ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧೀಕರಣ- ಬೇಕಾಗಿರುವುದು ಯಾರಿಗೆ?

Last Updated 1 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕಕ್ಕೆ ದೇಶದ ಆಡಳಿತಾತ್ಮಕ ಇತಿಹಾಸದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಮೈಸೂರು ಸಂಸ್ಥಾನವನ್ನಾಳಿದ ಅನೇಕ ದೊರೆಗಳು ಹಾಗೂ ದಿವಾನರು, ಪ್ರಜೆಗಳು ಹಾಗೂ ರಾಜ್ಯದ ಹಿತದೃಷ್ಟಿಯಿಂದ ಹತ್ತು-ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಇಡೀ ದೇಶಕ್ಕೇ ಮಾದರಿಯಾಗಿದ್ದರು.

ಪ್ರಾಮಾಣಿಕ ಹಾಗೂ ಪ್ರಗತಿಪರ ನಿಲುವುಗಳಿಗೆ ಹೆಸರಾಗಿದ್ದ ಜನನಾಯಕರನ್ನು ಹೊಂದಿದ್ದ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಾಜ್ಯ ನಮ್ಮದು. ಸ್ವಾತಂತ್ರ್ಯಾ ನಂತರದಲ್ಲಿ ಅಧಿಕಾರಕ್ಕೆ ಬಂದ ಪ್ರಜಾಸತ್ತಾತ್ಮಕ ಸರ್ಕಾರಗಳ ಅನೇಕ ನಾಯಕರು ಕೂಡ ತೀರಾ ಅವಮಾನಕರವಾದ ರೀತಿಯಲ್ಲಿ ನೇಪಥ್ಯಕ್ಕೆ ನಿರ್ಗಮಿಸುವಂಥ ಸ್ಥಿತಿಗೆ ತಳ್ಳಲ್ಪಟ್ಟಾಗಲೂ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕುಗಳ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡ ನಿದರ್ಶನಗಳು ನಮ್ಮ ಮುಂದಿವೆ.

ಇಂಥ ರಾಜ್ಯದಲ್ಲಿ ಬರುಬರುತ್ತಾ ರಾಜಕೀಯ ವಿದ್ಯಮಾನಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಎಲ್ಲ ಮೌಲ್ಯಾಚರಣೆಗಳನ್ನು ಗಾಳಿಗೆ ತೂರಿ ಇಡೀ ರಾಷ್ಟ್ರದ ಮುಂದೆ ಕರ್ನಾಟಕವೇ ತಲೆತಗ್ಗಿಸುವಂಥ ಸ್ಥಿತಿಯನ್ನು ತಲುಪಿದೆ.

ಕಳೆದ ಕೆಲ ವರ್ಷಗಳಿಂದೀಚೆಗೆ ಬಹುತೇಕ ರಾಜಕಾರಣಿಗಳು ತಮ್ಮ ಸ್ಥಾನದ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಅಲಕ್ಷಿಸಿ ಸ್ವಾರ್ಥ ಸಾಧನೆ ಹಾಗೂ ಸ್ವಜನ ಪಕ್ಷಪಾತಗಳೆಂಬ ಅಮಲಿನಲ್ಲಿ ತೇಲುತ್ತಾ ಸಾರ್ವಜನಿಕರ ಬದುಕಿನೊಡನೆ ಚೆಲ್ಲಾಟವಾಡುವಂತೆ ವರ್ತಿಸುತ್ತಿರುವುದು ಸಮಕಾಲೀನ ಸಮಾಜ ಕಂಡಿರುವ ಅತ್ಯಂತ ದೊಡ್ಡ ದುರಂತಗಳಲ್ಲೊಂದು. ಮೊನ್ನೆ ಮೊನ್ನೆ ತಾನೇ ಮೈಸೂರಿನ ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಮೇಲೆ ಕೆಲ ಪ್ರಜಾ ಪ್ರತಿನಿಧಿಗಳು ನಡೆದುಕೊಂಡ ರೀತಿಗಿಂತ ಇದಕ್ಕೆ ಬೇರೆ ಸಾಕ್ಷಿ ಬೇಕೆ?

ಕಳೆದ ವಾರ ಆಡಳಿತಾರೂಢ ಪಕ್ಷದ ಮಹಿಳಾ ಮಂತ್ರಿಯೊಬ್ಬರು ಚಾಮುಂಡಿ ಬೆಟ್ಟಕ್ಕಿರುವ ಸಾವಿರ ಮೆಟ್ಟಿಲುಗಳನ್ನೇರಿ ದೇವಿಯ ದರ್ಶನ ಪಡೆದದ್ದು ಮಾಧ್ಯಮಗಳ ಮೂಲಕ ಭಾರಿ ಸುದ್ದಿಯಾಯಿತು.
 
`ದುಷ್ಟ ನಿಗ್ರಹಿ, ಶಿಷ್ಟ ರಕ್ಷಕಿ~ಯೆಂದೇ ಖ್ಯಾತಳಾದ ಮೈಸೂರಿನ ಅಧಿದೇವತೆ ರಾಜ್ಯಕ್ಕೆ ಒಳಿತನ್ನು ಮಾಡಲಿ ಹಾಗೂ ರಾಜ್ಯ ರಾಜಕಾರಣದ ಮೇಲೆ ಬೀಸಲಿರುವ ಸಂಕಷ್ಟದ ಬಿರುಗಾಳಿಯಿಂದ ತಮ್ಮ ಸರ್ಕಾರವನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲು ಕಾಲ್ನಡಿಗೆಯಲ್ಲಿ ಬೆಟ್ಟವನ್ನೇರಿದ್ದಾಗಿ ಆ ಸಚಿವೆ ಹೇಳಿಕೆಯನ್ನು ಇತ್ತಿದ್ದರು.

ಸಾವಿರಾರು ಸಾಮಾನ್ಯ ಪ್ರಜೆಗಳು ದಿನ ನಿತ್ಯ ಸಾವಿರ ಮೆಟ್ಟಿಲುಗಳನ್ನು ಹತ್ತಿ ಇಳಿಯುತ್ತಲೇ ಇದ್ದರೂ ಸುದ್ದಿ ಮಾಡದ ಘಟನೆಯೊಂದು, ಅದಕ್ಕೆ ತಗಲಿದ ರಾಜಕೀಯದ ಲೇಪನದಿಂದ ಸಾರ್ವಜನಿಕ ಹಾಗೂ ಇತರ ರಾಜಕೀಯ ಪಕ್ಷಗಳ ಗಮನ ಸೆಳೆಯಿತು ಎಂದೇನೂ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ?

ಈ ಘಟನೆ ನಡೆದು ಒಂದೆರಡು ದಿನಗಳು ಕಳೆದ ನಂತರ ವಿರೋಧ ಪಕ್ಷವೊಂದರ ಸದಸ್ಯೆಯರು ತಮ್ಮ ಪಕ್ಷದ ಸ್ಥಳೀಯ ನಾಯಕರೊಡಗೂಡಿ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ನೀರಿನಿಂದ ತೊಳೆಯತೊಡಗಿದ್ದನ್ನು ಮಾಧ್ಯಮಗಳ ಮೂಲಕ ಬಿಂಬಿಸಲ್ಪಟ್ಟಾಗ ನಿಜಕ್ಕೂ ಪ್ರಜ್ಞಾವಂತ ಮನಸ್ಸುಗಳಿಗೆ ಭಾರಿ ಆಘಾತವಾಯಿತು.

ಸಚಿವೆಯೊಬ್ಬರು ತಮ್ಮ `ಭ್ರಷ್ಟ ಸರ್ಕಾರ~ದ ರಕ್ಷಣೆಗೆ ಯಾಚಿಸಲು ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನೇರುವ ಮೂಲಕ ಆ ಪ್ರದೇಶವನ್ನು ಅಪವಿತ್ರಗೊಳಿಸಿದ್ದಾರೆ, ಆದ್ದರಿಂದ ತಾವು ಈ `ಶುದ್ಧೀಕರಣ~ ಕ್ರಿಯೆಯಲ್ಲಿ ತೊಡಗಿದ್ದನ್ನು ನೋಡಿದಾಗ ಸಮಕಾಲೀನ ರಾಜಕಾರಣ ಯಾವ ಮಟ್ಟವನ್ನು ತಲುಪುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರವಾಯಿತು.

ತಮ್ಮ ವಿರೋಧಿ ರಾಜಕೀಯ ಪಕ್ಷದ ಈ ಶುದ್ಧೀಕರಣ ಕ್ರಿಯೆಯಿಂದ ಕೋಪಗೊಂಡ ಮಂತ್ರಿಗಳ ಆಳುವ ಪಕ್ಷದ ಮಹಿಳಾ ಘಟಕದ ಸದಸ್ಯರು ತಮ್ಮದೇ ಪಕ್ಷದ ಪುರುಷ ನಾಯಕರೊಬ್ಬರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದರು.

ಮಂತ್ರಿಗಳ ಬೆಟ್ಟದ ಕಾಲ್ನಡಿಗೆ ಯಾತ್ರೆಯನ್ನು ಅಪವಿತ್ರವೆಂದು ಬಣ್ಣಿಸಿ, ಬೆಟ್ಟದ ಮೆಟ್ಟಿಲುಗಳನ್ನು ಶುದ್ಧೀಕರಣಗೊಳಿಸುವ ಕ್ರಿಯೆಯಲ್ಲಿ ತೊಡಗಿದ ತಮ್ಮ ವಿರೋಧಿ ಪಕ್ಷ ಸದಸ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಈ ಪ್ರತಿಭಟನಾಕಾರರು.

ತಮ್ಮ ಮಹಿಳಾ ಸದಸ್ಯರೊಬ್ಬರ ಮೇಲೆಯೇ ಹಲ್ಲೆ ಮಾಡಿದ ಈ ಪಕ್ಷದ ಸದಸ್ಯರಿಗೆ ಮತ್ತೊಂದು ಪಕ್ಷದ ಮಹಿಳೆಯರನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂಬ ವಾದವನ್ನು ಕೂಡ ಈ ಪ್ರತಿಭಟನೆಯ ಸಮಯದಲ್ಲಿ ಮುಂದಿಟ್ಟರು.

ತೀರಾ ಸಾಮಾನ್ಯವೆನಿಸುವಂಥ ಬೆಟ್ಟ ಹತ್ತುವಂಥ ಘಟನೆಯೊಂದನ್ನು ಎಲ್ಲಿಯವರೆಗೂ ಎಳೆದುಕೊಂಡು ಹೋಗಿ ತಮ್ಮ ತಮ್ಮ ಪಕ್ಷದ ಮುಚ್ಚಿದ ಕಾರ್ಯಸೂಚಿಗಳನ್ನು ಸಾಧಿಸಿಕೊಳ್ಳಲು ರಾಜಕೀಯ ಪಕ್ಷಗಳು ಪ್ರಯತ್ನಪಡುತ್ತವೆ ಎಂಬುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ.

ಇಡೀ ಪ್ರಕರಣವನ್ನು ಪರಸ್ಪರ ದೋಷಾರೋಪಣೆಯ ಸಾಧನವಾಗಿ ಬಳಸಿಕೊಂಡು ಗುಡಿಯಲ್ಲಿರುವ ದೇವತೆಯಿಂದ ಹಿಡಿದು ಜೀವಂತವಾಗಿರುವ ಮಹಿಳೆಯರವರೆಗೆ ಯಾವ ವಿಷಯವನ್ನಾದರೂ ಪ್ರಚಾರಕ್ಕಾಗಿ ಬಳಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ರಾಜಕೀಯ ಪಕ್ಷಗಳು ತೋರಿಸಿರುವುದು ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ.

ಬೆಟ್ಟದ ಮೇಲೆ ನಡೆದ ಘಟನೆಯಲ್ಲಿ ಪಕ್ಷ ರಾಜಕಾರಣಕ್ಕಾಗಿ ಮಹಿಳೆಯರನ್ನು ಬಂಡವಾಳವನ್ನಾಗಿ ಬಳಸಿಕೊಂಡಿದ್ದು ಎದ್ದು ಕಾಣುವಂಥ ವಿಚಾರ. ಮಹಿಳಾ ಮಂತ್ರಿಯೊಬ್ಬರು ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನೇರಿದರು ಎಂಬ ಏಕೈಕ ಕಾರಣಕ್ಕಾಗಿ ಆ ಸೋಪಾನಗಳು ಅಪವಿತ್ರವಾಗಿ ಹೋದುವು ಎಂದು ಗುಲ್ಲೆಬ್ಬಿಸಿ ಅವುಗಳನ್ನು ಶುದ್ಧೀಕರಣಗೊಳಿಸಲು ಮುಂದಾದ ಮಹಿಳಾ ನಾಯಕರು ದಿನನಿತ್ಯ ರಾಜ್ಯದಾದ್ಯಂತ ನಾನಾ ರೀತಿಗಳಲ್ಲಿ ಮಹಿಳೆಯರ ಬದುಕನ್ನು ಕಲುಷಿತಗೊಳಿಸುತ್ತಿರುವಂಥ ಅನೇಕ ಘಟನೆಗಳು ನಡೆಯುತ್ತಿರುವಾಗ ಸೊಲ್ಲೆತ್ತಿದ್ದಾರೆಯೇ?

ಇವರದೇ ಪಕ್ಷ ಸಿಲುಕಿರುವ ಭ್ರಷ್ಟಾಚಾರದ ಆರೋಪಗಳನ್ನು ಕುರಿತಂತೆ ಇವರ ನಿಲುವುಗಳಾದರೂ ಎಂಥವು? ವಿರೋಧಿ ಪಕ್ಷದ ಮಹಿಳಾ ಸದಸ್ಯೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ತಮ್ಮ ಪಕ್ಷದ ನಾಯಕಿಯನ್ನು ಟೀಕಿಸಲು ಆ ಪಕ್ಷದವರಿಗೆ ಹಕ್ಕಿಲ್ಲ ಎಂಬ ಕೂಗೆಬ್ಬಿಸಿದ ಆಡಳಿತಾರೂಢ ಪಕ್ಷದ ಮಹಿಳಾ ಸದಸ್ಯರು ತಮ್ಮ ಪಕ್ಷದ ಏಕೈಕ ಮಹಿಳಾ ಮಂತ್ರಿಯಾಗಿದ್ದ ಇದೇ ಶೋಭಾ ಕರಂದ್ಲಾಜೆ ಅವರನ್ನು ಅಧಿಕಾರದಿಂದ ಉಚ್ಚಾಟಿಸಿದಾಗ ಯಾವ ಬಗೆಯ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು?
 
ಕೆಲ ತಿಂಗಳುಗಳ ಹಿಂದೆ ವಿಧಾನಸಭೆಯ ಮೊಗಸಾಲೆಯಲ್ಲಿ ಹಾಗೂ ರೆಸಾರ್ಟುಗಳಲ್ಲಿ ಮಹಿಳೆಯರನ್ನು ಕುರಿತಂತೆ ಅವಮಾನಕರವಾದ ಪದಗಳನ್ನು ತಮ್ಮ ಪುರುಷ ಸಹೋದ್ಯೋಗಿಗಳು ಬಳಸಿದಾಗ ಏನೆಂದು ಪ್ರತಿಕ್ರಿಯಿಸಿದ್ದರು? ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಅವುಗಳು ನಮ್ಮನ್ನೇ ಸುತ್ತಿಕೊಳ್ಳುತ್ತವೆಯೇ ಹೊರತು ನಮ್ಮ ರಾಜಕಾರಣಿಗಳನ್ನು ಅವು ತಟ್ಟುವ ಹಾಗೆ ಕಾಣುವುದಿಲ್ಲ.

ಇಡೀ ರಾಜಕೀಯ ವ್ಯವಸ್ಥೆಯೇ ಕಲುಷಿತವಾಗುತ್ತಿದ್ದು ರಾಜ್ಯವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳು ತಮ್ಮ ಮುಂದೆ ತಾಂಡವವಾಡುತ್ತಿದ್ದರೂ ಸ್ಪಂದಿಸದ ನಮ್ಮ ಅನೇಕ ಜನನಾಯಕಿಯರು ಪಕ್ಷದ ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆಯ ವಿಚಾರ ಬಂದಾಗ ಮಾತ್ರ ನಡೆದುಕೊಳ್ಳುವ ರೀತಿಯನ್ನು ನೋಡಿದರೆ ಇವರ ಕೈಯಲ್ಲಿ ಮಹಿಳೆಯರ ರಾಜಕೀಯ ಸಶಕ್ತೀಕರಣದ ಪ್ರಯತ್ನಗಳ ಭವಿಷ್ಯ ಏನಾಗಬಹುದು ಎಂಬ ಯೋಚನೆ ಬಾರದಿರುವುದಿಲ್ಲ.

ಅಷ್ಟೇ ಅಲ್ಲ, ಪಕ್ಷಾತೀತವಾಗಿ ಮಹಿಳಾ ರಾಜಕಾರಣಿಗಳು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಒಟ್ಟಾಗಿ ಕೈಜೋಡಿಸುತ್ತಾರೆ ಎಂಬ ಆಶಯವನ್ನು ಹೊಂದಿರುವವರ ಹೃದಯಗಳನ್ನು ಇಂಥ ಘಟನೆಗಳು ಬರಿದು ಮಾಡುತ್ತಿವೆ.

ಹೇಳಿ ಕೇಳಿ ನಮ್ಮದು ಧರ್ಮ ನಿರಪೇಕ್ಷ ರಾಷ್ಟ್ರ. ತಮ್ಮ ತಮ್ಮ ನಂಬಿಕೆಗಳನ್ನೂ ಆಚರಣೆಗಳನ್ನೂ ಪಾಲಿಸಿಕೊಂಡು ಹೋಗಲು ಎಲ್ಲ ಪ್ರಜೆಗಳಿಗೂ ಸ್ವಾತಂತ್ರ್ಯವನ್ನು ಈ ದೇಶದ ಸಂವಿಧಾನವೇ ನೀಡಿದೆ. ಆದ್ದರಿಂದ ಯಾರೊಬ್ಬರನ್ನೂ ಯಾವುದೇ ಪೂಜಾ ಸ್ಥಳಗಳಿಗೆ ಹೋಗದಂತೆ ತಡೆಯಲಾಗಲಿ ಅಥವಾ ಬಲಾತ್ಕಾರದಿಂದ ಯಾವುದೇ ಧಾರ್ಮಿಕ ವಿಧಿ-ವಿಧಾನಗಳನ್ನು ಯಾರ ಮೇಲೆ ಹೇರಲಾಗಲಿ ಇಲ್ಲಿ  ಯಾರಿಗೂ ಅವಕಾಶವಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಸಾರ್ವಜನಿಕ ಶಿಸ್ತಿಗೆ, ವೃತ್ತಿ ಗೌರವಕ್ಕೆ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲತತ್ವಗಳಿಗೇ ಭಂಗ ಬರುವಂಥ ರೀತಿಯಲ್ಲಿ ಅನೇಕ ಜನ ನಾಯಕರು ಹಾಗೂ ಕೆಲ ಧಾರ್ಮಿಕ ಸಂಸ್ಥೆಗಳ ಮುಖಂಡರು ನಡೆದುಕೊಳ್ಳುತ್ತಿರುವುದನ್ನು ನೋಡಿದಾಗ ಶುದ್ಧೀಕರಣವಾಗಬೇಕಿರುವುದು `ಎಲ್ಲಿ~ ಹಾಗೂ `ಹೇಗೆ~ ಎಂಬ ಪ್ರಶ್ನೆಗಳು ಏಳದಿರುವುದಿಲ್ಲ.

ಇತ್ತೀಚಿನ ದಿನಗಳಲ್ಲಂತೂ ರಾಜ್ಯ ರಾಜಕಾರಣ ಹಾಗೂ ದೇವರುಗಳು-ದೇವಸ್ಥಾನಗಳ ನಡುವಣ ನಂಟು ಹೆಚ್ಚು-ಹೆಚ್ಚು ಹತ್ತಿರವಾಗುತ್ತಿದೆ. ರಾಜಕೀಯ ವ್ಯವಹಾರಗಳನ್ನು ದೇವಾಲಯಗಳ ಪ್ರಾಂಗಣಗಳ ಒಳಗೆ ತೆಗೆದುಕೊಂಡು ಹೋಗಿ ಆಣೆ-ಭಾಷೆ ಮಾಡುವುದರ ಮೂಲಕ ಅವೈಚಾರಿಕ ಹಾಗೂ ಅವೈಜ್ಞಾನಿಕ ಮಾನದಂಡಗಳ ನೆಲೆಗಳಲ್ಲಿ ಆಡಳಿತವನ್ನು ನಡೆಸಲೆತ್ನಿಸುತ್ತಿರುವುದು ತೀರಾ ವಿಷಾದನೀಯ.

ಇದಕ್ಕಿಂತ ಹೆಚ್ಚಿನ ದುರಂತವೆಂದರೆ ಇಂಥ ಕ್ರಮಗಳನ್ನು ಕಟುವಾಗಿ ಖಂಡಿಸಿ ತಾವು ಆರಿಸಿ ಕಳುಹಿಸಿದ ನಾಯಕರು ಪ್ರಜಾಸೇವೆಯಲ್ಲಿ ತೊಡಗಬೇಕಾದದ್ದು ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ಹೊರತು ದೇವ ಮಂದಿರಗಳಲ್ಲಲ್ಲ ಎಂದು ಹೇಳುವ ಧ್ವನಿಗಳೇ ತೀರಾ ಕ್ಷೀಣವಾಗಿ ಹೋಗುತ್ತಿರುವುದು.

ಬಹುತೇಕ ಪ್ರಜಾ ಪ್ರತಿನಿಧಿಗಳು ಸಾರ್ವಜನಿಕ ಜೀವನವನ್ನು ಶುದ್ಧೀಕರಣಗೊಳಿಸುವ ದಿಕ್ಕಿನಲ್ಲಿ ಯೋಚನೆಯನ್ನೇ ಮಾಡದೆ, ವ್ಯಕ್ತಿ ಅಥವಾ ಪಕ್ಷ ಕೇಂದ್ರಿತ ದೋಷಾರೋಪಣೆಗಳನ್ನು ಮಾಡುತ್ತಾ ಕಾಲ ತಳ್ಳುತ್ತಿರುವುದು ಭಯ ಹುಟ್ಟಿಸುವಂಥ ಪರಿಸ್ಥಿತಿ.
 
ಒಂದೆಡೆ ಭ್ರಷ್ಟಾಚಾರವನ್ನು ಅಳಿಸಿ ಹಾಕಲು ರಾಷ್ಟ್ರವ್ಯಾಪಿ ಆಂದೋಳನದ ಆಯೋಜನೆ, ಮತ್ತೊಂದೆಡೆ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಂಡು `ತಪ್ಪೆಲ್ಲಾ ಬೇರೆಯವರದ್ದು, ತಾವು ಅತ್ಯಂತ ಪರಿಶುದ್ಧರು~ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿಗಳ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಾ ಕಾಲ ತಳ್ಳುತ್ತಿರುವ ವಿವಿಧ ಪಕ್ಷಗಳ ನಾಯಕ-ನಾಯಕಿಯರು.
 
ಈ ಎರಡು ಸಂದಿಗ್ಧಗಳ ನಡುವೆ ಅಸಹಾಯಕರಾಗಿ ಕೈಚೆಲ್ಲಿ ಕುಳಿತಿರುವ ನಾವು - ಇದು ಈ ಹೊತ್ತಿನ ರಾಜ್ಯದ ಪರಿಸ್ಥಿತಿ. ಜನರನ್ನು ಈ ಸ್ಥಿತಿಗೆ ತಳ್ಳಿ `ಪವಿತ್ರ~ `ಅಪವಿತ್ರ~ ದಂಥ ದೊಡ್ಡ-ದೊಡ್ಡ ಪದಗಳನ್ನು ಬಳಸಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಗೆಪಾಟಲಿಗೀಡುಮಾಡಿರುವವರನ್ನು ಜನತೆ ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕೋ ತಿಳಿಯದಾಗಿದೆ.

ದಿನದಿಂದ ದಿನಕ್ಕೆ ರಾಜಕಾರಣವಷ್ಟೇ ಏಕೆ, ಸಾರ್ವಜನಿಕ ಜೀವನವೇ ಅಶುದ್ಧಿಯಾಗುತ್ತಿದೆ. `ಭ್ರಷ್ಟಾಚಾರ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವುದರಿಂದ ಅದನ್ನು ತಡೆಗಟ್ಟಲು ನಮ್ಮಿಂದ ಸಾಧ್ಯವೇ ಇಲ್ಲ~ ಎಂದು ಕೈ ಚೆಲ್ಲಿ ಕುಳಿತಿರುವ ಬಹುತೇಕ ಸಾರ್ವಜನಿಕರು ಒಂದೆಡೆಯಾದರೆ, ನ್ಯಾಯಾಲಯದಿಂದ ಹಿಡಿದು ನ್ಯಾಯಮೂರ್ತಿಗಳವರೆಗೆ ತಮ್ಮನ್ನು ಅಲುಗಾಡಿಸಲು ಸಾಧ್ಯವೇ ಇಲ್ಲ ಎಂದು ಮೆರೆಯುತ್ತಿರುವ ಭ್ರಷ್ಟ ಜನನಾಯಕರು ಮತ್ತೊಂದೆಡೆ -ಈ ಪರಿಸ್ಥಿತಿಯಿಂದ ನಮ್ಮನ್ನು ಕಾಪಾಡಲು ಶಕ್ತಿ ದೇವತೆಯೇ `ಭ್ರಷ್ಟ ಭಕ್ಷಕಿ ಪ್ರಜಾ ರಕ್ಷಕಿ~ಯಾಗುವವರೆಗೆ ಕಾದು ನೋಡಬೇಕೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT