ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದನ ವಿಕೃತಿಗೆ ದೇಶದ ಸಮ್ಮತಿ

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ನಿಮ್ಮಲ್ಲಿ  ಕಣ್ಣೀರು ಎನ್ನುವುದು ಇದೆ ಎಂದಾದರೆ ಅದನ್ನು ಈಗ ಹರಿಸಿ’.  ಇದು ಷೇಕ್ಸ್‌ಪಿಯರ್‌ನ ‘ಜೂಲಿಯಸ್ ಸೀಸರ್’ ನಾಟಕದ ಮಾರ್ಕ್ ಆಂಟನಿ ಎನ್ನುವ ಪಾತ್ರ ಸೀಸರನ ಹತ್ಯೆಯ  ವಿರುದ್ಧ ಜನರನ್ನು ಎತ್ತಿಕಟ್ಟಲು ಆವೇಶಭರಿತವಾಗಿ ಹೇಳುವ ಮಾತು. ಇದೇ ಧಾಟಿಯಲ್ಲಿ ಹೇಳುವುದಾದರೆ ಭಾರತದ ನಾಗರಿಕರಿಗೆ ಸಾತ್ವಿಕ ಆಕ್ರೋಶ ಎನ್ನುವುದೇನಾದರೂ ಇದ್ದಿದ್ದರೆ ಅದು ಹೋದ ಗುರುವಾರ ಕಾಣಿಸಿಕೊಳ್ಳಬೇಕಿತ್ತು. ಅಥವಾ ಅಂತಹ ಆಕ್ರೋಶ ತೋರಿಸಿ ಎಂದು ಯಾರಾದರೂ ದೇಶದ ಜನರಿಗೆ ಕರೆ ನೀಡಬೇಕಿತ್ತು. ಎರಡೂ ನಡೆಯಲಿಲ್ಲ. ದೆಹಲಿಯಲ್ಲಿ  ಶಿವಸೇನೆಯ ಸನ್ಮಾನ್ಯ ಸಂಸತ್ ಸದಸ್ಯರೊಬ್ಬರು ವಿಮಾನ ಕಂಪೆನಿಯ ಅಮಾಯಕ ನೌಕರರೋರ್ವರಿಗೆ ಚಪ್ಪಲಿಯಲ್ಲಿ ಮನಸೋ ಇಚ್ಛೆ ಥಳಿಸಿದ ವಿದ್ಯಮಾನವನ್ನು ದೇಶಕ್ಕೆ ದೇಶವೇ ಅಪ್ಪಟ ಮನರಂಜನೆಯನ್ನು ನೋಡುವಂತೆ ನೋಡಿತು. ‘ಬಡೇ ಬಡೇ ದೇಶೋ ಮೆ ಐಸಿ ಚೋಟಿ ಚೋಟಿ ಬಾತೇ ಹೋತಿ ರಹ್ತಿ ಹೈ’ (ದೊಡ್ಡ ದೊಡ್ಡ ದೇಶಗಳಲ್ಲಿ ಇಂತಹ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ) ಎನ್ನುವ ಶಾರುಖ್ ಖಾನ್ ಸಿನಿಮಾವೊಂದರ ಡೈಲಾಗ್ ಅನ್ನು ಇಡೀ ದೇಶ ಒಪ್ಪಿಕೊಂಡು ಪಠಿಸುವಂತೆ ತೋರಿತು.

ಅಷ್ಟಕ್ಕೂ ಸನ್ಮಾನ್ಯ ಸಂಸದರಿಗೆ ಕೋಪ ಬಂದದ್ದು ಯಾಕೆ? ಬ್ಯುಸಿನೆಸ್‌ ಶ್ರೇಣಿಯ ಆಸನಗಳಿಲ್ಲದ ವಿಮಾನದಲ್ಲಿ  ಬ್ಯುಸಿನೆಸ್‌ ಶ್ರೇಣಿಯ ಆಸನ ನೀಡಲಿಲ್ಲ ಎನ್ನುವ ಕಾರಣಕ್ಕೆ. ಇದರ ಮುಂದೆ ಯಾವ ತುಘಲಕ್ ದರ್ಬಾರ್? ಹೀಗೇ ಆದರೆ ಮುಂದೊಂದು ದಿನ ತುಘಲಕ್ ದರ್ಬಾರ್ ಈ ದೇಶಕ್ಕೆ ಆದರ್ಶ ಪ್ರಾಯವಾಗಿ ಕಂಡರೂ ಆಶ್ಚರ್ಯವಿಲ್ಲ.

ಟಿ.ವಿ. ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳು ಎಂದಿನಂತೆ ಇದು ರೌಡಿಸಂ, ಇದು ಗೂಂಡಾಗಿರಿ ಎಂದೆಲ್ಲಾ ಮನಬಂದಂತೆ ಘಟನೆಯನ್ನು ವಿವರಿಸಿದವು. ಇಂತಹ ಶಬ್ದಗಳನ್ನೆಲ್ಲಾ ಬಳಸುವಾಗ ಎಚ್ಚರ ವಹಿಸಬೇಕು. ರೌಡಿ, ಗೂಂಡಾ ಮುಂತಾದ ಪದಗಳನ್ನು ಅಸಮರ್ಪಕವಾಗಿ ಬಳಸಬಾರದು. ಸನ್ಮಾನ್ಯ ಸಂಸದರ ವಿಚಾರದಲ್ಲಿ ಈ ಶಬ್ದಗಳ ಬಳಕೆ ಖಂಡಿತವಾಗಿಯೂ ಅಸಮರ್ಪಕ. ಮೊದಲನೆಯದಾಗಿ ರೌಡಿ, ಗೂಂಡಾ ಇತ್ಯಾದಿಗಳೆಲ್ಲಾ ಸನ್ಮಾನ್ಯ ಸಂಸದರ ನಡವಳಿಕೆಯನ್ನು ವಿವರಿಸುವಲ್ಲಿ ತೀರಾ ಸಪ್ಪೆ ಶಬ್ದಗಳು. ಈ ಶಬ್ದಗಳನ್ನು ಬಳಸಿ ಅವರು ತೋರಿದ ಉನ್ಮಾದದ ಮಟ್ಟವನ್ನು ಈ ಮಟ್ಟಿಗೆ ಸಪ್ಪೆಯಾಗಿ ಚಿತ್ರಿಸಬಾರದಿತ್ತು. ಇನ್ನೂ ಒಂದು ಕಾರಣಕ್ಕೆ ಸಂಸದರ ವಿಚಾರದಲ್ಲಿ ಈ ಶಬ್ದಗಳ ಬಳಕೆ ಶುದ್ಧ ತಪ್ಪು. ಅದೇನೆಂದರೆ  ಈ ದೇಶದಲ್ಲಿ ರೌಡಿಗಳು, ಗೂಂಡಾಗಳು ಎಂದೆಲ್ಲಾ ಕರೆಸಿಕೊಳ್ಳುವವರಿಗೂ ಒಂದು ವ್ಯಕ್ತಿತ್ವ, ಒಂದು ಮರ್ಯಾದೆ, ಸಂವಿಧಾನಬದ್ಧ ಹಕ್ಕುಗಳೆಲ್ಲಾ ಇವೆ.  ಸನ್ಮಾನ್ಯ ಸಂಸದರೊಂದಿಗೆ ಹೋಲಿಸಿ ಗೂಂಡಾಗಳ, ರೌಡಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ಟಿ.ವಿ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಬರೆಯುವವರು ಮಾಡಬಾರದಿತ್ತು.

ಇಡೀ ಘಟನೆಯ ದುರಂತ ಸ್ವಾರಸ್ಯ ಇರುವುದು ಸನ್ಮಾನ್ಯ ಸ೦ಸತ್ ಸದಸ್ಯರು ಏನು ಮಾಡಿದರೋ ಅದನ್ನು ಮಾಡಿದರು ಎನ್ನುವಲ್ಲಿ ಅಲ್ಲ. ಅದು ಇರುವುದು ಈ ಘಟನೆಗೆ ಈ ದೇಶ ಪ್ರತಿಕ್ರಿಯಿಸಿದ ರೀತಿಯಲ್ಲಿ. ಅದರಲ್ಲೂ ಮಾಧ್ಯಮ ರಂಗದ ಪ್ರಬುದ್ಧ ಅವತಾರಗಳು ನಾವು ಎಂದು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಿರುವ ದಿನ ಪತ್ರಿಕೆಗಳು ಈ ಘಟನೆಗೆ ಸ್ಪಂದಿಸಿದ ರೀತಿಯಂತೂ ಇನ್ನೂ ವಿಚಿತ್ರವಾಗಿತ್ತು.

ಅಧಿಕಾರ ದುರ್ಬಳಕೆ ಮತ್ತು ಚುನಾಯಿತ ಪ್ರತಿನಿಧಿಗಳು ಜನರ ಮೇಲೆ ಕೈಮಾಡುವುದು, ದರ್ಪ ತೋರುವುದು ಇತ್ಯಾದಿಗಳೆಲ್ಲ ಆಗಾಗ ನಡೆಯುತ್ತವೆ. ಅದನ್ನು ಒಪ್ಪಿಕೊಂಡರೂ ದೆಹಲಿಯ ವಿಮಾನ ನಿಲ್ದಾಣದಲ್ಲಿ ಸನ್ಮಾನ್ಯ ಸಂಸದರು ಮಾಡಿದ್ದು ಅಂಥಿಂಥ ಅಧಿಕಾರ ದುರ್ಬಳಕೆಯಲ್ಲ. ಯಾವ ರೀತಿಯಲ್ಲಿ ನೋಡಿದರೂ ಅವರು ಮಾಡಿದ್ದು ತೀರಾ ಅಕ್ಷಮ್ಯ, ಅಸಭ್ಯ, ಅಮಾನವೀಯ, ಅನಾಗರಿಕ ಮತ್ತು ಅಸ್ವೀಕಾರಾರ್ಹ. ಅಷ್ಟೇ ಅಕ್ಷಮ್ಯ, ಅಸಭ್ಯ, ಅಮಾನವೀಯ, ಅನಾಗರಿಕ ಮತ್ತು ಅಸ್ವೀಕಾರಾರ್ಹ ವಿಚಾರ ಏನು ಎಂದರೆ ದೇಶದ ಬಹುತೇಕ ಪತ್ರಿಕೆಗಳು ಇದೊಂದು ಮಾಮೂಲಿ ಘಟನೆ ಎಂಬಂತೆ ತೇಲಿಸಿಬಿಟ್ಟದ್ದು.  ಪ್ರಜಾಪ್ರಭುತ್ವದ ಕಾವಲು ನಾಯಿಗಳು ನಾವು ಎಂದು ಕೊಚ್ಚಿಕೊಳ್ಳುತ್ತಿರುವ ಪತ್ರಿಕೆಗಳ ಮಿದುಳಿನ ಆಳದಲ್ಲಿ ಪಾಳೆಗಾರಿಕೆಯನ್ನು ಪರೋಕ್ಷವಾಗಿ ಸಮರ್ಥಿಸುವ ರೇಬೀಸ್  ಎಷ್ಟು ಗಟ್ಟಿಯಾಗಿ ನೆಲೆಯೂರಿದೆ ಎನ್ನುವುದು ಈ ಮೂಲಕ ಸಾಬೀತಾಗಿ ಹೋಯಿತು. 

ಒಂದೆರಡು ಇಂಗ್ಲಿಷ್ ಪತ್ರಿಕೆಗಳು ಮತ್ತು ಕೇರಳದ ‘ಮಲಯಾಳ ಮನೋರಮಾ’ ಪತ್ರಿಕೆಯನ್ನು ಹೊರತು ಪಡಿಸಿದರೆ ಈ ದೇಶದ ಪತ್ರಿಕಾ ಮಾಧ್ಯಮಗಳ ದೃಷ್ಟಿಯಲ್ಲಿ ಅದೊಂದು ಮುಖಪುಟದಲ್ಲಿ ಪ್ರಕಟಿಸುವ ಸುದ್ದಿಯೂ ಆಗಿರಲಿಲ್ಲ. ಒಂದು ಕನ್ನಡ ಪತ್ರಿಕೆಯ೦ತೂ ಅದನ್ನು ಒಂದು ಚುಟುಕು ಸುದ್ದಿಯಾಗಿ ಪ್ರಕಟಿಸಿ ಕೈತೊಳೆದುಕೊಂಡಿತು.  ಪ್ರಜಾತಂತ್ರ ವ್ಯವಸ್ಥೆಯ ದೊಡ್ಡ ಸವಾಲು ಏನು ಎಂದರೆ ಜನರಿಂದ ಅಧಿಕಾರ ಪಡೆದವರು ಆ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಳ್ಳುವುದು. ಇದನ್ನು ಒಂದು ರೀತಿಯಲ್ಲಿ ಸಾಧ್ಯವಾಗಿಸುವುದಕ್ಕೆಂದೇ ಈ ದೇಶದ ಸಂವಿಧಾನ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಜನರಿಗೆ ನೀಡಿರುವುದು ಮತ್ತು ಈ ಹಕ್ಕಿನ ಅಡಿಯಲ್ಲಿ ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿರುವುದು. ಆದುದರಿಂದ ಅಧಿಕಾರ ದುರ್ಬಳಕೆಯ ಒಂದು ಸಣ್ಣ ಘಟನೆಯನ್ನು ಕೂಡಾ ಮಾಧ್ಯಮಗಳು ತೀರಾ ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ಪತ್ರಿಕಾ ಧರ್ಮ. 

ಗಂಭೀರವಾಗಿ ಪರಿಗಣಿಸುವುದು ಎಂದರೆ ಕೆಲ ಟಿ.ವಿ. ಚಾನೆಲ್‌ನವರು ಮಾಡಿದ ಹಾಗೆ ಕಾಲುಕೆದರಿ ಜಗಳ ಕಾಯ್ದು, ಮನಸೋ ಇಚ್ಛೆ ಬೈದು, ರೇಗಾಡಿ, ಎಗರಾಡಿ, ರಾಡಿ ಎಬ್ಬಿಸಿ- ಆ ಮೂಲಕ ಯಾರ ವಿರುದ್ಧ ಅವರು ಇಷ್ಟೆಲ್ಲಾ ಮಾಡುತ್ತಾರೋ ಅವರಿಗಿಂತಲೂ ಒಂದು ತೂಕ ಕಡಿಮೆ ಎಂದು ತೋರಿಸಿಕೊಳ್ಳುವ ಹಾಗೆ ಮಾಡಬೇಕೆಂದಿಲ್ಲ. ಗಂಭೀರವಾಗಿ ಪರಿಗಣಿಸಬೇಕಾದ ವಿಚಾರಗಳನ್ನು ಗಂಭೀರವಾಗಿಯೇ ಜನರ ಮುಂದಿಡುವ ಸಾವಿರ ಮಾರ್ಗಗಳಿವೆ.

ಈ ವಿಚಾರದಲ್ಲಿ ವಿಶೇಷವಾಗಿ ಕನ್ನಡ ಪತ್ರಿಕೆಗಳು ನಡೆದುಕೊಂಡ ರೀತಿಯನ್ನಂತೂ ಇತಿಹಾಸ ದಪ್ಪ ದಪ್ಪ ಹಳದಿ ಅಕ್ಷರಗಳಲ್ಲಿ ದಾಖಲಿಸಬೇಕು. ಅಂದು ಬಹುತೇಕ ಕನ್ನಡ ಪತ್ರಿಕೆಗಳ ಮುಖಪುಟದಲ್ಲಿ ಢಾಳಾಗಿ ಕಾಣಿಸಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರ ಪಕ್ಷಾಂತರದ ಹಳಸಲು ಕತೆ. ಪುಟಗಟ್ಟಲೆ ಚರ್ವಿತ ಚರ್ವಣ ವಿಶೇಷ ಸಂದರ್ಶನ. ಈ ರಾಜಕಾರಣಿ ಕನ್ನಡ ಪತ್ರಿಕೆಗಳ ಮೇಲೆ ಅದೆಂತಹ ಮೋಡಿ ಮಾಡಿದ್ದಾರೋ ಅಥವಾ ಕನ್ನಡ ಪತ್ರಿಕೋದ್ಯಮವನ್ನು ಅದೆಂತಹ ಋಣದಲ್ಲಿ ಕೆಡವಿದ್ದಾರೋ ಗೊತ್ತಿಲ್ಲ. ಅವರು ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡು ರಾಜ್ಯಕ್ಕೆ ಮರಳಿದ ಸಂದರ್ಭದಲ್ಲಿ ಕನ್ನಡ ಪತ್ರಿಕೆಗಳು ಪುಟಗಟ್ಟಲೆ ಬರೆದು ಕರ್ನಾಟಕದಲ್ಲಿ ಇನ್ನೇನು ಯುಗಧರ್ಮ ಪರಿವರ್ತನೆ ಆಗಲಿದೆ ಎನ್ನುವಂತೆ ಸಂಭ್ರಮಿಸಿದವು. ಯಾವುದೋ ಘನಂದಾರಿ ಉದ್ದೇಶ ಇರಿಸಿಕೊಂಡೇ ಪಕ್ಷದ ಹೈಕಮಾಂಡ್ ಅವರನ್ನು ರಾಜ್ಯಕ್ಕೆ ಮರಳಿ ಕಳಿಸಿದ್ದು ಎಂದವು. ಆ ಉದ್ದೇಶ ಏನಿರಬಹುದು ಎಂದು ದಿನಗಟ್ಟಲೆ ಊಹಿಸಿ ಊಹಿಸಿ ತಾವು ಸುಸ್ತಾಗುವ ಜತೆ ಓದುಗರನ್ನೂ ಸುಸ್ತಾಗಿಸಿದ್ದವು. ಈಗ ಆ ನಾಯಕರೇ ತಿಳಿಸಿದ ಸತ್ಯ ಏನು ಎಂದರೆ ಸೌಜನ್ಯಕ್ಕಾದರೂ ಒಂದು ಮಾತು ಹೇಳದೆ ಅವರಿಂದ ಅಂದು ಮಂತ್ರಿ ಸ್ಥಾನ ಕಿತ್ತುಕೊಳ್ಳಲಾಗಿತ್ತು ಮತ್ತು ಅವಮಾನಿಸಿ ಅವರನ್ನು ದೆಹಲಿಯಿಂದ ಕಳುಹಿಸಲಾಗಿತ್ತು.

ಈ ಸತ್ಯ ಯಾವ ಪತ್ರಿಕೆಗೂ ಅಂದು ಗೊತ್ತಾಗಲಿಲ್ಲ. ಅ೦ದು ಏನೋ ಆಯಿತು. ಈಗ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿ ಕಾಪಾಡಲು ಪಕ್ಷ ಬದಲಿಸುತ್ತಿದ್ದಾರೆ. ಕನ್ನಡ ಪತ್ರಿಕೆಗಳು ಮತ್ತೊಮ್ಮೆ ಮೈಮರೆತಂತೆ ವರ್ತಿಸುತ್ತಿವೆ.  ಇಲ್ಲವಾದರೆ ಯಾವ ದೃಷ್ಟಿಯಿಂದ  ನೋಡಿದರೂ ಮುಖಪುಟದಲ್ಲಿ ಕಾಣಿಸಿಕೊಳ್ಳಬೇಕಾದ ಸನ್ಮಾನ್ಯ ಸಂಸತ್ ಸದಸ್ಯರ ಉನ್ಮತ್ತ ವರ್ತನೆಯ ಕುರಿತಾದ ವರದಿ ಮೂಲೆ ಸೇರಿ ಮಾಜಿ ಮುಖ್ಯಮಂತ್ರಿಯ ವೈಭವೀಕರಣ ಮುಖಪುಟದಲ್ಲಿ ರಾರಾಜಿಸುತ್ತಿರಲಿಲ್ಲ. ವ್ಯಕ್ತಿ ಸ್ವಾತಂತ್ರ್ಯ ಹರಣದ ಬಗ್ಗೆ ಗಮನ ಸೆಳೆಯಬೇಕಾಗಿದ್ದ ಪತ್ರಿಕೆಗಳು ವ್ಯಕ್ತಿ ಪೂಜೆಯಲ್ಲಿ ಸಂಭ್ರಮಿಸುತ್ತಿರಲಿಲ್ಲ.  ಇನ್ನೊಂದೆಡೆ ಈ ನಾಯಕನ ಬಗ್ಗೆ ಬರೆಯದ ಪತ್ರಿಕೆಗಳೂ ಸನ್ಮಾನ್ಯ ಸಂಸತ್ ಸದಸ್ಯರ ಸುಸಂಸ್ಕೃತ ನಡವಳಿಕೆಗೆ ಸಂಬಂಧಿಸಿದ ಸುದ್ದಿಗೆ ಅಂತಹ ಮಹತ್ವವನ್ನೇನೂ ನೀಡಲಿಲ್ಲ. ಇವಿಷ್ಟು ಕನ್ನಡ ಪತ್ರಿಕೆಗಳ ಪತ್ರಿಕಾ ಧರ್ಮದ ಪಾಲನೆಯ ಕುರಿತು. ಇರಲಿ.

ಇನ್ನೊಂದು ದೇಶದಲ್ಲಿ ಇನ್ನೊಂದು ಸಂಸ್ಕೃತಿಯಲ್ಲಿ ಒಬ್ಬ ಅಧಿಕಾರಸ್ಥ ಒಬ್ಬ ಅಮಾಯಕ ವ್ಯಕ್ತಿಯ ಮೇಲೆ ಈ ರೀತಿ ಕೈಮಾಡಿದ್ದರೆ, ಆತ ತನ್ನ ಸ್ಥಾನದಲ್ಲಿ ಒಂದು ಕ್ಷಣ ಕೂಡಾ ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ. ಕಾನೂನು ಇಷ್ಟೊತ್ತಿಗೆ ತನ್ನ ಕೆಲಸ ಪೂರೈಸುತ್ತಿತ್ತು. ಭವ್ಯ ಭಾರತದಲ್ಲಿ ಇವೆಲ್ಲಾ  ತೀರಾ ಮಾಮೂಲಿ. ಇದು ಈ ನೆಲದ ಸಂಸ್ಕೃತಿ. ಅಧಿಕಾರವಿದ್ದವನು ತನ್ನ ಕೆಳಗಿರುವವರನ್ನು ತುಳಿದರೆ ಇಲ್ಲಿ ಯಾರಿಗೂ ಕೋಪ ಬರುವುದಿಲ್ಲ. ಯಾರೋ ಒಬ್ಬ ಏನೋ ಮಾಡಿದರೆ ಇಡೀ ಸಂಸ್ಕೃತಿಯನ್ನು ಯಾಕೆ ದೂರುವುದು ಎಂದು ಯಾರಾದರೂ ಕೇಳಬಹುದು. ಯಾರೋ ಒಬ್ಬ ಏನೋ ಮಾಡುವುದು ವೈಯಕ್ತಿಕ ವಿಕೃತಿ. ಆದರೆ ಅದನ್ನು ಮಾಮೂಲಿ ಎನ್ನುವಂತೆ ಸ್ವೀಕರಿಸುವುದಿದೆಯಲ್ಲ ಅದು ಸಂಸ್ಕೃತಿ.

ಈ ದೇಶದಲ್ಲಿ ಪ್ರಾಣಿಗಳಿಗೆ ಅಪಚಾರವಾದರೆ ಜನಾಕ್ರೋಶ ಹುಟ್ಟಿಕೊಳ್ಳುತ್ತದೆ.  ಮೂರ್ತಿಗಳಿಗೆ-ಪ್ರತಿಮೆಗಳಿಗೆ ಅಪಮಾನವಾದರೆ ಜನಶಕ್ತಿ ಸಿಡಿದೇಳುತ್ತದೆ.  ಯಾವನೋ ಕವಿ ತನ್ನ ಸ್ಫೂರ್ತಿಯ ಕ್ಷಣದಲ್ಲಿ ಬರೆದ ಶಾಸ್ತ್ರ-ಪುರಾಣಗಳ ವಿಚಾರದಲ್ಲಿ, ಯಾವನೋ ಚರಿತ್ರಕಾರ ಅಧಿಕಾರಸ್ಥರನ್ನು ಓಲೈಸಲು ಬರೆದ ಚರಿತ್ರೆಯ ವಿವರಣೆಯಲ್ಲಿ ಬಿಂದು-ವಿಸರ್ಗ ವ್ಯತ್ಯಾಸವಾಗಿಬಿಟ್ಟರೆ ಈ ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ.  ಆದರೆ ಅಮಾಯಕ-ಅಸಹಾಯಕ ಮನುಷ್ಯನೊಬ್ಬನನ್ನು ಅಧಿಕಾರಸ್ಥನೊಬ್ಬ ಮರ್ಧಿಸುತ್ತಿದ್ದರೆ ಇಡೀ ದೇಶ ಇದೆಲ್ಲಾ ಮಾಮೂಲಿ ಎನ್ನುವಂತೆ ಸ್ವೀಕರಿಸುತ್ತದೆ. ಜನ ಹಾಗೆ ಸ್ವೀಕರಿಸುವುದರಿಂದ ಇವೆಲ್ಲಾ ಎಲ್ಲಾ ಕಡೆ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಇತ್ತೀಚೆಗಿನ ದಿನಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚು ವಿದ್ಯಾವಂತರು ಚುನಾಯಿತರಾದಾಗ ಪ್ರಜಾತಂತ್ರಕ್ಕೆ ಹಿಡಿದ ಪಾಳೆಗಾರಿಕೆಯ ಗರ ಬಿಟ್ಟು ಹೋಗಬಹುದು ಎಂದುಕೊಂಡದ್ದು ಸುಳ್ಳಾದದ್ದು ಹೇಗೆ ಎನ್ನುವುದೇ ಒಂದು ಸಂಶೋಧನಾ ವಿಷಯ. 

ಶಿವಸೇನೆಯ ಸನ್ಮಾನ್ಯ ಸಂಸದರು ಮೊನ್ನೆ ತೋರಿಸಿದ ಪ್ರವೃತ್ತಿ  ಅಧಿಕಾರದ ಸೋಂಕು ತಗಲಿದ ಭಾರತದ ಪ್ರತಿ ವ್ಯಕ್ತಿಯೊಳಗೂ ಸುಪ್ತವಾಗಿ ಮನೆಮಾಡಿದೆ. ಎಲ್ಲರೂ  ಯಥಾಶಕ್ತಿ ಅದನ್ನು ಪ್ರದರ್ಶಿಸುತ್ತಾರೆ. ಪ್ರದರ್ಶಿಸದೆ ಹೋದವರು ಮೌನವಾಗಿ ಒಪ್ಪಿಕೊಳ್ಳುತ್ತಾರೆ. ಆದಕಾರಣವೇ ಭಾರತದ ಭವ್ಯ ಸಂಸತ್ತಿನ ಅಷ್ಟು ಮಂದಿ ಸದಸ್ಯರಲ್ಲಿ ‘ತಮ್ಮ ಸಹೋದ್ಯೋಗಿ ಮಾಡಿದ್ದು ತಪ್ಪು- ಇಂತಹವರು ಇಲ್ಲಿರಬಾರದು’ ಎಂದು ಹೇಳುವ ಕನಿಷ್ಠ ಸಾತ್ವಿಕ ಧೈರ್ಯ ಕೂಡಾ ಯಾರಿಗೂ ಇಲ್ಲದೆ ಹೋದದ್ದು.

ಇಂತಹವರನ್ನೆಲ್ಲ ಸದಸ್ಯರನ್ನಾಗಿಸಿಕೊಂಡ ಸಂಸತ್ತು ಪವಿತ್ರ, ಇಂತಹವರನ್ನೆಲ್ಲಾ ಚುನಾಯಿಸುವ ಜನರ ತೀರ್ಪು ಪವಿತ್ರ ಎಂದೆಲ್ಲಾ ಇನ್ನೆಷ್ಟು ದಿನ ಬೊಗಳೆ ಬಿಡುವುದೋ. ಸಂಸತ್ತೂ ಪವಿತ್ರವಲ್ಲ. ಶಾಸನಸಭೆಯೂ ಪವಿತ್ರವಲ್ಲ. ಜನ  ಚುನಾವಣೆಯಲ್ಲಿ ನೀಡುವ ತೀರ್ಪೂ ಪವಿತ್ರವಲ್ಲ. ಇವೆಲ್ಲಾ ಒಂದು ವ್ಯವಸ್ಥೆ ಇರಬೇಕು ಎನ್ನುವ ದೃಷ್ಟಿಯಿಂದ ತಾಳಿಕೊಳ್ಳಬೇಕಾದ ಅಪಭ್ರಂಶಗಳು. ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಸದ್ಯದ ಸ್ಥಿತಿಯಲ್ಲಿ ಲಭ್ಯ ಇಲ್ಲ ಎನ್ನುವ ಕಾರಣಕ್ಕೆ ಒಪ್ಪಿಕೊಳ್ಳಬೇಕಾದ ಕಾಟಗಳು. ಇಷ್ಟನ್ನು ಒಪ್ಪಿಕೊಳ್ಳಲೂ ನಮ್ಮ ಆಷಾಢಭೂತಿತನ ಅಡ್ಡ ಬರುತ್ತದೆ.

-editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT