ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಜ್: ನೂರರ ಪುಳಕ

Last Updated 18 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ನಲ್ಲಿ ಹೀರೋ ಎಂದು ಭಾವಿಸಿದವರು ಆಟ ಆಡುವಾಗಲೆಲ್ಲಾ ಶತಕ ಬಾರಿಸಲೆಂದು ಅಭಿಮಾನಿಗಳು ಬಯಸುತ್ತಾರೆ. ಬ್ಯಾಟ್ಸ್‌ಮನ್‌ಗಳು ಶತಕಗಳ ಗುರಿಯಿಟ್ಟುಕೊಂಡೇ ಆಡಿ ದಾಖಲೆ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಅವರ ಪ್ರತಿಯೊಂದು ಶತಕವೂ ದಾಖಲೆಯೇ. ಆದರೆ ಚಲನಚಿತ್ರ ನಟ ನಟಿಯರಿಗೆ ಶತಕದ ದಾಖಲೆ ಬರುವುದು ಒಮ್ಮೆ ಮಾತ್ರ. ಅಂತಹ ದಾಖಲೆಗೂ ಅವರು ಸುಮಾರು 25 ವರ್ಷಗಳೇ ಕಾಯಬೇಕಾಗುತ್ತದೆ!

ಒಬ್ಬ ಚಲನಚಿತ್ರ ನಟ ನೂರು ಚಿತ್ರಗಳಲ್ಲಿ ಅಭಿನಯಿಸಿ ಶತಚಿತ್ರ ನಟ ಎನಿಸಿಕೊಂಡರೆ ಯಾರಿಗೆ ಲಾಭ? ಅಭಿಮಾನಿಗಳಿಗೆ ಒಂದು ರೀತಿಯ ಖುಷಿ, ನಮ್ಮ ಹೀರೋ ಮತ್ತೊಂದು ಶತಕ ಹೊಡೆಯಲಿ ಎನ್ನುವ ಹಂಬಲ.

ನೂರು ಚಿತ್ರದ ವೇಳೆಗೆ ಆ ನಟ ಅಭಿನಯದಲ್ಲಿ ಪ್ರಬುದ್ಧನಾಗುವ ಅವಕಾಶವಿದೆ. ಅವನಿಂದ ಮತ್ತಷ್ಟು ಉತ್ತಮ ಅಭಿನಯದ ನಿರೀಕ್ಷೆಗಳು ಹೆಚ್ಚಾಗುತ್ತದೆ. ಇದರಿಂದ ಉದ್ಯಮಕ್ಕೂ ಲಾಭ.

ಅಭಿಮಾನಿಗಳು ನಿರಂತರವಾಗಿ ಆ ನಟನ ಜೊತೆಯೇ ಉಳಿಯುತ್ತಾರೆ. ಅಂತಹ ಪ್ರೇಕ್ಷಕರನ್ನು ಉಳಿಸಿಕೊಳ್ಳುತ್ತಾ ಉದ್ಯಮ ಬೆಳೆಯುತ್ತದೆ, ಉಳಿಯುತ್ತದೆ. ಅಲ್ಲದೆ ಆ ನಟ ಇನ್ನೂ ಗಟ್ಟಿಯಾಗಿ ಉದ್ಯಮಕ್ಕೆ ಏನಾದರೂ ಕೊಡುಗೆ ಕೊಡುವತ್ತ ಗಮನ ಹರಿಸಬಹುದಾಗಿದೆ.

ಇಂದು ಬಿಡುಗಡೆಯಾಗುತ್ತಿರುವ `ಜೋಗಯ್ಯ~ ಚಿತ್ರದ ಮೂಲಕ ನಟ ಶಿವರಾಜ್‌ಕುಮಾರ್ ಶತಚಿತ್ರ ನಟನಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಉದ್ಯಮ ಪ್ರವೇಶಿಸಿಯೂ 25 ವರ್ಷಗಳಾಗಿವೆ. ಇಪ್ಪತ್ತೈದು ವರ್ಷ, ನೂರು ಚಿತ್ರ, ಹೀಗೆ ಎರಡು ಸಂಭ್ರಮಗಳನ್ನು ಒಟ್ಟಿಗೆ  ಕಾಣುತ್ತಿರುವ ಶಿವರಾಜ್‌ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸೋಣ.

ಶತಚಿತ್ರ ನಟನಾಗುವ ಬಯಕೆ ಹೊಂದಿದ್ದೇನೆ ಎಂದು ಚಲನ ಚಿತ್ರರಂಗ ಪ್ರವೇಶಿಸುವ ಯುವ ನಟನೊಬ್ಬ ಹೇಳಿದರೆ ಅದು ನಿಜಕ್ಕೂ ಉತ್ಪ್ರೇಕ್ಷೆಯಾಗುತ್ತದೆ. ನಗು ಬರುತ್ತದೆ. ಚಿತ್ರರಂಗಕ್ಕೆ ತಿಂಗಳಿಗೆ ಮೂರರಂತೆ ಹೊಸ ಹೊಸ ಹೀರೋಗಳ ಪ್ರವೇಶವಾಗುತ್ತಿದೆ.
 
ಇನ್ನೊಂದು ವರ್ಷದಲ್ಲಿ ಚಿತ್ರರಂಗದಲ್ಲಿ ಯಾರು ಇರುತ್ತಾರೆ, ಯಾರು ಮಾಯವಾಗುತ್ತಾರೆ ಎನ್ನುವುದೇ ಗೊತ್ತಿರುವುದಿಲ್ಲ. ಮತ್ತೆ ಕೆಲವರು ಉದ್ಯಮವನ್ನು ಗಂಭೀರವಾಗಿ ತೆಗೆದುಕೊಳ್ಳದೇ ನುಗ್ಗಿರುತ್ತಾರೆ. ಅವರು ಚಿತ್ರರಂಗದಲ್ಲೇ ಇಪ್ಪತ್ತೈದು ವರ್ಷ ಉಳಿದು, ನೂರು ಚಿತ್ರದಲ್ಲಿ ನಾಯಕನಟನಾಗುವುದು ಇತಿಹಾಸವೇ ಆಗುತ್ತದೆ.
 
ಇತ್ತೀಚಿನ ಚಿತ್ರರಂಗದ ಬೆಳವಣಿಗೆಯನ್ನು ನೋಡಿ, ಹಿಂದೆ ಒಂದು ಸಿನಿಮಾ ಬಿಡುಗಡೆಯಾದರೆ ಅದರ ನಿರ್ಮಾಪಕರು, ನಟರು, ಚಿತ್ರ ಶತದಿನೋತ್ಸವ ಆಚರಿಸುತ್ತದೆ, ರಜತ ಮಹೋತ್ಸವ ಆಚರಿಸಿ ದಾಖಲೆ ನಿರ್ಮಿಸುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಾಗೆ ಹೇಳುವ  ಧೈರ್ಯ ಯಾರಿಗೂ ಇಲ್ಲ.
 
ಚಿತ್ರಗಳನ್ನು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ಹಾಕಿದ ಬಂಡವಾಳವನ್ನು ಆದಷ್ಟು ಬೇಗ ವಾಪಸು ಪಡೆದು ಸುರಕ್ಷಿತವಾಗಿರಲು ಬಯಸುತ್ತಾರೆ. ಚಿತ್ರ ನೂರು ದಿನ ಪ್ರದರ್ಶನ ಕಂಡರೆ ನಷ್ಟ ಎನ್ನುವ ವ್ಯಾವಹಾರಿಕ ಪ್ರಜ್ಞೆ ಈಗ ಜಾಗೃತವಾಗಿದೆ.
 
ಜೋಗಯ್ಯ ಕೂಡ 250 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂಬುದನ್ನು ಗಮನಿಸಿ. ಹೀಗಾಗಿ ಚಿತ್ರರಂಗದಲ್ಲಿ ಶತದಿನೋತ್ಸವ, ಸಿಲ್ವರ್ ಜ್ಯೂಬಿಲಿ, ಗೋಲ್ಡನ್ ಜ್ಯೂಬಿಲಿ ಸಂಭ್ರಮಗಳೆಲ್ಲ ಕಣ್ಮರೆಯಾಗಿವೆ. ಹೊಸ ಹೀರೋಗಳ ಪ್ರವೇಶ ಕೂಡ ಹೀಗೇ ಆಗಿದೆ.

ಯಾವುದೇ ಹೀರೋ ಹತ್ತು ಸಿನಿಮಾ ಮಾಡಿ, ಆದಷ್ಟು ಕೋಟಿಗಳನ್ನು ಸಂಪಾದಿಸಿ ಮುಂದಿನ ದಿನಗಳಲ್ಲಿ ವರ್ಷಕ್ಕೊಂದು, ಸ್ವಂತ ನಿರ್ಮಾಣದ ಸಿನಿಮಾ ಮಾಡುತ್ತಾ ಕಾಲಹರಣದಲ್ಲಿ ಲೀನವಾಗಿ ಬಿಡುತ್ತಾನೆ.

ಇನ್ನು ಇಪ್ಪತ್ತೈದು ವರ್ಷ ಚಿತ್ರರಂಗದಲ್ಲಿ ಉಳಿದು, ಶತಚಿತ್ರ ನಟನಾಗಿ ಸಾಧನೆ, ದಾಖಲೆ ಮಾಡುವ ಉತ್ಸಾಹ, ನಿರೀಕ್ಷೆ ಎರಡೂ ಅವರಲ್ಲಿ ಉಳಿದಿರುವುದಿಲ್ಲ. ಇಡೀ ಚಿತ್ರರಂಗದ ಅಂಕಗಣಿತವೇ ಈಗ ಬದಲಾಗಿ ಹೋಗಿದೆ.

ಆದರೆ ಶಿವರಾಜ್ ಕುಮಾರ್ 1986ರಲ್ಲಿ `ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದಾಗ ಪರಿಸ್ಥಿತಿ ಬೇರೆಯೇ ಇತ್ತು. ಆಗ ರಾಜ್‌ಕುಮಾರ್ ಏಕಮೇವಾದ್ವಿತೀಯರಾಗಿದ್ದರು.
 
ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರ್‌ನಾಗ್, ಪ್ರಭಾಕರ್, ಶ್ರೀನಾಥ್, ರಾಮಕೃಷ್ಣ ಅವರುಗಳೆಲ್ಲಾ ಹೀರೋಗಳಾಗಿ ರಂಜಿಸುತ್ತಿದ್ದರು. ಚರ್ವಿತಚರ್ವಣದಿಂದ ನಿರಾಶೆಗೊಂಡಿದ್ದ ಕನ್ನಡ ಪ್ರೇಕ್ಷಕರು ಹೊಸ ಮುಖಗಳಿಗಾಗಿ ಹಾತೊರೆಯುತ್ತಿದ್ದರು.

ಅಂತಹ ಸಮಯದಲ್ಲಿ ರಾಜ್‌ಕುಮಾರ್ ಕುಟುಂಬವೇ ಸ್ವಂತ ನಿರ್ಮಾಣದಲ್ಲಿ ಶಿವರಾಜ್‌ಕುಮಾರ್ ಅವರನ್ನು `ಆನಂದ್~ (1986) ಚಿತ್ರದ ಮೂಲಕ ಕನ್ನಡ ತೆರೆಗೆ ಪರಿಚಯಿಸಿತು.

ಹೊಸತನಕ್ಕಾಗಿ ಹಾತೊರೆಯುತ್ತಿದ್ದ  ಪ್ರೇಕ್ಷಕರು ಯುವಪೀಳಿಗೆಯ ಅಭಿನಯಕ್ಕೆ ಮಾರು ಹೋದ ಪರಿಣಾಮವೇ, ಶಿವರಾಜ್‌ಕುಮಾರ್ ಅವರ ಮುಂದಿನ ಚಿತ್ರಗಳಾದ `ರಥ ಸಪ್ತಮಿ~ (1986) ಹಾಗೂ `ಮನಮೆಚ್ಚಿದ ಹುಡುಗಿ~ (1987) ಚಿತ್ರಗಳೂ ಕೂಡ ರಜತಮಹೋತ್ಸವ ಆಚರಿಸಿ, ಮೊದಲ ಮೂರೂ ಚಿತ್ರಗಳೂ ಭಾರೀ ಯಶಸ್ಸು ಕಂಡು, ಶಿವರಾಜಕುಮಾರ್ ಅವರನ್ನು `ಹ್ಯಾಟ್ರಿಕ್ ಹೀರೋ~ ಎಂದು ಅಭಿಮಾನಿಗಳು ಕರೆಯುವಂತಾಯಿತು. ಚಿತ್ರರಂಗದಲ್ಲಿ ದಶಕಕ್ಕೊಮ್ಮೆ ಎದ್ದು ಕಾಣುವ ಏಕತಾನತೆಗೆ ಉತ್ತರವನ್ನು ಪ್ರೇಕ್ಷಕರು ಕಂಡುಕೊಂಡಿದ್ದರು.
 
ಅಂದಿನಿಂದ ಶಿವರಾಜಕುಮಾರ್ ಅವರದು ಹಿಂದೆ ತಿರುಗಿ ನೋಡದ ಹಾದಿ. ಶಿವರಾಜಕುಮಾರ್ ಪ್ರವೇಶವಾದ ಅದೇ ಸಮಯದಲ್ಲಿ ರವಿಚಂದ್ರನ್ `ಪ್ರೇಮ ಲೋಕ~ (1987) ನಿರ್ದೇಶಿಸಿದರು.

ವಿನೋದ್‌ರಾಜ್ `ಡ್ಯಾನ್ಸ್ ರಾಜಾ ಡ್ಯಾನ್ಸ್~ (1987) ಮೂಲಕ ರಂಗಪ್ರವೇಶಿಸಿದರು. ಎರಡೂ ಚಿತ್ರಗಳೂ ಯಶಸ್ವಿಯಾದವು. ರವಿಚಂದ್ರನ್ ಹಾಗೂ ಶಿವರಾಜಕುಮಾರ್ ಇಬ್ಬರೂ ಹೀರೋಗಳಾಗಿ ಯಶಸ್ಸು ಕಂಡರು.

ಶಿವರಾಜಕುಮಾರ್ ಅವರ ನಾಲ್ಕನೇ ಚಿತ್ರ `ಶಿವಮೆಚ್ಚಿದ ಕಣ್ಣಪ್ಪ~ (1988) ಚಿತ್ರದಲ್ಲಿ ಹಲವು ವಿಶೇಷಗಳಿದ್ದವು. ಈ ಚಿತ್ರದಲ್ಲಿ ರಾಜಕುಮಾರ್ ಅವರೂ ಅಭಿನಯಿಸಿದ್ದರು. ಈಗ ಹೀರೋ ಆಗಿರುವ ಪುನೀತ್ ಕೂಡಾ ಇದ್ದರು.

ರಾಜಕುಮಾರ್ ಅವರ ಮೊದಲ ಚಿತ್ರ `ಬೇಡರ ಕಣ್ಣಪ್ಪ~ (1954) ಚಿತ್ರವನ್ನು ಬಣ್ಣದಲ್ಲಿ, ಹಲವಾರು ಬದಲಾವಣೆಗಳೊಂದಿಗೆ ತೆರೆಗೆ ತರುವ ಈ ಪ್ರಯತ್ನ ಯಶಸ್ಸು ಕಾಣಲಿಲ್ಲ. ರಾಜಕುಮಾರ್ ಅವರ ಅಭಿನಯದ ಕಪ್ಪು ಬಿಳುಪು `ಬೇಡರ ಕಣ್ಣಪ್ಪ~ ಚಿತ್ರವೇ ಇಂದಿಗೂ ಜನರಿಗೆ ಇಷ್ಟ.
 
ಈ ರೀತಿ ರಾಜ್‌ಕುಮಾರ್ ಅವರನ್ನು ಶಿವರಾಜಕುಮಾರ್ ಅವರಲ್ಲಿ ಆವಾಹಿಸುವ ಕೆಲಸ `ಶಿವ ಮೆಚ್ಚಿದ ಕಣ್ಣಪ್ಪ~ದಿಂದ `ಮೈಲಾರಿ~ವರೆಗೆ ಆಗುತ್ತಲೇ ಇದೆ. `ಗಂದಧ ಗುಡಿ ಭಾಗ 2~ ಚಿತ್ರ ಕೂಡಾ ಅಂತಹ ಒಂದು ಪ್ರಯತ್ನ. `ಮೈಲಾರಿ~ಯಲ್ಲೂ ಕೂಡ ಅವರಲ್ಲಿ ರಾಜ್‌ಕುಮಾರ್ ಅವರನ್ನು ಕಾಣಿಸುವ ಪ್ರಯತ್ನ ನಡೆದಿದೆ. ರಾಜಕುಮಾರ್ ಚಿತ್ರರಂಗದಲ್ಲಿ ಮಾಡದ ಪಾತ್ರಗಳೇ ಇಲ್ಲ.
 
ಅದೇ ರೀತಿ ಶಿವರಾಜಕುಮಾರ್ ಅವರ ಪಾತ್ರಗಳು ಕೂಡ ವೈವಿಧ್ಯಮಯವೇ. ನೂರು ಚಿತ್ರಗಳಲ್ಲಿ ಅವರದು ನೂರು ಬಗೆಯ ಪಾತ್ರ. ಭಕ್ತಿಪ್ರಧಾನ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲ ರೀತಿಯ ಪಾತ್ರಗಳಿಗೂ ಹೊಂದುವಂತಹ ನಟ ಎನ್ನುವುದರಲ್ಲಿ ಅನುಮಾನವೇ ಇಲ್ಲ. ರಾಜ್ ಸಮಕಾಲೀನ ನಟರಲ್ಲೂ ಕೂಡ ಈ ಸಾಮರ್ಥ್ಯ ಇರಲಿಲ್ಲ.
 
ಆನಂತರ ಬಂದ ನಟರಲ್ಲೂ ಅಂತಹ ವೈವಿಧ್ಯದ ಅಭಿನಯವನ್ನು ಕಾಣಲಾಗಲಿಲ್ಲ. ಶಿವರಾಜಕುಮಾರ್ ಅಂತಹ ಪ್ರಯತ್ನಗಳನ್ನು ನಡೆಸಿದರು. `ಕುಮಾರ ರಾಮ~ ಚಿತ್ರದ ಆಭಾಸ, ಸೋಲು ಗಮನಿಸಿ. ಪುಲಿಕೇಶಿ, ಕೃಷ್ಣದೇವರಾಯ ಚಿತ್ರಗಳನ್ನು ನೋಡಿ. ಅಂತಹ ಛಾಪು ಮೂಡಿಸುವ ಅಭಿನಯ ರಾಜ್ ಕಾಲಕ್ಕೇ ಮುಗಿದಂತೆ ಕಾಣುತ್ತದೆ.

ಶಿವರಾಜ್‌ಕುಮಾರ್ ಅವರ ನೂರರ ಹಾದಿಯಲ್ಲಿ ಏಳು ಬೀಳುಗಳಿದ್ದೇ ಇದೆ. ಆದರೆ ಚಿತ್ರರಂಗದಲ್ಲಿ ಅವರು ಅವರದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಎಲ್ಲ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕು, ಎಲ್ಲ ವಲಯದ ನಿರ್ದೇಶಕರುಗಳ ಚಿತ್ರಗಳಲ್ಲಿ ಅಭಿನಯಿಸಬೇಕು ಎನ್ನುವ ಅವರ ತುಡಿತವೂ ಗಮನಾರ್ಹ. `ಚಿಗುರಿದ ಕನಸು~, `ತಮಸ್ಸು~, `ಹಗಲುವೇಷ~ ಮೊದಲಾದ ಚಿತ್ರಗಳನ್ನು ಶಿವರಾಜಕುಮಾರ್ ಮಾತ್ರ ಮಾಡಬಲ್ಲರು.
 
`ಜನುಮದ ಜೋಡಿ~ಯ ಪಾತ್ರವನ್ನೂ ಧೈರ್ಯದಿಂದ ನಿರ್ವಹಿಸಬಲ್ಲರು. ಇದನ್ನು ಅವರು ನಮ್ಮ ಬಳಗ ಎಂದೇ ಕರೆಯುತ್ತಾರೆ. ಶಿವರಾಜಕುಮಾರ್ ಅವರಿಗಾಗಿ ರಾಜ್‌ಕುಮಾರ್ ಹಿನ್ನೆಲೆಗಾಯಕರಾಗಿದ್ದಾರೆ. ಎಸ್‌ಪಿಬಿ ಕೂಡಾ ಹಾಡಿದ್ದಾರೆ. ಸೋನು ನಿಗಮ್ ಕೂಡ ಹಾಡಿದ್ದಾರೆ. ಉಪೇಂದ್ರ, ಪುನೀತ್ ಕೂಡ ಶಿವರಾಜ್‌ಗಾಗಿ ಹಾಡಿದ್ದಾರೆ.

 ಹೀಗೆ ಎಲ್ಲ ಬಗೆಯ ಹಿನ್ನೆಲೆಗಾಯಕರಿಗೆ ಅವಕಾಶ ಕೊಟ್ಟಿದ್ದೇ ಅಲ್ಲದೆ, ತಾನೂ ಹಾಡುವ ಅಭ್ಯಾಸವಿಟ್ಟುಕೊಂಡಿದ್ದಾರೆ.ಇದು ಅವರು ಚಿತ್ರೋದ್ಯಮಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದರ ಕುರುಹು.

ಚಿತ್ರರಂಗದಲ್ಲಿ 25 ವರ್ಷಗಳ ಹಾದಿಯಲ್ಲಿ ಶಿವರಾಜ್‌ಕುಮಾರ್ ಹಲವಾರು ಬಾರಿ ಟ್ರೆಂಡ್‌ಗಳನ್ನು ಸೃಷ್ಟಿಸಿದ್ದಾರೆ. 1995ರಲ್ಲಿ `ಓಂ~ ಮೂಲಕ ಅವರು ಅಭಿನಯದ ತಿರುವು ಪಡೆದರು. ಅದಕ್ಕೆ ಸಾಥ್ ಕೊಟ್ಟವರು ಉಪೇಂದ್ರ.
 
ಮತ್ತೆ ಚಿತ್ರರಂಗಕ್ಕೆ ಹೊಸ ರಕ್ತ. ಉಪೇಂದ್ರ ಸೃಷ್ಟಿಸಿದ ಈ ಕಥೆ ಶಿವರಾಜ್‌ಕುಮಾರ್ ಅವರ ಅಭಿನಯಕ್ಕೆ ಹೊಸ ಆಯಾಮ ಕೊಟ್ಟಿತು. ಈ ಚಿತ್ರದ ಅಭಿನಯಕ್ಕಾಗಿ ಶಿವರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಚಿತ್ರರಂಗದ್ಲ್ಲಲಿ ಇದು ಇತಿಹಾಸ.

ಆನಂತರ ದಿನಗಳಲ್ಲಿ ಕತ್ತಿ, ಲಾಂಗು, ಮಚ್ಚುಗಳು ಶಿವರಾಜ್‌ಕುಮಾರ್‌ಗೆ ಅನಿವಾರ್ಯವೇ ಆಯಿತೇನೋ ಎನ್ನುವ ಹಾಗೆ ಮೇಲಿಂದ ಮೇಲೆ ಇಂತಹ ಚಿತ್ರಗಳು ಬರಲಾರಂಭಿಸಿದವು.
 
`ತವರಿಗೆ ಬಾ ತಂಗಿ~ ಚಿತ್ರಗಳ ಸರಣಿ ಈ ಲಾಂಗುಗಳ ಮಧ್ಯೆಯೂ ಜನಪ್ರಿಯವಾಯಿತಾದರೂ, ನಿರ್ಮಾಪಕರು ಶಿವರಾಜ್ ಕೈಗೆ ಲಾಂಗು ಕೊಡುವುದನ್ನು ನಿಲ್ಲಿಸಲೇ ಇಲ್ಲ. 1999ರಲ್ಲಿ `ಎ.ಕೆ.-47~ ಚಿತ್ರದಲ್ಲಿ ಮತ್ತೊಂದು ರೋಷಾವೇಷ. ಎಲ್ಲವೂ `ಓಂ~ನ ಪಡಿಯಚ್ಚಿನಂತೆ ಬರಲಾರಂಭಿಸಿ ಶಿವರಾಜಕುಮಾರ್ ಅವರೊಳಗಿರುವ ರಾಜಕುಮಾರ್ ಮಾಯವಾಗಬಾರದಲ್ಲಾ.

`ಜೋಗಿ~ ಚಿತ್ರ ಕೂಡಾ ಅದೇ ಹಾದಿ ಹಿಡಿಯಿತು, ಭೂಗತ ಲೋಕ, ಕತ್ತಿ, ಮಚ್ಚು, ಲಾಂಗು, ಚೈನು ಚಿತ್ರವೇ ಆಯಿತು. ಆ ಚಿತ್ರದ ಅಭೂತ ಪೂರ್ವ ಯಶಸ್ಸು `ಜೋಗಯ್ಯ~ನವರೆಗೆ ಶಿವರಾಜಕುಮಾರ್ ಅವರನ್ನು ಎಳೆತಂದು ನಿಲ್ಲಿಸಿದೆ.

ಸಾಮಾನ್ಯವಾಗಿ ಒಬ್ಬ ನಟನ ನೂರನೇ ಚಿತ್ರ ಎಂದಾಗ ಅದಕ್ಕೆ ಬಹಳ ಮಹತ್ವವಿರುತ್ತದೆ. ಅದು ಅವರ ಚಿತ್ರ ಜಗತ್ತಿನ ಮೈಲುಗಲ್ಲು. ಅದಕ್ಕಾಗಿ ಅಂತಹ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ಸಾಗಿ, ನೂರಾರು ದಿನ ನಡೆಯಬೇಕು ಎಂದು ಎಲ್ಲ ಹೀರೋಗಳೂ ಬಯಸುತ್ತಾರೆ. ಆದರೆ ಅಂತಹ ಚಿತ್ರಗಳೇ ಸೋತಿರುವ ಉದಾಹರಣೆ ಬಹಳವಿದೆ.

ರಾಜ್‌ಕುಮಾರ್ ಅವರ ನೂರನೇ ಚಿತ್ರ `ದೇವತಾ ಮನುಷ್ಯ~ (1988) ಅಂತಹ ಯಶಸ್ಸು ಕಾಣಲಿಲ್ಲ. ಅಂಬರೀಷ್ ಅವರ ನೂರನೇ ಚಿತ್ರ `ಹಾಂಕಾಂಗಿನಲ್ಲಿ ಏಜೆಂಟ್‌ಅಮರ್~ (1989) ಕೂಡಾ ಹಿಟ್ ಆಗಲಿಲ್ಲ. ಕನ್ನಡದ ಉದಾಹರಣೆ ಅತ್ತ ಇರಲಿ, ರಜನೀಕಾಂತ್ ಅವರ ನೂರನೇ ಚಿತ್ರ `ರಾಘವೇಂದಿರರ್~ ನಡೆಯಲಿಲ್ಲ.

ಎಂಜಿಆರ್, ನೂರನೇ ಚಿತ್ರ `ವಳಿವಿಳಕ್ಕು~ ಕೂಡ ಜನರಿಗೆ ಇಷ್ಟವಾಗಲಿಲ್ಲ. ನೂರನೇ ಚಿತ್ರಕ್ಕೆ ಜನರಿಂದ ನಿರೀಕ್ಷೆ ಕೂಡಾ ಹೆಚ್ಚಾಗಿಯೇ ಇರುತ್ತದೆ. ಅದು ಆ ಕಾಲದ ಕತೆ. ಹಾಗೆಯೇ `ಜೋಗಯ್ಯ~ ಈ ಕಾಲದ ಡಾನ್. ಈ ಚಿತ್ರಕ್ಕೂ ಪ್ರೇಕ್ಷಕರ ನಿರೀಕ್ಷೆ ಜೋರಾಗಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT