ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಇನ್ನೂ ದೊರೆಯದ ‘ಆಸರೆ’

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

2009ರಲ್ಲಿ ಉಂಟಾದ ಜಲ­ಪ್ರಳಯದಲ್ಲಿ ಸಹಸ್ರಾರು ಮನೆಗಳು ಉರುಳಿ ಉತ್ತರ ಕರ್ನಾಟಕದ ಲಕ್ಷಾಂತರ ಮಂದಿಯ ಬದುಕು ಮೂರಾ­­ಬಟ್ಟೆ­ಯಾಗಿತ್ತು. ಆ ಸಂದರ್ಭದಲ್ಲಿ ನೊಂದವರ ಬೆನ್ನಿಗೆ ನಿಂತ ರಾಜ್ಯ ಸರ್ಕಾರ ಮಳೆ ಸುರಿದಷ್ಟೇ ಭರವಸೆಗಳ ಪೂರವನ್ನು ಹರಿಸಿ ಧೈರ್ಯ ತುಂಬಿತ್ತು, ಸಾಂತ್ವನ ಹೇಳಿತ್ತು.

ಸರ್ಕಾರದ ಈ ಭರವಸೆ ಸಂತ್ರಸ್ತರಿಗೆ ಆಶಾಕಿರಣವಾಗಿತ್ತು. ಮನೆ–ಮಠ ಕಳೆದುಕೊಂಡು ಬೀದಿಗೆ ಬಿದ್ದವರೂ ಆಸರೆ ದೊರೆಯುತ್ತದೆ, ಹೊಸದೊಂದು ಬದುಕು ಕಟ್ಟಿಕೊಳ್ಳಬಹುದು ಎಂಬ ಆಸೆಯಿಂದ ನೋವಿ­ನಲ್ಲೂ ನಗೆ ಬೀರಿದ್ದರು. ಆ ವಸತಿ ಯೋಜನೆಗೆ ಸರ್ಕಾರ ‘ಆಸರೆ’ ಎಂದೇ ಹೆಸರಿಸಿತು.

ಯೋಜನೆಗೆ ಸರ್ಕಾರ ಇಟ್ಟ ಹೆಸರು, ಅನು­ಷ್ಠಾನಕ್ಕೆ ತೋರಿದ ಆತುರ ಹೇಗಿತ್ತೆಂದರೆ ಮನೆ­ಗಳನ್ನು ಕಳೆದುಕೊಂಡ ಈ ಎಲ್ಲ ಜನರಿಗೂ ಕೆಲವೇ ತಿಂಗಳಲ್ಲಿ ಹೊಸ ಮನೆಗಳಲ್ಲಿ ಜೀವನ ಆರಂಭಿಸ­ಬಹುದು ಎಂಬ ಭ್ರಮೆ ಸೃಷ್ಟಿಸಿತ್ತು. ಅದಕ್ಕೆ ತಕ್ಕಂತೆ ಅನೇಕ ಸಭೆಗಳೂ ನಡೆದವು. ನಾನಾ ದಾನಿಗಳು ಮನೆ ಕಟ್ಟಿಸಿಕೊಡಲು ಮುಂದೆ ಬಂದರು.

ಮನೆಗಳನ್ನು ನಿರ್ಮಿಸಿಕೊಡುವ ಇಲ್ಲವೇ ಹಣ ಒದಗಿ­ಸುವ ಭರವಸೆಗಳನ್ನು ಸರ್ಕಾರಕ್ಕಿಂತ ಮಿಗಿ­ಲಾಗಿ ಅವರೂ ನೀಡಿದರು. ಆದರೆ ಕಾಲಕ್ರಮೇಣ ಸಂತ್ರಸ್ತರು ನೋವನ್ನು ಮರೆತು ನಿಧಾನವಾಗಿ ತಗಡಿನ ಶೆಡ್ಡುಗಳಲ್ಲಿನ ಜೀವನಕ್ಕೆ ಹೊಂದಿ­ಕೊಂಡರು. ಸರ್ಕಾರದ ಬಿರುಸೂ ಕಡಿಮೆಯಾ­ಯಿತು.

ದಾನಿಗಳೂ ಹಿಂದೆಸರಿದರು. ಇದೆಲ್ಲದರ ಪರಿಣಾಮವಾಗಿ ನಾಲ್ಕು ವರ್ಷಗಳು ಕಳೆದಿದ್ದರೂ ಸುಮಾರು 60,000 ಮನೆಗಳನ್ನು ಕಟ್ಟುವ ಕೆಲಸ ಪೂರ್ಣವಾಗಿಲ್ಲ. ಇನ್ನೂ ಅನೇಕ ಈಗಲೂ ಕುಟುಂಬ­ಗಳು ತಗಡಿನ ಶೆಡ್ಡುಗಳಲ್ಲೇ ಜೀವನ ಸಾಗಿಸುತ್ತಿವೆ. ಜನರಿಗೆ ಬದುಕು ಕಟ್ಟಿಕೊಡುವ ಕೆಲಸ ಆಗಲಿಲ್ಲ. ಸಂತ್ರಸ್ತರ ಪುಣ್ಯಕ್ಕೆ ನಂತರದ ವರ್ಷಗಳಲ್ಲಿ 2009ರಂತಹ ಮಹಾಪೂರ ಬರಲಿಲ್ಲ ಅಷ್ಟೇ.

ನಿಜ. ಪುನರ್ವಸತಿ ಕಲ್ಪಿಸುವುದು ಬಹಳ ಕಷ್ಟದ ಕೆಲಸ. ಆದರೆ ದೃಢ ಮನಸ್ಸು, ಇಚ್ಛಾಶಕ್ತಿ ಇದ್ದರೆ ಯಾವುದೂ ಕಷ್ಟವಲ್ಲ. ಇದಕ್ಕೆ ನಿದರ್ಶನವಾಗಿ ಬಾಗಲಕೋಟೆಯ ನವನಗರ ನಿರ್ಮಾಣ ನಮ್ಮ ಕಣ್ಮುಂದೆ ಇದೆ. ಐಎಎಸ್‌ ಅಧಿಕಾರಿ ಎಸ್‌.ಎಂ.­ಜಾಮದಾರ ಅವರ ಶ್ರಮ, ಸಾಮಾಜಿಕ ಕಳಕಳಿ, ನೊಂದವರ ಕಣ್ಣೀರು ಒರೆಸಲು ಅವರು ಹಾಕಿಕೊಂಡ ಯೋಜನೆಯ ಮಾದರಿ ಇದ್ದರೂ ಈ ಸಂದರ್ಭದಲ್ಲಿ ಅದನ್ನು ಇತರೆ ಅಧಿಕಾರಿಗಳು ಬಳಸಿಕೊಳ್ಳಲಿಲ್ಲ.

ಪರಿಣಾಮ ‘ಆಸರೆ’ಯಂತಹ ಮಹತ್ವಾಕಾಂಕ್ಷಿ ಯೋಜನೆ ಹಳ್ಳ ಹಿಡಿಯಿತು. ಇಂತಹ ಬೃಹತ್‌ ಯೋಜನೆಯನ್ನು ಕೈಗೆತ್ತಿ­ಕೊಳ್ಳುವ ಸಮಯದಲ್ಲಿ ಸರ್ಕಾರ ಅನೇಕ ಅಂಶ­ಗಳ ಬಗ್ಗೆ ಗಮನ  ಹರಿಸಬೇಕಿತ್ತು. ಏಕೆಂದರೆ ಮನೆ ಕೇವಲ ಸೂರಲ್ಲ, ಅದು ಬದುಕು. ಹಾಗಾಗಿ ಆ ಮನೆಗಳಲ್ಲಿ ವಾಸಕ್ಕೆ ಹೋಗುವ ಜನರ ಅಗತ್ಯ­ವನ್ನು ಕೇಳಿ ತಿಳಿದುಕೊಂಡು ಅದಕ್ಕೆ ಅನುಗುಣ­ವಾಗಿ ಕಟ್ಟಬೇಕಿತ್ತು. ಈಗ ಕಟ್ಟಿರುವ ಮನೆಗಳನ್ನು ನೋಡಿದರೆ ಗ್ರಾಮೀಣ ಪ್ರದೇಶದ ಅರಿವಿಲ್ಲ­ದವರು ರೂಪಿಸಿದ ಯೋಜನೆ ಇದು ಎಂದೆನಿಸು­ತ್ತದೆ.

ಎಷ್ಟು ಅವಾಸ್ತವ ಎಂದೂ ಅನಿಸುತ್ತದೆ. ಸರ್ಕಾರ ಯೋಜನೆ ರೂಪಿಸುವ ಹಂತದಲ್ಲೇ ಇತ್ತ ಗಮನಹರಿಸಿದ್ದರೆ ಅದರ ಪ್ರಯತ್ನ ಸಫಲವಾ­ಗು­ತ್ತಿತ್ತು. ಪಟ್ಟಣಗಳಲ್ಲಿ ಆಶ್ರಯ ಮನೆಗಳನ್ನು ಕಟ್ಟಿದಂತೆ ಸಾಲು ಸಾಲಾಗಿ ಪೆಟ್ಟಿಗೆ ಅಂಗಡಿಗ­ಳಂತಹ ಮನೆಗಳನ್ನು ಕಟ್ಟಿಕೊಟ್ಟರೆ ಗ್ರಾಮೀಣ ಪ್ರದೇಶದ ಜನರು ತಮ್ಮ ಜಾನುವಾರುಗಳನ್ನು ಎಲ್ಲಿ ಕಟ್ಟಬೇಕು? ಆತ ಬೆಳೆದ ಕಾಳು–ಕಡಿಯನ್ನು ಎಲ್ಲಿ ಇಟ್ಟುಕೊಳ್ಳಬೇಕು? ಒಂದು ಸಣ್ಣ ಹಾಲ್‌, ಕೊಠಡಿ, ಅಡುಗೆಮನೆ, ಶೌಚಾಲಯ ನಿರ್ಮಿಸಿ­ಕೊಟ್ಟರೆ ಸಾಕೇ? ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಕುಟುಂಬಗಳಲ್ಲಿ 7–8 ಮಂದಿ ಇರುತ್ತಾರೆ.

ಈ ರೀತಿಯ ಸಣ್ಣ ಮನೆಗಳಲ್ಲಿ ಅಷ್ಟೂ ಜನರು ಇರುವುದಾದರೂ ಹೇಗೆ? ಜತೆಗೆ ರೈತನಿಗೆ ಜಾನುವಾರುಗಳೂ ಕುಟುಂಬದ ಸದಸ್ಯರೇ. ಅವುಗಳಿಗೆ ಬೇಕಾದ ಕೊಟ್ಟಿಗೆಗಳನ್ನು ಎಲ್ಲಿ ಕಟ್ಟಿಕೊಳ್ಳುವುದು? ಇಷ್ಟೇ ಅಲ್ಲದೇ ಗ್ರಾಮ­ದಿಂದ ಬಹುದೂರದಲ್ಲಿ ನವಗ್ರಾಮ­ಗಳನ್ನು ನಿರ್ಮಿಸಲಾಗಿದೆ. ಹೊಲಕ್ಕೆ ಮನೆಗೆ ಓಡಾಡಲು ಕಷ್ಟವಾಗುತ್ತದೆ ಎಂಬ ರೈತರ ದೂರು ಸತ್ಯ ಕೂಡ. ಮನೆ ಕಟ್ಟಿಕೊಡುತ್ತೇವೆ ಎಂದು ಅವರನ್ನು ಊರಿನ ಆಚೆ ತಂದು ಹಾಕಿದರೆ ಓಡಾಡುವುದು ಹೇಗೆ? ಅವನೊಬ್ಬನೇ ಓಡಾಡು­ವುದಾದರೆ ವಾಹನ ಆಶ್ರಯಿಸಬಹುದು.

ಆದರೆ ದನ–ಕರು, ಎತ್ತು, ಎಮ್ಮೆ, ಕುರಿ–ಮೇಕೆಗಳನ್ನು ಕರೆದೊಯ್ಯ­ಬೇಕಲ್ಲ? ಈ ಸಂಗತಿಗಳ ಬಗ್ಗೆ ಸರ್ಕಾರ ಆಗ ಗಮನಹರಿಸದ ಕಾರಣ ‘ಆಸರೆ’ ಯೋಜನೆಯ  ಸಾವಿರಾರು ಮನೆಗಳು ಇನ್ನೂ ಖಾಲಿ ಬಿದ್ದಿವೆ. ಅನೇಕ ಕಡೆ ಬಳ್ಳಾರಿ ಜಾಲಿ ಗಿಡಗಳು ಮನೆಗಳಿಗಿಂತ ಎತ್ತರವಾಗಿ ಬೆಳೆದು­ನಿಂತಿವೆ. ಇನ್ನೂ ಪೂರ್ಣವಾಗದ ಅಸ್ಥಿಪಂಜರ­ದಂತಹ ಮನೆಗಳೂ ಇವೆ.

ಮನೆ ಕಳೆದುಕೊಂಡವರಿಗೆ ತಲೆ ಮೇಲೊಂದು ಸೂರು ಒದಗಿಸಬೇಕು ಎಂಬುದಷ್ಟೇ ಸರ್ಕಾರದ ಉದ್ದೇಶವಾಗಿತ್ತು. ಅಷ್ಟಕ್ಕೆ ಮಾತ್ರ ಅದು ಗಮನ­ಹರಿಸಿತು. ಮನೆ ಹೆಸರಿನಲ್ಲಿ ನಾಲ್ಕು ಗೋಡೆ ಕಟ್ಟಿಕೊಡುವ ಬದಲಿಗೆ ಮಾನವೀಯ ಮೌಲ್ಯದ ಜೀವಂತಿಕೆ ಇರುವಂತಹ ವ್ಯವಸ್ಥೆ ನಿರ್ಮಾಣಕ್ಕೆ ಗಮನಹರಿಸಬೇಕಿತ್ತು. ಇಂತಹ ವ್ಯವಸ್ಥೆ ‘ಆಸರೆ’ ಯೋಜನೆ ಅನುಷ್ಠಾನದಲ್ಲಿ ಆಗಲಿಲ್ಲ. ಆ ಮನೆ­ಗಳಲ್ಲಿ ವಾಸಿಸಲು ಕಷ್ಟ ಎಂಬುದು ಗೊತ್ತಾದ ರೈತರು ಹಲವೆಡೆ ವಾಸಕ್ಕೆ ಅಲ್ಲಿಗೆ ಹೋಗಿಯೇ ಇಲ್ಲ.

ಕೋಟಿಗಟ್ಟಲೆ ಹಣ ವಿನಿಯೋಗಿಸಿ ಕಟ್ಟಿದ ಸಾವಿರಾರು ಮನೆಗಳು ಉಪಯೋಗಕ್ಕೆ ಬರಲಿಲ್ಲ. ಅಧಿಕಾರಿಗಳೂ ಇಲ್ಲಿ ಎಡುವಿದ್ದಾರೆ. ₨ 1.30 ಲಕ್ಷ ಅಥವಾ ₨ 1.40 ಲಕ್ಷದಲ್ಲಿ ಈ ರೀತಿ ಪುಟ್ಟ ಮನೆಗಳನ್ನು ಕಟ್ಟುವ ಬದಲಿಗೆ ಸರ್ಕಾರ ಕನಿಷ್ಠ ₨ 3  ಲಕ್ಷ ವಿನಿಯೋಗಿಸಿ ಸಂತ್ರಸ್ತರೊಂದಿಗೆ ಚರ್ಚಿಸಿ ಅವರಿಗೆ ಅನುಕೂಲವಾಗುವಂತಹ ಸಾಧಾರಣ ಮನೆಗಳನ್ನು ಕಟ್ಟಿಸಿದ್ದರೆ ಎಲ್ಲವೂ ಸಾರ್ಥಕ­ವಾಗುತ್ತಿತ್ತು.
ಎಷ್ಟೋ ಗ್ರಾಮಗಳಲ್ಲಿ ಜನರು ಕುಸಿದು ಬಿದ್ದ ಮನೆಗಳ ಜಾಗದಲ್ಲಿಯೇ ಸಾಧ್ಯವಾದಷ್ಟು ಮಟ್ಟಿಗೆ ದುರಸ್ತಿ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದಾರೆ.

ಪ್ರಕೃತಿವಿಕೋಪದಿಂದ ಬೀದಿಗೆ ಬಿದ್ದವರ ಬವಣೆ ನಿವಾರಿಸಲೂ ಕಾಲಮಿತಿ­ಯೊಳಗೆ ಯೋಜನೆ ಅನುಷ್ಠಾನ ಮಾಡಲಾಗು­ವುದಿಲ್ಲ ಎಂದರೆ ಇದನ್ನು ಪ್ರಜಾಪ್ರತಿನಿಧಿಗಳ ಸರ್ಕಾರ ಎನ್ನಲು ಆದೀತೇ? ‘ಆಸರೆ ಪುನರ್ವಸತಿ ಕೇಂದ್ರಗಳು ಸಂತ್ರಸ್ತರಿಗೆ ನೆರವಾಗುವುದರ ಬದಲಿಗೆ ಪ್ರಚಾರದ ವಸ್ತುಗಳಾದವು. ನಮಗೆ ತಗಡಿನ ಬದುಕೇ ಅನಿರ್ವಾಯವಾಗಿದೆ’ ಎಂಬ ಬಾಗಲಕೋಟೆಯ ಸಬ್ಬಲಹುಣಸಿ ಗ್ರಾಮದ ಸಂತ್ರಸ್ತ ಬಾಲಪ್ಪ ಅವರ ಮಾತು ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ. ಈ ಮಾತು­ಗಳಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಆ ಜನರ ಬವಣೆ – ನೋವು ದಪ್ಪ ಚರ್ಮದ ನೇತಾರರಿಗೆ ಕಾಣಿಸುವುದಿಲ್ಲ.

ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಮಾಡಿದ್ದರೂ ಹೆಚ್ಚಿನವರಿಗೆ ಇನ್ನೂ ಹಕ್ಕುಪತ್ರಗಳ ವಿತರಣೆಯಾಗಿಲ್ಲ. ಕನಿಷ್ಠ ಹಕ್ಕುಪತ್ರವಾದರೂ ಇದ್ದಿದ್ದರೆ ಒಂದಿಷ್ಟು ಸಾಲ–ಸೋಲ ಮಾಡಿ ರೈತರು ಮನೆಗಳನ್ನು ತಮ್ಮ ಅನುಕೂಲಕ್ಕೆ ಮರು ಹೊಂದಾಣಿಕೆ ಮಾಡಿಕೊಳ್ಳಬಹುದಿತ್ತು. ಆ ಕೆಲಸವನ್ನೂ ಸರ್ಕಾರ ಮಾಡಿಲ್ಲ. ಈ ವಿಷಯ­ಗಳು, ನಮ್ಮ ಗ್ರಾಮ ಪಂಚಾಯ್ತಿಯಿಂದ ಹಿಡಿದು ವಿಧಾನಮಂಡಲದವರೆಗೆ ಎಲ್ಲಿಯೂ  ಪ್ರತಿಧ್ವನಿ­ಸು­ವುದಿಲ್ಲ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಐದು ದಿನಗಳಲ್ಲಿ ಒಂದು ದಿನವೂ ಈ ಜನರ ಗೋಳು ಪ್ರಸ್ತಾಪವಾಗಲಿಲ್ಲ. ಮಹಾಪೂರದಲ್ಲಿ ಮನೆ­ಗಳನ್ನು ಕಳೆದುಕೊಂಡವರು ಉತ್ತರ ಕರ್ನಾಟಕದ ಮಂದಿಯೇ. ಆದರೂ ಈ ಭಾಗದ ಶಾಸಕರು ಈ ವಿಚಾರಕ್ಕೆ ಆದ್ಯತೆ ನೀಡಿಲ್ಲ. ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದು­ಕೊಂಡಿಲ್ಲದಿರುವುದು ನಾಚಿಕೆಗೇಡಿನ ಸಂಗತಿ.

ಸಮರ್ಪಕವಾದ ಮನೆಗಳನ್ನು ಕಟ್ಟಿಕೊಟ್ಟಿದ್ದರೆ ಸಂತ್ರಸ್ತರೂ ನೇತಾರರನ್ನು ನೆನೆಯುತ್ತಿದ್ದರು. ಅದನ್ನು ತಮ್ಮ ರಾಜಕೀಯ ಏಳಿಗೆಗೂ ನೇತಾರರು ಬಳಸಿಕೊಳ್ಳಬಹುದಿತ್ತು. ಈಗ ಬರೀ ಅಂಕಿ–ಸಂಖ್ಯೆ­ಗಳನ್ನು ತೋರಿದರೆ ಸಂತ್ರಸ್ತರು ಸಿಟ್ಟಾಗದಿರುತ್ತಾ­ರೆಯೇ? ಅದರ ಪ್ರತಿಫಲ ಕಳೆದ ಚುನಾವಣೆ­ಯಲ್ಲಿ ಸಿಕ್ಕಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ.

ಆ ಜನರಿಗೆ ಕನಿಷ್ಠ ಮೂಲ­­ಸೌಕರ್ಯಗಳನ್ನು ಒದಗಿಸಿ, ಮನೆಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಜರೂರಾಗಿ ಹಕ್ಕುಪತ್ರಗಳನ್ನು ವಿತರಿಸುವ ಕೆಲಸವಾಗಬೇಕು. ಅಲ್ಲದೇ, ಅರ್ಧಂಬರ್ಧವಾಗಿರುವ ಮನೆಗಳನ್ನು ರೈತ­ರಿಗೆ ಅನುಕೂಲವಾಗುವಂತೆ ಮಾರ್ಪಡಿಸ­ಬೇಕು. ಬದುಕು ಕಳೆದುಕೊಂಡಿದ್ದವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ತಕ್ಕ ವ್ಯವಸ್ಥೆಯನ್ನು ಮಾಡ­ಬೇಕು. ಈ ದಿಕ್ಕಿನಲ್ಲಿ ಸರ್ಕಾರ ಯೋಚಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT