ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಗರ್ ಕಂಪ್ಲೇಂಟ್ ಕೋಲಾಹಲ

ಅಕ್ಷರ ಗಾತ್ರ

‘ಸಾರ್, ಆರು ತಿಂಗಳು ರಜೆ ಕೊಡಿ, ವಿಶ್ರಾಂತಿ ತೆಗೆದು ಕೊಂಡು ನಂತರ ಕೆಲಸಕ್ಕೆ ಬಂದು ಜಾಯಿನ್ ಆಗುತ್ತೇನೆ’ ಎಂದು ಪೆಕರ, ಸಂಪಾದಕರಿಗೆ ಪತ್ರ ಕೊಟ್ಟ. ಹೌಹಾರಿದ ಸಂಪಾದಕರು, ‘ಹೀಗೆಲ್ಲಾ ಆರು ತಿಂಗಳು ರಜೆ ಕೇಳಬೇಡ ಕಣಯ್ಯ, ಪಬ್ಲಿಕ್ ತಪ್ಪಾಗಿ ತಿಳ್ಕೋತಾರೆ. ನೋಡೋ ದಕ್ಕೆ ತರುಣನೂ, ತೇಜೋವಂತನೂ ಆಗಿರುವಂತೆ ಕಾಣ್ತಾ ಇದೀಯ, ನಿನಗೇನು ಬಂತು ಧಾಡಿ? ರಜೆ ಹಾಕಿ ವಿಶ್ರಾಂತಿ ತೆಗೆದುಕೊಳ್ಳುವಂತಹದ್ದು ಏನಾಗಿದೆ ನಿನಗೆ’ ಎಂದು ಪೆಕರ ನನ್ನು ದಬಾಯಿಸಿದರು.

‘ಬೆಳಗಾವಿ ಅಧಿವೇಶನಕ್ಕೆ ಹೋಗಿ ಸುಸ್ತಾಗಿ ಬಿಟ್ಟಿದೆ ಸಾರ್, ಸ್ವಲ್ಪ ರೆಸ್ಟ್ ಬೇಕು’ ಎಂದು ಪೆಕರ ಮತ್ತೆ ಅಂಗಲಾಚಿದ. ‘ಬೆಳಗಾವಿ ಅಧಿವೇಶನದಲ್ಲಿ ಸುಸ್ತಾಗುವಂಥಾದ್ದು ಏನಿತ್ತು? ಮೊದಲ ದಿನದಿಂದಲೂ ಗದ್ದಲವೇ ಅಲ್ಲವೇ? ವಾಜರ ಮಾತು ಗಾಜು ಗೋಜು, ಪುಢಾರಿ ಮಾತು ಮೋಜು ಮೋಜು ಎನ್ನುವಂತೆ ಎಲ್ಲ ಎಮ್ಮೆಲ್ಲೆಗಳು ಸಖತ್ ಕಾಮಿಡಿ ಷೋ ಮಾಡ್ತಾ ಇದಾರೆ. ಒಳ್ಳೇ ಎಂಟರ್‌ಟೇನ್‌ಮೆಂಟ್ ಇತ್ತಲ್ಲಾ ಏಕೆ ಬೇಜಾರು?’ ಎಂದು ಸಂಪಾದಕರು ಪ್ರಶ್ನಿಸಿದರು.

‘ಆದರೂ ಇನ್ನೊಂದಷ್ಟು ಕಾಮಿಡಿ ಕಿಂಗ್‌ಗಳು ಇರಬೇಕಾ ಗಿತ್ತು ಸಾರ್, ನಶ್ವರಪ್ಪ, ವಾಟಾಳು, ಯಂಗಡರವಣಪ್ಪ ಅವರೆಲ್ಲಾ ಇಲ್ದೆ ಟೈಂಪಾಸ್ ಕಷ್ಟ ಆಗಿದೆ ಸಾರ್’ ಪೆಕರ ಇದ್ದ ವಿಷಯ ಅರುಹಿದ. ‘ರಪ್ಪ, ಶೆಟ್ಟರ್‌ಭಟ್ಟರ್, ನಗುವಾನಂದ, ಮಾರಸ್ವಾಮಿ, ಅಯ್ಯ ಹೀಗೆ ಸಾಲುಸಾಲಾಗಿ ಮು.ಮಗಳು ಮಾಜಿಗಳಾಗಿ, ಹಾಜಿಗಳಾಗಿ ಅನುಭವದ ಮೂಟೆ ತರ ಕೂತ್ಕೊಂಡಿದ್ದಾ ರಲ್ಲಾ, ಕಾಮಿಡಿಗೇನ್ ಕಮ್ಮೀ?’
‘ಪಾಪ, ರಪ್ಪ ಅವರು ಗಾಂಧಿನಗರ ರಸ್ತೆಯಲ್ಲಿ ಅಡ್ಡಡ್ಡ ಮಲಗಿದ್ದರೂ ಅಯ್ಯ ಅವರು ಕ್ಯಾರೇ ಎನ್ನಲಿಲ್ಲ.

ಅದಕ್ಕೆ ರಪ್ಪ ಅವರು ಸಿಟ್ ಮಾಡ್ಕೊಂಡು, ಹೊಸ ವಿಧಾನಸೌಧದ ಬಾವಿ ಗಿಳಿದು ಕಾರ್ಪೆಟ್ ಮೇಲೇ ಕುಂತರು. ಸಖತ್ತಾಗಿ ಮಿಂಚಿದ್ರು. ಅವರಿಗೆ ಸೊಂಟನೋವು, ಅದ್ರೂ ಸರ್ಕಾರ ಒಂದು ಸ್ಟೂಲ್ ಕೇಳಿದ್ರೂ ಕೊಡ್ಲಿಲ್ಲ. ಇದು ಬಹಳ ಅನ್ಯಾಯ, ಒಂದು ಸ್ಟೂಲ್ ಕೊಡಲಾಗದ ಸರ್ಕಾರ ರಾಜೀನಾಮೆ ಕೊಡಬೇಕು ಅಂತ ಬಾಬೀಜಿ ಅತ್ಕೋಂತಾ ಹೋದ್ರು. ಬಹಳ ತಮಾಷೆ ಸೀನು ಸಾರ್. ರಪ್ಪ ಏನಿದ್ರೂ ಅಂದಕಾಲದ ನಾಯಗನ್. ಪವರ್ ಇರ್ಲಿ, ಇಲ್ದೇ ಇರ್ಲಿ, ರೋಫ್‌ಗೇನೂ ಕಮ್ಮಿ ಇಲ್ಲ. ಕಬ್ಬು ಡೊಂಕಾದರೂ ಸಿಹಿ ಡೊಂಕು ಅಲ್ವಲ್ಲ?!’ ಪೆಕರ ತನ್ನ ಅನುಭವವನ್ನು ವಿವರಿಸಿದ.

‘ಕಬ್ಬು ಅಂದಕೂಡ್ಲೇ ನೆನಪಾಯಿತು, ಅಯ್ಯ ಅವರ ಸರ್ಕಾರಕ್ಕೆ ಏನಯ್ಯ ಇದು ದಿಢೀರ್ ಬಾಂಬ್? ಇಷ್ಟು ದಿನ ಗಂಟಲಲ್ಲಿ ಸಿಕ್ಕಿಹಾಕಿ ಕೊಂಡ ಲಾಡು ತೆಗೆದುಹಾಕೋಕೆ ತುಂಬಾನೇ ಕಷ್ಟಾಪಟ್ಟರು. ವಿಕೆಟ್ ಎಗರಿಸಿ ನಿರಾಳವಾಗ್ತಾ ಇದ್ದಂತೆಯೇ ಇದೇನಯ್ಯಾ ಇದು ಶುಗರ್ ಕಂಪ್ಲೇಂಟ್? ಅಯ್ಯ ಅವರಿಗೆ ಪಾಪ, ಮೇಲಿಂದ ಮೇಲೆ ಕಷ್ಟಗಳು ಅದುಮಿ ಕೊಳ್ತಾ ಇವೆ. ರಾಜಕೀಯದಲ್ಲಿ ಇದು ಸಡನ್ ತಿರುವು ಅಂತಾರಲ್ಲಾ?’

‘ಹಾದು ಸಾರ್, ಇದೇ ಸಮಯ ಅಂತ ನಮ್ಮ ರಾಜಕೀಯ ಪ್ರತಿಪಕ್ಷದವರು ಬೆಂದ ಮನೇಲಿ ಗಳ ಇರಿಯೋ ಕೆಲಸ ಮಾಡ್ತಾ ಇದಾರೆ ಸಾರ್’ ‘ಹೌದಾ?! ಹೇಗೆ?’ ‘ರೈತ ವಿಷ ಕುಡಿದಿದ್ದೇ ನಿಮ್ಮಿಂದ ಅಂತ ಕೆಜೆಪಿ, ಬಿಜೆಪಿ ಗಳೆಲ್ಲಾ ಒಂದಾಗಿ ಕುತ್ತಿಗೆಗೆ ಕಪ್ಪುಪಟ್ಟಿ ಹಾಕ್ಕೊಂಡು ಹಾರಾ ಡಿದ್ದೇ ಹಾರಾಡಿದ್ದು. ಆದ್ರೆ ನಿಜವಾದ ಪ್ರತಿಪಕ್ಷದವರು ಸೈಲೆಂಟಾಗಿ ತಮಾಷೆ ನೋಡ್ತಾ ಇದ್ರು, ರಪ್ಪ ಅವರು ಬಾವಿ ಬಿಟ್ಟು ಮೇಲೆದ್ದು ಹಾರಾಡ್ತಿದ್ದರೆ ಮಾರಸ್ವಾಮಿಗಳು ಸೈಲೆಂಟಾಗಿ ಕೂತು ನಗ್ತಾ ಇದ್ದರು ಸಾರ್.

ರೈತರ ಆತ್ಮಹತ್ಯೆ ವಿಷಯದಲ್ಲಿ ರಾಜಕೀಯ ಮಾಡಲಿಲ್ಲ. ಮೆಚ್ದೆಮಚ್ಚಾ ನಿನ್ನ ರಾಜಕೀಯ ಆಟಗಳನ್ನು ಎಂದು ಅಯ್ಯ ಅವರು ಮಾರಸ್ವಾಮಿ ಸನ್ ಆಫ್ ಮಣ್ಣಿನಮಗ ಅವರಿಗೆ ಮೆಚ್ಚುಗೆ ಕೂಡ ಕೊಟ್ರು ಸಾರ್’ - ಎಂದು ಪೆಕರ ಪ್ರತ್ಯಕ್ಷ ವರದಿ ನೀಡಿದ. ‘ಒಟ್ನಲ್ಲಿ ಒಂದು ಮೂಳೆ ಹಾಕಿ ಎರಡು ನಾಯಿ ಬಿಟ್ಟಂತಾಗಿದೆ ಅನ್ನು’, ಸಂಪಾದಕರು ಹೇಳಿದರು. ‘ಹೌದು ಸಾರ್, ಇಷ್ಟು ದಿನ ಕಳಂಕಿತರು, ಭ್ರಷ್ಟರು ಎಂದು ಕೂಗಾಡ್ತಾ ಇದ್ರು, ಈಗ ನೀವು ಕೊಲೆಗಡುಕರು, ನೀವೇ... ನೀವೇ... ನೀವೇ... ಎಂದು ಅಯ್ಯ ಅವರು ಕೂಗಾಡ್ತಾ ಇದ್ದರೆ, ನಿಮ್ಮಿಂದಲೇ, ನಿಮ್ಮಿಂದಲೇ, ನಿಮ್ಮಿಂದಲೇ ಎಂದು ರಪ್ಪಾ ಅಂಡ್ ಸಂಗಡಿಗಾಸ್ ಹೊಯ್‌ ಕಯ್ ಮಾಡಿಟ್ಟಿದ್ದಾರೆ.

ಈ ಗಲಾಟೇಲಿ ಬಿದಾಯ್, ಗಿದಾಯ್ ಎಲ್ಲ ಎಗರೋಯ್ತು. ಅಧಿವೇಶನಕ್ಕೆ ಕೋಟಿ, ಕೋಟಿ ರೂಪಾಯಿ ಖರ್ಚಾಗುತ್ತೆ. ಅದರೆ ಈಗ ಎಲ್ಲವೂ ಶುಗರ್ ಕಂಪ್ಲೇಂಟ್‌ನಲ್ಲಿ ಮುಳುಗಿ ಹೋಯ್ತು ಸಾರ್’. ‘ಕಬ್ಬು ಬೆಳೆಗಾರರು ಸುವರ್ಣಸೌಧದ ಮುಂದೆ ನಿಂತು ಹಗಲೂ ರಾತ್ರಿ ಬೆಂಬಲ ಬೆಲೆ ಕೊಡಿ ಅಂತ ಬಾಯಿಬಾಯಿ ಬಡ್ಕೋತಾ ಇದ್ರೆ ಒಳಗೆ ಇರೋ ಪುಢಾರಿಗಳೆಲ್ಲಾ ಬಿ.ಪಿ., ಶುಗರ್ ಏರಿಸಿಕೊಂಡು ಕುಳಿತಿದ್ದರಂತಲ್ಲಾ? ಎಲ್ಲ ಪಕ್ಷದ ಮಹನೀಯರೂ ಕೈಯಲ್ಲಿ ಒಂದು ಶುಗರ್ ಫ್ಯಾಕ್ಟರಿ ಇಟ್ಟು ಕೊಂಡು, ಕಬ್ಬು ಬೆಳೆಗಾರರಿಗೆ ದುಡ್ಡು ಕೊಡ್ದೆ ಸತಾಯಿಸಿದ್ರೆ, ಲೋಕಸಭೆ ಚುನಾವಣೆ ಬರ್ತ ಇರೋ ಟೈಂನಲ್ಲಿ ಕೈಪಾರ್ಟಿಗೆ ಗಾಬರಿ ಆಗಲ್ಲವೇನ್ರಿ? ಕಬ್ಬು ಸಿಹಿ ಅಂತ ಬುಡ ಮಟ್ಟ ತಿಂದ ಅನ್ನುವಂತಾಗಿದೆ ಪರಿಸ್ಥಿತಿ’ ಸಂಪಾದಕರು ವಿಶ್ಲೇಷಣೆ ಮಾಡಿದರು.

‘ಹೌದು ಸಾರ್, ಇದೂ ಒಂದು ರೀತಿಯಲ್ಲಿ ಶುಗರ್ ಫ್ಯಾಕ್ಟರಿ ರಾಜಕಾರಣ ಸಾರ್. ರೈತರಿಗೆ ಕೋಟಿಗಟ್ಟಲೆ ಬಾಕಿ ಉಳಿಸಿಕೊಳ್ಳುವ ಮಂದಿ, ಈಗ ಸರ್ಕಾರ ಹೇಳಿದ ಬೆಲೆಯನ್ನೂ ಕೊಡಲ್ಲಾ ಅಂತ ಕುಳಿತಿದ್ದಾರೆ. ಶುಗರ್ ಫ್ಯಾಕ್ಟರಿ ಲಾಬಿ ಕೈಲೇ ಖಾತೆ ಕೊಡಬೇಡಿ ಅಂದ್ರೂ ಅಯ್ಯ ಅವರು ಕೇಳ್ಲಿಲ್ಲ. ಈಗ ನೋಡಿ, ಕಬ್ಬು ತಿಂದು ಕೈ ತೊಳೆದಂಗಾಯ್ತು’ ಎಂದು ಪೆಕರ ತನಗೆ ತಿಳಿದಿದ್ದ ಗಾದೆ ಮಾತನ್ನು ಎದುರಿಗಿಟ್ಟ.

‘ಹೋಗ್ಲಿ ಬಿಡು, ಕೋಡಿಹಳ್ಳಿ ಸ್ವಾಮಿಗಳು, 9 ರಿಂದ 10 ತಿಂಗಳಲ್ಲಿ ಸರ್ಕಾರ ಬದಲಾಗುತ್ತೆ ಅಂತ ಭವಿಷ್ಯ ಹೇಳೋಕೆ ಶುರುಮಾಡಿದ್ದಕ್ಕೂ, ಶುಗರ್ ಲಾಬಿ ಸರ್ಕಾರದ ಕುತ್ತಿಗೆ ಹಿಡಿದು ಕೊಂಡಿರುವುದಕ್ಕೂ ಮ್ಯಾಚ್ ಆಗ್ತಾ ಇದೆ’ ಎಂದು ಸಂಪಾದಕರು ಷರಾ ಬರೆದರು.
-ಜಿಎಮ್ಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT