ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಹಕ್ಕು: ಹಳೆ ಪಾತ್ರೆಯಲ್ಲಿ ಹೊಸ ನೀರು?

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ಶಿಕ್ಷಣ ಹಕ್ಕು ಕಾಯಿದೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಕಾಯಿದೆ ಜಾರಿಯಾಗಿ ಎರಡು ವರ್ಷಗಳು ಕಳೆದ ನಂತರ ಅದನ್ನು ಕಾರ್ಯರೂಪಕ್ಕೆ ತರಲು ಅವಶ್ಯವಾದ ನಿಯಮಾವಳಿಯನ್ನು ಕಳೆದ ವಾರವಷ್ಟೇ ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿದೆ.

ಪೂರ್ವ ಪ್ರಾಥಮಿಕ ಹಂತದಿಂದ ಎಂಟನೇ ತರಗತಿಯವರೆಗೂ ಈ ಕಾಯಿದೆ ಅನ್ವಯವಾಗಲಿದ್ದು, 6 ರಿಂದ 14 ವಯಸ್ಸಿನ ಎಲ್ಲ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿ ಈಗ ರಾಜ್ಯದ ಮೇಲಿದೆ.

ಕಾಯಿದೆಯನ್ನು ಈ ವರ್ಷದಿಂದಲೇ ಜಾರಿಗೊಳಿಸಬೇಕೆಂಬ ಆದೇಶವೂ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಹೊರಹೊಮ್ಮಿದ್ದು, ನೇಪಥ್ಯಕ್ಕೆ ಸರಿದಂತಿದ್ದ ವಾದ-ವಿವಾದಗಳು ಈಗ ಮತ್ತೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿವೆ.

ಭಾರತದ ಸಂವಿಧಾನದ 86ನೇ ತಿದ್ದುಪಡಿ ಅನ್ವಯ 21 (ಂ) ವಿಧಿಯಾಗಿ ರೂಪಿತವಾಗಿರುವ ಶಿಕ್ಷಣ ಹಕ್ಕು ಕಾಯಿದೆಯ ಮೂಲ ಆಶಯವೆಂದರೆ ಶಾಲಾ ವಯೋಗುಂಪಿನ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದೆಂಬುದು. ಈ ಆಶಯ ಸಾಕಾರವಾಗಬೇಕಾದರೆ ಈಗಾಗಲೇ ಶಿಕ್ಷಣ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆ     ಗಳೆರಡರ  ಭಾಗವಹಿಸುವಿಕೆ  ಹಾಗೂ  ಬದ್ಧತೆ  ಕೂಡ ಅಷ್ಟೇ ಮುಖ್ಯ ಎಂಬ ಸ್ಪಷ್ಟ ಸಂದೇಶ ಕೂಡ ಈ ಕಾಯಿದೆಯಲ್ಲಿ ಅಡಕವಾಗಿದೆ.

ಹಕ್ಕುಗಳನ್ನು ಈ ದೇಶದ ಪ್ರಜೆಗಳಿಗೆ ನೀಡುವ ವಿಚಾರ ಬಂದಾಗಲೆಲ್ಲಾ ಅದು ಕೇವಲ ಸರ್ಕಾರದ ಜವಾಬ್ದಾರಿ ಎಂದು ಭಾವಿಸುವ ಪರಿಪಾಠ ನಮ್ಮಲ್ಲಿ ಬೇರೂರಿದೆ. ಖಾಸಗಿ ವಲಯ ಮಾತ್ರ ಬಹು ಕಾಲದಿಂದ ತನ್ನ ವ್ಯವಹಾರಗಳನ್ನು  ಸಾಮಾಜಿಕ ಬದ್ಧತೆಗಿಂತ  ಬಂಡವಾಳ ಕ್ರೋಢೀಕರಣ  ತತ್ವದ ಆಧಾರದ ಮೇಲೆಯೇ ನಡೆಸಿಕೊಂಡು ಬರುತ್ತಿದೆ. ಶಾಲಾ ಶಿಕ್ಷಣ ಕ್ಷೇತ್ರವೂ ಈ ಪರಿಸ್ಥಿತಿಗೆ ಹೊರತಾಗಿಲ್ಲ. 

ಉಳ್ಳವರಿಗಾಗಿ ಉನ್ನತ ಗುಣಮಟ್ಟದ ಶಿಕ್ಷಣ  ಎಂದು ರಾಜಾರೋಷವಾಗಿ ಘೋಷಿಸುತ್ತಾ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಖಾಸಗಿ ಶಿಕ್ಷಣ ವಲಯ ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆ ದಿನೇ ದಿನೇ ಬೃಹದಾಕಾರವಾಗಿ ಬೆಳೆಯುತ್ತಿದೆ.

ಸಂವಿಧಾನಾತ್ಮಕ ಹಕ್ಕುಗಳನ್ನು ಜನರಿಗೆ ನಿಡುವ ಪ್ರಕ್ರಿಯೆಗೂ ತಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ನಡೆದುಕೊಳ್ಳುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಚ್ಚಿ ಬಿದ್ದದ್ದು ಶೇಕಡ 25 ರಷ್ಟು ಸೀಟುಗಳನ್ನು ತಮ್ಮ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂಥ ಕುಟುಂಬಗಳ ಮಕ್ಕಳಿಗೂ ನೀಡಬೇಕು ಎಂಬ ಆದೇಶ ಸರ್ಕಾರದಿಂದ ಹೊರಬಿದ್ದಾಗ.

ಎರಡು ವರ್ಷಗಳ ಹಿಂದೆಯೇ ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ವ್ಯವಸ್ಥೆ ಕಾನೂನು ಸಮರಕ್ಕೆ ಇಳಿದಿತ್ತು. ಸಂವಿಧಾನದ 19 (1) (ರ) ವಿಧಿಯ ಪ್ರಕಾರ ತಮ್ಮ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಹಕ್ಕಿಲ್ಲ, ಏಕೆಂದರೆ ಈ ಕಾಯಿದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯನ್ನು ಉಲ್ಲಂಘಿಸುತ್ತದೆ ಎಂಬ ವಾದವನ್ನು ಮುಂದಿಟ್ಟು ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಿದ್ದವು.

ಆದರೆ ಖಾಸಗಿ ಸಂಸ್ಥೆಗಳ ಈ ದೃಷ್ಟಿಕೋನವನ್ನು ಒಪ್ಪದ ನ್ಯಾಯಾಲಯ ಶಿಕ್ಷಣ ಹಕ್ಕು ಕಾಯಿದೆ, ಅನುದಾನರಹಿತ ಖಾಸಗಿ ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ ಬೇರೆಲ್ಲ ಶಾಲೆಗಳಿಗೆ ಏಕಪ್ರಕಾರವಾಗಿ ಅನ್ವಯಿಸುತ್ತದೆ ಎಂಬ ತೀರ್ಪನ್ನು ಇತ್ತೀಚೆಗಷ್ಟೇ ನೀಡಿದೆ.

ಈ ಶೈಕ್ಷಣಿಕ ವರ್ಷದಿಂದಲೇ ಕಾಯಿದೆಯನ್ನು ಅನುಷ್ಠಾನಕ್ಕೆ ತರಬೇಕೆಂಬ ನ್ಯಾಯಾಲಯದ ತೀರ್ಮಾನವಂತೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನಷ್ಟೇ ಅಲ್ಲ, ಸರ್ಕಾರವನ್ನೂ ಪೇಚಿಗೆ ಸಿಕ್ಕಿಸಿರುವುದು ಸ್ಪಷ್ಟವಾಗಿಯೇ ಗೋಚರವಾಗುತ್ತದೆ.
 
ಖಾಸಗಿ ಶಿಕ್ಷಣ ವಲಯದ ಅನಿಯಂತ್ರಿತ ಬೆಳವಣಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಜವಾಬ್ದಾರಿಗಳೆರಡನ್ನೂ ಹೊರಬೇಕಾದ ಸರಕಾರ ಈಗ ಇದ್ದಕ್ಕಿದ್ದ ಹಾಗೆ ಈ ಸಂಸ್ಥೆಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ಎಷ್ಟರ ಮಟ್ಟಿಗೆ ಸನ್ನದ್ಧವಾಗಿದೆ ಎಂಬ ಪ್ರಶ್ನೆ ನಮ್ಮೆದುರಿಗೆ ಸಹಜವಾಗಿಯೇ ಎದ್ದು ನಿಂತಿದೆ.

ತನ್ನ ಇತ್ತೀಚಿನ ರೂಪದಲ್ಲಿ, ಶಿಕ್ಷಣದ ಹಕ್ಕು ಒಂದು ಹೊಸ ಪ್ರಯೋಗದಂತೆ ಕಂಡು ಬಂದರೂ ಈ ಕಾಯಿದೆಗೆ ಒಂದು ಇತಿಹಾಸವೇ ನಮ್ಮ ದೇಶದಲ್ಲಿದೆ. ಅರವತ್ತೆರೆಡು ವರುಷಗಳ ಹಿಂದೆಯೇ, ಎಂದರೆ 1950 ರಲ್ಲಿಯೇ ಸಂವಿಧಾನ ಜಾರಿಗೆ ಬಂದ ಹತ್ತು ವರ್ಷಗಳ ಒಳಗೇ ಹದಿನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವವರೆಗೂ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವುದು ರಾಜ್ಯದ ಜವಾಬ್ದಾರಿ ಎಂದು ರಾಜ್ಯ ನಿರ್ದೇಶಕ ತತ್ವಗಳ 45 ನೇ ವಿಧಿ (ಭಾಗ 4) ಸೂಚಿಸಿತ್ತು. ಆದಾಗ್ಯೂ ಇಂದಿಗೂ ದೇಶದ ಕಾಲು ಭಾಗ ಜನಸಂಖ್ಯೆ ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ.

ಕಾಲದಿಂದ ಕಾಲಕ್ಕೆ ಪ್ರಾಥಮಿಕ ಶಾಲಾ ದಾಖಲಾತಿಯ ಪ್ರಮಾಣದಲ್ಲಿ ಗಮನಾರ್ಹವಾದ ಏರಿಕೆ ಉಂಟಾಗಿದೆ. ಆದರೆ ಮಕ್ಕಳನ್ನು ಶಾಲೆಗೆ ಸೇರಿಸುವುದು ಎಷ್ಟು ಮುಖ್ಯವೋ ಅವರನ್ನು ಶಾಲೆಯಲ್ಲಿ ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ.

ಸಾಮಾನ್ಯವಾಗಿ ಅನುದಾನರಹಿತ ಶಾಲೆಗಳಿಗೆ ದಾಖಲಾಗುವ ಮಕ್ಕಳು ಸಮಾಜದ ಅನುಕೂಲಗಳನ್ನು ಪಡೆದಂಥ ವರ್ಗಗಳಿಗೆ ಸೇರಿರುವುದರಿಂದ  ಉಚಿತ  ಹಾಗೂ  ಕಡ್ಡಾಯ  ಶಿಕ್ಷಣದ ವ್ಯವಸ್ಥೆ ಇರಲಿ-ಇಲ್ಲದಿರಲಿ ಅವರು ಶಾಲೆಗಳಲ್ಲಿ ಮುಂದುವರೆಯುತ್ತಾರೆ. ಏಕೆಂದರೆ ಅವರು ಶಿಕ್ಷಣದಿಂದ ಯಾವ ಪ್ರತಿಫಲವನ್ನೂ ಆ ಹಂತದಲ್ಲೇ ನಿರೀಕ್ಷಿಸುವುದಿಲ್ಲ.

ಆದರೆ ಸಮಾಜದ ಅಂಚಿನಲ್ಲಿರುವ ವರ್ಗಗಳ ಮಕ್ಕಳಿಗೆ ದುಡಿಯುವ ಅನಿವಾರ್ಯತೆ ಕಂಡು ಬಂದಾಗ ಅವರು ಶಾಲೆಯಿಂದ ದೂರ ಸರಿಯುತ್ತಾರೆ. ಈ ದೇಶದಲ್ಲಿ  ಮಕ್ಕಳು ಕುಟುಂಬಗಳಿಗೆ ದೊರೆಯುವ ಒಂದು  ಸಿದ್ಧ ದುಡಿಮೆಗಾರ ವರ್ಗ .

ಖಾಸಗಿ ಶಾಲೆಗಳಿಗೆ ಸೇರಿದ ಮಾತ್ರಕ್ಕೆ ಇಂಥ ಕುಟುಂಬಗಳ ಬದುಕಿನ ಪರಿಸ್ಥಿತಿಗಳು ಬದಲಾಗುತ್ತವೆ ಎಂದು ಅರ್ಥೈಸಲಾಗುವುದಿಲ್ಲ. ಜೀವನ ನಿರ್ವಹಣೆಯ ಪ್ರಶ್ನೆ ಬಂದಾಗ ಶಾಲೆಗಿಂತ ಮಕ್ಕಳು ತರಬಲ್ಲ ಹಣ ಮುಖ್ಯವಾಗುತ್ತದೆ.
 
ಬಾಲ ಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು ಹಾಗೂ ಜೀತ ಸ್ಥಿತಿಯಿಂದ ಮಕ್ಕಳನ್ನು ರಕ್ಷಿಸಲು ಎಂಥ ಬಿಗಿಯಾದ ಕಾನೂನೇ ಬರಲಿ, ಇಂದಿಗೂ ಮಕ್ಕಳು ದುಡಿಯುವುದನ್ನು ನಮ್ಮಿಂದ ತಪ್ಪಿಸಲಾಗಿಲ್ಲ. ಶಿಕ್ಷಣ ಹಕ್ಕು ಕಾಯಿದೆಯಲ್ಲಿ ನಮ್ಮ ಸಮಾಜದ ಈ ಕಟು ಸತ್ಯಕ್ಕೆ ಉತ್ತರವಿದೆಯೇ?

ಶಿಕ್ಷಣ ಹಕ್ಕು ಕಾಯಿದೆಯ ಆಶಯವೇನೋ ಸ್ತುತ್ಯಾರ್ಹ ಆದರೆ ಅದರ ಅನುಷ್ಠಾನ ತರಬಲ್ಲ ಕೆಲ ಅಗೋಚರ ಪರಿಣಾಮಗಳನ್ನೂ ನಾವು ಪರಿಗಣಿಸಬೇಕು. ಹೊರ ನೋಟಕ್ಕೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಮುಕ್ತ ಪ್ರವೇಶಕ್ಕೆ ಈ ಕಾಯಿದೆ ಅವಕಾಶ ನೀಡುವಂತೆ ಕಂಡರೂ ಈ ಶಾಲೆಗಳಲ್ಲಿ ಆ ಕ್ಕಳಿಗೆ ಮುಜುಗರ ಉಂಟುಮಾಡುವಂಥ ಪರಿಸ್ಥಿತಿಗಳು ಸೃಷ್ಟಿಯಾಗಬಹುದಾದಂಥ ಸಾಧ್ಯತೆಯನ್ನು ತಳ್ಳಿಹಾಕುವ ಹಾಗಿಲ್ಲ.

ವಿಶ್ವದಾದ್ಯಂತ  ಪ್ರತಿಷ್ಠಿತ ಎಂಬ ಹಣೆ ಪಟ್ಟಿಯನ್ನು ಅಂಟಿಸಿಕೊಂಡಿರುವ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ, ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಸಮಾನ ಪ್ರವೇಶಾವಕಾಶವಿದ್ದು ಎಲ್ಲರನ್ನೂ ಸಮಾನರಂತೆ ನಡೆಸಿಕೊಳ್ಳಲಾಗುತ್ತದೆ ಎಂದು ಹೇಳಿಕೊಳ್ಳುತ್ತಿದ್ದರೂ ವಾಸ್ತವದಲ್ಲಿ  ಹೀಗಾಗುತ್ತಿಲ್ಲ.

ಸಮಾಜದ ಅನುಕೂಲಗಳಿಂದ ವಂಚಿತರಾದ ಸಮುದಾಯಗಳ ವಿದ್ಯಾರ್ಥಿಗಳನ್ನು ಸೂಚ್ಯವಾಗಿ ಅವಮಾನಿಸುವ, ಅವರ ಸಾಂಸ್ಕೃತಿಕ ಹಿನ್ನೆಲೆಯನ್ನು, ಜೀವನ ಶೈಲಿಯನ್ನು ಹೀಯಾಳಿಸುವಂಥ ಸಂದರ್ಭಗಳನ್ನು ಸೃಷ್ಟಿಸಿ ಈ ಮಕ್ಕಳಲ್ಲನೇಕರು ತಾವೇ ಶಿಕ್ಷಣ ಸಂಸ್ಥೆಗಳಿಂದ ದೂರ ಸರಿದಿರುವಂಥ ಅನೇಕ ನಿದರ್ಶನಗಳಿವೆ.

ಇಂಥ ಪರಿಸ್ಥಿತಿಗಳನ್ನು ತಡೆಗಟ್ಟಲು ಆ ಶಾಲೆಗಳಲ್ಲಿ ಶ್ರೀಮಂತ-ಬಡವ ಎಂಬ ಭೇದ ಭಾವವನ್ನು ತೊಡೆದು ಹಾಕಿ ಎಲ್ಲ ಮಕ್ಕಳೂ ಮುಕ್ತವಾಗಿ ಬೆರೆತು-ಕಲಿಯುವಂಥ ವಾತಾವರಣದ ನಿರ್ಮಾಣಕ್ಕೆ ಆಡಳಿತ ವ್ಯವಸ್ಥೆ ಹಾಗೂ ಅಧ್ಯಾಪಕರು ಬದ್ಧರಾಗಿರಬೇಕು, ಆದರೆ ಇದರ ಮೇಲೆ ಕಣ್ಣಿಡುವವರು ಯಾರು?

ಒಂದು ತೆರನಾದ ಅಸಮಾನತೆಯನ್ನು ತೆಗೆದು ಹಾಕಲು ಹೋಗಿ ಮತ್ತೊಂದು ಬಗೆಯ ಅಸಮಾನತೆಯನ್ನು ಶಿಕ್ಷಣ ಹಕ್ಕು ಕಾಯಿದೆ ಸೃಷ್ಟಿಸುವ ಸಾಧ್ಯತೆಯಿದೆ. ಅನೇಕ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣ ಹಾಗೂ ಮೂಲ ಸೌಕರ್ಯಗಳ ಗುಣಮಟ್ಟ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವುದಕ್ಕಿಂತ ಉತ್ತಮ ಮಟ್ಟದಾಗಿರುತ್ತದೆ.
 
ಈ ಎಲ್ಲ ಅನುಕೂಲಗಳು ಇಂಥ ಶಾಲೆಗಳಿಗೆ ಸೇರಿದ ಬಡ ಕುಟುಂಬಗಳ ಮಕ್ಕಳಿಗೆ ಲಭ್ಯವಾದರೆ ಅದು ಸ್ವಾಗತಾರ್ಹ. ಆದರೆ ಇಂಥ ಶಾಲೆಗಳಿಗೆ ಸೇರದ ಹಾಗೂ ಈ ಸೌಲಭ್ಯಗಳನ್ನು ಪಡೆಯದ ಪೂರ್ಣ ಸರ್ಕಾರಿ ಅಥವಾ ಸರ್ಕಾರಿ ಅನುದಾನ ಪಡೆದ ಶಾಲೆಗಳಲ್ಲಿ ತಮ್ಮ ಶಿಕ್ಷಣವನ್ನು ಪಡೆಯಲಿರುವ ಅಥವಾ ಪಡೆಯುತ್ತಿರುವ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ದೊರೆಯುತ್ತಿರುವಂಥ ಸೌಲಭ್ಯಗಳಿಂದ ವಂಚಿತರಾದ ಹಾಗಲ್ಲವೇ?

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಈಗಾಗಲೇ ಸರ್ಕಾರಿ, ಸರ್ಕಾರಿ ಅನುದಾನಿತ, ರಾಜ್ಯ ಪಠ್ಯಕ್ರಮವನ್ನು ಅನುಸರಿಸುವ ಹಾಗೂ ಕೇಂದ್ರೀಯ ಪಠ್ಯಕ್ರಮವನ್ನು ಅನುಸರಿಸುವ-ಹೀಗೆ ಬಗೆಬಗೆಯ ಶಾಲೆಗಳಿದ್ದು ಒಂದು ಶ್ರೇಣೀಕೃತ ಶಾಲಾ ವ್ಯವಸ್ಥೆಯೇ ಸೃಷ್ಟಿಯಾಗಿದೆ.

ಹಾಗೆಯೇ ಈ ವಿವಿಧ ಬಗೆಯ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವಂಥ ವಿದ್ಯಾರ್ಥಿಗಳು ಕೂಡ ಒಂದು ಸಮರೂಪವಾದ ವರ್ಗವಲ್ಲ. ಶಾಲಾ ವ್ಯವಸ್ಥೆಯ ಒಳಗೇ ಇರುವ ಈ ಅಸಮಾನತೆಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ಬಡ ಮಕ್ಕಳು ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳು ಎಂಬ ಮತ್ತೊಂದು ವರ್ಗ ಸಧ್ಯದಲ್ಲೇ ಸೃಷ್ಟಿಯಾಗುತ್ತದೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ  ಮಕ್ಕಳಿಗೆ ಪ್ರವೇಶ ನೀಡುವುದರಿಂದ, ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರಿ ಬೊಕ್ಕಸದಿಂದ ಭರಿಸಲಾಗುತ್ತದೆ ಎಂಬ ಆಶ್ವಾಸನೆಯನ್ನು ಈ ಸಂಸ್ಥೆಗಳಿಗೆ ನೀಡಲಾಗಿದೆ. ಆದರೆ ಪ್ರತಿ ಮಗುವಿಗೆ ಪ್ರತಿ ವರ್ಷಕ್ಕೆ ಸರ್ಕಾರ ನೀಡಲಿರುವ 11,000 ರೂಪಾಯಿಗಳಿಗೂ ಇದೇ ಒಂದು ಸೀಟಿಗೆ ಈ ಶಾಲೆಗಳಲ್ಲನೇಕವು ತೆಗೆದುಕೊಳ್ಳುತ್ತಿದ್ದ ದೊಡ್ಡ ಮೊತ್ತದ ಡೊನೇಷನ್‌ಗೂ ತಾಳೆ ಮಾಡಲು ಸಾಧ್ಯವೇ ಇಲ್ಲ.
 
ಶ್ರಿಮಂತ ಪೋಷಕರು ನೀಡಿದ ಹಣದಲ್ಲಿ ಸೃಷ್ಟಿಸಿದ ಶಾಲಾ ಮೂಲ ಸೌಕರ್ಯಗಳನ್ನು ಬಡ ಮಕ್ಕಳು ಏಕೆ ಉಪಯೋಗಿಸಬೇಕು ಎಂಬ ಅಪಸ್ವರದ ಕೂಗು ಕೂಡ ಈಗಾಗಲೇ ಕೇಳಿ ಬರುತ್ತಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ, ಸಾಮಾಜಿಕ ನ್ಯಾಯ ಮುಂತಾದ ಕಲ್ಪನೆಗಳಿಗೆ ಬದ್ಧತೆಯೇ ಇಲ್ಲದ ಭೋಗ ಸಂಸ್ಕೃತಿ ಅನುಯಾಯಿಗಳಿಗೆ ಶಿಕ್ಷಣ ಹಕ್ಕು ಕಾಯಿದೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.

ಶೈಕ್ಷಣಿಕ ಹಕ್ಕು ಕಾಯಿದೆಯನ್ನು ಜಾರಿಗೆ ತರಲು ನಿಯಮಾವಳಿಗಳನ್ನೇನೋ ಸರ್ಕಾರ ರೂಪಿಸಿದೆ. ಆದರೆ ಅಲ್ಲಿ ಬಳಸಿರುವ ಕೆಲ ಪದಗಳಿಗೆ ಪರಿಕಲ್ಪನಾತ್ಮಕ ಸ್ಪಷ್ಟತೆ ಇಲ್ಲ. ಉದಾಹರಣೆಗೆ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಗುಂಪುಗಳು .
 
ಹಿಂದುಳಿದಿರುವಿಕೆ ಎಂಬ ಸ್ಥಿತಿಯನ್ನು ಅಳೆಯಲು ರೂಪಿಸಿರುವ ಸೂಚ್ಯಂಕಗಳ ಪ್ರಸ್ತುತತೆಯನ್ನು ನಿರ್ಧರಿಸಲು ಸಮಾಜ ಕಲ್ಯಾಣ ಇಲಾಖೆ ಮತ್ತು ತಜ್ಞರೊಡನೆ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ ಈ ಚರ್ಚೆ ಒಂದು ಸಾರ್ವಜನಿಕ ಸಂವಾದವಾಗಿ ನಡೆಯಬೇಕು.

ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಧರ್ಮ, ಜಾತಿ, ಲಿಂಗ, ಪ್ರದೇಶ, ವರ್ಗ ಕುಟುಂಬದ ಜೀವನ ನಿರ್ವಹಣಾ ಮಾರ್ಗಗಳು ಹಾಗೂ ಜೀವನ ಶೈಲಿ ಹೀಗೆ ಬಹು ಆಯಾಮಗಳ ದೃಷ್ಟಿಕೋನದಿಂದ ವಿಶ್ಲೇಷಿಸಬೇಕು. ಹಾಗಾಗದಿದ್ದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಕೂಡ ಈಗಾಗಲೇ ಬಂದು ಹೋಗಿರುವ ಸಮಾನತೆಯನ್ನು ತರುವ ವ್ಯರ್ಥ ಪ್ರಯತ್ನಗಳ ಸಾಲಿಗೆ ಸೇರಿಹೋಗಿ ಬಿಡುವ ಅನುಮಾನವಿದೆ.

 (ನಿಮ್ಮ ಪ್ರತಿಕ್ರಿಯೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT