ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಅಸ್ಥಿರತೆ ಸೃಷ್ಟಿಸಿದ ಅವಕಾಶ

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆಗಸ್ಟ್ ತಿಂಗಳ ಕೊನೆಯ ವಾರ ದಾಖಲೆಗಳ ವಾರವಾಗಿ ಪರಿವರ್ತನೆಗೊಂಡಿತು. ಪ್ರಮುಖವಾಗಿ ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತವು ಹೆಚ್ಚಿನ ಆತಂಕಕಾರಿ ವಾತಾವರಣ ನಿರ್ಮಿಸಿತು. ಜನಸಾಮಾನ್ಯರಾದಿಯಾಗಿ ಎಲ್ಲರ ಗಮನ ರೂಪಾಯಿಯ ಏರಿಳಿತ, ಚಿನಿವಾರಪೇಟೆಯಲ್ಲಿ ಚಿನ್ನ, ಬೆಳ್ಳಿಗಳ ಜಿಗಿತ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ, ಷೇರುಪೇಟೆಯಲ್ಲಿ ಷೇರಿನ ಬೆಲೆಗಳ ಮೇಲೆ ಕೇಂದ್ರೀಕೃತವಾಗಿದ್ದವು.

ಈ ಬೆಳವಣಿಗೆಗಳು ಹೆಚ್ಚಿನ ತಳಮಳಕ್ಕೆ ಕಾರಣವಾದವು. ರೂಪಾಯಿಯ ಅಪಮೌಲ್ಯದ ಕಾರಣ ಸೂಚ್ಯಂಕ ಕುಸಿತ ಕಾಣುತ್ತಿದ್ದು ಕಳೆದ ಮಂಗಳವಾರ 590 ಅಂಶಗಳಷ್ಟು ಜಾರಿ ದಾಖಲೆ ಸೃಷ್ಟಿಸಿತು. ಈ ವಾತಾವರಣವು ರಫ್ತು ಆಧಾರಿತ ಕಂಪೆನಿಗಳಿಗೆ ಅನುಕೂಲಕರವೆಂದು ತಾಂತ್ರಿಕ ವಲಯದ ಕಂಪನಿಗಳು ಚುರುಕಾದ ಏರಿಕೆ ಕಂಡವು. ಆದರೆ, ಗುರುವಾರದಂದು ರೂಪಾಯಿಯ ಬೆಲೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಶುಕ್ರವಾರ ಡಾಲರ್ ವಿರುದ್ಧ ರೂ65.70 ರಲ್ಲಿ ಅಂತ್ಯಕಂಡಿತು.

   ಗುರುವಾರ ಡಾಲರ್ ಬೆಲೆಯು ಹಿಂದಿನ ದಿನದ ರೂ68.80 ರಿಂದ ರೂ66.55ಕ್ಕೆ ಚೇತರಿಸಿಕೊಂಡಿದ್ದು ದಾಖಲೆ. ಈ ದಾಖಲೆಯು 1998ರ ಜನವರಿಯ ನಂತರ ಪ್ರಥಮ ಬಾರಿಗೆ ದಾಖಲಾಗಿದೆ. ಮತ್ತೊಂದು ಅಪರೂಪದ ಬೆಳವಣಿಗೆಗೆ ಎಂದರೆ ರೂಪಾಯಿಯ ಬೆಲೆ ಏರಿಕೆ ಕಂಡರೂ ಸಾಫ್ಟ್‌ವೇರ್ ಕಂಪೆನಿಗಳಾದ ಟಿ.ಸಿ.ಎಸ್. ರೂ2040ರವರೆಗೂ ತಲುಪಿ ವಾರ್ಷಿಕ ಗರಿಷ್ಠ ದಾಖಲಿಸಿತು. ವಿಪ್ರೊ ರೂ495 ರವರೆಗೂ ಜಿಗಿತ ಕಂಡಿತು. ಎಚ್‌ಸಿಎಲ್ ಟೆಕ್ ರೂ1044ರ ವಾರ್ಷಿಕ ಗರಿಷ್ಠ ತಲುಪಿತು.

ಇದು ಜನಸಾಮಾನ್ಯರ ಕಲ್ಪನೆಗೆ ದೊರಕದ ವಿಸ್ಮಯಕಾರಿ ಅಂಶವಾಗಿದೆ. ಇಂತಹ ವಾತಾವರಣದಲ್ಲಿ ಈ ಸಾಫ್ಟ್‌ವೇರ್ ಕಂಪೆನಿಗಳ ಷೇರುಗಳನ್ನು ಮಾರಾಟ ಮಾಡಿ ಈಗಾಗಲೇ ಅಗಾದವಾದ ಕುಸಿತ ಕಂಡಿರುವ ಅಗ್ರಮಾನ್ಯ ಕಂಪೆನಿಗಳತ್ತ ಗಮನಹರಿಸುವುದು ಉತ್ತಮ ಎನಿಸುತ್ತದೆ. ಮತ್ತೊಂದು ವಿಸ್ಮಯಕಾರಿ ಅಂಶವೆಂದರೆ ಸ್ಟರ್ಲೈಟ್ ಇಂಡಸ್ಟ್ರೀಸ್ ಕಂಪೆನಿಯು ಸೀಸಾ ಗೋವಾ ಕಂಪೆನಿಯಲ್ಲಿ ವಿಲೀನಗೊಳ್ಳುವ ಕಾರಣ 28 ರಿಂದ ಸ್ಟರ್ಲೈಟ್ ಇಂಡಸ್ಟ್ರೀಸ್ ವಹಿವಾಟಿನಿಂದ ಸ್ಥಗಿತಗೊಂಡಿದೆ.

ನಂತರದ ದಿನಗಳಲ್ಲಿ ಸೀಸಾಗೋವ ಕಂಪೆನಿಯ ಷೇರಿನ ಬೆಲೆಯು ರೂ192ರವರೆಗೂ ಏರಿಕೆ ಕಂಡು ಅಚ್ಚರಿ ಮೂಡಿಸಿತು.
ರಾನ್‌ಬಾಕ್ಸಿ ಲ್ಯಾಬೊರೆಟರೀಸ್ ಷೇರಿನ ಬೆಲೆಯು ಶೇ 22 ರಷ್ಟು ಏರಿಕೆಯಿಂದ ಮಿಂಚಿತು. ಈ ಮಧ್ಯೆ ರೂಪಾಯಿಯ ಬೆಲೆಯಲ್ಲಿ ಚೇತರಿಕೆ ಕಾಣುತ್ತಿದ್ದಂತೆ ಚಿನ್ನ ಬೆಳ್ಳಿಗಳ ಬೆಲೆಯಲ್ಲಿ ಕುಸಿತ ಕಂಡು ಬಂದಿತು. ಚಿನ್ನ ಬೆಳ್ಳಿಗಳ ದರಗಳ್ಲ್ಲಲಿ ಉಂಟಾದ ಏರಿಕೆಯ ಕಾರಣ ಮುತ್ತೋಟ್ ಫೈನಾನ್ಸ್ ಕಂಪೆನಿ ಷೇರಿನ ಬೆಲೆ ಸುಮಾರು ಶೇ 15 ರಷ್ಟು ಮುನ್ನಡೆ ಪಡೆಯಿತು. ರೂಪಾಯಿಯ ಅಪಮೌಲ್ಯದ ನೆಪದಲ್ಲಿ ಅಗ್ರಮಾನ್ಯ ಬ್ಯಾಂಕ್‌ಗಳಾದ ಫೆಡರಲ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಆಂಧ್ರಾಬ್ಯಾಂಕ್, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಎಸ್. ಬ್ಯಾಂಕ್, ಐಎನ್‌ಜಿ ವೈಶ್ಯ ಬ್ಯಾಂಕ್‌ಗಳು ಶೇ 5 ರಿಂದ ಶೇ 10 ರವರೆಗೆ ಕುಸಿತ ಕಂಡವು. ಶುಕ್ರವಾರ ಎಮರ್ಜಿಂಗ್ ಮಾರ್ಕೆಟ್ಸ್ ಸೂಡನ್ ಫ್ರೀ ಈಕ್ವಿಟಿ ಫಂಡ್ 36.96 ಲಕ್ಷ ಆಕ್ಸಿಸ್ ಬ್ಯಾಂಕ್ ಷೇರು ಮಾರಾಟ ಮಾಡಿ ಚುರುಕಾದ ಚಟುವಟಿಕೆಗೆ ನೀರೆರೆಚಿದಂತಾಯಿತು.

ಹಿಂದಿನ ವಾರ ಒಟ್ಟಾರೆ 100 ಅಂಶಗಳಷ್ಟು ಏರಿಕೆ ಸಂವೇದಿ ಸೂಚ್ಯಂಕ ಪಡೆದರೆ ಮಧ್ಯಮ ಶ್ರೇಣಿ ಸೂಚ್ಯಂಕ 58 ಅಂಶಗಳಷ್ಟು, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 56 ಅಂಶಗಳಷ್ಟು ಇಳಿಕೆ ದಾಖಲಿಸಿದವು. ರೂ3 ಸಾವಿರ ಕೋಟಿಗೂ ಹೆಚ್ಚು ಷೇರುಗಳನ್ನು ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ ಎರಡು ಸಾವಿರ ಕೋಟಿಗೂ ಹೆಚ್ಚಿನ ಖರೀದಿ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ರೂ60.33 ಲಕ್ಷ ಕೋಟಿಯಿಂದ ರೂ60.30 ಲಕ್ಷ ಕೋಟಿಗೆ ಇಳಿದಿದೆ.

ಕುಸಿದ ಷೇರುಗಳು
ಐಡಿಎಫ್‌ಸಿ ಕಂಪೆನಿಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳ ಹೂಡಿಕೆ ಮಿತಿಯನ್ನು ಶೇ 74 ರಿಂದ ಶೇ 54ಕ್ಕೆ ಇಳಿಸಿದ ಷೇರಿನ ಬೆಲೆಯು ಶೇ 20 ರಷ್ಟ ಇಳಿಕೆ ಕಂಡಿತು.

ನ್ಯಾಶನಲ್ ಸ್ಪಾಟ್ ಎಕ್ಸ್‌ಚೇಂಜ್‌ನಲ್ಲುಂಟಾಗಿರುವ ಗೊಂದಲವು ಕಗ್ಗಂಟಾಗುತ್ತಿರುವುದು ಅದರ ಪ್ರವರ್ತಕ ಕಂಪೆನಿಯ ಷೇರಿನ ಬೆಲೆಯು ಶೇ 12ಕ್ಕೂ ಹೆಚ್ಚಿನ ಕುಸಿತ ಕಂಡಿತು. ಕಳೆದ ಒಂದು ತಿಂಗಳಲ್ಲಿ ಈ ಷೇರಿನ ಬೆಲೆಯು ರೂ 550ರ ಹಂತದಿಂದ ರೂ102.05ರ ವಾರ್ಷಿಕ ಕನಿಷ್ಠಕ್ಕೆ ಶುಕ್ರವಾರ ತಲುಪಿತು.

ಹನಂಗ್ ಟಾಯ್ಸ ಅಂಡ್ ಟೆಕ್ಸ್‌ಟೈಲ್ಸ್ ಕಂಪೆನಿಯು ಈ ಹಿಂದೆ ಜೂನ್‌ನಲ್ಲಿ ಪ್ರಕಟಿಸಿದ್ದ ಲಾಭಾಂಶವನ್ನು ರದ್ದುಗೊಳಿಸಿದ ಕಾರಣ ಷೇರಿನ ಬೆಲೆಯು ರೂ12.35 ರವರೆಗೂ ಶುಕ್ರವಾರ ಕುಸಿದಿತ್ತು. ಷೇರಿನ ಮುಖಬೆಲೆ ರೂ10 ರಲ್ಲಿದೆ.

ಹೊಸ ಷೇರಿನ ವಿಚಾರ
ಸಿಲ್ವರ್ ಪಾಯಿಂಟ್ ಇನ್‌ಫ್ರಾಟೆಕ್ ಲಿಮಿಟೆಡ್ ಕಂಪೆನಿಯು ಪ್ರತಿ ಷೇರಿಗೆ ರೂ15 ರಂತೆ ಆರಂಭಿಕ ಷೇರನ್ನು ಎಸ್.ಎಂ.ಇ. ವಿಭಾಗದಲ್ಲಿ ಇತ್ತೀಚೆಗೆ ಮಾರಾಟ ಮಾಡಿದೆ. ಈ ಷೇರು ಎಂ.ಟಿ. ವಿಭಾಗದಲ್ಲಿ 8,000 ಷೇರುಗಳ ವಹಿವಾಟು ಗುಚ್ಚದಿಂದ 28 ರಂದು ವಹಿವಾಟಿಗೆ ಬಿಡುಗಡೆಯಾಗಿದೆ.

ಷೇರು ಹಿಂಕೊಳ್ಳುವ ವಿಚಾರ
ಈ ಕ್ಲರ್ಕ್ಸ್ ಸರ್ವಿಸಸ್ ಲಿ. ಕಂಪೆನಿಯು ಪ್ರತಿ ಷೇರಿಗೆ ಗರಿಷ್ಠ ರೂ825 ರವರೆಗೂ ಷೇರು ವಿನಿಮಯ ಕೇಂದ್ರಗಳ ಮೂಲಕ ಷೇರನ್ನು ಹಿಂಕೊಳ್ಳಲಿದೆ. ಈ ಪ್ರಕ್ರಿಯೆಯು ಮುಂದಿನ ಆರು ತಿಂಗಳವರೆಗೂ ತೆರೆದಿರುತ್ತದೆ. ಈ ಮೂಲಕ ಕೊಳ್ಳುವ ಷೇರುಗಳಿಗೆ ಗರಿಷ್ಠ ರೂ40.50 ಕೋಟಿ ಹೂಡಿಕೆ ಮಾಡಲು ಕಂಪೆನಿ ನಿರ್ಧರಿಸಿದೆ.

ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪೆನಿ ಲಿ. ಪ್ರತಿ ಷೇರಿಗೆ ಗರಿಷ್ಠ ರೂ279 ರವರೆಗೂ ಷೇರು ವಿನಿಮಯ ಕೇಂದ್ರದ ಮೂಲಕ ಷೇರನ್ನು, ಸೆಪ್ಟೆಂಬರ್ 2 ರಿಂದ, ಹಿಂಕೊಳ್ಳಲಿದೆ. ಗರಿಷ್ಠ ರೂ 279 ಕೋಟಿವರೆವಿಗೂ ಷೇರು ಹಿಂಕೊಳ್ಳುವಿಕೆಗೆ ವಿನಿಯೋಗಿಸಲಿದೆ.

ಬೋನಸ್ ಷೇರಿನ ವಿಚಾರ
ಸಾರ್ವಜನಿಕ ವಲಯ ಕಂಟೇನರ್ಸ್ ಕಾರ್ಪೊರೇಷನ್ ಲಿ. ಕಂಪೆನಿಯು ವಿತರಿಸಲಿರುವ 1:2ರ ಅನುಪಾತದ ಬೋನಸ್ ಷೇರಿಗೆ 10ನೇ ಸೆಪ್ಟೆಂಬರ್ ನಿಗಧಿತ ದಿನವಾಗಿದೆ.

ಲಾಭಾಂಶ ವಿಚಾರ
ಹೀರೋಮೋಟಾರ್ ಕಾರ್ಪ್ ಕಂಪೆನಿಯು ಪ್ರಕಟಿಸಿರುವ ಪ್ರತಿ ಷೇರಿಗೆ ರೂ60 ರಂತೆ ನೀಡುವ ಲಾಭಾಂಶಕ್ಕೆ 5ನೇ ಸೆಪ್ಟೆಂಬರ್ ನಿಗದಿತ ದಿನವಾಗಿದ್ದು 3 ರಿಂದ ಲಾಭಾಂಶ ರಹಿತ ವಹಿವಾಟು ಆರಂಭವಾಗಲಿದೆ.

ಸಾರ್ವಜನಿಕ ವಲಯದ ಗೇಲ್ ಇಂಡಿಯಾ ಪ್ರತಿ ಷೇರಿಗೆ ರೂ5.60 ರಂತೆ ನೀಡುವ ಲಾಭಾಂಶಕ್ಕೆ, ಗಾಡ್‌ಫ್ರೆ ಫಿಲಿಪ್ಸ್ ನೀಡುವ ರೂ40ರ ಲಾಭಾಂಶಕ್ಕೆ ಎಂ.ಪಿ.ಎಲ್. ಲಿ. ನೀಡಲಿರುವ ಪ್ರತಿ ಷೇರಿಗೆ ರೂ5ರ ಲಾಭಾಂಶಕ್ಕೆ ಆರ್.ಎಸ್.ಡಬ್ಲ್ಯುಎಂ. ಕಂಪೆನಿಯ ರೂ10ರ ಲಾಭಾಂಶಕ್ಕೆ, ಸುದರ್ಶನ್ ಕೆಮಿಕಲ್ಸ್‌ನ ಶೇ 125ರ ಲಾಭಾಂಶಕ್ಕೆ, ಸುಪ್ರೀಂ ಇಂಡಸ್ಟ್ರೀಸ್‌ನ ರೂ5.50ಯ
ಲಾಭಾಂಶಕ್ಕೆ 5ನೇ ಸೆಪ್ಟೆಂಬರ್ ನಿಗದಿತ ದಿನವಾಗಿದೆ.

ಸೆಪ್ಟೆಂಬರ್ 6 ಈ ಕೆಳಗಿನ ಕಂಪೆನಿಗಳು ಲಾಭಾಂಶ ರಹಿತ ವಹಿವಾಟಾಗಲಿವೆ. ಬಿ.ಪಿ.ಸಿ.ಎಲ್. ಶೇ 110 ಭಾರತ್ ಎಲೆಕ್ಟ್ರಾನಿಕ್ಸ್ ಶೇ 163, ಬಿ.ಎಚ್.ಇ.ಎಲ್. ಶೇ 32.9 ಕೋಲ್ ಇಂಡಿಯಾ ಶೇ 43.

ವಾರದ ವಿಶೇಷ
ಹಿಂದಿನ ವಾರ ಹೆಚ್ಚಿನ ನಕಾರಾತ್ಮಕ ಬೆಳವಣಿಗೆಗಳಿಂದ ಹೆಚ್ಚು ನಿರಾಶೆಯನ್ನು ಷೇರು ಪೇಟೆಯಲ್ಲಿ ಮೂಡಿಸಿವೆ ಎಂದು ಬಾಹ್ಯನೋಟಕ್ಕೆ ಕಂಡರೂ ಷೇರುಪೇಟೆಯಲ್ಲಿ ಅದ್ವಿತೀಯ ಅವಕಾಶಗಳನ್ನು ಅಲ್ಪಕಾಲೀನ ಹೂಡಿಕೆದಾರರಿಗೆ ಕಲ್ಪಿಸಿಕೊಟ್ಟಿದೆ.

ತಾಂತ್ರಿಕ ವಲಯದ ಕಂಪೆನಿಗಳು ಮಿಂಚಿನ ವೇಗದಲ್ಲಿ ಏರಿಕೆ ಕಂಡು ನೇರವಾಗಿ ಲಾಭದಾಯಕವಾಗಿದ್ದರೆ, ಇತರೆ ಅಗ್ರಮಾನ್ಯ ಕಂಪೆನಿಗಳಾದ ಆಕ್ಸಿಸ್ ಬ್ಯಾಂಕ್ ಬುಧವಾರ ರೂ785ರವರೆಗೂ ಕುಸಿದು ಶುಕ್ರವಾರ ರೂ 891ರ ವರೆಗೂ ಏರಿಕೆ ಕಂಡು ರೂ836ರ ಸಮೀಪ ಅಂತ್ಯಗೊಂಡಿತು. ಅಂತೆಯೇ ಗೇಲ್ ಇಂಡಿಯಾ ವಾರ್ಷಿಕ ಕನಿಷ್ಠ ರೂ273ರ ವರೆಗೂ ಕುಸಿದು ರೂ297ರ ವರೆಗೂ ಪುಟಿದೆದ್ದಿತು.


ಎಚ್.ಡಿ.ಎಫ್.ಸಿ. ಕಂಪೆನಿಯ ಷೇರಿನ ಬೆಲೆಯು ರೂ632ರ ವರೆಗೂ ಕುಸಿದು ನಂತರದ ದಿನಗಳಲ್ಲಿ ರೂ727ರ ವರೆಗೂ ಏರಿಕೆ ಕಂಡಿತು. ಎಚ್.ಡಿ.ಎಫ್.ಸಿ. ಬ್ಯಾಂಕ್ ರೂ528ರ ಸಮೀಪದಿಂದ ರೂ599ರ ವರೆಗೂ ಜಿಗಿಯಿತು, ಏಶಿಯನ್ ಪೇಂಟ್ಸ್ ರೂ379ರ ಸಮೀಪಕ್ಕೆ ಕುಸಿದು ನಂತರ ರೂ422ರ ವರೆಗೂ ಏರಿಕೆ ಕಂಡಿತು. ಲಾರ್ಸನ್ ಅಂಡ್ ಟ್ಯೂಬ್ರೊ ಸಹ ರೂ678ರ ವರೆಗೂ ಕುಸಿದು ರೂ732ರ ವರೆಗೂ ಈ ವಾರದಲ್ಲಿ ಜಿಗಿತ ಕಂಡಿತು. ಕಂಪೆನಿಗಳಾದ ಕೆನರಾ ಬ್ಯಾಂಕ್, ಒಎನ್‌ಜಿಸಿ, ಯುಕೊ ಬ್ಯಾಂಕ್, ಯೆಸ್ ಬ್ಯಾಂಕ್, ಐ.ಟಿ.ಸಿ., ರಾನಬಾಕ್ಸಿ ಲ್ಯಾಬೊರೆಟರೀಸ್, ಬಜಾಜ್ ಆಟೋ, ಭಾರತ್ ಪೆಟ್ರೋಲಿಯಂ ಮುಂತಾದವು ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿ ಹೂಡಿಕೆದಾರರಿಗೆ ಹತ್ತಾರು ಅವಕಾಶಗಳನ್ನು ಕಲ್ಪಿಸಿಕೊಟ್ಟಂತಹ ಈ ವಾರ ಅಭೂತ ಪೂರ್ವ ಲಾಭದಾಯಕ ವಾರವಾಗಿದೆ.

ಈಗಿನ ಸಂದರ್ಭದಲ್ಲಿ ಪ್ರಮುಖ ಬ್ಯಾಂಕಿನ ಷೇರುಗಳು ನೀರಸಮಯವಹಿವಾಟು ಪ್ರದರ್ಶಿಸುತ್ತಿದ್ದು ಸುಮಾರು ಶೇ 40 ರಿಂದ ಶೇ 50ರ ವರೆಗೂ ಕಳೆದ ಎರಡು ತಿಂಗಳಲ್ಲಿ ಇಳಿಕೆ ಕಂಡಿವೆ. ಇಷ್ಟು ಕುಸಿತಕಂಡ ಮೇಲೂ ಆ ಬ್ಯಾಂಕ್‌ಗಳು ಮತ್ತಷ್ಟು ಕುಸಿಯುತ್ತವೆಂಬ ಭಾವನೆ ಸರಿಯಲ್ಲ. ಇತ್ತೀಚೆಗೆ ರಾನ್‌ಬಾಕ್ಸಿ ಲ್ಯಾಬ್, ಟಾಟಾ ಸ್ಟೀಲ್‌ನಂತಹ ಕಂಪೆನಿಗಳು ಸರ್ವತೋಮುಖ ಸಕಾರಾತ್ಮಕ ಅಂಶಗಳಿಂದ ಕುಸಿತ ಕಂಡವು. ರಾನಬಾಕ್ಸಿ ಲ್ಯಾಬ್ ಒಂದೇ ದಿನ ರೂ100 ರಷ್ಟು ಜಿಗಿತ ಕಂಡಿತು. ಟಾಟಾ ಸ್ಟೀಲ್ ರೂ 196 ರಿಂದ 284ರ ವರೆಗೂ ಕ್ರಮೇಣ ಏರಿಕೆ ಕಂಡವು. ಹಾಗೆಯೇ ಏಶಿಯನ್ ಪೇಂಟ್ಸ್ ಶುಕ್ರವಾರದಂದು ರೂ 395ಕ್ಕೆ ಕುಸಿದು ರೂ423ರ ವರೆಗೂ ಏರಿಕೆ ಕಂಡಿತು.

ನಮ್ಮ ದೇಶದ ಆರ್ಥಿಕತೆ ಸ್ವಲ್ಪಮಟ್ಟಿನ ಸುಧಾರಣೆ ಕಾಣುತ್ತಿದೆ ಎಂದರೆ ಮೊಟ್ಟಮೊದಲು ಏರಿಕೆಯಿಂದ ವಿಜೃಂಭಿಸುವುದು ಬ್ಯಾಂಕಿಂಗ್ ವಲಯ. ಈಗ ಪೇಟೆಯಲ್ಲಿ ಅಗ್ರಮಾನ್ಯ ಕಂಪೆನಿಗಳ ಷೇರುಗಳು ಅಗ್ಗದ ಬೆಲೆಯಲ್ಲಿ ಲಭ್ಯವಾಗುತ್ತಿರುವುದರಿಂದ ಸಣ್ಣ ಹೂಡಿಕೆದಾರರು ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಷೇರುಗಳ ವ್ಯಾಮೋಹವನ್ನು ತ್ಯಜಿಸಿ ಉತ್ತಮ ಬೃಹತ್ ಕಂಪೆನಿಗಳಲ್ಲಿ ತೊಡಗಿಸಿದರೆ ಹೂಡಿಕೆಯು ತ್ವರಿತವಾಗಿ ಬೆಳೆಯುವುದರೊಂದಿಗೆ ಸುರಕ್ಷತೆಯೂ ಜೊತೆಗೂಡುತ್ತದೆ.
 

ಆಕರ್ಷಕ ಲಾಭಾಂಶ ವಿತರಿಸುವ ಕಂಪೆನಿಗಳು ಅಗ್ಗದ ಬೆಲೆಯಲ್ಲಿ ದೊರೆಯುವುದರಿಂದ ಅಂತಹ ಕಂಪೆನಿಗಳಲ್ಲಿ ಧೀರ್ಘಕಾಲೀನ ಹೂಡಿಕೆಯೂ ತೆರಿಗೆ ರಹಿತ ಲಾಭಾಂಶಗಳಿಸಲು ಅನುಕೂಲವಾಗುತ್ತದೆ. ಕೇವಲ ಬಾಹ್ಯ ನೋಟದಿಂದ ಪೇಟೆ ಸರಿಯಿಲ್ಲವೆಂಬ ನಿರ್ಧಾರ ಸರಿಯಲ್ಲ. ಪೇಟೆ ಒಳಹೊಕ್ಕು ಅವಕಾಶದ ಲಾಭವನ್ನು ಸೂಕ್ತ ತಜ್ಞರ ಮಾರ್ಗದರ್ಶನದಲ್ಲಿ ಪಡೆಯಿರಿ.

-98863-13380
(ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT