ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಲಾಕಾಡುಗಳಿಂದ ಬಂದ ಮೇಲೆ...

Last Updated 30 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳು ತವರು ಮನೆಗೆ ಹೋದಂತೆ, ನಾನು ಪತ್ರಿವರ್ಷವೂ ನಮ್ಮೂರಿಗೆ  ಹೋಗಿ, ಒಂದುವಾರ ಕಾಲವಿದ್ದು, ಹಳೆಯ ಗೆಳೆಯರನ್ನೂ ನೆಂಟರನ್ನೂ ಮಾತಾಡಿಸಿಕೊಂಡು ಬರುತ್ತೇನೆ; ಚಿಕ್ಕಂದಿನಿಂದಲೂ ನೋಡಿಕೊಂಡು ಬಂದಿರುವ ಆಸುಪಾಸಿನ ಜಾಗಗಳಿಗೂ ಭೇಟಿಕೊಡುತ್ತೇನೆ. ಈ ಸಲ ಹೋದಾಗ ನಮ್ಮ ಸೀಮೆಯ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಬಾಬಾಬುಡನಗಿರಿ, ಕೆಮ್ಮಣ್ಣುಗುಂಡಿ, ಕಲ್ಹತ್ತಿಗಿರಿಗಳಲ್ಲಿ ಅಡ್ಡಾಡಿಕೊಂಡು ಬಂದೆ.

ಕೊನೆಯ ಎರಡು ಸ್ಥಳಗಳು ನಮ್ಮ ತಾಲೂಕಿನ ಸರಹದ್ದಿನೊಳಗಿವೆ. ತರೀಕೆರೆ ತಾಲೂಕು ಅರೆ ಮಲೆನಾಡು. ಇದರ ಮೂಡುದಿಕ್ಕಿಗೆ ಬಯಲು ಪ್ರದೇಶವಿದ್ದು ಅಲ್ಲಿನ ಎರೆಭೂಮಿಯಲ್ಲಿ ಕಡಲೆ, ಕೊತ್ತಂಬರಿ, ಈರುಳ್ಳಿ, ಜೋಳ, ರಾಗಿ ಬೆಳೆ; ಪಡುವಣಕ್ಕೆ ಭದ್ರಾ ಹೊಳೆಯಿದ್ದು, ಅದರ ದಿಸೆಗೆ ಬರೀ ಭತ್ತ, ಕಬ್ಬು, ಅಡಕೆ; ತೆಂಕಿಗೆ ಕಲ್ಹತ್ತಿಗಿರಿ, ತಣಿಗೆಬಯಲು, ಕೆಮ್ಮಣ್ಣುಗುಂಡಿಗಳಿದ್ದು, ಇವಕ್ಕೆ ತಾಗಿಕೊಂಡು ಆನೆ ಕಡವೆ ಹುಲಿಗಳಿರುವ ಭದ್ರಾ ಅಭಯಾರಣ್ಯವಿದೆ.

ಇಲ್ಲಿನ ಬೆಳೆ ಕಾಫಿ ಮತ್ತು ಮೆಣಸು. ಒಂದೆಡೆ ಸುಡು ಬಿಸಿಲು, ಬಟಾಬಯಲು. ಇನ್ನೊಂದೆಡೆ ನಡುಗುತಂಪು, ಎದೆ ಝಲ್ಲೆನಿಸುವ ಗಿರಿಕಮರಿ ಹಾಗೂ ಶೋಲಾಕಾಡು.  

ಶೋಲಾಕಾಡು ಎಂದರೆ, ಕಡಲ ಮಟ್ಟದಿಂದ ನಾಲ್ಕುಸಾವಿರ ಅಡಿಗಳ ಮೇಲೆ ಮಾತ್ರ ಕಾಣಸಿಗುವ ಪಶ್ಚಿಮಘಟ್ಟದ ವಿಶಿಷ್ಟ ಕಾನನ. ಇಲ್ಲಿನ ಬೆಟ್ಟಗಳ ಮುಕ್ಕಾಲು ಭಾಗ, ಹತ್ತರಿ ಹಿಡಿದು ತುಪ್ಪಟ ತೆಗೆದ ಕುರಿಯ ಮೈಯಂತೆ ನುಣ್ಣಗಿರುತ್ತದೆ; ಇನ್ನು ಕಾಲುಭಾಗದಲ್ಲಿ ಹಸಿರು ಗುಂಗುರುಕೂದಲನ್ನು ತಳೆದ ತಲೆಯಂತೆ ದಟ್ಟವಾದ ಅರಣ್ಯ; ಎರಡು ‘ಬೋಳು’ ಬೆಟ್ಟಗಳು ಕೂಡುವ ತೊಡೆಯಿರುಕಿನ ಕಣಿವೆಯಲ್ಲಿ ನೆಲವೇ ಕಾಣದ ಸಸ್ಯರಾಶಿ. ಅವುಗಳ ಒಳಗೆ ಅಡಗಿಕೊಂಡು ಎಲ್ಲೋ ಸದ್ದುಗೈಯುತ್ತ ಹರಿವ ತೊರೆಗಳು.

ಬಿರು ಬೇಸಗೆಯಲ್ಲೂ ಹಿಮದಂಪಿನ ನೀರುಕ್ಕಿಸುವ ಶೋಲಾಕಾಡಿನ ಈ ಅಬ್ಬಿಗಳು ವಿಸ್ಮಯ ಹುಟ್ಟಿಸುತ್ತವೆ. ಇವು ಕಾವೇರಿಯಂತಹ ಜೀವನದಿ ಬಿದ್ದು ಉಂಟಾದ ಅಧಃಪಾತಗಳಲ್ಲ. ಸಾವಿರಾರು ಅಡಿ ಎತ್ತರದ ಬೋಳುಶಿಖರಗಳ ಮೇಲಿಂದ ಉಕ್ಕುವ ಚಿಲುಮೆಗಳಿಂದ ರೂಪಿತವಾದವು. ಕಲ್ಹತ್ತಿ, ಮಾಣಿಕ್ಯಧಾರೆ, ಶಾಂತಿ, ಹೆಬ್ಬೆ ಮುಂತಾದ ಅನೇಕ ಅಬ್ಬಿಗಳು ಇಲ್ಲಿನ ಗಿರಿಗಳಲ್ಲಿವೆ. ಇವುಗಳಲ್ಲೆಲ್ಲ ಹೆಬ್ಬೆಯೇ ಚೆಲುವಾದ ಅಬ್ಬಿ. ಹಸಿರು  ಚಪ್ಪರ ಕಟ್ಟಿ, ಅದರಲ್ಲಿ ಉದ್ದನೆಯ ಬಿಳಿಪರದೆ ಇಳಿಬಿಟ್ಟು ರಂಗಮಂದಿರ ಮಾಡಿದಂತೆ ಅದು ಧುಮ್ಮಿಕ್ಕುತ್ತದೆ.

ನಡೆದ ದಣಿವನ್ನೆಲ್ಲ ಒಂದೇ ನೋಟಕ್ಕೆ ಕಳೆಯಬಲ್ಲ ಈ ‘ಜಲಸುಂದರಿ’ಯ ಕುಣಿತ ನೋಡಲು ಕೆಮ್ಮಣ್ಣುಗುಂಡಿಯಿಂದ ಹತ್ತು ಕಿ.ಮೀ. ನಡೆಯಬೇಕು. ನೆಲದಾಳದಲ್ಲಿರಬೇಕಾದ ಜಲ ಇಲ್ಲಿ ಗಿರಿನೆತ್ತಿಗಳ ಮೇಲಿದೆ.

ಎಂತಲೇ ಇಲ್ಲಿನ ಜನ ಇವನ್ನು ಜಲಮೇಲ್ ಗಿರಿಗಳೆಂದು ಕರೆಯುತ್ತಾರೆ; ಆಂಜನೇಯನು ಸಂಜೀವಿನಿ ಪರ್ವತವನ್ನು ತಂದು ತಲೆಕೆಳಗಾಗಿ ಇಟ್ಟುಹೋಗಿದ್ದರಿಂದ ಹೀಗಾಯಿತೆಂದು ಅವರು ನಂಬುತ್ತಾರೆ. ಲಕ್ಷಾಂತರ ವರ್ಷಗಳ ಹಿಂದೆ ಜ್ವಾಲಾಮುಖಿಯ ಪರಿಣಾಮವಾಗಿ ರೂಪುಗೊಂಡ ಇಲ್ಲಿನ ಗಿರಿಗಳ ಜತೆಯಲ್ಲೇ ಈ ಅಬ್ಬಿಗಳೂ ಹುಟ್ಟಿರಬೇಕು.

ಈ ಗಿರಿಗಳಲ್ಲಿ, ಕಪ್ಪನೆಯ ಪರೋಟಗಳನ್ನು ಒಂದರ ಮೇಲೊಂದು ಪೇರಿಸಿಟ್ಟಂತೆ, ಪದರುಶಿಲೆಯ ಬಂಡೆಗಳಿವೆ. ಲಾವಾರಸ ಹೊಮ್ಮಿ ಬೆಂಕಿ ಉಂಡೆಯಂತಾಗಿದ್ದ ಬೆಟ್ಟಗಳು ಈಗ, ಮಳೆಗಾಲದಲ್ಲಿ ಕುಡಿದ ನೀರನ್ನೆಲ್ಲ ಬೇಸಗೆಯಲ್ಲಿ ಕಕ್ಕುತ್ತಿರುವಂತೆ ತೋರುತ್ತವೆ.

ಶೋಲಾ ಕಾಡುಗಳ ಮತ್ತೊಂದು ವಿಶಿಷ್ಟತೆಯೆಂದರೆ, ಅವು ಹಕ್ಕಿಗಳ ತೊಟ್ಟಿಲುಗಳಾಗಿರುವುದು. ಬೆಳಬೆಳಿಗ್ಗೆ ಅಥವಾ ಮುಸ್ಸಂಜೆ ಕೆಮ್ಮಣ್ಣಗುಂಡಿಯಿಂದ ಶಾಂತಿಫಾಲ್ಸಿನ ಕಡೆಯೊ ಬಾಬಾಬುಡನಗಿರಿ ಕಡೆಯೊ ನಡೆದು, ಅಲ್ಲಿನ ಯಾವುದಾದರೂ ಕಣಿವೆಯಲ್ಲಿ ಸದ್ದಿಲ್ಲದೆ ನಿಂತರೆ, ನೂರಾರು ಗಾಯಕರು ಒಟ್ಟಿಗೆ ರಿಯಾಜ್ ಮಾಡುತ್ತಿರುವ ಸಂಗೀತವನ್ನು ಆಲಿಸಬಹುದು. ಕೆಂಪುಕೆನ್ನೆಯ ಬುಲ್‌ಬುಲ್, ಪಿಕಳಾರ, ಕಾಜಾಣ, ಕಾಡುಕೋಳಿ, ಮಂಗಟ್ಟೆಗಳು ಬಗೆಬಗೆಯಲ್ಲಿ ಕೂಕರೆಯುವ ಈ ಶೋಲಾ ಕಣಿವೆಗಳು, ಈ ಸೀಮೆಯ ನವರಸಪುರಗಳು.  

ಪಡುವಣದ ಕೊಡಚಾದ್ರಿ ಕುದುರೆಮುಖಗಳಿಂದ ಆರಂಭವಾಗಿ ಆಗಸಕ್ಕೆ ಗೋಡೆಕಟ್ಟಿದಂತೆ ಅಡ್ಡಹಾಯುತ್ತ ಬರುವ ಸಹ್ಯಾದ್ರಿ ಶ್ರೇಣಿಯು, ಬಯಲು ಪ್ರದೇಶ ಶುರುವಾಗುವ ಕಡೂರು ತರೀಕೆರೆ ಸಖರಾಯಪಟ್ಟಣಗಳ ದಿಕ್ಕಲ್ಲಿ ಇದ್ದಕ್ಕಿದ್ದಂತೆ ಕೊನೆಗೊಳ್ಳುತ್ತದೆ. ಹಾಗೆ ಅದು ಕೊನೆ ಕಂಡಿರುವ ಕಡೆ, ಗುದ್ದಲಿಯಲ್ಲಿ ಗೆಪ್ಪೆಕಡಿದಂತೆ ಆಳವಾದ ಕಮರಿಗಳೂ ನಿಡಿದಾದ ಶಿಖರಗಳೂ ಸೃಷ್ಟಿಯಾಗಿವೆ.

ಕೆಲವು ಕಡೆ ಶಿಖರಗಳು ಹಾವಿನ ಹೆಡೆಯಂತೆ ಸೆಟೆದಿದ್ದು, ಅವನ್ನು ಎದುರು ಬದಿಯಿಂದ ಏರುವುದಕ್ಕೇ ಸಾಧ್ಯವಿಲ್ಲ. ಸದಾ ಮುಗಿಲುಗಳ ಜತೆ ಚಕ್ಕಂದವಾಡುವ ಇವು ಬೈಗುಬೆಳಗುಗಳಲ್ಲಿ ನಾನಾರೂಪ ಧರಿಸಿ ಬಹುರೂಪಿಗಳಾಗುತ್ತವೆ. ಇವುಗಳ ಮೇಲಿಂದ ಕೆಳಗಿನ ಕಾಡು ಬಯಲು ಊರುಗಳನ್ನು ನೋಡಬೇಕು.

ಕೆಮ್ಮಣ್ಣುಗುಂಡಿಯಿಂದ ಲಕ್ಕವಳ್ಳಿಯತ್ತ ನೋಡಿದರೆ, ವಿಶಾಲವಾದ ಬಯಲಲ್ಲಿ ತಣಿಗೆಬಯಲು ಕಾಣುತ್ತದೆ. (ನಿಜವಾಗಿಯೂ ಅದು ಉಣ್ಣುವ ತಣಿಗೆಯಂತೆ ಸಮತಟ್ಟಾಗಿದೆ). ಅಲ್ಲಿಂದ ಮುಂದೆ ನೆಲಕ್ಕೆ ಗಾಜಿನ ಚಪ್ಪಡಿ ಕೂರಿಸಿದಂತೆ ಹೊಳೆವ ಭದ್ರಾ ಅಣೆಯ ಹಿನ್ನೀರು ಕಾಣುವುದು. ಕರ್ನಾಟಕದ ಅತಿಯೆತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿಯಿಂದ ರಾತ್ರಿವೇಳೆ ಚಿಕ್ಕಮಗಳೂರನ್ನು ನೋಡಿದರೆ, ಅದು ಉರಿಯುತ್ತಿರುವ ಪಟ್ಟಣದಂತೆ ತೋರುವುದು.

ಬಾಬಾಬುಡನಗಿರಿಯ ಮಾಣಿಕ್ಯಧಾರೆ ಕಡೆಯಿಂದ ಸಖರಾಯಪಟ್ಟಣ ದಿಕ್ಕನ್ನು ಕಂಡರೆ, ಪಾತಾಳದಲ್ಲಿರುವ ತೋಟ ತುಡಿಕೆ ಕೆರೆಗಳು ಚಿತ್ರ ಬರೆದಂತೆ ಕಾಣುವವು.  
ಈ ಭಾಗದಲ್ಲಿ ಖಾನ್ ಎಂದು ಕೊನೆಗೊಳ್ಳುವ- ದೂಪದಖಾನ್, ಎಮ್ಮೆಖಾನ್, ಹೊಗರೆಖಾನ್, ಸಂಪಿಗೆಖಾನ್- ಹಲವಾರು ಜಾಗಗಳಿವೆ. ವಾಸ್ತವವಾಗಿ ಇವು  ಕಾನು(ಕಾಡು)ಗಳು. ಜನ ಸಸ್ಯ ಪ್ರಾಣಿಗಳ ಆಧಾರದಲ್ಲಿ ಕಾಡುಗಳಿಗೆ ಬೇರೆಬೇರೆ ಹೆಸರು ಕಟ್ಟಿರುವಂತಿದೆ.

ನಾವು ಚಿಕ್ಕವರಿರುತ್ತ, ಚಿಕ್ಕಮಗಳೂರು ರಸ್ತೆಯಲ್ಲಿ ಸಾಗಿ, ಸಂತವೇರಿ ಬಳಿಕ ಸಿಗುವ ಎಮ್ಮೆಕಾನಿನಲ್ಲಿ ಇಳಿದು, ಕಾಡಿನಲ್ಲಿ ನಡೆಯುತ್ತ, ಎಸ್ಟೇಟು ದಾರಿಯಲ್ಲಿ ಸಿಗುವ ಚಕೋತ ಹಣ್ಣುಗಳನ್ನು ತಿನ್ನುತ್ತ, ಹಲಸಬಾಳು ಕಡೆ ಇರುವ ಕಡಿದಾದ ಬೆನ್ನೇರಿ, ಬಾಬಾಬುಡನಗಿರಿಗೆ ನಡೆದು ಹೋಗುತ್ತಿದ್ದೆವು.

ಈಗ ಹಾಗೆ ಹೋಗುವ ಉತ್ಸಾಹವೇ ಬಾರದು. ನಮ್ಮ ಮತೀಯ ರಾಜಕಾರಣದ ಆಟದ ಫಲವಾಗಿ, ಎಲ್ಲ ಧರ್ಮದ ಜನರು ಹೋಗುತ್ತಿದ್ದ ಆ ಗಿರಿ ಈಗ ರಗಳೆಯಾಗಿ ಕೂತಿದೆ. ಅಲ್ಲಿ ಕುಸಿದ ಗವಿ, ಅದರ ಮೇಲೆ ಕಟ್ಟಿದ ತಗಡಿನ ಶೆಡ್ಡನ್ನು ಕಂಡು, ಮನಸ್ಸು ಮರುಗುತ್ತದೆ.

ಶೋಲಾ ಕಾಡಿನ ಗಿಡಮರ, ಹಕ್ಕಿ, ತಂಗಾಳಿ, ಅಬ್ಬಿ, ಸೀತಾಳೆದಂಡೆ ಹೂ,ಗಿಡಮೂಲಿಕೆ ಮತ್ತು ಜನರ ದೈವಗಳಿರುವ ಕಾರಣದಿಂದ ಈ ಗಿರಿಗಳುಕರ್ನಾಟಕದಲ್ಲೇ ಅಪೂರ್ವ ಜೀವವೈವಿಧ್ಯದ ತಾಣಗಳಾಗಿವೆ. ನಾವು ಚಾರಣಕ್ಕೆಂದು ದೂರದ ಹಿಮಾಲಯಕ್ಕೆ ಹೋಗುತ್ತೇವೆ. (ನಿಜ, ಹಿಮಾಲಯ ಹಿಮಾಲಯವೇ). ಆದರೆ ನಮ್ಮ ಹಿತ್ತಲಲ್ಲೇ ಇರುವ ಈ ಗಿರಿಗಳನ್ನು ಸರಿಯಾಗಿ ನೋಡಿರುವುದಿಲ್ಲ.

ಒಮ್ಮೆ ಬಾಬಾಬುಡನಗಿರಿಗೆ ಬಂದಿದ್ದ ಗಿರೀಶ್ ಕಾರ್ನಾಡರು, ಈ ಗಿರಿಗಳನ್ನು ನೋಡುತ್ತ ‘ಎಷ್ಟು ಛಂದ ಇವೆಯಲ್ರೀ ಇವು’ ಎಂದು ಮಕ್ಕಳಂತೆ ಸಂಭ್ರಮಪಟ್ಟರು.
ಈ ಗಿರಿ ಮತ್ತು ಶೋಲಾ ಕಾಡುಗಳು ಮೊದಲ ಬಾರಿಗೆ ಬ್ರಿಟೀಶರ ಕಣ್ಣಿಗೆ ಬಿದ್ದವು. ಅದಕ್ಕೆ ಮೂರು ಕಾರಣಗಳಿದ್ದವು. 1. ಕಾಫಿ - ಏಲಕ್ಕಿ ಮೆಣಸಿನ ಬೆಳೆಗೆ ಅನುಕೂಲವಾಗಿರುವ ಇಲ್ಲಿನ ಇಳುಕಲು ಪರಿಸರ. 2. ಈ ಗಿರಿಗಳಲ್ಲಿರುವ ಸಮೃದ್ಧವಾದ ಕಬ್ಬಿಣದ ಅದಿರು. 3. ಬಂಗಲೆ ಕಟ್ಟಿಕೊಂಡು ವಾಸಮಾಡಲು ತಕ್ಕನಾದ ತಂಪುಹವೆ.

ಯೂರೋಪಿಯನ್ನರು ಇಲ್ಲಿನ ಕಾಡನ್ನು ಸವರಿ, ಸಾಮ್ರಾಜ್ಯಗಳಂತಿರುವ ಕಾಫಿ ಎಸ್ಟೇಟುಗಳನ್ನು ಮೊದಲ ಬಾರಿಗೆ ನಿರ್ಮಿಸಿದರು. ಅಂದು ಶೋಲಾಕಾಡುಗಳ ಮೇಲೆ ಶುರುವಾದ ಈ ಎಸ್ಟೇಟು ಸಂಸ್ಕೃತಿಯ ದಾಳಿ, ಇಂದಿಗೂ ನಿಂತಿಲ್ಲ.

ಚಿಕ್ಕಮಗಳೂರಿಂದ ಕಲ್ಹತ್ತಿಗಿರಿಯ ತನಕ  ಕಾಡುಗಳನ್ನು ಸವರಿ, ಹೊಸ ತೋಟಗಳಿಗೆ ಜಾಗಮಾಡುತ್ತಿರುವುದನ್ನು ನೋಡಬಹುದು. ಲಕ್ಕವಳ್ಳಿ ಪಕ್ಕದ ಭದ್ರಾ ಅಭಯಾರಣ್ಯದ ಒಳಗೆ ಈಚೆಗೆ ಯಾರೊ ಮಾಡಿರುವ ದೊಡ್ಡತೋಟ ಕಂಡು ಅವಾಕ್ಕಾದೆ.

ಈ ತೋಟಗಳ ಮಾಲಕರು ಯಾರೊ, ಎಲ್ಲಿದ್ದಾರೊ- ಎಲ್ಲವೂ ಅಗೋಚರ ಮತ್ತು ಅಗಮ್ಯ. ಆದರೆ ತೋಟಗಳಲ್ಲಿ ಕೆಲಸ ಮಾಡುವ ಜನ ಮಾತ್ರ, ನಮ್ಮೂರುಗಳಿಗೆ ಬಂದು, ವಾರಕ್ಕೊಮ್ಮೆ ಸಂತೆ ಮಾಡಿಕೊಂಡು, ಸಿಕ್ಕ ಜೀಪು ಬಸ್ಸುಗಳಲ್ಲಿ ಹತ್ತಿಕೊಂಡು ಹೋಗುವುದನ್ನು ನೋಡಬಹುದು.

ಅವರನ್ನು ನೋಡಿದರೆ, ಬ್ರಿಟೀಶರು ಆಫ್ರಿಕಾ - ಭಾರತಗಳಿಂದ ಕಬ್ಬು ಬಾಳೆ ಬೆಳೆಯುವ ನಡುಗಡ್ಡೆಗಳಿಗೆ ಜನರನ್ನು ತುಂಬಿಕೊಂಡು ಹೋಗಿ ದುಡಿಸಿಕೊಳ್ಳುತ್ತಿದ್ದುದೇ ನೆನಪಾಗುತ್ತದೆ.

ಈ ಶೋಲಾ ಕಾಡುಗಳಲ್ಲಿರುವ ಜೀವರಾಶಿಗಳ ಮಹತ್ವ ತಿಳಿದಿದ್ದವರಲ್ಲಿ ತೇಜಸ್ವಿಯವರೂ ಒಬ್ಬರು. ಸ್ವತಃ ಕಾಫಿ ತೋಟಗಾರರಾದ ಅವರಿಗೆ, ಇಲ್ಲಿನ ಕಾಫಿತೋಟಿಗರೂ ನಾಟಾ ಕಡಿಯುವವರೂ ಮಾಡುತ್ತಿರುವ ಅನಾಹುತದ ಬಗ್ಗೆ ತಿಳಿದಿತ್ತು.

‘ಕಾಡೊಳಗೆ ಜನ ಕಂತ್ರಿನಾಯಿ, ಊರುಕೋಳಿ ಕಟ್ಟಿಕೊಂಡು ಕಾಡೊಳಗೆ ಕೆಮ್ಮುತ್ತಾ ಉಗಿಯುತ್ತಾ ಓಡಾಡಿ ಕಾಡುಮೃಗಗಳ ಸಂತಾನಾಭಿವೃದ್ಧಿಗೆ ಬೇಕಾದ ಏಕಾಂತವನ್ನೇ ಹಾಳುಮಾಡಿದ್ದಾರೆ. ಸಾಕು ಪ್ರಾಣಿಗಳಂತೆಯೇ ಕಾಡುಮೃಗಗಳೂ ಕೂಡ ಮನುಷ್ಯರ ಸಮ್ಮುಖದಲ್ಲೇ ಮರಿಹಾಕಿಕೊಂಡು ಬದುಕುವುದನ್ನು ಕಲಿಯಬೇಕಾಗಿದೆ’ ಎಂದು ಅವರು ವ್ಯಂಗ್ಯವಾಡುತ್ತಿದ್ದರು.

ಆದರೀಗ ಈ ವ್ಯಂಗ್ಯಕ್ಕೂ ಅವಕಾಶವಿಲ್ಲ. ಯಾಕೆಂದರೆ, ಕಾಡುಮೃಗಗಳೇ ಕಡಿಮೆಯಾಗಿವೆ. ಅವುಗಳ ಆಹಾರ ಸರಪಣಿ ಭಗ್ನವಾಗಿದೆ. ಅವು ನಿರಾಳವಾಗಿ ತಿರುಗಾಡುತ್ತಿದ್ದ ಪಥಗಳಿಗೆ, ಗುಡ್ಡಗಳಿಗೇ ಬೇಲಿ ಸುತ್ತಿಕೊಂಡಿರುವ ಎಸ್ಟೇಟುಗಳು ಅಡ್ಡಲಾಗಿವೆ. ಆದರೆ ಕೆಲವು ಭಾಗಗಳನ್ನಾದರೂ ಅಭಯಾರಣ್ಯ ಎಂದು ಘೋಷಿಸಿರುವ ಕಾರಣ, ಅಳಿದುಳಿದಿರುವ ಕಾಡಿನ ಪ್ಯಾಚುಗಳಲ್ಲಿ ಅವು ಜೀವ ಉಳಿಸಿಕೊಂಡಿವೆ.

ಭದ್ರಾವತಿಯಲ್ಲಿ ಕಬ್ಬಿಣ ಕಾರ್ಖಾನೆ (1923) ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಆರಂಭವಾಯಿತಷ್ಟೆ. ಆಗ, ಕೆಮ್ಮಣ್ಣುಗುಂಡಿ ಬೆಟ್ಟಗಳಿಂದ ಅದಿರನ್ನು ಸಾಗಿಸಲು ಏರ್ಪಾಟು ಮಾಡಲಾಯಿತು. ಅದಕ್ಕಾಗಿ ಬ್ರಿಟೀಶರ ಕಂಪನಿಯೊಂದು ಕೆಮ್ಮಣ್ಣುಗುಂಡಿ ಬೆಟ್ಟಗಳ ಮೇಲಿಂದ ತಣಿಗೆ ಬಯಲಿನ ತನಕ ಅದಿರುಕಲ್ಲನ್ನು ನೆಲದಮೇಲೆ ಇಳಿಸಲು ರೋಪ್‌ವೇ ನಿರ್ಮಿಸಿತ್ತು. ಈ ತೊಟ್ಟಿಲುಗಳು ಅದಿರ್ಗಲ್ಲು  ತುಂಬಿಕೊಂಡು ತಣಿಗೆಬಯಲಿಗೆ ಬರುತ್ತಿತ್ತು.

ಅಲ್ಲಿಂದ ಅದಿರು ಚಿಕ್ಕಗೇಜಿನ ರೈಲಿನಲ್ಲಿ ಭದ್ರಾವತಿಗೆ ಹೋಗುತಿತ್ತು. ಈಗ ಇವೆಲ್ಲವೂ  ಇತಿಹಾಸಕ್ಕೆ ಸೇರಿಹೋಗಿವೆ. ಗಣಿಗಾರಿಕೆಯನ್ನು ಸಾರ್ವಜನಿಕ ಉದ್ಯಮಕ್ಕಾಗಿ ಹದ್ದುಬಸ್ತಿನಲ್ಲಿ ನಡೆಸಿದರೆ, ಅಂತಹ ರಣಗಾಯ ಆಗುವುದಿಲ್ಲವೇನೊ? (ಈ ಮಾತನ್ನು ಕುದುರೆಮುಖ ವಿಷಯದಲ್ಲಿ ಹೇಳುವುದಕ್ಕಾಗದು). ಬಳ್ಳಾರಿ ಜಿಲ್ಲೆಯ ಸೊಂಡೂರಿಗೆ ಬಂದಿದ್ದಾಗ ಗಾಂಧಿಯವರು ‘ಇದು ದಕ್ಷಿಣದ ಕಾಶ್ಮೀರ’ವೆಂದು ಕೊಂಡಾಡಿದ್ದರು.

ಆದರೀಗ ಅದು ಗಣಿಗಾರಿಕೆಯಿಂದ ದೊಡ್ಡ ತಿಪ್ಪೆಗುಂಡಿಯಾಗಿದೆ. ಅಲ್ಲಿ ಹುಟ್ಟುವ ನಾರಿಹಳ್ಳವು ಮಳೆಗಾಲದಲ್ಲಿ ಅಕ್ಷರಶಃ ನೆತ್ತರ ಕಾಲುವೆಯಂತೆ ಹರಿಯುತ್ತದೆ. ಇದಕ್ಕೆ ಹೋಲಿಸಿದರೆ ಕೆಮ್ಮಣ್ಣುಗುಂಡಿಯೇ ವಾಸಿ.

ಇಲ್ಲಿ ಅದಿರಿಗಾಗಿ ಕೊರೆದು ಮಾಡಿದ ಗುಂಡಿಗೊಟರುಗಳಲ್ಲಿ ನೀಟಾಗಿ ಗಿಡಮರ ಬೆಳೆಸಿ, ಹೂವಿನ ಗಿಡವಿಟ್ಟು ಗಿರಿಧಾಮ ಮಾಡಿರುವರು. ಹಿಂದಿನಿಂದಲೂ ಸರ್ಕ್ಯೂಟು ಬರುತ್ತಿದ್ದ ಬ್ರಿಟೀಶ್ ಅಧಿಕಾರಿಗಳಿಗೂ ಮೈಸೂರಿನ ಒಡೆಯರಿಗೂ ಇಲ್ಲಿನ ಬಂಗಲೆಗಳಲ್ಲಿ ವಸ್ತಿ ಮಾಡುವುದು ಇಷ್ಟವಾಗಿತ್ತು.

ಈಗಲೂ ಇಲ್ಲಿನ  ಗಿರಿಧಾಮವು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಲ್ಲೇ ಇದೆ. ಆದರೂ ಜನ ಅಚ್ಚಗನ್ನಡದ ಕೆಮ್ಮಣ್ಣುಗುಂಡಿ ಹೆಸರನ್ನೇ ಉಳಿಸಿಕೊಂಡಿದ್ದಾರೆ.
ಕೆಮ್ಮಣ್ಣುಗುಂಡಿ ಬಿಟ್ಟು ಕೊಂಚ ಕೆಳಗಿಳಿದರೆ, ಈ ಗಿರಿಶ್ರೇಣಿಯ ಕೊನೆಯ ತಾಣ ಕಲ್ಹತ್ತಿಗಿರಿ ಸಿಗುತ್ತದೆ. ಇದು ನಮ್ಮ ಸೀಮೆಯ ನೂರಾರು ದೈವಗಳು ಬಂದು ಸೇರುವ ಜಾಗ.

ಹಿಂದೆ ಗಟ್ಟಿಮುಟ್ಟಾದ ಹಳ್ಳಿಯ ತರುಣರು ಅಡ್ಡೆಕಾರರಾಗಿ ದೇವರನ್ನು ಹೊತ್ತು ಬರುತ್ತಿದ್ದರು. ಈಗ ದೇವರು ಪಲ್ಲಕ್ಕಿ ಸಮೇತ ಟ್ಯಾಕ್ಟರುಗಳ ಮೇಲೆ ಆಸೀನವಾಗಿ ಬರುತ್ತಿವೆ. ನಾನು ಹೋದಾಗ ಶಿವನಿ ಕಡೆಯ ರಾಮದೇವರೂ, ಹೊಸದುರ್ಗ ಕಡೆಯ ವೀರಭದ್ರದೇವರೂ ಗಂಗಾಸ್ನಾನಕ್ಕೆ ಬಂದಿದ್ದವು. ಕಲ್ಹತ್ತಿಗಿರಿಯಲ್ಲಿ ಒಂದು ಗುಹಾದೇಗುಲವಿದ್ದು, ಅದರಲ್ಲಿ ವೀರಭದ್ರ ದೇವರಿದೆ.

ಕಲ್ಹತ್ತಿಯ ಅಬ್ಬಿಯಲ್ಲಿ ಮೀಯುತ್ತ ಅದರ ಆಸುಪಾಸಿನ ಹುಟ್ಟುಬಂಡೆಗಳಲ್ಲಿ ಕಡೆದಿರುವ ಮೂರ್ತಿಗಳೂ ಪುರಾತನವಾದ ಶಾಸನಗಳೂ ಇವೆ. ಇಲ್ಲಿನ ಗುಹೆ, ಶಾಸನ, ಭೈರವ ಮೂರ್ತಿಗಳನ್ನು ನೋಡಿದರೆ, ಯಾವುದೊ ಶೈವಪಂಥವೊಂದು ಇಲ್ಲಿದ್ದಿರಬಹುದು ಅನಿಸುತ್ತದೆ. ಅಧ್ಯಯನ ಮಾಡಬೇಕು. 

ಹಾಗೆ ನೋಡಿದರೆ, ಕಲ್ಹತ್ತಿಗಿರಿ ಮತ್ತು ಕೆಮ್ಮಣ್ಣು ಗುಂಡಿಗಳು, ಎರಡು ವಿಭಿನ್ನ ಸಂಸ್ಕೃತಿಗಳನ್ನು ಸಂಕೇತಿಸುವ ತಾಣಗಳಂತೆ ತೋರುತ್ತವೆ. ಕಲ್ಹತ್ತಿಗಿರಿಯಲ್ಲಿ ಹಳ್ಳಿಗಾಡಿನ ರೈತಾಪಿ ಜನರು, ಊರಿಂದ ಕಟ್ಟಿತಂದ ಬುತ್ತಿತಿಂದು, ದೇವರುಗಳನ್ನು ಮೀಯಿಸಿ, ತಾವೂ ಮಿಂದು ಹೋಗುತ್ತಾರೆ. ಇಲ್ಲಿನ ವೀರಭದ್ರದೇವರು ಸಶಸ್ತ್ರ ಯೋಧನಾದರೂ ಅವನಿಗೆ ಕಡಲೆಹಿಟ್ಟು ಬೆಲ್ಲ ಹಾಕಿದ ತಂಬಿಟ್ಟು ಪ್ರಸಾದ; ಆದರೆ ಅಲ್ಲೇ ತುಸು ದೂರದಲ್ಲಿ ‘ತಿನ್ನುಣ್ಣುವ’ ಜನರಿಗಾಗಿ ಚೌಡಮ್ಮನೂ ಇದ್ದಾಳೆ.

ಅವಳಿಗೆ ಕೋಳಿಬಲಿ. ಕಲ್ಹತ್ತಿಗಿರಿಯಲ್ಲಿ ಒಣಗಿದ ಹೂಮಾಲೆ, ಒಡೆದ ಕಾಯಿಯ ಚಿಪ್ಪು, ಬಾಳೆಹಣ್ಣಿನ ಸಿಪ್ಪೆ, ಬಾಳೆಕಂದು, ಅಡಿಕೆಯ ಸಿಂಗಾರ ಎಲ್ಲವೂ ಅಬ್ಬಿಯ ನೀರಲ್ಲಿ ಬಿದ್ದು ಕಸದ ರಾಶಿಯೇ ಸೃಷ್ಟಿಯಾಗಿದೆ. ಇದಕ್ಕೆ ಹೋಲಿಸಿದರೆ ಕೆಮ್ಮಣ್ಣುಗುಂಡಿ ತೋಟಗಾರಿಕೆ ಇಲಾಖೆಯ ಸುಪರ್ದಿನಲ್ಲಿ ಸ್ವಚ್ಛವಾಗಿರುವ ನಂದನವನ.

ಆದರೆ ಅಲ್ಲಿಗೆ ಹಳ್ಳಿಯ ಜನ ಹೋಗುವುದು ಕಡಿಮೆ. ಅಲ್ಲಿ ಜನರ ದೈವಗಳೂ ಇಲ್ಲ. ಅಲ್ಲಿಗೆ ದೂರದಿಂದ ಮಧ್ಯಮ ವರ್ಗದ ಜನ ಟೂರಿಸ್ಟರಾಗಿ ಕಾರುಗಳಲ್ಲಿ ಬರುತ್ತಾರೆ. ಬೆಚ್ಚನೆಯ ವಸತಿಗೃಹಗಳಲ್ಲಿ ಉಳಿದು, ಅಲ್ಲಿನ ತಂಗಾಳಿಯನ್ನು ಕೊಂಡಾಡುತ್ತ, ತಮ್ಮೂರ ಬಿಸಿಲನ್ನು ಬೈಯುತ್ತ, ನೀಟಾಗಿ ಕತ್ತರಿಸಿದ ಹುಲ್ಲುಹಾಸಿನಲ್ಲಿ ಬಗೆಬಗೆಯ ಹೂಗಿಡಗಳ ನಡುವೆ ಓಡಾಡಿಕೊಂಡು, ಸೂರ್ಯಾಸ್ತದ ಫೋಟೊ ತೆಗೆಯುತ್ತ ಸುಖ ಅನುಭವಿಸುತ್ತಾರೆ.

ಈ ಭಾಗದ ರಾಜಕಾರಣಿಗಳು ಅವರ ಹಿಂಬಾಲಕರು ಮತ್ತು ಅಧಿಕಾರಿಗಳು ಸಹ, ತಮ್ಮ ಮೇಜುವಾನಿ ಕೂಟಗಳಿಗೆ ಈ ಗಿರಿಧಾಮಕ್ಕೆ ಬರುವುದುಂಟು. ಒಟ್ಟಿನಲ್ಲಿ ಇದೊಂದು ಭೋಗಭೂಮಿ. ಇದಕ್ಕೆ ತಕ್ಕಂತೆ ಆಧುನಿಕ ದೇವತೆಗಳಂತಿರುವ ಸಿನಿಮಾ ನಟನಟಿಯರು ಆಗಾಗ್ಗೆ ಇಲ್ಲಿಗೆ ಇಳಿಯುತ್ತಾರೆ. ಕನ್ನಡ ಸಿನಿಮಾಗಳ ಬಹುತೇಕ ಪ್ರೇಮದೃಶ್ಯದ ಹಾಡುಗಳ ಚಿತ್ರೀಕರಣ ನಡೆದಿರುವುದು ಈ ಶೋಲಾ ಕಾಡುಗಳಲ್ಲಿಯೇ.

ಒಂದೆಡೆ ಅಲೌಕಿಕತೆಯ ಜತೆಗೂಡಿದ ಗ್ರಾಮೀಣ ಧಾರ್ಮಿಕತೆ, ಕಸ, ಗೌಜು, ಭಕ್ತಿ; ಇನ್ನೊಂದೆಡೆ ಟೂರಿಸ್ಟು ಗಳಿಗಾಗಿಯೇ ಮಾಡಿದ ಅಚ್ಚುಕಟ್ಟುತನ, ನೀರವತೆ, ಕೃತಕವಾಗಿ ನಿರ್ಮಿಸಿದ ಚೆಲುವು, ಸುವ್ಯವಸ್ಥೆ. ಎರಡು ಜಗತ್ತುಗಳೂ ನಮ್ಮ ತಾಲೂಕಿನ ಹವಾಮಾನದಂತೆ, ನಮ್ಮ ಬಾಳಿನ ಎರಡು ಮುಖಗಳಂತೆ ಜತೆಯಲ್ಲೇ ಇವೆ.

ಶೋಲಾಕಾಡುಗಳಲ್ಲಿ ಓಡಾಡಿ ಹಿತವಾದ, ಆದರೆ ಹರುಕಾದ ನೆನಪುಗಳನ್ನು ತುಂಬಿಕೊಂಡು, ಮರಳಿ ಹೊಸಪೇಟೆಗೆ ಬಂದೆ. ಬಂದೊಡನೆ ಇಲ್ಲಿ ಮತ್ತವೇ ಭಗ್ನಗಿರಿಗಳು ಕಂಡು ಕಂಗಾಲು ಮಾಡಿದವು. ಅದರಲ್ಲೂ ನಮ್ಮ ಮನೆಯ ಬಾಗಿಲು ತೆಗೆದರೆ ಕಾಣುವುದು, ಗಣಿಗಾರಿಕೆಯ ಹೊಡೆತಕ್ಕೆ ವಿರೂಪಗೊಂಡಿರುವ ಜಂಬುನಾಥನ ಬೆಟ್ಟವೇ.

ಈ ಬೆಟ್ಟದಲ್ಲಿರುವ ಪ್ರಾಚೀನ ಜಂಬುನಾಥನ ಗುಡಿ ಬದಿಯಲ್ಲಿ ಸದಾ ಜಲವೊಸರುವ ಚಿಲುಮೆಯಿದೆ. ಅದು ನಿಧಾನವಾಗಿ ಬತ್ತುತ್ತಿದೆ. ಸೊಂಡೂರಿನ ಕುಮಾರಸ್ವಾಮಿ ಬೆಟ್ಟದಲ್ಲಿ ಶತಮಾನಗಳಿಂದ ಹರಿಯುತ್ತಿದ್ದ ಹರಿಶಂಕರ ಅಬ್ಬಿಯು ಈಗ ಬತ್ತಿಹೋಗಿದ್ದರೆ ಆಶ್ಚರ್ಯವಿಲ್ಲ. ಕಾರಣ, ಸೊಂಡೂರು ಬೆಟ್ಟಗಳು ಅಕ್ಷರಶಃ ಫುಕುಶಿಮಾ ಆಗಿವೆ.

ನಮ್ಮ ನಾಡಿನ ಸಮಸ್ತರ ಹಕ್ಕಿಗೆ ಸೇರಿರುವ ಈ ಗಿರಿ ಕಾನು ಹೊಳೆಗಳು ಯಾಕೆ ಕೆಲವೇ ಬಲಿಷ್ಠರ ಎಸ್ಟೇಟು, ಮೈನಿಂಗ್ ಸೈಟುಗಳಾಗಿ, ರಾಜಕಾರಣಿಗಳ ಪ್ರಯೋಗಶಾಲೆಗಳಾಗಿ ಬದಲಾಗುತ್ತಿವೆ? ಇದರ ಉತ್ತರ ಯಾರಿಗೆ ತಾನೇ ಗೊತ್ತಿಲ್ಲ? ಉತ್ತರ ಗೊತ್ತಿದ್ದೂ ಏನೂ ಮಾಡಲಾಗದ ಸ್ಥಿತಿ ನಮ್ಮೆಲ್ಲರ ದುರವಸ್ಥೆಯಾಗಿದೆ.

ಪಶ್ಚಿಮಘಟ್ಟದ ವಿಶಿಷ್ಟ ಕಾಡುಹಾದಿಗಳಲ್ಲಿ ಕೈಹಿಡಿದು ನಡೆಸುತ್ತ, ಹಸಿರಿನ ನಡುವೆ ಮೂಡಿದ ಬೆಳ್ಳಿಗೆರೆ ತೊರೆಗಳೊಂದಿಗೆ ಹೆಜ್ಜೆಗೊಂದು ವಿಸ್ಮಯ ಕಾಣಿಸುತ್ತ, ಹಕ್ಕಿಗೀತ ಕೇಳಿಸುತ್ತ ಸಾಗುವ ಈ ಬರಹ- ಓದುಗರನ್ನು ಒಮ್ಮೆಗೇ ಆಧುನಿಕತೆಯ ವ್ಯಸನಗಳ ಬಟಾಬಯಲಲ್ಲಿ ತಂದು ನಿಲ್ಲಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT