ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್ ಹೆಸರಿನ ಹುಡುಗನ

Last Updated 19 ಮೇ 2012, 19:30 IST
ಅಕ್ಷರ ಗಾತ್ರ

ತಾಯಗರ್ಭದಲ್ಲಿರುವಾಗಲೇ ಹೆಣ್ಣುಭ್ರೂಣವನ್ನು ಗರ್ಭಪಾತದ ಮೂಲಕ ಸಾಯಿಸುವುದು ಸ್ತ್ರೀ ಭ್ರೂಣ ಹತ್ಯೆ. ಈ ಪ್ರಕ್ರಿಯೆಯನ್ನು ನಿಷೇಧಿಸಿದ್ದರೂ (ಪಿಎನ್‌ಡಿಟಿ ಕಾಯ್ದೆ 1994), ಕಾನೂನಿನ ಕಣ್ಣಿಗೆ ಮಣ್ಣೆರಚಿ ಸ್ತ್ರೀ ಭ್ರೂಣಗಳ ಹತ್ಯೆ ನಡೆಯುತ್ತಲೇ ಇದೆ.

ಒಂದು ಕಡೆ ವೈದ್ಯಕೀಯ ಕ್ಷೇತ್ರದ ಬೆಳವಣಿಗೆ ಅಸಹಜ ಶಿಶುಗಳನ್ನು ಗರ್ಭದಲ್ಲಿದ್ದಾಗಲೇ ಪರೀಕ್ಷಿಸಿ, ಅವುಗಳ ಜನನಕ್ಕೂ ಮೊದಲೇ ತೆಗೆದುಹಾಕುವ ಕಾರ್ಯಕ್ಕೆ ಅನುಕೂಲವಾಗಿದೆ. ಮತ್ತೊಂದೆಡೆ ಶಿಶುವಿನ ಲಿಂಗಪತ್ತೆಗೆ ಬಳಕೆಯಾಗುವ ಈ ತಂತ್ರಜ್ಞಾನ ವಿನಾಶಕಾರಿಯೂ ಹೌದು.

ಗಂಡು ಮಗುವಿಗೆ ಹಂಬಲಿಸುವ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ. ಇದರಿಂದಾಗಿಯೇ ಗಂಡು ಹೆಣ್ಣಿನ ಅನುಪಾತದ ಪ್ರಮಾಣದಲ್ಲಿ ಅಗಾಧ ಅಂತರ ಏರ್ಪಟ್ಟಿರುವುದು; ಹುಟ್ಟುವ ಪ್ರತಿ ಗಂಡು ಮಗುವಿಗೆ ಸಮ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಸಿಗದಿರುವುದು, ವಧುಗಳ ಕೊರತೆ ಎದುರಾಗಿರುವುದು.

ಹೆಣ್ಣುಮಕ್ಕಳು ಒಬ್ಬನನ್ನು ಮದುವೆಯಾಗಿ ಇನ್ನೊಬ್ಬನನ್ನು ಉಚಿತವಾಗಿ ಪಡೆದುಕೊಳ್ಳಬೇಕಾಗುವ ಅಪಾಯದ ದಿನ ತುಂಬಾ ದೂರದಲ್ಲೇನೂ ಇಲ್ಲ!
ಹೆಣ್ಣು ಶಿಶುಗಳ ಕುರಿತು ಬೆಳಕು ಚೆಲ್ಲುವಾಗ ಇತ್ತೀಚಿನ ಘಟನೆಯೊಂದು ಪದೇ ಪದೇ ಕಾಡುತ್ತದೆ.

ಭ್ರೂಣ ಹತ್ಯೆ ಮತ್ತು ಶಿಶುಹತ್ಯೆ ವಿಚಾರದಲ್ಲಿ ವಾಣಿವಿಲಾಸ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 2012ರ ಏಪ್ರಿಲ್ 12ರಂದು ಅಸುನೀಗಿದ ಹಿನಾ (ಮಾಧ್ಯಮಗಳಲ್ಲಿ ಬಂದ ಹೆಸರು) ಎಂಬ ಮೂರು ತಿಂಗಳ ಮಗುವಿನ ಬಗ್ಗೆ ಇತ್ತೀಚೆಗೆ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದವು. ಆದರೆ ನಾಲ್ಕು ವರ್ಷದ ಗಂಡು ಮಗು ಸಂತೋಷ್‌ನ ಬಿಕ್ಕಳಿಕೆ ಯಾರ ಕಿವಿಗೂ ಬೀಳಲಿಲ್ಲ.

ಮಾರ್ಚ್ 13ರಂದು ಸಂತೋಷ್‌ನನ್ನು ಹೊರರೋಗಿಗಳ ವಿಭಾಗಕ್ಕೆ ಕರೆತಂದಾಗ ಆತ ಅತಿ ಹೀನಾಯ ಸ್ಥಿತಿಯಲ್ಲಿದ್ದ. ಹೇಳಲು ಸಾಧ್ಯವಾಗದಷ್ಟು ಚಿಂತಾಜನಕವಾಗಿ ಗಾಯಗೊಂಡಿದ್ದ. ಆತ ಮುಂದೆ ತನ್ನ ಆರೈಕೆ ಮಾಡುವವರ ವಿಶ್ವಾಸವನ್ನು ಗೆದ್ದ ಕಥೆಯನ್ನು ಬಿಚ್ಚಿಡುತ್ತಿದ್ದೇನೆ.

ತನ್ನ ತಂದೆ ತಾಯಿಗೆ ಸಂತೋಷ್ ಎರಡನೇ ಮಗು. ಆತನ ತಾಯಿ ಶಾರದಳಿಗೆ ಸೋದರಮಾವ ಸೋಮುವಿನೊಂದಿಗೆ ಮದುವೆಯಾಗಿದ್ದು, ಆಕೆ ಎರಡು ಮಕ್ಕಳ ತಾಯಿ. ಆಕೆಯ ಮೊದಲ ಮಗಳು ಶ್ವೇತಾ, ಆಕೆಗೀಗ ಏಳು ವರ್ಷ. ಸಂತೋಷ್ ಹುಟ್ಟಿದ ದಿನದಿಂದಲೂ ಆತನ ತಾಯಿ ಹೇಳಿಕೊಳ್ಳಲಾಗದ ಸಂಕಟಗಳನ್ನು ಅನುಭವಿಸುತ್ತಿದ್ದಳು.
ವಾರದಲ್ಲಿ ಮೂರು ದಿನ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಆಕೆಯ ಗಂಡ ಉಳಿದ ದಿನಗಳಲ್ಲಿ ಕುಡಿತ ಮತ್ತು ಧೂಮಪಾನಗಳಲ್ಲೇ ಮುಳುಗಿರುತ್ತಿದ್ದ. ಹೆಂಡತಿ ಮತ್ತು ಗಂಡು ಮಗುವಿಗೆ ಮನಬಂದಂತೆ ನಿಂದಿಸುತ್ತಿದ್ದ, ಥಳಿಸುತ್ತಿದ್ದ. ಗಂಡನ ಚಿತ್ರಹಿಂಸೆಯನ್ನು ಸಹಿಸಲು ಶಾರದಾಳಿಗೆ ಸಾಧ್ಯವಾಗುತ್ತಿರಲಿಲ್ಲ.

ಸಂತೋಷ್‌ಗೆ ಒಂದು ವರ್ಷ ತುಂಬಿದ ಬಳಿಕ ಆತನನ್ನು ತನ್ನ ಪೋಷಕರ ವಶಕ್ಕೆ ಒಪ್ಪಿಸಿದಳು. ಮಗನನ್ನು ಮನೆಯಿಂದ ದೂರವಿರಿಸಿದ ಬಳಿಕವೂ ಗಂಡನಿಂದ ಆಕೆಗೆ ಹಿಂಸೆ ಮುಂದುವರೆಯಿತು. ಮುಂದೇನು ಮಾಡುವುದೆಂದು ತಿಳಿಯದ ಆಕೆ ಗಂಡನನ್ನು ತೊರೆದು ಮನೆಗೆಲಸದವಳಾಗಿ ಕೆಲಸಕ್ಕೆ ತೆರಳತೊಡಗಿದಳು.

ತನ್ನ ಗಂಡನೊಂದಿಗೆ ಇದ್ದ ಮಗಳು ಶ್ವೇತಾಳನ್ನು ಸಹ ಹೆಚ್ಚೂ ಕಡಿಮೆ ಬಿಟ್ಟಳು. ಸಂತೋಷ್ ತವರು ಮನೆಯಲ್ಲಿ ಸುರಕ್ಷಿತವಾಗಿದ್ದರೆ, ಅವನ ಅಮ್ಮ ರಸ್ತೆ ಬೀದಿಗಳಲ್ಲಿ ಬದುಕು ಸಾಗಿಸತೊಡಗಿದಳು.

ಶಾರದಾಳ ತವರಿನ ಕಡೆಯ ಸಂಬಂಧಿಕರು ಅನಿವಾರ್ಯವಾಗಿ ಸಂತೋಷ್‌ನ ಆರೈಕೆಯ ಜವಾಬ್ದಾರಿ ಹೊತ್ತುಕೊಂಡರು. ಆತನೀಗ ಪೀಣ್ಯ ಸಮೀಪದ ಶಾಲೆಯೊಂದರಲ್ಲಿ ಎಲ್‌ಕೆಜಿ ಓದುತ್ತಿದ್ದಾನೆ.

ಸಂತೋಷ್ ಆಕರ್ಷಕ, ಸ್ಪುರದ್ರೂಪಿ ಮತ್ತು ಬುದ್ದಿವಂತ ಹುಡುಗ. ಅವನಿಗೆ ಶಾಲೆ ಮತ್ತು ಎಲ್ಲದಕ್ಕಿಂತ ಅಲ್ಲಿ ಪಾಠ ಮಾಡುವ ಎಲ್ಲಾ `ಮಿಸ್~ಗಳು ಹೆಚ್ಚು ಇಷ್ಟವಾಗಿದ್ದರು. ಈ ಕಥೆ ಹೊರತೆರೆದಿಡುವಾಗ ಸಂತೋಷ ತನ್ನ ಆರೈಕೆ ಹೊಣೆ ಹೊತ್ತವರ ತೊಡೆ ಮೇಲೆ ಕುಳಿತಿದ್ದ. ತಂದೆಯ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಅವನು ಈಗಲೂ ಹೆದರಿ ಸೆಟೆದುಕೊಂಡಂತೆ ಕೂರುತ್ತಾನೆ.

ಒಂದೇ ಸಮನೆ ರಚ್ಚೆ ಹಿಡಿದಿದ್ದ ಸಂತೋಷ್ ಐಸ್‌ಕ್ರೀಮ್ ಮತ್ತು ಚಾಕೊಲೇಟ್ ಬೇಕೆಂದು ಹೇಳಿದ. ನಾನು ಕೂಡಲೇ ಅವುಗಳನ್ನು ತಂದುಕೊಡುವಂತೆ ಆಯಾಗೆ ಹೇಳಿದೆ. ಐಸ್‌ಕ್ರೀಮ್ ತಂದು ಕೊಡಲು ಸಾಧ್ಯವಾದರೂ ಆಸ್ಪತ್ರೆ ಆವರಣದಲ್ಲಿ ತಕ್ಷಣಕ್ಕೆ ಎಲ್ಲೂ ಚಾಕೊಲೇಟ್ ಲಭ್ಯವಿರದ ಕಾರಣ ಅದನ್ನು ತರಿಸಲು ಆಗಲಿಲ್ಲ. ತನ್ನ ಎಡಗೈಯನ್ನು ಬಳಸಲು ಸಾಧ್ಯವಿಲ್ಲದ ಸಂತೋಷ್ ಪಾಲಕರ ಸಹಾಯದಿಂದ ಅದನ್ನು ತಿನ್ನತೊಡಗಿದ.

ಈ ವಯಸ್ಸಿನ ಮಕ್ಕಳಿಗೆ ಐಸ್‌ಕ್ರೀಮ್, ಚಾಕೊಲೇಟ್ ಮತ್ತು ಬಿಸ್ಕತ್‌ಗಳ ಮೇಲೆ ಆಸೆ ಜಾಸ್ತಿ. ಯಾರು ಬೇಕಾದರೂ ಅವರಿಗೆ ಆಮಿಷವೊಡ್ಡಬಹುದು. ದುರದೃಷ್ಟದ ದಿನವಾದ 2012ರ ಮಾರ್ಚ್ 10ರಂದು ತನ್ನ ತಂದೆ ಬಳಿ ಐದು ರೂಪಾಯಿಯ `ಪಾರ್ಲೆ ಜಿ~ ಬಿಸ್ಕತ್‌ಗಾಗಿ ಅವನು ಹಟ ಹಿಡಿದ. ಬಹುಶಃ, ತನ್ನ ಬೇಡಿಕೆಗೆ ಮುಂದೆ ಸರಿಪಡಿಸಲು ಸಾಧ್ಯವಾಗದಂತಹ ದಂಡ ತೆರಬೇಕಾಗುತ್ತದೆ ಎಂದು ಕನಸಿನಲ್ಲೂ ಆ ಮಗು ಯೋಚಿಸಲು ಸಾಧ್ಯವಿರಲಿಲ್ಲ!

ತನ್ನ ಮಗನನ್ನು ಶಾಲೆಯಿಂದ ಮನೆಗೆ ಕರೆದೊಯ್ಯಲು ಬಂದವನ ಬಗ್ಗೆ ಶಿಕ್ಷಕರು ಕೊಂಚವೂ ಅನುಮಾನಿಸದೆ, ಸಂತೋಷ್‌ನನ್ನು ಅವನ ಪ್ರೀತಿಯ (?) ತಂದೆಯ ಜೊತೆ ಕಳುಹಿಸಿಕೊಟ್ಟಿದ್ದರು.
 
ಅದಾದ ಬಳಿಕ ಈ ಮುದ್ದಾದ ಮಗು ಸಿಕ್ಕಿದ್ದು ಕಟ್ಟಡ ನಿರ್ಮಾಣವಾಗುತ್ತಿದ್ದ ನಿವೇಶನವೊಂದರಲ್ಲಿ! ಕಂಬಕ್ಕೆ ಕಟ್ಟಿಹಾಕಲಾಗಿದ್ದ ಮಗುವನ್ನು ಮರದ ಕೊರಡಿನಿಂದ ಥಳಿಸಲಾಗಿತ್ತು. ಕಲ್ಲಿನಿಂದ ಜಜ್ಜಿದ್ದರಿಂದ ಆತನ ಕಾಲ್ಬೆರಳುಗಳ ಉಗುರುಗಳು ಹೊರಬಂದಿದ್ದವು!

ರಾತ್ರಿ ವೇಳೆ ನನ್ನ ಉಗುರುಗಳನ್ನು ಯಾರೋ ಕಿತ್ತು ಎಳೆಯುತ್ತಿರುವಂತಹ ಭಯಾನಕ ಕನಸುಗಳು ಬಿದ್ದು ಇಂದಿಗೂ ಥಟ್ಟನೆ ಎದ್ದು ಕೂರುತ್ತೇನೆ. ಈ ಪುಟ್ಟ ಮಗುವಿನ ಕರುಣಾಜನಕ ಕಥೆಯನ್ನು ಕೇಳಿದಾಗ ಎಂತಹವರಿಗೂ ಹೀಗೆಯೇ ಆಗಬಹುದು.

ಏಕೆಂದರೆ ಇಂದಿನ ದಿನಗಳಲ್ಲಿ ಕಾನೂನು ಪ್ರಕರಣಗಳಲ್ಲಿ ಸಿಲುಕಿಕೊಳ್ಳಲು ಯಾರಿಗೂ ಇಷ್ಟವಿಲ್ಲ. ಕೊನೆಗೂ ಮಾಹಿತಿದಾರ ಪೊಲೀಸರಿಗೆ ಸುದ್ದಿ ಮುಟ್ಟಿಸಿ ತಂದೆಯ ಹಿಡಿತದಿಂದ ಸಂತೋಷ್‌ನನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾದರು. ಮಗನನ್ನು ಎತ್ತಿಕೊಂಡು, ಅಪ್ಪಿ ಮುದ್ದಾಡಬೇಕಿದ್ದ ಕೈಗಳು ಅವು.

ಈ ಗಂಡು ಮಗುವನ್ನು ಅಪ್ಪ ದ್ವೇಷಿಸಿದ್ದು, ಗಂಡು ಮಕ್ಕಳು ಬೆಳೆದ ಮೇಲೆ ರೌಡಿಗಳಾಗಿ ತನ್ನಂತೆ (ಅಪ್ಪನಂತೆ!) ಕುಡಿತ, ಧೂಮಪಾನಗಳಂತಹ ದುಶ್ಚಟಗಳನ್ನು ಕಲಿಯುತ್ತವೆಂದು. ಲಿಂಗ ಅನುಪಾತವೇ ತಲೆಕೆಳಗಾಗಲು ಕಾರಣವಾಗಿರುವ ಗಂಡು ಮಕ್ಕಳ ಹಪಾಹಪಿತನದ ಹುಚ್ಚು ಮನೋಭಾವದ ಜನರಿರುವ ಭಾರತದಲ್ಲಿ ಇದು ಎಂಥ ವಿಚಿತ್ರವಲ್ಲವೆ? ಇಲ್ಲಿ ಈ ತಂದೆ ಮಗನನ್ನು ದ್ವೇಷಿಸುತ್ತಾನೆ, ಮಗಳನ್ನು ಪ್ರೀತಿಸುತ್ತಾನೆ!

ಸಂತೋಷ್‌ನದು `ಆಂತರಿಕ ಮಿಮಿಕ್ರಿ~ಯ ವಯಸ್ಸು. ತಮ್ಮ ಕಣ್ಣ ಮುಂದೆ ಏನು ನಡೆಯುತ್ತದೆಯೋ ಅದನ್ನು ಮಕ್ಕಳು ನಕಲು ಮಾಡಿ ಅನುಕರಿಸುತ್ತಾರೆ. ಕತ್ತನ್ನು ತಿರುಗಿಸಿ ಆ ಚಿಕ್ಕ ಮಗು ಹೇಗೆ ತನ್ನ ಅಕ್ಕನನ್ನು ಅಣಕಿಸಿತ್ತು ಎಂಬುದು ನನ್ನಲ್ಲಿ ತಲ್ಲಣ ಉಂಟುಮಾಡಿತು. ಆತನ ಏಳು ವರ್ಷದ ಅಕ್ಕ ಕೂಡ ಈ ಅಸಹಾಯಕ ಮಗುವನ್ನು ಹಿಂಸಿಸುವುದರಲ್ಲಿ ಅಪ್ಪನೊಂದಿಗೆ ಸೇರಿಕೊಂಡಳು.
 
ಕಂಬಕ್ಕೆ ಕಟ್ಟಿಹಾಕಿದ್ದ ಆ ಎಳೆ ಮಗುವಿನ ಬಾಯಿಗೆ ಅಪ್ಪ ಮತ್ತು ಮಗಳು ನಾಣ್ಯಗಳನ್ನು ಬೆರೆಸಿದ್ದ ಅಕ್ಕಿಯನ್ನು ತುಂಬುತ್ತಿದ್ದರು. ಅದನ್ನು ಹೇಗೆ ತಿನ್ನುವುದು ಎಂಬುದೂ ಸಂತೋಷನಿಗೆ ಗೊತ್ತಿರಲಿಲ್ಲ. 20 ದಿನಗಳ ಕಾಲ (ಆತನನ್ನು ರಕ್ಷಿಸುವವರೆಗೂ) ಅಪ್ಪ ಮತ್ತು ಅಕ್ಕ, ಸಂತೋಷ್ ಗಣನೀಯ ಪ್ರಮಾಣದಲ್ಲಿ ತೂಕ ಕಳೆದುಕೊಳ್ಳುವಂತೆ ಮಾಡಿದ್ದರು.

ಈ ಸಂದರ್ಭದಲ್ಲಿ ನಾನು ಏನು ಮಾಡಲೂ ಸಾಧ್ಯವಿಲ್ಲ. ಭುಜ್ ಭೂಕಂಪನದಲ್ಲಿ ಒಬ್ಬ ತಾಯಿ ತನ್ನ ಹಸುಗೂಸಿನೊಂದಿಗೆ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಳು. ರಕ್ಷಣಾ ಕಾರ್ಯಪಡೆ ಪತ್ತೆಹಚ್ಚುವವರೆಗೂ ಆಕೆ ತನ್ನ ಮಗುವಿಗೆ ಎದೆಹಾಲು ಕುಡಿಸುತ್ತಲೇ ಇದ್ದಳು. ಈ ಜೋಡಿಯನ್ನು ರಕ್ಷಿಸಿದ ಕೆಲ ಗಂಟೆಗಳ ಬಳಿಕ ಮಗು ಸಂಪೂರ್ಣ ಚೇತರಿಸಿಕೊಂಡಿತು.

ಅವಶೇಷಗಳ ಅಡಿ ಸಿಲುಕಿದ್ದಾಗಲೂ ಎದೆಹಾಲು ಕುಡಿಸುವುದನ್ನು ತಾಯಿ ಮುಂದುವರಿಸಿದ್ದರಿಂದ ಅದು ಸಾಧ್ಯವಾಯಿತು. ಆದರೆ ಹಸಿವಿನಿಂದಾಗಿ ತಾಯಿ ಅಸುನೀಗಿದಳು.

ತಮ್ಮ ಮುಂದಿನ ಪೀಳಿಗೆಗೆ ತಂದೆತಾಯಿಗಳು ಆದರ್ಶದ ಮಾದರಿಗಳಾಗಬೇಕು. ಅವರನ್ನು ಆರೈಕೆ ಮಾಡಿ, ರಕ್ಷಣೆ ಮಾಡಿ, ಆಸರೆ ನೀಡಿ, ಕಾಯಿಲೆ ಬಿದ್ದಾಗ ಆರೈಕೆ ಮಾಡಿ, ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಹಾಗೂ ಉತ್ತಮ ಮಾನವೀಯ ಮೂರ್ತಿಗಳಾಗಿ ರೂಪಿಸುವುದು ಅವರ ಕರ್ತವ್ಯ.

ಎರಡನೇ ಬಾರಿ ಆಸ್ಪತ್ರೆಗೆ ಬಂದಾಗ, ಅವನ ಬಾಹ್ಯ ಗಾಯಗಳು ಹೆಚ್ಚುಕಡಿಮೆ ವೇಗವಾಗಿ ಮಾಗುತ್ತಿದ್ದವು. ಸಂತೋಷ್ ಲವಲವಿಕೆಯಿಂದ ಇರುವಂತೆ ಮತ್ತು ನನ್ನನ್ನು ಭೇಟಿ ಮಾಡಲು ಉತ್ಸುಕನಾದಂತೆ ಕಂಡುಬಂದ- ಐಸ್‌ಕ್ರೀಮ್‌ನ ಬಯಕೆಯೂ ಅದರಲ್ಲಿತ್ತು!

ತಂದೆ ಬಲಿಷ್ಠವಾದ ಕೈಗಳಲ್ಲಿ ತನ್ನ ಮುಖವನ್ನು ಹೇಗೆ ಹಿಡಿದುಕೊಂಡಿದ್ದ, ತನ್ನ ಎಡಗೈ ಶಕ್ತಿ ಕಳೆದುಕೊಂಡು ಜೋತು ಬಿದ್ದಿದ್ದಾಗಲೂ ಗೋಡೆಗೆ ತಲೆಯನ್ನು ಹೇಗೆ ಚಚ್ಚಿಸುತ್ತಿದ್ದ ಎಂಬುದನ್ನು ಸಂತೋಷ್ ಅನುಕರಣೆ ಮಾಡಿ ತೋರಿಸುತ್ತಿದ್ದ. ತನ್ನ ಎಡಗೈಯನ್ನು ಹೆಚ್ಚು ಕಡಿಮೆ ಶಾಶ್ವತವಾಗಿ ಕಳೆದುಕೊಂಡಿದ್ದರ ಬಗ್ಗೆ ಪುಟ್ಟ ಮಗು ಸಂತೋಷನಿಗೆ ಅರಿವೇ ಇಲ್ಲ.

`ಐಜಿಐಸಿಎಚ್~ನ ಡಾ. ರುದ್ರಪ್ರಸಾದ್ ಅವರ ಸಹಾಯ ಪಡೆಯಲು ನಾನು ಪ್ರಯತ್ನಿಸುತ್ತಿದ್ದರೂ ಆತನ ಸಮಸ್ಯೆ ಬಗೆಹರಿಯುವುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಆತನ ಹುಟ್ಟಿಗೆ ಕಾರಣನಾದ ತಂದೆಯ ಕ್ರೌರ್ಯದ ಫಲವನ್ನು ಅನುಭವಿಸುತ್ತಿರುವ ಈ ಮಗು ಯಾವ ಕಾರಣಕ್ಕಾಗಿ ಆ ಯಾತನಾಮಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು.

ಸಂತೋಷ್‌ನ ಪಾಲಕರು ಗೊಂದಲದಲ್ಲಿದ್ದರು ಮತ್ತು ಅವರ ಭವಿಷ್ಯದ ಬಗ್ಗೆಯೂ ಆತಂಕಗೊಂಡಿದ್ದರು! ಮನೆಯಲ್ಲಿದ್ದ ಮಹಿಳೆಯರು ತಮ್ಮ ಗಂಡನ ಭಯದಿಂದಾಗಿ ಆತನನ್ನು ತಮ್ಮ ಜೊತೆಯಲ್ಲಿಟ್ಟುಕೊಳ್ಳಲು ಒಪ್ಪುತ್ತಿಲ್ಲ.

ಸಂತೋಷ್ ತುಂಬಾ ಹಚ್ಚಿಕೊಂಡಿರುವ ಅವಿವಾಹಿತ ರಾಜುವಿಗೂ (ಈಗಿನ ಪಾಲಕ) ತನ್ನ ಮದುವೆಯಾದ ಬಳಿಕ ಮುಂದೇನು ಎಂಬುದು ತಿಳಿದಿಲ್ಲ. ಇದು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವೈದ್ಯಕೀಯ ಮತ್ತು ಕಾನೂನು ಎರಡಕ್ಕೂ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಕಾನೂನು ಮಧ್ಯ ಪ್ರವೇಶಿಸಲಿದೆ. ಮಕ್ಕಳ ಹಕ್ಕುಗಳ ಟ್ರಸ್ಟ್‌ನ ವಾಸುದೇವ ಶರ್ಮಾ ಮತ್ತು ಮಕ್ಕಳ ಸಹಾಯವಾಣಿಯ ನಾಗಮ್ಮ ಈ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ.

ಮಕ್ಕಳನ್ನು ಲಿಂಗದ ಆಧಾರದ ಮೇಲೆ ಪ್ರತ್ಯೇಕಿಸುವುದು ಖೇದಕರ ವಿಷಯ. ಮಕ್ಕಳ ಲಿಂಗವು ನಿರ್ಧರಿತವಾಗುವುದು ತಂದೆಯ ವೀರ್ಯದ ಆಧಾರದಲ್ಲಿ. ಆತನಲ್ಲಿ `ಎಕ್ಸ್~ ವೀರ್ಯಾಣುಗಳು ಹೆಚ್ಚಾಗಿದ್ದಾಗ ಅದು ಹೆಣ್ಣುಮಗುವಿನ ಜನನಕ್ಕೂ, `ವೈ~ ವೀರ್ಯಾಣುವಿದ್ದಾಗ ಗಂಡು ಮಗುವೂ ಹುಟ್ಟುತ್ತದೆ.

ಹುಟ್ಟುವಾಗ ಸಹಜವಾಗಿದ್ದ ಮುದ್ದಾದ ಮಗು, ಗಂಡು ಮಗುವಾಗಿದ್ದರೂ ತನ್ನ ತಂದೆಯಿಂದಲೇ ಕ್ರೂರವಾಗಿ ಹಿಂಸೆಗೊಳಗಾಗಿ ಜೀವನಪರ್ಯಂತ ಅಂಗವೈಕಲ್ಯ ಅನುಭವಿಸುವಂತಾದುದು ಈ ಕರಾಳ ಘಟನೆಯ ವಿಪರ್ಯಾಸ.

ಏಪ್ರಿಲ್ 22 ಬದುಕಿನ ಎರಡು ಮುಖದ ಘಟನೆಗಳಿಗೆ ಸಾಕ್ಷಿಯಾಯಿತು. ಒಂದು ಪೂರ್ಣಿಮಾಳ ಮಗನ ಜನನ ಮತ್ತೊಂದು ಪೂರ್ಣಿಮಾಳ ಸಾವು. ಉದ್ಯಾನದಲ್ಲಿ ಮಗುವಿಗೆ ಜನ್ಮ ನೀಡಿ ಆಸ್ಪತ್ರೆಗೆ ಸಾಗಿಸುವ ಮೊದಲೇ ಪ್ರಾಣ ಬಿಟ್ಟ ಮಹಿಳೆಯ ಘಟನೆ ನೆನಪಿಸಿಕೊಳ್ಳಿ.

ಈ ಮಗು ಯಾವಾಗಲೂ ತನ್ನ ಹುಟ್ಟು ತಾಯಿಯ ಸಾವಿನೊಂದಿಗೆ ಆದದ್ದನ್ನು ನೆನಪಿಸಿಕೊಳ್ಳುತ್ತದೆ (ಯಾರಾದರೂ ಆತನಿಗೆ ಆ ಕಥೆ ಹೇಳಿದರೆ); ಆತ ಕೂಡ ಈ ನೆಲದ ಕಾನೂನಿನಂತೆ ಪಾಲಕರ ವಶದಲ್ಲಿ ಬೆಳೆಯಲು ಸಿದ್ಧವಾಗುತ್ತಿದ್ದಾನೆ.

ಈ ಕಥೆಯನ್ನು ನಾನು ಬರೆಯುತ್ತಿದ್ದಾಗ ಸಮಾಧಾನಗಳೆಲ್ಲಾ ಬತ್ತಿ ಹೋಗಿದ್ದ ಚಂದ್ರಪ್ಪ, ತಾನು ಮದುವೆಯಾಗಿ 11 ವರ್ಷದ ಬಳಿಕ (2009ರ ಆಗಸ್ಟ್ 17ರಂದು) ಜನಿಸಿದ ಒಬ್ಬಳೇ ಮಗಳು ಮಹೇಶ್ವರಿಯ ಬಗ್ಗೆ ಹೇಳಿದ. ಕೇವಲ ಎರಡೂವರೆ ವರ್ಷದವಳಿದ್ದಾಗ, 2012ರ ಏಪ್ರಿಲ್ 25ರಂದು ಆಕೆ ಕೊನೆಯುಸಿರೆಳೆದಳು.

ದುರದೃಷ್ಟವಷಾತ್ ಆತನ ಮಗಳು ತುಂಬಾ ಅಪರೂಪದ ಹೃದಯ ಸಂಬಂಧಿ ಕಾಯಿಲೆ (ಕಾರ್ಡಿಯೊಮಿಒಪಥಿ)ಗೆ ತುತ್ತಾಗಿದ್ದಳು- ಇದು ಹುಟ್ಟಿನಿಂದಲೇ ಬರುವ ಹೃದಯ ಸ್ನಾಯು ಕಾಯಿಲೆ. ಹೃದಯದ ಸ್ನಾಯುಗಳು ರಕ್ತವನ್ನು ಹೊರಹಾಕಲು ವಿಫಲವಾಗುವ ಸಮಸ್ಯೆ ಇದು. ಮತ್ತು ಈ ಸ್ಥಿತಿಗೆ ಯಾವುದೇ ಚಿಕಿತ್ಸೆ ಇಲ್ಲ. ಆದರೂ ಪ್ರಸ್ತುತ ಭಾರತದಲ್ಲಿ ಹೃದಯ ಅಂಗಾಂಶ ಕಸಿ ಲಭ್ಯವಿದೆ.
 
ಆಕೆಯ ಚಿಕಿತ್ಸೆಗಾಗಿ ಈ ತಂದೆ ಗುಲ್ಬರ್ಗಾದಲ್ಲಿದ್ದ ತನ್ನ ಜಮೀನು ಸೇರಿದಂತೆ ತನಗೆ ಸೇರಿದ್ದ ಸಣ್ಣ ಪುಟ್ಟ ವಸ್ತುಗಳನ್ನೆಲ್ಲಾ ಮಾರಲು ಸಿದ್ಧನಾಗಿದ್ದ. `ಮೇಡಂ, ಇದು ನಮ್ಮ ಹಣೆಬರಹ. ದೇವರು ನಮ್ಮಿಂದ ಮಹೇಶ್ವರಿಯನ್ನು ದೂರಕ್ಕೆ ತೆಗೆದುಕೊಂಡು ಹೋಗಲೆಂದೇ ನಮಗೆ ನೀಡಿ ಆಶೀರ್ವದಿಸಿದ. ಮೇಡಂ ದಯವಿಟ್ಟು ಹೇಳಿ.
 
ಈ ಬಡ ತಂದೆತಾಯಿಗಳು ಯಾವ ತಪ್ಪ ಮಾಡಿದ್ದೆವೆಂದು~- ಚಂದ್ರಪ್ಪ ಹೀಗೆ ಹೇಳುವಾಗ ನನ್ನ ಬಳಿ ಉತ್ತರವಿರಲಿಲ್ಲ. ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವಾಗ, ಆರೋಗ್ಯವಂತ, ಸುಶಿಕ್ಷಿತ, ವಯಸ್ಕ ಹಾಗೂ ಸಂತಾನಹೀನ ದಂಪತಿ ನನ್ನ ಕೊಠಡಿಗೆ ಬಂದು ದತ್ತು ತೆಗೆದುಕೊಳ್ಳುವ ಮೂಲಕ ಮಗು ಪಡೆಯಲು ನನ್ನ ಸಹಾಯ ಯಾಚಿಸಿದರು. ದತ್ತು ಪ್ರಕ್ರಿಯೆ ಕುರಿತು ನಾನು ಅವರಿಗೆ ಮಾರ್ಗದರ್ಶನ ನೀಡಿದೆ.

ಖಚಿತವಾಗಿಯೂ ಏಪ್ರಿಲ್ 2012 ಘಟನಾವಳಿಗಳಿಂದ ತುಂಬಿದ ತಿಂಗಳು. ಮೂರು ತಿಂಗಳ ಎಳೆಗೂಸು ಹಿನಾ (ಹೆಣ್ಣು) ತನ್ನ ತಂದೆಯ ಕಾರಣದಿಂದ ಗಾಯಕ್ಕೆ ಬಲಿಯಾದರೆ, ನಾಲ್ಕು ವರ್ಷದ ಸಂತೋಷ್ (ಗಂಡು)- ಗಂಡು ಮಗುವಾಗಿ ಹುಟ್ಟಿದ ಕಾರಣದಿಂದಲೇ ತಂದೆಯಿಂದ ಚಿತ್ರಹಿಂಸೆಗೊಳಗಾಗಿ, ಯಾತನೆ ಅನುಭವಿಸಿ, ಜೀವನ ಪರ್ಯಂತ ಅಂಗವೈಕಲ್ಯ ಅನುಭವಿಸುವಂತಾಗಿದ್ದು ಮತ್ತು ಮಗಳು ಗುಣಮುಖಳಾಗಲು ಚಂದ್ರನನ್ನೂ ತಂದುಕೊಡಲು ಸಿದ್ಧ ಎನ್ನುವಂತಿದ್ದ ಚಂದ್ರಪ್ಪ, `ಮನೆ ಇಲ್ಲದೆ~ ದೀರ್ಘ ಸಮಯ ಕಾನೂನು ಸಮರದಲ್ಲಿ ತೊಡಗಿಕೊಳ್ಳಬೇಕಾದ ಪೂರ್ಣಿಮಾಳ ಮಗು...
ಈ ಮಕ್ಕಳು ಹುಟ್ಟುವಾಗಲೇ ಬಂಧಿಗಳೇ? ಲಿಂಗ ಸಂಬಂಧ ಯುದ್ಧ ಮುಂದುವರೆದಿರುವಾಗ...

ashabenakappa@yahoo.com
 (ಲೇಖನದಲ್ಲಿನ ವ್ಯಕ್ತಿಗಳ ಹೆಸರುಗಳನ್ನು ಬದಲಿಸಲಾಗಿದೆ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT