ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠ ವಿಮೋಚಕ ಬೌದ್ಧನಾದ ದಿನ

Last Updated 13 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನನ್ನ ನೆಚ್ಚಿನ ಪತ್ರಿಕೆ ಈಗ ಇಲ್ಲ. ಅದರ ಹೆಸರು ‘ಬಾಂಬೆ ಕ್ರಾನಿಕಲ್’. ಬ್ರಿಟಿಷರ ಮಾಲೀಕತ್ವದ ಮತ್ತು ಬ್ರಿಟಿಷ್ ಚಿಂತನೆಯ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ರಾಷ್ಟ್ರೀಯ ವಾದಿ ನೆಲೆಯಲ್ಲಿ ಪರ್ಯಾಯವಾಗಿ 1910ರಲ್ಲಿ ಈ ಪತ್ರಿಕೆಯನ್ನು ಆರಂಭಿಸಲಾಯಿತು.

ಇಪ್ಪತ್ತನೇ ಶತಮಾನದ ಮೊದಲರ್ಧ ಭಾಗದಲ್ಲಿ ಬಾಂಬೆಯಲ್ಲಿ ಜೀವಿಸುವುದು ಮತ್ತು ಕೆಲಸ ಮಾಡುವುದು ಅತ್ಯಂತ ಸಡಗರದ ಸಂಗತಿಯಾಗಿತ್ತು. ಬಾಂಬೆ, ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದ ವಾಣಿಜ್ಯ ರಾಜಧಾನಿಯಾಗಿತ್ತು ಮತ್ತು ಸಿನಿಮಾ ಉದ್ಯಮ, ರಾಷ್ಟ್ರೀಯ ರಾಜಕಾರಣ ಹಾಗೂ ಇತರ ಹತ್ತು ಹಲವು ವಿಷಯಗಳ ಕೇಂದ್ರವಾಗಿತ್ತು. ಆ ಕಾಲದ ಸಂಭ್ರಮ, ಬದುಕಿನ ತೀವ್ರತೆಗಳೆಲ್ಲವೂ ‘ಬಾಂಬೆ ಕ್ರಾನಿಕಲ್‌’ನ ಪುಟಗಳಲ್ಲಿ ಅತ್ಯಂತ ಸೊಗಸಾಗಿ ದಾಖಲಾಗಿವೆ.

ಈ ಪತ್ರಿಕೆಯಲ್ಲಿ ಹಲವು ಅತ್ಯುತ್ತಮ ವರದಿಗಾರರಿದ್ದರು ಮತ್ತು ಇಬ್ಬರು ಅಸಾಧಾರಣ ಸಂಪಾದಕರಿದ್ದರು-ಆರಂಭದ ವರ್ಷಗಳಲ್ಲಿ ಬಿ.ಜಿ. ಹಾರ್ನಿಮನ್ ಸಂಪಾದಕರಾಗಿದ್ದರೆ, 1920 ಮತ್ತು 30ರ ದಶಕಗಳಲ್ಲಿ ಪತ್ರಿಕೆ ಸಂಪಾದಿಸಿದವರು ಎಸ್.ಎ. ಬ್ರೆಲ್ವಿ.

ಬಿ.ಆರ್. ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಅಂಕಣ ಬರೆಯಬೇಕು ಎಂದು ಯೋಚಿಸಿದಾಗ ನಾನು ‘ಬಾಂಬೆ ಕ್ರಾನಿಕಲ್‌’ನ ಹಳೆಯ ಸಂಚಿಕೆಗಳನ್ನು ನೋಡಿದೆ. ಅಂಬೇಡ್ಕರ್ ಸಾರ್ವಜನಿಕ ಜೀವನ ಪ್ರವೇಶಿಸಿದಾಗಿನಿಂದಲೇ ಅವರ ಎಲ್ಲ ಚಟುವಟಿಕೆಗಳನ್ನು ಈ ಪತ್ರಿಕೆ ವರದಿ ಮಾಡಿದ್ದು ನನಗೆ ತಿಳಿದಿತ್ತು.

ಅವರ ವೃತ್ತಿ ಜೀವನದ ಕೊನೆಯ ಅತ್ಯಂತ ಮಹತ್ವದ ಘಟನೆ ಬಗ್ಗೆ ಪತ್ರಿಕೆ ಏನು ಬರೆದಿದೆ ಎಂಬ ಕುತೂಹಲ ನನ್ನಲ್ಲಿ ಇತ್ತು. ಈ ಹೊತ್ತಿಗೆ ಹಾರ್ನಿಮನ್ ಮತ್ತು ಬ್ರೆಲ್ವಿ ಅವರಿಬ್ಬರೂ ನಿಧನರಾಗಿದ್ದರೂ ಅದೃಷ್ಟವಶಾತ್ ಘಟನೆಯನ್ನು ವರದಿ ಮಾಡಲು ಪತ್ರಿಕೆ  ಜೀವಂತವಿತ್ತು.

ಇಂದಿನಿಂದ ಸರಿಯಾಗಿ 60 ವರ್ಷಗಳ ಹಿಂದೆ, 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ಈ ಸಮಾರಂಭ ಮತ್ತು ‘ಬಾಂಬೆ ಕ್ರಾನಿಕಲ್‌’ನ  ವರದಿಗೆ ಬರುವ ಮೊದಲು ನಾನು ಆಗಿನ ಸಂದರ್ಭವನ್ನು ಸ್ವಲ್ಪ ವಿವರಿಸುತ್ತೇನೆ.

1935ರ ಅಕ್ಟೋಬರ್‌ನಲ್ಲಿ, ಸ್ಥಳೀಯ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿಕೊಳ್ಳಬೇಕು ಎಂದು ಕೇಳುವ ಧೈರ್ಯ ಮಾಡಿದ್ದಕ್ಕಾಗಿ ಗುಜರಾತ್‌ನ ಕವಿಥ ಎಂಬ ಹಳ್ಳಿಯ ಅಸ್ಪೃಶ್ಯರನ್ನು ಮೇಲ್ಜಾತಿ ಜನರು ಬಹಿಷ್ಕರಿಸಿದ್ದರು. ಈ ಘಟನೆಯ ಬಗ್ಗೆ ತಿಳಿದ ಅಂಬೇಡ್ಕರ್, ‘ನಾವು ಬೇರೊಂದು ಧರ್ಮಕ್ಕೆ ಸೇರಿದವರಾಗಿದ್ದರೆ ನಮ್ಮನ್ನು ಈ ರೀತಿ ನಡೆಸಿಕೊಳ್ಳುವ ಧೈರ್ಯವನ್ನು ಯಾರೂ ತೋರುತ್ತಿರಲಿಲ್ಲ’ ಎಂದು ಹೇಳಿದ್ದರು.

‘ಸಮಾನ ಸ್ಥಾನ ಮತ್ತು ಸಮಾನವಾಗಿ ನೋಡಿಕೊಳ್ಳುವ ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ತಮ್ಮ ಅನುಯಾಯಿಗಳಿಗೆ ಅವರು ಹೇಳಿದ್ದರು. ನಾಸಿಕ್‌ನಲ್ಲಿ ನಡೆದ ಶೋಷಿತ ವರ್ಗಗಳ ಸಭೆಯಲ್ಲಿ, ಅಂಬೇಡ್ಕರ್ ಅವರ ಸಲಹೆಯಂತೆ, ಹಿಂದೂ ಧರ್ಮವನ್ನು ತೊರೆದು ತಮಗೆ ಇತರ ಸದಸ್ಯರ ಜತೆಗೆ ಸಮಾನ ಸ್ಥಾನ ನೀಡುವ ಯಾವುದೇ ಧರ್ಮವನ್ನು ಅಪ್ಪಿಕೊಳ್ಳುವಂತೆ ಕೋರುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಹಿಂದೂ ಧರ್ಮದಿಂದ ಸಂಬಂಧ ಕಡಿದುಕೊಳ್ಳುವ ನಿರ್ಧಾರವನ್ನು 1935ರ ಅಕ್ಟೋಬರ್‌ನಲ್ಲಿಯೇ ಅಂಬೇಡ್ಕರ್ ಕೈಗೊಂಡಿದ್ದರು. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳಲು ಅವರಿಗೆ 21 ವರ್ಷ ಬೇಕಾಯಿತು. ಯಾಕೆ? ಎಲ್ಲ ಆಯ್ಕೆಗಳನ್ನೂ ಎಚ್ಚರಿಕೆಯಿಂದ ಪರಿಶೀಲನೆಗೆ ಒಳಪಡಿಸಬೇಕು ಎಂಬುದು ಒಂದು ಕಾರಣವಾಗಿತ್ತು.

ಅವರು ಆಗಲೇ ಕೈಗೆತ್ತಿಕೊಂಡಿದ್ದ ಸುಧಾರಣೆ ಮತ್ತು ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ತುರ್ತು ಪ್ರಶ್ನೆಗಳ ಬಗ್ಗೆ ದಿನವೂ ಗಮನ ಹರಿಸಬೇಕಿದ್ದ ಅಗತ್ಯ ಇನ್ನೊಂದು ಕಾರಣವಾಗಿತ್ತು. ಹಿಂದೂ ಧರ್ಮವನ್ನು ತೊರೆಯಬೇಕು ಎಂದು ಹೇಳಿದಾಗಲೇ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಪ್ರಚಾರಕರು ಅಂಬೇಡ್ಕರ್ ಅವರನ್ನು ಸಂಪರ್ಕಿಸಿದರು. ಅವರು ಈ ಪ್ರಸ್ತಾವಗಳನ್ನು ತಿರಸ್ಕರಿಸಲು ಒಂದು ಕಾರಣ ಈ ಎರಡೂ ಧರ್ಮಗಳು ಭಾರತ ಮೂಲದವಲ್ಲ ಎಂಬುದಾಗಿತ್ತು. 

ತಮ್ಮ ಧಾರ್ಮಿಕ ಆಚರಣೆಗಳಲ್ಲಿ ಹಿಂದೂ ಜಾತಿ ವ್ಯವಸ್ಥೆಯನ್ನೇ ಅನುಸರಿಸುತ್ತಿದ್ದಾರೆ ಎಂಬುದು ತಿಳಿಯುವ ತನಕ ಅವರು ಸಿಖ್‌ ಧರ್ಮಕ್ಕೆ ಮತಾಂತರವಾಗುವ ಆಯ್ಕೆಯನ್ನು ಪರಿಶೀಲಿಸಿದ್ದರು. ಶೋಧ ಮುಂದುವರಿಯಿತು. 1940ರ ದಶಕದ ಅರಂಭದಿಂದ ಅಂಬೇಡ್ಕರ್ ಹೆಚ್ಚು ಹೆಚ್ಚಾಗಿ ಬೌದ್ಧ ಧರ್ಮದತ್ತ ಆಕರ್ಷಿತರಾದರು ಮತ್ತು ಬುದ್ಧ ಹಾಗೂ ಆತನ ಕೊಡುಗೆಗಳ ಬಗ್ಗೆ ಅಧ್ಯಯನ ಮತ್ತು ಬರವಣಿಗೆ ನಡೆಸತೊಡಗಿದರು.

1954ರಲ್ಲಿ ರಂಗೂನ್‌ನಲ್ಲಿ ನಡೆದ ವಿಶ್ವ ಬೌದ್ಧ ಸಮಾವೇಶದಲ್ಲಿಯೂ ಭಾಗವಹಿಸಿದರು. ಈ ಹೊತ್ತಿಗೆ ಬೌದ್ಧ ಧರ್ಮಕ್ಕೆ ಸೇರುವುದಾಗಿ ಅವರು ನಿರ್ಧರಿಸಿದ್ದರು. ಆದರೆ, ರಾಜಕೀಯ ಮತ್ತು ಸಮಾಜ ಸುಧಾರಣಾ ಚಟುವಟಿಕೆಗಳು ಹಾಗೂ ಅನಾರೋಗ್ಯವು ಮತಾಂತರ ವಿಳಂಬವಾಗುವಂತೆ ಮಾಡಿತು.

1956ರ ಮೇಯಲ್ಲಿ ‘ಬುದ್ಧ ಮತ್ತು ಧರ್ಮ’ ಎಂಬ ಪುಸ್ತಕದ ಬರವಣಿಗೆ ಪೂರ್ಣಗೊಳಿಸಿ ಅದನ್ನು ಮುದ್ರ ಕರಿಗೆ ಕಳುಹಿಸಿದರು. ಇದೇ ಸಂದರ್ಭದಲ್ಲಿ ಬೌದ್ಧ ಧರ್ಮ ಸೇರುವ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು.

ತಮಗೆ ದೊಡ್ಡ ಸಂಖ್ಯೆಯ ನಿಷ್ಠ ಅನುಯಾಯಿಗಳಿದ್ದ ನಾಗಪುರ ನಗರವನ್ನು ಮತಾಂತರ ಸಮಾರಂಭಕ್ಕೆ ಅವರು ಆಯ್ಕೆ ಮಾಡಿಕೊಂಡರು. ಮತಾಂತರಕ್ಕಾಗಿ ಅವರು ಆಯ್ಕೆ ಮಾಡಿಕೊಂಡ ದಿನ ಅಕ್ಟೋಬರ್ 14ರ ಭಾನುವಾರ. ಆ ವರ್ಷ ಆ ದಿನ ಹಿಂದೂ ಕ್ಯಾಲೆಂಡರ್ ಪ್ರಕಾರ ವಿಜಯ ದಶಮಿಯಾಗಿತ್ತು.

‘ಬಾಂಬೆ ಕ್ರಾನಿಕಲ್‌’ನ  ವರದಿಗಾರರೊಬ್ಬರು ಕೆಲವು ದಿನಗಳ ಮೊದಲೇ ನಾಗಪುರಕ್ಕೆ ಬಂದಿದ್ದರು. ಸಮಾ ರಂಭದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿ ಕೊಳ್ಳಲು ಸಾವಿರಾರು ಜನರು ನಾಗಪುರದ ಅಂಬೇಡ್ಕರ್ ಪರಿಶಿಷ್ಟ ಜಾತಿ ಒಕ್ಕೂಟದ ಕಚೇರಿಯ ಮುಂದೆ ಸಾಲು ನಿಂತಿದ್ದಾರೆ ಎಂದು ಒಂದು ವಾರದ ಮೊದಲು ಅವರು ವರದಿ ಮಾಡಿದ್ದಾರೆ. 12ನೇ ತಾರೀಕಿನಂದು ‘ನಾಗಪುರ ದತ್ತ ಬರುತ್ತಿದ್ದ ಎಲ್ಲ ರೈಲು, ಬಸ್ ಮತ್ತು ಇತರ ವಾಹನಗಳು ಅಂಬೇಡ್ಕರ್ ಅವರ ಅನುಯಾಯಿಗಳಿಂದ ತುಂಬಿ ಹೋಗಿದ್ದವು’.

ನಿಗದಿಯಂತೆ ಅಕ್ಟೋಬರ್ 14ರಂದು ಮತಾಂತರ ನಡೆಯಿತು. ಮರುದಿನ ‘ಬಾಂಬೆ ಕ್ರಾನಿಕಲ್‌’ನ  ಮೊದಲ ಪುಟದಲ್ಲಿ ವರದಿ ಪ್ರಕಟವಾಯಿತು. ‘ಸಾವಿರಾರು ಜನರು ಬೆಳಗ್ಗಿನಿಂದಲೇ ನಿಲ್ಲದ ಅಲೆಗಳಂತೆ ಈ ಸ್ಥಳಕ್ಕೆ ಧಾವಿಸುತ್ತಿದ್ದರು. ಬೃಹತ್ ಹಿಮ ಕುಸಿತದಂತೆ ದೊಡ್ಡ ದೊಡ್ಡ ಜನ ಸಮೂಹಗಳು ರಸ್ತೆಗೆ ಬಂದದ್ದರಿಂದ ರಸ್ತೆ ಸಂಚಾರ ತಾಸುಗಟ್ಟಲೇ ಸ್ಥಗಿತವಾಗಿತ್ತು.

ಜಗತ್ತಿನ ಯಾವುದೇ ಭಾಗದಲ್ಲಿ ನಡೆದಿರದಂತಹ ಸಮಾರಂಭ ನಗರದ ಹೊರವಲಯದ ಹತ್ತು ಲಕ್ಷ ಚದರ ಅಡಿ ವಿಸ್ತಾರವಾದ ಮೈದಾನದಲ್ಲಿ ನಡೆಯಿತು. ಇಲ್ಲಿ ಜನ ಸಾಗರವೇ ನೆರೆದಿತ್ತು’. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ ಮೂರು ಲಕ್ಷಕ್ಕೂ ಹೆಚ್ಚು ಅಂಬೇಡ್ಕರ್ ಅನುಯಾಯಿಗಳು ಅಂದು ಬೌದ್ಧ ಧರ್ಮ ಸೇರಿದರು.

ಮೊದಲಿಗೆ ಅಂಬೇಡ್ಕರ್ ಮತ್ತು ಅವರ ಹೆಂಡತಿ ಸವಿತಾಬಾಯಿ ಮತಾಂತರಗೊಂಡರು. ಬರ್ಮಾದಿಂದ ಬಂದಿದ್ದ 83 ವರ್ಷದ ಬೌದ್ಧ ಭಿಕ್ಷು  ಚಂದ್ರಮೋನಿ, ಅಂಬೇಡ್ಕರ್‌ ಮತ್ತು ಅವರ ಹೆಂಡತಿಯನ್ನು ಹೊಸ ಧರ್ಮಕ್ಕೆ ಬರಮಾಡಿಕೊಂಡರು. ಭಿಕ್ಷು ಹೇಳಿದಂತೆ ಇವರಿಬ್ಬರೂ ಪ್ರತಿಜ್ಞೆ ಸ್ವೀಕರಿಸಿದರು. ನಂತರ ಅಲ್ಲಿ ಸೇರಿದ್ದ ಅನುಯಾಯಿಗಳಿಗೆ ಅಂಬೇಡ್ಕರ್ ಅವರು ಮರಾಠಿಯಲ್ಲಿ ಸಾಮೂಹಿಕವಾಗಿ ಪ್ರತಿಜ್ಞೆ ಬೋಧಿಸಿದರು.

‘ಅಂಬೇಡ್ಕರ್ ಅಚ್ಚ ಬಿಳಿಯ ವಸ್ತ್ರ ಧರಿಸಿದ್ದರು’ ಎಂದು ‘ಬಾಂಬೆ ಕ್ರಾನಿಕಲ್’ ವರದಿ ಮಾಡಿದೆ. ಮತಾಂತರ ವಿಧಿಗಾಗಿ ಹೆಂಡತಿಯ ಜತೆ ವೇದಿಕೆ ಏರಿದಾಗ ‘ಕಿವಿಗಡಚಿಕ್ಕುವ ಚಪ್ಪಾಳೆ ಮೂಲಕ ಅವರಿಗೆ ಶುಭ ಹಾರೈಸಲಾಯಿತು, ಸಾವಿರಾರು ಕ್ಯಾಮೆರಾಗಳು ಫೋಟೊ ಕ್ಲಿಕ್ಕಿಸಿದವು’.

ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಕೈಗೊಂಡ ಪ್ರಮಾಣ ಹೀಗಿತ್ತು:
‘ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುತ್ತೇನೆ’.
‘ಕೊಲ್ಲುವುದಿಲ್ಲ, ಕದಿಯುವುದಿಲ್ಲ, ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ, ಮದ್ಯ ಕುಡಿಯುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬ ಪಂಚಶೀಲ ತತ್ವಗಳನ್ನು ಅನುಸರಿಸುತ್ತೇನೆ’.

‘ಜ್ಞಾನ, ಸಹಾನುಭೂತಿ ಮತ್ತು ಕರ್ತವ್ಯದ ಮೂರು ಪ್ರಮುಖ ತತ್ವಗಳ ಆಧಾರದಲ್ಲಿ ನೆಲೆಯಾಗಿರುವ ಬೌದ್ಧ ಧರ್ಮ ಮಾತ್ರ ನಿಜವಾದ ಧರ್ಮ ಎಂದು ನಾನು ನಂಬಿದ್ದೇನೆ. ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಹೊಸ ಹುಟ್ಟು ಪಡೆದುಕೊಂಡಿದ್ದೇನೆ’.

ತಾವು ಯಾಕೆ ಬೌದ್ಧ ಧರ್ಮ ಸೇರಬೇಕಾಯಿತು ಎಂಬುದನ್ನು ಮರುದಿನ ನಡೆದ ಬೃಹತ್ ಸಮಾವೇಶದಲ್ಲಿ ಅನುಯಾಯಿಗಳಿಗೆ ಅಂಬೇಡ್ಕರ್ ವಿವರಿಸಿದರು. ಮನುಷ್ಯ ಆತ್ಮಾವಲೋಕನಕ್ಕೆ ಸದಾ ಪ್ರಯತ್ನಿಸುತ್ತಿರುತ್ತಾನೆ. ಆದರೆ ಆರ್ಥಿಕ ಸುಧಾರಣೆ ಮತ್ತು ಶಾಸಕಾಂಗದಲ್ಲಿ ಸ್ಥಾನವೂ ಮುಖ್ಯವಾದುದೇ ಆಗಿದೆ.

‘ಸರ್ವತೋಮುಖ ಬೆಳವಣಿಗೆಗೆ ಧರ್ಮದ ನಂಬಿಕೆ ಅತ್ಯಂತ ಅಗತ್ಯ. ಆದರೆ ಹಿಂದೂ ಧರ್ಮದ ಸಿದ್ಧಾಂತಗಳು ಹರಿಜನರ ವಿಮೋಚನೆಗೆ ಇರುವ ಅತ್ಯಂತ ದೊಡ್ಡ ತೊಡಕಾಗಿವೆ’ ಎಂದು ಅಂಬೇಡ್ಕರ್ ವಾದಿಸಿದ್ದಾರೆ (ಹರಿಜನ ಎಂಬುದು ‘ಬಾಂಬೆ ಕ್ರಾನಿಕಲ್’ ತನ್ನ ವರದಿಯಲ್ಲಿ ಬಳಸಿದ ಪದ. ಮರಾಠಿಯಲ್ಲಿ ಅಂಬೇಡ್ಕರ್ ಬಳಸಿದ ಪದ ಬೇರೆ ಎಂಬುದು ಖಚಿತ).

‘ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರನ್ನು ಬಿಟ್ಟು ಇತರರಲ್ಲಿ ಉತ್ಸಾಹ ಮೂಡಿಸುವಂತಹ ಯಾವುದೇ ಅಂಶ ಹಿಂದೂ ಧರ್ಮದಲ್ಲಿ ಇಲ್ಲ. ಹಾಗಾಗಿ ಅವರು ಹೊಸ ಧರ್ಮವೊಂದಕ್ಕೆ ಸೇರುವ ನಿರ್ಣಾಯಕ ನಿರ್ಧಾರ ಕೈಗೊಳ್ಳಬೇಕಾಯಿತು’ ಎಂದು ಅಂಬೇಡ್ಕರ್ ಹೇಳಿದರು ಎಂದು ‘ಕ್ರಾನಿಕಲ್’ ವರದಿ ಹೇಳುತ್ತದೆ.

ಹೊಸ ಹೆಜ್ಜೆಯ ಬಗೆಗೆ ಅನುಯಾಯಿಗಳಲ್ಲಿ ಇರುವ ಅನುಮಾನಗಳನ್ನು ತಾವು ಸದ್ಯದಲ್ಲೇ ಬರೆಯಲಿರುವ ಪುಸ್ತಕಗಳು ಪರಿಹರಿಸುತ್ತವೆ ಎಂದು ಅಂಬೇಡ್ಕರ್ ಭರವಸೆ ನೀಡಿದರು. ‘ದೇಶದ ಎಲ್ಲ ಜನರಿಗೆ ಹೊಸ ಧರ್ಮವು ಸ್ವೀಕಾರಾರ್ಹ ಮತ್ತು ಗೌರವಾರ್ಹ ಆಗುವಂತೆ ಮಾಡಬೇಕು’ ಎಂದು ಅನುಯಾಯಿಗಳಿಗೆ ಅಂಬೇಡ್ಕರ್ ಕರೆ ನೀಡಿದರು.

ಬೌದ್ಧ ಧರ್ಮದ ಮೂಲ ಭಾರತವೇ ಆಗಿದ್ದರೂ ಆ ಸಂದರ್ಭದಲ್ಲಿ ಭಾರತದಲ್ಲಿ ಆ ಧರ್ಮ ಕ್ಷೀಣಿಸಿತ್ತು, ಆದರೆ ಬೇರೆ ಕಡೆಗಳಲ್ಲಿ ಚೆನ್ನಾಗಿ ಬೆಳೆದಿತ್ತು. ಹಾಗಾಗಿ, ಈ ನಿರ್ಧಾರದ ಮೇಲೆ ವಿದೇಶಿ ಪ್ರಭಾವದ ಬಗ್ಗೆ ಪ್ರಶ್ನೆಗಳು ಏಳಬಹುದು ಎಂಬುದರ ಅರಿವು ಅಂಬೇಡ್ಕರ್ ಅವರಿಗೆ ಇತ್ತು.

ಅದನ್ನು ಪರಿಹರಿಸುವುದಕ್ಕಾಗಿಯೇ, ಮತಾಂತರದ ಮರುದಿನ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಂಬೇಡ್ಕರ್ ಹೀಗೆ ಹೇಳಿದ್ದಾರೆ: ‘ಈ ಹೊಸ ಧರ್ಮಕ್ಕೆ ವಿದೇಶದಿಂದ ಯಾವುದೇ ನೆರವು ಕೇಳುವುದಿಲ್ಲ. ನಾನು ಈ ಹೆಜ್ಜೆ ಇರಿಸಿದ್ದೇನೆ. ಅವರು ಹಣ ಕೊಡಬಹುದು ಅಥವಾ ಕೊಡದೇ ಇರಬಹುದು. ನಾನು ಈ ದೇಶದ ಜನರ ಮೇಲೆಯೇ ಅವಲಂಬಿತನಾಗಲು ಬಯಸಿದ್ದೇನೆ’.

‘ನಿಮ್ಮ ಆದಾಯದ ಶೇ 5ರಷ್ಟನ್ನು ಸಮಾಜ ಸೇವೆ ಮತ್ತು ಹೊಸ ಧರ್ಮಕ್ಕಾಗಿ ನೀಡಿದರೆ ಈ ದೇಶವನ್ನು ಅಭಿವೃದ್ಧಿಗೊಳಿಸುವುದು ಮಾತ್ರವಲ್ಲ, ಇಡೀ ಜಗತ್ತಿನ ಅಭಿ ವೃದ್ಧಿ ಸಾಧ್ಯ’ ಎಂದು ಅಂಬೇಡ್ಕರ್ ತಮ್ಮ ಅನುಯಾಯಿ ಗಳಿಗೆ ಹೇಳಿದರು.

ಬೌದ್ಧ ಧರ್ಮಕ್ಕೆ ಮತಾಂತರವಾಗಲು ಅಂಬೇಡ್ಕರ್ ಅವರು ಅಕ್ಟೋಬರ್ 14ನೇ ದಿನಾಂಕವನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಅದು ಭಾನುವಾರ ಎಂಬುದು ಕಾರಣವಾಗಿತ್ತೇ ಅಥವಾ ಹಿಂದೂ ಕ್ಯಾಲೆಂಡರ್‌ನಲ್ಲಿ ಅದೊಂದು ಪ್ರಮುಖ ದಿನ ಎಂಬುದು ಕಾರಣವಾಗಿತ್ತೇ? ಎರಡನೆಯದು ಕಾರಣ ಎಂದಾದರೆ,  ಬೌದ್ಧ ಧರ್ಮಕ್ಕೆ ಮತಾಂತರವಾಗುವ ಮೂಲಕ ಹಿಂದೂ ಧರ್ಮ ಅನುಸರಿ ಸುತ್ತಿದ್ದ ಜಾತಿ ತಾರತಮ್ಯದಿಂದ ತಾವು ವಿಮೋಚನೆ ಪಡೆದುದು ಒಂದು ರೀತಿಯ ವಿಜಯ ಎಂದು ಪರಿಗಣಿ ಸಲು ಅಂಬೇಡ್ಕರ್ ಬಯಸಿದ್ದರೇ?

ಈ ಪ್ರಶ್ನೆಗಳಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ಆದರೆ ಇನ್ನೊಂದು ಊಹೆ ಇನ್ನೂ ಹೆಚ್ಚು ಕುತೂಹಲಕರ- ಒಂದು ವೇಳೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಸ್ವಲ್ಪ ಸಮ ಯದಲ್ಲಿ ಅಂಬೇಡ್ಕರ್ ನಿಧನರಾಗದಿರುತ್ತಿದ್ದರೆ ಏನಾ ಗುತ್ತಿತ್ತು? ನಾಗಪುರದ ಕಾರ್ಯಕ್ರಮ ನಡೆದು ಕೇವಲ ಏಳು ವಾರಗಳ ನಂತರ ಅಂಬೇಡ್ಕರ್ ನಿಧನರಾಗುತ್ತಾರೆ. ಆಗ ಅವರಿಗೆ 65 ವರ್ಷ ವಯಸ್ಸು.

ಒಂದು ವೇಳೆ ಅಂಬೇ ಡ್ಕರ್ ಮತ್ತೂ ಒಂದು ದಶಕ ಜೀವಿಸಿದ್ದಿದ್ದರೆ ಅವರಿಂದ ಸ್ಫೂರ್ತಿ ಪಡೆದ ಇನ್ನಷ್ಟು ಮಾಜಿ ಅಸ್ಪೃಶ್ಯರು ಬೌದ್ಧ ಧರ್ಮ ಸೇರುತ್ತಿದ್ದರು. ‘ಹೊಸ ಧರ್ಮ ಸೇರ್ಪಡೆಯ ಬಗ್ಗೆ ಬರೆಯುತ್ತೇನೆ’ ಎಂದು ಅಂಬೇಡ್ಕರ್ ಹೇಳಿದ್ದ ಪುಸ್ತಕಗ ಳನ್ನು ಅವರು ಓದುತ್ತಿದ್ದರು. ಇದನ್ನು ಬಳಸಿಕೊಂಡು ಹೊಸ ತಲೆಮಾರಿನ ದಲಿತ ಬೌದ್ಧರು ‘ದೇಶದ ಜನರಿಗೆ ಹೊಸ ಧರ್ಮ ಸ್ವೀಕಾರಾರ್ಹ ಮತ್ತು ಗೌರವಾರ್ಹ’ ಆಗುವಂತೆ ಮಾಡುತ್ತಿದ್ದರು.

ಕೆಲವೇ ಲಕ್ಷ ಜನರಿಗಿಂತ ಹತ್ತಾರು ಲಕ್ಷ ದಲಿತರು ಸಾಮೂಹಿಕವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಭಾರತದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದ ಮೇಲೆ ಅಗಾಧವಾದ ಪರಿವರ್ತಕ ಪರಿಣಾಮ ಉಂಟಾಗುತ್ತಿತ್ತು.

ಬಹುಶಃ ಅಂಬೇಡ್ಕರ್ ಅವರು ಬೇಗನೆ ನಿಧನರಾ ದುದರ ದೊಡ್ಡ ದುರಂತ ಇದು. ಅಂಬೇಡ್ಕರ್ ಅವರು ಇನ್ನೂ ಹತ್ತು ಅಥವಾ ಹದಿನೈದು ವರ್ಷ ಜೀವಿಸಿದ್ದಿದ್ದರೆ, ಹತ್ತಾರು ಲಕ್ಷ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ ವಾಗುವಂತೆ ನೋಡಿಕೊಳ್ಳುತ್ತಿದ್ದರು.

ಜಾತಿ ವ್ಯವಸ್ಥೆಯಲ್ಲಿ ಇದ್ದ ಆಘಾತಕಾರಿ ಅಸಮಾನತೆಗಳನ್ನು ಪರಿಹರಿಸು ವುದಷ್ಟೇ ಈ ಸವಾಲನ್ನು ಎದುರಿಸಲು ಹಿಂದೂ ಧರ್ಮದ ಮುಂದೆ ಇದ್ದ ಏಕೈಕ ಮಾರ್ಗವಾಗಿರುತ್ತಿತ್ತು. ಆದರೆ ಶ್ರೇಷ್ಠ ವಿಮೋಚಕ ನಿಧನವಾಗುವುದರೊಂದಿಗೆ ಹಿಂದೂಗಳು ತಮ್ಮ ಪ್ರಾಚೀನ ಮತ್ತು ಆಳವಾಗಿ ಪೂರ್ವಗ್ರಹದಿಂದ ಕೂಡಿದ ಮಾರ್ಗಗಳಿಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT