ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿಯ ವರ್ತುಲದಲ್ಲಿ ಮರೆಯಾಗುವ ಸೂಕ್ಷ್ಮತೆ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದೆಹಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ   ನಡೆದು ನಿನ್ನೆಗೆ  (ಡಿಸೆಂಬರ್ 16) ಒಂದು ವರ್ಷ.    ರಾಷ್ಟ್ರದಲ್ಲಿ  ಅತ್ಯಾಚಾರ ವಿರುದ್ಧದ ಕಾನೂನು ಬಿಗಿಗೊಳ್ಳಲು ಈ ಪ್ರಕರಣ ಕಾರಣವಾಯಿತು. ಅತ್ಯಾಚಾರ, ಲೈಂಗಿಕ ಕಿರುಕುಳ ವಿಚಾರಗಳು ಇಂದು  ಎಲ್ಲೆಡೆ ವ್ಯಾಪಕವಾಗಿ ಚರ್ಚೆಯಾಗುತ್ತಿವೆ.  ಈ ಬೆಳವ­ಣಿಗೆಗಳು,  ಮಹಿಳೆ ವಿರುದ್ಧದ ಅಪರಾಧ ಪ್ರಕರ­ಣಗಳು ಇಳಿಮುಖವಾಗಲು ಕಾರಣವಾಗಿ­ವೆಯೆ? ಎಂಬುದು ಪ್ರಶ್ನೆ.

ಆದರೆ ಯಥಾಸ್ಥಿತಿ ಮುಂದುವರಿದಿದೆ ಎಂಬುದು ಮೇಲ್ನೋಟಕ್ಕೇ ಗೋಚರವಾಗುವ ಸಂಗತಿ.   ನಿಜ ಹೇಳಬೇಕೆಂದರೆ  ಕಳೆದ 13 ವರ್ಷ­­­ಗಳಿಗೆ ಹೋಲಿಸಿದರೆ ಈ ವರ್ಷ   ವರದಿ­ಯಾ­ಗಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ  ಅತಿ ಹೆಚ್ಚು.  ಇದಕ್ಕೆ ದೂರು ಸಲ್ಲಿಸುವ ಬಗ್ಗೆ ಜನ­­ರಲ್ಲಿ ಮೂಡಿರುವ ಹೆಚ್ಚಿನ ಜಾಗೃತಿ ಕಾರಣ. ಇಲ್ಲದೆ ಇದ್ದಿದ್ದಲ್ಲಿ ಇವು ಮುಚ್ಚಿ ಹೋಗಿ­ರುತ್ತಿ­ದ್ದವು ಎಂಬುದು  ದೆಹಲಿ ಪೊಲೀಸರ ವಿವರಣೆ.

ಈ ವರ್ಷ ನವೆಂಬರ್ 30ರವರೆಗೆ ದೆಹಲಿಯೊಂದರಲ್ಲೇ  1493 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2012ರಲ್ಲಿ ಇದೇ ಅವಧಿಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗಿಂತ ಇದು ಎರಡು ಪಟ್ಟು ಹೆಚ್ಚು. ಅದರಲ್ಲೂ  ಲೈಂಗಿಕ ದುರ್ವರ್ತನೆ ಪ್ರಕರಣಗಳು 2013ರ ನವೆಂಬರ್‌ವರೆಗೆ   ಐದು ಪಟ್ಟು ಹೆಚ್ಚಾಗಿವೆ.

ದೆಹಲಿಯ ಸಾಮೂಹಿಕ ಅತ್ಯಾಚಾರದ ಘಟನೆಗೆ ಹಾದಿ ತಪ್ಪಿದ,  ನೈತಿಕತೆ ಇಲ್ಲದ ವ್ಯಕ್ತಿಗಳು ಕಾರಣ ಎಂದಷ್ಟೇ ಹೇಳಲಾಗದು. ಹೆಣ್ಣುಮಕ್ಕಳ ಬಗ್ಗೆ ಗೌರವ ಇಲ್ಲದ ಸಾಮಾಜಿಕ ಸಂಸ್ಕೃತಿಯ ಫಲ ಇದು ಎಂದೂ ವ್ಯಾಖ್ಯಾನಿಸ­ಬೇಕಾಗುತ್ತದೆ. ಇಂತಹ ಸಂಸ್ಕೃತಿಯಲ್ಲಿ , ಹೆಣ್ಣು ಶಿಶು ಹತ್ಯೆ, ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಕಿರುಕುಳ, ಅತ್ಯಾಚಾರ, ವಧು ದಹನ, ಮರ್ಯಾದೆ ಹತ್ಯೆ, ಆಸಿಡ್ ದಾಳಿ, ಮಹಿಳೆಯರ ಅಕ್ರಮ ಸಾಗಣೆ, ಹಿಂಬಾಲಿಸುವಿಕೆ, ಇಣುಕು ಕಾಮುಕತೆ (ವಾಯರಿಸಂ)  ಎಂಬೆಲ್ಲಾ  ರೂಪಗ­ಳಲ್ಲಿ ಮಹಿಳೆ ವಿರುದ್ಧದ ಹಿಂಸೆ  ವ್ಯಕ್ತವಾಗುತ್ತಿರುತ್ತವೆ.

ಮಹಿಳೆ ವಿರುದ್ಧದ ಹಿಂಸೆ ಕಾನೂನು­ಗಳಿಂದಷ್ಟೇ ನಿವಾರಣೆ ಆಗುವುದು ಅಸಾಧ್ಯ.  ಶಿಕ್ಷೆಯ ಭಯ ಹಿಂಸೆ ತಡೆಗೆ ಒಂದಿಷ್ಟು  ಬಲ ತುಂಬುತ್ತದೆ ಎಂಬುದು ನಿಜ. ಆದರೆ ಸಂಸ್ಕೃತಿಯ ಹೆಸರಲ್ಲಿ ಹಿಂಸೆಯನ್ನು ಸ್ವತಃ ನಾವೇ ಒಪ್ಪಿಕೊಂಡಿರುವ ಸ್ಥಿತಿಯೂ ಇದೆ. ಇಂತಹ ಮನಸ್ಥಿತಿಯನ್ನು ಬದಲಾಯಿಸುವುದು ಹೇಗೆ?

ಉದಾಹರಣೆಗೆ ವೈಧವ್ಯ.  ಸಂಗಾತಿಯನ್ನು ಕಳೆದುಕೊಳ್ಳುವುದು ಹೆಣ್ಣಿಗಾಗಲಿ, ಗಂಡಿಗಾಗಲಿ ನೋವಿನ ಸಂಗತಿ. ಆದರೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಇದು ‘ಶಾಪ’ ವೇ ಆಗುತ್ತದೆ.

ಹೆಂಡತಿಯನ್ನು ಕಳೆದುಕೊಳ್ಳುವ ವಿಧುರನ ಸಾಮಾಜಿಕ ಸ್ಥಾನಮಾನಗಳಲ್ಲಿ, ಧರಿಸುವ ವೇಷಭೂಷಣಗಳಲ್ಲಿ ಯಾವ ಏರುಪೇರೂ ಆಗುವುದಿಲ್ಲ. ಆದರೆ ಗಂಡನನ್ನು ಕಳೆದುಕೊಳ್ಳುವ ವಿಧವೆಯ ಸ್ಥಿತಿಯೇ ಬೇರೆ. ಯಾಕೆ ಹೀಗೆ? ಸೇನಾಧಿಕಾರಿಯಾಗಿದ್ದ ಪತಿ ಕರ್ನಲ್ ವಸಂತ್ ಅವರನ್ನು  ಕಳೆದು­ಕೊಂಡಿರುವ ನೃತ್ಯ ಕಲಾವಿದೆ ಹಾಗೂ ವಸಂತ­ರತ್ನ ಫೌಂಡೇಷನ್ ಫಾರ್ ಆರ್ಟ್ ಸಂಸ್ಥೆಯನ್ನು ನಡೆಸುತ್ತಿರುವ  ಸುಭಾಷಿಣಿ ವಸಂತ್ ಅವರು ಬೆಂಗಳೂರಿನಲ್ಲಿ ಕಳೆದ ವಾರ ಪುಸ್ತಕ ಬಿಡುಗಡೆ  ಸಮಾರಂಭವೊಂದರಲ್ಲಿ,   ಹೇಳಿದ ಮಾತುಗಳು ಮನ ಕಲಕುವಂತಹವು. ‘ಸಮಾರಂಭ­ವೊಂದ­ರಲ್ಲಿ ಇತ್ತೀಚೆಗೆ  ಭೇಟಿಯಾದ ಪರಿಚಿತರೊಬ್ಬರು ‘ನಿಮ್ಮ ಪತಿಗೆ ಈಗ ಎಲ್ಲಿಗೆ ಪೋಸ್ಟಿಂಗ್ ಆಗಿದೆ’ ಎಂದು   ಪ್ರಶ್ನೆ ಕೇಳಿದ್ದರು.  ಅವರಿಗೆ ಬಹುಶಃ ವಸಂತ್ ತೀರಿಕೊಂಡಿರುವ ವಿಚಾರ ತಿಳಿದಿತ್ತೊ ಇಲ್ಲವೋ ಗೊತ್ತಿಲ್ಲ.  ಆದರೆ ಮನೆಗೆ ಹಿಂತಿರುಗಿ­ದಾಗಲೂ  ಆ ಮಾತು ಕುಟುಕುತ್ತಿತ್ತು.  ಆಗ, ನನಗೆ ಸಾಂತ್ವನ ಹೇಳುತ್ತಾ, ಸಮಾಜದ ರೀತಿ ನೀತಿಗಳ ಬಗ್ಗೆ ಅರಿವು ಮೂಡಿಸಿಕೊಳ್ಳುತ್ತಿರುವ  17 ವರ್ಷದ  ನನ್ನ ಮಗಳು ಹೇಳಿದ್ದು: ‘ನೀನು ಅಷ್ಟು ಡ್ರೆಸ್ ಮಾಡಿಕೊಂಡು ಹೋದ್ರೆ ಮತ್ತಿ­ನ್ನೇನಮ್ಮಾ?’   ಸುಭಾಷಿಣಿ ಅವರ ಈ ಮಾತು­ಗ­ಳನ್ನು ಕೇಳಿಸಿಕೊಂಡ ಸಭೆ ಗರಬಡಿದುಹೋಗಿತ್ತು. 

ವಿಧವೆ ಎಂಬುದು ನೋಡಿದಾಕ್ಷಣ ಗೊತ್ತಾ­ಗುವ ರೀತಿಯ ವೇಷಭೂಷಣಗಳನ್ನು ನಿಗದಿಪಡಿ­ಸಿರುವ ನಮ್ಮ ಸಂಸ್ಕೃತಿಯ ಕ್ರೌರ್ಯಕ್ಕೆ ಉತ್ತರ ಎಲ್ಲಿ ಹುಡುಕುವುದು? ಅದು ಸಮಾಜದೊಳಗೇ  ಇಳಿಯಬೇಕಿರುವ ಪ್ರಜ್ಞೆ. ಹೀಗಾಗಿ ವಿಧವೆ ಎಂದರೇ, ಆ ಪದಕ್ಕೆ ಅಂಟಿಕೊಂಡಿರುವ ಅಪಶ­ಕುನದ ಛಾಯೆಯನ್ನು ಅಳಿಸಿ ಹಾಕಲು ವಿಧವೆ ಪದಕ್ಕೆ ಪರ್ಯಾ­ಯವಾಗಿ ಹೊಸ ಶಬ್ದವೇ ಸೃಷ್ಟಿಯಾಗಬೇಕೆಂಬ ಕಳಕಳಿಗೂ   ಈ ಸಭೆ ದನಿಯಾಗಿತ್ತು.  ವಿಧವೆ ಪದ ಅಷ್ಟು ಹಿಂಸಾತ್ಮಕ ಎನಿಸುವುದಕ್ಕೆ  ಆ ಪದದ ಸುತ್ತ ಆವರಿಸಿ­ಕೊಂಡಿರುವ ಸಾಂಸ್ಕೃತಿಕ ಆಚರಣೆಗಳೇ ಕಾರಣ.

ಆದರೆ ಸಂಸ್ಕೃತಿಯ ಹೆಸರಿನಲ್ಲಿ  ಚಾಲ್ತಿಯ­ಲ್ಲಿರುವ ಪಿಡುಗುಗಳನ್ನು ಆಧುನಿಕ ಕಾಲದ ಹೆಣ್ಣುಮಕ್ಕಳೂ ಉಸಿರೆತ್ತದೆ ಒಪ್ಪಿಕೊಳ್ಳುತ್ತಾ ಬಂದಿರುವುದು ವಿಪರ್ಯಾಸ. ಕಳೆದ ವಾರ,  ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ‘ಮಹಿಳೆ ವಿರುದ್ಧದ ಹಿಂಸಾಚಾರ ತಡೆಗೆ ಪಠ್ಯಗಳ ಪ್ರವೇಶಿಕೆ’ ಎಂಬ ವಿಚಾರದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.  ಆ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತ­ನಾಡಿದ ಮಹಿಳಾ ಅಧ್ಯಯನ  ಕೇಂದ್ರದ ನಿರ್ದೇಶಕಿ   ಆರ್‌. ಸುನಂದಮ್ಮ ಅವರು ಹೇಳಿದ ಒಂದು ಪ್ರಸಂಗ ಕಂಗೆಡಿಸುವಂತಹದ್ದಾಗಿತ್ತು.   ಎಂಎಸ್‌ಡಬ್ಲ್ಯು     ಸ್ನಾತಕೋತ್ತರ ಪದವಿ ವಿದ್ಯಾ­ರ್ಥಿ­ನಿ­ಯರಿಗೆ ತರಗತಿಯಲ್ಲಿ ಒಂದು ಪ್ರಶ್ನೆ ಕೇಳಲಾಗಿತ್ತು.  ‘ವರದಕ್ಷಿಣೆ ಅಥವಾ  ಹೆಣ್ಣು­ಮಕ್ಕಳಿಗೆ ಆಸ್ತಿ ಹಕ್ಕು, ಈ ಎರಡರಲ್ಲಿ  ನೀವು ಯಾವುದನ್ನು ಆಯ್ದುಕೊಳ್ಳುವಿರಿ?’ ಎಂಬುದು ಆ ಪ್ರಶ್ನೆ.  ಆಗ ವಿದ್ಯಾರ್ಥಿನಿಯರಿಂದ ಬಂದ ಉತ್ತರ ದಂಗು ಬಡಿಸುವಂತಹದ್ದಾಗಿತ್ತು.  ಒಟ್ಟು 36 ವಿದ್ಯಾರ್ಥಿನಿಯರಲ್ಲಿ 33 ವಿದ್ಯಾರ್ಥಿ­ನಿಯರು  ವರದಕ್ಷಿಣೆ ಪರ ಮತ ಹಾಕಿದರೆ ಕೇವಲ ಮೂವರು ವಿದ್ಯಾರ್ಥಿನಿಯರು ಮಾತ್ರ  ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕು ಪರ ಮತ ನೀಡಿದ್ದರು ಎಂಬುದನ್ನು ಸುನಂದಮ್ಮ ವಿಷಾದದಿಂದ ಸಭೆಗೆ ತಿಳಿಸಿದರು.

ಇದು ಏನನ್ನು ಧ್ವನಿಸುತ್ತದೆ? ವರದಕ್ಷಿಣೆ ವಿರುದ್ಧ ದನಿ ಎತ್ತಲು ಉನ್ನತ ಶಿಕ್ಷಣವೂ ಹೆಣ್ಣುಮಕ್ಕಳಿಗೆ ಸಹಕಾರಿ ಆಗುತ್ತಿಲ್ಲ. ಎಂದರೆ ನಮ್ಮ ಸುತ್ತಲಿನ ಸಮಾಜ ಹಾಗೂ ಅದು ಪ್ರತಿಪಾದಿಸುತ್ತಿರುವ  ಸಂಸ್ಕೃತಿಯ ಪ್ರಭಾವವೇ ಮೇಲುಗೈ ಪಡೆದಿದೆಯಲ್ಲವೆ?

‘ವರದಕ್ಷಿಣೆ ಬೇಕು’ ಎನ್ನಲು ಈ ಹೆಣ್ಣು­ಮಕ್ಕಳಿಗೆ ಅವರದ್ದೇ ಕಾರಣಗಳಿದ್ದವು.  ಮೊದಲ­ನೆ­ಯದಾಗಿ ವರದಕ್ಷಿಣೆ ತೆಗೆದುಕೊಂಡು ಹೋದ್ರೆ  ಅತ್ತೆ ಮಾವನ ಮನೆಯಲ್ಲಿ ತಮಗೆ ಹೆಚ್ಚು ಬೆಲೆ ಇರುತ್ತೆ ಎಂಬ ನಂಬಿಕೆ.  ಆಸ್ತಿ ಹಕ್ಕು ಎಂದರೆ, ತಂದೆ ತಾಯಿ ತೀರಿಕೊಂಡ ಮೇಲೆ ಅಣ್ಣ ತಮ್ಮಂದಿರು ಆಸ್ತಿ ಕೊಡದೆ ಇರಬಹುದು. ಅದರ ಬದಲು  ಈಗಲೇ ಕಾರು, ಸ್ಕೂಟರ್ ಅಥವಾ ಚಿನ್ನದ ರೂಪದಲ್ಲಿ ನೀಡಿದರೆ ಅದನ್ನು ಅನುಭ­ವಿಸುವ ಸುಖವಾದರೂ ಸಿಗುತ್ತದೆ. ಮುದುಕ­ರಾದ ಮೇಲೆ ಆಸ್ತಿ ಸಿಕ್ಕಿದರೆ ಏನು ಪ್ರಯೋಜನ? ಎಂಬುದು  ಈ ಹೆಣ್ಣುಮಕ್ಕಳ ವಾದ. ‘ನಾನು ಚೆನ್ನಾಗಿರಬೇಕು. ಅದಕ್ಕೆ ವರದಕ್ಷಿಣೆ ಕೊಟ್ಟು   ತಂದೆತಾಯಿ  ಮದುವೆ ಮಾಡಬೇಕು’ ಎಂಬಂ­ತಹ ಈ ಹೆಣ್ಣುಮಕ್ಕಳ ನಿರೀಕ್ಷೆಗಳು    ವರ್ತ­ಮಾನ ಕಾಲದಲ್ಲಿ ನಮ್ಮ  ಬದುಕನ್ನು  ಆವರಿಸಿ ಕೊಂಡಿರುವ ಉಪಭೋಗವಾದಕ್ಕೂ ಕನ್ನಡಿ ಹಿಡಿಯುತ್ತದೆ.

ಉಪಭೋಗ ಸಂಸ್ಕೃತಿ ಮೇಲುಗೈ ಸಾಧಿಸು­ತ್ತಿರುವ ಇಂದಿನ ದಿನಮಾನಗಳಲ್ಲಿ ವರದಕ್ಷಿಣೆ ಹಾಗೂ ಅದ್ದೂರಿ ಮದುವೆಗಳು ಸಾಮಾಜಿಕ ಸ್ಥಾನಮಾನದ ಪ್ರತೀಕವಾಗಿರುವುದು ಸುಳ್ಳಲ್ಲ.   ವರದಕ್ಷಿಣೆ ನೀಡದಿದ್ದಲ್ಲಿ ಅವಿವಾಹಿತಳಾಗೇ ಉಳಿಯಬೇಕಾಗುತ್ತದೆ ಎಂಬ ಭೀತಿಯೂ ಹೆಣ್ಣುಮಕ್ಕಳಲ್ಲಿ ಇಂತಹ ಮನಸ್ಥಿತಿಗೆ   ಕಾರಣ­ವಾ­ಗಿರಬಹುದು. ವರದಕ್ಷಿಣೆ ನೀಡುವುದು ಅಥವಾ ತೆಗೆದುಕೊಳ್ಳುವುದು ಕಾನೂನಿನ ಕಣ್ಣಲ್ಲಿ ಅಪರಾಧ ಎಂಬುದು ಇಲ್ಲಿ   ಪ್ರಜ್ಞೆಗೆ ನಿಲುಕುವುದೇ ಇಲ್ಲ.  

ಮಹಿಳೆಯರ ಆಲೋಚನಾ ಕ್ರಮ ಹೇಗಿರ­ಬೇಕೆಂಬ ಬಗ್ಗೆ ಶತಶತಮಾನಗಳಿಂದ ಹರಿದು ಬಂದಿರುವ ಕಟ್ಟುಪಾಡುಗಳಿಗೇ ಜೋತುಬೀಳುವ ಮನಸ್ಥಿತಿಯನ್ನೇ  ಇದು ಧ್ವನಿಸುತ್ತದಲ್ಲವೆ? ಜೊತೆಗೆ ಇಂತಹ ತಾರತಮ್ಯದ ಸಾಮಾಜಿಕ ಆಚರಣೆಗಳನ್ನು ಪೀಳಿಗೆಗಳಿಂದ ಪೀಳಿಗೆಗಳಿಗೆ ದಾಟಿಸುವವರೂ ಸಾಮಾನ್ಯವಾಗಿ ಮಹಿಳೆ­ಯರೇ ಆಗಿರುತ್ತಾರೆ ಎಂಬುದು ಮತ್ತೊಂದು ವಿಪರ್ಯಾಸ.

ಸಾಂಸ್ಕೃತಿಕವಾಗಿ ಬೇರೂರಿ ಹೋಗಿರುವ  ಆಚರಣೆಗಳ ವಿರುದ್ಧ ಮನೋಭಾವಗಳ ಬದಲಾವಣೆಗೆ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಪಠ್ಯಕ್ರಮಗಳು ಕೂಡ ಸ್ಪಂದಿಸಬೇಕಾಗಿರುವ ಅಗತ್ಯದೆಡೆ ಇದು ಬೆರಳು ಮಾಡುತ್ತದೆ.

ಸಾಮಾಜಿಕ ದೃಷ್ಟಿಕೋನಗಳಲ್ಲಿ ಬದಲಾವ­ಣೆಗಳನ್ನು ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಆದರೆ ಇಂದಿನ ದಿನಗಳಲ್ಲಿ ಸ್ವತಃ ಶಿಕ್ಷಕರೇ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಸಿಲುಕುತ್ತಿ­ರುವುದನ್ನು ಕಾಣುತ್ತಿದ್ದೇವೆ. ಇಂತ­ಹವರು ವಿದ್ಯಾರ್ಥಿಗಳಿಗೆ ಲಿಂಗತ್ವ  ಸೂಕ್ಷ್ಮತೆಯ ಪಾಠಗಳನ್ನು ಹೇಳುವುದಾದರೂ ಹೇಗೆ?

ಜ್ಞಾನದ ಧಾರೆಗಳಲ್ಲಿ, ಚಿಂತನಾ ಕ್ರಮಗಳಲ್ಲಿ  ಬದಲಾವಣೆ ಆಗದಿರುವ ತನಕ ಹೆಣ್ಣನ್ನು ನಿಕೃಷ್ಟವಾಗಿ  ಕಾಣುವ ಮನಸ್ಥಿತಿ ಬದಲಾಗು­ವುದಿಲ್ಲ.   ಅಬ್ಬಬ್ಬಾ ಎಂದರೆ ಸೌಂದರ್ಯದ ಖನಿ ಎಂದೋ,  ಗ್ಲಾಮರ್ ಗೊಂಬೆಗಳೆಂದೋ  ಹೆಣ್ಣು­ಮಕ್ಕಳನ್ನು ಉಬ್ಬಿಸಿ ಮತ್ತದೇ  ಯಥಾಸ್ಥಿತಿ­ವಾದದ ಸಂಸ್ಕೃತಿಯ ವರ್ತುಲದೊಳಗೇ ಹೆಣ್ಣುಮಕ್ಕಳನ್ನು ಸಿಕ್ಕಿಸಿಹಾಕುವುದು ಗೊತ್ತಿದ್ದೋ ಗೊತ್ತಿಲ್ಲದೆಯೋ  ನಡೆಯುತ್ತಲೇ ಇರುತ್ತದೆ. ವಿವಾಹ ಸಂಪ್ರದಾಯಗಳಲ್ಲಿ ಕನ್ಯಾದಾನದ ಪರಿಕಲ್ಪನೆ ಬದಲಾಗಿಲ್ಲ. ಕನ್ಯಾದಾನದಂತೆ ಬ್ರಹ್ಮಚಾರಿದಾನ ಯಾಕಿಲ್ಲ ಎಂಬ  ಪ್ರಶ್ನೆಯೇ ಅಪ್ರಸ್ತುತ ಎನಿಸುವಷ್ಟು  ರೀತಿಯಲ್ಲಿ  ಈ ಸಾಮಾಜಿಕ, ಸಾಂಸ್ಕೃತಿಕ ಆಚರಣೆಗಳಿಗೆ ಒಗ್ಗಿಹೋಗಿದ್ದೇವೆ.

ಹೆಣ್ಣನ್ನು ಕುಗ್ಗಿಸುವ, ಹೆಣ್ಣು ಮಗು ಬೇಡ ಎಂಬಂತಹ ಮನಸ್ಥಿತಿಗಳಿಗೆ ಸಮಾಜವನ್ನು ದೂಡುವ,  ಹೆಣ್ಣನ್ನು ಭೋಗಲಾಲಸೆಗಳ  ವಸ್ತು­ವಾಗಿ ಕಾಣುವಂತಹ ದೃಷ್ಟಿಕೋನಗಳೇ ಹೆಣ್ಣಿನ ವಿರುದ್ಧದ ವಿವಿಧ ಸ್ವರೂಪಗಳ ಹಿಂಸೆಗಳಿಗೆ ಕಾರಣವಾಗುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.  ಈ ಕುರಿತ ಜಾಗೃತಿ ಸಮಾಜದ ಎಲ್ಲಾ ವಲಯಗಳಲ್ಲಿ ಮೂಡಬೇಕು.

ಹಿಂಸೆಯಿಂದ ಮುಕ್ತವಾದ ಪ್ರಪಂಚದ ಕನಸು ಸಾಕಾರವಾಗಲು ನಮ್ಮ ಅಭಿವೃದ್ಧಿ ಮಾದರಿಗಳೇ ಬದಲಾಗಬೇಕು. ಮಹಿಳೆಯರನ್ನು   ಒಳಗೊಳ್ಳುವ ಹೊಸ ರಾಜಕೀಯ ಪ್ರಜ್ಞೆ, ಹೊಸ ಪರಿಭಾಷೆ ಮೂಡಬೇಕು. 
 
ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ತನ್ನ ಸುರಕ್ಷೆಗಾಗಿ ಮೊಬೈಲ್ ಫೋನ್ ಅಪ್ಲಿಕೇ­ಷನ್‌­ಗಳು, ಪೆಪ್ಪರ್ ಸ್ಪ್ರೇಗಳನ್ನು  ನೆಚ್ಚಿಕೊಳ್ಳುವ  ಸ್ಥಿತಿ ಆಧುನಿಕ ಮಹಿಳೆಗೆ ಇದೆ.  ಆದರೆ ನಮಗೆ ಇಂದು ನಿಜವಾಗಿ ಬೇಕಾಗಿರುವುದು ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಕೋನಗಳಲ್ಲಿನ ಬದ­ಲಾ­ವಣೆ.  ಅರಿವಿನ ಬೆಳಕು ತುಂಬಿದ ಮನಸ್ಸುಗಳು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT