ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠ ಸೃಷ್ಟಿಯ ಮೂಲತತ್ವ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪುರಾತನ ಚೀನಾದಲ್ಲಿ  ಚಿಂಗ್ ಎಂಬ ಬಡಿಗನೊಬ್ಬನಿದ್ದ. ಅವನು ಝೆನ್  ಪಂಥದ ಗುರುವೂ ಹೌದು. ಅವನ ಕೌಶಲ್ಯಕ್ಕೆ ಎಲ್ಲರೂ ಮಾರು ಹೋಗಿದ್ದರು. ಚೀನಾ ದೇಶದ ಚಕ್ರವರ್ತಿಯಂತೂ ತನಗೆ ಯಾವುದಾದರೂ ಮರಗೆಲಸ ಮಾಡಿಸುವುದಿದ್ದರೆ ಚಿಂಗ್‌ನನ್ನೇ ಕೇಳುತ್ತಿದ್ದ.
 
ವಿಚಿತ್ರವೆಂದರೆ ಚಕ್ರವರ್ತಿ ಕೇಳಿದಾಕ್ಷಣ ಚಿಂಗ್ ಕೆಲಸ ಮಾಡಿಕೊಡುತ್ತಾನೆಂಬುದು ನಿಶ್ಚಿತವಲ್ಲ. ಆತ ಮೂರು ತಿಂಗಳೋ, ಆರು ತಿಂಗಳೋ ಅಥವಾ ವರ್ಷವೋ ತನೆಗೆಷ್ಟು ಬೇಕೋ ಅಷ್ಟು ಸಮಯ ತೆಗೆದುಕೊಳ್ಳುತ್ತಿದ್ದ. ಚಕ್ರವರ್ತಿಯೂ ಅವಸರ ಮಾಡುತ್ತಿರಲಿಲ್ಲ. ಆದರೆ, ಕೆಲಸ ಮುಗಿದ ಮೇಲೆ ಅದನ್ನು ಮೆಚ್ಚಿಕೊಳ್ಳದಿರುವುದು ಅಸಾಧ್ಯ. ಅಂಥ ಕೆಲಸ ಮನುಷ್ಯರಿಂದ ಸಾಧ್ಯವೇ ಇಲ್ಲ ಎಂದು ಪರಿಣಿತರೂ ಒಪ್ಪಿಕೊಳ್ಳುತ್ತಿದ್ದರು.

 ಒಂದು ದಿನ ಪ್ರಧಾನಮಂತ್ರಿ ಚಿಂಗ್‌ನ ಮನೆಗೆ ಹೋದ. ಅವನನ್ನು ಕೇಳಿದ,  ಚಿಂಗ್, `ನಿನ್ನನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಚಕ್ರವರ್ತಿಯ ಬಾಯಿಯಿಂದ ಮಾತು ಹೊರಟ ತಕ್ಷಣ ಅದನ್ನು ಈಡೇರಿಸಲು ಜನ ತುದಿಗಾಲ ಮೇಲೆ ನಿಂತಿದ್ದಾರೆ.
 
ಅಂಥದ್ದರಲ್ಲಿ  ನೀನು ನಿಧಾನವಾಗಿ ನಿನ್ನ ಸಮಯ ತೆಗೆದುಕೊಂಡೇ ಕೆಲಸ ಮಾಡುತ್ತೀ. ಆದರೂ ಚಕ್ರವರ್ತಿಗಳು ಏನೂ ಎನ್ನುವುದಿಲ್ಲ. ಮತ್ತೆ ನೀನು ಮಾಡಿದ ಕೆಲಸ ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ ಎನ್ನುವಷ್ಟು ಮೋಹಕವಾಗಿರುತ್ತವೆ.

ಏನಿದರ ಗುಟ್ಟು~ ಎಂದ. ಆಗ ಚಿಂಗ್ ನುಡಿದ,  `ಸ್ವಾಮೀ, ಇದರಲ್ಲಿ  ಯಾವ ಗುಟ್ಟೂ ಇಲ್ಲ. ನಾನು ಅತ್ಯಂತ ಸಾಮಾನ್ಯನಾದ ಮನುಷ್ಯ. ನನ್ನಲ್ಲಿ  ಯಾವ ದೈವತ್ವವೂ ಇಲ್ಲ. ಆದರೆ ನಾನೇ ಕೆಲವು ನಿಬಂಧನೆಗಳನ್ನು ಹಾಕಿಕೊಂಡಿದ್ದೇನೆ. ನನಗೆ ಯಾರಾದರೂ ಮರಗೆಲಸ ಮಾಡಲು ಹೇಳಿದಾಗ ಮಾಡಬೇಕೆನ್ನಿಸಿದರೆ ಧ್ಯಾನ ಮಾಡುತ್ತೇನೆ. ಮೂರು ದಿನ ಧ್ಯಾನ ಮಾಡಿದ ಮೇಲೆ ಮನಸ್ಸು ಸ್ಥಿಮಿತಕ್ಕೆ ಬರುತ್ತದೆ.

ಆಗ ನನಗೆ ಮರಗೆಲಸದಿಂದ ಬರುವ ಸಂಭಾವನೆ, ಮರ್ಯಾದೆ ಇವುಗಳ ಚಿಂತೆ ಕಳೆದುಹೋಗುತ್ತದೆ. ಮತ್ತೆ ನಾನು ಐದು ದಿನಗಳ ಕಾಲ ಧ್ಯಾನಮಾಡುತ್ತೇನೆ. ಆ ಸಮಯದಲ್ಲಿ  ನನಗೆ ಜನರಿಂದ ದೊರೆಯಬಹುದಾದ ಶಹಬಾಸ್‌ಗಿರಿಯಾಗಲೀ, ತೆಗಳಿಕೆಯಾಗಲೀ ಮರೆತುಹೋಗುತ್ತದೆ. ಕೆಲಸಮಾಡುವಾಗ ಆಗಬಹುದಾದ ತಪ್ಪುಗಳ ಭಯವೂ ಕರಗಿಹೋಗುತ್ತದೆ.

ಈ ಹಂತದ ನಂತರ ಮತ್ತೆ ಏಳು ದಿನಗಳ ಮೌನ ಮತ್ತು ಧ್ಯಾನ ಮಾಡುತ್ತೇನೆ. ಆಗ ನನ್ನ ದೇಹದ ಭಾಗಗಳಾದ ಕೈ, ಕಾಲುಗಳನ್ನು ಮರೆತುಬಿಡುತ್ತೇನೆ, ಅಲ್ಲ, ನನ್ನ ದೇಹವನ್ನೇ ಮರೆತುಬಿಡುತ್ತೇನೆ. ನನ್ನ ಮನೆಯ, ಪರಿವಾರದ, ಪರಿಸರದ ಪ್ರಜ್ಞೆ ಪೂರ್ತಿ ಅಳಿದುಹೋಗುತ್ತದೆ. ನನ್ನ ಕೌಶಲ್ಯ ಮಾತ್ರ ಉಳಿದಿರುತ್ತದೆ.
 
ಈ ಸ್ಥಿತಿಯಲ್ಲಿ  ನಾನು ಕಾಡಿಗೆ ಹೋಗಿ ಅಲೆದಾಡುತ್ತೇನೆ. ಮರ, ಮರಗಳನ್ನು ಕೇಳಿಕೊಳ್ಳುತ್ತೇನೆ. ಯಾವ ಮರ ತಾನೊಂದು ವಸ್ತುವಾಗಲು ಸಿದ್ಧವಿದೆಯೋ ಅದನ್ನು ಮಾತ್ರ ಕತ್ತರಿಸಿ ತರುತ್ತೇನೆ. ನಂತರ ಕೇವಲ ನಿಸರ್ಗದತ್ತವಾಗಿ ಬಂದ ನನ್ನ ಕೈಗಳ ಕೌಶಲ್ಯ ನಿಸರ್ಗದೊಂದಿಗೆ ಕೆಲಸ ಮಾಡಿ ವಸ್ತು  ಸೃಷ್ಟಿಸುತ್ತದೆ.

ಆದ್ದರಿಂದ ಈ ಸೃಷ್ಟಿ ನಿಸರ್ಗ, ಕೌಶಲ್ಯದೊಡನೆ ಮಿಳಿತವಾಗಿ ನನ್ನನ್ನು ಉಪಕರಣವಾಗಿ ಬಳಸಿಕೊಂಡದ್ದರಿಂದ ಆದದ್ದು. ಇದರಲ್ಲಿ  ನನ್ನ ಹೆಗ್ಗಳಿಕೆ ಏನೂ ಇಲ್ಲ~ ಎಂದ. ಈ ಮಾತು ಕೇಳಿ ಪ್ರಧಾನಮಂತ್ರಿ ಬೆರಗಾದ. ಇದೇ ಅತ್ಯಂತ ಶ್ರೇಷ್ಠವಾದ ಕೆಲಸದ, ಚಿಂತನೆಯ, ಆವಿಷ್ಕಾರದ ಮೂಲತತ್ವ.

ಯಾವಾಗ ಹಣದ ಆಸೆ, ಅಧಿಕಾರದ ಆಮಿಷ, ಜನರ ಹೊಗಳಿಕೆ, ತೆಗಳಿಕೆಗಳ ಚಿಂತೆ ಇವುಗಳನ್ನು ಮೀರಿ ಹೃದಯದ ತುಡಿತಕ್ಕೆ ಸ್ಪಂದಿಸಿ ಸ್ವಾಭಾವಿಕವಾಗಿ ಕೆಲಸ ಮಾಡಿದಾಗ ಪ್ರಕೃತಿ ನಮ್ಮನ್ನು ಉಪಕರಣವನ್ನಾಗಿ ಬಳಸಿಕೊಂಡು ಅಸಾಮಾನ್ಯ ಕ್ರಿಯೆಗಳನ್ನು ಮಾಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT