ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪ್ರದಾಯದ ಬೆಳಕಿನಲ್ಲಿ ಹೊಳೆದ ಹೊಸ ಹಾದಿ

Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬಡಗುತಿಟ್ಟಿನ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಕೇದಿಗೆ- ಮುಂದಲೆಯ ಪುಂಡುವೇಷಕ್ಕಿಂತ ಭಿನ್ನವಾಗಿ ಸೀರೆ ಉಡಿಸಿ ಭಿನ್ನ ರೀತಿಯಲ್ಲಿ ಏಕೆ ಮಾಡುತ್ತಾರೆ ಎಂಬ ಬಗ್ಗೆ ಅನೇಕರು ವಿವೇಚನೆ ನಡೆಸಿರಬಹುದು. ನಾನು ಕೂಡ ‘ಹಾಗೇಕೆ?’ ಎಂದು ಕೇಳಿದಾಗ ಕಾರಂತರು ಕಿರುನಗೆಬೀರಿದರು. ಆ ಪ್ರಶ್ನೆಯೇ ಅವರಿಗೆ ಸಂತೋಷಕೊಟ್ಟಿರಬೇಕು. “ನಾನು ಇಂಥ ವಿಷಯಗಳ ಬಗ್ಗೆ ಅಲ್ಲಲ್ಲಿ ಬರೆದಿದ್ದೆ. ಬಾಲಗೋಪಾಲರ ವಿಷಯದ ಬಗ್ಗೆಯೂ ಒಂದು ಲೇಖನ ಬರೆದಿದ್ದೆ. ಅದನ್ನು ಓದಿ ಮತ್ತಷ್ಟು ಸೂಕ್ಷ್ಮ ವಿಚಾರಗಳ ಬಗ್ಗೆ ನನ್ನ ಗಮನ ಸೆಳೆದವರು ಉಡುಪಿಯ ಕುಮಾರಸ್ವಾಮಿಯವರು. ನೀನೂ ಅವರನ್ನೇ ಕಾಣುವುದು ಒಳ್ಳೆಯದು” ಎಂದರು. ನಾನು ಕುಮಾರಸ್ವಾಮಿಯವರ ಮನೆ ಹುಡುಕಿಕೊಂಡು ಹೋದೆ. ನನ್ನ ಕುತೂಹಲವನ್ನು ಅವರಲ್ಲಿ ಹಂಚಿಕೊಂಡೆ. ಯಕ್ಷಗಾನದ ಪೂರ್ವರಂಗದಲ್ಲಿ ಬರುವ ಬಲರಾಮ ಮತ್ತು ಕೃಷ್ಣರು, ಬಲ ಮತ್ತು ಗೋಪಾಲರಾಗಿ, ಪ್ರಸ್ತುತ ಬಾಲಗೋಪಾಲರೆಂದು ರೂಢಿಯಲ್ಲಿ ಕರೆಸಿಕೊಳ್ಳುತ್ತಿದ್ದಾರೆ ಎಂದು ನನಗೆ ಮನದಟ್ಟುಮಾಡಿದರು. ಬಡಗುತಿಟ್ಟು ಯಕ್ಷಗಾನದ ಮುಖವರ್ಣಿಕೆ ವೈಷ್ಣವ ಸಂಪ್ರದಾಯದ ಪ್ರಭಾವಕ್ಕೊಳಗಾದುದನ್ನೂ ತೆಂಕುತಿಟ್ಟಿನಲ್ಲಿರುವಂತೆ ಶಿವನನ್ನು ಸ್ತುತಿಸುವ ಪದ್ಯಗಳು ಹ್ರಸ್ವವಾಗಿ ಹೋದುದರ ಬಗ್ಗೆ ನನ್ನ ಗಮನ ಸೆಳೆದರು. ಅವೆಲ್ಲ ನನಗೆ ಎಷ್ಟು ಅರ್ಥವಾಯಿತೊ, ಕಾಣೆ. ಹೀಗೆ, ಆವರೆಗೆ ನಾಟ್ಯಾಭಿನಯಗಳಂಥ ವ್ಯವಹಾರಗಳಲ್ಲಷ್ಟೇ ಮಗ್ನನಾಗಿದ್ದ ನಾನು ಕಲೆಯ ಸ್ವರೂಪ, ಕಲೆಯ ಇತಿಹಾಸ ಇತ್ಯಾದಿ ವಿಷಯಗಳ ಬಗ್ಗೆಯೂ ಕೊಂಚ ಮನಸ್ಸು ಹರಿಸಲಾರಂಭಿಸತೊಡಗಿದ್ದೆ.

ಶಿವರಾಮ ಕಾರಂತರು ಮಾತ್ರ ಯಕ್ಷರಂಗದ ಪ್ರದರ್ಶನದಲ್ಲಿ ಕೃಷ್ಣನನ್ನು ಸೊಂಟದಿಂದ ಕೆಳಗಿನ ಭಾಗವನ್ನು ಕಸೆ ಸೀರೆಯಲ್ಲಿಯೂ ಸೊಂಟದಿಂದ ಮೇಲಿನ ಭಾಗವನ್ನು ಸಹಜವಾದ ಎದೆಪದಕ, ತೋಳ್ಕಟ್ಟುಗಳ ಪುಂಡುವೇಷದಲ್ಲಿಯೂ ಕಾಣಿಸಬೇಕೆಂದು ತಾಕೀತು ಮಾಡಿದ್ದರು. ಅದಕ್ಕೆ ಅವರ ವಿವರಣೆ ಹೀಗೆ: “ಸೊಂಟದಿಂದ ಕೆಳಗಿನ ಭಾಗ ಪ್ರಕೃತಿಯ ಸಂಕೇತ. ಮೇಲಿನ ಭಾಗ ಪುರುಷನ ಪ್ರತೀಕ. ಪ್ರಕೃತಿ-–ಪುರುಷ ಸೇರಿಕೊಂಡ ಎತ್ತರದ ಪಾತ್ರವಾಗಿದ್ದಾನೆ ಬಡಗುತಿಟ್ಟಿನ ಕೃಷ್ಣ”.

ಇದೇ ವಿಚಾರವನ್ನು ಕುಮಾರಸ್ವಾಮಿಯವರೂ ನನಗೆ ಹೇಳಿದ್ದರು. ಇವರಂತೆ ಯಕ್ಷಗಾನ ದೇವದಾಸಿ ಸಂಬಂಧದ ಬಗ್ಗೆ ಚರ್ಚಿಸುತ್ತಿರುವ ಮತ್ತೋರ್ವ ಹಿರಿಯ ಅನುಭವಿ ಕೂರಾಡಿ ಸದಾಶಿವ ಕಲ್ಕೂರರು.

ಯಕ್ಷಗಾನ ಪರಂಪರೆಯಲ್ಲಿ ಕೃಷ್ಣನ ಪಾತ್ರದ ಮುಖವರ್ಣಿಕೆ ನೀಲಿ ಬಣ್ಣದ್ದಲ್ಲ. ನೀಲಿ ಬಣ್ಣದ ಬಳಕೆ ಯಕ್ಷಗಾನದ ಸಂಪ್ರದಾಯದಲ್ಲಿಯೇ ಇಲ್ಲ. ಕೃಷ್ಣ ಸತ್ತ್ವ ಗುಣೋಪೇತನಾದುದರಿಂದ ಅವನ ಮುಖವನ್ನು ಹೆಣ್ಣಿಗೊಪ್ಪುವ ಗೌರವರ್ಣದಲ್ಲಿ ಕಾಣಿಸುವುದು ಪರಿಪಾಠ. ಮೂಗುತಿ, ಬುಲಾಕುಗಳನ್ನು ಧರಿಸುವ ಕ್ರಮವೂ ಇದೆ. ನಾಟ್ಯದಲ್ಲಿಯೂ ಲಾಲಿತ್ಯವನ್ನು ತೋರಿಸಲಾಗುತ್ತದೆ. ಯಾವುದೇ ಪ್ರಸಂಗದಲ್ಲಿ ಹೆಚ್ಚಿನ ಪಾತ್ರಗಳು ಪ್ರವೇಶವಾಗುವ ಮುನ್ನ ರಂಗಸ್ಥಳದ ಹಿಂದೆ ತೆರೆಮರೆಯಲ್ಲಿ ಸಭೆಗೆ ಬೆನ್ನು ಹಾಕಿ ತೈ ದ ತೈ ದ ದಿ ತ್ತಾಕಡ್ತಕದಿನ್ನಾ ಧೇಂ ಕುಣಿಯುವ ಸಂಪ್ರದಾಯವಿದೆ. ಇದು ಚೌಕಿಯಲ್ಲಿರುವ ಗಣಪತಿಗೆ ಸಲ್ಲಿಸುವ ಗೌರವವೆಂಬುದು ಒಂದು ನಂಬಿಕೆ. ಆ ಬಳಿಕ ವೇಷಗಳು ತೆರೆಯನ್ನು ಚಕ್ಕನೆ ಸರಿಸಿ ಪ್ರವೇಶ ಮಾಡುತ್ತವೆ. ಆದರೆ, ಶ್ರೀಕೃಷ್ಣನಿಗೆ ತೆರೆಯ ಮರೆಯಲ್ಲಿ ಕುಣಿತವೇ ಇಲ್ಲ. ತೆರೆಯೊಂದಿಗೆ ವೇದಿಕೆಗೆ ಆಗಮಿಸಿ ರಥದಲ್ಲಿ (ಬಯಲಾಟದ ರಂಗಸ್ಥಳದಲ್ಲಿರುವ ಆಸನಕ್ಕೆ ರಥ ಎನ್ನುತ್ತಾರೆ) ಕುಳಿತುಕೊಂಡೇ ತೆರೆಯನ್ನು ಮೇಲೆ- ಕೆಳಗೆ ಸರಿಸಿ ಒಡ್ಡೋಲಗವನ್ನು ಪ್ರಸ್ತುತಪಡಿಸುವುದು ಕೃಷ್ಣ ಪಾತ್ರದ ಸಂಪ್ರದಾಯ. ಇತ್ತೀಚೆಗಿನ ದಿನಗಳಲ್ಲಿ ಪುಂಡುವೇಷವಾಗಿಯೇ ಕೃಷ್ಣನನ್ನು ಕಾಣಿಸುವುದರಿಂದ ವೇಷಭೂಷಣದ ಅನನ್ಯತೆ, ಕುಣಿತದ ಲಾಲಿತ್ಯ ಎಲ್ಲವೂ ಮರವೆಗೆ ಸರಿಯುತ್ತಿವೆ. ಕರ್ಕಿ ಶೈಲಿಯ ಯಕ್ಷಗಾನ ಪರಂಪರೆಯಲ್ಲಿ ಕೃಷ್ಣನ ಪಾತ್ರವು ‘ಕೊಳಲನೂದುತ ಬಂದ’ ದಾಸರ ಕೀರ್ತನೆಯೊಂದಿಗೆ ಬಹಳ ಪರಿಣಾಮಕಾರಿಯಾಗಿದೆ. ಅದು ನಮ್ಮ ಶೈಲಿಯ ಯಕ್ಷಗಾನದೊಳಗೂ ಚೆನ್ನಾಗಿ ಹೊಂದಿಕೊಳ್ಳುವುದರಿಂದ ಅದನ್ನು ನಾನೂ ಕಲಿತು, ಶಿಷ್ಯರಿಂದಲೂ ಮಾಡಿಸಿದ್ದೇನೆ. ಬದಲಾವಣೆಗಳು, ಹೊಸತನಗಳು ಪರಂಪರೆಯನ್ನು ಬೆಳೆಸುವುದಕ್ಕೆ ಪೂರಕವಾದರೆ ಅದನ್ನು ಸ್ವೀಕರಿಬಹುದು ಎಂಬ ಮುಕ್ತ ಧೋರಣೆ ನನ್ನದು.

ಕಲೆ ಬೆಳೆದು ಬಂದದ್ದೇ ಪ್ರತಿಮಾ ವಿಧಾನದಲ್ಲಿ. ನಾನು ಇತ್ತೀಚೆಗೆಲ್ಲ ಯಕ್ಷಗಾನ, ಇತರ ಕಲೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ನನ್ನ ಅರಿವು- ಬರಹದ ಮಿತಿಯಲ್ಲಿ ಓದಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಶಿವರಾಮ ಕಾರಂತರ ‘ಯಕ್ಷಗಾನ’ ಎಂಬ ಕೃತಿಯನ್ನೂ ಅಷ್ಟಿಷ್ಟು ಓದಿದ್ದೇನೆ. ಅಭಿನವಗುಪ್ತನ ನಾಟ್ಯಶಾಸ್ತ್ರ ಭಾಷ್ಯ, ನಂದಿಕೇಶ್ವರನ ಅಭಿನಯ ದರ್ಪಣ ಗ್ರಂಥಗಳನ್ನೂ ಆಗಾಗ ತೆರೆಯುತ್ತೇನೆ. ಗುಪ್ತರ ಕಾಲದಿಂದಲೋ ಅಥವಾ ಇತಿಹಾಸ ಪೂರ್ವದ ಯಾವುದೋ ಕಾಲದಿಂದಲೋ, ಕಲೆಗಳು ಎಂಬುದು ಸಾಂಕೇತಿಕತೆಗಳ ಮೂಲಕ ಕಲಾರಸಿಕರ ಮನಸ್ಸನ್ನು ಅರಳಿಸುತ್ತ ಬಂದಿವೆ. ಚಿತ್ರ, ನೃತ್ಯ, ಸಂಗತ, ಶಿಲ್ಪದಂಥ ಎಲ್ಲ ಕಲೆಗಳಿಗೆ ಈ ಮಾತು ಅನ್ವಯಿಸುತ್ತವೆ. ಅರಳಿದ ತಾವರೆಯನ್ನು ಚಿತ್ರಿಸಿದರೆ ಸಾಕು, ಅದು ಸೂರ್ಯೋದಯದ ಸೌಂದರ್ಯವನ್ನು ನಮ್ಮೆದುರು ಕಾಣಿಸುತ್ತದೆ.

ಮುಗಿಲಿನ ಆಕಾಶವೆಂದರೆ ವರ್ಷಕಾಲದ ಆರಂಭವಾದುದರ ಸೂಚನೆ. ಯಕ್ಷಗಾನದಲ್ಲಿಯೂ ಇಂಥ ಎಷ್ಟೊಂದು ಸುಂದರ ಸಂಕೇತಗಳಿವೆ! ಯಕ್ಷಗಾನದ ಭಾಗವತರು ಮೋಹನ ರಾಗ ಹಾಡಿದ ಕೂಡಲೇ ಕಥಾನಕ ಮುಗಿಯುತ್ತಿರುವ ಸೂಚನೆ ಸಿಗುತ್ತದೆ. ಹಾಗಾಗಿಯೇ ಅದು ಬೆಳಗಿನ ಜಾವದ ರಾಗವಾಗಿ ರೂಢಿಯಾಗಿದೆ. ಸ್ಥಳೀಯರ ದೈನಿಕದಲ್ಲಿ ರೂಢಿಯಾಗಿರುವ ಸಂಜ್ಞೆಗಳೇ ಯಕ್ಷಗಾನದಲ್ಲಿ ಕಲಾತ್ಮಕ ಹಸ್ತಮುದ್ರೆಗಳೆನ್ನಿಸಿವೆ. ನಾಟ್ಯಶಾಸ್ತ್ರಕ್ಕೆ ಸಮಾನಾಂತರವಾಗಿ ಯಕ್ಷಗಾನದ ಮುದ್ರೆಗಳಿಗೂ ಸ್ಥಳೀಯವಾದ ಹೆಸರುಗಳೊಂದಿಗೆ ಪ್ರತ್ಯೇಕವಾಗಿ ಕಾಣಿಸುವ ಪ್ರಯತ್ನವನ್ನು ಸದ್ಯ ಮಾಡುತ್ತಿದ್ದೇನೆ. ಯಕ್ಷಗಾನದ ಬಗ್ಗೆ ಇಷ್ಟೆಲ್ಲ ಯೋಚಿಸಲು ಕಾರಣವಾದದ್ದೇ ಶಿವರಾಮ ಕಾರಂತರ ಗುರುತ್ವದ ಕೆಳಗೆ ಬೆಳೆಯುವ ಅವಕಾಶ ಸಿಕ್ಕಿದುದರಿಂದ. ಶಿವರಾಮ ಕಾರಂತರ ವ್ಯಕ್ತಿತ್ವವಾದರೋ ವಟವೃಕ್ಷದಂತೆ ಹಬ್ಬಿರುವಂಥಾದ್ದು. ಅವರ ಸಮಕ್ಷ ಇರುವವರೆಗೂ ಆ ಪ್ರಭಾವದಿಂದ ಹೊರತಾಗಿ ನನ್ನದೇ ಪ್ರತಿಭೆಯನ್ನು ಪಲ್ಲವಿಸಬೇಕೆಂದು ನನಗನ್ನಿಸಿರಲೇ ಇಲ್ಲ. ಭೂಲೋಕದ ಕುಣಿತ ಸಾಕು ಎಂದು ಮಾಯವಾದ ಕಿನ್ನರನಂತೆ, ಕಾರಂತರು ಎಂದಿಗೆ ಅಂತರ್ಧಾನರಾದರೋ ಅದಾಗಿ ಕೆಲವೇ ದಿನಗಳಲ್ಲಿ ನಾನು ನನ್ನದೇ ಆದ ಹಾದಿಯಲ್ಲಿ ಹೆಜ್ಜೆಗಳನ್ನು ಮೂಡಿಸಬೇಕಾದ ಅನಿವಾರ್ಯ ಸ್ಥಿತಿ ಒದಗಿತು.

“ನನ್ನ ನಂತರ ಸಂಜೀವ ಮುಂದುವರಿಸುತ್ತಾನೆ” ಎಂದು ಯಾರೊಡನೆಯೋ ಹೇಳಿದ್ದರಂತೆ ಕಾರಂತರು.

..........................................................

“ನನ್ನಿಂದ ಇದು ಸಾಧ್ಯವಾದೀತೆ?” ಎಂಬ ಸಂದೇಹದಲ್ಲಿ ನಾನಿದ್ದೆ. ಕಾರಂತರು ಭೌತಿಕವಾಗಿ ಇಲ್ಲವಾಗಿ ಕೆಲವು ಸಮಯ ಕಳೆದಾಗ ‘ಯಕ್ಷರಂಗದ ಗುರುತ್ವದ’ ಹೊಣೆ ನನ್ನ ಮೇಲೆ ಬರುತ್ತದೆಂದಾಗ ಇದು ಸಾಧಾರಣದ ಹೊಣೆಯಲ್ಲ ಅಂತ ನನಗೆ ಅನ್ನಿಸಿತ್ತು. ಆಗ ನನ್ನಲ್ಲಿ ಧೈರ್ಯ ತುಂಬಿದವರು ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ಹೆರಂಜೆ ಕೃಷ್ಣ ಭಟ್ಟರು. ೧೯೯೭ರ ಆ ದಿನ ಅವರಿತ್ತ ಬೆಂಬಲ ಇವತ್ತಿನವರೆಗೂ ಮುಂದುವರಿದು ನನ್ನನ್ನು ದೃಢವಾಗಿ ನಿಲ್ಲಿಸಿದೆ.

ಶಿವರಾಮ ಕಾರಂತರಿರುವಾಗಲೇ ಜರ್ಮನಿಯ ಪ್ರವಾಸವೊಂದು ನಿಗದಿಯಾಗಿತ್ತು. ಆದರೆ, ನಮ್ಮ ತಂಡ ಜರ್ಮನಿಗೆ ತೆರಳುವ ಮೊದಲೇ ಅವರನ್ನು ಅಗಲಬೇಕಾಯಿತು. ಆದರೂ ಅವರ ಸ್ಮರಣೆಯೇ ಶಕ್ತಿಯಾಗಿ ಜರ್ಮನಿಯಲ್ಲಿ ಪ್ರದರ್ಶನ ಕೊಟ್ಟು ಬಂದೆವು. ಮರಳುವಾಗ ಶಿವರಾಮ ಕಾರಂತರಿಲ್ಲ ಎಂಬ ನೋವು ಗಾಢವಾಗಿ ಕಾಡಿತೋ, ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ಒತ್ತಡವೋ, ಅಂತೂ ಏನೋ ಒಂದು ಆಗಿ ರಕ್ತದೊತ್ತಡದ ಸಮಸ್ಯೆಯಿಂದ ಮುಂಬಯಿ ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದಿದ್ದೆ. ನಾಲ್ಕೈದು ಗಂಟೆಗಳ ಬಳಿಕ ಪ್ರಜ್ಞೆ ಬಂದಾಗ ನಾನು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಆಸ್ಪತ್ರೆಯ ಮಂಚದಲ್ಲಿ ಮಲಗಿರುವುದು ತಿಳಿಯಿತು.

ಸಹಕಲಾವಿದರಾದ ಎಳ್ಳಂಪಳ್ಳಿ ವಿಠಲಾಚಾರರು ನನ್ನ ಆರೈಕೆಗಾಗಿ ಊರಿಗೆ ಮರಳದೆ ಉಳಿದಿದ್ದರು. ಪ್ರೊಫೆಸರ್ ಕೃಷ್ಣ ಭಟ್ಟರು ಎಲ್ಲ ವ್ಯವಸ್ಥೆ ಮಾಡಿ, ನಮಗಾಗಿ ಮರುದಿನದ ವಿಮಾನದ ಟಿಕೆಟನ್ನೂ ನಿಗದಿಗೊಳಿಸಿ ಉಳಿದ ಕಲಾವಿದರೊಂದಿಗೆ ಊರಿಗೆ ಮರಳಿದ್ದರು.

ಶಿವರಾಮ ಕಾರಂತರ ನೆನಪನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ನನ್ನದೇ ಸೃಜನಶೀಲ ಚಿಂತನೆಯಲ್ಲಿ ಬೇರೆ ಪ್ರಯೋಗಗಳನ್ನು ಮಾಡಲು ಆರಂಭಿಸಿದೆ. ವೇಷಭೂಷಣಗಳನ್ನು ಮತ್ತೆ ಸಂಪ್ರದಾಯಕ್ಕೆ ಮರಳಿಸಿದೆ. ಮುಖವಾಡಗಳ ಬದಲಿಗೆ ಮುಖವರ್ಣಿಕೆಗಳನ್ನು ಚಿತ್ರಿಸಿದೆ. ಕಾರಂತರಂತೆ ಶಿಸ್ತನ್ನು ಅಳವಡಿಸುವುದು ತುಸು ಸವಾಲಿನದ್ದಾದರೂ ನನ್ನ ಅಂತರಂಗವನ್ನು ಬಲ್ಲ ಕಲಾವಿದರು, ನನ್ನಿಂದಲೇ ಯಕ್ಷಗಾನ ಕಲಿತ ಶಿಷ್ಯರಿಂದಾಗಿ ಇದು ಸಾಧ್ಯವಾಗತೊಡಗಿತ್ತು.

ಹಲವು ಗಂಟೆಗಳ ಕಾಲ ಒಡ್ಡೋಲಗ ನೃತ್ಯ, ಯುದ್ಧ ನೃತ್ಯಗಳಂಥ ವೈವಿಧ್ಯಗಳನ್ನು ನನ್ನ ಶಿಷ್ಯರೆಲ್ಲರಿಗೂ ಹೇಳಿಕೊಟ್ಟಿದ್ದೇನೆ. ಅವರೆಲ್ಲ ಅಭಿವ್ಯಕ್ತಿಯ ಸಾಧ್ಯತೆಯಲ್ಲಿ ನನ್ನಷ್ಟೇ ಸಮರ್ಥರಾಗಿರುವುದು ನನಗೆ ಹೆಮ್ಮೆಯ ವಿಷಯವೇ. ನಾವೆಲ್ಲ ಅನೇಕ ಪ್ರಾತ್ಯಕ್ಷಿಕೆಗಳಲ್ಲಿ ಬಡಗುತಿಟ್ಟಿನ ಕಲಾಸಿರಿವಂತಿಕೆಯನ್ನು ತೆರೆದಿಟ್ಟಿದ್ದೇವೆ. ಆದರೂ, ಇತ್ತೀಚೆಗೆ ನಾಟಕಸಂಸ್ಥೆಯ ವಿದ್ಯಾರ್ಥಿಗಳಿಗೆ, ಶಾಲಾಮಕ್ಕಳಿಗೆ ಯಕ್ಷಗಾನ ಪ್ರಸಂಗಗಳ ತರಬೇತಿಯನ್ನು ಕೊಡುವಾಗಲೆಲ್ಲ ಈ ಸಾಂಪ್ರದಾಯಿಕ ಕಲೆಯನ್ನು ‘ಸಮಕಾಲೀನ’ ಸಂದರ್ಭಕ್ಕೆ ಹೇಗೆ ಅಳವಡಿಸಬಹುದೆಂಬ ವಿಚಾರ ನನ್ನನ್ನು ಕಾಡುತ್ತಿತ್ತು. ಬಿ.ವಿ. ಕಾರಂತರಂತೂ ಮ್ಯಾಕ್‌ಬೆತ್ ನಾಟಕದಲ್ಲಿ ಯಕ್ಷಗಾನವನ್ನು ಬಳಸಿ ದೇಶಾದ್ಯಂತದ ರಂಗಕಲಾವಿದರ ಗಮನವನ್ನು ಕರಾವಳಿಯ ಕಲೆಯತ್ತ ಸೆಳೆದರು. ನಾಡಿನ ಅನೇಕ ರಂಗಕರ್ಮಿಗಳೊಂದಿಗೆ, ವಿದೇಶದ ಕೊರಿಯೋಗ್ರಾಫರ್‌ಗಳ ಜೊತೆಗಿದ್ದ ದಿನಗಳ ಅನುಭವವನ್ನು ನೆನಪಿಸಿಕೊಳ್ಳುತ್ತ ನನ್ನ ಮನಸ್ಸು ಸಂಪ್ರದಾಯ- ಸಮಕಾಲೀನತೆಗಳ ನಡುವೆ ನಿರಂತರ ಓಲಾಡುತ್ತಿತ್ತು. ದೆಹಲಿ ಎನ್‌ಎಸ್‌ಡಿಯ ವಿದ್ಯಾರ್ಥಿಗಳಿಗೆ ಹೆಜ್ಜೆ ಕಲಿಸುವಾಗಲೂ ಇತ್ತೀಚೆಗೆ ಸಾಣೇಹಳ್ಳಿಯ ‘ಶಿವಸಂಚಾರ’ ನಾಟಕ ತಂಡದವರಿಗಾಗಿ ಯಕ್ಷಗಾನ ತರಬೇತಿ ಕೊಡುವಾಗಲೂ ಈ ಕಲೆಯನ್ನು ಹೊಸ ರಂಗಭೂಮಿಯಾಗಿ ರೂಪಿಸುವ ಯೋಚನೆ ತಲೆಯ ತುಂಬ ಓಡಾಡುತ್ತಿತ್ತು. ಮುಂದೊಮ್ಮೆ ಶಾಲಾಮಕ್ಕಳಿಗಾಗಿ ಅತ್ಯಂತ ಸರಳವೇಷಭೂಷಣ ಧರಿಸಿದ ಪಾತ್ರಗಳನ್ನಿಟ್ಟುಕೊಂಡು ಪ್ರದರ್ಶನವನ್ನು ಸಿದ್ಧಪಡಿಸಬೇಕೆಂದಿದ್ದೇನೆ. ಇಂಥ ಬದಲಾವಣೆಗಳೆಲ್ಲ ಆದರ್ಶಗಳಾಗಬೇಕೆಂಬ ಒತ್ತಾಸೆಯೇನೂ ಇಲ್ಲ. ಆದರೆ, ಯಕ್ಷಗಾನದ ಘನತೆಗೆ ಚ್ಯುತಿ ಬಾರದ ಪ್ರಯೋಗ- ಪ್ರಯತ್ನಗಳಿಗೆ ನನ್ನ ಬುದ್ಧಿಯ ಬಾಗಿಲು ಮುಚ್ಚಿಕೊಂಡಿಲ್ಲ.

ಏನು ಬದಲಾವಣೆಯಾದರೂ ತಾಳ- ಹೆಜ್ಜೆಗಳಲ್ಲೇನೂ ಬದಲಾವಣೆಯಿಲ್ಲವಷ್ಟೆ! ನಾಟಕವೊಂದರಲ್ಲಿ ‘ಥೈ ಥೈ’ ಎನ್ನುತ್ತ ಶಿಸ್ತುಬದ್ಧ ಹೆಜ್ಜೆಗಳಲ್ಲಿ ಪ್ರವೇಶ ಕುಣಿದರೂ ಅದರಲ್ಲಿ ಯಕ್ಷಗಾನದ ಗಾಂಭೀರ್ಯ ಬಂದು ಬಿಡುತ್ತದೆ. ಕೇರಳದ ನಾಟಕಗಳಲ್ಲಿ ‘ಕೂಡಿಯಾಟ್ಟಂ’ನ ಗಾಂಭೀರ್ಯವಿದೆಯಲ್ಲ, ಹಾಗೆ. ಅಂದ ಹಾಗೆ, ಯಕ್ಷಗಾನದಲ್ಲಿ ಪ್ರವೇಶವನ್ನು ಕಾಣಿಸುವ ಕುಣಿತವಿದೆ. ನಿರ್ಗಮನವನ್ನೂ ಸೂಚಿಸುವ ಕುಣಿತವಿದೆಯೆ?
..................................................................

ಇಂಥ ಪ್ರಶ್ನೆ ಮೊದಲಬಾರಿಗೆ ನನಗೆ ಎದುರಾದದ್ದು ಪ್ರಾತ್ಯಕ್ಷಿಕೆಯೊಂದರಲ್ಲಿ.

‘ಇದೆ’ ಎಂದೆ ನಾನು. ‘ಮಾಡಿ ತೋರಿಸಿ’ ಎಂದರು. ಬಲಗೋಪಾಲರಿಂದ ತೊಡಗಿ ಮುಖ್ಯವೇಷಗಳವರೆಗೆ ಪ್ರಯಾಣ ಕುಣಿತದ ಜೊತೆಗೆ ಬೆಸೆದುಕೊಂಡ ‘ನಿರ್ಗಮನ ನಾಟ್ಯ’ವನ್ನು ಪ್ರತ್ಯೇಕವಾಗಿ ಮಾಡಿ ತೋರಿಸಿದೆ. ‘ಚಕ್ರವ್ಯೂಹ’ ಪ್ರಸಂಗದಲ್ಲಿ ಅಭಿಮನ್ಯು ಪಾತ್ರಕ್ಕೆ ಇಬ್ಬರಿದ್ದರೆ ಮೊದಲ ಅಭಿಮನ್ಯು ನಿರ್ಗಮಿಸುವಾಗ ಅದಕ್ಕೊಂದು ಸಂಜ್ಞಾಕುಣಿತವಿದೆ. ಇಂದಿನ ದಿನಗಳಲ್ಲಿ ತ್ವರಿತಗತಿಯ ತಾಳದಿಂದಾಗಿ ಮುಕ್ತಾಯದ ಹೆಜ್ಜೆಗಳು ಕಣ್ಮರೆಯಾಗುತ್ತಿರುವಂತೆಯೇ ನಿರ್ಗಮನ ನೃತ್ಯ ವೈವಿಧ್ಯಗಳು ಕೂಡ ಲುಪ್ತವಾಗುತ್ತಿವೆ.

ನಾನು ಭಾಗವಹಿಸಿದ ಯಕ್ಷಗಾನ ಪ್ರಾತ್ಯಕ್ಷಿಕೆಗಳೆಷ್ಟಾಗಬಹುದು! ಹಲವು ಗುರುಗಳ ಗರಡಿಯಲ್ಲಿ ಇದ್ದು ಬಂದುದರಿಂದ ನಾಟ್ಯಾಭಿನಯದ ಕುರಿತು ನನ್ನದು ಖಚಿತ ಗ್ರಹಿಕೆ ಎಂಬ ಆತ್ಮವಿಶ್ವಾಸವನ್ನು ಹೊಂದಿರುತ್ತಿದ್ದೆ. ಚಾಲು, ಮುಕ್ತಾಯಗಳಂಥ ಕುಣಿತಗಳಲ್ಲಿ ‘ತೇಲು ನಾಟ್ಯ’ವೇ ರೂಢಿಯಾಗಿ ಅದೇ ಪ್ರಾತ್ಯಕ್ಷಿಕೆಗಳಲ್ಲಿಯೂ ಅಭಿವ್ಯಕ್ತಗೊಂಡಾಗ, ‘ಸರಿಯಲ್ಲ’ ಎಂದು ಹೇಳಲು ಎದ್ದು ನಿಲ್ಲುತ್ತಿದ್ದೆ. ಯಾವುದನ್ನೇ ಆಗಲಿ, ಮಾತಿನಲ್ಲಿ ಹೇಳುವ ಕೌಶಲ ನನ್ನಲ್ಲಿಲ್ಲ. ಆದರೆ, ರಂಗಕ್ಕೇರಿದರೆ ಮಾತ್ರ ನನ್ನ ಕಣ್ಣು- ಕೈ-ಕಾಲು- ದೇಹದ ಮೂಲಕ ಮಾತಿಗೂ ಮಿಗಿಲಾದುದನ್ನು ಅಭಿವ್ಯಕ್ತಿಸಬಲ್ಲೆ ಎಂಬ ಧೈರ್ಯ ಉಂಟಾಗುತ್ತಿತ್ತು. ಹಿರಿಯ ಕಲಾವಿದರ ನಡುವೆಯೂ ಅನ್ನಿಸಿದ್ದನ್ನು ನೇರವಾಗಿ ಹೇಳಿಬಿಡುವ ನನ್ನ ಒರಟುಸ್ವಭಾವದಿಂದಾಗಿ  ಹಲವೆಡೆ ನಿಷ್ಠುರನಾದದ್ದೂ ಇದೆ. ಹಾಗೆಂದು, ಪ್ರಾತ್ಯಕ್ಷಿಕೆಗಳಲ್ಲಿ ನನ್ನನ್ನು ಬಹಳ ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ್ದ ಸಂತಜೀವಿ ಹೊಸ್ತೋಟ ಮಂಜುನಾಥ ಭಾಗವತರಂಥ ಹೃದಯವಂತರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಒಮ್ಮೆ ದೂರದ ಊರಿನಲ್ಲೊಂದು ಯಕ್ಷಗಾನ ಪ್ರಾತ್ಯಕ್ಷಿಕೆ. ಘಟಾನುಘಟಿಗಳೆಲ್ಲ ಅಲ್ಲಿಗೆ ಬರುವವರಿದ್ದರು. ನಾನು ಆ ಊರಿನ ಬಸ್ಸು ಹತ್ತಿ ಕುಳಿತೆ. ಬಸ್ಸಿನಲ್ಲಿದ್ದವರು ಕೆಲವೇ ಕೆಲವು ಮಂದಿ. ಅದರಲ್ಲಿಯೂ ಕೆಲವರು ಪ್ರಾತ್ಯಕ್ಷಿಕೆ ನೋಡಲೆಂದೇ ಹೊರಟವರು. ಅವರು ಮಾತನಾಡಿಕೊಳ್ಳುತ್ತಿದ್ದುದು ನನಗೆ ಕೇಳಿಸುತ್ತಿತ್ತು.

‘ಇವತ್ತು ಉಡುಪಿ ಕಡೆಯಿಂದ ಒಬ್ಬರು ಬರುತ್ತಿದ್ದಾರೆ. ಯಕ್ಷಗಾನದ ಬಗ್ಗೆ ತುಂಬ ತಿಳ್ಕೊಂಡವರು. ಇವತ್ತಿನ ಕಾರ್ಯಕ್ರಮದಲ್ಲಿ ಏನು ಮಾಡ್ತಾರೋ ನೋಡಬೇಕು”.

“ಯಾರವರು?”
“ಸಂಜೀವ ಸುವರ್ಣ ಅಂತ”.
ನಾನು ಕುಳಿತಲ್ಲಿಂದಲೇ ಒಮ್ಮೆ ಹಿಂತಿರುಗಿ ನೋಡಿದೆ.

..............................................................

‘ಸುವರ್ಣ’ ಎಂದಾಗಲೆಲ್ಲ ನನಗೆ ಶಿವರಾಮ ಕಾರಂತರ ನೆನಪೇ ಬರುತ್ತದೆ. ಕುಲಸೂಚಕ ಉಪನಾಮವನ್ನು ತೆಗೆದು ನನ್ನ ಹೆಸರಿನೊಂದಿಗೆ ‘ಸುವರ್ಣ’ವನ್ನು ಇರಿಸಿದವರು ಅವರೇ.
೧೯೮೭ರ ಆಸುಪಾಸಿನ ದಿನಗಳಿರಬಹುದು.

“ಸುವರ್ಣ ಅಂದರೆ ಏನರ್ಥ? ಗೊತ್ತುಂಟೋ ನಿನಗೆ?” ಎಂದು ಕಾರಂತರು ಕೇಳಿದಾಗ ನಾನು ಮೇಲೆಕೆಳಗೆ ನೋಡಿದೆ. ಕೆಲವು ಸಂಗತಿ ಗೊತ್ತಿದ್ದರೂ ಅವರೆದುರಿಗೆ ಹೇಳಲು ಭಯವಾಗುತ್ತದೆ.

“ಚಿನ್ನ” ಎಂದರು.

ನನ್ನ ಹೆಸರಿನೊಂದಿಗೆ ಆ ಪದವನ್ನು ಅವರು ಸೇರಿಸಿದ್ದಷ್ಟೇ ಅಲ್ಲ, ಪುಟಕ್ಕಿಟ್ಟು ಹೊಳೆಯಿಸಿದರು ಕೂಡ.

(ಸಶೇಷ)
ನಿರೂಪಣೆ: ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT