ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಸೌಕರ್ಯಕ್ಕೂ ಜನತೆ ಬೀದಿಗಿಳಿಯಬೇಕೆ?

Last Updated 29 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗ್ರಾಮ ಪಂಚಾಯ್ತಿ ವತಿಯಿಂದಲೇ ಸಮುದಾಯ ಶೌಚಾಲಯ ಕಟ್ಟಿ ಕೊಡಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮಲಪನ ಗುಡಿ ಗ್ರಾಮಸ್ಥರು ರಸ್ತೆ ತಡೆ ಚಳವಳಿ ಮೂಲಕ ಇತ್ತೀಚೆಗೆ  ಪ್ರತಿಭಟಿಸಿದ್ದರು. ಗ್ರಾಮದಲ್ಲಿದ್ದ ಸಮುದಾಯ ಶೌಚಾಲಯವನ್ನು ಕೆಡುವಿ ಹಾಕಿದ್ದರಿಂದ ಜನರಿಗೆ ಪ್ರತಿಭಟನೆ ಮಾಡದೇ ಬೇರೆ ದಾರಿ ಇರಲಿಲ್ಲ.  ತಮ್ಮ ಕಷ್ಟವನ್ನು ಹೇಳಿಕೊಳ್ಳಲು, ಸರ್ಕಾರದ ಗಮನಸೆಳೆಯಲು ಇಂಥ ಪ್ರತಿಭಟನೆಯ ಅಗತ್ಯವಿತ್ತು. ಗ್ರಾಮ ದಲ್ಲಿದ್ದ ಸಮುದಾಯ ಶೌಚಾಲಯ ಜನರ  ದೊಡ್ಡ ಸಮಸ್ಯೆಯನ್ನು ನಿವಾರಿಸಿತ್ತು. ಜನರೂ ಈ ವ್ಯವಸ್ಥೆಗೆ ಒಗ್ಗಿಕೊಂಡಿದ್ದರು. ಆದರೆ ಕಟ್ಟಡ ವನ್ನು ಕೆಡುವಿದ್ದರಿಂದ ಜನರು ಮತ್ತೆ ಬಯಲಿನತ್ತ ಮುಖಮಾಡಬೇಕಾಯಿತು. ಇದು ಒಂದು ಮಲಪನ­ಗುಡಿಯ ಸ್ಥಿತಿಯಲ್ಲ. ಒಂದು ರೀತಿ­ಯಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇ­ಶದ ಜನರ ಪ್ರತಿನಿತ್ಯದ ಗೋಳು ಎಂದೇ ಹೇಳಬಹುದು.

ಉತ್ತರ ಕರ್ನಾಟಕದಲ್ಲಿ ಶೌಚಾಲಯ ಬಳಕೆ ಬಗ್ಗೆ ಅಷ್ಟಾಗಿ ಇನ್ನೂ  ಜನರಲ್ಲಿ ಅರಿವಿಲ್ಲ. ನಗರ–­ಪಟ್ಟಣಗಳಲ್ಲಿ  ಉತ್ತಮ ಸ್ಥಿತಿಯ ಮನೆ­ಗಳಿದ್ದರೂ ಶೌಚಾಲಯವನ್ನು ಕಟ್ಟಿಕೊಂಡಿರುವು­ದಿಲ್ಲ. ಅದರ ಅಗತ್ಯವಿದೆ ಎಂದೇ ಅವರಿಗೆ ಅನಿಸು­ವುದಿಲ್ಲ. ಭಾರತೀಯ ಜೀವವಿಮಾ ನಿಗಮದಲ್ಲಿ ಕೆಲಸದಲ್ಲಿರುವ ದಕ್ಷಿಣ ಕನ್ನಡ ಮೂಲದ ಸ್ನೇಹಿತರೊಬ್ಬರು ಕೆಲ ವರ್ಷಗಳ ಹಿಂದೆ ಜಮ­ಖಂಡಿಗೆ ವರ್ಗವಾದಾಗ ಅಲ್ಲಿ ಹೊಸ ಮನೆ­ಯನ್ನು ನೋಡಿ ಬಾಡಿಗೆಗೆ ಹಿಡಿಯಲು ಇಚ್ಛಿಸಿದರು. ಮನೆ ಪೂರ್ತಿ ಸುತ್ತು ಹಾಕಿದರೂ ಶೌಚಾಲಯ ಕಾಣಿಸಲಿಲ್ಲ. ಹೌಹಾರಿದ ಅವರು ಮಾಲೀಕರನ್ನು ಕೇಳಿದರೆ, ‘ಅದು ಅನಿಷ್ಟರೀ... ನಾವು ಬಯಲಿಗೇ ಹೋಗೋದು’ ಎಂದು ವಿಸ್ತಾರವಾದ ಹೊಲದತ್ತ ಕೈ ತೋರಿಸಿದ್ದರಂತೆ. ‘ಶೌಚಾಲಯ ಕಟ್ಟಿಸಿಕೊಟ್ಟರೆ ಮನೆಗೆ ಬಾಡಿಗೆಗೆ ಬರುತ್ತೇವೆ, ಇಲ್ಲದಿದ್ದರೆ ಬೇಡ’ ಎಂದಾಗ ಮಾಲೀಕ ಒಪ್ಪಿ, ಕಟ್ಟಿಸಿಕೊಟ್ಟಿದ್ದರು. ಅಂದರೆ ಈ ಭಾಗದಲ್ಲಿ ಜನರು ತಮ್ಮ ಆರೋಗ್ಯಕ್ಕಿಂತ ಹೆಚ್ಚಾಗಿ ನಂಬಿಕೆಗಳಿಗೇ ಒತ್ತು ನೀಡುತ್ತಾರೆ.

ದಿನಿನಿತ್ಯವೂ ಬಹಿರ್ದೆಸೆಗೆ ಬಯಲಿಗೆ ಹೋಗು­ವುದು ನಾನಾ ರೋಗ–ರುಜಿನಗಳಿಗೆ ಕಾರಣ­ವಾಗುತ್ತದೆ. ಮಕ್ಕಳು ಮತ್ತು ಮಹಿಳೆಯರು ಹೆಚ್ಚಾಗಿ ತೊಂದರೆಗೆ ಒಳಗಾಗುತ್ತಿದ್ದಾರೆ. ಆದರೂ ಹುಬ್ಬಳ್ಳಿ ಸೇರಿದಂತೆ ಕೆಲ ಪ್ರಮುಖ ನಗರ–ಪಟ್ಟಣಗಳಲ್ಲೂ ಈಗಲೂ ಜನರು ಬಯ­ಲು ಶೌಚಾಲಯವನ್ನೇ ಆಶ್ರಯಿಸಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಇದು ಜನರಲ್ಲಿ ಅರಿವು ಮೂಡಿಸುವ ಮತ್ತು ಸೌಕರ್ಯ ಕಲ್ಪಿಸಿಕೊಡುವ ಕೆಲಸ ಆಗಿಲ್ಲ ಎಂಬುದನ್ನು ಸಾರುತ್ತದೆ.

ಗ್ರಾಮೀಣ ಪ್ರದೇಶದಲ್ಲಿನ ಹೆಣ್ಣುಮಕ್ಕಳ ಸ್ಥಿತಿಯಂತೂ ಶೋಚನೀಯವಾಗಿದೆ. ಬೆಳಕು ಹರಿಯುವ ಮುನ್ನ, ಸಂಜೆ ಕತ್ತಲಾವರಿಸು­ತ್ತದ್ದಂತೆ ಹೆಣ್ಣುಮಕ್ಕಳು ತಂಬಿಗೆ ಹಿಡಿದುಕೊಂಡು ಊರಿನ ಹೊರಗಿನ ಬಯಲಿಗೆ ಹೋಗುತ್ತಾರೆ. ಯಾರಾದರೂ ಅತ್ತ ಕಡೆ ಹಾಯ್ದರೆ ಧಡ್ಡನೇ ಎದ್ದು ನಿಲ್ಲುವ ಸ್ಥಿತಿ! ಹಗಲು ಹೊತ್ತಿನಲ್ಲಿ ಅವರಿಗೆ ಶೌಚಕ್ಕೆ ಹೋಗುವುದು ಆಗದ ಕೆಲಸ. ಇನ್ನು ಹಂದಿ, ನಾಯಿ ಅವುಗಳ ದಾಳಿಯಿಂದ ತಪ್ಪಿಸಿಕೊಂಡು ನಿರಾತಂಕವಾಗಿ ಶೌಚಕ್ರಿಯೆ ಮುಗಿಸಬೇಕೆಂದರೆ ಕೈಯಲ್ಲೊಂದು ಕೋಲು ಹಿಡಿದು ಇಲ್ಲವೇ ಕೂಡುವ ಸ್ಥಳದಲ್ಲಿ ಬೊಗಸೆ ಕಲ್ಲುಗಳನ್ನು ರಾಶಿ ಹಾಕಿಕೊಂಡು ಕುಳಿತುಕೊಳ್ಳ­ಬೇಕಾದ ಸ್ಥಿತಿಯೂ ಇದೆ. ‘ಹಂದಿ ಕಚ್ಚಿ ಮಗು­ವಿಗೆ ಗಾಯ’ ಎಂಬ ವರದಿಗಳು ಪ್ರಕಟವಾಗು­ವುದು ಇಂಥ ಪ್ರದೇಶಗಳಿಂದಲೇ!

ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷಗಳು ಕಳೆದರೂ ನಾಗರಿಕರಿಗೆ ಅತಿ ಅಗತ್ಯವಾದ ಕುಡಿವ ನೀರು, ಶೌಚಾಲಯವನ್ನು ಒದಗಿಸಲೂ ಇದು­ವರೆಗೆ ಆಳಿದ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಸರ್ಕಾರದ ಪ್ರಥಮ ಆದ್ಯತೆಯೇ ಇದಾಗ­ಬೇಕಿತ್ತು. ಹಳ್ಳಿಗಳಲ್ಲಿ ಕಿಷ್ಕಿಂಧೆಯಂತಹ ಪುಟ್ಟ–ಪುಟ್ಟ ಮನೆಗಳಲ್ಲಿ ಅಥವಾ ಗುಡಿಸಿಲುಗಳಲ್ಲಿ ವಾಸಿಸುವ ಜನರಿಗೆ ಶೌಚಾಲಯ ಕಟ್ಟಿಕೊಳ್ಳಲು  ಜಾಗವೇ ಇರುವುದಿಲ್ಲ. ಇಂಥ ಜನರ ಗೌರವ, ಮಾನ ಕಾಪಾಡಲು ಸರ್ಕಾರವೇ ಜನಸಂಖ್ಯೆಗೆ ಅನುಗುಣವಾಗಿ ಸಮುದಾಯ ಶೌಚಾಲಯ­ಗಳನ್ನು ನಿರ್ಮಿಸಬೇಕು. ಇದು ಅತಿ ಅಗತ್ಯವಾದ ಕೆಲಸ. ಇವು ನೀರಿನ ಲಭ್ಯತೆ ಚೆನ್ನಾಗಿರುವ ಕಡೆಗೆ ಮಾತ್ರ ಸೀಮಿತ. ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಒಣಶೌಚಾಲಯಗಳನ್ನು ಕಟ್ಟಿಸಿ­ಕೊಡಬೇಕು.

ಕುಡಿಯುವ ನೀರಿಗೇ ಪರದಾಡು­ವಾಗ ಇನ್ನು ದಂಡಿಯಾಗಿ ನೀರು ಸುರಿದು ಸ್ವಚ್ಛಗೊಳಿಸುವುದು ಸಾಧ್ಯವಿಲ್ಲದ ಮಾತು. ಸಮುದಾಯ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗದಿದ್ದರೆ ದುರ್ನಾತ ಹರಡುತ್ತದೆ. ಹಾಗಾಗಿ ಒಣ ಶೌಚಾಲಯ ನಿರ್ಮಿಸಿ, ಮಲ ಮತ್ತು ಮೂತ್ರವನ್ನು  ಪ್ರತ್ಯೇಕವಾಗಿ ಸಂಗ್ರಹಿ­ಸುವ ವ್ಯವಸ್ಥೆ ಮಾಡಬೇಕು. ಒಣ ಮಲವನ್ನು ಮಿಶ್ರಗೊಬ್ಬರವಾಗಿ ಪರಿವರ್ತಿಸಿ ಕೃಷಿಗೆ ಬಳಸ­ಬಹುದು. ಮೂತ್ರದಲ್ಲೂ ಗೊಬ್ಬರದ ಗುಣ­ವಿದೆ. ಅದನ್ನೂ ಕೃಷಿಗೆ ಬಳಕೆ ಮಾಡಿಕೊಳ್ಳ­ಬಹುದು. ಈ ಮೂಲಕ ಮಲ ಯಾವುದೇ ರೂಪದ ಜಲ ಮೂಲದಲ್ಲಿ ಸೇರದಂತೆ ನೋಡಿ­ಕೊಳ್ಳಬೇಕು. ಇದು ನಿರ್ಮಲೀಕರಣದ ಮೂಲ­ಮಂತ್ರ. ಆದರೆ ಸ್ವಚ್ಛತೆ ಕಾಪಾಡುವ ವಿಷಯ­ದಲ್ಲಿ ಕಾಯ್ದೆಯನ್ನು ಮೀರಬಾರದು. ಸಮು­ದಾಯ ಶೌಚಾಲಯಗಳ ಸ್ವಚ್ಛತೆ ವಿಷಯ­ದಲ್ಲೂ ಎಚ್ಚರ ವಹಿಸಬೇಕು.

ಜತೆಗೆ ಜನರಲ್ಲಿ ಆರೋಗ್ಯ ಮತ್ತು ನೈರ್ಮ­ಲ್ಯದ ಬಗ್ಗೆ ಅರಿವು ಮೂಡಿಸಿ ಶೌಚಾಲಯ ಬಳಕೆ ಬಗ್ಗೆ ತಿಳಿವಳಿಕೆ ನೀಡಬೇಕು. ಇತ್ತೀಚೆಗೆ ಸರ್ಕಾರ ಕೂಡ ಪ್ರತಿ ಮನೆಗೂ ಒಂದು ಶೌಚಾಲಯ ನಿರ್ಮಾಣಕ್ಕೇ ಹೆಚ್ಚು ಒತ್ತು ನೀಡುತ್ತಿದೆ. ಇದು ಒಳ್ಳೆ­ಯದೇ. ಸ್ವಚ್ಛವಾಗಿ ಇಟ್ಟುಕೊಳ್ಳಲೂ ಅನು­ಕೂಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟಿಗಟ್ಟಲೆ ಹಣವನ್ನು ಕಕ್ಕಸುಗಳನ್ನು ಕಟ್ಟಿಸಿ­ಕೊಡುವುದಕ್ಕೆ ಸುರಿದಿವೆ. 2025ರ ವೇಳೆಗೆ ಬಯಲು ಶೌಚಾಲಯ ಮುಕ್ತ ಭಾರತ ನಿರ್ಮಾಣದ ಗುರಿ ಇಟ್ಟುಕೊಂಡು ಸರ್ಕಾರ ಇಷ್ಟೊಂದು ಹಣ ವಿನಿಯೋಗಿಸಿದೆ. ಆದರೆ ಆ ಪ್ರಕಾರ ಸೌಲಭ್ಯ ಮಾತ್ರ ಜನರಿಗೆ ಸಿಕ್ಕಿಲ್ಲ.

ಅಂಕಿ–ಸಂಖ್ಯೆಗಳೆಲ್ಲವೂ ಕಾಗದಗಳಲ್ಲಿದೆ. ವಾಸ್ತವದಲ್ಲಿ ಅಷ್ಟು ಸಂಖ್ಯೆಯ ಕಕ್ಕಸು ಕೋಣೆಗಳ ನಿರ್ಮಾಣ­ವೇ ಆಗಿಲ್ಲ. ಒಂದು ಕಡೆ ಕಟ್ಟಿದ ಶೌಚಾಲಯದ ಮುಂದೆಯೇ ಬೇರೆ ಬೇರೆ ಜನರನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸಿ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಪರಿಪಾಠವಿದೆ. ಹಾಗಾಗಿ ವಾಸ್ತವಕ್ಕೂ, ಅಂಕಿ–ಅಂಶಗಳಿಗೂ ತಾಳೆಯಾಗುತ್ತಿಲ್ಲ ಅಷ್ಟೇ. ಗದಗ, ಬಾಗಲಕೋಟೆ, ವಿಜಾಪುರ, ಬಳ್ಳಾರಿ ಮೊದ­ಲಾದ ಭಾಗಗಳಲ್ಲಿ ಅಲ್ಲಿನ ಶೌಚ ಕೊಠಡಿಗಳು ಕುಳ್ಳು–ಕಟ್ಟಿಗೆಗಳನ್ನು (ಉರುವಲು) ಒಟ್ಟುವ ಸ್ಟೋರ್ ರೂಂ ಆಗಿ ರೂಪಾಂತರಗೊಂಡಿವೆ. ಕಟ್ಟಿಸಿದ ಶೌಚಾಲಯಗಳಿಗೆ ಅಗತ್ಯವಾದ ನೀರಿನ ಲಭ್ಯತೆ ಇಲ್ಲದೇ ಇರುವುದು ಕೂಡ ಅವು ಬಳಕೆಯಾಗದಿರುವುದಕ್ಕೆ ಕಾರಣ.

ಭಾರತ ನಿರ್ಮಲ ಅಭಿಯಾನ ಯೋಜನೆ ಜಾರಿಯಲ್ಲೇನೋ ಇದೆ. ಆದರೆ ಯೋಜನೆಯ ಅನುಷ್ಠಾನ ಪ್ರಾಮಾಣಿಕವಾಗಿಲ್ಲ. ಸರ್ಕಾರ ಇಂಥ ಯೋಜನೆಗಳಿಗೆ ಒಂದು ಆಂದೋಲನದ ರೂಪ ಕೊಡಬೇಕು. ಗ್ರಾಮ ಪಂಚಾಯ್ತಿಗಳಿಗೆ ಈ ಕುರಿತು ಸ್ಪಷ್ಟ ಸೂಚನೆ, ಸಮರ್ಪಕ ಅನು­ದಾನ ಒದಗಿಸಬೇಕು. ಬಹಿರ್ದೆಸೆಗೆ ಬಯಲಿಗೆ ಹೋಗಬಾರದು ಎಂಬುದನ್ನು ವಿಶೇಷ ಶಿಬಿರಗಳ ಮೂಲಕ ಗ್ರಾಮಗಳಲ್ಲಿ ಶೌಚ–ಶಿಕ್ಷಣ ನೀಡ­ಬೇಕು. ಇದು ಮಾನ–ಮರ್ಯಾದೆ ಪ್ರಶ್ನೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳು ಕತ್ತ­ಲಾದ ಮೇಲೆ ರಸ್ತೆ ಬದಿಯಲ್ಲೋ ಅಥವಾ ಹೊಲ­ಗಳಿಗೋ ಶೌಚಕ್ಕೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಇದು ಅಪಾಯ­ಕಾರಿ ಕೂಡ. ಇಷ್ಟು ವರ್ಷವಾದರೂ ಅವರಿಗೆ ಕನಿಷ್ಠ ಘನತೆಯನ್ನು ಕಾಪಾಡಿಕೊಳ್ಳುವ ಅವ­ಕಾಶ­ವನ್ನೂ ಮಾಡಿಕೊಟ್ಟಿಲ್ಲದಿರುವುದು ಸರಿ­ಯಲ್ಲ. ಮಳೆಗಾಲದಲ್ಲಿ ಅವರ ಕಥೆ ಏನಾಗಬೇಕು?

ದೇಶದ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್‌ ಅಧ್ಯಕ್ಷರಾಗಿ ಮಹಿಳೆಯರೇ ಕಾರ್ಯನಿರ್ವಹಿಸಿದ್ದಾರೆ. ಈ ಪಕ್ಷವೇ ದೇಶದಲ್ಲಿ ಹೆಚ್ಚು ಕಾಲ ಆಡಳಿತ ನಡೆಸಿದೆ ಆದರೂ ಗ್ರಾಮೀಣ ಪ್ರದೇಶದ ಮಹಿಳೆಯರ ಕನಿಷ್ಠ ಸಂಕಷ್ಟವನ್ನೂ ನಿವಾರಿಸಲು ಆಗಿಲ್ಲ.

ಮಲಪನಗುಡಿಯಲ್ಲಿ ನಡೆದಿರುವ ಪ್ರತಿಭಟನೆ ಅಥವಾ ರಸ್ತೆ ತಡೆ ಸಾಂಕೇತಿಕವಾಗಿರಬಹುದು. ನಂತರ ಅಲ್ಲಿನ ಜನರೂ ಮರೆತೋ ಅಥವಾ ಏನು ಮಾಡಿದರೂ ಇಷ್ಟೇ ಎಂಬ ಭಾವನೆಯಿಂದ ಸುಮ್ಮನಾಗಿರಬಹುದು. ಜನರು ಬೀದಿಗಿಳಿದು ಹೋರಾಟ ಮಾಡುವುದಕ್ಕೆ ಮೊದಲೇ ಗ್ರಾಮ ಪಂಚಾಯ್ತಿ ಪರ್ಯಾಯ ವ್ಯವಸ್ಥೆ ಮಾಡ­ಬೇಕಿತ್ತು. ಆದರೆ ಆ ಕೆಲಸ ಆಗಿಯೇ ಇಲ್ಲ. ಶೌಚಾಲಯ ಸೌಕರ್ಯಕ್ಕೂ ಜನರು ಬೀದಿ­ಗಿಳಿದು ಹೋರಾಟ ಮಾಡಬೇಕಾದ ವಾತಾ­ವರಣ ನಾಚಿಕೆಗೇಡಿನ ಸಂಗತಿ. ಮುಂದೊಂದು ದಿನ ಇಂಥ ವಿಷಯಗಳೇ ದೊಡ್ಡ ಪ್ರಮಾಣದ ಚಳವಳಿಗೆ ಕಾರಣವಾಗಬಹುದು.

ರ್ಕಾರ ಈಗಲೇ ಎಚ್ಚೆತ್ತುಕೊಂಡು ಕನಿಷ್ಠ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು. ದೇಶದ ಪ್ರತಿಯೊಬ್ಬರೂ ಶೌಚಾಲಯ ಬಳಸು­ವಂತಹ ವಾತಾವರಣ ನಿರ್ಮಾಣವಾದ ದಿನ ಈ ದೇಶ ಅಭಿವೃದ್ಧಿಯ ತುತ್ತತುದಿಯನ್ನು ಏರುತ್ತದೆ ಎಂದು ಜವಾಹರಲಾಲ್‌ ನೆಹರೂ ಹೇಳಿದ್ದರು. ಇದನ್ನು ನಿಜವಾಗಿಸುವ ಕೆಲಸ ಜರೂರಾಗಿ ಆಗಬೇಕು. ಈ ಯೋಜನೆ ಜಾರಿಯಲ್ಲಿ ಫಲಾನು­ಭವಿಗಳು, ಸರ್ಕಾರಿ ನೌಕರರು ಪ್ರಾಮಾಣಿಕತೆ ಮೆರೆಯಬೇಕು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT