ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಪ್ರಕ್ರಿಯೆ: ಕೇಂದ್ರೀಕರಣವೇ ಸವಾಲು

Last Updated 4 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಎರಡು ವಾರಗಳ ಹಿಂದೆ, ವಿಶ್ವವಿದ್ಯಾಲಯಗಳ ನೇಮಕಾತಿ ಪ್ರಕ್ರಿಯೆ ವಿಕೇಂದ್ರೀಕರಣವಾಗಬೇಕೆಂದು ಈ ಅಂಕಣದಲ್ಲಿ ಬರೆದಿದ್ದೆ. ನನ್ನ ವಾದಕ್ಕೆ ಎರಡು ಬಗೆಯ ಪ್ರತಿಕ್ರಿಯೆಗಳು ಬಂದವು. ನಮ್ಮ ವ್ಯವಸ್ಥೆಯಲ್ಲಿ ನೇಮಕಾತಿಯ ವಿಕೇಂದ್ರೀಕರಣ ಅಪ್ರಾಯೋಗಿಕ ಎಂದು ಕೆಲವರು ವಾದಿಸಿದರು. ಈಗ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿರುವವರು ನಿಷ್ಪಕ್ಷಪಾತವಾಗಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎನ್ನುವ ನಂಬಿಕೆಯಿಲ್ಲ, ಹಾಗಾಗಿ ನಮಗಿರುವ ಒಂದೇ ಪರ್ಯಾಯವೆಂದರೆ ನೇಮಕಾತಿ ಸಮಿತಿಯ ಸದಸ್ಯರನ್ನು ದೂರದ ವಿಶ್ವವಿದ್ಯಾಲಯಗಳಿಂದ ಕರೆತರಬೇಕು; ಆಗ ಮಾತ್ರ ಸ್ವಲ್ಪ ಮಟ್ಟಿನ ಪಾರದರ್ಶಕತೆಯನ್ನು ತರಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯವಾಗಿತ್ತು.
 
ಮತ್ತೊಂದು ಪ್ರತಿಕ್ರಿಯೆ ಸಿನಿಕತನದ ಮಾತೆಂದರೂ ವಾಸ್ತವಕ್ಕೆ ದೂರವಾದುದೇನಲ್ಲ: ಕರ್ನಾಟಕದ ರಾಜ್ಯ ವಿಶ್ವವಿದ್ಯಾಲಯಗಳಿಂದ ಪದವಿ ಪಡೆಯುತ್ತಿರುವವರ ಶೈಕ್ಷಣಿಕ (ಮತ್ತು ನೈತಿಕ) ಗುಣಮಟ್ಟಗಳು ಕುಸಿದಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಎಷ್ಟೇ ಕಠಿಣವಾದುದು ಮತ್ತು ಪಾರದರ್ಶಕವಾದುದು ಆದರೂ ಒಳ್ಳೆಯ ಅಭ್ಯರ್ಥಿಗಳೇ ಸಿಗದಿರುವ ಪರಿಸ್ಥಿತಿಯಿದೆಯೆಂದು ಹಲವರು ಹೇಳಿದರು. ಹಾಗಾಗಿ ಸದ್ಯಕ್ಕೆ ಯಾವುದೇ ಬಗೆಯ ಸುಧಾರಣೆ ತರುವುದೂ ಕಷ್ಟದ ಮಾತು ಎನ್ನುವುದು ಎರಡನೇ ಬಗೆಯ ಪ್ರತಿಕ್ರಿಯೆಯಾಗಿತ್ತು.
 
ನೇಮಕಾತಿ ಪ್ರಕ್ರಿಯೆಯ ಬಗ್ಗೆ ಬರೆಯುವಾಗ ಅದಕ್ಕೆ ಸಂಬಂಧಿಸಿದ ಮತ್ತೊಂದು ಸಮಸ್ಯೆ ನನ್ನ ಮನಸ್ಸನ್ನು ಆವರಿಸಿತ್ತು. ಅದೇನೆಂದರೆ ತರಗತಿಯಲ್ಲಿ ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ನಡುವೆ ನಡೆಯುವ ಶೈಕ್ಷಣಿಕ ಪ್ರಕ್ರಿಯೆಯ ಸಂಪೂರ್ಣ ಕೇಂದ್ರೀಕರಣ. ಈ ವಿದ್ಯಮಾನವನ್ನು ಅಲಕ್ಷಿಸಿ ಕೇವಲ ನೇಮಕಾತಿ ಪ್ರಕ್ರಿಯೆಯ ಕೇಂದ್ರೀಕರಣ ಅಥವಾ ವಿಕೇಂದ್ರೀಕರಣಗಳನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ಯಾಕೆಂದರೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬೋಧಕರಾಗಿ ಆಯ್ಕೆಯಾಗುವ ಅಭ್ಯರ್ಥಿಗಳು ಏನನ್ನು ಮಾಡಲು ಶಕ್ತರಾಗಿರಬೇಕು, ಅವರಿಂದ ನಾವು ಅಪೇಕ್ಷಿಸುತ್ತಿರುವುದಾದರೂ ಏನು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳದೆ ನಮ್ಮ ಚರ್ಚೆಯನ್ನು ಮುಂದುವರೆಸಲು ಸಾಧ್ಯವಿಲ್ಲ. 
 
ಹಿರಿಯ ಪತ್ರಕರ್ತ ಮತ್ತು ‘ಪ್ರಜಾವಾಣಿ’ಯ ಅಂಕಣಕಾರರೂ ಆದ ಶೇಖರ್ ಗುಪ್ತ ಅವರು ನಡೆಸಿಕೊಡುವ ‘ಆಫ್‌ ದ ಕಫ್‌’ ಟೆಲಿವಿಷನ್ ಕಾರ್ಯಕ್ರಮದಲ್ಲಿ ಕಳೆದ ತಿಂಗಳು ಭಾಗವಹಿಸುವ ಅವಕಾಶ ನನಗೆ ದೊರಕಿತ್ತು. ಬೆಂಗಳೂರಿನಲ್ಲಿ ನಡೆದ ಈ ಚರ್ಚೆಯಲ್ಲಿ ವಿಶೇಷ ಅತಿಥಿಯಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಭಾಗವಹಿಸಿದ್ದರು. ಅಂದಿನ ಚರ್ಚೆ ಅಂತರ್ಜಾಲದ goo.gl/U69j94 ವಿಳಾಸದಲ್ಲಿ ಲಭ್ಯವಿದೆ. ಅಂದು ಅವರಿಗೆ ಕೇಳಬೇಕು ಎಂದು ನನಗನ್ನಿಸಿದ ಪ್ರಶ್ನೆ ಶೈಕ್ಷಣಿಕ ಪ್ರಕ್ರಿಯೆಯ ಕೇಂದ್ರೀಕರಣಕ್ಕೆ ಸಂಬಂಧಿಸಿದ್ದು. ಯಾಕೆಂದರೆ ಇದು ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯ ಮುಖ್ಯ ಲಕ್ಷಣ ಮತ್ತು ಅತಿ ದೊಡ್ಡ ಸವಾಲು ಕೂಡ. 
 
ಗಮನಿಸಿ, ತರಗತಿಯಲ್ಲಿ ಪಾಠ ಮಾಡುವ ಅಧ್ಯಾಪಕನಿಗೆ ತಾನು ಬೋಧಿಸುತ್ತಿರುವ ವಿಷಯದ ಪಠ್ಯಕ್ರಮ, ಶೈಕ್ಷಣಿಕ ಗುರಿಗಳು ಮತ್ತು ಮೌಲ್ಯಮಾಪನ ವಿಧಾನಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ವಿಶ್ವವಿದ್ಯಾಲಯವು ನೇಮಿಸುವ ಅಧ್ಯಯನ ಮತ್ತು ಪರೀಕ್ಷಾ ಮಂಡಳಿಗಳು ತಮಗೆ ಸಂಬಂಧಿಸಿದ ವಿಷಯಗಳ ಪಠ್ಯಕ್ರಮ, ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಪತ್ರಿಕೆಗಳನ್ನು ತೀರ್ಮಾನಿಸುತ್ತವೆ. ಈ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಪ್ರಾಧ್ಯಾಪಕರ ಸಂಖ್ಯೆ ಹತ್ತನ್ನು ದಾಟುವುದಿಲ್ಲ. ಮಂಡಳಿಗಳು ನೀಡುವ ನಿರ್ದೇಶನಗಳನ್ನು ಸ್ವೀಕರಿಸುವ ಅಧ್ಯಾಪಕ ತರಗತಿಯಲ್ಲಿ ಪಾಠ ಮಾಡುತ್ತಾನೆ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುವ ಗೋಪ್ಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಒಬ್ಬ ಅನಾಮಧೇಯ ಮೌಲ್ಯಮಾಪಕನಾಗಿ ಭಾಗವಹಿಸುತ್ತಾನೆ. ವಿಷಯ ತಜ್ಞರಿಂದ ವಿಡಿಯೊ ಪಾಠಗಳನ್ನು ಸಿದ್ಧಪಡಿಸುತ್ತ, ಅಧ್ಯಾಪಕನನ್ನು ಮತ್ತಷ್ಟು ಮೂಲೆಗುಂಪು ಮಾಡುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಿಂದಲೂ ನಡೆದಿದೆ. ಪದವಿ ಹಂತದಲ್ಲಿ ಸಂಪೂರ್ಣವಾಗಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಬಹುಮಟ್ಟಿಗೆ ಇಂತಹ ಕೇಂದ್ರೀ­ಕರಣವನ್ನು ಎಲ್ಲ ರಾಜ್ಯ ವಿಶ್ವವಿದ್ಯಾಲಯಗಳಲ್ಲಿಯೂ ಕಾಣಬಹುದು. 
 
ಬಹಳ ಕಾಲದಿಂದ ಈ ವ್ಯವಸ್ಥೆಯನ್ನು ನಾವು ಒಪ್ಪಿಕೊಂಡು ಬಂದಿದ್ದೇವೆ. ಹಾಗಾಗಿ ಇದು ಸ್ವಾಭಾವಿಕವೆಂದೇ ನಮಗೆ ತೋರುತ್ತದೆ. ಅಧ್ಯಾಪಕನಿಗೆ ಸ್ವಾಯತ್ತತೆಯನ್ನು ನೀಡಬೇಕು ಎನ್ನುವ ವಿಚಾರವೇ ವಿಚಿತ್ರವಾದ ಸಂಗತಿಯಾಗಿ, ಅಪ್ರಾಯೋಗಿಕವಾದ ಪ್ರಸ್ತಾವವಾಗಿ ಕಾಣುತ್ತದೆ. ಇಂತಹ ರಾಜ್ಯ ವಿ.ವಿಗಳಿಂದ ಜೆ.ಎನ್‌.ಯು.  ದಲ್ಲಿ ಅಭ್ಯಸಿಸಲು ಹೋಗುವ ವಿದ್ಯಾರ್ಥಿಗಳಿಗೆ ಅಲ್ಲಿನ ಅಧ್ಯಾಪಕರಿಗೆ ಇರುವ ಸ್ವಾಯತ್ತತೆ ಅಚ್ಚರಿಯನ್ನು ತರುತ್ತದೆ. ತಾವು ಪಾಠ ಮಾಡುವ ಪತ್ರಿಕೆಗಳ ಪಠ್ಯಕ್ರಮ, ಶೈಕ್ಷಣಿಕ ಗುರಿ ಮತ್ತು ಮೌಲ್ಯಮಾಪನ ವಿಧಾನಗಳನ್ನು ಅವರೇ ತೀರ್ಮಾನಿಸುತ್ತಾರೆ.
 
ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ ಇಲ್ಲಿ ಇಲ್ಲ. ವಿದ್ಯಾರ್ಥಿಗಳು ಸಾಮಾನ್ಯವಾಗಿ ಬಳಸುವ ತರಗತಿಯ ಕೊಠಡಿಯಲ್ಲಿಯೇ ಪರೀಕ್ಷೆ ಬರೆಯುತ್ತಾರೆ. ವಿಶೇಷ ಗುರುತಿನ ಚೀಟಿಯ ಅಗತ್ಯವಿಲ್ಲ. ಗುಪ್ತವಾಗಿ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಯನ್ನು ಹಂಚುವ ವ್ಯವಸ್ಥೆಯಿಲ್ಲ. ಕೈಯಲ್ಲಿ ಬರೆದ ಪ್ರಶ್ನೆಪತ್ರಿಕೆಯನ್ನು ವಿಭಾಗದ ಕಟ್ಟಡದಲ್ಲಿನ ಖಾಸಗಿ ಜೆರಾಕ್ಸ್ ಅಂಗಡಿಯಲ್ಲಿ ಪ್ರತಿ ಮಾಡಿಸಿಕೊಂಡು, ಪರೀಕ್ಷಾ ಕೊಠಡಿಗೆ ಎರಡು ನಿಮಿಷ ಪ್ರಾಧ್ಯಾಪಕರು ಕಾಲಿಡುವುದು ಆಶ್ಚರ್ಯದ ವಿಚಾರವಲ್ಲ. ಪರೀಕ್ಷೆಯಾದ ನಂತರ ವಿದ್ಯಾರ್ಥಿಗಳೆದುರಿಗೆ ಅವರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದೇ ಸಾಮಾನ್ಯ. ಆದರೆ ಯಾವುದೇ ಜೆ.ಎನ್‌.ಯು. ಪ್ರಾಧ್ಯಾಪಕನ ವಿರುದ್ಧ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ ಅಥವಾ ಮೌಲ್ಯಮಾಪನದಲ್ಲಿ ಪಕ್ಷಪಾತ ಮಾಡಿದ ಆರೋಪಗಳು ಸಾಮಾನ್ಯವಾಗಿ ಕೇಳಿಬರುವುದಿಲ್ಲ. 
 
ಈ ರೀತಿಯ ಸ್ವಾಯತ್ತತೆ ಕೇವಲ ಪ್ರತಿಷ್ಠಿತ, ಗಣ್ಯ ವಿವಿಗಳಲ್ಲಿ ಮಾತ್ರ ಸಾಧ್ಯ. ಜಾತಿ, ಸ್ವಜನಪಕ್ಷಪಾತಗಳೇ ತಾಂಡವವಾಡುವ ನಮ್ಮ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಅಲ್ಲ ಎನ್ನುವ ಆಕ್ಷೇಪವನ್ನು ಕೆಲವರು ಎತ್ತಬಹುದು. ಇದು ಸರಿಯೆಂದು ಎಲ್ಲರಿಗೂ ಅನ್ನಿಸಿದರೆ ಆಶ್ಚರ್ಯವಿಲ್ಲ. ಆದರೆ ಎರಡು ಅಂಶಗಳನ್ನು ಗಮನಿಸಿ.  ಮೊದಲನೆಯದು ಪ್ರಾಯೋಗಿಕವಾದುದು. ಈಗ ಕರ್ನಾಟಕದಲ್ಲಿಯೆ ನಡೆಯುತ್ತಿರುವ ಕ್ರೈಸ್ಟ್ ಯೂನಿವರ್ಸಿಟಿಯಂತಹ ಖಾಸಗಿ ವಿಶ್ವ ವಿದ್ಯಾಲಯಗಳಲ್ಲಿ ಪ್ರತಿಯೊಂದು ವಿಭಾಗದ ಮಟ್ಟದಲ್ಲಿಯೇ ಸ್ವಾಯತ್ತತೆಯನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.
 
ವಿಭಾಗದ ಸದಸ್ಯರೇ ಹೊಸ ಅಧ್ಯಾಪಕರನ್ನು ಆಯ್ಕೆ ಮಾಡುತ್ತಾರೆ. ತಾವು ಪಾಠ ಮಾಡುವ ಪತ್ರಿಕೆಗಳ ಸ್ವರೂಪ, ಶೈಕ್ಷಣಿಕ ಗುರಿ, ಪಠ್ಯಕ್ರಮ, ಪರೀಕ್ಷಾ ವಿಧಾನಗಳನ್ನು ತೀರ್ಮಾನಿಸುತ್ತಾರೆ. ಹಲವು ದಶಕಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿಯೇ ಇದ್ದ  ಕ್ರೈಸ್ಟ್ ಸಂಸ್ಥೆಗೆ ಸ್ವಾಯತ್ತತೆಯ ಇಂತಹ ಆಚರಣೆಗಳನ್ನು ಅಳವಡಿಸಿಕೊಳ್ಳಲು ಆಗಿಲ್ಲವೆ? ಇದು ಕ್ರೈಸ್ಟ್ ಯೂನಿವರ್ಸಿಟಿಯ ಕತೆ ಮಾತ್ರವಲ್ಲ, ಹೊಸದಾಗಿ ಪ್ರಾರಂಭವಾಗುತ್ತಿರುವ ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳಲ್ಲಿಯೂ ಕಾಣಸಿಗುವ ವಿದ್ಯಮಾನ. ಈ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಬಹುಮಟ್ಟಿಗೆ ರಾಜ್ಯ ವಿಶ್ವವಿದ್ಯಾಲಯಗಳಲ್ಲಿಯೇ ತಮ್ಮ ಶಿಕ್ಷಣವನ್ನು ಪಡೆದವರು. 
 
ಅಂದರೆ ನಾವು ಇಂದು ಅಳವಡಿಸಿಕೊಳ್ಳಬೇಕಾಗಿರುವ ಆಚರಣೆಗಳು ನಮಗೆ ಅಭ್ಯಾಸವಾಗಬೇಕಿರುವ ಸಾಂಸ್ಕೃತಿಕ ಆಚರಣೆಗಳೇ ಹೊರತು ಅಪ್ರಾಯೋಗಿಕವಾದ ಆದರ್ಶದ ಹೇಳಿಕೆಗಳಲ್ಲ. ಇದು ನಾನು ಗುರುತಿಸಬಯಸುವ ಎರಡನೆಯ ಹಾಗೂ ತಾತ್ವಿಕವಾದ ಅಂಶ. ಸಾರ್ವಜನಿಕ ವಲಯದ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಧ್ಯಾಪಕರಿಗೆ ಹಾಗೂ ವಿಭಾಗಗಳಿಗೆ ಸ್ವಾಯತ್ತತೆಯನ್ನು ನೀಡಲಾಗದಿದ್ದರೆ ಅದಕ್ಕೆ ಕಾರಣ ಕೇಂದ್ರೀಕೃತವಾಗಿರುವ ಅಧಿಕಾರವನ್ನು ಬಿಟ್ಟುಕೊಡಲು ನಾವು ಯಾರೂ ಸಿದ್ಧರಿಲ್ಲದಿರುವುದು. ಹಾಗಾಗಿಯೆ ಸಚಿವ ಜಾವಡೇಕರ್ ಅವರಿಗೆ ಅಧ್ಯಾಪಕರಿಗೆ ಸ್ವಾಯತ್ತತೆಯನ್ನು ನೀಡಲು ಅವರೇನು ಮಾಡಲು ಸಿದ್ಧರಿದ್ದಾರೆ ಎಂದು ನಾನು ಕೇಳಿದೆ. ತಮ್ಮ ಉತ್ತರದಲ್ಲಿ ವಿಶ್ವವಿದ್ಯಾಲಯಗಳಲ್ಲಿರುವ ಹಲವು ಬಗೆಯ ರಾಜಕಾರಣಗಳ ಬಗ್ಗೆ ಮಾತನಾಡಿದ ಸಚಿವರು, ಈ ವಿಚಾರದಲ್ಲಿ ನಾನು ತಾತ್ವಿಕ ಸಹಮತವನ್ನು ಹೊಂದಿದ್ದೇನೆ ಎಂದು ಮಾತ್ರ ಹೇಳಿದರು. 
 
ಜಾವಡೇಕರ್ ಅವರಿಗೆ ವಿಶೇಷವಾಗಿ ಈ ಪ್ರಶ್ನೆಯನ್ನು ಕೇಳಲು ಮತ್ತೊಂದು ಕಾರಣವಿತ್ತು. ಸಂಘ ಪರಿವಾರದ ಸಂಘಟನೆಗಳು ಮತ್ತು ಬಲಪಂಥೀಯ ಚಿಂತಕರು ಭಾರತೀಯ ಶಿಕ್ಷಣವನ್ನು ಗುರುಕುಲ ಮಾದರಿಯಲ್ಲಿ ಪುನಾರಚನೆ ಮಾಡುವ ಬಗ್ಗೆ ಪದೇಪದೇ ಮಾತನಾಡುತ್ತಾರೆ. ಆದರೆ ಗುರುಕುಲಗಳ ಯಾವ ಅಂಶಗಳನ್ನು ಅನುಸರಿಸಬಹುದು ಎನ್ನುವುದರ ಬಗ್ಗೆ ಮಾತ್ರ ಎಲ್ಲಿಯೂ ವಿಸ್ತೃತವಾಗಿ ಚರ್ಚಿತವಾಗುವುದಿಲ್ಲ. ಇಂದಿನ ಅಂಕಣದಲ್ಲಿ ನಮ್ಮ ಚರ್ಚೆಗೆ ಪೂರಕವಾದ ಒಂದು ಅಂಶವನ್ನು ಮಾತ್ರ ಪ್ರಸ್ತಾಪಿಸ ಬಯಸುತ್ತೇನೆ. ನಾನಿಲ್ಲಿ ಪ್ರಸ್ತಾಪಿಸಬಯಸುವ ಅಂಶ ಮೇಲ್ನೋಟಕ್ಕೆ ಗೋಚರವಾಗುವುದು. ಅದೇನೆಂದರೆ ಗುರುಕುಲ ಪದ್ಧತಿಯಲ್ಲಿ ಗುರುವಿಗಿರುವ ಕೇಂದ್ರಸ್ಥಾನ.
 
ತನ್ನ ವಿದ್ಯಾರ್ಥಿಗೆ ಏನನ್ನು ಹೇಗೆ ಕಲಿಸಬೇಕು, ಅದರ ಮೌಲ್ಯಮಾಪನ ಹೇಗೆ ನಡೆಯಬೇಕು ಎನ್ನುವು ದರ ಹೊಣೆಗಾರಿಕೆ ಗುರುವಿಗೆ ಇರಬೇಕು. ಅಧ್ಯಾಪಕನ ಸ್ವಾಯತ್ತತೆಯ ಬಗ್ಗೆ ಮಾತ ನಾಡುವಾಗ ಇಲ್ಲವೆ ತರಗತಿಯನ್ನು ನಡೆಸುವ ಜವಾಬ್ದಾರಿಯಯನ್ನು ಅಧ್ಯಾಪಕನಿಗೆ ನೀಡ ಬೇಕು ಎನ್ನುವಾಗ ನಮ್ಮ ನಿರೀಕ್ಷೆ ಯಿರುವುದು ಈ ನಿಟ್ಟಿನಲ್ಲಿಯೆ. ಇಂದಿನ ವಿಪರ್ಯಾಸವೆಂದರೆ ಗುರುಕುಲದ ಬಗ್ಗೆ ಮಾತ ನಾಡುತ್ತಲೇ ನಾವು ಶೈಕ್ಷಣಿಕ ಪ್ರಕ್ರಿಯೆಗಳನ್ನು ಕೇಂದ್ರೀಕರಿಸುತ್ತಿದ್ದೇವೆ. ಆದರೆ ನಾವು ಪ್ರಶ್ನಿಸುವ ಪಶ್ಚಿಮದ ವಿಶ್ವವಿದ್ಯಾಲಯಗಳು ತಮ್ಮ ಅಧ್ಯಾಪಕರುಗಳಿಗೆ ಅತ್ಯಂತ ಹೆಚ್ಚಿನ ಸ್ವಾಯತ್ತತೆಯನ್ನು ನೀಡುತ್ತವೆ. ನನ್ನ ಅನುಭವವನ್ನೇ ಹಂಚಿಕೊಳ್ಳುವುದಾದರೆ: ವಿಶ್ವವಿದ್ಯಾಲಯವು ಸೆಮಿಸ್ಟರ್‌ನ ಪ್ರಾರಂಭದಲ್ಲಿ ನನಗೆ ನೀಡುತ್ತಿದ್ದುದು ನಾನು ಪಾಠ ಮಾಡುತ್ತಿದ್ದ ತರಗತಿಗಳಿಗೆ ನೋಂದಾಯಿತರಾಗಿದ್ದ ವಿದ್ಯಾರ್ಥಿಗಳ ಪಟ್ಟಿಯನ್ನು.
 
ಸೆಮಿಸ್ಟರ್‌ನ ಕಡೆಯಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ವಿಶ್ವವಿದ್ಯಾಲಯಕ್ಕೆ ನಾನು ಸಲ್ಲಿಸುತ್ತಿದ್ದೆ. ನಡುವಿನ ಶೈಕ್ಷಣಿಕ ಪ್ರಕ್ರಿಯೆಯನ್ನು ಪಾರದರ್ಶಕವಾಗಿ, ಸಮರ್ಪಕವಾಗಿ ನಡೆಸುವುದು ನನ್ನ ಹೊಣೆಗಾರಿಕೆ. ಅಂದರೆ ಈ ಸಂಸ್ಥೆಗಳೆ ಗುರುಕುಲ ಮಾದರಿಯ ಪ್ರಮುಖ ಆಶಯವೊಂದನ್ನು ನಮಗಿಂತ ಹೆಚ್ಚು ಸಮರ್ಪಕವಾಗಿ ಅಳವಡಿಸಿ ಕೊಂಡಿವೆಯೇ?ವಿಕೇಂದ್ರೀಕರಣ ನೇಮಕಾತಿಯಲ್ಲಿ ಮಾತ್ರವಲ್ಲ, ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿಯೇ ದೊಡ್ಡ ಪ್ರ ಮಾಣದಲ್ಲಿ ನಡೆಯಬೇಕಿದೆ. ಇದರ ಅರ್ಥವಿಷ್ಟೆ: ಅಧ್ಯಾಪಕರಿಗೆ ತಮ್ಮ ತರಗತಿಯನ್ನು ವಾಪಸು ಕೊಡಬೇಕು. ತಮ್ಮ ತರಗತಿಯನ್ನು ನಿರ್ವಹಿಸುವ ಅರ್ಹತೆ-ಶಕ್ತಿಗಳಿರುವ ಅಧ್ಯಾಪಕ ರನ್ನು ಮಾತ್ರ ಆಯ್ಕೆ ಮಾಡಬೇಕು. ಆದರೆ ಕಳೆದ ಕೆಲವು ವರ್ಷಗಳಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ತೆಗೆದುಕೊಂಡಿರುವ ಎಲ್ಲ ಮುಖ್ಯ ಕ್ರಮಗಳೂ ಈ ಆಶಯಕ್ಕೆ ವಿರುದ್ಧವಾದವುಗಳು ಎಂದು ಗುರುತಿಸದೆ ಬೇರೆ ದಾರಿಯಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT