ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿನ ಹೊಸ ಪ್ರಯೋಗ

Last Updated 9 ಜೂನ್ 2013, 19:59 IST
ಅಕ್ಷರ ಗಾತ್ರ

ಈ  ವರ್ಷ ಬೆಂಗಳೂರಿನ 2,450 ಶಾಲೆಗಳು ಶಿಕ್ಷಣ ಹಕ್ಕು  ಕಾಯ್ದೆಯಡಿ ಬಡ  ಮಕ್ಕಳನ್ನು ದಾಖಲಾತಿ ಮಾಡಿಕೊಂಡಿವೆ. ನರ್ಸರಿ ಮತ್ತು ಮೊದಲ ತರಗತಿಯ ಕಾಲು ಭಾಗದಷ್ಟು ವಿದ್ಯಾರ್ಥಿಗಳು ಈ ವರ್ಷ ಶುಲ್ಕವಿಲ್ಲದೆ ಪ್ರವೇಶ ಪಡೆದಿದ್ದಾರೆ.ಇದನ್ನು ಕ್ರಾಂತಿಕಾರಿ ಬೆಳವಣಿಗೆಯೆಂದು ಬಡ ಕುಟುಂಬಗಳು ನಂಬಿವೆ. ಗಾಂಧಿ-ನೆಹರು ಯುಗದ ಮೌಲ್ಯಗಳನ್ನು ನೆಚ್ಚಿಕೊಂಡಿರುವ ಶಿಕ್ಷಣ ಚಿಂತಕರೂ ಹೊಸ ವ್ಯವಸ್ಥೆಯನ್ನು ಸ್ವಾಗತಿಸಿದ್ದಾರೆ.

ಗೇಟೆಡ್ ಕಮ್ಯೂನಿಟಿಗಳ ಈ ಯುಗದಲ್ಲಿ ಬಡವರು ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಕೂತು ಕಲಿಯುವುದೇ ಹಲವರಿಗೆ ಆಶ್ಚರ್ಯ ಹುಟ್ಟಿಸುತ್ತಿದೆ. ತಮ್ಮದೇ ಪ್ರಪಂಚದಲ್ಲಿ ವಿಹರಿಸಿ, ತಮ್ಮ ವರ್ಗದವರ ಜೊತೆಗೆ ಮಾತ್ರ ವ್ಯವಹರಿಸಬೇಕು ಎಂದು ಆಶಿಸುವವರಿಗೆ ಆಘಾತವಾಗಿದೆ.ಹೊಸ ಕಾನೂನನ್ನು ಹಲವು ಖಾಸಗಿ ಶಾಲೆಗಳು ವಿರೋಧಿಸುತ್ತಿವೆ. ತೊಡಕುಗಳನ್ನು ಪಟ್ಟಿ ಮಾಡುತ್ತಾ ಬಂದಿವೆ. ಸುಪ್ರೀಂ ಕೋರ್ಟ್ ತೀರ್ಪೊಂದು ಇರುವುದರಿಂದ ಬೇರೆ ದಾರಿಯಿಲ್ಲದೆ 2009ರಲ್ಲಿ ಅನುಮೋದನೆಯಾದ ಕಾನೂನನ್ನು ಈಗ ಪಾಲಿಸುತ್ತಿವೆ.

ಮಾರ್ಗೋ ಕೋಹೆನ್ ಎಂಬ ಅಮೆರಿಕನ್ ಮೂಲದ, ಬೆಂಗಳೂರು ನಿವಾಸಿ ಪತ್ರಕರ್ತೆ ಈ ವರ್ಷದ ಪರಿಸ್ಥಿತಿ ಹೇಗಿದೆ ಎಂದು ಪರಿಶೀಲಿಸ ಹೊರಟಾಗ ಕಂಡ ವಿಷಯಗಳನ್ನು ನಾನು ಸಂಪಾದಿಸುವ ಟಾಕ್ ವಾರಪತ್ರಿಕೆಯಲ್ಲಿ ದಾಖಲಿಸಿದರು.ಕೆ.ಆರ್.ಪುರಂ ಹತ್ತಿರದ ಮುಸ್ಲಿಂ ಕುಟುಂಬವೊಂದರಲ್ಲಿ ಈ ಕಾನೂನು ಆಶಾವಾದವನ್ನು ಮೂಡಿಸಿದೆ. ನಾಲ್ಕು ಮಕ್ಕಳ ಈ ಕುಟುಂಬದಲ್ಲಿ ಕೊನೆಯ ಮಗುವಿದೆ ಖಾಸಗಿ ಶಾಲೆಯೊಂದರಲ್ಲಿ ಉಚಿತ ಪ್ರವೇಶ ದೊರಕಿದೆ.

ಇಬ್ಬರು ಮಕ್ಕಳನ್ನು ಸರ್ಕಾರಿ ಉರ್ದು ಶಾಲೆಗೆ ಕಳಿಸಿದ ಈ ಕುಟುಂಬ ಅಲ್ಲಿನ ದುರವಸ್ಥೆ ಕಂಡು ಬೇಸರ ಪಟ್ಟಿತ್ತು. ದೇವಸಂದ್ರದ ಆ ಶಾಲೆಯ ಬದಿಯಲ್ಲಿ ದೊಡ್ಡ ತಿಪ್ಪೆ ಗುಂಡಿಯಿದೆ. ಮಕ್ಕಳಿಗೆ ಕುಡಿಯುವ ನೀರು ಇರುವುದಿಲ್ಲ. ಶೌಚಾಲಯಕ್ಕೆ ಬೀಗ ಬಡಿದಿರುತ್ತಾರೆ. ಮಧ್ಯಾಹ್ನ ಕೊಡುವ ಊಟದಲ್ಲಿ ಕಲ್ಲು, ಹುಳ ಸಿಗುವುದು ಸಾಮಾನ್ಯ.

ಒಂದು ಮಗುವನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿದ ಕುಟುಂಬಕ್ಕೆ ಅಲ್ಲಿಯೂ ನಿರಾಸೆ ಕಾದಿತ್ತು. ಹಾಗಾಗಿ ಈಗ ಸಿಕ್ಕಿರುವ ಅವಕಾಶದಿಂದ ಮನೆ ಮಂದಿ ಖುಷಿಯಾಗಿದ್ದಾರೆ. ಒಂದು ಮಗುವಾದರೂ ಒಳ್ಳೆಯ ಶಿಕ್ಷಣ ಪಡೆಯಬಹುದೆಂದು ನಿರೀಕ್ಷಿಸುತ್ತಿದ್ದಾರೆ. ಈ ಕುಟುಂಬದ ಮುಖ್ಯಸ್ಥ ಗುಜರಿ ಒಟ್ಟುಗೂಡಿಸುವ ಕೆಲಸ ಮಾಡುತ್ತಾನೆ.

ಬಡ ಕುಟುಂಬಗಳನ್ನು ಮಾತಾಡಿಸುತ್ತಾ ಹೋದರೆ ಈ ರೀತಿಯ ಆಶಾವಾದದ ಕಥೆಗಳು ಕೇಳಿಬರುತ್ತವೆ. ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ಸಾಗಿಸುವ ಅಪ್ಪ ಅಮ್ಮಂದಿರು ತಮ್ಮ ಮಕ್ಕಳು ಓದಿ ಬಡತನದಿಂದ ಪಾರಾಗುವ ಕನಸು ಕಾಣುತ್ತಿದ್ದಾರೆ. ವಾರ್ಷಿಕ ರೂ 3.5 ಲಕ್ಷಕ್ಕಿಂತ ಕಡಿಮೆ ಸಂಪಾದಿಸುವ ಕುಟುಂಬಗಳು, ಪರಿಶಿಷ್ಟ ಜಾತಿ, ಬುಡಕಟ್ಟು ಜನಾಂಗ, ಓಬಿಸಿ ವರ್ಗಕ್ಕೆ ಸೇರಿದವರು, ಈ ಕಾಯ್ದೆಯಡಿ ಉಚಿತ ಸೀಟಿಗೆ ಅರ್ಜಿ ಹಾಕಬಹುದು.

ಸುಮಾರು 30,000 ಮಕ್ಕಳು ಈ ವರ್ಷ ಪ್ರವೇಶ ಕೇಳಿದ್ದರು. ಅರ್ಜಿಯ ಜೊತೆಗೆ ಜಾತಿ ಮತ್ತು ವರಮಾನ ಪ್ರಮಾಣ ಪತ್ರ ಲಗತ್ತಿಸಬೇಕು ಎಂದು ಮೊದಲು ಹೇಳಿದ್ದರಿಂದ, ತಹಶೀಲ್ದಾರರು ದಾಖಲೆಯೊಂದಕ್ಕೆ ರೂ 1,000 ಲಂಚ ಪಡೆಯುತ್ತಿರುವ ದೂರುಗಳು ಕೇಳಿಬರುತ್ತಿದ್ದವು.

ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಡೆಸುವ ಕೆ.ಪಿ.ಗೋಪಾಲ ಕೃಷ್ಣ ಎಂಬವವರ ಕೊರಗು ಕೇಳಿ. ತಾವು ಒದಗಿಸುವ ಪ್ರತಿ ಉಚಿತ ಸೀಟಿಗೆ ಸರ್ಕಾರ ಕೊಡುವ ಸಹಾಯ ಧನ ರೂ 11,848 ಯಾವುದಕ್ಕೂ ಸಾಲುವುದಿಲ್ಲವಂತೆ. ಅವರ ಶಾಲೆಯಲ್ಲಿ ವಾರ್ಷಿಕ ಶುಲ್ಕರೂ 75,000ದಿಂದ ರೂ 95,000ದಷ್ಟಿರುತ್ತದೆ. ಎಲ್ಲರೂ ಸಮಾನ ಎನ್ನುವ ಮಾತನ್ನು ಅವರು ಒಪ್ಪುವುದಿಲ್ಲ. ಭೇದ ಭಾವ ಸರಿ ಎಂದು ವಾದಿಸುವ ಅವರು ಬಡ ಮಕ್ಕಳು ಸ್ನಾನ ಮಾಡದೆ ಕ್ಲಾಸಿಗೆ ಬಂದು ಇತರರಿಗೆ ಇರುಸು ಮುರುಸು ಮಾಡುತ್ತಾರೆ ಎಂದು ಹೇಳಲು ಹಿಂಜರಿಯುವುದಿಲ್ಲ.

ಹೀಗೆ ಮಾತಾಡುವವರ ಹಿಂದೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆದ ಪಲ್ಲಟವನ್ನು ಕಾಣಬಹುದು. ತುಂಬ ಹೆಸರು ಮಾಡಿದ ನ್ಯಾಷನಲ್ ಹೈ ಸ್ಕೂಲ್, ನ್ಯಾಷನಲ್ ಕಾಲೇಜ್ ನಡೆಸಿದ ಎಚ್.ನರಸಿಂಹಯ್ಯನಂಥವರು ಇಂಥ ಮಾತನ್ನು ಎಂದೂ ಆಡುತ್ತಿರಲಿಲ್ಲ. ಅಂದು ಶಿಕ್ಷಣಕ್ಕೂ ಆದರ್ಶಕ್ಕೂ ಗಟ್ಟಿಯಾದ ನಂಟು ಇತ್ತು. ಶಾಲೆ, ಕಾಲೇಜುಗಳನ್ನು ಸ್ಥಾಪನೆ ಮಾಡುತ್ತಿದ್ದವರು ಗಾಂಧಿವಾದಿಗಳೋ, ಅಥವಾ ಇನ್ನಾವುದೋ ಆದರ್ಶದಿಂದ ಪ್ರೇರಿತರಾದವರೋ, ಇರುತ್ತಿದ್ದರು.

ಇಂಥ ಧೋರಣೆಯ ಹಲವರು ಸೇರಿ ವಿದ್ಯಾಸಂಸ್ಥೆಗಳನ್ನು ಕಟ್ಟುತ್ತಿದ್ದರು. ಈಚಿನ ಮೂರು-ನಾಲ್ಕು ದಶಕದಲ್ಲಿ ಶಿಕ್ಷಣಕ್ಕೂ ಆದರ್ಶಕ್ಕೂ ಇದ್ದ ನಂಟು ಮುರಿದು ಬಿದ್ದಿದೆ. ಶಿಕ್ಷಣಕ್ಕೂ ವ್ಯಾಪಾರಕ್ಕೂ ವ್ಯತ್ಯಾಸವಿಲ್ಲದಂತೆ ಆಗಿದೆ. ಬಡವರಿಗೆ ಶಿಕ್ಷಣ ದಕ್ಕಿಸಬೇಕು ಎನ್ನುವ ಜಾಗದಲ್ಲಿ ಇಂದು ಶಿಕ್ಷಣವನ್ನು ಹೇಗೆ ಪ್ಯಾಕೇಜ್ ಮಾಡಬೇಕು, ಎಲ್ಲಿ ಮಾರ್ಕೆಟಿಂಗ್ ಮಾಡಬೇಕು ಎನ್ನುವ ಮಾತು ಕೇಳುತ್ತದೆ. ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ವಿದ್ಯಾರ್ಥಿಗಳನ್ನು ಕರೆತಂದು ದೊಡ್ಡ ಶಿಕ್ಷಣ ಸಾಮ್ರೋಜ್ಯಗಳನ್ನು ಕಟ್ಟುವ ಆಕಾಂಕ್ಷೆಯ ಕಾಲ ಇದು.

ಆದರೆ ಇಂದಿಗೂ ಆದರ್ಶವನ್ನು ಬಿಡದ ಕೆಲವು ಶಿಕ್ಷಕರು ಸಂಸ್ಥೆಗಳು ಉಳಿದುಕೊಂಡಿವೆ. ಬಸವನಗುಡಿ ಪ್ರದೇಶದಲ್ಲಿರುವ ಮಹಿಳಾ ಸೇವಾ ಸಮಾಜದಲ್ಲಿ ಶಿಕ್ಷಣ ಕಾಯ್ದೆಯಡಿಯಲ್ಲಿ ಬರುತ್ತಿರುವ ಮಕ್ಕಳಿಗೆ ಸ್ವಾಗತವಿದೆ. ಶಶಿಕಲಾ ಅರುಣ್ ಆ ಶಾಲೆಯ ಸಿಬಿಎಸ್‌ಇ ವಿಭಾಗದ ಪ್ರಾಂಶುಪಾಲರು. ಐದು ವರ್ಷದ ಬಡ ಮಕ್ಕಳನ್ನು ಸ್ಥಿತಿವಂತ ಕುಟುಂಬದ ಮಕ್ಕಳ ಜೊತೆ ಬೆರೆಸಿ ಕಲಿಸಿವುದು ಅಂಥ ಕಷ್ಟದ ಕೆಲಸವೇನಲ್ಲ ಎನ್ನುವ ಅವರು ಕಾಯ್ದೆಯನ್ನು ವಿರೋಧಿಸುತ್ತಿರುವ ಖಾಸಗಿ ಶಾಲೆಗಳು ಸುಮ್ಮನೆ ಡ್ರಾಮಾ ಮಾಡುತ್ತಿವೆ ಎಂದು ನಂಬಿದ್ದಾರೆ. ಬಡ ಮಕ್ಕಳು ಸಿರಿವಂತ ಮಕ್ಕಳು ಸ್ನೇಹದಿಂದ ವರ್ತಿಸುವುದು ಅವರು ಕಣ್ಣಾರೆ ಕಂಡಿದ್ದಾರೆ. ಹೊಸ ಕಾನೂನು ಸಾಮಾಜಿಕ ಸಾಮರಸ್ಯ ಹೆಚ್ಚಿಸುತ್ತದೆ ಎನ್ನುತ್ತಾರೆ.

ಅದಿತಿ ಮಲ್ಯದಂತಹ ಕೆಲವು ದುಬಾರಿ ಎನಿಸುವ ಶಾಲೆಗಳಲ್ಲೂ ಕಾನೂನನ್ನು ಪಾಲಿಸಲು ಮುಂದಾಗಿದ್ದಾರೆ. ಇಲ್ಲಿ ನರ್ಸರಿಗೆ ಶುಲ್ಕ ರೂ 2.1 ಲಕ್ಷ. ಪ್ರಾಂಶುಪಾಲ ಸತೀಶ್ ಜಯರಾಜನ್ ಕೆಲ ಧನಿಕ ಪೋಷಕರ ಜೊತೆ ಮಾತಾಡಿ, ಬಡ ಮಕ್ಕಳ ಶುಲ್ಕವನ್ನು ಭರಿಸುವಂತೆ ಒಪ್ಪಿಸಿದ್ದಾರೆ. ಆದರೆ ಇಂಥ ಉದಾರತೆ ಅಪರೂಪ, ಅಪವಾದವಾಗಿರುತ್ತದೆ.ಒಟ್ಟಾರೆ ನೋಡಿದರೆ, ಖಾಸಗಿ-ಸರ್ಕಾರಿ ವಿವಾದದಲ್ಲಿ ಖಾಸಗಿಯವರು ಅತಿ ದುಷ್ಟರಾಗಿ ಕಂಡು ಬರುತ್ತಿದ್ದಾರೆ. ಆದರೆ ಸರ್ಕಾರದ ಪಾತ್ರ ನೋಡಿ. ಶಿಕ್ಷಣ ಮಾಧ್ಯಮ ಕನ್ನಡ ಇರಬೇಕು ಎಂದು ವಿಧಿಸಿ, ಇಂಗ್ಲಿಷ್ ಮಾಧ್ಯಮ ನಡೆಸಲು ಅನುಮತಿಯನ್ನು ಕೆಲವೇ ಕೆಲವರಿಗೆ ಕೊಡುತ್ತದೆ.

ಹೀಗೆ ಅನುಮತಿ ಪಡೆದವರು ತಮಗೆ ಇಷ್ಟ ಬಂದಂತೆ ಶುಲ್ಕ, ಡೊನೇಷನ್ ವಿಧಿಸುತ್ತಾರೆ. ಸರ್ಕಾರಿ ಶಾಲೆಗಳು ದುರ್ಬಲವಾಗಲು ಸರ್ಕಾರವೇ ಕಾರಣ, ಅಲ್ಲವೇ? ಒಳ್ಳೆಯ ಜಾಗ, ಅನುದಾನ, ಮೈದಾನ ಎಲ್ಲ ಇದ್ದರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮಧ್ಯಮ ವರ್ಗದವರು ಏಕೆ ಹಿಂದೇಟು ಹಾಕುತ್ತಾರೆ? ಕೇಂದ್ರೀಯ ವಿದ್ಯಾಲಯ ಶಾಲೆಗಳು ಚೆನ್ನಾಗಿ ನಡೆಯುತ್ತಿವೆ.

ಕರ್ನಾಟಕ ಸರ್ಕಾರದ ಶಾಲೆಗಳೇಕೆ ಹಿಂದೆ ಬಿದ್ದಿವೆ? ಚೆನ್ನಾಗಿ ಶಾಲೆ ನಡೆಸಲು ನಮ್ಮ ಶಿಕ್ಷಣ ಇಲಾಖೆಗೆ ಏಕೆ ಸಾಧ್ಯವಾಗುತ್ತಿಲ್ಲ? ಸರ್ಕಾರಿ ಶಾಲೆಗಳು ಚೆನ್ನಾಗಿದ್ದರೆ, ಭಾಷಾ ನೀತಿ ಪೋಷಕರ ಆಶಯಗಳಿಗೆ ಅನುಗುಣವಾಗಿದ್ದರೆ, ಮಕ್ಕಳನ್ನು ಅಲ್ಲಿಗೆ ಕಳಿಸಲು ಎಲ್ಲರೂ ಮುಂದಾಗುವುದಿಲ್ಲವೇ? ಜಾಗತೀಕರಣ, ಖಾಸಗೀಕರಣದ ಈ  ಸಮಯದಲ್ಲಿ ಶಿಕ್ಷಕರ ಆಸೆ ಆಕಾಂಕ್ಷೆಗಳು ಬದಲಾಗಿವೆ. ಜಗತ್ತಿನ ಅಗತ್ಯಗಳನ್ನು ಅರ್ಥಮಾಡಿಕೊಂಡು ಆದರ್ಶಗಳನ್ನೂ ಬಿಡದೆ ಶಾಲಾ ಕಾಲೇಜುಗಳನ್ನು ನಡೆಸುವ ಪ್ರಯತ್ನವನ್ನೂ ಯಾಕೆ ನಾವು ಮಾಡುತ್ತಿಲ್ಲ?

ಕ್ರಿಕೆಟ್ ತಮಾಷೆ
ಬೋರ್ಡ್ ಆಫ್ ಕ್ರಿಕೆಟ್ ಕಂಟ್ರೋಲ್ ಇನ್ ಇಂಡಿಯಾದ ಹಗರಣಗಳು ಚರ್ಚೆಯಾಗುತ್ತಿವೆ. ಎಲ್ಲೆಲ್ಲೂ ಅದೇ ಗುಲ್ಲು. ಛೇರ್ಮನ್ ಎನ್.ಶ್ರೀನಿವಾಸನ್ ಕೆಳಗಿಳಿದು ಜಗಮೋಹನ್ ದಾಲ್ಮಿಯಾ ಅವರ ಜಾಗದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಅದರಿಂದ ಏನೂ ಪ್ರಯೋಜನವಿಲ್ಲ, ದಾಲ್ಮಿಯಾ ಶ್ರೀನಿವಾಸನ್ ಕಡೆಯವರೇ ಎಂದು ಆಪಾದನೆ.ಮಾಧ್ಯಮಗಳು ಹೇಳುತ್ತಿರುವುದೇನು? `ದಾಲ್ಮಿಯಾ ಮೆ ಕುಚ್ಚ್ ಕಾಲ ಹೈ!'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT