ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯೋಮಿ ರೆಡ್‌ಮಿ 5ಎ: ವಿನ್ಯಾಸದ ಜೊತೆಗೆ ಬಹುಆಯ್ಕೆ

Last Updated 18 ಜನವರಿ 2018, 5:29 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳ ಲೋಕದಲ್ಲಿ ಶಿಯೋಮಿ ಗಮನಾರ್ಹ ಹೆಸರು ಮಾತ್ರವಲ್ಲ ಈಗ ಅದು ಭಾರತದಲ್ಲಿ ಮಾರಾಟದಲ್ಲಿ ಪ್ರಥಮ ಸ್ಥಾನದಲ್ಲಿದೆ. ಸ್ಯಾಮ್‌ಸಂಗ್‌ನಂತಹ ಘಟಾನುಘಟಿಗಳನ್ನು ಅದು ಹಿಂದೆ ಹಾಕಿದೆ. ಶಿಯೋಮಿ ಕಂಪನಿಯ ಹಲವು ಫೋನ್‌ಗಳನ್ನು ಈ ಅಂಕಣದಲ್ಲಿ ವಿಮರ್ಶೆ ಮಾಡಲಾಗಿತ್ತು. ನೀಡುವ ಬೆಲೆಗೆ ಉತ್ತಮ ಎನ್ನಬಹುದಾದ ಉತ್ಪನ್ನಗಳನ್ನು ನಿರಂತರವಾಗಿ ನೀಡುತ್ತ ಬಂದಿರುವ ಒಂದು ಕಂಪನಿ ಶಿಯೋಮಿ ಎನ್ನಬಹುದು. ಚೀನಾದ ಈ ಕಂಪನಿ ಈಗ ಭಾರತದಲ್ಲೂ ಫೋನ್ ತಯಾರಿಸುತ್ತಿದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ರೆಡ್‌ಮಿ 5ಎ (Xiaomi Redmi 5A) ಫೋನನ್ನು.

ಈ ಫೋನ್ ನಿಜಕ್ಕೂ ಅತಿ ಕಡಿಮೆ ಬೆಲೆಗೆ ಉತ್ತಮ ಫೋನ್ ಎನ್ನಬಹುದು. ಕಡಿಮೆ ಬೆಲೆಯ ಫೋನ್ ಎಂದು ಇದನ್ನು ಕೈಯಲ್ಲಿ ಹಿಡಿದಾಗ ಅನ್ನಿಸುವುದಿಲ್ಲ. ಹಿಂದುಗಡೆಯ ಕವಚ ತೆಗೆಯಲು ಸಾಧ್ಯವಿಲ್ಲ. ಈ ಕವಚ ತುಂಬ ನಯವಾಗಿಲ್ಲ, ಸ್ವಲ್ಪ ದೊರಗಾಗಿದೆ. ಬದಿಗಳು ವಕ್ರವಾಗಿವೆ, ಅಂದರೆ ಸ್ವಲ್ಪ ತಲೆದಿಂಬಿನಾಕಾರದಲ್ಲಿದೆ. ಆದರೂ ಕೈಯಿಂದ ಜಾರಿ ಬೀಳಬಹುದೆಂಬ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಹಾಗೂ ಅದರ ಪಕ್ಕದಲ್ಲಿ ಅವಕೆಂಪು (infrared) ದೂರನಿಯಂತ್ರಕದ ಕಿಟಕಿ ಇದೆ.

ಇದನ್ನು ಬಳಸಿ ನಿಮ್ಮ ಮನೆಯ ಟಿ.ವಿ., ಆಂಪ್ಲಿಫೈಯರ್, ಇತ್ಯಾದಿ ಹಲವು ಉಪಕರಣಗಳನ್ನು ನಿಯಂತ್ರಿಸಬಹುದು. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಇದೆ. ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಚಿಕ್ಕ ಟ್ರೇಗಳಿವೆ. ಈ ಟ್ರೇಗಳು ಬೇರೆ ಬೇರೆ ಇವೆ. ಒಂದು ಟ್ರೇಯಲ್ಲಿ ಒಂದು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು.

ಇನ್ನೊಂದು ಟ್ರೇಯಲ್ಲಿ ಒಂದು ನ್ಯಾನೋ ಸಿಮ್ ಹಾಕಬಹುದು. ಅಂದರೆ ಎರಡು ಸಿಮ್ ಮತ್ತು ಮೆಮೊರಿ ಕಾರ್ಡ್ ಒಟ್ಟಿಗೆ ಬಳಸಬಹುದು. ಹಿಂದುಗಡೆ ಬಲಮೂಲೆಯಲ್ಲಿ ಪ್ರಾಥಮಿಕ ಕ್ಯಾಮೆರಾ. ಇದರಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ. ಕಡಿಮೆ ಬೆಲೆಯ ಫೋನ್ ಆಗಿದ್ದೂ ಇದರ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು.

ಇದರಲ್ಲಿರುವುದು ಕಡಿಮೆ ವೇಗದ ಪ್ರೊಸೆಸರ್. ಇದರ ಅಂಟುಟು ಬೆಂಚ್‌ಮಾರ್ಕ್ 36,773 ಇದೆ. ಇದು ಕಡಿಮೆ ಎನ್ನಬಹುದು. ಫೋನ್ ಬಳಸಿ ಮಾಡುವ ಸಾಮಾನ್ಯ ಕೆಲಸಗಳಲ್ಲಿ ಈ ಫೋನಿನ ವೇಗ ಕಡಿಮೆಯಾಯಿತು ಎಂದು ಅನ್ನಿಸುವುದಿಲ್ಲ. ಕೆಲವು ಕಿರುತಂತ್ರಾಂಶಗಳನ್ನು (ಆ್ಯಪ್‌) ಅನುಸ್ಥಾಪಿಸುವಾಗ (ಇನ್‌ಸ್ಟಾಲ್ ಮಾಡುವಾಗ) ಕೆಲವೊಮ್ಮೆ ಇದು ನಿಧಾನ ಅನ್ನಿಸುತ್ತದೆ. ಕಡಿಮೆ ವೇಗವನ್ನು ಬೇಡುವ ಆಟಗಳನ್ನು ಆಡುವ ಅನುಭವ ತಕ್ಕ ಮಟ್ಟಿಗೆ ಪರವಾಗಿಲ್ಲ. ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಆಡಲು ಮಾತ್ರ ಇದು ಹೇಳಿದ್ದಲ್ಲ. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ.

13 ಮೆಗಾಪಿಕ್ಸೆಲ್ ರೆಸೊಲ್ಯೂಶನ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಎದುರು ಗಡೆಯ ಸ್ವಂತೀ ಕ್ಯಾಮೆರಾ ಎರಡೂ ನೀಡುವ ಹಣಕ್ಕೆ ಹೋಲಿಸಿದರೆ ತೃಪ್ತಿದಾಯಕವಾಗಿವೆ ಎನ್ನಬಹುದು. ಬಹುತೇಕ ಫೋಟೊಗಳು ಮತ್ತು ಸ್ವಂತೀ ಫೋಟೊಗಳು ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಮೂಡಿಬರುತ್ತವೆ. ಶಿಯೋಮಿಯವರ ಎಲ್ಲ ಫೋನ್‌ಗಳಲ್ಲಿರುವ ಕ್ಯಾಮೆರಾ ಕಿರುತಂತ್ರಾಂಶವೇ (ಆ್ಯಪ್) ಇದರಲ್ಲೂ ಇದೆ, ಹಾಗೂ ಅದು ಅಷ್ಟೇನೂ ಚೆನ್ನಾಗಿಲ್ಲ. ಮ್ಯಾನ್ಯುವಲ್ ಮೋಡ್‌ನಲ್ಲಿ ಆಯ್ಕೆಗಳು ಸಾಲದು. ಇದರ ಆಡಿಯೊ ಇಂಜಿನ್ ಸುಮಾರಾಗಿದೆ. ಇಯರ್‌ಫೋನ್ ನೀಡಿಲ್ಲ. ಉತ್ತಮ ಇಯರ್‌ಫೋನ್ ಜೋಡಿಸಿದರೆ ಒಂದು ಮಟ್ಟಿಗೆ ತೃಪ್ತಿ ನೀಡುವ ಸಂಗೀತ ಆಲಿಸುವ ಅನುಭವ ಪಡೆಯಬಹುದು.

ಇದರಲ್ಲಿರುವುದು 3000mAh ಶಕ್ತಿಯ ಬ್ಯಾಟರಿ. ಆದರೆ ಬ್ಯಾಟರಿ ಬಾಳಿಕೆ ಸಾಲದು. ಕನ್ನಡದ ತೋರುವಿಕೆ ಮತ್ತು ಯೂಸರ್ ಇಂಟರ್‌ಫೇಸ್ ಸರಿಯಾಗಿವೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಬೆಲೆಗೆ ಇದು ನಿಜಕ್ಕೂ ಉತ್ತಮ ಫೋನ್ ಎಂದು ಹೇಳಬಹುದು. 

*

ವಾರದ ಆ್ಯಪ್‌(app): ಫೋನ್ ಪರೀಕ್ಷಿಸಿ
ನೀವು ಕೊಂಡುಕೊಂಡ ಫೋನ್ ಚೆನ್ನಾಗಿದೆಯೇ? ಅದರ ಎಲ್ಲ ಅಂಗಗಳೂ ಸರಿಯಾಗಿ ಕೆಲಸ ಮಾಡುತ್ತಿವೆಯೇ? ಅವುಗಳನ್ನೆಲ್ಲ ಪರೀಕ್ಷಿಸಬೇಕಾ? ಪರೀಕ್ಷಿಸುವುದು ಹೇಗೆ? ಅದಕ್ಕಾಗಿ ಯಾವುದಾದರೂ ಕಿರುತಂತ್ರಾಂಶ (ಆ್ಯಪ್) ಇದೆಯೇ? ಇವೆಲ್ಲ ನಿಮ್ಮ ಪ್ರಶ್ನೆಗಳೇ? ಹೌದಾದಲ್ಲಿ ನಿಮಗಾಗಿ ಗೂಗಲ್‌ ಪ್ಲೇ ಸ್ಟೋರಿನಲ್ಲಿ ಅಂತಹ ಹಲವು ಕಿರುತಂತ್ರಾಂಶಗಳಿವೆ. ಅಂತಹ ಒಂದು ಕಿರುತಂತ್ರಾಂಶ ಬೇಕಾಗಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Test Your Mobile ಎಂದು ಹುಡುಕಬೇಕು ಅಥವಾ http://bit.ly/gadgetloka312 ಜಾಲತಾಣಕ್ಕೆ ಭೇಟಿ ನೀಡಬೇಕು. ಕ್ಯಾಮೆರಾ, ಬ್ಯಾಟರಿ, ವೈಫೈ, ಕರೆಗಳ ಗುಣಮಟ್ಟ, ಸ್ಪೀಕರ್, ಮೈಕ್ರೋಫೋನ್, ಪರದೆ, ಹೀಗೆ ಹಲವಾರು ಅಂಗಗಳ ಪರೀಕ್ಷೆಗಳನ್ನು ಇದು ಮಾಡಿ ವರದಿ ನೀಡುತ್ತದೆ.

ಗ್ಯಾಜೆಟ್‌ ಪದ
Selfie = ಸ್ವಂತೀ
ತಾನೇ ತೆಗೆದುಕೊಂಡ (ಕ್ಲಿಕ್ ಮಾಡಿದ) ತನ್ನ ಭಾವಚಿತ್ರ (ಫೋಟೊ).

ಭಾವಚಿತ್ರ ತೆಗೆಯಲು ಕ್ಯಾಮೆರಾ, ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಬಳಸಿರಬಹುದು.
ಉದಾ: 1. ಮೈಸೂರು ಅರಮನೆ ಮುಂದೆ ನಿಂತುಕೊಂಡು ಸ್ವಂತೀ ತೆಗೆದುಕೊಂಡ.
2. ಶಿಯೋಮಿ ರೆಡ್‌ಮಿ 5ಎ ಫೋನಿನಲ್ಲಿ
5 ಮೆಗಾಪಿಕ್ಸೆಲ್‌ ರೆಸೊಲೂಶನ್‌ನ ಸ್ವಂತೀ ಕ್ಯಾಮೆರಾ ಇದೆ.
ಕ್ಯಾಮೆರಾಗಳಲ್ಲಿರುವ ಸೆಲ್ಫ್ ಟೈಮರ್ ಬಳಸಿ ತೆಗೆದ ಫೋಟೊಗಳನ್ನು ಸ್ವಂತೀ (ಸೆಲ್ಫೀ) ಎಂದು ಕರೆಯುವ ವಾಡಿಕೆ ಕಡಿಮೆ.

ಗ್ಯಾಜೆಟ್‌ ಸಲಹೆ
ಕೊಳ್ಳೆಗಾಲದ ಜಗದೀಶರ ಪ್ರಶ್ನೆ:
ರೆಡ್‌ಮಿ ನೋಟ್ 4 ನಲ್ಲಿ ಸೆಕೆಂಡ್ ಸ್ಪೇಸ್ ಅಂದರೆ ಏನು?
ಉ: ರೆಡ್‌ಮಿ ನೋಟ್ 4ರಲ್ಲಿ ಮಾತ್ರವಲ್ಲ ಇನ್ನೂ ಹಲವಾರು ಎರಡು ಸಿಮ್‌ನ ಫೋನ್‌ಗಳಲ್ಲಿ ಈ ಸೌಲಭ್ಯ ಇದೆ. ನಿಮ್ಮಲ್ಲಿರುವ ಪ್ರತಿ ಸಿಮ್‌ಗೂ ನೀವು ಒಂದೊಂದು ಖಾತೆಯನ್ನು ಬಳಸುತ್ತಿರುವಿರಾದರೆ ನೀವು ಈ ಸೆಕೆಂಡ್ ಸ್ಪೇಸ್ ಬಳಸಿ ಎರಡು ಖಾತೆಗಳನ್ನು ಒಂದೇ ಫೋನಿನಲ್ಲಿ ಬಳಸಬಹುದು. ಉದಾಹರಣೆಗೆ ಎರಡು ಪ್ರತ್ಯೇಕ ವಾಟ್ಸ್‌ಆ್ಯಪ್‌, ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಖಾತೆಗಳು

ಗ್ಯಾಜೆಟ್‌ ತರ್ಲೆ
ಹಿಂದಿ ಭಾಷೆಯಲ್ಲಿ ಎಲ್ಲ ಪದಗಳನ್ನೂ ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎಂದು ಗುರುತಿಸಲಾಗುತ್ತದೆ. ಸ್ವಂತೀ ಪದದ ಲಿಂಗ ಯಾವುದು? ಅದನ್ನು ಸ್ತ್ರೀಲಿಂಗ ಎನ್ನಬಹುದು. ಹಾಗೆ ತೀರ್ಮಾನಿಸಲು ಎರಡು ಕಾರಣಗಳು. ಸ್ವಂತೀ ಪದದ ಕೊನೆಯ ಸ್ವರ ದೀರ್ಘವಾಗಿದೆ. ಸಂಸ್ಕೃತದ ಪ್ರಕಾರ ಪದದ ಕೊನೆಯ ಸ್ವರ ದೀರ್ಘವಾದಲ್ಲಿ ಅದು ಸ್ತ್ರೀಲಿಂಗ (ಉದಾ – ಸೀತಾ, ಕೃಷ್ಣಾ, ಲಕ್ಮೀ). ಎರಡನೆಯ ಪ್ರಮುಖ ಕಾರಣವೆಂದರೆ ಸ್ವಂತೀ ತೆಗೆಯುವವರಲ್ಲಿ ಬಹುಪಾಲು ಹುಡುಗಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT