ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ನಿಷ್ಠೆಗಿಂತ, ಲಾಭದತ್ತ ಗಮನ

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಷೇರುಪೇಟೆಯ ವಹಿವಾಟಿನ ರೀತಿ ಗಮನಿಸಿದಾಗ  ಪಠ್ಯಪುಸ್ತಕಗಳಿಂದ ಹೊರತಾದ ರೀತಿಯಲ್ಲಿ ಷೇರಿನ ಬೆಲೆಗಳು ಏರಿಳಿತ ಪ್ರದರ್ಶಿಸುತ್ತಿವೆ ಎಂಬುದು ಅರಿವಾಗುವುದು. ಕಳೆದ ಕೆಲವು ವಾರಗಳಲ್ಲಿ ಯಾವುದೇ ಮಹತ್ತರವಾದ ಕಾರ್ಪೊರೇಟ್ ಬೆಳವಣಿಗೆಗಳು ಇಲ್ಲದೆ ಇರುವಾಗಲೂ ಹಲವಾರು ಕಂಪೆನಿಗಳು ರಭಸವಾದ ಏರಿಳಿತಗಳನ್ನು ಪ್ರದರ್ಶಿಸಿವೆ. ಆಗಸ್ಟ್ ತಿಂಗಳಲ್ಲಿ ಬಹುತೇಕ ಕಂಪೆನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಗಳನ್ನು ಕರೆದು ತಮ್ಮ ಹಿಂದಿನ ವರ್ಷದ ಚಟುವಟಿಕೆಗಳಿಗೆ ಷೇರುದಾರರ ಠಸ್ಸೆ ಪಡೆಯುವುದಲ್ಲದೆ, ಅವು ಘೋಷಿಸಿರುವ ಲಾಭಾಂಶ ವಿತರಣೆಗೆ ಅನುಮತಿ ಪಡೆದು ಹಂಚಲಿವೆ. ಹೀಗಾಗಿ ಆ ಕಂಪೆನಿಗಳ ಷೇರಿನ ದರಗಳು ಚುರುಕಾಗಿರುತ್ತವೆ. ಈ ಪರಿಸ್ಥಿತಿಗೆ ಪೂರಕವಾಗಿ ಜೂನ್ ಮಾಸಾಂತ್ಯದ ಫಲಿತಾಂಶಗಳು ಪ್ರಕಟ ವಾಗಲು ಆರಂಭವಾಗಿ, ಆಯಾ ಕಂಪೆನಿಗಳ ಸಾಧನೆಯು ಹೆಚ್ಚಿನ ಪ್ರಭಾವ ಬೀರುತ್ತವೆ.

ಹೀಗಾಗಿ ಪೇಟೆಯು ಏರಿಕೆ ಕಾಣದಿದ್ದರೂ, ಕುಸಿತ ಕಾಣುವ ಸಾಧ್ಯತೆ ಕಡಿಮೆ ಎಂದೆನಿಸುತ್ತದೆ.  ಮುಂಬೈ ಷೇರು ವಿನಿಮಯ  ಕೇಂದ್ರದ ಹೆಗ್ಗುರುತಾದ ಸಂವೇದಿ ಸೂಚ್ಯಂಕವು ಸ್ಥಿರತೆ ಕಂಡುಕೊಂಡರೂ ವಹಿವಾಟುದಾರರು ತಮ್ಮ ಚಟುವಟಿಕೆಯನ್ನು ಮಧ್ಯಮ ಮತ್ತು ಕೆಳಮಧ್ಯಮ ವಲಯದ ಷೇರುಗಳತ್ತ ಕೇಂದ್ರೀಕರಿಸಿರುತ್ತಾರೆ. ಈ ಕಾರಣದಿಂದಾಗಿ ಲಕ್ಷ್ಮಿ ಎಲೆಕ್ಟ್ರಿಕಲ್ ಕಂಟ್ರೋಲ್ ಸಿಸ್ಟಮ್ಸ್, ಭಾರತ್ ಫೈನಾನ್ಶಿಯಲ್ ಇನ್‌ಕ್ಲ್ಯೂಷನ್‌, ಗೃಹ ಫೈನಾನ್ಸ್,  ಬಾಟಾ ಇಂಡಿಯಾ, ವೆಂಕೀಸ್ ಇಂಡಿಯಾ, ಗಣೇಶ್ ಹೌಸಿಂಗ್ ಕಾರ್ಪೊರೇಷನ್, ಟಿನ್ ಪ್ಲೇಟ್, ಮುಂತಾದ ಹಳೆ ಕಂಪೆನಿಗಳನ್ನು ವಹಿವಾಟುದಾರರು ಬೇಟೆಯಾಡುತ್ತಿರುವುದು ಗಮನಾರ್ಹ ವಿದ್ಯಮಾನವಾಗಿದೆ.

ಅಲ್ಲದೆ ಕೆಲವು ಕಂಪೆನಿಗಳ ಷೇರಿನ ಬೆಲೆಗಳು ವಿನಾಕಾರಣ ಏರಿಕೆ - ಕುಸಿತ ಕಾಣುವಂತೆ ಮಾಡಿ ತಕ್ಷಣ ದಿಸೆ ಬದಲಿಸುವಂತೆ ಮಾಡಿ ಹೂಡಿಕೆದಾರರನ್ನು ಗೊಂದಲಕ್ಕೆ ಒಳಪಡಿಸುವ ವಹಿವಾಟು ಸಹ ಹೆಚ್ಚಾಗಿದೆ.  ಬುಧವಾರ ದಿನದ ಆರಂಭಿಕ ಚಟುವಟಿಕೆಯಲ್ಲಿ ಶಿಲ್ಪಿ ಕೇಬಲ್ ಟೆಕ್ನಾಲಜಿಸ್ ಲಿ. ಕಂಪೆನಿ ಷೇರಿನ ಬೆಲೆಯು ₹41 ರ ಸಮೀಪ ಗರಿಷ್ಠ ಅವರಣ ಮಿತಿಯಲ್ಲಿದ್ದು,  ಕೆಲವೇ ಕ್ಷಣಗಳಲ್ಲಿ ಷೇರಿನ ಬೆಲೆ  ಭಾರಿ ಕುಸಿತದಿಂದ ಕೆಳಗಿನ ಆವರಣ ಮಿತಿ ₹37 ರ ಸಮೀಪಕ್ಕೆ ತಲುಪಿತು.  ಸ್ವಲ್ಪ ಸಮಯದ ನಂತರ ಮತ್ತೆ ಗರಿಷ್ಠ ಅವರಣ ಮಿತಿಗೆ ಜಿಗಿತ ಕಂಡಿತು.  ಈ ರೀತಿಯ ಅಸಹಜ ಚಟುವಟಿಕೆಯಲ್ಲಿರುವ ಷೇರುಗಳಲ್ಲಿ ವಹಿವಾಟು ನಡೆಸಬೇಕಾದರೆ, ಸಂಭವನೀಯ ಅಪಾಯದ ಅರಿವು ಇರಲಿ.

ಅಶೋಕ್ ಲೇಲ್ಯಾಂಡ್‌ ಷೇರಿನ ಬೆಲೆಯು ಹಲವಾರು ತಿಂಗಳ ನಂತರ ₹100  ದಾಟಿದೆ. ಇದುವರೆಗೂ ಸತತವಾದ ತುಳಿತಕ್ಕೊಳಗಾದ ಫಾರ್ಮಾ ವಲಯದ ಕಂಪೆನಿಗಳಾದ ಸಿಪ್ಲಾ, ಡಿವೀಸ್ ಲ್ಯಾಬ್,  ಇಪ್ಕಾ ಲ್ಯಾಬ್, ಲೋಹ ವಲಯದ  ಜಿಂದಾಲ್  ಸ್ಟೀಲ್ ಆ್ಯಂಡ್ ಪವರ್, ಟಾಟಾ ಸ್ಟಿಲ್, ಹಿಂದೂಸ್ತಾನ್  ಜಿಂಕ್, ವೇದಾಂತ,  ಸರ್ಕಾರಿ ವಲಯದ ಆಯಿಲ್ ಇಂಡಿಯಾ, ಒಎನ್‌ಜಿಸಿ, ಕೋಲ್ ಇಂಡಿಯಾ, ಗೇಲ್ ಇಂಡಿಯಾ, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಮುಂತಾದ ಷೇರುಗಳು ಚುರುಕಾದ ಚಟುವಟಿಕೆ ವಾರಾಂತ್ಯದಲ್ಲಿ ಪ್ರದರ್ಶಿಸಿವೆ.

2008 ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮೊದಲ ಬಾರಿ ತಲುಪಿದ್ದ ಸಂವೇದಿ ಸೂಚ್ಯಂಕ, ತನ್ನೊಂದಿಗೆ ಪ್ರಮುಖ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು  ₹1,490 ನ್ನು ತಲುಪುವಂತೆ ಮಾಡಿತ್ತು.  ಸುಮಾರು ಒಂಬತ್ತು ಸುಧೀರ್ಘ ವರ್ಷಗಳ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆಯೂ ₹1,490 ನ್ನು ಶುಕ್ರವಾರ ದಾಟಿ ವಾರ್ಷಿಕ ಗರಿಷ್ಠ ದಾಖಲಿಸಿದೆ.   ಶುಕ್ರವಾರ  ಸಂವೇದಿ ಸೂಚ್ಯಂಕವು ತಟಸ್ಥಮಯವಾಗಿ ಕೊನೆಗೊಂಡಿದೆ.

ಒಂದೇ  ದಿನ ಈ ರೀತಿಯ ಜಿಗಿತ ಕಾಣುವುದು ಬಲು ಅಪರೂಪವಾದರೂ, ಅದರ ಹಿಂದೆ ಕಾರಣಗಳಿರುತ್ತವೆ.  ಇಲ್ಲಿ ಈ ಕಂಪೆನಿಯು ವಿತರಿಸಲಿರುವ ಪ್ರತಿ ಷೇರಿಗೆ ₹11 ರ ಲಾಭಾಂಶಕ್ಕೆ ಈ ತಿಂಗಳ 14 ನಿಗದಿತ ದಿನವಾಗಿದೆ ಮತ್ತು ಈ ತಿಂಗಳ 21 ರಂದು ಕಂಪೆನಿ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿರುವುದರಿಂದ ಷೇರಿನ ಬೆಲೆಯು ಚುರುಕಾಗಿದೆ.

ಈ ವಾರದ ಮತ್ತೊಂದು ವಿಶೇಷವೆಂದರೆ ಇದುವರೆಗೂ ತಾತ್ಸಾರಕ್ಕೊಳಗಾಗಿ ಭಾರಿ ಕುಸಿತಕ್ಕೊಳಗಾಗಿದ್ದ ದಿವೀಸ್ ಲ್ಯಾಬ್ ಷೇರಿನ ಬೆಲೆಯು ತನ್ನ ಮೇ  ತಿಂಗಳ ಅಂತ್ಯದಲ್ಲಿ ಕಂಡಿದ್ದ ₹533 ರ ಸಮೀಪದ ಬೆಲೆಯಿಂದ ಪುಟಿದೆದ್ದು ₹685ರವರೆಗೂ ಏರಿಕೆ ಕಂಡಿದೆ.  ಈ ಕಂಪೆನಿ ಘೋಷಿಸಿರುವ ಪ್ರತಿ ಷೇರಿಗೆ ₹10 ರ ಲಾಭಾಂಶ ವಿತರಣೆಗೆ ಇನ್ನೂ ನಿಗದಿತ ದಿನ ಪ್ರಕಟವಾಗಿಲ್ಲದ ಕಾರಣ ಷೇರಿನ ವಹಿವಾಟು ಚುರುಕಾಗಿರುವ ಸಾಧ್ಯತೆ ಹೆಚ್ಚು.

ಅದೇ ರೀತಿ ಸಕ್ಕರೆ ವಲಯದ ಕಂಪೆನಿಗಳು, ಅಶೋಕ್ ಲ್ಲ್ಯಾನ್ಡ್, ಸಿಂಟೆಕ್ಸ್ ನಂತಹ ಕಂಪೆನಿಗಳು ನಿರಂತರವಾಗಿ ನಿರ್ಲಕ್ಷಿಸಲ್ಪಟ್ಟಿದ್ದು,  ಈಗ ಇತರೆ ಎಲ್ಲಾ ಬ್ರಾಂಡೆಡ್ ಕಂಪೆನಿಗಳು ಗರಿಷ್ಟಕ್ಕೆ ಜಿಗಿತ ಕಂಡಿರುವುದರಿಂದ,  ಈ ಕಂಪೆನಿಗಳನ್ನು ‘ವ್ಯಾಲ್ಯೂ ಪಿಕ್’ ಆಗಿ ಆರಿಸಿಕೊಳ್ಳಲಾಗಿದೆ.

ಫಾರ್ಮಾ ವಲಯದ, ಸಂವೇದಿ ಸೂಚ್ಯಂಕದ ಭಾಗವಾದ ಲುಪಿನ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆಯು ಹೆಚ್ಚು ಡೋಲಾಯಮಾನವಾಗಿತ್ತು.  ಈ ಷೇರಿನ ಬೆಲೆಯು  ಮೂರು ತಿಂಗಳಲ್ಲಿ ₹1,450 ರ ಸಮೀಪದಿಂದ ₹1,036 ರವರೆಗೂ ಈ ವಾರ ಕುಸಿದಿದ್ದು, ಆ ಸಂದರ್ಭದಲ್ಲಿ ವ್ಯಾಲ್ಯೂ  ಪಿಕ್ ಚಟುವಟಿಕೆಯ ಕಾರಣ  ಷೇರಿನ ಬೆಲೆಯಲ್ಲಿ ಧಿಡೀರ್ ಚೇತರಿಕೆ ಕಂಡು ಬಂದಿತು.  ಗುರುವಾರ ಷೇರಿನ ಬೆಲೆಯು ಮತ್ತೊಮ್ಮೆ ₹1,105 ರ ಸಮೀಪದಿಂದ ₹1,080 ಕ್ಕೆ ಕುಸಿದು ಶುಕ್ರವಾರ ₹1,136 ರವರೆಗೂ ಜಿಗಿತ ಕಂಡಿತು.  ಕೇವಲ ಅಲ್ಪಾವಧಿಯಲ್ಲೇ ಹೆಚ್ಚಿನ ಆದಾಯ ಪಡೆಯುವ ಕಸರತ್ತು ಕೆಲವು ಕಂಪೆನಿಗಳಲ್ಲಿ ನಡೆಯುತ್ತಿದೆ.   ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ ಹೊಸದಾಗಿ ಲಿಸ್ಟಿಂಗ್ ಅದ ಸಿಡಿಎಸ್‌ಎಲ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆ ₹260 ರ ಸಮೀಪದಿಂದ ₹344 ರವರೆಗೂ ಜಿಗಿತ ಕಂಡು ₹331 ರ ಸಮೀಪ ಕೊನೆಗೊಂಡಿದೆ.  ಪ್ರತಿ ಷೇರಿಗೆ ₹149 ರಂತೆ ವಿತರಣೆಗೊಂಡ ಷೇರಿನ ಬೆಲೆ ₹344 ರವರೆಗೂ ಜಿಗಿತ ಕಂಡಿರುವುದು ವಿಸ್ಮಯಕಾರಿ ಅಂಶವಾಗಿದೆ.

ಒಟ್ಟಾರೆ 439 ಅಂಶಗಳ ಏರಿಕೆ ಕಂಡ ಸಂವೇದಿ ಸೂಚ್ಯಂಕ ತನ್ನೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕ 297 ಅಂಶಗಳ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 420 ಅಂಶಗಳ ಏರಿಕೆ ಕಾಣುವಂತೆ ಮಾಡಿತು.  ವಿದೇಶಿ ವಿತ್ತೀಯ ಸಂಸ್ಥೆಗಳು ₹1,948 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,361 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಪೇಟೆಯ ಬಂಡವಾಳ  ಮೌಲ್ಯವು ₹128.15 ಲಕ್ಷ ಕೋಟಿಗೆ ಜಿಗಿದಿದೆ.

ಬೋನಸ್ ಷೇರು
* ಮಹಿಂದ್ರಾ ಹಾಲಿಡೇಸ್ ಆ್ಯಂಡ್ ರೆಸಾರ್ಟ್ಸ್ ಇಂಡಿಯಾ ಲಿಮಿಟೆಡ್ ಕಂಪೆನಿ ವಿತರಿಸಲಿರುವ 1:2 ಬೋನಸ್ ಷೇರಿಗೆ  ಜುಲೈ 11 ನಿಗದಿತ ದಿನ.
* ಮುಂಜಾಲ್ ಆಟೊ ಇಂಡಸ್ಟ್ರೀಸ್  ಲಿಮಿಟೆಡ್ ಕಂಪೆನಿ ವಿತರಿಸಲಿರುವ   ಬೋನಸ್ ಷೇರಿಗೆ ಈ ತಿಂಗಳ 12 ನಿಗದಿತ ದಿನ. 
* ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್  ವಿತರಿಸಲಿರುವ  1:2ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 12  ನಿಗದಿತ ದಿನ.
* ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪೆನಿ ಹಾಗು ಲಾರ್ಸನ್ ಅಂಡ್ ಟೋಬ್ರೋ  ಗಳು ವಿತರಿಸಲಿರುವ 1:2 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 14ನಿಗದಿತ ದಿನ.
* ಎಡಿಸಿಸಿ ಇನ್ಫೊಕ್ಯಾಡ್ ಲಿಮಿಟೆಡ್ ಕಂಪೆನಿ ವಿತರಿಸಲಿರುವ 1:10 ರ ಅನುಪಾತದ ಬೋನಸ್ ಷೇರಿಗೆ ಆಗಸ್ಟ್ 11 ನಿಗದಿತ ದಿನ.

**

ಹೊಸ ಷೇರು: ಪ್ರತಿ ಷೇರಿಗೆ ₹358 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಕಂಪೆನಿಯ ಷೇರುಗಳು ಸೋಮವಾರ 10 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಬಿ’ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ.

ಮುಖಬೆಲೆ ಸೀಳಿಕೆ: ನವೀನ್ ಫ್ಲೋರಿನ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪೆನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಈ ತಿಂಗಳ 20 ನಿಗದಿತ ದಿನವಾಗಿದೆ. ಸಿಯಾರಾಮ್ ಸಿಲ್ಕ್ ಮಿಲ್ಸ್ ಲಿಮಿಟೆಡ್ ಈ ತಿಂಗಳ 26 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

**

ವಾರದ ವಿಶೇಷ

ಷೇರುಪೇಟೆಯಲ್ಲಿ  ಲಾಯಲ್ಟಿ ಎಂಬುದಿಲ್ಲ, ಎಲ್ಲರ ದೃಷ್ಟಿಯು ರಾಯಲ್ಟಿ ಗಳಿಸುವತ್ತ ಮಾತ್ರವಿರುತ್ತದೆ.  ಒಂದು ಸಂದರ್ಭದಲ್ಲಿ ಷೇರಿನ ಬೆಲೆಯು ಗರಿಷ್ಠ ಬೆಲೆ ತಲುಪಿದಾಗ ಆ ಷೇರು ಮಾರಾಟಕ್ಕೆ ಯೋಗ್ಯ ಎಂಬುದು ಚರಿತ್ರೆ ತಿಳಿಸುತ್ತದೆ.  ಕಂಪೆನಿ ಗುಣಮಟ್ಟ ಉತ್ತಮವಾಗಿದ್ದರೂ ಸಹ ಷೇರಿನ ಬೆಲೆಯು ಒಂದು ಹಂತವನ್ನು ಮೀರಿ ಬೆಳೆದಾಗ  ಆ ಷೇರಿನಿಂದ ನಿರ್ಗಮಿಸುವುದು ಸೂಕ್ತ.  2015 ರಲ್ಲಿ ಫಾರ್ಮಾ ವಲಯದ ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರಿನ ಬೆಲೆಯು ₹1,150 ನ್ನು ದಾಟಿ ವಿಜೃಂಭಿಸಿತು.

ಆ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ವಿಶೇಷವಾದ ಉಲ್ಲೇಖ ಮೂಡಿಬರುತ್ತಿದ್ದು, ವರ್ಣರಂಜಿತ ವಿಶ್ಲೇಷಣೆ, ಪ್ರೋತ್ಸಾಹ ಕಂಡು ಬರುತ್ತಿತ್ತು.  ಕಂಪೆನಿ ಪ್ರವರ್ತಕರ ಗುಣಗಾನ ವ್ಯಕ್ತವಾಗುತ್ತಿತ್ತು.  ಆ ಸಂದರ್ಭದಿಂದ ಕೆಳ ಜಾರಿದ ಷೇರಿನ ಬೆಲೆಯು ನಿರಂತರವಾಗಿ ₹ 493 ರವರೆಗೂ ಕುಸಿದಿದೆ. ಈ ಸಂದರ್ಭದಲ್ಲಿ ಈ ಕಂಪೆನಿಯ ಬಗ್ಗೆ ವಿಶೇಷ ಗಮನವೇ ಹರಿಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT