ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪನ್ಮೂಲ ಸಂಗ್ರಹಕ್ಕೆ ಹೆಚ್ಚು ಗಮನ

Last Updated 14 ಜನವರಿ 2018, 20:02 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಷೇರಿನ ಬೆಲೆಗಳು ಪ್ರದರ್ಶಿಸುತ್ತಿರುವ ಏರಿಳಿತಗಳ ವೇಗಕ್ಕೆ ಆಂತರಿಕ ಕಾರಣಗಳಿಲ್ಲದೆ ಹೆಚ್ಚಿನ ವೇಳೆ ವ್ಯಾವಹಾರಿಕ ಚಿಂತನೆ, ಲಾಭ ಗಳಿಕೆಯೊಂದೇ ಆಗಿದೆ. ಹೆಚ್ಚಿನ ಕಂಪನಿಗಳು ಪೇಟೆಯ ತೇಜಿ ವಾತಾವರಣವನ್ನು ಉಪಯೋಗಿಸಿಕೊಂಡು ಸಂಪನ್ಮೂಲ ಸಂಗ್ರಹಣೆಯ ಯೋಜನೆಗಳತ್ತ ಗಮನ ಹರಿಸಿವೆ.

‌ಕಂಪನಿಗಳು ಉತ್ತಮ ಫಲಿತಾಂಶ ಪ್ರದರ್ಶಿಸಿದರು ಸಹ ಲಾಭಾಂಶ ವಿತರಣೆ ಪರಿಶೀಲಿಸುತ್ತಿಲ್ಲ. ಇದು ಹೂಡಿಕೆದಾರರಲ್ಲಿ ಬೇಸರ ಮೂಡಿಸಿ, ಪೇಟೆ ಒದಗಿಸುವ ಅವಕಾಶಗಳನ್ನು ಉಪಯೋಗಿಸಿಕೊಂಡು ಹೂಡಿಕೆಯಿಂದ ಹೊರಬರುವ ಚಿಂತನೆಗೆ ಪ್ರೇರಣೆಯಾಗುತ್ತಿದೆ.  ಕೆಲವು ಷೇರುಗಳ ಬೆಲೆಯಲ್ಲಿ ಪ್ರದರ್ಶಿತವಾಗುವ ಬದಲಾವಣೆಗಳು ಕಲ್ಪನೆಗೂ ಮೀರಿದ ರೀತಿಯಲ್ಲಿರುತ್ತದೆ.

ಗೋಸ್ಟರ್ ಲಿಮಿಟೆಡ್ ಕಂಪನಿಯ ಆಡಳಿತ ಮಂಡಳಿ 17 ರಂದು ಸಭೆ ಸೇರಲಿದೆ ಎಂಬ ಅಂಶವು ಗುರುವಾರ ಷೇರಿನ ಬೆಲೆಯನ್ನು ₹48ಯಷ್ಟು ಏರಿಕೆ ಕಾಣುವಂತೆ ಮಾಡಿತು. ಬೇಡಿಕೆ ಹೆಚ್ಚಾಗಿದೆಯಾದರೂ ಒಂದು ಸಣ್ಣ ನಕಾರಾತ್ಮಕ ಕಾರಣವೂ ಈ ವಾತಾವರಣವನ್ನು ಬದಲಾಯಿಸಬಹುದು, ಎಂಬುದಕ್ಕೆ ಶುಕ್ರವಾರ ಮದ್ಯಾಹ್ನ ಪೇಟೆಯು ನ್ಯಾಯಾಧೀಶರ ಗೊಂದಲದ ಕಾರಣ ಕುಸಿತಕ್ಕೊಳಗಾದಾಗ ಷೇರಿನ ಬೆಲೆ ₹472 ರ ಸಮೀಪದಿಂದ ₹452 ಕ್ಕೆ ಇಳಿದು ನಂತರ ಪರಿಸ್ಥಿತಿ ತಿಳಿಯಾದ ಕಾರಣ ಪುಟಿದೆದ್ದು ₹472 ರಲ್ಲಿ ವಾರಾಂತ್ಯ ಕಂಡಿತು. ಪರಿಸ್ಥಿಯಲ್ಲಿ ಯಾವುದೇ ಬದಲಾವಣೆಗಳು ಇಲ್ಲದಿದ್ದರೂ ಪುಟಿದೇಳುವ ಕಾರಣಕ್ಕೆ ಕೇವಲ ಅವಕಾಶವಾದಿತ್ವವಾಗಿರುತ್ತದೆ. ಬೆಳವಣಿಗೆಯ ಕಾರಣ ಕುಸಿತಕ್ಕೊಳಗಾದಾಗ ಆತಂಕಗೊಂಡ ದುರ್ಬಲ ಗೂಳಿಗಳು ಮಾರಾಟಕ್ಕೆ ಮುಂದಾಗುತ್ತವೆ ಪರಿಣಾಮ ಕುಸಿತ, ನಂತರ ವ್ಯಾಲ್ಯೂ ಪಿಕ್ ರೀತಿ ಚಟುವಟಿಕೆ ಷೇರಿನ ಬೆಲೆಗಳಲ್ಲಿ ಚೇತರಿಕೆ ಮೂಡಿಸುತ್ತದೆ.

ಎರಡು ಮೂರೂ ವರ್ಷಗಳಿಂದಲೂ ಸಲುಹಿದ ಷೇರುಗಳು ಈಗ ಖರೀದಿಸಿದ ಬೆಲೆ ದಾಟಿದೆ ಎಂಬ ಕಾರಣಕ್ಕಾಗಿ ಬೇಸರದಿಂದ ಮಾರಾಟ ಮಾಡಿದರೆ ಆ ಷೇರಿನ ಬೆಲೆಯು ಅನಿರೀಕ್ಷಿತ ಜಿಗಿತ ಕಾಣುವುದು ವಿಸ್ಮಯಕಾರಿ ಅಂಶವಾಗಿದೆ. ಗೋದಾವರಿ ಪವರ್ ಅಂಡ್ ಇಂಡಸ್ಟ್ರೀಸ್ ಕಂಪನಿಯ ಷೇರಿನ ಬೆಲೆ 2014 ಜೂನ್‌ನಲ್ಲಿ ₹170 ರ ಸಮೀಪವಿದ್ದು  ಅಲ್ಲಿಂದ ಸತತವಾದ ಇಳಿಕೆಗೊಳಪಟ್ಟಿತ್ತು.  2017 ಜನವರಿಯಲ್ಲಿ ₹70 ರ ಸಮೀಪಕ್ಕೆ ಕುಸಿದಿತ್ತು.  ಅದರ ಬೆಲೆ ಡಿಸೆಂಬರ್ ಮೊದಲವಾರದಲ್ಲಿ ₹180 ರ ಸಮೀಪ ತಲುಪಿತು.  ಆದರೆ ಅಲ್ಲಿಂದ ಕೇವಲ ಒಂದೇ ತಿಂಗಳಲ್ಲಿ ₹470ರ ಸಮೀಪಕ್ಕೆ ಜಿಗಿದಿದೆ.  ಇಂತಹ ಅನಿರೀಕ್ಷಿತ ಮಟ್ಟದ ಜಿಗಿತ. ಇದು ಬದಲಾದ ಪೇಟೆಯ ಪರಿಸ್ಥಿತಿಯೇ ಕಾರಣವಾಗಿದೆ.

ಷೇರುಪೇಟೆಯ ಚಟುವಟಿಕೆ ಎಷ್ಟರ ಮಟ್ಟಿಗೆ ವಾಣಿಜ್ಯೀಕರಣವಾಗಿದೆ  ಎಂದರೆ ಇಲ್ಲಿ ಸರ್ಕಾರಿ ಕಂಪೆನಿಯಾಗಲಿ ಅಥವಾ ಖಾಸಗಿ ಕಂಪೆನಿಯಾಗಲಿ ಎಲ್ಲವೂ ಒಂದೇ ರೀತಿ ಸಾಗಿವೆ. ನವೆಂಬರ್ ತಿಂಗಳಲ್ಲಿ ಕ್ವೆಸ್ ಕಾರ್ಪ್ ಲಿಮಿಟೆಡ್ ಕಂಪನಿ ಆಫರ್ ಫಾರ್ ಸೇಲ್ ಮೂಲಕ ಷೇರುಗಳನ್ನು ಮಾರಾಟಮಾಡಿತು. ವಿತ್ತೀಯ ಸಂಸ್ಥೆಗಳಿಗೆ ಮೊದಲನೇ ದಿನ ₹851.10 ರಂತೆ ವಿತರಿಸಿದರೆ ಎರಡನೇ ದಿನ ಸಣ್ಣ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹891.35 ರಂತೆ ವಿತರಿಸಿದೆ. ಇದು ಖಾಸಗಿ ಕಂಪನಿ ವಿತರಣೆ ರೀತಿಯಾದರೆ ಸರ್ಕಾರಿ ಕಂಪನಿ ಎನ್‌ಎಂಡಿಸಿ ಈ ವಾರ ಆಫರ್ ಫಾರ್ ಸೇಲ್ ಮೂಲಕ  ಷೇರು ವಿತರಣೆಯು ಸಹ ಇದೆ ರೀತಿಯಾಗಿದೆ.  ಮೊದಲನೇ ದಿನ ವಿತ್ತೀಯ ಸಂಸ್ಥೆಗಳಿಗೆ ₹153.50  ರಂತೆ ವಿತರಿಸಿದರೆ ನಂತರದ ದಿನ ರಿಟೇಲ್ ಹೂಡಿಕೆದಾರರಿಗೆ ₹161.05 ರಂತೆ ವಿತರಿಸಿ ಶೇ5 ರ ರಿಯಾಯ್ತಿ  ನೀಡಿದೆ. ಅಂದರೆ ₹153 ರ ಸಮೀಪದಲ್ಲೇ ವಿತರಿಸಿತು.  ಶೇ5 ರಿಯಾಯ್ತಿ ಎಂಬುದು ಕಣ್ಣೊರೆಸುವ ತಂತ್ರವಾಗಿದೆಯಷ್ಟೆ.

ಹೊಸ ಷೇರು: ನ್ಯೂಜೆನ್ ಸಾಫ್ಟ್‌ವೇರ್‌ ಟೆಕ್ನಾಲಜೀಸ್‌ ಲಿಮಿಟೆಡ್ ಕಂಪನಿ  ಈ ತಿಂಗಳ 16 ರಿಂದ 18 ರವರೆಗೂ, ಪ್ರತಿ ಷೇರಿಗೆ ₹240 ರಿಂದ ₹245 ರ ಅಂತರದಲ್ಲಿ ಆರಂಭಿಕ ಷೇರು ವಿತರಿಸಲಿದೆ. ಅರ್ಜಿಯನ್ನು 61 ಷೇರುಗಳು ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಅಂಬರ್ ಎಂಟರ್ ಪ್ರೈಸಸ್ ಇಂಡಿಯಾ ಲಿಮಿಟೆಡ್ ಕಂಪನಿ ಈ ತಿಂಗಳ 17 ರಿಂದ 19 ರವರೆಗೂ ಪ್ರತಿ ಷೇರಿಗೆ ₹855 ರಿಂದ ₹859 ರ ಅಂತರದಲ್ಲಿ ಆರಂಭಿಕ ಷೇರು ವಿತರಿಸಲಿದೆ.

ಮಸಾಲಾ ಬಾಂಡ್‌ಗಳು: ಷೇರುಪೇಟೆಯ ಸಂವೇದಿ ಸೂಚ್ಯಂಕ ಮೊದಲ ಬಾರಿಗೆ ಇಪ್ಪತ್ತು ಸಾವಿರದಗಡಿ ದಾಟಿ ದಾಖಲೆ ನಿರ್ಮಿಸಿದಾಗ ಹೆಚ್ಚಿನ ಕಂಪನಿಗಳು ವಿದೇಶಿ ವಿತ್ತೀಯ ಸಂಸ್ಥೆಗಳಿಗೆ, ನಮ್ಮದೇಶದ ಕರೆನ್ಸಿ ಹೊರತಾಗಿ ಬೇರೆದೇಶಗಳ ಕರೆನ್ಸಿಯಲ್ಲಿ, ಬಾಂಡ್‌ಗಳನ್ನೂ ವಿತರಿಸಿದವು. ನಿರ್ಧಿಷ್ಟ ಅವಧಿಯ ನಂತರ ಆ ಬಾಂಡ್‌ಗಳು ಈಕ್ವಿಟಿ ಷೇರುಗಳಾಗಿ ಪರಿವರ್ತಿಸಲಾಗುವ ಕಾರಣ ಇವನ್ನು ವಿದೇಶಿ ವಿನಿಮಯ ಪರಿವರ್ತನಾ ಬಾಂಡ್‌ ಎನ್ನುವರು. ಈ ಯೋಜನೆ ವೈಶಿಷ್ಟ್ಯಎಂದರೆ, ಇದರಲ್ಲಿ ಬಾಂಡ್ ಮತ್ತು ಈಕ್ವಿಟಿ ಮಿಶ್ರಣವಾಗಿದೆ.  ಈ ಯೋಜನೆ ಪ್ರಕಾರ ಬಾಂಡ್‌ಗಳಾಗಿದ್ದಾಗ ಅದಕ್ಕೆ ನಿಗದಿತ ದರದ ಬಡ್ಡಿ ಹಣ ನೀಡಲಾಗುವುದು. ಅವಧಿಯ ನಂತರ  ಷೇರಾಗಿ ಪರಿವರ್ತನೆ ಮಾಡಿಕೊಳ್ಳುವ ಅಥವಾ ಹೂಡಿಕೆಹಣ ಹಿಂಪಡೆಯುವ ನಿರ್ಧಾರವನ್ನು ಬಾಂಡ್ ಹೊಂದಿರುವ ಸಂಸ್ಥೆಗೆ ಬಿಡಲಾಗಿದೆ.

ಜಾಗತೀಕರಣದನಂತರ ಹೊಸಹೊಸ ಮಾದರಿಯ ಹಣಕಾಸಿನ ಪತ್ರಗಳು ಜಾರಿಗೊಳಿಸಿದ ಕಾರಣ ನಮ್ಮ ದೇಶದ ಕಾರ್ಪೊರೇಟ್‌ ವಲಯಕ್ಕೆ ಹೊಸ ಹೊಸ ಅನುಭವವನ್ನು ಒದಗಿಸಿದವು. ಷೇರಿನಬೆಲೆಗಳು ಅನಿರೀಕ್ಷಿತ  ಮಟ್ಟಕ್ಕೆ ತಲುಪಿದ್ದರಿಂದ ಕಂಪನಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣುತ್ತದೆಂಬ ಭ್ರಮೆಯಿಂದ ಪರಿವರ್ತನಾ ಬೆಲೆಯನ್ನು ಅತಿಹೆಚ್ಚಿನ ದರಕ್ಕೆ ನಿಗದಿಮಾಡಿ ವಿತರಿಸಿದವು.  ಈ ವಿತರಣೆಯಲ್ಲಿ ಪರಿವರ್ತನಾದರಗಳು ಹೇಗಿತ್ತೆಂದರೆ ಅಬಾನ್‌ ಆಫ್‌ಷೋರ್‌ ಕಂಪನಿಯ ಬಾಂಡ್ ಷೇರಿನ ಬೆಲೆ ₹800 ರ ಸಮೀಪವಿದ್ದಾಗ  ಏಪ್ರಿಲ್ 2011 ರಲ್ಲಿ ಪ್ರತಿಷೇರಿಗೆ ₹2,789 ರಂತೆ ಷೇರಾಗಿ ಪರಿವರ್ತನೆ ಮಾಡುವ ಷರತ್ತಿನ ಮೇಲೆ ವಿತರಿಸಿತ್ತು. ಈ ಪರಿವರ್ತನಾ ದರಗಳನ್ನು ಈಗಿನ ದರಗಳಿಗೆ ಹೋಲಿಸಿ ನೋಡಿದಾಗ ಬಾಲಿಶವಾಗಿ ಕಾಣಬಹುದಾದರೂ, ಪೇಟೆಯ ಚಟುವಟಿಕೆಯು ಆ ಸಂದರ್ಭದಲ್ಲಿ ಅಷ್ಟು ಉತ್ತುಂಗದಲ್ಲಿತ್ತು.

ವಾರದ ಮುನ್ನೋಟ: ಬಜೆಟ್, ಕಾರ್ಪೊರೇಟ್ ಸಾಧನೆ ಪ್ರಭಾವ

ಷೇರುಪೇಟೆಯಲ್ಲಿ ಎಲ್ಲರ ಗಮನವು ಈಗ ಫೆಬ್ರವರಿ 1 ರ ಕಡೆಗೆ ಕೇಂದ್ರೀಕೃತವಾಗಿದೆ. ಅಂದು ಕೇಂದ್ರ ಸರ್ಕಾರವು ಬಜೆಟ್ ಮಂಡನೆ ಮಾಡಲಿದೆ. ನೋಟು ರದ್ದತಿ ಮತ್ತು ಜಿಎಸ್‌ಟಿ ಪ್ರಭಾವದಿಂದ ದೇಶದ ಆರ್ಥಿಕತೆ ಯಾವ ರೀತಿ ಸ್ಪಂಧಿಸಿದೆ, ಅನುಕೂಲರವಾಗಿದೆ ಎಂಬುದು ಅಧಿಕೃತವಾಗಿ ಬಿಂಬಿತವಾಗಲಿದೆ.

ಈ ಮಧ್ಯ ಅನೇಕ ಆರ್ಥಿಕ ತಜ್ಞರು ಷೇರುಗಳ ಮಾರಾಟದ ಮೇಲೆ ಲಭ್ಯವವಿರುವ ಧೀರ್ಘಕಾಲಿನ ಬಂಡವಾಳ ಲಾಭ ತೆರಿಗೆಯನ್ನು ಜಾರಿಗೆತರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಸಹ ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ. ಧೀರ್ಘಕಾಲಿನ ಬಂಡವಾಳ ಲಾಭ ತೆರಿಗೆಯ ಬದಲಿಗೆ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ವಿಧಿಸಿರುವ ಅಂಶ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಬಜೆಟ್‌ನಲ್ಲಿ ಬರಬಹುದಾದ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಜೊತೆಗೆ ಮುಂದಿನ ವಾರದಲ್ಲಿ ಬರಬಹುದಾದ ಭಾರ್ತಿ ಏರ್‌ಟೆಲ್‌,  ಮೈಂಡ್ ಟ್ರೀ, ಯೆಸ್‌ ಬ್ಯಾಂಕ್, ವಿಪ್ರೊ, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ತ್ರೈಮಾಸಿಕದಲ್ಲಿ ಯಾವ ರೀತಿಯ ಸಾಧನೆಯನ್ನು ಪ್ರಕಟಿಸುತ್ತವೆ ಎಂಬುದು ಪೇಟೆಯಲ್ಲಿ ಪ್ರಭಾವಿಯಾಗಿರುತ್ತವೆ.

(9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT