ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಇಲ್ಲದ ಫೋನ್ ಸಂಪರ್ಕ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇದೊಂದು ಕಾಲ್ಪನಿಕ, ತಮಾಷೆಯ ಘಟನೆ. ಯಾರೋ ಬುದ್ಧಿವಂತರು ಕಟ್ಟಿದ ಪ್ರಸಂಗ. ಈ ಘಟನೆಯನ್ನು ಕಲ್ಪಿಸಿಕೊಂಡದ್ದು ಜಾರ್ಜ್‌ ಬುಷ್‌ ಅವರು ಅಮೆರಿಕದ ಅಧ್ಯಕ್ಷರಾಗಿದ್ದಾಗ. ಆ ಸಮಯದಲ್ಲಿ ಏರಿಯಲ್ ಶರೋನ್ ಇಸ್ರೇಲಿನ ಪ್ರಧಾನಮಂತ್ರಿಗಳಾಗಿದ್ದರು. ನಿಯೋಜಿತ ಕಾರ್ಯಕ್ರಮದಂತೆ ಒಂದು ಬಾರಿ ಪ್ರಧಾನಮಂತ್ರಿ ಶರೋನ್ ಅಮೆರಿಕೆಗೆ ಬಂದರು. ಅಮೆರಿಕೆಯ ಅಧ್ಯಕ್ಷರ ಮನೆಗೆ ಔತಣಕೂಟಕ್ಕೆ ಹೋದರು. ಊಟವಾದ ಮೇಲೆ ಅವರ ಪ್ರಖ್ಯಾತವಾದ ಓವಲ್ ಕಚೇರಿಯಲ್ಲಿ ಮಾತ-ನಾಡುತ್ತ ಕುಳಿತಾಗ ಅವರ ಗಮನ ಅಧ್ಯಕ್ಷರ ಮೇಜಿನ ಪಕ್ಕದಲ್ಲಿದ್ದ ಮೂರು ಫೋನ್‌ಗಳ ಕಡೆಗೆ ಹೋಯಿತು. ಒಂದರ ಬಣ್ಣ ಬಂಗಾ­ರದ್ದು, ಇನ್ನೊಂದು ಕೆಂಪು, ಮೂರನೆ­ಯದು ಬೆಳ್ಳಿಯ ಬಣ್ಣದ್ದು. ‘ಈ ಮೂರು ಪೋನ್‌ಗಳೇಕೆ? ಏನು ಅವುಗಳ ವಿಶೇ­ಷತೆ?’ ಕೇಳಿದರು ಶರೋನ್. ಅದಕ್ಕೆ ಅಧ್ಯಕ್ಷ ಬುಷ್‌ ನಗುತ್ತ ಹೇಳಿದರು, ‘ಪ್ರತಿಯೊಂದೂ ವಿಶೇಷ ಪೋನ್.

ಮೊದಲನೆಯ ಬೆಳ್ಳಿಯ ಬಣ್ಣದ ಫೋನ್ ನನ್ನ ರಿಪಬ್ಲಿಕನ್ ಪಕ್ಷದ ಮುಖ್ಯ ಕಚೇರಿಗೆ ಸಂಪರ್ಕ ಹೊಂದಿದೆ. ಆದ್ದರಿಂದ ರಾಜ­ಕೀಯ ಬದಲಾವಣೆಗಳನ್ನು ತಕ್ಷಣವೇ ತಿಳಿಯಲು ಸಹಾಯ­ವಾಗುತ್ತದೆ. ಎರ­ಡನೆಯ ಕೆಂಪು ಫೋನ್ ನೇರವಾಗಿ ಇರಾಕಿನಲ್ಲಿರುವ ನಮ್ಮ ಸೈನ್ಯದ ಮುಖ್ಯಸ್ಥನನ್ನು ತಲುಪಿಸುತ್ತದೆ. ಅಲ್ಲಿಯ ಕ್ಷಣಕ್ಷಣದ ವಿದ್ಯಮಾನ ತಿಳಿಯಲು ಬೇಕಾಗುತ್ತದೆ. ಮೂರನೆಯ ಬಂಗಾರ ಬಣ್ಣದ ಫೋನ್ ನನ್ನನ್ನು ದೇವರೊಂದಿಗೆ ಸಂಪರ್ಕ ಕೊಡಿಸುತ್ತದೆ’. ‘ಹೌದೇ? ನೇರವಾಗಿ ದೇವರೊಂದಿಗೆ ಮಾತ­ನಾಡಲು ಈ ಫೋನ್‌ನಿಂದ ಸಾಧ್ಯವಾ­ಗುತ್ತದೆಯೋ?’ ಆಶ್ಚರ್ಯದಿಂದ ಕೇಳಿ­ದರು ಶರೋನ್. ‘ಆದರೆ ಪ್ರತಿ­ಯೊಂದು ಕರೆಗೆ ಅದೆಷ್ಟು ಬಿಲ್ ಬರುತ್ತದೆ?’ ಎಂದು ಪ್ರಶ್ನಿಸಿದರು. ‘ಆ ಕರೆಗೆ ತುಂಬ ಹೆಚ್ಚಿನ ಬೆಲೆ. ಒಂದು ಕರೆಗೆ ಹತ್ತು ಸಾವಿರ ಡಾಲರ್‌ಗಳಷ್ಟಾಗುತ್ತದೆ. ಆದರೆ. ಅದಕ್ಕೆ ನೀಡಿದ ಪ್ರತಿಯೊಂದು ಡಾಲರ್ ಕೂಡ ಸಾರ್ಥಕ’ ಎಂದರು ಬುಷ್.

ಮರುವರ್ಷ ಅಧ್ಯಕ್ಷ ಬುಷ್ ಇಸ್ರೇಲಿಗೆ ಹೋದಾಗ ಪ್ರಧಾನಮಂತ್ರಿ ಶರೋನ್‌ ಅವರ ಮನೆಗೆ ಔತಣಕ್ಕೆ ಹೋದರು. ನಂತರ ವಿರಾಮವಾಗಿ ಮಾತನಾಡುವಾಗ ಬುಷ್‌ ಅಲ್ಲಿಯೂ ಮೂರು ಅದೇ ಬಣ್ಣದ ಫೋನ್‌ಗಳನ್ನು ಕಂಡರು. ತಕ್ಷಣವೇ, ‘ಓಹೋ ನಿಮ್ಮಲ್ಲಿಯೂ ಮೂರು ಫೋನ್ ಇವೆಯಲ್ಲ? ಅವು ಎಲ್ಲೆಲ್ಲಿ ಸಂಪರ್ಕ ಹೊಂದಿವೆ?’ ಎಂದು ಕೇಳಿದರು. ಶರೋನ್ ಹೇಳಿದರು, ‘ಬೆಳ್ಳಿಯ ಬಣ್ಣದ ಪೋನ್ ನೇರವಾಗಿ ಪಾರ್ಲಿಮೆಂಟಿಗೆ ಸಂಪರ್ಕ ನೀಡುತ್ತದೆ. ಕೆಂಪು ಬಣ್ಣದ ಫೋನ್‌ನಿಂದ ಪ್ಯಾಲೆಸ್ಟೀನ್‌ನಲ್ಲಿ ನಡೆ­ಯುವ ವಿದ್ಯಮಾನಗಳನ್ನು ತಿಳಿದು­ಕೊಳ್ಳು-ತ್ತೇನೆ. ಮೂರನೇ ಬಂಗಾರದ ಬಣ್ಣದ ಫೋನ್ ನಿಮ್ಮಂತೆ ನನ್ನನ್ನು ದೇವರೊಂದಿಗೆ ಸಂಪರ್ಕಿಸುತ್ತದೆ’. ‘ದೇವರಿಗೆ ನಿಮ್ಮನ್ನು ಸಂಪರ್ಕ ಕಲ್ಪಿಸುವ ಫೋನಿನ ಪ್ರತಿ ಕರೆಯ ಬೆಲೆ ಎಷ್ಟು?’ ಕೇಳಿದರು ಬುಷ್. ಶರೋನ್ ನಿರಾಳವಾಗಿ ಹೇಳಿದರು, ‘ಅದೇ, ತುಂಬ ಖರ್ಚೇ ಇಲ್ಲದ್ದು. ಅದಕ್ಕೆ ಕಾಲು ಡಾಲರ್ ಕೂಡ ಬಿಲ್ ಬರುವುದಿಲ್ಲ. ಏಕೆಂದರೆ ನಮ್ಮ ಕರೆ ಲೋಕಲ್ ಕಾಲ್.

ದೇವರು ನಮ್ಮ ಹತ್ತಿರವೇ ಇದ್ದಾ-ನ­ಲ್ಲವೇ?’. ಏಸು ಕ್ರಿಸ್ತ ಹುಟ್ಟಿದ್ದು ಅದೇ ದೇಶದ ಬೆತ್ಲೆಹೆಮ್‌ನಲ್ಲಿಯೇ ಅಲ್ಲವೇ?. ಶರೋನ್ ಮಾತಿನಲ್ಲಿ ಸಣ್ಣ ವ್ಯಂಗ್ಯವೂ ಇದೆ. ದೇವರು ನಿಮ್ಮ ದೇಶದಿಂದ ಹಾಗೂ ಮನಸ್ಸಿನಿಂದ ದೂರವಿದ್ದಾನೆ. ಅದಕ್ಕೇ ಅವನೊಂದಿಗೆ ಮಾತನಾಡಲು ನಿಮಗೆ ಹೆಚ್ಚು ಬೆಲೆ. ನಮಗಾದರೋ ಆತ ನಮ್ಮವನೇ, ನಮ್ಮ ಹೃದಯದಲ್ಲೇ ಇದ್ದಾನೆ.  ನಮಗೆ ಒಂದು ಸಂತೋಷ ಸುದ್ದಿ. ನಿಜವಾಗಿಯೂ ನಂಬಿಕೆ ಇದ್ದವರು ಫೋನ್ ಕೂಡ ಮಾಡುವ ಕಾರಣವಿಲ್ಲ, ಯಾವ ಫೋನ್ ಬಿಲ್ಲೂ ಇಲ್ಲ. ಮನದಲ್ಲೇ ಕೈ ಎತ್ತಿ ನಮಸ್ಕ­ರಿಸಿದರೆ ಕರೆ ಭಗವಂತನನ್ನು ತಲುಪಿಯೇ ಬಿಡುತ್ತದೆ. ಯಾವ ಚಾರ್ಜ್‌ ಇಲ್ಲದೇ, ಯಾವ ಉಪಕರಣವೂ ಇಲ್ಲದೇ ನೇರ ಸಂಪರ್ಕ ಸಾಧ್ಯವಾಗುವುದು ಭಗವಂತ­ನೊ­ಬ್ಬನೊಂದಿಗೇ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT