ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಣ್ಣನ ಕಾರು

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನನ್ನ ಜೊತೆಗೆ ಹೈಸ್ಕೂಲಿನಲ್ಲಿ ಓದಿದ್ದ ಸಂಗಣ್ಣ ಮೊನ್ನೆ ಸಿಕ್ಕಿದ್ದ. ಒಂದು ತಮಾಷೆಯ ಆದರೆ ಚಿಂತನಶೀಲವಾದ ವಿಷಯವನ್ನು ಹೇಳುವುದು ಮಾತ್ರವಲ್ಲ, ತೋರಿಸಿಯೂ ಬಿಟ್ಟ.
 
ಸಂಗಣ್ಣ ಶಾಲೆಯಲ್ಲಿದ್ದಾಗ, ಕಲಿಸಿದ ವಿಷಯವನ್ನು ನೆನಪಿನಲ್ಲಿಟ್ಟುಕೊಂಡು, ಪರೀಕ್ಷೆಯಲ್ಲಿ ಅವುಗಳನ್ನು ವಾಂತಿಮಾಡಿಕೊಂಡು ಮಾರ್ಕುಗಳಿಸುವ ವಿದ್ಯೆಯಲ್ಲಿ ಪರಿಣತನಾಗಲಿಲ್ಲ.
 
ಬುದ್ಧಿವಂತನಾಗಿದ್ದರೂ ಎಲ್ಲರಿಂದ ದಡ್ಡ ಎನಿಸಿಕೊಂಡ. ಅವನಿಗೆ ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣಗಳು ದಕ್ಕಲಿಲ್ಲ. ಮುಂದೆ ಅವನ ತಂದೆಯೂ ತೀರಿಹೋದದ್ದರಿಂದ ಶಾಲಾಶಿಕ್ಷಣಕ್ಕೆ ಎಳ್ಳು ನೀರು ಬಿಟ್ಟು ಕೆಲಸಕ್ಕೆ ಸೇರಿ, ಹಣಗಳಿಸಿ ಮನೆಯನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತ.

ಅಲ್ಲಿ, ಇಲ್ಲಿ ನೌಕರಿ ಮಾಡಿ, ಇನ್ನೊಬ್ಬರಿಗೆ ಸಲಾಂ ಹೊಡೆದು ಬದುಕುವ ಕೆಲಸ ಸಾಕೆಂದು ತಾನೇ ಒಂದು ಹಳೆಯ ಕಾರು ತೆಗೆದುಕೊಂಡು ಅದನ್ನೇ ಬಾಡಿಗೆಗೆ ಓಡಿಸುತ್ತ ಜೀವನ ನಡೆಸಿದ. ಕೆಲಸ ಚೆನ್ನಾಗಿ ನಡೆದ ಹಾಗೆ ಹಳೆಯ ಕಾರು ಮಾರಿ ಹೊಸದಾದ ಅಂಬಾಸಿಡರ್ ಕಾರು ಕೊಂಡುಕೊಂಡ. ನಾನು ಊರಿಗೆ ಹೋದಾಗಲೊಮ್ಮೆ ತನ್ನ ಕಾರಿನಲ್ಲಿ ಸುತ್ತಾಡಿಸಿ ಸಂಭ್ರಮಪಡುತ್ತಿದ್ದ.

ಇತ್ತೀಚೆಗೆ ಒಂದು ವಿಶೇಷವಾದ ಘಟನೆ ನಡೆಯಿತು. ಅವನ ಕಾರನ್ನು ಅವನು ಚೆನ್ನಾಗಿ ನೋಡಿಕೊಂಡದ್ದರಿಂದ ಬಳಕೆಯಲ್ಲೇ ಇತ್ತು. ಆಗಾಗ ರಿಪೇರಿ ಮಾಡಿಸಿ ಅದನ್ನು ಸುಸ್ಥಿತಿಯಲ್ಲೇ ಇಟ್ಟುಕೊಂಡಿದ್ದ. ಅದು ಈಗ 22,222 ಕಿಲೋಮೀಟರ್ ಓಡಿತ್ತು. ಸಂಗಣ್ಣ ವೇಗದ ಮೀಟರನ್ನು ಗಮನಿಸುತ್ತಲೇ ಇದ್ದ. 22,222-1, 22,222-2, ಆಗುತ್ತ ಆಗುತ್ತ ಮುಂದುವರೆಯಿತು.
 
ಕಾರನ್ನು ನಿಧಾನವಾಗಿ ಓಡಿಸುತ್ತಾ, ಮೀಟರನ್ನು ನೋಡುತ್ತಲೇ ಇದ್ದ ಸಂಗಣ್ಣ. 22,222-2 ಆಯಿತು. ಕಾರನ್ನು ಇನ್ನೂ ನಿಧಾನ ಮಾಡಿದ. ಸ್ವಲ್ಪ ಮುಂದೆ ಹೋದೊಡನೆ ಮೀಟರಿನ ಎಲ್ಲ ಸಂಖ್ಯೆಗಳು ಗರಗರನೇ ತಿರುಗಿದವು!
 
ಈಗ ಮೀಟರಿನಲ್ಲಿದ್ದ ಸಂಖ್ಯೆ 00000.00 ಆಯಿತು. ಸಂಗಣ್ಣ ಕಾರನ್ನು ಬದಿಗೆ ನಿಲ್ಲಿಸಿ ನನಗೆ ಫೋನ್ ಮಾಡಿದ,  `ಗುರೂ, ನನ್ನ ಕಾರು ಮತ್ತೆ ಹೊಸದಂತಾಯಿತು! ಈಗ ಮೀಟರು ಎಲ್ಲವನ್ನೂ ಸೊನ್ನೆ ಎಂದೇ ತೋರಿಸುತ್ತಿದೆ!~ ಎಂದು ಕೂಗಿದ. ಅವನ ಧ್ವನಿಯಲ್ಲಿಯ ಉತ್ಸಾಹ ನನ್ನನ್ನು ದೂರದಲ್ಲೂ ತಟ್ಟುತ್ತಿತ್ತು.

ಹೌದು, ವೇಗದ ಮೀಟರಿನ ಪ್ರಕಾರ ಸಂಗಣ್ಣನ ಕಾರು ಹೊಚ್ಚ ಹೊಸದು. ಆದರೆ ಅದನ್ನು ನೋಡಿದರೇ ಗೊತ್ತಾಗುತ್ತಿತ್ತು ಅದು ಹೊಸದಲ್ಲ ಎಂದು. ಅದರ ಬಣ್ಣ ಅಲ್ಲಲ್ಲಿ ಕಿತ್ತು ಹೋಗಿದೆ, ಸೋಫಾದ ಮೆತ್ತೆ ಮುದ್ದೆ ಮುದ್ದೆಯಾಗಿದೆ, ಒಳಗಿನ ಒಂದೆರಡು ಸ್ಪ್ರಿಂಗುಗಳು ಮುರಿದಿವೆ, ಟೈರುಗಳು ಸವೆದಿವೆ, ಎಂಜಿನ್ನಿನ ಕೆಲಭಾಗಗಳು ಬದಲಾಯಿಸುವ ಹಂತವನ್ನು ತಲುಪಿವೆ. ಇದೆಲ್ಲ ಸರಿಯೇ, ಆದರೂ ಮೀಟರಿನ ಪ್ರಕಾರ ಕಾರು ಹೊಸದೇ!

ನಮ್ಮ ಜೀವನವೂ ಸಂಗಣ್ಣನ ಕಾರಿನಂತೆ ಆಗುವುದು ಸಾಧ್ಯವಿಲ್ಲವೇ? ನಮ್ಮ ದೇಹಕ್ಕೂ ಕಾರಿನಂತೆ ವಯಸ್ಸಾಗುತ್ತದೆ. ಕಣ್ಣುಗಳು ಮಸುಕಾಗುತ್ತವೆ, ಕಿವಿಗಳು ಕೇಳುವುದಿಲ್ಲ ಎನ್ನುತ್ತವೆ, ಕಾಲುಗಳು ಸಾಕೆಂದು ಕುಳಿತುಕೊಳ್ಳುತ್ತವೆ, ನಾಲಿಗೆ ಅಪೇಕ್ಷೆ ಪಟ್ಟಿದ್ದನ್ನೆಲ್ಲ ಅರಗಿಸಿಕೊಳ್ಳಲಾರೆ ಎಂದು ಹೊಟ್ಟೆ ಮೊಂಡು ಹಿಡಿಯುತ್ತದೆ, ದೇಹ ಸಕ್ಕರೆಯ ಕಾರ್ಖಾನೆಯಾಗುತ್ತದೆ, ಹೃದಯದ ಬಡಿತ ಹೆಚ್ಚಾಗುತ್ತದೆ. ಇವೆಲ್ಲ ಸಾಧ್ಯಮಾತ್ರವಲ್ಲ, ಆಗಿಯೇ ತೀರುವಂತಹವು. ಆದರೆ ಹೃದಯದಲ್ಲಿ ಉತ್ಸಾಹದ ಮೀಟರು ಒಂದಿದೆಯಲ್ಲ!

ಅದೂ ಪ್ರತಿಕ್ಷಣ ತಿರುಗುತ್ತಲೇ ಇರುತ್ತದೆ. ಅದು ಎಷ್ಟು ತಿರುಗಿದರೂ ಮತ್ತೆ ಮೊದಲಿನ ಸ್ಥಾನಕ್ಕೇ ಬರುವಂತೆ ಇಟ್ಟುಕೊಳ್ಳುವುದು ಸಾಧ್ಯವಿದೆ. ಸಂಗಣ್ಣನ ಕಾರಿನ, ಲೋಹದ, ಪ್ಲಾಸ್ಟಿಕ್ಕಿನ ಮೀಟರಿಗೇ ಸೊನ್ನೆಗೆ ಮರಳಿ ಬಂದು ಹೊಸತಾಗುವುದು ಸಾಧ್ಯವಿದ್ದರೆ ಅನನ್ಯವಾದ, ಅದಮ್ಯವಾದ ಉತ್ಸಾಹದ ಹೃದಯದ ಮೀಟರು ಸದಾಕಾಲ ಸೊನ್ನೆಯಲ್ಲೇ ಇದ್ದು ಹೊಸಹೊಸತಾಗಿಯೇ ಇರುವುದು ಖಂಡಿತವಾಗಿಯೂ ಸಾಧ್ಯ. ಅದಕ್ಕಾಗಿ ನಾವು ಸದಾ ಒಳ್ಳೆಯದನ್ನೇ ನೋಡುವ, ಒಳ್ಳೆಯದನ್ನೇ ಕೇಳುವ, ಒಳ್ಳೆಯದನ್ನೇ ಮಾಡುವ ಹಟ ತೊಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT