮಾಡಿಕೊಡುವ ಭರವಸೆಯನ್ನು ನೀಡುವ ಶೈಕ್ಷಣಿಕ ಆಡಳಿತ ವ್ಯವಸ್ಥೆ, ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿದ ನಂತರ ಆ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳದಿರುವಂಥ ನಿದರ್ಶನಗಳು ನಮ್ಮ ಮುಂದೆ ಅನೇಕವಿವೆ. ಇಂಥ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗಿರುವ ಆಯ್ಕೆಯಾದರೂ ಎಂತಹುದು? ಅನೇಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಯಾವುದೋ ಹಳೆಯ ತರಗತಿಗಳ ನೋಟ್ಸುಗಳನ್ನು ೆರಾಕ್ಸ್ ಮಾಡಿ ಅವುಗಳನ್ನೇ ವಿಷಯ ಮೂಲಗಳನ್ನಾಗಿ ಬಳಸುತ್ತಿರುವುದು ಇಂದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿರುವಂಥ ಒಂದು ಪ್ರವೃತ್ತಿ.

ಸಹಜವಾಗಿಯೇ ಮೂಲ ಗ್ರಂಥಗಳನ್ನು ಅಥವಾ ಅವುಗಳ ಪ್ರಬುದ್ಧ ಭಾಷಾಂತರಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಗ್ರಹಿಕಾ ಮಟ್ಟ ಹೆಚ್ಚಿನದಾಗಿರುತ್ತದೆ. ಆಳವಾದ ಅಧ್ಯಯನದ ಕಾರಣದಿಂದ ಉತ್ತಮ ಫಲಿತಾಂಶಗಳನ್ನು ಗಳಿಸಿದವರಿಗೆ ಹೆಚ್ಚಿನ ಸಾಮಾಜಿಕ ಸ್ಥಾನ ಹಾಗೂ ಸಂಬಳಗಳನ್ನು ತರುವ ಉದ್ಯೋಗಗಳು ದೊರೆಯುತ್ತವೆ.

.ಪ್ರಾದೇಶಿಕ ಭಾಷೆಗಳ ಮೂಲಕ ಮಾತ್ರ ಸಂಪರ್ಕ ಸಾಧಿಸಬಲ್ಲಂಥವರ ‘ಭೌತಿಕ’ ಹಾಗೂ ‘ವೃತ್ತಿ’ ಪ್ರದೇಶಗಳೆರಡರ ವ್ಯಾಪ್ತಿಯೂ ಸೀಮಿತವಾಗಿ, ಬಹುತೇಕ ಸಂದರ್ಭಗಳಲ್ಲಿ ಅವರು ವರ್ಷಾನುಗಟ್ಟಲೆ ಕಡಿಮೆ ಸಂಬಳ ತರುವಂಥ ಹಂಗಾಮಿ ಹುದ್ದೆಗಳಲ್ಲೇ  ಜೀವಿತವನ್ನು ಕಳೆಯಬೇಕಾಗುತ್ತದೆ.


ಭಾರತದಲ್ಲಿ ಶಿಕ್ಷಣ ನೀತಿಯನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕೊಠಾರಿ ಶಿಕ್ಷಣ ಆಯೋಗ 1964-66 ರಲ್ಲೇ ಶಿಕ್ಷಣದ ಮೂಲಕ ಬೃಹತ್ ಸಾಮಾಜಿಕ ಕ್ರಾಂತಿಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದೇ ಅಲ್ಲದೆ, ಸಮಾನತೆಯ ಹೋರಾಟದ ಹಾದಿಯಲ್ಲಿ ಅತ್ಯಂತ ಪ್ರಬಲವಾದ ಸಾಧನವಾಗಿ ಶಿಕ್ಷಣ ರೂಪುಗೊಳ್ಳಲಿದೆ ಎಂದು ಸೂಚಿಸಿತ್ತು. ಆದರೆ ಆದದ್ದೇ ಬೇರೆ. ಕಳೆದ ನಾಲ್ಕು ದಶಕಗಳಲ್ಲಿ ದೇಶದಾದ್ಯಂತ ಅಪಾರ ಸಂಖ್ಯೆಯಲ್ಲಿ ತಲೆಯೆತ್ತಿರುವ ಶಿಕ್ಷಣ ಸಂಸ್ಥೆಗಳ ನಡುವೆಯೇ ತೀವ್ರ ಸ್ವರೂಪದ ಅಸಮಾನತೆ ಕಂಡು ಬಂದರೆ, ಈ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಾಮಾಜಿಕ - ಆರ್ಥಿಕ - ಶೈಕ್ಷಣಿಕ ಹಿನ್ನೆಲೆಗಳಲ್ಲೂ ಅಸಮಾನತೆ ಎದ್ದು ಕಾಣಲಾರಂಭಿಸಿತು. ಯಾವ ಶಿಕ್ಷಣ ಸಮಾಜವನ್ನು ಒಂದು ಸಮತಟ್ಟು ಪ್ರದೇಶವಾಗಿ ರೂಪಿಸಲಿದೆ ಎಂದು ಭಾವಿಸಲಾಗಿತ್ತೋ ಅದೇ ಶಿಕ್ಷಣ ಸಮಾಜದಲ್ಲಿ ಹೊಸ ಹೊಸ ಬಿರುಕುಗಳನ್ನು ಸೃಷ್ಟಿಸಿತು. ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಈ ಅಂತರ ಅತ್ಯಂತ ಪ್ರಬಲವಾಗಿ ಗೋಚರವಾಗತೊಡಗಿತು.

ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದು ಹೋಗಿದ್ದರೂ ವಸಾಹತುಶಾಹಿ ಧೋರಣೆಗಳಿಂದ ಹೊರ ಬರಲಾರದ ಈ ಸಮಾಜದಲ್ಲಿ ಆಂಗ್ಲ ಮಾಧ್ಯಮ ಇಂದಿಗೂ ಪ್ರತಿಷ್ಠೆಯ ಸಂಕೇತವಾಗಿಯೇ ಉಳಿದಿದೆ. ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ಪಡೆದರೆ ಮಾತ್ರ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಮೌಲ್ಯವಿದೆ ಎಂದು ಅನೇಕರು ನಂಬಿರುವ ನಮ್ಮ ವ್ಯವಸ್ಥೆಯಲ್ಲಿ ಸ್ವಲ್ಪ ಮಟ್ಟಿನ ಆರ್ಥಿಕ ಅನುಕೂಲವಿರುವವರು ಕೂಡ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳತ್ತ ಧಾವಿಸುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಿಂದೀಚೆಗಂತೂ ಶಿಕ್ಷಣದ ಎಲ್ಲ ಹಂತಗಳಲ್ಲೂ ಆಂಗ್ಲಮಾಧ್ಯಮ ಖಾಸಗಿ ಸಂಸ್ಥೆಗಳದ್ದೇ ಕಾರುಬಾರು. ಗ್ರಾಮೀಣ ಹಿನ್ನೆಲೆಯಿಂದಲೇ ಬಂದ, ಪ್ರಾದೇಶಿಕ ಭಾಷಾ ಮಾಧ್ಯಮ ಶಾಲೆಗಳಲ್ಲೇ ಅಧ್ಯಯನ ಮಾಡಿದ ಅಥವಾ ಆರ್ಥಿಕವಾಗಿ ಅನುಕೂಲಕರ ಪರಿಸ್ಥಿತಿಗಳಲ್ಲಿದ್ದ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳ ಅಥವಾ ಕೋರ್ಸುಗಳ ಆಯ್ಕೆಯ ವಿಚಾರದಲ್ಲಿ ಸ್ವಾತಂತ್ರ್ಯವಿಲ್ಲವೆಂಬುದು ಯಾರಿಗೂ ತಿಳಿಯದ ವಿಷಯವೇನಲ್ಲ.

ಆಯ್ಕೆಯ ವಿಷಯದ ಬಗ್ಗೆ ಪ್ರಸ್ತಾಪ ಮಾಡುವಾಗ ಮೊನ್ನೆ - ಮೊನ್ನೆಯಷ್ಟೇ ಭಾರತದ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸಮ್ಮೇಳನವನ್ನುದ್ದೇಶಿಸಿ ಮಾನವ ಸಂಪನ್ಮೂಲ ಇಲಾಖೆಯ ಸಚಿವರು ನೀಡಿದ ಭಾಷಣದ ನೆನಪು ಬರುತ್ತದೆ. ಭಾರತದ ಶೈಕ್ಷಣಿಕ ವ್ಯವಸ್ಥೆ ಗತಕಾಲದಲ್ಲಿ ಮುಳುಗಿದಂತಿದೆ ಎಂದು ಟೀಕಿಸಿದ ಸಚಿವರು ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಬೇಕಾದರೆ ಒಂದು ವಿಶ್ವವಿದ್ಯಾನಿಲಯದಿಂದ ಮತ್ತೊಂದು ವಿಶ್ವವಿದ್ಯಾನಿಲಯಕ್ಕೆ ಅವರು ಸುಲಭದಲ್ಲಿ ಸಂಚರಿಸಿ, ಜ್ಞಾನವನ್ನು ಪಡೆಯುವಂಥ ವ್ಯವಸ್ಥೆ ಏರ್ಪಾಡಾಗಬೇಕು; ಚಲನಶೀಲತೆಯೇ ಅಭಿವೃದ್ಧಿಯ ಬುನಾದಿ ಎಂಬ ಸಂದೇಶವನ್ನು ಬೇರೆ ನೀಡಿದ್ದಾರೆ. ಪ್ರಾಯಶಃ ಈ ರೀತಿಯ ಅಂತರ ವಿಶ್ವವಿದ್ಯಾನಿಲಯ ಚಲನೆ ಸಾಧ್ಯವಾಗುವುದು ಆಂಗ್ಲ ಅಥವಾ ಹಿಂದಿ ಭಾಷೆಗಳ (ಇಡೀ ಉತ್ತರ ಭಾರತ ಮಟ್ಟಿಗಾದರೂ ಇದು ಸತ್ಯ) ಅರಿವು ಇರುವವರಿಗೆ ಮಾತ್ರ. ಆದರೆ ಏಕ ಭಾಷೆಯ ಮೂಲಕವೇ ತಮ್ಮ ಅಧ್ಯಯನ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ನಡೆಸಿಕೊಂಡು ಬಂದಿರುವವರಿಗೆ ಇಂಥ ಚಲನೆ ಹೇಗೆ ಸಾಧ್ಯ? ಅನೇಕ ಶಿಕ್ಷಣ ತಜ್ಞರು ಹಾಗೂ ಶೈಕ್ಷಣಿಕ ಯೋಜನಾಕಾರರು ಮುಂದೊಡ್ಡುವ ಆದರ್ಶಗಳೆಲ್ಲಾ ಗಾಳಿ ಗೋಪುರಗಳೇ ಹೊರತು ಸಾಧಿಸಬಹುದಾದಂಥ ಗುರಿಗಳಲ್ಲ.

ಹಾಗಾದರೆ ಈ ಪರಿಸ್ಥಿತಿಯಿಂದ ಹೊರ ಬರಲು ನಾವು ಮಾಡಬಹುದ್ದಾದರೂ ಏನು? ಭಾಷೆ ಎನ್ನುವುದು ಕೇವಲ ಭಾವನೆಗಳಿಗೆ - ಆದರ್ಶಗಳಿಗೆ ಮಾತ್ರ ಸೀಮಿತವಾದಂಥ ಒಂದು ವ್ಯವಸ್ಥೆಯಲ್ಲ. ಅದರ ಮೂಲಕ ನಾವು ನಿಜವಾಗಿ ಐಕ್ಯತೆಯನ್ನು ಸಾಧಿಸಬೇಕಾದರೆ, ಆ ಭಾಷೆಯನ್ನಾಡುವವರ ಹಾಗೂ ಅದರ ಮಾಧ್ಯಮದ ಮೂಲಕ ಜ್ಞಾನಾರ್ಜನೆ ಮಾಡ ಹೊರಟವರ ಬದುಕನ್ನು ಹಸನು ಮಾಡಬೇಕಾದರೆ ವಿವಿಧ ವಿಷಯ ಕ್ಷೇತ್ರಗಳ ಜ್ಞಾನ ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಾಗುವಂತಾಗಬೇಕು.

ಈ ಜ್ಞಾನದ ಸೃಷ್ಟಿಯಲ್ಲಿ ಅಧ್ಯಾಪಕರ ಪಾತ್ರ ಬಹು ಮುಖ್ಯವಾದದ್ದು. ತಮ್ಮ ಅನುಭವ, ವಿಷಯದ ಬಗೆಗಿನ ಜ್ಞಾನ ಹಾಗೂ ವಿದ್ಯಾರ್ಥಿಗಳ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ಆಯಾ ವಿಷಯಗಳನ್ನು ಬೋಧಿಸುವ ಶಿಕ್ಷಕರು ಪ್ರಬುದ್ಧ ಸಾಹಿತ್ಯ  ರಚನೆಗೆ ಮುಂದಾಗಬೇಕು. ಪ್ರಪಂಚದ ನಾನಾ ದೇಶಗಳಲ್ಲಿ ಅತ್ಯಂತ ಮೌಲಿಕವಾದ ಶ್ರೇಷ್ಠ ಗುಣಮಟ್ಟದ ಜ್ಞಾನ ಸೃಷ್ಟಿಯಾಗಿರುವುದು ಆಂಗ್ಲಭಾಷೆಯಲ್ಲಿ ಮಾತ್ರವಲ್ಲ. ಗುಣಮಟ್ಟದ ವಿಷಯಮೂಲಗಳನ್ನು    ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವುದರ ಜೊತೆಗೆ ಆಂಗ್ಲ ಭಾಷೆಯ ಪರಿಚಯವನ್ನು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಡಿಕೊಡುವುದು ಅಗತ್ಯ.  ಹೀಗಾಗದಿರುವುದರಿಂದಲೇ ಆಂಗ್ಲಮಾಧ್ಯಮದಲ್ಲಿ ಕಲಿತವರ ಒಂದು ಹೊಸ ವರ್ಗವೇ ಇಂದು ಸೃಷ್ಟಿಯಾಗಿದೆ. ಭಾಷೆಗಳನ್ನು, ಎಲ್ಲ ಜನಸಮುದಾಯಗಳನ್ನು ಒಳಗೊಳ್ಳುವ ಸಾಧನಗಳಾಗಿ ವಿಶ್ವವಿದ್ಯಾನಿಲಯಗಳು ಬಳಸದೆ ಹೋದಲ್ಲಿ ಭವಿಷ್ಯದಲ್ಲಿ ಅವುಗಳಿಂದ ಹೆಚ್ಚಿನ ಬದಲಾವಣೆಗಳನ್ನೇನೂ   ನಿರೀಕ್ಷಿಸಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT