ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯಮ ರೂಢಿಸಿಕೊಳ್ಳದ ಕೇಜ್ರಿವಾಲ್‌

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹಾದಿ ಬೀದಿ ರಂಪಾಟದಲ್ಲಿ ಪರಿಣತರಾಗಿರುವವರು ಆಮ್‌ ಆದ್ಮಿ ಪಾರ್ಟಿಯಲ್ಲಿ (ಎಎಪಿ) ಸಾಕಷ್ಟು ಸಂಖ್ಯೆಯಲ್ಲಿ ಇರುವುದರ ಬಗ್ಗೆ ಯಾರಿಗೂ ಅನುಮಾನವಿಲ್ಲ. 2014–15ರಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೇ ಎಎಪಿಯು 70 ಸ್ಥಾನಗಳ ಪೈಕಿ 67ರಲ್ಲಿ ಗೆದ್ದು ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ, ಗಮನ ಸೆಳೆದಿತ್ತು. ದೆಹಲಿಯ ಗದ್ದುಗೆ ಏರಿದ ದಿನದಿಂದಲೇ ಕೇಂದ್ರ ಸರ್ಕಾರವು ಅದರ ಜತೆ ಶೀತಲ ಸಮರ ಶುರುವಿಟ್ಟುಕೊಂಡಿರುವುದನ್ನು ಎಎಪಿ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ.

ಪೂರ್ಣ ಪ್ರಮಾಣ ರಾಜ್ಯದ ಸ್ಥಾನಮಾನ ಹೊಂದಿರದ ದೆಹಲಿಯಲ್ಲಿ ಸೀಮಿತ ಅಧಿಕಾರದ ಪ್ರಕಾರವೂ ಎಎಪಿ ಸರ್ಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುತ್ತಿಲ್ಲ. ಮೃದು ಮಾತಿನ, ಎಲ್ಲರೂ ಇಷ್ಟಪಡುವ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸದಲ್ಲಿ ಹಲ್ಲೆ ನಡೆದ ಘಟನೆ ಬಗ್ಗೆ ಅನೇಕರು ಈಗಲೂ ಅನುಮಾನ ಹೊಂದಿರುವ ಬಗ್ಗೆ ನಾನು ಖಚಿತವಾಗಿ ಏನನ್ನೂ ಹೇಳಲಾರೆ.

ಚುನಾಯಿತ ರಾಜ್ಯ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳ ನಡುವಣ ಸಂಘರ್ಷವಾಗಲಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಐಎಎಸ್‌, ಐಪಿಎಸ್‌ ಸೇರಿದಂತೆ ಸರ್ಕಾರಿ ಅಧಿಕಾರಿಗಳ ತೇಜೋವಧೆ ಮಾಡುತ್ತ ಬಂದಿರುವುದು ನಮ್ಮಲ್ಲಿ ಹೊಸದೇನಲ್ಲ. ತಮ್ಮ ಸುತ್ತ ಠಳಾಯಿಸುವ ಭಟ್ಟಂಗಿಗಳ ಮುಂದೆ ಅಧಿಕಾರಿಗಳನ್ನು ನಿಕೃಷ್ಟವಾಗಿ ಕಾಣುತ್ತ, ಠೇಂಕಾರದಿಂದ ಮೆರೆಯುವ ಮತ್ತು ಅದರಿಂದ ವಿಕೃತ ತೃಪ್ತಿ ಪಡುವ ಅನೇಕ ಜನಪ್ರತಿನಿಧಿಗಳು ನಮ್ಮಲ್ಲಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಾಯಾವತಿ ಅವರು ಅಧಿಕಾರಿಗಳನ್ನು ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುತ್ತಿದ್ದ ವೈಖರಿಗೆ ಬೇರೆ ಯಾರೊಬ್ಬರೂ ಸರಿಸಾಟಿಯಾಗಲಾರರು. ಅಧಿಕಾರಿಗಳ ವಿರುದ್ಧ ನಿರಂಕುಶ ಅಧಿಕಾರವನ್ನು ಚಲಾಯಿಸಿದ್ದಕ್ಕೆ ಅವರು ಹೆಮ್ಮೆಪಟ್ಟುಕೊಳ್ಳುತ್ತಿದ್ದರು. 2005ರಲ್ಲಿ ನಡೆದ ನನ್ನ ಜತೆಗಿನ ‘ವಾಕ್‌ ದ ಟಾಕ್‌’ ಸಂದರ್ಶನ ಕಾರ್ಯಕ್ರಮದಲ್ಲಿಯೂ ತಮ್ಮ ಈ ನಿಲುವಿನ ಬಗ್ಗೆ ಅವರು ಬಡಾಯಿ ಕೊಚ್ಚಿಕೊಂಡಿದ್ದರು.

ಹುಮಾಯೂನ್‌ ರಸ್ತೆಯಲ್ಲಿನ ನಿವಾಸದಲ್ಲಿ ಈ ಸಂದರ್ಶನ ನಡೆಯುವಾಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕಾನ್ಶಿರಾಂ ಅವರಿಗೆ ಮೊದಲ ಮಹಡಿಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ತಮ್ಮ ರಾಜಕೀಯ ಗುರು ಕಾನ್ಶಿರಾಂ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಮಾಯಾವತಿ ಅವರು ಐಎಎಸ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆಗ ಕಾನ್ಶಿರಾಂ ಅವರು ಮಾಯಾವತಿ ಅವರನ್ನು ಉದ್ದೇಶಿಸಿ, ‘ನೀನು ಕೇವಲ ಐಎಎಸ್‌ ಅಧಿಕಾರಿಯಾಗಲು ಹೊರಟಿದ್ದೀಯಾ. ನನ್ನ ಜತೆ ಬಂದರೆ, ಐಎಎಸ್‌ ಅಧಿಕಾರಿಗಳು ನಿನ್ನ ಸುತ್ತಲೂ ತಿರುಗುವಂತೆ ಮಾಡುವೆ’ ಎಂದು ಹೇಳಿದ್ದರಂತೆ.

ಕೊಟ್ಟ ಮಾತಿನಂತೆ ಕಾನ್ಶಿರಾಂ ಅವರು ಮಾಯಾವತಿ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಗದ್ದುಗೆಗೆ ಏರುವಂತೆ ಮಾಡುವಲ್ಲಿ ಸಫಲರಾಗಿದ್ದರು. 2007ರಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ‘ನನ್ನ ಹೆಸರು ಕೇಳಿದರೆ ಸಾಕು ಅಧಿಕಾರಿಗಳು ಥರ ಥರ ನಡುಗುತ್ತಾರೆ’ ಎಂದು ಮಾಯಾವತಿ ಅವರು ಜಂಬದಿಂದ ಹೇಳಿದ್ದಕ್ಕೆ ನಾನೂ ಸಾಕ್ಷಿಯಾಗಿದ್ದೆ.

ಅಧಿಕಾರಶಾಹಿಯು ತನ್ನ ಕಂಡರೆ ಅಥವಾ ಹೆಸರು ಕೇಳಿದರೆ ನಡುಗುವುದಕ್ಕೆ ಮಾಯಾವತಿ ಅವರು ಸಾಕಷ್ಟು ಕಾರಣಗಳನ್ನೂ ನೀಡುತ್ತಾರೆ. ಅಧಿಕಾರಿಗಳನ್ನು ಅಲ್ಲಿಂದಿಲ್ಲಿಗೆ ವರ್ಗಾವಣೆ ಮಾಡುವ, ಎತ್ತಂಗಡಿ ಮಾಡುವ ಮೂಲಕ ಅಧಿಕಾರಿಗಳಲ್ಲಿ ನಡುಕ ಮೂಡಿಸಿದ್ದರು. ಪದೇ ಪದೇ ವರ್ಗಾವಣೆಗೊಳ್ಳುವ ಕಾರಣಕ್ಕೆ ಅಧಿಕಾರಿಗಳು ವರ್ಗಾವಣೆ ಸ್ಥಳಕ್ಕೆ ತಮ್ಮ ಕುಟುಂಬವನ್ನು ಸ್ಥಳಾಂತರಿಸುವುದನ್ನೇ ಕೈಬಿಟ್ಟಿದ್ದರು. ಸರ್ಕ್ಯೂಟ್ ಹೌಸ್‌ಗಳಲ್ಲಿ ತಂಗುವುದನ್ನೇ ರೂಢಿ ಮಾಡಿಕೊಂಡಿದ್ದರು. ವರ್ಗಾವಣೆಗೊಂಡ ಸ್ಥಳದಲ್ಲಿ ಎಷ್ಟು ದಿನಗಳ ಕಾಲ ಇರಬೇಕಾಗುತ್ತದೆ ಎನ್ನುವುದೇ ಅನಿಶ್ಚಿತವಾಗಿದ್ದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುವ ಕಾರಣಕ್ಕೆ ಮನೆ ಬದಲಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಅಧಿಕಾರಿಗಳು ‘ಬೆಹೆನ್‌ಜೀ’ ಬಗ್ಗೆ ಹೆದರುವಷ್ಟೇ ಪ್ರಮಾಣದಲ್ಲಿ ಅವರನ್ನು ದ್ವೇಷಿಸುತ್ತಿದ್ದರು ಕೂಡ. ಇದೇ ಕಾರಣಕ್ಕೆ ಕೇಂದ್ರದ ಸೇವೆಗೆ ಹೋಗಲು ಅಥವಾ ಬೇರೊಂದು ಇಲಾಖೆಗೆ ವರ್ಗಾವಣೆಗೊಳ್ಳಲು ಹವಣಿಸುತ್ತಿದ್ದರು.

ನನಗೆ ಹೆಚ್ಚಾಗಿ ಗೊತ್ತಿರುವ ಒರಟು ರಾಜ್ಯಗಳಲ್ಲಿ ಒಂದಾಗಿರುವ ಹರಿಯಾಣದಲ್ಲಿ ಅದರಲ್ಲೂ ವಿಶೇಷವಾಗಿ ಬನ್ಸಿಲಾಲ್ ಮತ್ತು ಓಂ ಪ್ರಕಾಶ್‌ ಚೌಟಾಲಾ ಅವರ ಅಧಿಕಾರಾವಧಿಯಲ್ಲಿಯೂ ಇದೇ ಬಗೆಯ ಪರಿಸ್ಥಿತಿ ಇತ್ತು. ಪುನರಾವರ್ತನೆಗೊಳ್ಳುವ ವರ್ಗಾವಣೆ, ಭ್ರಷ್ಟಾಚಾರ ಪ್ರಕರಣಗಳು, ವಿಚಾರಣೆಗಳು, ಹಿಂದಿನ ಸರ್ಕಾರದಲ್ಲಿ ಅಧಿಕಾರಸ್ಥರಿಗೆ ಹತ್ತಿರವಾಗಿದ್ದವರಿಗೆ ಕಿರುಕುಳ ನೀಡುವುದು ಅಲ್ಲಿ ಸಾಮಾನ್ಯವಾಗಿತ್ತು. ನಿಜಕ್ಕೂ ಅದೊಂದು ಅಸಂಬದ್ಧ ವರ್ತನೆಯಾಗಿತ್ತು.

ನಾನು ಇಂತಹ ಹಲವಾರು ನಿದರ್ಶನಗಳನ್ನು ನೀಡಬಲ್ಲೆ. ನಿರ್ದಿಷ್ಟ ಪ್ರಕರಣಗಳನ್ನೂ ಉಲ್ಲೇಖಿಸಬಲ್ಲೆ. ಆದರೆ, ನಾಲ್ಕು ದಶಕಗಳ ನನ್ನ ಪತ್ರಿಕೋದ್ಯಮದ ಅನುಭವದಲ್ಲಿ, ಹಿರಿಯ ಅಧಿಕಾರಿ ಮೇಲೆ ಜನಪ್ರತಿನಿಧಿಗಳು ಖುದ್ದಾಗಿ ಹಲ್ಲೆ ಮಾಡಿದ ಘಟನೆ ನಡೆದಿರುವುದು ನನ್ನ ಸ್ಮೃತಿಪಟಲದಲ್ಲಿ ಇದುವರೆಗೂ ದಾಖಲಾಗಿಲ್ಲ. ಮುಖ್ಯಮಂತ್ರಿ ನಿವಾಸದಲ್ಲಿಯೇ ರಾಜ್ಯದ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ನಡೆದಿರುವುದು ಬಹುಶಃ ಇದೇ ಮೊದಲು ಇರಬಹುದು.

ವೈದ್ಯಕೀಯ ವರದಿ, ವಿಡಿಯೊ ಸಾಕ್ಷ್ಯಗಳು ಅಂಶು ಪ್ರಕಾಶ್‌ ಮೇಲೆ ಹಲ್ಲೆ ನಡೆದಿರುವುದರ ಬಗ್ಗೆ ಸಂಶಯಕ್ಕೆ ಎಡೆ ಇಲ್ಲದಂತೆ ಸಾಬೀತುಪಡಿಸುತ್ತವೆ. ಹೀಗಾಗಿ ಹಲ್ಲೆ ಪ್ರಕರಣ ಚರ್ಚಾಸ್ಪದ ವಿಷಯವಾಗಿ ಉಳಿದಿಲ್ಲ. ಪ್ರಕಾಶ್‌ ಅವರ ಮೇಲೆ ಶಾಸಕರು ಮುಗಿಬಿದ್ದು ಕೈಮಾಡಿರುವುದನ್ನು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಸಹಾಯಕ ವಿ. ಕೆ. ಜೈನ್‌ ಅವರೂ ಸಂದೇಹಕ್ಕೆ ಎಡೆ ಇಲ್ಲದಂತೆ ಸ್ಪಷ್ಟಪಡಿಸಿದ್ದಾರೆ.

ಆದರೆ, ದಿನಗಳೆದಂತೆ ‘ಎಎಪಿ’ಯ ವಕ್ತಾರ ಮತ್ತು ಮುಖಂಡರು ತಮ್ಮ ನಿಲುವು ಬದಲಿಸಿ ಅಚ್ಚರಿ ಮೂಡಿಸಿದ್ದಾರೆ. ಅಂತಹ ಘಟನೆಯೇ ನಡೆದಿಲ್ಲ ಎಂದು ಈಗ ಅವರೆಲ್ಲ ವಾದಿಸುತ್ತಿದ್ದಾರೆ. ಕೆನ್ನೆಗೆ ಎರಡು ಏಟು ಕೊಟ್ಟಿರುವುದಕ್ಕೆ ಪ್ರತಿಯಾಗಿ ತನಿಖೆ ನಡೆಸಲು ಮತ್ತು ಸಾಕ್ಷ್ಯ ಸಂಗ್ರಹಿಸಲು ಮುಖ್ಯಮಂತ್ರಿ ನಿವಾಸಕ್ಕೆ ಪೊಲೀಸ್‌ ಪಡೆ ಕಳಿಸಿಕೊಟ್ಟಿದ್ದಕ್ಕೆ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ನ್ಯಾಯಮೂರ್ತಿ ಲೋಯಾ ಅವರ ‘ಕೊಲೆ’ಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಪ್ರಶ್ನಿಸುತ್ತಿಲ್ಲ ಎಂದೂ ಟೀಕಿಸುತ್ತಿದ್ದಾರೆ.

ಇದೊಂದು ಹಳೆಯ ತಂತ್ರ. ಕಠಿಣ ಪ್ರಶ್ನೆ ಅಥವಾ ತೀವ್ರ ಮುಜುಗರಕ್ಕೆ ಎಡೆಮಾಡಿಕೊಡುವ ಬಿಕ್ಕಟ್ಟಿನ ಪರಿಸ್ಥಿತಿ ಎದುರಾದಾಗ ಅದರಿಂದ ಪಾರಾಗಲು ರಾಜಕಾರಣಿಗಳು ಇಲ್ಲದ ನೆಪಗಳ ಮೊರೆ ಹೋಗುತ್ತಾರೆ. ಮುಖ ಉಳಿಸಿಕೊಳ್ಳಲು ಪ್ರತಿ ಆಪಾದನೆ ಮಾಡುವುದು ಅಥವಾ ಬೇರೊಂದು ವಿಷಯ ಪ್ರಸ್ತಾಪಿಸುವ ಚಾಳಿಯನ್ನು ರಾಜಕಾರಣಿಗಳು ರೂಢಿಸಿಕೊಂಡು ಬಂದಿದ್ದಾರೆ. ನಾನಿಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಇಷ್ಟಪಡುವೆ. ಸರ್ಕಾರಿ ಸೇವೆಯಲ್ಲಿ ಇರುವ ವ್ಯಕ್ತಿಯೊಬ್ಬನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವುದಕ್ಕೆ ಪಶ್ಚಾತ್ತಾಪ ಪಡುವುದು ಬಿಡಿ, ಕನಿಷ್ಠ ಸಹಾನುಭೂತಿ ತೋರಿಸುವುದು ಅಥವಾ ಹಲ್ಲೆಗೆ ಒಳಗಾದವರ ಪರವಾಗಿ ಏಕತೆ ಪ್ರದರ್ಶಿಸುವ ನಾಗರಿಕ ಪ್ರಜ್ಞೆಯೂ ಇಲ್ಲದಿರುವ ಈ ಹಲ್ಲೆ ಪ್ರಕರಣ ಸಾಂವಿಧಾನಿಕ ಸೊಕ್ಕಿನ ಪ್ರತೀಕವಾಗಿದೆ.

ದೆಹಲಿಯಲ್ಲಿ ಅಧಿಕಾರದಲ್ಲಿ ಇರುವ ಎಎಪಿಯ ಅರವಿಂದ ಕೇಜ್ರಿವಾಲ್‌ ಮತ್ತು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಮೋದಿ ಅವರ ಬಿಜೆಪಿ ಮೂರು ವರ್ಷಗಳಿಂದ ನಿರಂತರವಾಗಿ ಪರಸ್ಪರ ರಾಜಕೀಯ ಸಂಘರ್ಷದಲ್ಲಿ ತೊಡಗಿವೆ. ಈ ಸಮರದಲ್ಲಿ ಕೇಂದ್ರವು ರಾಜ್ಯ ಸರ್ಕಾರದ ಮೇಲೆ ಹಲವಾರು ಬಗೆಯಲ್ಲಿ ಹೊಡೆತ ನೀಡಿರುವುದು ಸ್ಪಷ್ಟಗೊಳ್ಳುತ್ತದೆ. ರಾಜ್ಯ ಸರ್ಕಾರದ ಹಲವಾರು ನಿರ್ಧಾರಗಳು ಮತ್ತು ಕಡತಗಳ ಬಗ್ಗೆ ಲೆಫ್ಟಿನಂಟ್‌ ಗವರ್ನರ್‌ಗಳು ನಿರ್ಧಾರಕ್ಕೆ ಬರದೆ ವೃಥಾ ಕಾಲಹರಣ ಮಾಡಿಕೊಂಡು ಬರುತ್ತಿರುವುದು ಮುಂದುವರೆದುಕೊಂಡು ಬಂದಿದೆ.

ಚುನಾಯಿತ ಸರ್ಕಾರ ಕೈಗೊಳ್ಳುವ ಮತ್ತು ಇಷ್ಟಪಡುವ ಅಧಿಕಾರಿಗಳ ವರ್ಗಾವಣೆ ಆದೇಶಗಳನ್ನು ಸಕಾರಣಗಳಿಲ್ಲದೆ ನಿರಾಕರಿಸಲಾಗುತ್ತಿದೆ ಇಲ್ಲವೇ ಬದಲಾಯಿಸಲಾಗುತ್ತಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ದಾಳಿ ನಡೆಸಿ ಮುಖ್ಯಮಂತ್ರಿಯ ನಂಬಿಗಸ್ತ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್‌ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪ ಹೊರಿಸಿತ್ತು. ಆ ವಿಚಾರವಾಗಿ ಇದುವರೆಗೂ ಯಾವುದೇ ಮಹತ್ವದ ಬೆಳವಣಿಗೆ ನಡೆದಿಲ್ಲ. ಈ ಪ್ರಕರಣದಲ್ಲಿ ಉಲ್ಲೇಖವಾಗಿರುವ ಭ್ರಷ್ಟಾಚಾರದ ಮೊತ್ತ ಅತ್ಯಲ್ಪ ಪ್ರಮಾಣದಲ್ಲಿ ಇದೆ. ಭ್ರಷ್ಟಾಚಾರ ನಿಗ್ರಹ ಶಾಖೆಯ ಮೇಲಿನ ಎಎಪಿ ಸರ್ಕಾರದ ನಿಯಂತ್ರಣವನ್ನು ಕೇಂದ್ರವು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಎರಡು ಲಾಭದಾಯಕ ಹುದ್ದೆಗಳನ್ನು ಹೊಂದಿರುವ ಆರೋಪದ ಮೇಲೆ ಚುನಾವಣಾ ಆಯೋಗವು ಎಎಪಿಯ 20 ಮಂದಿ ಶಾಸಕರನ್ನು ಅನರ್ಹಗೊಳಿಸಿದೆ. ವಾರದೊಳಗೆ ಈ ಆದೇಶಕ್ಕೆ ರಾಷ್ಟ್ರಪತಿಗಳ ಅನುಮೋದನೆಯನ್ನೂ ಪಡೆದುಕೊಳ್ಳಲಾಗಿದೆ.

ಅಧಿಕಾರಶಾಹಿಯ ದಬ್ಬಾಳಿಕೆಯ ಮತ್ತು ನಿಯಮಾವಳಿ ಉಲ್ಲಂಘನೆಯ ಈ ಎಲ್ಲ ಘಟನೆಗಳು, ಕೇಂದ್ರ ಸರ್ಕಾರದಿಂದಲೇ ನಡೆದಿರುವುದನ್ನು ನಾವಿಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿದೆ. ಕೇಂದ್ರದ ಇಂತಹ ಪ್ರತೀಕಾರದ ಕ್ರಮಗಳ ವಿರುದ್ಧ ಎಎಪಿ ದೊಡ್ಡ ದನಿಯಲ್ಲಿ ಪ್ರತಿಭಟಿಸುತ್ತಲೇ ಬಂದಿದೆ. ಕೇಜ್ರಿವಾಲ್‌ ಅವರಂತೂ ಪ್ರಧಾನಿ ಮೋದಿ ಅವರನ್ನು ‘ಸುಳ್ಳುಗಾರ’ ಮತ್ತು ‘ವಿಕೃತ ಮನಸ್ಸಿನ ವ್ಯಕ್ತಿ’ ಎಂದೇ ಕಟುವಾಗಿ ಜರೆದಿದ್ದಾರೆ. ಎಎಪಿಯಲ್ಲಿ ಮಡುಗಟ್ಟಿದ್ದ ಆಕ್ರೋಶವು ಈಗ ಹಿರಿಯ ಅಧಿಕಾರಿ ಮೇಲಿನ ದೈಹಿಕ ಹಲ್ಲೆ ಸ್ವರೂಪದಲ್ಲಿ ಪ್ರಕಟಗೊಂಡಿದೆ.

ಅಸಾಮಾನ್ಯ ಘಟನೆ ಎಂದು ನಾವು ಪರಿಗಣಿಸುವ ಪ್ರತಿಯೊಂದು ವಿದ್ಯಮಾನವು ಕೂಡ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎನ್ನುವುದನ್ನೂ ನಾವು ಮರೆಯಬಾರದು. ಅಂಶು ಪ್ರಕಾಶ್‌ ಮೇಲಿನ ಹಲ್ಲೆ ಘಟನೆಯಲ್ಲಿನ ದಿಗಿಲುಗೊಳಿಸುವ ಸಂಗತಿ ಇದೇ ಆಗಿದೆ. ಎಎಪಿಯು ಹಾದಿಬೀದಿಯಲ್ಲಿ ಹೊಡೆದಾಟ ನಡೆಸುವವರ ಪಕ್ಷ ಎಂದು ನಾವೊಂದು ವೇಳೆ ಬಣ್ಣಿಸಬಹುದು. ಆದರೆ, ಎಎಪಿಯು ತನ್ನದೇ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ನಡೆಸುವ ಈ ಮಟ್ಟದ ರಾಜಕೀಯ ಹಿಂಸಾಚಾರವನ್ನು ಕಾನೂನುಬದ್ಧಗೊಳಿಸಲು ಮುಂದಾದರೆ ದೇಶಿ ರಾಜಕಾರಣಕ್ಕೆ ಅದೊಂದು ತಪ್ಪು ಸಂದೇಶ ನೀಡಿದಂತಾಗುತ್ತದೆ. ತೋಳುಬಲದ ಮೇಲೆಯೇ ನಂಬಿಕೆ ಇಟ್ಟಿರುವ ಇತರ ಹಲವಾರು ಬಲಿಷ್ಠ ರಾಜಕೀಯ ಮುಖಂಡರು ಇದನ್ನೇ ಅನುಸರಿಸಲು ಮುಂದಾಗಬಹುದು.
ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತ ಬಂದಿರುವ ಅಧಿಕಾರಿಯೊಬ್ಬರು, ಕೇಂದ್ರ ಸಚಿವರು ಇಲ್ಲವೇ ಮುಖ್ಯಮಂತ್ರಿ ನೀಡುವ ಆದೇಶವು ನ್ಯಾಯಸಮ್ಮತ ಇಲ್ಲ ಎಂಬ ನಿರ್ಣಯಕ್ಕೆ ಬರಬಹುದು. ಇದೇ ಕಾರಣಕ್ಕೆ ಅದನ್ನು ಪಾಲಿಸಲು ಹಿಂದೇಟು ಹಾಕಬಹುದು. ಆಗ ಅವರ ಮೇಲೆ ಜನಪ್ರತಿನಿಧಿಗಳು ಏಕಾಏಕಿಯಾಗಿ ಹಲ್ಲೆ ನಡೆಸಬಹುದಾದ ಸಂದರ್ಭ ಉದ್ಭವಿಸಬಹುದು. ಇಂತಹ ಘಟನೆ ಅಧಿಕಾರಿಯ ಕಚೇರಿಯಲ್ಲಿ ಇಲ್ಲವೆ ಸಚಿವರ ಮನೆಯಲ್ಲಿಯೂ ನಡೆಯಬಹುದು.

ಅಂಶು ಪ್ರಕಾಶ್‌ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ, ಎರಡೂವರೆ ಲಕ್ಷ ಜನರಿಗೆ ಪಡಿತರ ಧಾನ್ಯ ವಿತರಿಸಲು ಅಧಿಕಾರಿಗಳು ಅಥವಾ ಮುಖ್ಯಕಾರ್ಯದರ್ಶಿ ಹಿಂದೇಟು ಹಾಕಿರುವುದೇ ಮುಖ್ಯ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಕಾರಣಕ್ಕೆ ಜನಪ್ರತಿನಿಧಿಗಳು ಅಧಿಕಾರಿಯನ್ನು ಒಪ್ಪಿಸಲು ಅವರ ಮೇಲೆ ಮುಗಿಬಿದ್ದರು ಎಂದು ಹೇಳಲಾಗುತ್ತಿದೆ.

ರಾಜಕೀಯ ನಾಯಕತ್ವ ಮತ್ತು ನಾಗರಿಕ ಸೇವೆಗಳ ಮಧ್ಯೆ ಸೂಕ್ಷ್ಮ ಸಂಬಂಧ ಇರುತ್ತದೆ. ನಿಯಮಾವಳಿ, ತತ್ವಾದರ್ಶ ಮತ್ತು ವೈಯಕ್ತಿಕ ಕಾರಣಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಧ್ಯೆ ಭಿನ್ನಾಭಿಪ್ರಾಯಗಳು ಪದೇ ಪದೇ ತಲೆದೋರುತ್ತವೆ. ಉತ್ತಮ ನಾಯಕತ್ವ ಗುಣ ಹೊಂದಿದವರು ಇಂತಹ ಬಿಕ್ಕಟ್ಟುಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವ ಚಾಣಾಕ್ಷತೆ ಹೊಂದಿರುತ್ತಾರೆ. ರಾಜ್ಯವೊಂದರ ಮುಖ್ಯಸ್ಥ ಅದರಲ್ಲೂ ದೆಹಲಿಯಂತಹ ರಾಜ್ಯದಲ್ಲಿ ಸೀಮಿತ ಅಧಿಕಾರ ಹೊಂದಿರುವ ಮುಖ್ಯಮಂತ್ರಿಯು ಇಂತಹ ಭಿನ್ನಾಭಿಪ್ರಾಯಗಳನ್ನು ತುಂಬ ನಾಜೂಕಾಗಿ ನಿಭಾಯಿಸಬೇಕಾಗಿತ್ತು. ಘಟನೆಗಳು ವಿವಾದಾತ್ಮಕ ತಿರುವು ಪಡೆಯುವುದನ್ನು ತಡೆಯಬಹುದಿತ್ತು. ಸಾಧ್ಯವಿದ್ದರೆ ಪ್ರಕರಣವನ್ನು ಉನ್ನತ ಸಾಂವಿಧಾನಿಕ ಸಂಸ್ಥೆಗಳ ಗಮನಕ್ಕೆ ತರಬೇಕಾಗಿತ್ತು.
ಒಂದು ವೇಳೆ ಅಂತಹ ಪ್ರಯತ್ನವೂ ಕೈಕೊಟ್ಟಿದ್ದರೆ, ಈ ಬಗ್ಗೆ ಜನಾಭಿಪ್ರಾಯ ಮೂಡಿಸಬಹುದಿತ್ತು. ಮಾಧ್ಯಮಗಳ ಮೂಲಕ ಜನರ ಗಮನ ಸೆಳೆಯಬಹುದಿತ್ತು. ಈ ವಿಷಯದಲ್ಲಿ ಎಎಪಿ ಸಾಕಷ್ಟು ಪರಿಣತಿ ಹೊಂದಿದೆ. ಆದರೆ, ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿಯೇ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸುವುದು ಮತ್ತು ‘ಕೆನ್ನೆಗೆ ಕೇವಲ ಎರಡೇಟು ನೀಡಲಾಗಿದೆ’ ಎಂದು ಹೇಳಿಕೊಳ್ಳುವುದು ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದವರಿಗೆ ಖಂಡಿತವಾಗಿಯೂ ಶೋಭೆ ನೀಡದು.

ನನ್ನ ಕೃತಿ ‘2014 ಆ್ಯಂಟಿಸಿಪೆಟಿಂಗ್‌ ಇಂಡಿಯಾ’ದಲ್ಲಿ (ಹಾರ್ಪರ್‌ ಕಾಲಿನ್ಸ್‌) ನಾನು, ನರೇಂದ್ರ ಮೋದಿ, ರಾಹುಲ್‌ ಗಾಂಧಿ ಮತ್ತು ಕೇಜ್ರಿವಾಲ್‌ ಅವರು ನಮ್ಮ ಸದ್ಯದ ರಾಜಕಾರಣದಲ್ಲಿ ವಿಶಿಷ್ಟ ಗುಣಲಕ್ಷಣಗಳ ವ್ಯಕ್ತಿತ್ವ ಪ್ರತಿನಿಧಿಸುತ್ತಿದ್ದಾರೆ. ಈ ತ್ರಿಮೂರ್ತಿಗಳು ತಮ್ಮ ನಡವಳಿಕೆ, ಹೇಳಿಕೆ – ಪ್ರತಿ ಹೇಳಿಕೆಗಳಿಂದ ನಮ್ಮ (ಪತ್ರಕರ್ತರ) ಬದುಕಿನಲ್ಲಿ ಸಪ್ಪೆ ಕ್ಷಣಗಳೇ ಇಲ್ಲದಂತೆ ಮಾಡಲಿದ್ದಾರೆ ಎಂದು ಬರೆದಿರುವೆ. ಈ ಮೂವರೂ ಕ್ರಮೇಣ ಬದಲಾಗಲಿದ್ದಾರೆ. ಹೊಸ ವ್ಯಕ್ತಿತ್ವ ರೂಪಿಸಿಕೊಳ್ಳಲಿದ್ದಾರೆ ಎಂದೂ ನಾನು ಆಶಿಸಿದ್ದೆ.

ನರೇಂದ್ರ ಮೋದಿ ಅವರು ಮುಖ್ಯವಾಹಿನಿಯ ಸಂಯಮ ರೂಢಿಕೊಳ್ಳಲಿದ್ದಾರೆ, ರಾಹುಲ್‌ ಅವರು ಗಂಡಾಂತರ ತಪ್ಪಿಸಿಕೊಳ್ಳುವ ಮತ್ತು ಸಾರ್ವಜನಿಕ ಅಧೈರ್ಯದಿಂದ ಹೊರಬರಲಿದ್ದಾರೆ. ಮತ್ತು ಅಂತಿಮವಾಗಿ ಕೇಜ್ರಿವಾಲ್‌ ಅವರು ಶಾಂತ ಸ್ವಭಾವ ಅಳವಡಿಸಿಕೊಳ್ಳಲಿದ್ದಾರೆ ಎಂದು ನಾನು ಎಣಿಕೆ ಹಾಕಿದ್ದೆ. ಈ ಕೊನೆಯ ನಿರೀಕ್ಷೆಯ ಬಗೆಗಿನ ನನ್ನೆಲ್ಲ ಎಣಿಕೆಗಳು ಸುಳ್ಳು ಎನ್ನುವುದು ಈ ವಾರದ ಬೆಳವಣಿಗೆಗಳು ಸಾಬೀತುಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT