ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತು ಸಿಗಬಹುದು... ಸಮಾಧಾನ?

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹದಿನಾಲ್ಕು ವರ್ಷಗಳ ಹಿಂದೆ ನಾನು ಷಿಕಾಗೊಗೆ ಹೋಗಿದ್ದಾಗ ನನ್ನ ಸನ್ಮಿತ್ರರೂ, ಭಾರತ ಮೂಲದ ಚಿತ್ರಕಾರರೂ ಆದ ರಾಮರಾವ್ ಅವರ ಅತಿಥಿಯಾಗಿದ್ದೆ. ಅವರು ಆ ನಗರದ ಹೊರವಲಯದಲ್ಲಿನ ಒಬ್ಬ ನಿವೃತ್ತ, ಭಾರತ ಮೂಲದ ಡಾಕ್ಟರೊಬ್ಬರ ಮನೆಯಲ್ಲಿ ನನಗಾಗಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಆ ಸಂಜೆಯ ನೆನಪು ನನ್ನ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ.

ಆ ಮನೆ ಒಂದು ಅರಮನೆಯ ಹಾಗಿತ್ತು. ಅಬ್ಬಾ ಎನಿಸುವಷ್ಟು ದೊಡ್ಡದು. ಅದರ ಬೇಸ್ಮೆಂಟ್‌ನಲ್ಲಿ ಒಂದು ಮಧ್ಯಮ ಪ್ರಮಾಣದ ಸಭಾ ಮಂದಿರ. ಹಬ್ಬ, ಹರಿದಿನಗಳಂದು  ಭಾರತ ಮೂಲದ ಸ್ಥಳೀಯ ಮಂದಿ ಕಲೆತು ಅಲ್ಲಿ ಸಂಗೀತ, -ನೃತ್ಯಾದಿ ರಸಮಂಜರಿ ಕಾರ್ಯಕ್ರಮ ನಡೆಸಲು ಅನುವಾಗುವಂತೆ ಅದನ್ನು ನಿರ್ಮಿಸ­ಲಾಗಿತ್ತು. ಮೂರು ಮಹಡಿಯ ಆ ಮನೆಯಲ್ಲಿ ವಿಶಾಲವಾದ ಹಾಲುಗಳು, ಸುಸಜ್ಜಿತ ಕೊಠಡಿ­ಗಳು. ಇಡೀ ಬದುಕಿನುದ್ದಕ್ಕೂ ತುಂಬಾ ಶ್ರಮ­ಪಟ್ಟು ಸಂಪಾದಿಸಿದ ಹಣವನ್ನು ಅದಕ್ಕಾಗಿ ಸುರಿ­ದಿದ್ದರು ಮಹಾರಾಷ್ಟ್ರ ಮೂಲದ ಆ ಡಾಕ್ಟರು. ಭಾರತದಿಂದ ಒಬ್ಬ ಲೇಖಕ ಬಂದಿದ್ದಾನೆಂಬ ಸುದ್ದಿ ಗೊತ್ತಾಗಿ ತಮ್ಮ ಮನೆಯಲ್ಲಿ ಒಂದು ಸಂತೋಷ ಕೂಟ ಏರ್ಪಡಿಸಲು ಸಜ್ಜಾಗಿದ್ದರು. ಈ ಸುದ್ದಿಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದ್ದರು ರಾಮರಾವ್.  ನೂರಾರು ಫೋನು­ಗಳನ್ನು ಮಾಡಿ, ಹಲವರ ಮನೆಗೆ ಮೊಕ್ತಾ ಹೋಗಿ ಸುದ್ದಿ ಮುಟ್ಟಿಸಿ ಸುಮಾರು ಇಪ್ಪತ್ತು ಕುಟುಂಬ­ಗಳ ಸದಸ್ಯರು ಆಗಮಿಸುವಂತೆ ಮಾಡಿದ್ದರು.

ಭಾರತದ ವಿವಿಧ ರಾಜ್ಯಗಳಿಂದ ಬಂದು ಸಾಗರದಾಚೆಯ ಆ ನಗರದಲ್ಲಿ ವಸತಿ ಮಾಡಿ­ರುವ ಆ ಮಂದಿ, ಆ ಸಂಜೆ ಆ ಸಭಾಮಂದಿರ­ವನ್ನು ಒಂದು ಮಿನಿ ಭಾರತವನ್ನಾಗಿ ಪರಿವರ್ತಿ­ಸಿದ್ದರು.  ಹೊರನಾಡಿ­ಗರ ನಡುವೆ ಒಂಟೊಂಟಿ­ಯಾಗಿ ಬಾಳುತ್ತಿರುವ ಅವರೆಲ್ಲಾ ಆ ಸಂಜೆ ಒಟ್ಟಾಗಿ ಸೇರಿದಾಗ ಅನುಭವಿಸುತ್ತಿದ್ದ ಸಂತೋಷ ಅಂಗೈ­ಯಲ್ಲಿ ಮುಟ್ಟಿ ಅನುಭವಿಸ ಬಹುದಾದಷ್ಟು ಘನವಾಗಿತ್ತು. ಆ ಸಂಜೆ ನಾನೇನು ಭಾಷಣ ಬಿಗಿದೆ, ಅವರು ಹೇಗೆ ಪ್ರತಿಕ್ರಿಯಿಸಿದರು ಎಲ್ಲಾ ಮರೆತು­ಹೋಗಿದೆ. ಆ ಮನೆಯ ವಿಶಾಲ ಕೋಣೆಗಳು, ಅಂದು ನೆರೆದಿದ್ದ ಆಬಾಲವೃದ್ಧರ ಮುಖಗಳನ್ನು ಬೆಳಗುತ್ತಿದ್ದ ಒಳ ತೃಪ್ತಿಯ ಬೆಳಕು, ಸ್ಪರ್ಶಗ್ರಾಹ್ಯ ಎನಿಸುತ್ತಿದ್ದ ಸಮಾಧಾನ- ಮಾತ್ರ ಈಗಲೂ ನೆನಪಾಗುತ್ತಿದೆ.

ನನ್ನ ಭಾರತೀಯ ಸಾಹಿತ್ಯ ಕುರಿತ ಭಾಷಣ ಅವರಿಗೆ ಚೂರೂ ಅರ್ಥವಾಗಿರಲಿಲ್ಲ. ಅವರ ಸಂಕ್ಷಿಪ್ತ ಮರು ಮಿಲನಕ್ಕೆ ನಾನೊಂದು ನೆಪ­ವಾಗಿದ್ದೆ ಅಷ್ಟೆ. ಆನಂತರ ಆ ಮನೆ­ಯೊಡೆಯ ಹಾರ್ಮೋನಿಯಂ ತೆಗೆದರು. ಇನ್ನೊಬ್ಬರು ಮಹನೀಯರು ತಬಲಾವೊಂದನ್ನು ಹುಡುಕಿ ತಂದರು. ದೂರದ ತಾಯಿನಾಡಿನಿಂದ ಆಗಂತುಕ­ನಾಗಿ ಬಂದ ನನ್ನ ಮನರಂಜನೆಗಾಗಿ  ಹಳೆ ಜಮಾನಾದ ಹಿಂದಿ ಸಿನಿ ಹಾಡುಗಳ ಒಂದು ಸುದೀರ್ಘ ಕಛೇರಿಯನ್ನು ನಡೆಸಿದರು. ಅವರ ಉದ್ದೇಶ ಸಂಗೀತ ಕಲಾಭಿವ್ಯಕ್ತಿಯಾಗಲೀ ನನ್ನ ಮನರಂಜನೆಯಾಗಲೀ ಆಗಿರಲಿಲ್ಲ. ತಮ್ಮ  ಬಾಲ್ಯ ಮತ್ತು ಏರು ಜವ್ವನದಲ್ಲಿ ಅವರಿಗೆ ಪ್ರಿಯವಾಗಿದ್ದ ಸಿನಿಗೀತೆಗಳನ್ನು ಹಾಡುತ್ತಾ ತಮ್ಮ ಭಾರತದ ಬಾಲ್ಯ -ಯೌವನಗಳನ್ನು ಮತ್ತೆ ಅನುಭವಿಸುವುದು ಅವರ ಗುರಿಯಾಗಿತ್ತು. ಸೈಗಲ್, ಮುಕೇಶ್,  ಶಂಷದ್ ಬೇಗಂ ಮುಂತಾದ ಲಾಗಾಯ್ತಿನ ಗಾಯ­ಕರು ಹಾಡಿದ ಹಾಡುಗಳನ್ನು ಎಲ್ಲ ತಾಳಸ್ವರಗಳ ಹಂಗುತೊರೆದು ಉನ್ಮತ್ತರಾಗಿ ಹಾಡತೊಡಗಿದರು. ಗತದ ಇನಿ ನೆನಹುಗಳಲ್ಲಿ ಕರಗಿಹೋಗುತ್ತಿದ್ದ ಅವರ ಭಾವನೆಗಳು ನನಗೆ ಅರ್ಥವಾಗುತ್ತಿದ್ದವು. ಆದರೆ ಅವು ನನ್ನದಾಗಲು ಸಾಧ್ಯವಿರಲಿಲ್ಲ.

ಸುಮಾರು ಎರಡು ತಾಸುಗಳಿಗಿಂತಲೂ ದೀರ್ಘ ಕಾಲ ನಾನು ಎಲ್ಲವನ್ನೂ ನೋಡುತ್ತಾ ಕೇಳಿಸಿಕೊಳ್ಳುತ್ತಾ ವೇದಾಂತಿಗಳ ನಿಷ್ಕ್ರಿಯ ಸಾಕ್ಷಿ ಭಾವದ ಹಾಗೆ ಕೂತಿದ್ದೆ. ಅವರ ಕಣ್ಣುಗಳಿಂದ ಅಶ್ರುಧಾರೆ ಇಳಿಯತೊಡಗಿತು. ನನಗೆ ಹಸಿವಾಗಿತ್ತು. ಅವರಿಗೂ ಆಗುತ್ತಿದ್ದಿರ­ಬಹುದು. ಆದರವರು ವರ್ತಮಾನದಲ್ಲಿ ಇರಲಿಲ್ಲ. ಕಳೆದುಹೋದದ್ದರಲ್ಲಿ ಕಳೆದುಹೋಗಿ­ದ್ದರು. ಹಳಹಳಿಕೆಯಿಂದ ಹಸಿವಿನ ವರ್ತಮಾನಕ್ಕೆ ಅವರು ಹಿಂದಿರುಗುವುದರಲ್ಲಿ ನಾನು ಕಂಗಾಲಾಗಿದ್ದೆ. ಹಸಿವಿನಿಂದ ಬಹಳ ಹೊತ್ತು ಪಲಾಯನ ಮಾಡಲಾಗುವುದಿಲ್ಲ. ಸ್ವಲ್ಪ ಸಮಯದ ಬಳಿಕ ಹಸಿವು ಅವರನ್ನೂ ತತ್‌ಕ್ಷಣಕ್ಕೆ ಜಗ್ಗಿ ತಂದಿತು. ಆಮೇಲೆ ಮದ್ಯಪಾನ, ಊಟ ಶುರುವಾದಾಗ ಸುತ್ತಾ ಹೆಪ್ಪುಗಟ್ಟಿದ್ದ ಮೌನ­ದಲ್ಲಿ ತಗ್ಗುದನಿಯ ಪಿಸುಮಾತುಗಳು ಮಾತ್ರ ಕೇಳಿಸುತ್ತಿದ್ದವು. ಅದೊಂದು ತಿಥಿಯೂಟ­ವೇನೋ ಅನಿಸತೊಡಗಿತು. ಹೌದು, ಅವರು ತಿಥಿ ಆಚರಿ­ಸುತ್ತಿದ್ದರು. ದಶಕಗಳ ಹಿಂದೆ ತಾಯ್ನಾ­ಡಲ್ಲಿ ಸತ್ತುಹೋಗಿದ್ದ ತಮ್ಮ ಗತದ ತಿಥಿ ಆಚರಿಸುತ್ತಿದ್ದರು.

ಅತಿಥಿಗಳು ಊಟ ಮುಗಿಸಿ ತಮ್ಮ ತಮ್ಮ ಮನೆಗಳಿಗೆ ಮರಳತೊಡಗಿದರು. ನಾನೂ ರಾಮರಾವ್ ಅವರೂ ಜಾಗ ಬಿಡುವ ಮೊದಲು ಆದದ್ದು ಇಂದಿಗೂ ಕಣ್ಣಿಗೆ ಕಟ್ಟಿದ ಹಾಗಿದೆ. ನಮ್ಮ ಆತಿಥೇಯರು ನಮ್ಮನ್ನು ತಮ್ಮ ಮೂರನೇ ಮಹಡಿಯ ಬಾಲ್ಕನಿಗೆ ಕರೆ­ದೊಯ್ದರು. ಅಲ್ಲಿಂದ ಅವರ ಅರಮನೆಯ ನೋಟ ತುಂಬಾ ಚೆನ್ನಾಗಿ ಕಾಣುತ್ತದೆ ಎಂಬ ಕಾರಣದಿಂದ. ಅಲ್ಲಿ ನಿಂತು ತಮ್ಮ ವಿಶಾಲವಾದ ನಡುಮನೆಯ ಕಡೆಗೆ ಕೈತೋರಿಸಿ ನಮ್ಮೊಡನೆ ಮಾತಾಡುವ ನೆಪದಲ್ಲಿ ತಮ್ಮೊಡನೆ ತಾವೇ ಮಾತಾಡಿಕೊಳ್ಳತೊಡಗಿದರು.
ಈವರೆಗೆ ಮನೆಯನ್ನು ತುಂಬಿಸಿದ್ದ ಅತಿಥಿಗಳೆಲ್ಲಾ ಗುಡ್‌ನೈಟ್ ಹೇಳಿ ಜಾಗ ಖಾಲಿ ಮಾಡಿದ್ದರು. ಆ ದೊಡ್ಡಾನೆ ದೊಡ್ಡ ಮನೆಯಲ್ಲಿ ಈಗ ಒಂಟಿತನ ಕವಿದುಕೊಂಡಿತ್ತು. ಡಾಕ್ಟರರ ಶ್ರೀಮತಿ ಈ ಮುಂಚಿತವಾಗಿಯೇ ನಿದ್ದೆ ಮಾಡಲು ಹೋಗಿಬಿಟ್ಟಿದ್ದರು. ಉಳಿದಿದ್ದ ಕೊನೆ ಅತಿಥಿಗಳು ನಾವಿಬ್ಬರೇ.

ಡಾಕ್ಟರ್ ಹೇಳುತ್ತಿದ್ದರು: ‘ಒಳ್ಳೆಯ ಜೀವನ ಬೇಕು ಅಂತ ಈ ದೂರದ ದೇಶಕ್ಕೆ ಬಂದೆವು. ಹಗಲಿರುಳು ನಾನು, ನನ್ನ ಹೆಂಡತಿ ದುಡಿದು ದುಡಿದು ಈ ಭವ್ಯವಾದ ಮನೆ ಕಟ್ಟಿದೆವು. ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಮಾಡಿಸಿದೆವು. ನಾವೆಲ್ಲಾ ಈ ಮನೆಯಲ್ಲಿ ಸುಖವಾಗಿ ಒಟ್ಟಿಗೆ ಮಕ್ಕಳು ಮೊಮ್ಮಕ್ಕಳ ಜೊತೆ ಬಾಳುವ ಕನಸು ಕಂಡೆವು. ಈ ದೊಡ್ಡ ಮನೆಯಿದೆ. ಬೇಕಾದಷ್ಟು ಹಣವಿದೆ. ಮಕ್ಕಳೂ ಕೈತುಂಬ ದುಡಿಯುತ್ತಿ­ದ್ದಾರೆ. ಆದರೆ ನಾವಿಲ್ಲಿ, ಅವರು ಇನ್ನೆಲ್ಲೋ. ಅವರಿಗೆ ನಾವು ಬೇಕಾಗಿಲ್ಲ. ನಾವು ಕಟ್ಟಿದ ಈ ಮನೆ ಬೇಕಾಗಿಲ್ಲ. ನಾವು ಹೇಗಿದ್ದೇವೆ ಎನ್ನುವ ಬಗ್ಗೆಯೂ ಕಾಳಜಿಯಿಲ್ಲ. ಅವರುಂಟು, ಅವರ ಅಮೆರಿಕನ್‌ ಹೆಂಡತಿಯರುಂಟು’.

‘ನಮ್ಮ ಧರ್ಮ, ಸಂಸ್ಕೃತಿಗಳನ್ನು ಮಕ್ಕಳು ಆಚರಿಸಲಿ ಅಂತ ರಾಶಿರಾಶಿ ಹಣ ಚೆಲ್ಲಿ ಬೃಹತ್ ದೇವಸ್ಥಾನಗಳನ್ನು ಕಟ್ಟಿಸಿದೆವು. ಅವೂ ಈಗ ಖಾಲಿ. ಮಕ್ಕಳು ಅಲ್ಲಿಗೆ ಹೋಗುವುದೇ ಇಲ್ಲ. ದೇವರು ಬೇಕಿರುವುದು ನಮ್ಮಂಥ ಮುದುಕರಿಗೆ ಮಾತ್ರ. ನಮ್ಮ ಕತೆಯೂ ಮುಗಿಯುತ್ತಾ ಬರುತ್ತಿದೆ. ತಾಯಿನಾಡಿಗೆ ಹೊರಟು ಹೋಗೋ­ಣ­ವೆಂದರೆ ಅಲ್ಲಿ ಯಾರೂ ಇಲ್ಲ. ಇಲ್ಲಿ ಮಕ್ಕಳಿದ್ದಾರೆ. ಆದರೆ ನಮ್ಮ ಜೊತೆಗಿಲ್ಲ. ದುಡ್ಡು, ಮನೆ, ದೇವಸ್ಥಾನ ಎಲ್ಲವೂ ಇದ್ದೂ ಇಲ್ಲ.  ನಾವು ಯಾಕಾರಾ ಬಂದೆವೋ ಅನಿಸತೊಡಗಿದೆ’.
ಕೆಲವು ಘಟನೆಗಳು ಅಷ್ಟು ನಾಟಕೀಯ­ವಲ್ಲದಿದ್ದರೂ ನಮ್ಮ ಮನದಾಳದಲ್ಲಿ ದಶಕ­ಗಟ್ಟಲೆ ಕೂತುಬಿಡುತ್ತವೆ. ಮತ್ತೆ ಮತ್ತೆ ಕಾಡ­ತೊಡ­ಗುತ್ತವೆ. ಕಾರಣಗಳು ಮೇಲುಮನಸ್ಸಿನ ವಿಚಾರ, ವಿಶ್ಲೇಷಣೆಗಳಿಗೆ ಎಟಕುವುದಿಲ್ಲ.
ಅಂಥವುಗಳಲ್ಲಿ ಒಂದಾದ ಮೇಲ್ಕಾಣಿಸಿದ ಘಟನೆ ನನ್ನನ್ನು ಯಾಕಿಷ್ಟು ಕಾಡುತ್ತಿದೆ ಅಂದುಕೊಳ್ಳುತ್ತಿರುವಾಗ ನನಗೆ ಲಲ್ಲೇಶ್ವರಿಯ ಒಂದು ಪದ್ಯ ನೆನಪಾಗುತ್ತಿದೆ:
ನಾ ಯಾವ ಹಾದಿಯಲಿ ಬಂದೆ?
ಇನ್ನೆಲ್ಲಿ ಹೋಗಲಿ ಮುಂದೆ?
ಬರಬೇಕು ಅಂತ ತಿಳಕೊಂಡ ಹಾದಿಯಲಿ
ಬರಲೇ ಇಲ್ಲ ನಾ ಹಿಂದೆ
ನದಿಯೊಂದು ಬಂದಿದೆ ಅಡ್ಡ
ನಾ ಹೇಗೆ ದಾಟಲೋ ದಡ್ಡ?
ಅಂಬಿಗನು ಬಂದು ಕಾಸೊಂದ ಕೇಳಿದರೆ
ಎಲ್ಲಿಂದ ತರಲಿ ನಾ ದುಡ್ಡ?

ಈ ಸಾಲುಗಳ ಬೆನ್ನ ಹಿಂದೆ ಐಸಾಕ್ ಬಾಷೆವಿಸ್ ಸಿಂಗರ್‌ನ ಒಂದು ಅಪರೂಪದ ಕತೆ ನೆನಪಾಗುತ್ತಿದೆ.
ಯುಗೊಸ್ಲಾವಿಯಾದ ಬಡ ಯೆಹೂದಿ ಕುಟುಂಬವೊಂದರ ಏಕಮಾತ್ರ ಪುತ್ರ ಒಂದು ದಿನ ಮನೆಯಿಂದ ಹಠಾತ್ ಗಾಯಬ್ಬಾ­ಗುತ್ತಾನೆ. ವರ್ಷಗಟ್ಟಲೆ ವಾಪಸಾಗುವುದಿಲ್ಲ. ಬಡ ತಂದೆ ತಾಯಿ ಕಾದು ಕಾದು ಮುಪ್ಪಾಗುತ್ತಾರೆ. ಕೊನೆಗೆ ತಂದೆ ಕಾಯಿಲೆ ಬಿದ್ದು ಹೋಗಿಬರುವ ಜೀವವಾಗಿರುತ್ತಾನೆ.  ಒಂದು ದಿನ ಮಗ ಅಮೆರಿಕದಿಂದ ಹೇರಳ ಹಣ ಸಂಪಾದಿಸಿ ಹಿಂತಿರುಗುತ್ತಾನೆ. ಮನೆಗೆ ಬಂದು ನಿಮಗಾಗಿ ಎಷ್ಟು ಹಣ ಸಂಪಾದನೆ ಮಾಡಿ­ಕೊಂಡು ಬಂದಿದ್ದೇನೆ ಎಂದು ಕೊಚ್ಚಿಕೊಳ್ಳ­ತೊಡಗುತ್ತಾನೆ.

ತಾಯಿ ತಣ್ಣನೆ ದನಿಯಲ್ಲಿ ಹೇಳುತ್ತಾಳೆ: ‘ನಿನ್ನ ಅಪ್ಪ ಸಾಯುತ್ತಾ ಬಿದ್ದಿದ್ದಾನೆ. ನನ್ನ ಕತೆಯೂ ಮುಗಿಯುತ್ತಾ ಬಂತು. ಇಷ್ಟು ದಿವಸ ನಮಗೆ ನಿನ್ನ ನೆರವು ಸಿಗಲಿಲ್ಲ. ನಿನ್ನ ಹಣ ತೆಗೆದುಕೊಂಡು ನಾವು ಈಗೇನು ಮಾಡಬಲ್ಲೆವು? ನಿನ್ನ ಸಂಪಾದನೆ ನಮಗೆ ಬೇಕಿಲ್ಲ. ನೀನು ನಿನ್ನ ಪಾಡಿಗೆ ಅಮೆರಿಕಕ್ಕೆ ಹೋಗಿ ಮಜಾ ಮಾಡಿಕೊ’.

ಷಿಕಾಗೊದ ವೃದ್ಧ ಡಾಕ್ಟರರ ಮತ್ತು ಅವರಂತೆಯೇ ಕಾಸು ಸಂಪಾದಿಸುವ ಏಕೈಕ ಉದ್ದೇಶದಿಂದ ವಿದೇಶಕ್ಕೆ ಹೋಗಿ ನೆಲೆಸಿ ಕೊನೆಗಾಲದಲ್ಲಿ ಒಂಟಿಯಾಗಿ ಬಿಡುವ ಭಾರತೀಯರ ಕತೆ ಕರುಣಾಜನಕ. ಅವರಲ್ಲಿ ಬಹುತೇಕರು ಯು.ಎಸ್., ಜರ್ಮನಿ, ಯು.ಕೆ., ಕೆನಡಾ, ಆಸ್ಟ್ರೇಲಿಯಾ ಮುಂತಾದ ಸಿರಿವಂತ ನಾಡುಗಳಿಗೆ ಲಗ್ಗೆಯಿಕ್ಕಿದ್ದು ಕಾಸಿನ ಆಸೆಯಿಂದ. ಅವರು ಬಡ ಆಫ್ರಿಕನ್ ದೇಶಿಗರಂತೆ ಅಥವಾ ಪೂರ್ವ ಯೂರೋಪಿ­ಗರಂತೆ ಕ್ಷಾಮ, ಹಿಂಸೆಯ ವಾತಾವರಣ­ಗಳಿಂದಾಗಿ ಹೊರದೂಡಿಸಿಕೊಂಡವರಲ್ಲ ಅಥವಾ ಶ್ರೀಲಂಕಾದ ತಮಿಳರಂತೆ ತಮ್ಮ ಮನೆಗ­ಳಿಂದ ಗುಳೆ ಹೊರಟವರಲ್ಲ. ಸ್ವಂತ ತೀರ್ಮಾನ­ದಿಂದ  ಹೋದವರು. ಈ ಪೃಥ್ವಿಯಲ್ಲಿ ಯಾರಿಗೆ ಎಲ್ಲಿ ಬೇಕಾದರೂ ಅಲ್ಲಿ ನೆಲೆಸುವ ಹಕ್ಕಿದೆ. ನಿಜ, ‘ಸ್ವದೇಶೋ ಭುವನತ್ರಯಂ’. ಆದರೆ ತಾವು ಬದುಕಿ­ನಿಡೀ ಪಡೆಯಲು ಪ್ರಯತ್ನಿಸಿ ಪಡೆದು­ಕೊಂಡ ಸಂಪತ್ತು ನಿರರ್ಥಕವೆಂದು ಗೊತ್ತಾದಾಗ ಅವರ ಕೊನೆಯಿರದ ಶೋಕಪರ್ವ ಆರಂಭ.

ಮೊನ್ನೆ ಜರ್ಮನಿಯಿಂದ ನಾನು ಹಿಂತಿರು­ಗುವ ಮುನ್ನ ಬರ್ಲಿನ್ನಿನಲ್ಲಿರುವ ಕನ್ನಡಿಗ­ರೊಬ್ಬರು ನನ್ನನ್ನು ಸಂಜೆ ಊಟಕ್ಕೆ ಕರೆದಿದ್ದರು. ಅವರನ್ನು ‘ನಿಮ್ಮೂರಿಗೆ ಯಾವಾಗ ಹೋಗು­ತ್ತೀರ?’ ಅಂತ ಕೇಳಿದೆ. ‘ಯಾಕೆ ಹೋಗಬೇಕು? ಅಲ್ಲೇನಿದೆ? ಭಾರತದಲ್ಲಿ ಏನಿದೆ? ಬರೀ ಕೊಳಕು, ಭ್ರಷ್ಟಾಚಾರ, ನಾವು ಹೋದೊಡನೆ ಕಾಸಿಗೆ ಕೈಯೊಡ್ಡಿ ನಿಲ್ಲುವ ಬಂಧು-ಬಾಂಧವರು ಅಷ್ಟೆ. ನಾವಿಲ್ಲಿ ಎಷ್ಟು ಸುಖವಾಗಿದ್ದೇವೆ ನೋಡಿ’ ಎಂದು ಜಂಭದಿಂದ ಕೊಚ್ಚಿಕೊಂಡರು. ಸ್ವಲ್ಪ ಹೊತ್ತಿನ ನಂತರ ಒಂದಿಷ್ಟು ವಿಸ್ಕಿ ಗಂಟಲೊಳಗೆ ಇಳಿದಿತ್ತು. ಆಗ ಅವರ ಮೂಡು ಬದಲಾಯಿತು. ಅವರು ಭಾವುಕರಾದರು. ವಿಷಾದ ಅವರ ಮೋರೆಯನ್ನು ಕವಿಯಿತು. ತಮ್ಮೂರಿನ ಬಗ್ಗೆ ಹಳಹಳಿಕೆಯಿಂದ ಗದ್ಗದಿತರಾಗಿ ಮಾತಾಡತೊಡಗಿದರು. ಕುಡಿದ ನಂತರವೂ ಸುಳ್ಳು ಹೇಳುವವರ ಸಂಖ್ಯೆ ತೀರಾ ಕಡಿಮೆ.

ಕಡಲಾಚೆಗೊಂದು ಅಲಕಾವತಿ ಇದೆಯೆಂದು ನಂಬಿ ಒಂದಷ್ಟು ಕಾಸು ಮಾಡಿಕೊಂಡು ಬರೋಣ­ವೆಂದು ಅಲ್ಲಿಗೆ ಹೋಗಿ, ಕೊನೆಯಿರದ ಕಾಸಿನ ದಾವರಕ್ಕೆ ಬಲಿಯಾಗಿ ಅಲ್ಲಿ ನೆಲೆಸಿ, ಮುಪ್ಪಿನಲ್ಲಿ ತಮ್ಮನ್ನು ತಿರಸ್ಕಾರದಿಂದ ನೋಡಿ ದೂರವಾಗುವ ಮಕ್ಕಳು, ಮೊಮ್ಮಕ್ಕಳ ಅಗಲಿಕೆಯಿಂದ ಜರ್ಜರಿತರಾದ ಇಂಥವರು ಕುಸ್ತಿಯಾಟದಲ್ಲಿ ನೆಲ ಕಚ್ಚಿದರೂ ಮೀಸೆ ಮಣ್ಣಾಗಿ­ಲ್ಲವೆಂದು ಹೆಮ್ಮೆಪಡುವ ಪೈಲ್ವಾನ­ರಂತೆ. ಒಟ್ಟು ಕತೆಯ ನೀತಿ ಇಷ್ಟೇ: ಅವರು ಬಯಬಯಸಿ ದುಡಿದುಡಿದು ಸಂಪಾದಿಸಿದ್ದು ಅವರಿಗೆ ಸಿರಿವಂತಿಕೆಯನ್ನು ತಂದುಕೊಟ್ಟಿದೆಯೇ ಹೊರತು ಸುಖ- ಶಾಂತಿಗಳನ್ನಲ್ಲ. ಅವರು ಮಹಾಭಾರತದ ಪಾಂಡುಪುತ್ರರಂತೆ. ಅವರಿಗೆ ವಿಜಯವೇನೋ ಸಿಕ್ಕುತ್ತದೆ. ಆದರೆ ಸಮಾಧಾನ ಎಂದೆಂದಿಗೂ ಹಿಂತಿರುಗದಂತೆ ಅವರನ್ನು ತೊರೆದು ಹೊರಟುಹೋಗಿರುತ್ತದೆ.

* *
ಇಂಥ ಅಮುಖ್ಯ ಘಟನೆಗಳು ಯಾಕಿಷ್ಟು ಕಾಡುತ್ತಿವೆ? ಬಹುಶಃ ಹೀಗಿರಬಹುದು: ಅಂಥ­ವರು ಅಂದು ಒಬ್ಬೊಬ್ಬರಾಗಿ ಕೈಗೊಂಡ ಪ್ರಯಾಣ­ವನ್ನು ಇಂದು ಜಗತ್ತಿನ ಎಲ್ಲ ಬಡವರು, ಬಡದೇಶಗಳು ಒಟ್ಟೊಟ್ಟಾಗಿ ಕ್ರಮಿಸುತ್ತಿವೆ. ಹಾದಿಯ ಕೊನೆಯಲ್ಲಿ ಅವರಿಗೆಲ್ಲ ಏನು ಸಿಕ್ಕುತ್ತದೆ? ಸಂಪತ್ತು, ಯಶಸ್ಸು ಯಥೇಚ್ಛ­ವಾಗಿ ಸಿಕ್ಕಾವು. ಆದರೆ ಶಾಂತಿ,- ಸಮಾಧಾನ ಖಂಡಿತಾ ಅಲ್ಲ. ಸಾಕಷ್ಟು ಸಂಪತ್ತನ್ನು ಗಳಿಸಿ ಶಾಂತಿ -ಸಮಾಧಾನಗಳನ್ನೂ ಉಳಿಸಿಕೊಳ್ಳುವ ಉಪಾಯ ಹೊರನಾಡ ಭಾರತೀಯರಿಗೆ ಬೇಕಿತ್ತು, ಆದರೆ ಸಿಗಲಿಲ್ಲ.
ನಮಗೂ ಸಿಗಬಹುದೆ? ಗೊತ್ತಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT