ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯಾಂಕ ಮುಚ್ಚಿಟ್ಟ ಬಿಚ್ಚಿಟ್ಟ ಕತೆ

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಉದ್ಯಮಸ್ನೇಹಿ ಶ್ರೇಯಾಂಕದಲ್ಲಿ ಭಾರತದ ಸ್ಥಾನ ಕಳೆದ ಒಂದು ವರ್ಷದ ಅವಧಿಯಲ್ಲಿ 30 ಸ್ಥಾನಗಳ ಚಾರಿತ್ರಿಕ ಏರಿಕೆ ಕಂಡಿದೆ ಎಂದು ಹೋದವಾರ ವಿಶ್ವಬ್ಯಾಂಕ್ ಘೋಷಿಸಿದಾಗ ನೆನಪಿಗೆ ಬಂದದ್ದು 1993ರಲ್ಲಿ ತೆರೆಕಂಡ ‘ಮಿಥುನಂ’ ಎಂಬ ಮಲಯಾಳಂ ಸಿನಿಮಾ. ಮೋಹನ್ ಲಾಲ್ ಅಭಿನಯದ ಈ ಅದ್ಭುತ ಕಮರ್ಷಿಯಲ್ ಸಿನಿಮಾದ ಹೀರೊ ಸೇತುಮಾಧವನ್ ಎನ್ನುವ ಬಡ ನಿರುದ್ಯೋಗಿ ಯುವಕ. ಆತ ದಾಕ್ಷಾಯಿಣಿ ಬಿಸ್ಕತ್ ಕಂಪೆನಿ ಎನ್ನುವ ಉದ್ಯಮ ತೆರೆಯಲು ಹೆಣಗಾಡುತ್ತಿರುತ್ತಾನೆ. ಹೆಜ್ಜೆ ಹೆಜ್ಜೆಗೂ ಎದುರಾಗುವ ಸರ್ಕಾರಿ ಅಡೆತಡೆಗಳಿಂದಲೂ, ಲಂಚದ ಬೇಡಿಕೆಯಿಂದಲೂ ರೋಸಿ ಹೋಗುವುದರ ಜತೆಗೆ ಆತನ ಕುಟುಂಬದಲ್ಲೂ ಏನೇನೋ ಬೆಳವಣಿಗೆಗಳಾಗಿ ಅವಮಾನದಿಂದಲೂ, ಹಣದ ಬಿಕ್ಕಟ್ಟಿನಿಂದಲೂ ಸೇತುಮಾಧವನ್ ಅಕ್ಷರಶಃ ಹುಚ್ಚನಂತಾಗುತ್ತಾನೆ.

ಕೊನೆಗೊಂದು ದಿನ ತಪಾಸಣೆಗೆ ಎಂದು ಬಂದ ಈರ್ವರು ಸರ್ಕಾರಿ ಅಧಿಕಾರಿಗಳನ್ನು ಇನ್ನೂ ಪ್ರಾರಂಭವಾಗದಿರುವ ತನ್ನ ಫ್ಯಾಕ್ಟರಿ ಕಟ್ಟಡದಲ್ಲಿ ಕೂಡಿ ಹಾಕಿ ಸುತ್ತಲೂ ಪೆಟ್ರೋಲ್ ಸುರಿದು ‘ಸಂಬಂಧಿಸಿದ ಎಲ್ಲಾ ಅನುಮತಿಗಳನ್ನು ಈ ಕ್ಷಣದಲ್ಲಿ ನೀಡಿದರೆ ಸರಿ, ಇಲ್ಲದೆ ಹೋದರೆ ಎಲ್ಲರೂ ಒಟ್ಟಿಗೆ ಸುಟ್ಟುಹೋಗುವ’ ಅಂತ ಬೆದರಿಕೆ ಹಾಕುತ್ತಾನೆ. ಅಧಿಕಾರಿಗಳು ಜೀವ ಭಯದಿಂದ ದಾಕ್ಷಾಯಿಣಿ ಬಿಸ್ಕತ್ ಕಂಪೆನಿಯ ಎಲ್ಲ ಕಡತಗಳಿಗೂ ಸಹಿ ಹಾಕಿ ಅಲ್ಲಿಂದ ಪಲಾಯನ ಮಾಡುತ್ತಾರೆ. ಹಾಗೆ ಹೋಗುವ ಮುನ್ನ ಅವರನ್ನು ಉದ್ದೇಶಿಸಿ ಸುಮಾರು ಐದು ನಿಮಿಷಗಳ ಕಾಲ ಸೇತುಮಾಧವನ್ ಆಡುವ ಆಕ್ರೋಶದ ಮಾತುಗಳು ಉದ್ಯಮಶೀಲತೆ ಎನ್ನುವುದು ಸರ್ಕಾರಿ ವ್ಯವಸ್ಥೆಯ ಕಬಂಧಬಾಹುಗಳಲ್ಲಿ ಸಿಲುಕಿ ಹೇಗೆ ನಲುಗುತ್ತಿದೆ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ. ಇದು ಉದಾರೀಕರಣ ಪೂರ್ವ ಭಾರತದ ಚಿತ್ರಣ.

ಕಳೆದ ಹದಿನೈದು ವರ್ಷಗಳಿಂದೀಚೆಗೆ ಅಂದರೆ 2002ರಿಂದ ಪ್ರಾರಂಭಿಸಿ ವಿಶ್ವಬ್ಯಾಂಕ್ ಪ್ರತೀ ವರ್ಷ ವಿವಿಧ ರಾಷ್ಟ್ರಗಳು ಎಷ್ಟು ಉದ್ಯಮಸ್ನೇಹಿಗಳಾಗಿವೆ ಎಂದು ಲೆಕ್ಕ ಹಾಕಿ ಶ್ರೇಯಾಂಕ ನೀಡುತ್ತಾ ಬಂದಿದೆ. ಒಂದು ದೇಶದಲ್ಲಿ ವಿವಿಧ ರೀತಿಯ ಉದ್ಯಮಗಳನ್ನು ಪ್ರಾರಂಭಿಸುವುದು, ಮುನ್ನಡೆಸುವುದು ಮತ್ತು ಮುಚ್ಚುವುದು ಎಷ್ಟು ಸುಲಭ ಅಥವಾ ದುರ್ಬರ ಎನ್ನುವುದನ್ನು ಈ ಶ್ರೇಯಾಂಕ ಜಗತ್ತಿಗೆ ಸಾರುತ್ತದೆ. ಒಟ್ಟು 190 ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಹೋದ ವರ್ಷ 130 ಇದ್ದದ್ದು ಈ ಬಾರಿ 100ಕ್ಕೆ ಏರಿದೆ. ಮೂರೂವರೆ ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಳ್ಳುವಾಗ ಭಾರತ 142ನೆಯ ಸ್ಥಾನದಲ್ಲಿತ್ತು. ಭಾರತದ ಸ್ಥಾನವನ್ನು 50ಕ್ಕೆ ಕನಿಷ್ಠ 50ಕ್ಕೆ ಏರಿಸಿ ದೇಶವನ್ನು ಪ್ರಪಂಚದ ಅತ್ಯಂತ ಹೆಚ್ಚು ಉದ್ಯಮಸ್ನೇಹಿ ದೇಶವನ್ನಾಗಿ ಮಾಡಬೇಕು ಎಂದು ಹೊರಟ ಸರ್ಕಾರಕ್ಕೆ ಹೋದ ವರ್ಷದ ತನಕ ಲಭಿಸಿದ ಯಶಸ್ಸು ಸೀಮಿತವಾಗಿತ್ತು.

ಕಳೆದ ಒಂದು ವರ್ಷದಿಂದೀಚೆಗೆ ಒಮ್ಮಿಂದೊಮ್ಮೆಲೆ 30 ಸ್ಥಾನಗಳ ಜಿಗಿತ ಸಾಧಿಸಿದ್ದು ಕೇಂದ್ರ ಸರ್ಕಾರದ ಪಾಲಿಗೆ ಬಹುಮುಖ್ಯ ಅಪೇಕ್ಷಣೀಯ ಬೆಳವಣಿಗೆ. ಯಾಕೆಂದರೆ ಸ್ವಲ್ಪ ಸಮಯದಿಂದೀಚೆಗೆ ಅರ್ಥವ್ಯವಸ್ಥೆಯಲ್ಲಿ ಕಂಡುಬರುತ್ತಿದ್ದ ಋಣಾತ್ಮಕ ಬೆಳವಣಿಗೆಗಳು ಮತ್ತು ಅವುಗಳು ಹುಟ್ಟು ಹಾಕಿದ ಟೀಕಾಪ್ರಹಾರಗಳಿಂದ ನಲುಗಿಹೋಗಿದ್ದ ಆಡಳಿತ ಪಕ್ಷಕ್ಕೆ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು ಈ ವರದಿ ಅವಕಾಶ ಕಲ್ಪಿಸಿದೆ. ಒಂದೇ ವರ್ಷದಲ್ಲಿ ಪರಿಸ್ಥಿತಿ ಇಷ್ಟೊಂದು ಸುಧಾರಿಸುವುದು ಅಸಾಧಾರಣ ಅಂತ ವಿಶ್ವ ಬ್ಯಾಂಕ್ ಹೇಳಿದೆ. ಹಿಂದೆ ಒಂದು ದೇಶದಲ್ಲಿ ಹೀಗಾಗಿತ್ತು. ಅದು ರಷ್ಯಾ. ಆ ದೇಶ 2014–15ರ ಮಧ್ಯೆ 93ನೆಯ ಸ್ಥಾನದಿಂದ 63ನೆಯ ಸ್ಥಾನಕ್ಕೇರಿ ಭಾರತದಂತೆ ಮೂವತ್ತು ಮೆಟ್ಟಿಲುಗಳನ್ನು ಒಮ್ಮೆಲೇ ಏರಿತ್ತು. ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೀಗಾಗಲೇಬೇಕು ಎಂದು ಫರ್ಮಾನ್ ಹೊರಡಿಸಿದ್ದರು. ಭಾರತದಲ್ಲಿ ಪ್ರಧಾನ ಮಂತ್ರಿ ಮೋದಿ ಕೂಡಾ ಅಧಿಕಾರಕ್ಕೇರುತ್ತಲೇ ಇದೇ ರೀತಿಯಲ್ಲಿ ಫರ್ಮಾನು ಹೊರಡಿಸಿದ್ದರು.

ವಿಶ್ವಬ್ಯಾಂಕಿನ ವರದಿಯ ಬಗ್ಗೆ ಬಿಜೆಪಿ ಸಂಭ್ರಮಿಸುತ್ತಿದ್ದರೆ ಕಾಂಗ್ರೆಸ್ ಇದರಲ್ಲಿ ಸಂಭ್ರಮಿಸುವಂತಹದ್ದು ಏನೂ ಇಲ್ಲ, ತಳಮಟ್ಟದಲ್ಲಿ ಪರಿಸ್ಥಿತಿ ಏನೂ ಬದಲಾಗಿಲ್ಲ ಎಂದು ವಾದಕ್ಕಿಳಿದಿದೆ. ಅಂಕಿ ಅಂಶಗಳು ಯಾವತ್ತೂ ಸಾರುವುದು ಆಂಶಿಕ ಸತ್ಯಗಳನ್ನು. ಹಾಗೆಂದು ಅಂಕಿ-ಅಂಶಗಳನ್ನು ಬಳಸದೆ ಸತ್ಯವನ್ನು ಹೇಳಿದರೆ ಅಂತಹ ಸತ್ಯದ ವಸ್ತುನಿಷ್ಠತೆಯ ಬಗ್ಗೆ ಸಂದೇಹಗಳು ಮೂಡುತ್ತವೆ. ಆದುದರಿಂದ ಕಾಂಗ್ರೆಸ್ ಏನೇ ಹೇಳಲಿ, ಉದ್ಯಮಸ್ನೇಹಿ ಪರಿಸರ ಒದಗಿಸುವ ನಿಟ್ಟಿನಲ್ಲಿ ದೇಶ 130ನೆಯ ಸ್ಥಾನದಲ್ಲಿರುವುದಕ್ಕಿಂತ 100ನೆಯ ಸ್ಥಾನದಲ್ಲಿರುವುದು ಉತ್ತಮ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟರಮಟ್ಟಿಗೆ ಇದು ಒಂದು ಸಾಧನೆ, ಒಂದು ದಾಖಲೆ. ಇದು ಕಾಂಗ್ರೆಸ್ ಕಾಲದಲ್ಲಿ ಆಗಿಲ್ಲ, ಬಿಜೆಪಿ ಕಾಲದಲ್ಲಿ ಆಗಿದೆ ಎನ್ನುವ ಸತ್ಯವನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.

ಆದರೆ ಇಡೀ ಉದ್ಯಮಸ್ನೇಹಿ ಕಸರತ್ತಿನ ಹಿಂದಿರುವ ಕೆಲವು ಸತ್ಯಾಂಶಗಳನ್ನು ಗಮನಿಸಬೇಕು. 1991ರ ಆರ್ಥಿಕ ಸುಧಾರಣೆಯ ಪರ್ವ ಪ್ರಾರಂಭವಾದ ನಂತರ ಕೇಂದ್ರದಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಅಧಿಕಾರ ನಡೆಸಿದ ವಿವಿಧ ಪಕ್ಷಗಳ ಸರ್ಕಾರಗಳು ಉದ್ಯಮಗಳನ್ನು ಆಕರ್ಷಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಉದ್ಯಮಿಗಳ ಮುಂದೆ ಮಂಡಿಯೂರಿ ಕುಳಿತು ಬೇಡುತ್ತಿವೆ. ಒಂದು ಕಾಲದಲ್ಲಿ ಊಹಿಸಲೂ ಸಾಧ್ಯವಿಲ್ಲದಂತಹ ಜಾಗತಿಕ ಹೂಡಿಕೆದಾರರ ಸಮಾವೇಶಗಳನ್ನು ರಾಜ್ಯ ಸರ್ಕಾರಗಳು ಸ್ಪರ್ಧೆಗೆ ಬಿದ್ದಂತೆ ಗೌಜುಗದ್ದಲ ಸಹಿತ ನಡೆಸುತ್ತವೆ. ಸರ್ಕಾರಗಳು ಉದ್ಯಮಗಳನ್ನು ಆಕರ್ಷಿಸಲು ಮುಗಿಬೀಳುತ್ತಿರುವುದು ಹೇಗಿದೆ ಅಂದರೆ ಒಂದು ರೀತಿ ಬೀದಿ ಬದಿಯ ವ್ಯಾಪಾರಿಗಳು ಗಿರಾಕಿಗಳನ್ನು ‘ನಮ್ಮ ಬಳಿ ಬನ್ನಿ’ ಎಂದು ಕೂಗಿ ಕರೆಯುವಂತೆ ಇದೆ. ಹೀಗೆ ಚುನಾಯಿತ ಸರ್ಕಾರಗಳು ಮಾರಾಟಗಾರರ ಪಾತ್ರ ನಿರ್ವಹಿಸಬೇಕಾಗಿ ಬಂದದ್ದು ಸರ್ಕಾರಿ ವ್ಯವಸ್ಥೆ ಕಂಡ ಚಾರಿತ್ರಿಕ ಪಲ್ಲಟಗಳಲ್ಲಿ ಒಂದು. ಒಂದೆಡೆ ಸರ್ಕಾರಗಳು ಉದ್ಯಮಗಳನ್ನು ಮತ್ತು ಬಂಡವಾಳವನ್ನು ಆಕರ್ಷಿಸಲು ಇಷ್ಟೆಲ್ಲಾ ಕಸರತ್ತು ನಡೆಸುತ್ತಿರುವಾಗಲೇ ಇನ್ನೊಂದೆಡೆ ಯಥಾಪ್ರಕಾರ ಉದ್ಯಮಗಳು ಮತ್ತು ಉದ್ಯಮಶೀಲತೆ ತರಹೇವಾರಿ ನಿರ್ಬಂಧಗಳ ನಡುವೆ ಸಿಲುಕಿ ನಲುಗುತ್ತಲೇ ಉಳಿದದ್ದು. ಒಂದೆಡೆ ಸರ್ಕಾರಗಳು ಹೊಸ ಹೂಡಿಕೆದಾರರಿಗೆ ಕೆಂಪು ಹಾಸು ಹಾಸುತ್ತಾ ಇರುವಾಗಲೇ ಇನ್ನೊಂದೆಡೆ ಅದೇ ವ್ಯವಸ್ಥೆ ತನ್ನ ಪಾಳೆಗಾರಿಕೆ ಮನೋಭಾವದ ಕಟ್ಟಳೆಗಳಲ್ಲಿ ಉದ್ಯಮಗಳನ್ನು ಪೀಡಿಸುತ್ತಲೇ ಉಳಿದದ್ದು ಸಮಕಾಲೀನ ಭಾರತದ ವ್ಯಂಗ್ಯಗಳಲ್ಲಿ ಒಂದು.

ಸರ್ಕಾರಗಳನ್ನೇ ಖರೀದಿಸಬಲ್ಲ ದೊಡ್ಡ ದೊಡ್ಡ ಉದ್ಯಮಗಳು ಈ ನಿರ್ಬಂಧಗಳನ್ನು ಕಾಲಿನಡಿ ಕೊಡವಿ ತಮ್ಮ ಹಾದಿಯನ್ನು ತಾವೇ ನಿರ್ಮಿಸಿ ಮುಂದುವರಿದರೆ ಸಾಮಾನ್ಯ, ಸಣ್ಣ ಮತ್ತು ಅತಿಸಣ್ಣ ಉದ್ಯಮಿಗಳನ್ನು ಈ ವ್ಯವಸ್ಥೆ ಹಿಂಡಿ ಹಿಪ್ಪೆ ಮಾಡುತ್ತದೆ. ಬಹುಶಃ ಸ್ಥಳೀಯ ಸರ್ಕಾರಗಳಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ ಎಲ್ಲಾ ಹಂತಗಳ ಅಧಿಕಾರಶಾಹಿಯ ಜತೆ ಸೆಣಸಬೇಕಾಗಿರುವುದು ಉದ್ಯಮ ರಂಗದಲ್ಲಿ ಇರುವವರು ಮಾತ್ರ. ಈ ಎಲ್ಲಾ ಹಂತದ ಸರ್ಕಾರಗಳು ತಮ್ಮ ಚಾಳಿ ಮತ್ತು ಶೈಲಿಗಳನ್ನು ಬದಲಿಸುವ ತನಕ ವ್ಯವಸ್ಥೆ ಉದ್ಯಮಸ್ನೇಹಿ ಆಗಲು ಸಾಧ್ಯವಿಲ್ಲ. ದೊಡ್ಡ ಉದ್ಯಮಗಳಿಗೆ ಲಾಬಿಗಳಿರುತ್ತವೆ. ಅವುಗಳ ಪ್ರತಿನಿಧಿಗಳು ಅಧಿಕಾರ ಸೌಧದ ಎಂಥೆಂಥ ನಿರ್ಬಂಧಿತ ಪ್ರದೇಶಗಳಿಗೂ ಮುಕ್ತ ರಹದಾರಿ ಹೊಂದಿರುತ್ತಾರೆ.

ಸಣ್ಣ-ಮದ್ಯಮ ಉದ್ಯಮಗಳು ಸರ್ಕಾರಿ ಮಂದಿಯಿಂದ ಹಿಡಿದು, ಸ್ಥಳೀಯ ಪುಢಾರಿಗಳಿಂದ ಹಿಡಿದು, ಪೊಲೀಸರ ತನಕ ಎಲ್ಲರೊಂದಿಗೂ ಸೆಣಸಿ ಸೆಣಸಿ ವ್ಯವಹಾರ ನಡೆಸಬೇಕಿದೆ. ಭಾರತದ ಉದ್ಯಮ ಜಗತ್ತು ಯಾವತ್ತೂ ಸರ್ಕಾರದ ಕುರಿತು ದೊಡ್ಡ ಧ್ವನಿಯಲ್ಲಿ ದೂರುವುದಿಲ್ಲ. ಸರ್ಕಾರಿ ವ್ಯವಸ್ಥೆ ಸೃಷ್ಟಿಸುವ ಕಷ್ಟಗಳ ವಿರುದ್ಧ ಸೆಣಸುವುದಕ್ಕಿಂತ ಅವುಗಳ ಜತೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಕಡಿಮೆ ನಷ್ಟ ಎನ್ನುವ ಭಾರತೀಯ ಸತ್ಯವನ್ನು ಅದು ತಲೆತಲೆಮಾರುಗಳಿಂದ ಅರ್ಥೈಸಿಕೊಂಡಿದೆ. ಭಾರತದಲ್ಲಿ ದಿನ ನಿತ್ಯದ ಆಡಳಿತ ನಡೆಯುವುದು ಅದರ ಲಿಖಿತ ಸಂವಿಧಾನದ ಆಧಾರದಲ್ಲಿ ಅಲ್ಲ. ಅದು ನಡೆಯುವುದು ಇಂತಹ ಲಕ್ಷ ಲಕ್ಷ ವಿವಿಧ ಹಿತಾಸಕ್ತಿಗಳ ನಡುವಣ ಒಪ್ಪಂದದ ಮೂಲಕ. ಬದಲಾದಷ್ಟೂ ಬದಲಾಗದೆ ಉಳಿಯುವ, ಉದ್ಯಮ ಸ್ನೇಹಿಯಾಗಲು ಪ್ರಯತ್ನಿಸುತ್ತಲೇ ಉದ್ಯಮ ವಿರೋಧಿಯಾಗಿಯೇ ಉಳಿಯುವ ಭಾರತದ ಸರ್ಕಾರಿ ವ್ಯವಸ್ಥೆ, ಅದರ ಆಳ, ಅಗಲ, ವಿಸ್ತಾರ, ಚಿತ್ತಾರ ಇತ್ಯಾದಿಗಳೆಲ್ಲಾ ವಿಶ್ವಬ್ಯಾಂಕ್ ಈಗ ಲೆಕ್ಕ ಹಾಕುವ ಶ್ರೇಯಾಂಕದಲ್ಲಿ ಅಡಕವಾಗಿಲ್ಲ. ಭಾರತದ ಉದ್ಯಮ ಪರಿಸರದ ಸಂಕೀರ್ಣತೆಯನ್ನು ವಾಷಿಂಗ್ಟನ್‌ನಲ್ಲಿ ಕುಳಿತ ವಿಶ್ವಬ್ಯಾಂಕಿನ ಪ್ರಭೃತಿಗಳು ಅಂಕಿ-ಅಂಶಗಳಲ್ಲಿ ಹಿಡಿದಿಡುವುದು ಬಿಡಿ ಭಾವುಕರಾಗಿ ಯೋಚಿಸಲು ಕೂಡಾ ಸಾಧ್ಯವಿಲ್ಲ. ಆದುದರಿಂದ ಶ್ರೇಯಾಂಕದಲ್ಲಿ ಏರಿಕೆ ದಾಖಲಿಸುವುದು ಸುಲಭ. ಆದರೆ ಉದ್ಯಮಸ್ನೇಹಿ ಪರಿಸರ ಸೃಷ್ಟಿಸುವುದು ಕಷ್ಟ. ಅಥವಾ ಶ್ರೇಯಾಂಕದಲ್ಲಿ ಏರಿಕೆಯಾದಾಕ್ಷಣ ದೇಶದಲ್ಲೊಂದು ಅದ್ಭುತ ಉದ್ಯಮಸ್ನೇಹಿ ಪರಿಸರ, ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಭಾವಿಸುವಂತಿಲ್ಲ. ಆದುದರಿಂದ ಶ್ರೇಯಾಂಕ ಉತ್ತಮಪಡಿಸಿಕೊಳ್ಳುವಷ್ಟಕ್ಕೆ ಸುಧಾರಣೆಗಳೆಲ್ಲಾ ಸೀಮಿತವಾಗಿ ಬಿಟ್ಟರೆ ಎಲ್ಲವೂ ಹಿತಾನುಭವದಲ್ಲೇ ಕಳೆದುಹೋಗಬಹುದು, ಮತ್ತೊಮ್ಮೆ ‘ಭಾರತ ಪ್ರಕಾಶಿಸುತ್ತಿದೆ’ ಪುನರಾವರ್ತಿಸಬಹುದು.

ಈಗಿನ ಸ್ಥಿತಿಯಲ್ಲಿ, ಈಗ ವಿಶ್ವಬ್ಯಾಂಕ್ ಉದ್ಯಮಸ್ನೇಹಿ ಶ್ರೇಯಾಂಕವನ್ನು ಲೆಕ್ಕ ಹಾಕುವ ಪದ್ಧತಿಯಲ್ಲಿ ದೇಶವನ್ನು ಉದ್ಯಮಸ್ನೇಹಿಯನ್ನಾಗಿ ಮಾಡುವುದು ಎಂದರೆ ವ್ಯವಸ್ಥೆಯ ಆಯ್ದ ಕೆಲ ಭಾಗಗಳನ್ನು ಆಯ್ದ ಕೆಲ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗಾಗಿ ಸುಧಾರಿಸುವುದು ಎಂದು ಅರ್ಥ. ಅಂದರೆ ಒಟ್ಟು ವ್ಯವಸ್ಥೆ ಯಥಾ ಪ್ರಕಾರ ಕೆಟ್ಟದಾಗಿಯೇ ಇರುತ್ತದೆ. ಅದರೊಳಗಣ ಕೆಲ ಭಾಗಗಳನ್ನು ಉದ್ಯಮಗಳಿಗೆ ಸಂಬಂಧಿಸಿದಂತೆ ಹೆಚ್ಚು ಸ್ಪಂದಿಸುವಂತೆ ಮಾಡುವುದು. ಸರ್ಕಾರದ ಉದ್ದೇಶ ವ್ಯವಸ್ಥೆಯನ್ನು ಈ ರೀತಿ ಆಯ್ದ ವಲಯಗಳಲ್ಲಿ ಆಯ್ದ ಮಂದಿಗಾಗಿ ಸ್ನೇಹಿಯನ್ನಾಗಿಸುವುದೇ ಅಥವಾ ಅದನ್ನು ಸಂಪೂರ್ಣವಾಗಿ ಜನಸ್ನೇಹಿಯಾಗಿ ಮರುರೂಪಿಸುವುದೇ ಎನ್ನುವುದು ಇಲ್ಲಿರುವ ಪ್ರಶ್ನೆ. ಜನ-ಸ್ನೇಹಿಯಾಗಿರುವ ಒಂದು ವ್ಯವಸ್ಥೆ ಸಹಜವಾಗಿಯೇ ಉದ್ಯಮಸ್ನೇಹಿಯಾಗಿ ಇರುತ್ತದೆ. ಉದ್ಯಮಸ್ನೇಹಿಯಾಗಿರುವ ವ್ಯವಸ್ಥೆ ಜನಸ್ನೇಹಿಯಾಗಿಯೂ ಇರುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. ಮಾತ್ರವಲ್ಲ, ಜನಸ್ನೇಹಿಯಲ್ಲದ ವ್ಯವಸ್ಥೆಯಲ್ಲಿ ಉದ್ಯಮಸ್ನೇಹವೂ ಸುಸ್ಥಿರವಾಗಿ ಉಳಿಯಲಾರದು.

ಈ ಬಾರಿ ಭಾರತ ತನ್ನ ಶ್ರೇಯಾಂಕದಲ್ಲಿ ಏರಿಕೆ ದಾಖಲಿಸಿದ್ದು ಉದ್ಯಮಗಳನ್ನು ತೆರೆಯುವಲ್ಲಿ ಆದ ಸುಧಾರಣೆಗಳಿಗಿಂತ ಹೆಚ್ಚಾಗಿ ಉದ್ಯಮಗಳನ್ನು ಮುಚ್ಚುವುದಕ್ಕೆ ಬೇಕಾದಂತೆ ವ್ಯವಸ್ಥೆಯನ್ನು ಸುಲಲಿತಗೊಳಿಸಿದ್ದಕ್ಕಾಗಿ. ಅದಕ್ಕಿಂತ ಮುಖ್ಯವಾದ ಇನ್ನೊಂದು ಅಂಶವಿದೆ. ಉದ್ಯಮಗಳನ್ನು ತೆರೆಯುವುದು, ನಡೆಸುವುದು, ಮುಚ್ಚುವುದು ಸುಲಭವಾಗಬೇಕು ಎನ್ನುವ ಏಕೈಕ ಧ್ಯೇಯ ಹೊಂದಿದ ವಿಶ್ವಬಾಂಕಿನಂತಹ ಉದಾರವಾದಿ ಸಂಸ್ಥೆಗಳು ಈ ಉದ್ಯಮಗಳ ಸಾಮಾನ್ಯ ಕಾರ್ಮಿಕರ ವಿಚಾರಗಳನ್ನು ವಿಶೇಷವಾಗಿ ಗಮನಿಸುವುದಿಲ್ಲ.

ಶ್ರೇಯಾಂಕಕ್ಕೆ ಬೇಕಾದ ಮಾಹಿತಿ ಸಂಗ್ರಹಿಸುವಾಗ ಕಾರ್ಮಿಕ ಸಂಬಂಧಿ ಅಂಶಗಳನ್ನು ಸಂಗ್ರಹಿಸಲಾಗುತ್ತದೆಯಾದರೂ ಅವುಗಳು ಶ್ರೇಯಾಂಕದ ಲೆಕ್ಕಾಚಾರದಲ್ಲಿ ಬಳಕೆಯಾಗುವುದಿಲ್ಲ. ಸುಲಭವಾಗಿ ಉದ್ಯಮಗಳನ್ನು ಮುಚ್ಚುವುದು ಎಂದರೆ ಸುಲಭವಾಗಿ ಕಾರ್ಮಿಕರನ್ನು ಕಿತ್ತೆಸೆಯುವುದು ಎಂಬ ಅರ್ಥವೇ ಎಂದು ಪರಾಂಬರಿಸಲು ಕಾರ್ಮಿಕ ಸಂಘಟನೆಗಳು ಕೂಡಾ ಮುಂದಾಗದಷ್ಟು ಉದ್ಯಮಸ್ನೇಹಿಯಾದ ಸನ್ನಿವೇಶವನ್ನು ಸರ್ಕಾರಗಳು ಸೃಷ್ಟಿಸುತ್ತಿವೆ. ಎರಡು ವರ್ಷಗಳ ಹಿಂದೆ ಬೆಂಗಳೂರಿನ ಬೀದಿಗಳಲ್ಲಿ ಒಮ್ಮಿಂದೊಮ್ಮೆಲೆ ಹುಟ್ಟಿಕೊಂಡ ಗಾರ್ಮೆಂಟ್ ಕಾರ್ಮಿಕರ ಪ್ರತಿಭಟನೆಯನ್ನು ನೆನಪಿಸಿಕೊಳ್ಳಿ. ಕಾರ್ಮಿಕ ಭವಿಷ್ಯ ನಿಧಿಗೆ ಸಂಬಂಧಿಸಿದ ಸಣ್ಣ ಬದಲಾವಣೆಯನ್ನು ಪ್ರತಿಭಟಿಸುವ ನೆಪದಲ್ಲಿ ಹುಟ್ಟಿಕೊಂಡ ಪ್ರತಿಭಟನೆಯ ಹಿಂದೆ ನಿಜಕ್ಕೂ ಇದ್ದದ್ದು ವರ್ಷಾನುಗಟ್ಟಲೆ ಕಾರ್ಮಿಕರು ತಮ್ಮೊಳಗೆ ಅದುಮಿಟ್ಟುಕೊಂಡಿದ್ದ ಅಗೋಚರ ಆಕ್ರೋಶ. ಆದುದರಿಂದ ದೊಡ್ಡ ಸಂಸ್ಥೆಗಳು ಹೊರತರುವ ದೊಡ್ಡ ದೊಡ್ಡ ಸುದ್ದಿ ಮಾಡುವ, ದೊಡ್ಡ ದೊಡ್ಡ ನಾಯಕರಿಗೆ ಆಸಕ್ತಿ ಹುಟ್ಟಿಸುವ ಇಂತಹ ಅಂಕಿ-ಅಂಶಗಳ ಸರ್ಕಸ್‌ಗಳು ತೆರೆದಿಟ್ಟಷ್ಟೇ ಸತ್ಯಗಳನ್ನು ಮುಚ್ಚಿಡುತ್ತವೆ ಎನ್ನುವುದು ಕೂಡಾ ಭಾರತದಂತಹ ಕಾರ್ಮಿಕ ಬಾಹುಳ್ಯದ ದೇಶಗಳು ಮರೆಯಬಾರದ ವಿಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT