ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದಲ್ಲಿ ಮಿಂದೆದ್ದವರು!

ಅಕ್ಷರ ಗಾತ್ರ

ಗೊತ್ತಿರಲಿಲ್ಲ ಉಚಿತ ಲ್ಯಾಪ್‌ಟಾಪ್ ಯೋಜನೆ
ಬೆಚ್ಚಿಬಿದ್ದರು ಕಿಮ್ಮನೆ
ಅಯ್ಯ ಅವರು ಷಾಕ್ ಕೊಡ್ತಾರೆ ಹಾಗೇ ಸುಮ್ಮನೆ
ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಘನತೆವೆತ್ತ ರಾಜ್ಯ­ಪಾಲರ ಭಾಷಣದಲ್ಲಿ ಸಚಿವರಿಗೇ ಗೊತ್ತಿಲ್ಲ­ದಂತೆ ಅವರ ಖಾತೆಯ ಯೋಜನೆ ಪ್ರಕಟವಾಗುತ್ತಿದ್ದಂತೆಯೇ ಕೂತ ಸೀಟಿನಲ್ಲೇ ಸಚಿವ ಕಿಮ್ಮನೆ, ಸುಮ್ಮನೆ ಬೆಚ್ಚಿಬಿದ್ದುದನ್ನು ಕಂಡ ಪೆಕರ ಸ್ಪಾಟ್‌ನಲ್ಲೇ ಒಂದು ಹನಿಗವನವನ್ನು ಹೊಸೆದು ಎಸೆದ.

‘ಓಹೋ, ಏನ್ ಪೆಕರ ಅವರೇ, ತಾವಿನ್ನೂ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದ ಗುಂಗಿನಲ್ಲೇ ಇರುವಂತಿದೆ. ಆಗಾಗ ಹನಿಗವನ ಉದುರುಸ್ತಾ ಇರ್‍ತೀರಾ. ವಿಧಾನಸಭೆ ಬಜೆಟ್ ಅಧಿವೇಶನ ಆರಂಭವಾಗಿದೆ. ಇನ್ನೇನು ಲೋಕಸಭಾ ಚುನಾವಣೆ ಡೇಟ್‌ಗಳೂ ಪ್ರಕಟವಾಗುವ ಕ್ಷಣಗಣನೆ ಆರಂಭವಾಗಿದೆ. ನೀವು ಸಾಹಿತ್ಯದ ಗುಂಗಿನಲ್ಲೇ ಇದ್ದರೆ ಹೇಗೆ? ನೋಡಿ, ಆಮ್ ಆದ್ಮಿಯವರು ಅಧಿಕಾರದಲ್ಲಿದ್ದರೂ ಬೀದಿಲಿ ಕುಳಿತು ಚಳವಳಿ ಗಿಳವಳಿ ಅಂತ ಹಳೇ ಸ್ಟಂಟ್‌ಗಳನ್ನೆಲ್ಲಾ ಪ್ರಯೋಗಿಸ್ತಾ ಇದಾರೆ. ನೀವೂ ಟ್ರ್ಯಾಕ್‌ಗೆ ಬನ್ನಿ’ ಎಂದು ಸ್ನೇಹಿತರು ಪೆಕರನನ್ನು ತಿವಿದರು.

ಪೆಕರ ಭಾವಜೀವಿ. ಅತ್ತ ಇತ್ತ ನೋಡಿದ. ಮತ್ತೊಂದು ಕವನವನ್ನು ಬತ್ತಳಿಕೆಯಿಂದ ಹೊರತೆಗೆದು ಬಿಟ್ಟ.
ಧಾರವಾಡದಿಂದ ಮಾ ಚಾಮರಾಜನಗರ ವರ
ಮಿರ್ಪ ನಾಡದಾ ಸಾಹಿತ್ಯ ಸಂಭ್ರಮದೊಳ್
ಧಾವಿಸಿ, ನೆರೆದು ಕಿಕ್ಕಿರಿದ ಕವಿಜನ
ಶೋತೃಗಳ್, ಕವಿಗಿವಿ ಗಿಂಪಿಕಂಪಿನೊಳ್...

ಪೆಕರ ಹಳಗನ್ನಡದಲ್ಲಿ ಶುರುವಿಟ್ಟುಕೊಂಡಂತೆಯೇ ಎಲ್ಲರೂ, ‘ಅಯ್ಯಯ್ಯೋ ಸಾಕು ಸ್ವಾಮಿ, ಕನ್ನಡದಲ್ಲಿ ನೀವು ಪುಂಗಿ ಊದಿದ್ದೇ ಅರ್ಥವಾಗಲ್ಲ. ಇನ್ನು ಹಳಗನ್ನಡದಲ್ಲಿ ಆಲಾಪಿಸಿದರೆ ನಾವೆಲ್ಲಿ ಹೋಗೋಣ?!’ ಎಂದು ಸ್ನೇಹಿತರೆಲ್ಲಾ ಎರಡೂ ಕೈಗಳಿಂದ ಕಿವಿಮುಚ್ಚಿಕೊಂಡರು.

‘ಕನ್ನಡವನ್ನು ರಕ್ಷಿಸುವ ಕಾಲ ಬಂದಿದೆ. ಕಂಗ್ಲಿಷ್ ಅಮರಿ­ಕೊಳ್ತಾ ಇರೋ ಕಾಲದಲ್ಲಿ ಹಳಗನ್ನಡವನ್ನು ರಕ್ಷಿಸಬೇಕು ಅಂತ ಹೊರಟಿರೋವರ ಸಾಹಿತ್ಯ ಪ್ರೇಮವನ್ನು ನಾವು ಮೆಚ್ಚಲೇ ಬೇಕಲ್ಲವೇ? ಕಸಾಪ, ವಿರಾಸತ್‌ನಲ್ಲಿ ಎಲ್ಲಿದೆ ಹಳ­ಗನ್ನಡ? ಆದ್ದರಿಂದ ನಾವು ಇನ್ನುಮುಂದೆ ಹಳಗನ್ನಡದ­ಲ್ಲಿ­ಯೇ ಮಾತನಾಡಬೇಕು ಎಂದು ಪೆಕರ ಠರಾವು ಮಂಡಿ­ಸಿದ. ‘ಇರಲಿ, ಇರಲಿ, ಹಾಗೇ ಮಾಡುವ ಕಾಲ ಬಂದೀತು. ಸಾಹಿತ್ಯ ಸಂಭ್ರಮದಲ್ಲಿ ಏನೇನು ನಡೀತು? ತಿಂಡಿತೀರ್ಥ ವಿಚಾರ ಬಿಟ್ಟು ಹೇಳು’ ಎಂದು ಸ್ನೇಹಿತರು ಮತ್ತಷ್ಟು ಕೆದಕಿದರು.

ಮಿಂಚಿನಂತೆ ಬಂದರು ಭೈರಪ್ಪ
ಸುಮ್‌ಸುಮ್ನೆ ಯಾರೂ ಬೈಬೇಡ್ರಪ್ಪ
ಪೆಕರ ತನ್ನ ಹನಿಗವನದ ಪಟ್ಟು ಸಡಿಲಿಸದೆ ವಿವರಿಸಿದ.

‘ನಮ್ಮ ಭೈರಪ್ಪ ಅವರನ್ನು ಬೈದರೆ, ಲಂಚಾವತಾರ ಹಿರಣ್ಣಯ್ಯ ಸುಮ್ಮನೆ ಬಿಡ್ತಾರೇನ್ರಿ? ಆದರೂ ಆಸ್ಥಾನ ಸಾಹಿತಿಗಳಾರೂ ಅಲ್ಲಿ ಕಾಣಿಸಲಿಲ್ಲವಲ್ಲ ಏಕೆ?’ ಎಂಬೆಲ್ಲಾ ಅನುಮಾನಗಳ ಮಳೆಯನ್ನೇ ಸುರಿಸಿದರು ಸ್ನೇಹಿತರು.

‘ಅಕಾಡೆಮಿಗಳಿಗೆ ತಿಂಗಳೊಳಗೆ ನೇಮಕ ಮಾಡ್ತೀನಿ ಅಂತ ಅಯ್ಯ ಅವರು ಹೇಳಿದ ಮೇಲೆ ಆಸ್ಥಾನ ಸಾಹಿತಿಗಳು ಕಾಲಹರಣ ಮಾಡೋಕ್ಕಾಗುತ್ತೇನ್ರಿ? ಅವರೆಲ್ಲಾ ವಿಧಾನಸೌಧದ ಸುತ್ತ ಠಳಾಯಿಸ್ತಾ ಇರ್‍ತಾರೆ. ಅವರಿಗೆ ಧಾರವಾಡದಲ್ಲೇನು ಕೆಲಸ? ಅದೂ ಧಾರವಾಡದಲ್ಲಿ ಸೃಜನಶೀಲರೂ, ಸೃಜನೇತರರೂ ಒಂದುಗೂಡಿ ಸಾಹಿತ್ಯದ ಸವಿ ಚಪ್ಪರಿಸಿದರು. ಧಾರವಾಡದಲ್ಲಿ ಒಂದು ಕಲ್ಲು ಎತ್ತಿ ಒಗೆದರೆ, ಅದು ಬೀಳೋದು ಸಾಹಿತಿಯ ಮನೆಯ ಮೇಲೆಯೇ ಅನ್ನೋ ಮಾತು ನಿಜ ನೋಡಪ್ಪ. ಅಲ್ಲೇನ್ ಕವಿಗಳ ಕೂಟವೆ ಕೂಟ’ ಎಂದು ಪೆಕರ ಸಂಭ್ರಮದಿಂದ ವಿವರಿಸಿದ.

‘ಹಂಗಂತ ಕಲ್ಲುಗಿಲ್ಲು ಹೊಡೆದೀಯ. ತಲೆ ಮೇಲೆ ಕಲ್ಲಿನಿಂದ ಹೊಡೆದ ಅಂತ ಈಗಿನ ಸಾಹಿತಿಗಳು ಪರಚಿ ಬಿಡ್ತಾರೆ, ಸಂಭ್ರಮದ ವರದಿ ನಾವೂ ಪೇಪರ್‌ನಲ್ಲಿ ಓದಿದೆವು. ಪಂಪನಿಂದ ಚಂಪಾವರೆಗೆ, ಹರಿಹರನಿಂದ ಪೆಕರನವರೆಗೆ ಎಲ್ಲರೂ ಸೇರಿದ್ದರು ಅನ್ನೋದೇ ಖುಷಿಯ ಸಮಾಚಾರ’ ಎಂದು ಸ್ನೇಹಿತರು ತಾರೀಫು ಮಾಡಿದರು.

ಮತ್ತೆ ಪೆಕರ ಚುಟುಕೊಂದನ್ನು ಗುನುಗಿದ.
ವಿವಾಹ ಭೋಜನಂಬು
ವಿಂತೈನ ವಂಟಕಂಬು
ವಿಯ್ಯಾಲವಾರಿ ವಿಂದು
ಓಹೋಹೋ ನಾಕೆ ಮುಂದು
‘ಏನಪ್ಪಾ ಪೆಕರ ಈ ರೀತಿಯೆಲ್ಲಾ ಬೈಯ್ಯಬೇಡ. ಹರಿಹರನಿಂದ ಪೆಕರನವರೆಗೆ ಸಾಹಿತಿಗಳ ಸಂಭ್ರಮ ಎಂದು ನಾವು ಹೇಳಿದ್ದು ತಮಾಷೆಗೆ. ಬೇಜಾರ್ ಮಾಡ್ಕೋಬೇಡ. ಆದರೆ ಈ ರೀತಿ ಗೊತ್ತಿಲ್ಲದ ಭಾಷೆಯಲ್ಲಿ ಬೈಯ್ಯೋದು ತರವಲ್ಲ’ ಎಂದು ಸ್ನೇಹಿತರು ಸಮಾಧಾನ ಮಾಡಲು ಮುಂದಾದರು!

‘ನೋಡಿದ್ರಾ ನಿಮಗೆ ಭಾಷೆ ಬಗ್ಗೆನೇ ಗೊತ್ತಿಲ್ಲ. ಸಾವಿರದಮುನ್ನೂರು ಭಾಷೆ ನಶಿಸಿಹೋಗ್ತಾ ಇದೆ ಅಂತ ರಿಪೋರ್ಟ್ ಇದೆ. ಭಾಷೆ ಉಳಿಸೋಕೆ ಇರೋ ರಕ್ಷಣಾ ವೇದಿಕೆ ಸದಸ್ಯರು ನಿತ್ಯಾನಂದ ಆಶ್ರಮದ ಸುತ್ತವೇ ಸುತ್ತುತ್ತಾ ಇದ್ದಾರೆ. ಅದೇ ಪದ್ಯಾನೇ ಈಗ ಡಬ್ಬಿಂಗ್ ಮಾಡ್ತೀನಿ ತಡೀರಿ’ ಎಂದು ಪೆಕರ ಅದನ್ನು ಕನ್ನಡಕ್ಕೆ ಡಬ್ ಮಾಡಿದ.

ವಿವಾಹ ಭೋಜನವಿದು
ವಿಚಿತ್ರ ಭಕ್ಷ್ಯಗಳಿವು
ಬೀಗರಿಗೆ ಔತಣವಿದು
ದೊರೆಕೊಂಡಿತೆನಗೆ ಬಂದು
‘ಓಹೋಹೋ ಅರ್ಥವಾಯ್ತು ಬಿಡಪ್ಪ. ಸಖತ್‌ಸಾಂಗು. ಮೂಲ ತೆಲುಗಿನಲ್ಲಿ ಕೇಳಿದ್ರೆ ಅರ್ಥವೇ ಆಗ್ಲಿಲ್ಲ. ಕನ್ನಡಕ್ಕೆ ಡಬ್ಬಿಂಗ್ ಆದ ಮೇಲೆ ಎಷ್ಟು ಮಜವಾಗಿ ಅರ್ಥವಾಗ್ತಾ ಇದೆ ನೋಡು. ಅದಕ್ಕೇನೆ ಡಬ್ಬಿಂಗ್ ಸಿನಿಮಾ ಬೇಕು ಎಂದು ಚಳವಳಿ ನಡೀತಾ ಇರೋದು’ ಎಂದು ಸ್ನೇಹಿತರು ಡಬ್ಬಿಂಗ್ ಪರ ವಾದ ಮಂಡಿಸಿದರು.

‘ಡಬ್ಬಿಂಗ್ ಪರ ಜೋರಾಗಿ ಮಾತಾಡಬೇಡ ಮಾರಾಯ. ‘ಗೋವಿಂದ’ ಆಗಿಬಿಡ್ತೀಯಾ’ ಎಂದು ಪೆಕರ ಎಚ್ಚರಿಕೆ ನೀಡಿದ.
‘ವಾಣಿಜ್ಯ ಮಂಡಳಿಯಲ್ಲಿ ಸೀಟೇ ಗೋವಿಂದ ಆಗೋದ್ರಲ್ಲಿದೆ. ಡಬ್ಬಿಂಗ್ ವಿರೋಧಿಸಿ ಯಜಮಾನಿಕೆ ಪ್ರದರ್ಶಿಸಿದ ಫಿಲಂ ಚೇಂಬರ್‌ಗೆ ಕೋಟಿ ರೂಪಾಯಿ ದಂಡ ವಿಧಿಸಿದೆಯಂತೆ ಕೋರ್ಟು?’ ಎಂದು ಸ್ನೇಹಿತರು ರಹಸ್ಯವೊಂದನ್ನು ಹೊರಹಾಕಿದರು.

‘ಅದಕ್ಕೆ ಹೆದರಿಯೇ ಅಲ್ಲವೇ ಚಿತ್ರರಂಗದ ಬಂದ್‌ನಲ್ಲಿ ನಾವಿಲ್ಲ ಅಂತ ಈಗ ಹೇಳ್ತಾ ಇರೋದು. ಹುಟ್ಟುವಾಗಲೇ ಕನ್ನಡ ಬಾವುಟ ಹಿಡಿದುಕೊಂಡು ಬಂದ ವಾಟಾಳು ಅರವತ್ತನೇ ಇಸವಿ ಡಬ್ಬಿಂಗ್ ವಿರೋಧಿ ಚಳವಳಿಯನ್ನು ಮರುಕಳಿಸುವಂತೆ ಮಾಡಬೇಕು ಎಂಬ ಆಸೆ ಇಟ್ಕೊಂಡಿದ್ದಾರೆ’ ಎಂದು ಪೆಕರ ಇರುವ ವಿಷಯವನ್ನು ವಿವರಿಸಿದ.

ಅಷ್ಟರಲ್ಲಿ ಸರ್ಕಾರಿ ನೌಕರರಿಗೆ ‘ಜ್ಯೋತಿ ಸಂಜೀವಿನಿ’ ಯೋಜನೆ ಜಾರಿಮಾಡಿದ ಸುದ್ದಿ ಬಯಲಾಯ್ತು. ಎಲ್ಲ ಪಕ್ಷದವರೂ ಕೈತಟ್ಟಿ ಬೆಂಬಲಿಸಿದರು.

‘ಚುನಾವಣಾ ಸಮಯದಲ್ಲಿ ಯೋಜನೆಗಳ ಮೇಲೆ ಯೋಜನೆಗಳನ್ನು ಪ್ರಕಟಿಸಿ ಮತದಾರರ ಮೂಗಿನ ಮುಂದೆ ಮೂಲಂಗಿ ಕಟ್ತಾ ಇದ್ದಾರೆ ನೋಡು’ ಎಂದು ಸ್ನೇಹಿತರು ಪೆಕರನಿಗೆ ಚುಚ್ಚಿದರು.

ಅಷ್ಟರಲ್ಲಿ ಮಾರಸ್ವಾಮಿಗಳು ಪ್ರತಿಪಕ್ಷ ನಾಯಕ ಸ್ಥಾನದಿಂದ ಪದಚ್ಯುತರಾಗಿ ದಡಬಡನೆ ಕಲಾಪದಿಂದ ನಿರ್ಗಮಿಸಿದರು. ‘ಏನಪ್ಪಾ ಇದು, ಅಂದು ಬೆಂಗಳೂರು ಗ್ರಾಮಾಂತರದಲ್ಲಿ ಅನಿತಕ್ಕನಿಗೆ ಭಾರೀ ಮುಖಭಂಗವಾಯ್ತು. ನಿನ್ನೆ ರೇಸ್‌ಕೋರ್ಸ್ ರಸ್ತೆಯಲ್ಲಿರೋ ದಳ ಕಚೇರಿಯೇ ಕೈ ಪಾಲಾಯಿತು. ಇಂದು ಪ್ರತಿಪಕ್ಷ ನಾಯಕ ಸ್ಥಾನವೇ ಕಿತ್ತುಕೊಂಡು ಹೋಯ್ತು. ಚುನಾವಣೆಗೆ ಮುನ್ನವೇ ಚಿತ್ರಾನ್ನ ಎಂದರೆ ಇದೇ ನೋಡು’ ಎಂದು ಪೆಕರ ಹೇಳುತ್ತಿದ್ದಂತೆಯೇ ಶೆಟ್ಟರ್‌ಭಟ್ಟರ್‌ಗಳೆಲ್ಲಾ ಹಾರತುರಾಯಿ ಹಾಕಿಕೊಂಡು ಸಂಭ್ರಮಿಸುತ್ತಾ ಬಂದರು.
ಅಂದು ಕೋಲಾಹಲ ಎಬ್ಬಿಸಿದ್ದು ರಪ್ಪ
ಲಾಭ ಆಗಿದ್ದು ನಮ್ ಶೆಟ್ಟರ್‌ಗಪ್ಪ
ಪೆಕರನ ಮತ್ತೊಂದು ಹನಿಗವನಕ್ಕೆ ಚಪ್ಪಾಳೆ ಬಿತ್ತು. ಎಲ್ಲರೂ ಟೀ ಕುಡಿಯಲು ಎದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT