ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯೋಮಿಯಿಂದ ಅಗ್ಗದ ಸ್ಮಾರ್ಟ್‌ಫೋನ್

Last Updated 12 ಏಪ್ರಿಲ್ 2017, 20:23 IST
ಅಕ್ಷರ ಗಾತ್ರ

ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್‌ಗಳ ಲೋಕದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಭಾರತದಲ್ಲಿ ಗಿಟ್ಟಿಸಿಕೊಂಡಿದೆ. ₹15,000ಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳ ಕ್ಷೇತ್ರದಲ್ಲಿ ಅದು ಭದ್ರವಾಗಿ ಕುಳಿತಿದೆ. ಶಿಯೋಮಿ ಕಂಪೆನಿಯವರ ಉತ್ಪನ್ನಗಳು ನಾವು ನೀಡುವ ಹಣಕ್ಕೆ ನಿಜಕ್ಕೂ ಉತ್ತಮ ಎನ್ನಬಹುದಾಗಿವೆ.

ಈ ಕಂಪೆನಿಯ ಹಲವು ಉತ್ಪನ್ನಗಳ ಬಗ್ಗೆ ಈ ಅಂಕಣದಲ್ಲಿ ಹಲವು ಸಲ ಬರೆಯಲಾಗಿದೆ. ಇತ್ತೀಚೆಗೆ ಅವರು ತಮ್ಮ ಉತ್ಪನ್ನಗಳನ್ನು ಭಾರತದಲ್ಲೂ ತಯಾರಿಸುತ್ತಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಶಿಯೋಮಿ ರೆಡ್‌ಮಿ 4ಎ (Xiaomi Redmi 4A) ಎಂಬ ಕಡಿಮೆ ಬೆಲೆಯ ಸ್ಮಾರ್ಟ್‌ಫೋನನ್ನು.

ಗುಣವೈಶಿಷ್ಟ್ಯಗಳು
1.4 ಗಿಗಾಹರ್ಟ್ಸ್ ವೇಗದ 4 ಹೃದಯಗಳ ಪ್ರೊಸೆಸರ್ (Snapdragon 425), ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಆಡ್ರೆನೋ 308 ಪ್ರೊಸೆಸರ್, 2 + 16 ಗಿಗಾಬೈಟ್ ಮೆಮೊರಿ, 2ಜಿ/3ಜಿ/4ಜಿ ಮೈಕ್ರೊ ಮತ್ತು ನ್ಯಾನೋ ಸಿಮ್, ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ ಇದೆ, ಯುಎಸ್‌ಬಿ ಆನ್-ದ-ಗೋ (USB OTG) ಇದೆ, 5 ಇಂಚು ಗಾತ್ರದ 1280 x 720 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಪರದೆ, 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ಕ್ಯಾಮೆರಾಕ್ಕೆ ಎಲ್ಇಡಿ ಫ್ಲಾಶ್, ಪೂರ್ತಿ ಹೈಡೆಫಿನಿಶನ್ (1080p) ವಿಡಿಯೊ ಚಿತ್ರೀಕರಣ, ತೆಗೆಯಲಸಾಧ್ಯವಾದ 3120mAh ಶಕ್ತಿಯ ಬ್ಯಾಟರಿ, 139.9 x 70.4 x 8.5 ಮಿ.ಮೀ ಗಾತ್ರ, 131.5 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಅವಕೆಂಪು (infrared) ದೂರನಿಯಂತ್ರಕ, ಬೆರಳಚ್ಚು ಸ್ಕ್ಯಾನರ್, ಆಂಡ್ರಾಯ್ಡ್‌ 6.0.1 + ಶಿಯೋಮಿಯವರದೇ ಆದ ಎಂಐಯುಐ 8.2 (MIUI 8.2), ಇತ್ಯಾದಿ. ಮೂರು ಬಣ್ಣಗಳಲ್ಲಿ ಲಭ್ಯ. ಬೆಲೆ ₹5,999.

ಈ ಫೋನಿನ ವಿಮರ್ಶೆ ಮಾಡುವಾಗ ಮೊತ್ತ ಮೊದಲು ನಾವು ಗಮನ ನೀಡಬೇಕಾಗಿರುವುದು ಇದರ ಬೆಲೆಯ ಕಡೆ. ಇದು ಕಡಿಮೆ ಬೆಲೆಯ ಫೋನ್. ಅಂತೆಯೇ ಈ ಬೆಲೆಗೆ ಇದು ಉತ್ತಮ ಉತ್ಪನ್ನವೇ ಎಂಬುದೇ ನಮಗೆ ಪ್ರಾಮುಖ್ಯವಾಗಬೇಕು. ಈ ನಿಟ್ಟಿನಲ್ಲಿ ಇದು ಸಂಪೂರ್ಣವಾಗಿ ತೃಪ್ತಿ ನೀಡುತ್ತದೆ. ಇದರ ರಚನೆ ಮತ್ತು ವಿನ್ಯಾಸ ಪರವಾಗಿಲ್ಲ.

ಇತ್ತೀಚೆಗಿನ ಬಹುತೇಕ ಫೋನ್‌ಗಳಂತೆ ಇದರ ಹಿಂದುಗಡೆಯ ಕವಚ ಕೂಡ ತೆಗೆಯಲು ಸಾಧ್ಯವಿಲ್ಲ. ಈ ಕವಚ ತುಂಬ ನಯವಾಗೂ ಇಲ್ಲ, ತುಂಬ ದೊರಗೂ ಅಲ್ಲ. ಬದಿಗಳು ತುಂಬ ವಕ್ರವಾಗಿಲ್ಲ. ಅಂದರೆ ತಲೆದಿಂಬಿನಂತಿಲ್ಲ. ಬಹುಮಟ್ಟಿಗೆ ಇದು ತನ್ನ ವಿನ್ಯಾಸವನ್ನು ಶಿಯೋಮಿ ಎಂಐ4ಐ ಫೋನಿನಿಂದ ತೆಗೆದುಕೊಂಡಿದೆ.

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಹಾಗೂ ಅದರ ಪಕ್ಕದಲ್ಲಿ ಅವಕೆಂಪು (infrared) ದೂರನಿಯಂತ್ರಕದ ಕಿಟಕಿ ಇದೆ. ಇದನ್ನು ಬಳಸಿ ನಿಮ್ಮ ಮನೆಯ ಟಿ.ವಿ., ಆ್ಯಂಪ್ಲಿಫೈಯರ್, ಇತ್ಯಾದಿ ಹಲವು ಉಪಕರಣಗಳನ್ನು ನಿಯಂತ್ರಿಸಬಹುದು. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಇದೆ. ಇದರಲ್ಲಿರುವುದು ಯುಎಸ್‌ಬಿ-ಸಿ ನಮೂನೆಯ ಕಿಂಡಿ ಅಲ್ಲ.

ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಚಿಕ್ಕ ಟ್ರೇ ಇದೆ. ‌ಇದರಲ್ಲಿ ಒಂದು ಮೈಕ್ರೊ ಸಿಮ್ ಮತ್ತು ಇನ್ನೊಂದು ನ್ಯಾನೋ ಸಿಮ್ ಅಥವಾ ಮೆಮೊರಿ ಕಾರ್ಡ್ ಹಾಕಬಹುದು. ಇದರಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ.  ಇದು 5 ಇಂಚು ಗಾತ್ರ ಫೋನ್. ಅಂದರೆ ತುಂಬ ದೊಡ್ಡದೂ ಅಲ್ಲ, ಚಿಕ್ಕದೂ ಅಲ್ಲ ಎನ್ನಬಹುದು. 5.5 ಇಂಚು ಗಾತ್ರ ದೊಡ್ಡದಾಯಿತು ಎನ್ನುವವರಿಗೆ ಈ ಫೋನ್ ಸೂಕ್ತ. ನಾಲ್ಕು ಹೃದಯಗಳ ಪ್ರೊಸೆಸರ್ ಹಾಗೂ ಜೊತೆಗೆ ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ  ಪ್ರೊಸೆಸರ್ ಇರುವುದರಿಂದ ಇದರ ಕೆಲಸದ ವೇಗ ಪರವಾಗಿಲ್ಲ ಎನ್ನಬಹುದು. ಸಾಮಾನ್ಯ ಶಕ್ತಿಯನ್ನು ಬೇಡುವ ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು.

ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಆಡುವುದು ಸ್ವಲ್ಪ ಕಷ್ಟ. ಆಡಲು ಸಾಧ್ಯವೇ ಇಲ್ಲವೆಂದಲ್ಲ. ಆದರೆ ಹಾಗೆ ಮಾಡುವಾಗ ಇತರೆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಆದರೆ ಅಲ್ಟ್ರಾಹೈಡೆಫಿನಿಶನ್ (4k)  ವಿಡಿಯೊ ವೀಕ್ಷಣೆ ಆಗುವುದಿಲ್ಲ.

13 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಎದುರುಗಡೆಯ ಕ್ಯಾಮೆರಾ ಎರಡೂ ಚೆನ್ನಾಗಿವೆ. f/2.2 ಲೆನ್ಸ್ ಇರುವುದರಿಂದ ಇದರ ಬೆಲೆಗೆ ಹೋಲಿಸಿದರೆ ನಿಜಕ್ಕೂ ಉತ್ತಮ ಎನ್ನಬಹುದಾದ ಫೋಟೊ ಮೂಡಿಬರುತ್ತದೆ. ಈ ಬೆಲೆಯ ಫೋನ್‌ಗಳಲ್ಲಿ ಇದು ನಿಜಕ್ಕೂ ಉತ್ತಮ ಕ್ಯಾಮೆರಾ ಎನ್ನಬಹುದು. ಶಿಯೋಮಿಯವರ ಎಲ್ಲ ಫೋನ್‌ಗಳಲ್ಲಿರುವ ಕ್ಯಾಮೆರಾ ಕಿರುತಂತ್ರಾಂಶವೇ ಇದರಲ್ಲೂ ಇದೆ.

ಈ ಕಿರುತಂತ್ರಾಂಶದಲ್ಲಿರುವ ಮ್ಯಾನ್ಯುವಲ್ ವಿಧಾನ ಅಷ್ಟೇನೂ ತೃಪ್ತಿದಾಯಕವಾಗಿಲ್ಲ ಎಂದು ಇತರೆ ಶಿಯೋಮಿ ಫೋನ್‌ಗಳ ವಿಮರ್ಶೆ ಬರೆಯುವಾಗ ಬರೆದಿದ್ದೆ. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ. ಅತಿ ಹತ್ತಿರದ ವಸ್ತುಗಳ ಮತ್ತು ಅತಿಕಡಿಮೆ ಬೆಳಕಿನಲ್ಲಿ ಫೋಟೊ ತೆಗೆಯುವಾಗ ಇದು ಸೋಲುತ್ತದೆ.

ವಿಡಿಯೊ ಚಿತ್ರೀಕರಣ ಸುಮಾರಾಗಿದೆ. ವಿಡಿಯೊ ಚಿತ್ರೀಕರಿಸುವಾಗ ಕ್ಯಾಮೆರಾ ಸ್ಥಿರವಾಗಿದ್ದರೆ ಮಾತ್ರ ಉತ್ತಮ ವಿಡಿಯೊ ಚಿತ್ರೀಕರಣ ಸಾಧ್ಯ. ಇದರ ಆಡಿಯೊ ಇಂಜಿನ್ ನೀಡುವ ಹಣಕ್ಕೆ ಹೋಲಿಸಿದರೆ ಚೆನ್ನಾಗಿದೆ ಎನ್ನಬಹುದು. ಇಯರ್‌ಫೋನ್ ನೀಡಿಲ್ಲ.

ಯುಎಸ್‌ಬಿ ಆನ್‌-ದ-ಗೋ ಇರುವುದರಿಂದ ಹೊರಗಡೆಯಿಂದ ಯುಎಸ್‌ಬಿ ಡ್ರೈವ್ ಜೋಡಿಸಬಹುದು. ಇತ್ತೀಚೆಗೆ ದೊರೆಯುತ್ತಿರುವ ಬಹುತೇಕ ಫೋನ್‌ಗಳಂತೆ ಇದರಲ್ಲೂ ಇದರಲ್ಲಿ 4ಜಿ ಸೌಲಭ್ಯ ಇದೆ. ಕೇವಲ 4ಜಿ ಮಾತ್ರವಲ್ಲ 4G VoLTE ಕೂಡ ಇದೆ. ಅಂದರೆ ರಿಲಯನ್ಸ್ ಜಿಯೋ ಸಿಮ್ ಹಾಕಿ ಕೆಲಸ ಮಾಡಬಹುದು.

ಇದರ ಬ್ಯಾಟರಿ 3120mAh ಶಕ್ತಿಯದು ಎಂದರೆ, ಇದರ ಪ್ರೊಸೆಸರ್ ಶಕ್ತಿಗೆ ಮತ್ತು ಪರದೆಯ ಗಾತ್ರಕ್ಕೆ ಹೋಲಿಸಿದರೆ ಉತ್ತಮ ಎಂದು ತೀರ್ಮಾನಿಸಬಹುದು. ಬ್ಯಾಟರಿ ಸುಮಾರು ಒಂದು ದಿನ ಬಾಳಿಕೆ ಬರುತ್ತದೆ. ಕನ್ನಡ ಪಠ್ಯದ ತೋರುವಿಕೆ ಸರಿಯಾಗಿದೆ. ಜೊತೆಗೆ ಪೂರ್ತಿ ಕನ್ನಡದ ಯೂಸರ್ ಇಂಟರ್‌ಫೇಸ್ ಇದೆ. ಒಟ್ಟಿನಲ್ಲಿ ಹೇಳುವುದಾದರೆ ₹6 ಸಾವಿರ ಬೆಲೆಗೆ ಇದು ನಿಜಕ್ಕೂ ಅತ್ಯುತ್ತಮ ಫೋನ್ ಎಂದು ಖಂಡಿತ ಹೇಳಬಹುದು.  
ಇದರ ವಿಡಿಯೊ ವಿಮರ್ಶೆ ನೋಡಬೇಕಿದ್ದರೆ bit.ly/gadgetloka273v ಜಾಲತಾಣಕ್ಕೆ ಭೇಟಿ ನೀಡಿ.

**

ವಾರದ ಆ್ಯಪ್- ಫೋಟೋ ಚಿಕ್ಕದಾಗಿಸಿ 
ನಿಮ್ಮ ಸ್ಮಾರ್ಟ್‌ಫೋನಿನ ಮೆಗಾಪಿಕ್ಸೆಲ್ ಹೆಚ್ಚಿದಂತೆಲ್ಲ ಅದು ತೆಗೆದು ಸಂಗ್ರಹಿಸುವ ಫೋಟೊ ಫೈಲ್ ಗಾತ್ರ ದೊಡ್ಡದಾಗುತ್ತ ಹೋಗುತ್ತದೆ. ನೀವು ಅದನ್ನು ಗಮನಿಸಿದ್ದೀರಾ? ಇಂತಹ ದೊಡ್ಡ ಗಾತ್ರದ ಫೈಲ್‌ಗಳನ್ನು ಫೇಸ್‌ಬುಕ್‌ ವಾಟ್ಸ್‌ಆ್ಯಪ್‌ ಇತ್ಯಾದಿಗಳಿಗೆ ಅಪ್‌ಲೋಡ್ ಮಾಡಲು ನಿಮಗೆ ಅಧಿಕ ಬ್ಯಾಂಡ್‌ವಿಡ್ತ್ ಬೇಕು. ಬ್ರಾಡ್‌ಬ್ಯಾಂಡ್ ಸಂಪರ್ಕ ಇದ್ದಾಗ ಮಾತ್ರ ಫೋಟೊಗಳನ್ನು ಸೇರಿಸಲು ಸಾಧ್ಯವಾಗುವುದು ಈ ಕಾರಣಕ್ಕೆ.

ಫೋಟೊಗಳ ಗಾತ್ರವನ್ನು ಕಿರಿದಾಗಿಸುವ ಕಿರುತಂತ್ರಾಂಶಗಳು (ಆ್ಯಪ್) ಹಲವಿವೆ. ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Photo & Picture Resizer ಎಂದು ಹುಡುಕಬೇಕು ಅಥವಾ bit.ly/gadegtloka273 ಜಾಲತಾಣಕ್ಕೆ ಭೇಟಿ ನೀಡಬೇಕು. ಫೋಟೊವನ್ನು ನಿಮಗೆ ಬೇಕಾದ ಗಾತ್ರಕ್ಕೆ ಅಥವಾ ಶೇಕಡಾವಾರು ರೀತಿಯಲ್ಲೂ ಕುಗ್ಗಿಸಬಹುದು. ಹಲವು ಫೋಟೊಗಳನ್ನು ಒಂದೇ ಸಲ ಕುಗ್ಗಿಸುವ ಸವಲತ್ತೂ ಇದೆ.

**

ಗ್ಯಾಜೆಟ್‌ ಸುದ್ದಿ - ವೈಫೈ ತರಂಗಗಳ ಅಪಾಯ 
ಡೆನ್‌ಮಾರ್ಕಿನಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ 5 ಹುಡುಗಿಯರು ಒಂದು ಪ್ರಯೋಗ ನಡೆಸಿದರು. ಕೆಲವು ಬೀಜಗಳನ್ನು ತೆಗೆದುಕೊಂಡು ಅವುಗಳನ್ನು 12 ತಟ್ಟೆಗಳಲ್ಲಿಟ್ಟು ಅವುಗಳಿಗೆ ಒಂದೇ ರೀತಿಯ ಬೆಳಕು ಗಾಳಿ ನೀರು ನೀಡಿದರು.  ಅವುಗಳಲ್ಲಿ 6 ತಟ್ಟೆಗಳನ್ನು ಒಂದು ಕೊಠಡಿಯಲ್ಲೂ ಉಳಿದ ಆರು ತಟ್ಟೆಗಳನ್ನು ಇನ್ನೊಂದು ಕೊಠಡಿಯಲ್ಲೂ ಇಟ್ಟು ಅವುಗಳ ಪಕ್ಕ ಎರಡು ವೈಫೈ ರೂಟರ್‌ಗಳನ್ನು ಇಟ್ಟಿದ್ದರು.

ಈ ರೂಟರ್‌ಗಳು ನಾವು ಮನೆಗಳಲ್ಲಿ ಬಳಸುವ ವೈಫೈ ರೂಟರ್‌ಗಳೇ. 12 ದಿನಗಳ ನಂತರ ನೋಡಿದಾಗ ವೈಫೈ ರೂಟರ್‌ಗಳ ಪಕ್ಕ ಇಟ್ಟ ಬೀಜಗಳು ಮೊಳಕೆ ಬಂದಿರಲಿಲ್ಲ. ಮಾತ್ರವಲ್ಲ, ಅವುಗಳಲ್ಲಿ ಕೆಲವು ಒಣಗಿ ಸತ್ತು ಹೋಗಿದ್ದವು ಕೂಡ. ಈ ಸಂಶೋಧನೆ ವಿಜ್ಞಾನಿಗಳಲ್ಲಿ ಆಸಕ್ತಿಯನ್ನು ಮೂಡಿಸಿದೆ. ಇದನ್ನು ಇನ್ನೂ ಹಲವು ಸಸ್ಯ, ಪ್ರಾಣಿಗಳ ಮೇಲೆ ಪ್ರಯೋಗಿಸಲು ಅವರು ಹೊರಟಿದ್ದಾರೆ.

**
ಗ್ಯಾಜೆಟ್‌ ಸಲಹೆ
ಪ್ರಶ್ನೆ: ನಾನು ಹೊಸ ಆಂಡ್ರಾಯ್ಡ್‌ ಫೋನ್ ಕೊಂಡುಕೊಂಡಿದ್ದೇನೆ. ನನ್ನ ಹಳೆಯ ಆಂಡ್ರಾಯ್ಡ್‌ ಫೋನಿನಿಂದ ಈ ಫೋನಿಗೆ ವಾಟ್ಸ್‌ಆಪ್ ಸಂದೇಶಗಳನ್ನು ಪ್ರತಿ ಮಾಡಿಕೊಳ್ಳುವುದು ಹೇಗೆ?
ಉ: ನೀವು ಗೂಗಲ್‌ ಖಾತೆ ಹೊಂದಿದ್ದು ಅದಕ್ಕೆ ಲಾಗಿನ್ ಆಗಿ. ಹಳೆಯ ಫೋನಿನಲ್ಲಿ ವಾಟ್ಸ್‌ಆ್ಯಪ್ ಪ್ರಾರಂಭಿಸಿ Settings>Chats >Chat backup ಎಂಬಲ್ಲಿ ನಿಮ್ಮ ಗೂಗಲ್‌ ಖಾತೆ ವಿವರ ನೀಡಿ ಗೂಗಲ್‌ ಡ್ರೈವ್‌ಗೆ ಎಲ್ಲವನ್ನು ಬ್ಯಾಕ್ಅಪ್ ಮಾಡಿಕೊಳ್ಳಿ. ನಂತರ ಹೊಸ ಫೋನಿನಲ್ಲಿ ವಾಟ್ಸ್‌ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ ಖಾತೆ ವಿವರಗಳನ್ನು ನೀಡಿದಾಗ ಅದುವೇ ‘ಗೂಗಲ್‌ ಡ್ರೈವ್‌ನಲ್ಲಿ ಬ್ಯಾಕ್ಅಪ್ ಇದೆ, ಅದನ್ನು ಇನ್‌ಸ್ಟಾಲ್ ಮಾಡಲೇ’ ಎಂದು ಕೇಳುತ್ತದೆ. ಆಗ ಒಪ್ಪಿಗೆ ನೀಡಿ.

**
ಗ್ಯಾಜೆಟ್‌ ತರ್ಲೆ
ಕವಿಗಳಿಗೆ ತಮ್ಮ ಕವನವನ್ನು ಎಲ್ಲರೂ ಅಥವಾ ಕೆಲವರಾದರೂ ಓದಿ ಮೆಚ್ಚಬೇಕು ಎಂಬ ಹಪಾಹಪಿ ಇರುತ್ತದೆ. ಇತ್ತೀಚೆಗೆ ಕೆಲವು ಫೇಸ್‌ಬುಕ್ ಕವಿಗಳು ಹುಟ್ಟಿಕೊಂಡಿದ್ದಾರೆ. ಅವರಿಗೂ ಇದೇ ಹಪಾಹಪಿ ಇದೆ. ಅವರು ಕವನವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟಿಸಿ ಅದರ ಕೊಂಡಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ತಮ್ಮೆಲ್ಲ ಸ್ನೇಹಿತರಿಗೆ ಕಳುಹಿಸುತ್ತಾರೆ. ಅವರ ಕವನಕ್ಕೆ ಲೈಕ್ ಒತ್ತದಿದ್ದರೆ ಯಾಕೆ ಲೈಕಿಸಿಲ್ಲ ಎಂದು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT