ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿ ಹೆಚ್ಚುತ್ತಿರುವ ದಾಖಲಾತಿ: ಸ್ತ್ರೀ ಸಶಕ್ತೀಕರಣದ ಸಂಕೇತವೆ?

Last Updated 5 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಭಾರತೀಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ಮಹತ್ತರವಾದ ಬದಲಾವಣೆಯೊಂದು ಸಂಭವಿಸುತ್ತಿದೆ. ಬಹುತೇಕ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಾವಕಾಶಗಳು ಇಂದಿಗೂ ಮುಚ್ಚಿದ ಬಾಗಿಲುಗಳು ಎಂದು ನಾವು ಕೊರಗುತ್ತಲೇ ಬಂದಿದ್ದೇವೆ. ಅನೇಕ ಸಂದರ್ಭಗಳಲ್ಲಿ ಇದು ಸತ್ಯವೂ ಹೌದು.
 
ಆದರೆ ನಮಗೇ ತಿಳಿಯದಂತೆ ಇಂದು ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿಯ ಪ್ರಮಾಣ ಏರುತ್ತಿದ್ದು, ಅನೇಕ ಕೋರ್ಸುಗಳಲ್ಲಿ ಗಂಡು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.

ಉನ್ನತ ಶಿಕ್ಷಣದಲ್ಲಿ ಹೆಚ್ಚುತ್ತಿರುವ ಹೆಣ್ಣುಮಕ್ಕಳ ದಾಖಲಾತಿ ಸಂತೋಷವನ್ನು ತರುವ ಸಂಗತಿಯಾದರೂ ಈ ಪರಿಸ್ಥಿತಿಗೆ ಕಾರಣವಾದಂಥ ಅಂಶಗಳನ್ನು ಕುರಿತ ಗಂಭೀರ ಚಿಂತನೆ ಮತ್ತು ವಿಶ್ಲೇಷಣೆಯ ಅಗತ್ಯವಿದೆ.

ಈ ಹೊತ್ತು ನಾವು ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿ ಈ ಹೆಚ್ಚಳಕ್ಕೆ ಕಾರಣವಾದ ಅಂಶಗಳನ್ನು ಗುರುತಿಸುವುದು ಎಷ್ಟು ಮುಖ್ಯವೋ, ಈ ಸಂಖ್ಯಾತ್ಮಕ ಏರಿಕೆ ಹೆಣ್ಣುಮಕ್ಕಳ ಬದುಕಿನಲ್ಲಿ ಗುಣಾತ್ಮಕ ಪರಿವರ್ತನೆಯನ್ನು ತರುವುದರಲ್ಲಿ ವಹಿಸಿರುವ ಪಾತ್ರವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದೂ ಅಷ್ಟೇ ಮುಖ್ಯ.

ಮೊದಲಿಗೆ, ಶಿಕ್ಷಣದ ವಿವಿಧ ಹಂತಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ದಾಖಲಾತಿಯನ್ನು ಕುರಿತ ಒಂದು ಚಿತ್ರಣವನ್ನು ಐತಿಹಾಸಿಕ ನಿಟ್ಟಿನಲ್ಲಿ ನೋಡುವುದು ಪ್ರಸ್ತುತವೆನಿಸುತ್ತದೆ. ಭಾರತದಲ್ಲಿ ಅಭಿವೃದ್ಧಿಯ ಯುಗ 1950ರಲ್ಲಿ ಪ್ರಾರಂಭವಾದಾಗ ಸ್ತ್ರೀ ಸಾಕ್ಷರತೆಯ ಪ್ರಮಾಣ ಶೇಕಡ 9ರಷ್ಟು ಮಾತ್ರವಿತ್ತು.

ಆದರೆ ಕಳೆದ ಶತಮಾನದ ಅಂತ್ಯದ ವೇಳೆಗೆ ಈ ಪ್ರಮಾಣ ಶೇಕಡ 54ಕ್ಕೆ ಏರಿದ್ದು, ಇದೇ ಅವಧಿಯಲ್ಲಿ ಪುರಷ ಸಾಕ್ಷರತೆ 27 ರಿಂದ ಶೇಕಡ 75 ರಷ್ಟಾದದ್ದು ಸ್ತ್ರೀ-ಪುರುಷರು ಶಿಕ್ಷಣಾವಕಾಶಗಳನ್ನು ತಳಮಟ್ಟದಲ್ಲಿಯೂ ಕೂಡ ಸಮಾನವಾಗಿ ಬಳಸಿಕೊಳ್ಳಲಾಗದಿರುವುದಕ್ಕೆ ಒಂದು ನಿದರ್ಶನ.

ಶಿಕ್ಷಣದ ಪ್ರಾರಂಭಿಕ ಹಂತವಾದ ಪ್ರಾಥಮಿಕ ಶಾಲಾ ಹಂತದಲ್ಲಿ 1950ರಲ್ಲಿ ಶೇಕಡ 28 ರಷ್ಟಿದ್ದ ಹೆಣ್ಣು ಮಕ್ಕಳ ಪ್ರಮಾಣ, ಕಳೆದ ಶತಮಾನ ಅಂತ್ಯಗೊಳ್ಳುವ ವೇಳೆಗೆ ಶೇಕಡ 44ರಷ್ಟಾಗಿತ್ತು.

ಆದರೆ ಶಿಕ್ಷಣದ ಮಟ್ಟ ಹೆಚ್ಚುತ್ತಾ ಹೋದಹಾಗೆಲ್ಲ, ಹೆಣ್ಣು ಮಕ್ಕಳ ದಾಖಲಾತಿ ಕಡಿಮೆಯಾಗುತ್ತಾ ಹೋಗಿ, ಇದೇ ಅವಧಿಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಹೆಣ್ಣು ಮಕ್ಕಳ ದಾಖಲಾತಿ ಶೇಕಡ 16 ರಿಂದ 40ಕ್ಕೆ ಹಾಗೂ ಪ್ರೌಢ ಶಾಲಾ ಮಟ್ಟದಲ್ಲಿ ಶೇಕಡ 13 ರಿಂದ 38ಕ್ಕೆ ಮಾತ್ರ ಏರಿಕೆಯಾಗಿತ್ತು. ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಪ್ರಮಾಣ ಮಾತ್ರ ಐವತ್ತು ವರ್ಷಗಳ ಅವಧಿಯಲ್ಲೂ ಹೆಚ್ಚಿನ ಏರಿಕೆ ಕಂಡಿರಲಿಲ್ಲ.

ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳಲ್ಲಿ 1950ರಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಕೇವಲ 10 ರಷ್ಟಿದ್ದದ್ದು ಹೊಸ ಶತಮಾನದ ಹೊಸ್ತಿಲಲ್ಲಿ ಈ ಸಂಖ್ಯೆ ಶೇಕಡ 40 ರಷ್ಟಕ್ಕೆ ಏರಿತ್ತು ಎನ್ನುವುದು ಗಮನಾರ್ಹ. ಅಧ್ಯಯನವೊಂದರ ಪ್ರಕಾರ 1950ರಲ್ಲಿ ಉನ್ನತ ಶಿಕ್ಷಣದಲ್ಲಿ ಪ್ರತಿ 100 ಪುರುಷರಿಗೆ ಇದ್ದದ್ದು ಕೇವಲ 14 ಮಹಿಳೆಯರು. ಆದರೆ 2002-03ರ ವೇಳೆಗೆ ಈ ಪ್ರಮಾಣ 67ಕ್ಕೆ ಏರಿತ್ತು.

ಈ ಶತಮಾನದ ಆರಂಭದಲ್ಲಿ ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ದಾಖಲಾತಿಯಲ್ಲಿ ಕಂಡು ಬಂದಂಥ ಹೆಚ್ಚಳ ಅದರ ಮೊದಲ ದಶಕದಲ್ಲಿಯೂ ಮುಂದುವರೆಯಿತು. ಈ ಹೆಚ್ಚಳ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಮತ್ತು ಪುರುಷರ ದಾಖಲಾತಿಗಿಂತ ಹೆಚ್ಚಿದ್ದದ್ದು ಗಮನಾರ್ಹ.
 
ದೇಶದ 18 ರಾಜ್ಯಗಳಲ್ಲಿ ಉನ್ನತ ಶಿಕ್ಷಣದ ರಾಷ್ಟ್ರೀಯ ಸರಾಸರಿ ದಾಖಲಾತಿಗಿಂತ ಹೆಣ್ಣು ಮಕ್ಕಳ ದಾಖಲಾತಿಯೇ ಹೆಚ್ಚಾಗಿದೆ. ಇವುಗಳಲ್ಲಿ ಪ್ರಮುಖ ಉದಾಹರಣೆಗಳೆಂದರೆ ಗೋವಾ (61%), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (58%), ಕೇರಳ (57%), ಚಂಡೀಗಢ (56%), ಪಂಜಾಬ್ (53%).

ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ದಾಖಲಾತಿಯ ಈ ಹೆಚ್ಚಳ ಸಹಜವಾಗಿಯೇ ಕೆಲ ಪ್ರಶ್ನೆಗಳನ್ನೂ ನಮ್ಮ ಮುಂದಿಡುತ್ತದೆ. ಈ ಪ್ರಶ್ನೆಗಳಲ್ಲಿ ಮುಖ್ಯವಾದುವು:

* ಮಹಿಳೆಯರ ಸಂಖ್ಯಾತ್ಮಕ ಹೆಚ್ಚಳಕ್ಕೂ ದೇಶದಾದ್ಯಂತ ಹೆಚ್ಚುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಗೂ ಸಂಬಂಧವಿದೆಯೇ?

* ಹೆಚ್ಚುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ದೇಶದ ಕೆಲವು ರಾಜ್ಯಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆಯೇ ಅಥವಾ ದೇಶದೆಲ್ಲೆಡೆ ಈ ಪ್ರವೃತ್ತಿಯನ್ನು ಕಾಣಲು ಸಾಧ್ಯವೇ?

* ಯಾವ-ಯಾವ ಕೋರ್ಸುಗಳಲ್ಲಿ ಮತ್ತು ಯಾವ-ಯಾವ ಮಟ್ಟದಲ್ಲಿ ಹೆಣ್ಣು ಮಕ್ಕಳ ದಾಖಲಾತಿಯಲ್ಲಿ ಹೆಚ್ಚಳ ಕಂಡುಬರುತ್ತಿದೆ?

* ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿನ ಹೆಚ್ಚಳ ಸಮಾಜದ ವಿವಿಧ ಗುಂಪುಗಳಲ್ಲಿ ಸಮವಾಗಿ ಹಂಚಿಕೆಯಾಗಿದೆಯೇ ಅಥವಾ ಕೇವಲ ಕೆಲ ವರ್ಗಗಳಿಗೆ ಈ ಹೆಚ್ಚಳ ಸೀಮಿತವಾಗಿದೆಯೇ?

ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಸಂಖ್ಯೆಯಲ್ಲಿ ಅಪಾರ ಪ್ರಮಾಣದ ಬೆಳವಣಿಗೆಯಾಗಿದೆ. ಕಳೆದ ವರ್ಷದ ಅಂತ್ಯದಲ್ಲಿ ದೇಶದಲ್ಲಿ 523 ವಿಶ್ವವಿದ್ಯಾಲಯಗಳೂ, 33,023 ಕಾಲೇಜುಗಳೂ ಇದ್ದು, ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಶೇಕಡ 44 ಮತ್ತು ಕಾಲೇಜುಗಳ ಸಂಖ್ಯೆಯಲ್ಲಿ ಶೇಕಡ 56ರಷ್ಟು ಹೆಚ್ಚಳ ಉಂಟಾಗಿದ್ದೇ ಹತ್ತನೇ ಮತ್ತು ಹನ್ನೊಂದನೇ ಪಂಚವಾರ್ಷಿಕ ಯೋಜನೆಗಳ ನಡುವಿನ ಅವಧಿಯಲ್ಲಿ.

ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದ್ದಂತೆ ಅವುಗಳ ಭೌಗೋಳಿಕ ವಿಸ್ತಾರವೂ ಹೆಚ್ಚಾಗುತ್ತದೆ. ಕಾಲೇಜುಗಳು ವಾಸಸ್ಥಾನಗಳಿಗೆ ಹತ್ತಿರ-ಹತ್ತಿರ ಬರುತ್ತಿದ್ದಂತೆ ಅವುಗಳಿಗೆ ದಾಖಲಾಗುವ ಹೆಣ್ಣುಮಕ್ಕಳ ಸಂಖ್ಯೆಯೂ ಏರುತ್ತದೆ. ಇದಕ್ಕೆ ನಿದರ್ಶನವಾಗಿ ಕರ್ನಾಟಕ ರಾಜ್ಯವನ್ನೇ ತೆಗೆದುಕೊಳ್ಳಬಹುದು.

2007-08ರಲ್ಲಿ ರಾಜ್ಯ ಸರ್ಕಾರ ರಾಜ್ಯದ ವಿವಿಧ ಭಾಗಗಳಲ್ಲಿ 200ಕ್ಕೂ ಹೆಚ್ಚಿನ ಸಂಖ್ಯೆಯ ಕಾಲೇಜುಗಳನ್ನು ತೆರೆದಿದ್ದು, ಇಂಥ ಅನೇಕ ಹೊಸ ಕಾಲೇಜುಗಳಲ್ಲಿ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳ ದಾಖಲಾತಿಯೇ ಹೆಚ್ಚಾಗಿತ್ತು.

ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿಯೇ ಆ ವರ್ಷ 48 ಹೊಸ ಕಾಲೇಜುಗಳು ಆರಂಭವಾಗಿದ್ದು, ಪದವಿ ಕಾಲೇಜುಗಳಲ್ಲಿ ಅದೇ ಅವಧಿಯಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಗಂಡು ಮಕ್ಕಳ ಸಂಖ್ಯೆಗಿಂತ ಸ್ವಲ್ಪ ಹೆಚ್ಚಿದ್ದದ್ದು ವಿಶೇಷವಾಗಿ ಗಮನಿಸಬೇಕಾದಂಥ ಅಂಶ.
 
ಕಳೆದ ಐದು ವರ್ಷಗಳ ದಾಖಲಾತಿಯ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಗಳಲ್ಲಿ ಸ್ತ್ರೀ ಮತ್ತು ಪುರುಷ ವಿದ್ಯಾರ್ಥಿಗಳು ಹೆಚ್ಚು ಕಡಿಮೆ ಸಮಪ್ರಮಾಣದಲ್ಲಿದ್ದರೆ, ಸ್ನಾತಕೋತ್ತರ ತರಗತಿಗಳಲ್ಲಿ ಇದೇ ಅವಧಿಯಲ್ಲಿ ಮಹಿಳೆಯರೇ (52%), ಪುರುಷರಿಗಿಂತ (48%) ಅಧಿಕ ಸಂಖ್ಯೆಯಲ್ಲಿದ್ದುದ್ದು ಕಂಡು ಬರುತ್ತದೆ. ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲೂ ಹೆಚ್ಚು-ಕಡಿಮೆ ಇದೇ ಚಿತ್ರಣವನ್ನು ಕಾಣಬಹುದು.

ಉನ್ನತ ಶಿಕ್ಷಣಾವಕಾಶಗಳು ಹೆಚ್ಚುತ್ತಾ ಹೋಗುವುದಕ್ಕೂ ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚುವುದಕ್ಕೂ ನಡುವೆ ನಿಕಟವಾದ ಸಂಬಂಧವಿದೆ ಎನ್ನುವುದು ಸರಿಯೇ. ಆದರೆ ಈ ಹೆಚ್ಚಳ ದೇಶದ ಎಲ್ಲ ರಾಜ್ಯಗಳಲ್ಲೂ ಏಕಪ್ರಕಾರವಾಗಿ ಸಂಭವಿಸಿಲ್ಲ.

ಒಂದು ಪ್ರಾದೇಶಿಕ ನಿಟ್ಟಿನಲ್ಲಿ ಈ ಹೆಚ್ಚಳದ ಪರಿಯನ್ನು ವಿಶ್ಲೇಷಿಸಿದಾಗ ಬಿಹಾರ, ಛತ್ತಿಸ್‌ಗಢ, ಜಾರ್ಖಂಡ್, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಇಂದಿಗೂ ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ದಾಖಲಾತಿಯ ಪ್ರಮಾಣ ಶೇಕಡ 30ರಷ್ಟು ಮಾತ್ರವಿದ್ದು, ಪುರುಷರೇ ಅಧಿಕ ಸಂಖ್ಯೆಯಲ್ಲಿರುವುದು ತಿಳಿದು ಬರುತ್ತದೆ.
 
ಮಾನವಾಭಿವೃದ್ಧಿ ಸೂಚ್ಯಂಕಗಳಲ್ಲಿ ಕಡಿಮೆ ಮಟ್ಟದಲ್ಲಿರುವ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಂದ ಉನ್ನತ ಶಿಕ್ಷಣಾವಕಾಶಗಳ ಬಳಕೆಯ ಪ್ರಮಾಣವೂ ಕಡಿಮೆ ಇದೆ.

 ಇನ್ನು ಮಹಿಳೆಯರು ಯಾವ ಅಧ್ಯಯನ ಕ್ಷೇತ್ರಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ ಎನ್ನುವ ಪ್ರಶ್ನೆ. ಅವರು ಕಲಾ ವಿಭಾಗದ ಅಥವಾ  ಸಾಮಾನ್ಯ ಎಂದು ಪರಿಗಣಿತವಾಗಿರುವ ವಲಯದ ಕೋರ್ಸುಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ ಎಂಬುದು ಚಾಲ್ತಿಯಲ್ಲಿರುವ ಅಭಿಪ್ರಾಯ.

ಬಹುತೇಕ ಕುಟುಂಬಗಳು ಇಂದಿಗೂ ತಮ್ಮ ಹೆಣ್ಣುಮಕ್ಕಳ ವಿವಾಹ ಮತ್ತು ಕುಟುಂಬ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದರಿಂದ ಹೆಚ್ಚು ಹಣ ಮತ್ತು ಸಮಯ ವ್ಯಯವಾಗುವ ವೃತ್ತಿಪರ ಕೋರ್ಸುಗಳಿಗೆ ಅವರನ್ನು ಕಳುಹಿಸಲು ಇಷ್ಟಪಡುವುದಿಲ್ಲ ಎಂಬುದೇ ಇದಕ್ಕೆ ಮುಖ್ಯ ಕಾರಣ.
 
ತೀರಾ ಇತ್ತೀಚಿನವರೆಗೂ ಕಲಾ ವಿಭಾಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಸುಮಾರು ಅರ್ಧದಷ್ಟಿದರೆ, ವಿಜ್ಞಾನ, ವಾಣಿಜ್ಯ ಮತ್ತು ವ್ಯವಹಾರ ವಿಜ್ಞಾನ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅವರ ಸಂಖ್ಯೆ ಶೇಕಡ 20ಕ್ಕಿಂತ ಕಡಿಮೆ ಇತ್ತು. ಆದರೆ 2009-10ರ ವೇಳೆಗೆ ಈ ಚಿತ್ರಣ ಬದಲಾಗತೊಡಗಿತು.

ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಬದಲಾಗುತ್ತಿರುವ ದಾಖಲಾತಿಯ ಸ್ವರೂಪವನ್ನು ಕುರಿತ ಅಧ್ಯಯನದ ವರದಿಯೊಂದು ಕಳೆದ ವರ್ಷದಲ್ಲಿ ಬಿಡುಗಡೆಯಾಗಿದೆ. ಅದರ ಪ್ರಕಾರ ಮಹಿಳೆಯರ ದಾಖಲಾತಿಯಲ್ಲಿನ ಹೆಚ್ಚಳದ ಪ್ರಮಾಣ ವಿವಿಧ ಕೋರ್ಸುಗಳಲ್ಲಿ ಹೀಗಿದೆ -

ವಾಣಿಜ್ಯ ಮತ್ತು ವ್ಯವಹಾರ ವಿಜ್ಞಾನದ ಕೋರ್ಸುಗಳಲ್ಲಿ ಶೇಕಡ 68, ಕಾನೂನು ಕೋರ್ಸುಗಳಲ್ಲಿ ಶೇಕಡ 38, ಕಲಾ ವಿಭಾಗದಲ್ಲಿ ಶೇಕಡ 62, ವಿಜ್ಞಾನಗಳಲ್ಲಿ ಶೇಕಡ 72, ವೈದ್ಯಕೀಯ ವಿಭಾಗದಲ್ಲಿ ಶೇಕಡ 89, ಕೃಷಿಗೆ ಸಂಬಂಧಿಸಿದ ಕೋರ್ಸುಗಳಲ್ಲಿ ಶೇಕಡ 74 ಮತ್ತು ಪಶುಸಂಗೋಪನೆಯಲ್ಲಿ ಶೇಕಡ 29.

ಪುರುಷ ಪ್ರದಾನ ಎಂದೇ ಗುರುತಿಸಲ್ಪಟ್ಟಿದ್ದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಈ ಹೊತ್ತು ಮಹಿಳೆಯರ ದಾಖಲಾತಿಯಲ್ಲಿನ ಹೆಚ್ಚಳದ ಪ್ರಮಾಣ ಶೇಕಡ 122ರಷ್ಟಿದೆ ಎಂದು ಈ ವರದಿಯಲ್ಲಿ ಸೂಚಿಸಲಾಗಿದೆ.
 
ಈ ಮಾಹಿತಿಯ ಹಿನ್ನೆಲೆಯಲ್ಲಿ ಕಳೆದ ದಶಕದಲ್ಲಿ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸುಗಳ ಒಟ್ಟು ದಾಖಲಾತಿಯನ್ನು ಪರಿಶೀಲಿಸಿದಾಗ ಬಹುತೇಕ ಕೋರ್ಸುಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಂಡು ಮಕ್ಕಳ ಸಂಖ್ಯೆಗಿಂತ ಹೆಚ್ಚಾಗಿರುವುದು ಕಂಡು ಬರುತ್ತದೆ.

ಹೆಣ್ಣುಮಕ್ಕಳ ದಾಖಲಾತಿಯಲ್ಲಿನ ಹೆಚ್ಚಳ ಬಹುಕಾಲ ಈ ಸಮಾಜದ ಅನುಕೂಲವನ್ನು ಪಡೆದಂಥ ವರ್ಗಗಳಲ್ಲಿ ಕೇಂದ್ರೀಕೃತವಾಗಿತ್ತು. ಆದರೆ ಈ ಹೊತ್ತಿನ ಪರಿಸ್ಥಿತಿಯಲ್ಲಿ ಸ್ಪಷ್ಟ ಬದಲಾವಣೆಗಳು ಗೋಚರವಾಗುತ್ತಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ದಾಖಲಾತಿ ಹೆಚ್ಚುಕಡಿಮೆ ಸಮ ಪ್ರಮಾಣದಲ್ಲಿರುವುದು ಕಂಡು ಬರುತ್ತದೆ.

 ಈ ಎಲ್ಲ ವಿಚಾರಗಳಿಂದ ತಿಳಿದು ಬರುವ ಪ್ರಮುಖ ಅಂಶವೆಂದರೆ ಕಳೆದ ದಶಕದಲ್ಲಿ ಉನ್ನತ ಶಿಕ್ಷಣದ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಸಂಖ್ಯಾತ್ಮಕ ಗೋಚರತೆಯನ್ನು ಪಡೆಯುತ್ತಿದ್ದಾರೆ ಎನ್ನುವುದು.
 
ಆದರೆ ನಾವು ಇದರಿಂದಲೇ ಸಮಾಧಾನಗೊಂಡರೆ ಸಾಲದು. ಈ ಸಂಖ್ಯಾ ಹೆಚ್ಚಳ ಹೆಣ್ಣುಮಕ್ಕಳ ಸಾಮರ್ಥ್ಯ ಬಲವರ್ಧನೆಗೆ ಕಾರಣವಾಗಿದೆಯೇ? ಉನ್ನತ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗಿ ಡಿಗ್ರಿಗಳನ್ನು, ಉನ್ನತ ಶ್ರೇಣಿಗಳನ್ನೂ ಬಹುಮಾನ ಅಥವಾ ಪದಕಗಳನ್ನೂ ಗಳಿಸಿಬಿಟ್ಟರೆ ಸಾಕೆ?

ಹೆಣ್ಣುಮಕ್ಕಳಿಗೆ ಲಭಿಸುತ್ತಿರುವ ಶಿಕ್ಷಣಾವಕಾಶಗಳು ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಥವಾ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುತ್ತಿವೆಯೇ-ಇವೇ ಮುಂತಾದ ಪ್ರಶ್ನೆಗಳಿಗೆ ನಮ್ಮ ಬಳಿ ಅನೇಕ ಸಂದರ್ಭಗಳಲ್ಲಿ ದೊರೆಯುವುದು ನಿರಾಶಾದಾಯಕ ಉತ್ತರಗಳು ಮಾತ್ರ.

ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳೇ ಹೆಚ್ಚಾಗಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಪಂಜಾಬಿನಲ್ಲಿ ದೇಶದಲ್ಲೇ ಅತ್ಯಂತ ಕಡಿಮೆ ಸ್ತ್ರೀ-ಪುರುಷ ಅನುಪಾತವಿರುವುದೇ ತೋರಿಸುತ್ತದಲ್ಲವೇ ಸಂಖ್ಯೆ ಮತ್ತು ಸಶಕ್ತೀಕರಣದ ನಡುವೆ ಇರುವ ಅಂತರವನ್ನು?

ಆರ್ಥಿಕ ಉದಾರೀಕರಣದ ಯುಗ ತೆರೆದಿಟ್ಟ ವೈವಿಧ್ಯಮಯ ಉದ್ಯೋಗಾವಕಾಶಗಳು, ವಾಣಿಜ್ಯೀಕೃತ ಸಂಸ್ಕೃತಿಯ ಸ್ಫೋಟ ತಂದ ಐಷಾರಾಮಿ ಬದುಕಿನ ಕನಸುಗಳು ಹಾಗೂ ಶಿಕ್ಷಣ ಕ್ಷೇತ್ರದ ಮೇಲಿದ್ದ ಸರ್ಕಾರಿ ಸ್ವಾಮ್ಯ ಸಡಿಲಗೊಂಡು ಖಾಸಗಿ ವಲಯ ಈ ಕ್ಷೇತ್ರವನ್ನು ಪ್ರವೇಶಿಸಿ ನೂರಾರು ಕೋರ್ಸುಗಳನ್ನು ಪರಿಚಯಿಸಿದ್ದು-

ಮುಖ್ಯವಾಗಿ ಈ ಕಾರಣಗಳಿಂದಾಗಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣಾವಕಾಶಗಳನ್ನು ಪಡೆಯಲು ಮುಂದೆ ಬಂದದ್ದು ನಿಜ. ಆದರೆ ಶಿಕ್ಷಣ ಪಡೆದ ನಂತರ ಅವರಲ್ಲಿ ಬಹು ಮಂದಿ ಕಟ್ಟಿಟ್ಟ ಸಿದ್ಧಮಾದರಿಗಳಿಗೇ ಬಲಿಯಾಗುತ್ತಿದ್ದಾರೆ.

ಉದ್ಯೋಗದಲ್ಲಿದ್ದರೂ ಸ್ವತಂತ್ರ ಜೀವನವನ್ನು ನಡೆಸಲು ಅಸಮರ್ಥರಾಗುತ್ತಾರೆ ಅಥವಾ ತಾವು ಬಯಸಿದ ಭವಿಷ್ಯವನ್ನು ಆಯ್ಕೆ ಮಾಡಲು ಅಸಮರ್ಥರಾಗುತ್ತಾರೆ. ಈ ಪರಿಸ್ಥಿತಿ ಬದಲಾಗುವವರೆಗೂ ಸಂಖ್ಯಾತ್ಮಕ ಹೆಚ್ಚಳವನ್ನು ವೈಭವೀಕರಿಸುವಲ್ಲಿ ಎಚ್ಚರ ವಹಿಸಬೇಕಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT