ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತ ದೇಶಗಳ ಬಡಜನತೆ

Last Updated 22 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಒಂದು ದೇಶದ ಗಡಿಯನ್ನು ವಿಮಾನದಲ್ಲಿ ದಾಟುವುದಕ್ಕಿಂತ, ರಸ್ತೆ ಮಾರ್ಗದಲ್ಲಿ ದಾಟುವುದು ಹೆಚ್ಚು ಸ್ವಾರಸ್ಯಕರ. ಪುರ್ರನೆ ಹಾರಿ ಇಳಿಯುವುದಕ್ಕಿಂತ, ನೆಲದ ಮೇಲೆ ಸಾವಕಾಶವಾಗಿ ದೇಶವೊಂದು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ತೆರೆದುಕೊಳ್ಳುವ ಬಗೆ ನನಗೆ ಇಷ್ಟ. ಗಾಜಿಗೆ ಮೂಗೊತ್ತಿ ಕಣ್ಣರಳಿಸಿ ಆಘ್ರಾಣಿಸುತ್ತಾ ಕೂತುಬಿಡೋಣ ಅನಿಸುತ್ತದೆ.

ನೋಡನೋಡುತ್ತಿದ್ದಂತೆ ಗಾಳಿ ಗಂಧ ರೂಪ ರಸಗಳು; ಮಾತು ಸನ್ನೆ ನಗು ನಾಚಿಕೆಗಳು ಬದಲಾಗತೊಡಗುತ್ತವೆ. ಕೀನ್ಯಾದಿಂದ ಟಾಂಜಾನಿಯಾಕ್ಕೆ ಬಸ್ಸಲ್ಲಿ ಹೊರಟಿದ್ದರಿಂದ ಇಂಥ ದಿವ್ಯಾನುಭವದ ಲಾಭವಾಯಿತು. ಇದನ್ನು ಯಾತಕ್ಕೆ ಹೋಲಿಸಲಿ? ಭೂಮಿ ಆಕಾಶವನ್ನು ಸೇರುವುದಕ್ಕೋ ? ನದಿ ಕಡಲನ್ನು ಸೇರುವುದಕ್ಕೋ? ಅಥವಾ ಸಾಮಾನ್ಯ ಅಲೆಮಾರಿಯ ಮಾನಸಿಕ ಹಸಿವಿಗೋ? ದೇಶದ ಹೆಬ್ಬಾಗಿಲುಗಳು ನನಗೆ ಹೊಸ ಜಗತ್ತಿನ ಪ್ರವೇಶಿಕೆಗಳಂತೆ ರೋಮಾಂಚನ ಹುಟ್ಟಿಸುತ್ತವೆ. ಅದು ನಮಗಿಂತ ಬಡದೇಶವಿರಬಹುದು.

ವಾಘಾ ಗಡಿಯಾಚೆ ಇಣುಕಿ ನೋಡಿದ್ದೇನೆ; ಈ ಪಾಕಿಸ್ತಾನ ಹೇಗಿರಬಹುದು ಅಂತ. ನಮ್ಮ ಶೂಟಿಂಗ್ ಹುಡುಗರು ಗಡಿ ಕಾಯುವ ಪೇದೆಗೆ ಹಲುಬಿ ‘ಅಣ್ಣೋ ಫಾರಿನ್ ರಿಟರ್ನ್ಡ್ ಅನ್ನಿಸ್ಕೋಬೇಕು. ಹತ್ತು ಹೆಜ್ಜೆ ಹೋಗಿ ವಾಪಸ್ ಬರ್ತೀವಿ ’ ಅಂತ ಕಾಡಿ ಬೇಡಿ ಬಾಂಗ್ಲಾ ಗಡಿ ಒಳಗೆ ಕಾಲಿಟ್ಟು ಮರಣಾನಂದ ಅನುಭವಿಸಿ ಒಮ್ಮೆ ‘ಭಾರತ್ ಮಾತಾ ಕೀ ಜೈ’ ಎಂದು ಕೂಗಿ ವಾಪಸ್ ಬಂದಿದ್ದರು. ಪ್ರತಿ ಜೀವಿಗೂ ಗಡಿ ದಾಟುವ ತವಕ. ದೇಶದ ಗಡಿ. ದೇವರ ಗಡಿ. ನೀತಿಯ ಗಡಿ. ನಿಯಮದ ಗಡಿ.
ಸಣ್ಣ ಪೆಟ್ಟಿ ಅಂಗಡಿ ಕಾಣಿಸಿತು. ಚಹಾ ಕುಡಿಯೋಣ ಅನ್ನಿಸಿತು. ಹಿಂದೆ ತಿರುಗಿ ನೋಡಿದರೆ ಕವಿ ಪುಂಗವರ ಮಂದ್ರ ಸ್ಥಾಯಿಯ ಗೊರಕೆ. ‘ಇದೇ ಇಂಟರ್‌ನ್ಯಾಶನಲ್ ಬಾರ್ಡರ್. ಇಲ್ಲಿಂದ ಟಾಂಜಾನಿಯಾ.

ನೀವು ಅದೂ ಇದೂ ತುಂಬಬೇಕು’ ಎಂದು ಚಾಲಕ ಹೇಳಿದ. ಕರೆಂಟ್ ಬಿಲ್ಲು ಕಟ್ಟುವ ಸಣ್ಣ ಜಾಗದಂತಿದ್ದ ಆ ಜಾಗದ ಹೆಸರು ನಾಮಂಗ. ನಾಮಂಗ ಎಂದರೆ ಹೆಚ್ಚು ಅರ್ಥಪೂರ್ಣ. ಬೇಲಿ ಇಲ್ಲ. ಭದ್ರತೆ ಇಲ್ಲ. ತಪಾಸಣೆ ಇಲ್ಲ. ನೆಗೆದರೆ ಇನ್ನೊಂದು ದೇಶ. ಆಫ್ರಿಕಾದ ಅನೇಕ ದೇಶಗಳು ಹೀಗೇ ಇವೆ. ಗಗನಮುಖಿ ಕಟ್ಟಡಗಳ, ವೈಜ್ಞಾನಿಕ ಸಿದ್ಧಿಗಳ ಅಮೆರಿಕಾ, ಇಂಗ್ಲೆಂಡುಗಳು ಈ ಪುಟ್ಟ ಟಾಂಜಾನಿಯಾದ ಮುಂದೆ ನೀರಸ. ಚಿಕ್ಕ ದೇಶದಲ್ಲಿ ೧೨೦ ಭಾಷೆ ಮಾತನಾಡುವ ಜನರಿದ್ದಾರೆ. ೨ ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ, ಅತ್ಯಂತ ಪ್ರಾಚೀನವಾದ, ಸಂಶೋಧನೆಗೆ ಅರ್ಹವಾದ ಜೀವಸಂಕುಲವಿದೆ. ಟಾಂಗನೀಕ ಮತ್ತು ಜಂಜಿಬಾರ್ ಎಂಬ ಎರಡು ಪ್ರದೇಶ ಸೇರಿ ಟಾಂಜಾನಿಯಾ ಆಗಿದೆ.

ಈಗ ಮೂರೂವರೆ ಕೋಟಿ ಜನಸಂಖ್ಯೆ. ಅಲ್ಲದೆ ನಲವತ್ತು ಲಕ್ಷ ಪ್ರಾಣಿಗಳು ಪ್ರತ್ಯೇಕ. ಇಲ್ಲಿ ಮರ ಹತ್ತಿ ಕೂರುವ ಸಿಂಹಗಳಿವೆ. ಅಂದಾಜು ೨೦ ಸಾವಿರ ಅಡಿ ಎತ್ತರದ ಕಿಲಿಮಾಂಜಿರೋ ಪರ್ವತವಿದೆ. ರಾವುಮಾ ನದಿ ಇದೆ. ಅಸಂಖ್ಯವಾದ ನ್ಯಾಷನಲ್ ಪಾರ್ಕುಗಳಿವೆ. ಉದ್ದನೆ ಹಸಿರು ಭೂಮಿ ಇದೆ. ಪ್ರಪಾತಗಳಿವೆ. ಸರೋವರಗಳಿವೆ. ಆದರೆ ಅಪಾರ ಬಡತನವಿದೆ.

ನಾವು ತಂಗಿದ್ದ ಅರುಷ ಎಂಬ ನಗರವನ್ನು ಬಿಟ್ಟರೆ ನನ್ನ ಮನಸ್ಸಿನಲ್ಲಿ ಗಾಢವಾಗಿ ಅಚ್ಚೊತ್ತಿರುವ ಹಳ್ಳಿ ಮ್ಟೊವಾಂಬು. ದಪ್ಪ ತರಕಾರಿ, ಹಣ್ಣುಹಂಪಲು ಮಾರುತ್ತಿದ್ದ ದಪ್ಪ ಹೆಂಗಸರು. ರಸ್ತೆಯ ಎರಡೂ ಬದಿ ಫಲವತ್ತಾದ ಹಣ್ಣಿನ ತೋಟ. ಕಿತ್ತಾಡಿಕೊಂಡು ಸೈಕಲ್ ಕಲಿಯುತ್ತಿದ್ದ ಎಳೆಯ ಹುಡುಗಿಯರು. ನಿಡಿದಾದ ರಸ್ತೆ. ರಸ್ತೆಯ ಇನ್ನೊಂದು ತುದಿ, ರಿಫ್ಟ್‌ವ್ಯಾಲಿಯ ದೈತ್ಯಗೋಡೆಯೊಳಗೆ ಕರಗಿಹೋದಂತಿತ್ತು. ಆ ಹಳ್ಳಿ ರಿಫ್ಟ್‌ವ್ಯಾಲಿಯ ತಪ್ಪಲಿನಲ್ಲಿ ತಂಪಾಗಿ ಕೂತಿದೆ. ಚೀನಾದ ಮಹಾಗೋಡೆಯಂತಿರುವ ಈ ನೈಸರ್ಗಿಕ ಶಿಖರ ಶ್ರೇಣಿಯನ್ನು ದಾಟುವಾಗ ಎಡಕ್ಕೆ ಕಣ್ಣು ಹಾಯಿಸಿದರೆ ಲೇಕ್ ಮನ್ಯಾರ. ನೇರ ಮುಂದೆ ಹೋದರೆ ವಿಶಾಲ ಬೋಗುಣಿ. ಮೇಲ್ತುದಿಯಿಂದ ಇಣುಕಿದರೆ ಪ್ರಪಾತ ದರ್ಶನ.

ನಡುವೆ ತಿಳಿಜಲದ ಸರೋವರ. ಬೋಗುಣಿಯ ಕೆಳಕ್ಕಿಳಿದು ಒಳಗೆ ಸುರಕ್ಷಿತ ಜೀಪಿನಲ್ಲಿ ನೂರಾರು ಮೈಲು ಅಡ್ಡಾಡಿದರೆ ಅಡಿಗಡಿಗು ಸಿಗುವ ಅಸಂಖ್ಯ ಕಾಡುಪ್ರಾಣಿಗಳು. ಇದೇ ಗೊರಾಂಗೊರೋ ನ್ಯಾಷನಲ್ ಪಾರ್ಕು. ಬೇಟ ಮತ್ತು ಬೇಟೆಯ ಹೊತ್ತಲ್ಲದೆ ಉಳಿದಂತೆ ಶಾಂತ ಸಹಜೀವನ ನಡೆಸುವ ಇಲ್ಲಿನ ಪ್ರಾಣಿಜಗತ್ತು ಅಚ್ಚರಿದಾಯಕ. ೨೬೪ ಚದರ ಕಿ.ಮೀ. ವ್ಯಾಪ್ತಿಯ ಈ ವನ್ಯಧಾಮದಲ್ಲಿ ನಮ್ಮ ಪೂರ್ವಜರೆಲ್ಲಾ ಪೊಲೀಸರಿಲ್ಲದೆ, ಕೋರ್ಟಿಲ್ಲದೆ, ಚುನಾವಣೆಗಳಿಲ್ಲದೆ, ಸಿಗ್ನಲ್ ಲೈಟುಗಳಿಲ್ಲದೆ, ಪೂಜಾಗೃಹಗಳನ್ನು ಕಟ್ಟಿಕೊಳ್ಳದೆ, ಬ್ಯಾಂಕುಗಳಲ್ಲಿ ಠೇವಣಿ ಇಡದೆ ಸುಖವಾಗಿದ್ದಾರೆ.

ಪೂರ್ವ ಆಫ್ರಿಕಾದಲ್ಲಿರುವ ಮುಖ್ಯವಾದ ಅಭಯಾರಣ್ಯ­ಗಳಾದ ಸೆರೆಂಗಿಟಿ, ಗೊರಾಂಗೊರೊ, ಲೇಕ್ ಮನ್ಯಾರ, ಮಸೈ ಮಾರಾಗಳಲ್ಲಿ ಹೇರಳವಾದ ಪ್ರಾಣಿ ಪ್ರಪಂಚವಿದೆ. ನಿಮಗೆ ಅದೃಷ್ಟವಿದ್ದರೆ ಮಾತ್ರ ಪ್ರಾಣಿಗಳು ಕಾಣಿಸಬಹುದು ಎಂಬ ನಾಗರಹೊಳೆ, ಬಂಡೀಪುರಗಳ ಬುರುಡೆ ಜ್ಯೋತಿಷಿಗಳ ಮಾತು ಇಲ್ಲಿಲ್ಲ. ಮುಂಜಾನೆ ಹೋದರಂತೂ ಸಕಲ ಪ್ರಾಣಿಗಳ ದರ್ಶನ ನಿಶ್ಚಿತ. ಇಷ್ಟು ದೂರ ಬಂದಿದ್ದೀರ! ನಿಮಗೆ ಮಾಡೋಕೇನು ಕ್ಯಾಮೆ ಇಲ್ವೆ? ಎಂಬಂತೆ ಸಿಂಹವೊಂದು ನಮ್ಮ ಜೀಪಿನೆದುರು ಬಂದು ಒಂದು ತಿರಸ್ಕಾರದ ಲುಕ್ ಕೊಟ್ಟು ಹೋಯಿತು. ನಾವು ಪ್ರಾಣಿಗಳನ್ನು ಅಷ್ಟೊಂದು ಅಕರಾಸ್ಥೆಯಿಂದ ಏಕೆ  ನೋಡಬಯಸುತ್ತೇವೆ? ಅದು ನಾವು ದಾಟಿ ಬಂದ ಅವಸ್ಥೆಯೊ? ಪೂರ್ವಜನ್ಮದ ಸ್ಮರಣೆಯೊ? ಅವುಗಳ ದೇಹಾಕೃತಿಯ ವೈಚಿತ್ರ್ಯದ ಬಗ್ಗೆ ಕುತೂಹಲವೊ?
*
ನಮ್ಮ ಚಾಲಕ ಜೋಸೆಫನಿಗೆ ಮಸಾಯ್‌ಗಳ ಹಟ್ಟಿಗೆ ಕರೆದುಕೊಂಡು ಹೋಗು ಎಂದೆವು. ಅವನು ತಲಾ ಇಪ್ಪತ್ತು ಅಮೆರಿಕನ್ ಡಾಲರ್ ರೆಡಿ ಇಟ್ಟುಕೊಳ್ಳಿ ಎಂದ. ಕೀನ್ಯಾ-, ಟಾಂಜಾನಿಯಾ ದೇಶಗಳ ಹಸಿರು ಹೊಲಗಳಲ್ಲಿ ದನಗಾಹಿಗಳಾಗಿ ಗೋಚರಿಸುವ ಕೆಂಪು ರಗ್ಗು ಹೊದ್ದ ಈ ಆದಿವಾಸಿಗಳ ಬಗ್ಗೆ ಕುತೂಹಲವಿತ್ತು. ಸಗಣಿ ತಟ್ಟಿ, ಸೂರು ನಿರ್ಮಿಸಿದ್ದ ಸುರಂಗದಂಥ ಗೂಡು. ತೆವಳಿಯೇ ಪ್ರವೇಶಿಸಬೇಕಾದ ಬಾಗಿಲು. ನಡುವೆ ಒಲೆ. ಒಂದು ಬದಿಗೆ ಎಮ್ಮೆ ಚರ್ಮದ ಹಾಸಿಗೆ. ಚೂರು ಪಾರು ಬೆಳಕಿಂಡಿ. ಇಂಥ ಗೂಡುಗಳನ್ನು ವೃತ್ತಾಕಾರವಾಗಿ ಕಟ್ಟಿಕೊಳ್ಳುತ್ತಾರೆ.

ಅಪಾರ ಸಂಖ್ಯೆಯಲ್ಲಿ ದನಕರುಗಳನ್ನು ಸಾಕುತ್ತಾರೆ. ಹತ್ತು ಹಸುಗಳನ್ನು ಕೊಟ್ಟವರಿಗೆ ಹೆಣ್ಣು ಕೊಡುತ್ತಾರೆ. ಹತ್ತು ಮದುವೆಯಾಗಿರುವ ನನ್ನಪ್ಪನನ್ನು ಮೀರಿಸಬೇಕೆಂದಿದ್ದೇನೆ ಎಂದು ಒಬ್ಬ ಮಗರಾಯ ಹೇಳಿದ. ಇನ್ನೊಂದು ಜುಗುಪ್ಸೆಯ ವಿಷಯವೆಂದರೆ ಮಸಾಯ್‌ಗಳು ಪ್ರತಿ ಮುಂಜಾನೆ ಹಸುಗಳ ಹಸಿ ರಕ್ತ ಕುಡಿಯುತ್ತಾರೆ. ಕೊರಳಿನ ಆಯಕಟ್ಟಿನ ಜಾಗದಲ್ಲಿ ಭರ್ಜಿಯಿಂದ ಚುಚ್ಚುತ್ತಾರೆ. ಲೀಟರುಗಟ್ಟಲೆ ರಕ್ತ ಬಸಿದು ಕುಡಿಯುತ್ತಾರೆ. ಹಸು ಸಾಯುವುದಿಲ್ಲವಂತೆ. ಬ್ಲಡ್ ಡೊನೇಟ್ ಮಾಡಿದ ದಾನಿಯ ಧನ್ಯತಾಭಾವದಿಂದ ಕಾಡಿಗೆ ಮೇಯಲು ಹೋಗುತ್ತದಂತೆ.

ಮಸಾಯ್ ಹಟ್ಟಿಯ ಮುಖಂಡ ಸ್ಪಷ್ಟ ಇಂಗ್ಲಿಷ್ ಮಾತನಾಡುತ್ತಿದ್ದ. ಅವನು ಡಾಲರ್ ಎಣಿಸಿದ ರೀತಿ, ಮಾಡಿಸಿದ ಡ್ರಿಲ್ಲು, ಊದಿದ ವಾದ್ಯ, ತಲೆ ಎಣಿಸಿ ಒಳಗೆ ಬಿಟ್ಟ ರೀತಿ, ನಮ್ಮನ್ನು ರೋಚಕಗೊಳಿಸಲು ಆಡುತ್ತಿದ್ದ ಮಾತು,- ವರ್ತನೆ ಎಲ್ಲ ಕೃತಕವಾಗಿತ್ತು. ಪ್ರವಾಸೋದ್ಯಮ­ವನ್ನೇ ನಂಬಿ ಬದುಕುವ ಜನ ಬಂದವರನ್ನು ರಂಜಿಸಲು ತೊಡಗಿದರೆ ಅವರ ಮುಗ್ಧತೆ ಎಕ್ಕುಟ್ಟಿ ಹೋಗುತ್ತದೆ. ಅವರು ಅಭಿನಯ­ಕ್ಕಿಳಿದಿದ್ದಂತೆ ಭಾಸವಾಯಿತು. ಅವರು ಹಸುವಿನ ರಕ್ತ ಕುಡಿಯುವುದು ದಿಟವೋ ಇಲ್ಲವೋ. ಆದರೆ ಪ್ರವಾಸಿಗರನ್ನು ಹೀರುವುದನ್ನು ಚೆನ್ನಾಗಿ ಕಲಿತಂತಿದ್ದರು. ಅದು ಜನಪದರ ದುರಂತದಂತಿತ್ತು.

ಆದಿವಾಸಿಗಳ ಆಚರಣೆ, ಜೀವನಶೈಲಿಗಳನ್ನು ಗುಗಿ, ಚಿನುವಾ ಅಚಿಬೆಯಂಥ ಆಫ್ರಿಕನ್ ಲೇಖಕರ ಕೃತಿಗಳಲ್ಲಿ ಕಾಣಬಹುದು. ನಾಗರಿಕ ಪ್ರಪಂಚ ಬೆಚ್ಚಿ ಬೀಳುವಂಥ ನಡಾವಳಿಗಳು ಅಲ್ಲಿವೆ. ಟಾಂಜಾನಿಯಾದ ಲೇಖಕರಾದ ಶಾಬಾನ್ ರಾಬರ್ಟ್, ಜೋಸೆಫ್ ಎಂಬೆಲೆ, ಇಬ್ರಾಹಿಂ ಹುಸೇನ್, ಪೀಟರ್ ಪಲಂಗ್ಯೊ ಅವರ ಬರಹಗಳಲ್ಲಿಯೂ, ಚಿತ್ರ ನಿರ್ದೇಶಕರಾದ ಸ್ಟೀವನ್ ಚಾರ್ಲ್ಸ್ ಕನುಂಬ ಅವರ ಚಿತ್ರಗಳಲ್ಲಿಯೂ, ಕೆಲವೆಡೆ ದಟ್ಟವಾಗಿ, ಕೆಲವೆಡೆ ತೆಳುವಾಗಿ ಇವು ದಾಖಲಾಗಿವೆ.
*
ಇದು ಒಂದು ಹೈಪಾಥಿಟಿಕಲ್ ಆದ ಮತ್ತು ನಿರರ್ಥಕವಾದ ಪ್ರಶ್ನೆ. ಆಫ್ರಿಕಾ ಖಂಡದ ನೀಗ್ರೋ ಜಗತ್ತಿನಲ್ಲಿ, ಆಸ್ಟ್ರೇಲಿಯಾದ ಅಬೊಜಿರಿನ್‌ಗಳ ಲೋಕದಲ್ಲಿ, ನ್ಯೂಜಿಲ್ಯಾಂಡ್‌ನ ಮೌರಿಗಳ ಪ್ರಪಂಚದಲ್ಲಿ, ಅಮೆರಿಕಾದ ರೆಡ್ ಇಂಡಿಯನ್ನರ ಪ್ರಾಂತ್ಯದಲ್ಲಿ ಅಲೆಯುವಾಗ ಕಾಡುವ ಪ್ರಶ್ನೆ. ಈ ಬಿಳಿಯರು ತಮ್ಮ ಎಡಗೈನಲ್ಲಿ ಇಂಗ್ಲಿಷನ್ನು, ಬಲಗೈನಲ್ಲಿ ಕ್ರೈಸ್ತಧರ್ಮವನ್ನು ಹಿಡಿದು ದೇಶದೇಶಗಳಿಗೆ ಹೋಗದೆ, ತೆಪ್ಪಗೆ ಇದ್ದಿದ್ದರೆ ಈಗಿನ ಜಗತ್ತು ಹೇಗಿರುತ್ತಿತ್ತು ? ಇಸ್ಲಾಂ ಮತ್ತು ಬೌದ್ಧ ಧರ್ಮಗಳೂ ಚಲಿಸದೆ ತಮ್ಮ ಹುಟ್ಟೂರಿನಲ್ಲೆ ಉಳಿದಿದ್ದರೆ? ಈಗ ಅದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.

ಅನ್ವೇಷಕ ಪ್ರವೃತ್ತಿಯ, ದಾಳಿಕೋರ ಮನಸ್ಸಿನ ಕುತೂಹಲಿ ಮನುಷ್ಯ ಇದ್ದಲ್ಲಿ ಇರಲಾರ. ಧರ್ಮಪ್ರಸಾರ, ಜಗದೋದ್ಧಾರ ಮುಂತಾದ ಮಾತುಗಳು ನೆಪ. ಆಗಿರುವುದೆಲ್ಲ ಆಕ್ರಮಣಶೀಲತೆಯೇ. ನೆಪದ ಮಾತುಗಳೇ ನಿಜವಾಗಿದ್ದರೆ ಈಗ ಎಲ್ಲೆಲ್ಲೂ ಶಾಂತಿ ನೆಲೆಸಿರಬೇಕಿತ್ತು. ಒಂದು ಕಾಲಕ್ಕೆ ವರ್ಣಭೇದನೀತಿಯ ಫಲವಾಗಿ ನಿಕೃಷ್ಟ ಪಶುಗಳಂತೆ ಮಾರಾಟವಾಗುತ್ತಿದ್ದ ಕಪ್ಪು ಜನ ಇಂದು ಮತ್ತೊಂದು ಬಗೆಯ ಶೋಷಣೆಗೆ ಒಳಗಾಗಿದ್ದಾರೆ.

ದುರಾಡಳಿತ, ಭ್ರಷ್ಟತೆ, ಗದ್ದುಗೆಯನ್ನು ಪಟ್ಟಾಗಿ ಹಿಡಿದು ಕುಳಿತು, ತನ್ನ ಅಪೂರ್ವವಾದ ನೈಸರ್ಗಿಕ ಸಂಪನ್ಮೂಲಗಳನ್ನು ಪರಭಾರೆ ಮಾಡುತ್ತಾ ಬಂದೂಕಿನ ಮೊನೆಯಿಂದ ರಾಜ್ಯವಾಳುವ ಸರ್ವಾಧಿಕಾರಿಗಳು, ತುಂಡು ದಂಡನಾಯಕರು, ತಾಂಡವವಾಡುತ್ತಿರುವ ಹೆಚ್.ಐ.ವಿ., ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಮಕ್ಕಳು  ಇದು ಇಂದಿನ ಆಫ್ರಿಕಾ ಖಂಡದ ಬಹುತೇಕ ದೇಶಗಳ ಘೋರ ಚಿತ್ರ. ಸೂರ್ಯಾಸ್ತದ ನಂತರ ಒಬ್ಬರೇ ಹೊರಗೆ ಹೋಗಬೇಡಿ ಎಂಬ ಸೂಚನೆ ಪ್ರವಾಸಿಗಳಿಗೆ ಇಲ್ಲಿ ಖಾಯಂ. ಟಾಂಜಾನಿಯಾದ ದರ್ ಎಸ್ ಸಲಾಂನಲ್ಲೂ ಒಂದು ಪುಟಾಣಿ ಕನ್ನಡ ಸಂಘವಿದೆ. ಒಂದು ಸಂಜೆ ಕರೆದು ಸತ್ಕರಿಸಿ ಹೃದ್ಯವಾದ ಕಾರ್ಯಕ್ರಮ ಮಾಡಿದರು. ಪ್ರಶಾಂತ್ ಬೀರೂರು ಮತ್ತು ಗೆಳೆಯರು ನಮ್ಮನ್ನೆಲ್ಲಾ ಹಬ್ಬಕ್ಕೆ ಬಂದ ಆಪ್ತನೆಂಟರಂತೆ ಪರಿಭಾವಿಸಿದರು.
*
ಕರವಸ್ತ್ರದಗಲ ಬಿಳಿಬೆಟ್ಟವನ್ನಿರಿಸಿಕೊಂಡು, ಅಷ್ಟರಲ್ಲೇ ಪ್ರವಾಸೋದ್ಯಮ ಬೆಳೆಸಿಕೊಂಡು, ಬಡದೇಶಗಳ ಭ್ರಷ್ಟರು ಇರಿಸಿದ ಅನೈತಿಕ ಹಣದ ಬಡ್ಡಿಯಲ್ಲಿ ಶ್ರೀಮಂತಿಕೆಯಿಂದ ಬದುಕುವ ಜಾಣತನವುಳ್ಳ ಸ್ವಿಟ್ಜರ್‌ಲ್ಯಾಂಡ್‌ನಂಥ ದೇಶಗಳು ಒಂದು ಕಡೆ; ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿಯೂ ಬಾಳಲರಿಯದ ಬಡದೇಶಗಳು ಇನ್ನೊಂದು ಕಡೆ. ಈ ವಿಪರ್ಯಾಸಕ್ಕೆ ಮದ್ದೆಲ್ಲಿ? ಅತ್ಯಂತ ಶ್ರೀಮಂತ ದೇಶದ ಬಡಪಾಯಿ ಜನ ಆಫ್ರಿಕನ್ನರು. ಪ್ರಾಣಿಗಳನ್ನು ಬಿಟ್ಟರೆ ಅಲ್ಲಿ ಎಲ್ಲರಿಗೂ ಇಂಗ್ಲಿಷ್ ಬರುತ್ತದೆ. ಆಧುನಿಕತೆಯ ಪ್ರವಾಹ ನೋಡಿದರೆ ಸಿಂಹ, ಕರಡಿಗಳೂ ಎಬಿಸಿಡಿ ಕಲಿತು ಕುಲಗೆಟ್ಟು ಹೋಗುವ ದಿನ ದೂರವಿಲ್ಲ. ಅಲ್ಲಿಗೆ ಆಫ್ರಿಕಾದ ವಸಾಹತೀಕರಣ ಸಂಪೂರ್ಣವಾದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT