ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ಇನ್ನೆಷ್ಟು ದಿನ ಕಾಯಬೇಕು?

Last Updated 20 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಅಕ್ರಿಕೆಟ್ ಎಂಬುದು ಒಂದು ಸಣ್ಣ ಜಗತ್ತು. ಬ್ರಿಟಿಷರ ವಸಾಹತುಗಳಲ್ಲಷ್ಟೇ ಅದು ಬೆಳೆಯಿತು. ಏಳೆಂಟು ರಾಷ್ಟ್ರಗಳಿಗೆ ಕ್ರಿಕೆಟ್ ಕಲಿಸಿದ ಇಂಗ್ಲೆಂಡ್ ದಶಕಗಳ ಕಾಲ ಅದ್ವಿತೀಯ ಎನಿಸಿಕೊಂಡಿತ್ತು. ಆಸ್ಟ್ರೇಲಿಯನ್ನರು ಮೊದಲು ಅವರಿಗೆ ಸವಾಲು ಎಸೆದರು.
ನಂತರ ಸದೆಬಡಿದರು.        

ವೆಸ್ಟ್‌ಇಂಡಿಯನ್ನರೂ ಪ್ರಬಲ ತಂಡವಾಗೇ ರೂಪುಗೊಂಡರು. ಭಾರತ ಯಾವಾಗಲೂ ಇವರ ಹಿಂದೆಯೇ ಇತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಭಾರತ ಇವರೆಲ್ಲರನ್ನೂ ವೆುಟ್ಟಿ ನಿಂತಿದೆ.

ಇದಕ್ಕೆ ಸಾಕಷ್ಟು ಸಮಯ ಹಿಡಿಯಿತಾದರೂ ಭಾರತವನ್ನು ಈಗ ಯಾರೂ ಬಚ್ಚಾಗಳೆಂದು ಕರೆಯುವುದಿಲ್ಲ. ಕಳೆದ 35 ವರ್ಷಗಳಲ್ಲಿ ಅಂದರೆ, 1975 ರಲ್ಲಿ ನಡೆದ ಮೊಟ್ಟಮೊದಲ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಿಂದ, ಕಳೆದ ಫೆಬ್ರುವರಿ-ಏಪ್ರಿಲ್‌ನಲ್ಲಿ ನಡೆದ ಹತ್ತನೇ ವಿಶ್ವ ಕಪ್ ವರೆಗೆ ಭಾರತದ ಕ್ರಿಕೆಟ್ ಎಲ್ಲ ರೀತಿಯಿಂದಲೂ ಬೆಳೆದು ನಿಂತಿದೆ. 

ಕ್ರೀಡೆಯಲ್ಲಿ ಸೋಲು ಗೆಲುವು ಇದ್ದದ್ದೇ. ಭಾರತ ತಂಡವೂ ಗೆಲ್ಲಬಹುದೆಂದು ಮೊದಲು ತೋರಿಸಿಕೊಟ್ಟವರು ಸ್ಪಿನ್ನರುಗಳು. ನಂತರ ಕಪಿಲ್ ದೇವ್ ಎಂಬ ಅಪ್ರತಿಮ ಆಲ್‌ರೌಂಡರ್‌ನ ಆಗಮನದೊಂದಿಗೆ ಮಧ್ಯಮ ವೇಗದ ಬೌಲರುಗಳು ಸಾಲುಸಾಲಾಗಿ ಬರತೊಡಗಿದರು.

ಸ್ಪಿನ್ನರುಗಳು ಎದುರಾಳಿಗಳನ್ನು ಕಂಗೆಡಿಸುತ್ತಿದ್ದರಾದರೂ ಅವರಿಗೆ ಬೆಂಬಲವಾಗಿ ಸಮರ್ಥ ಬ್ಯಾಟ್ಸಮನ್ನರು ಇರಲಿಲ್ಲ. ಇದ್ದರೂ ವೇಗದ ದಾಳಿಯೆದುರು ಅವರ ದೌರ್ಬಲ್ಯಗಳು ಎದ್ದುಕಾಣುತ್ತಿದ್ದವು.

ಇದರಿಂದಾಗಿ ಭಾರತ ತಂಡ ವಿದೇಶಗಳಲ್ಲಿ ಗೆಲ್ಲಲು ಪರದಾಡಬೇಕಾಗುತ್ತಿತ್ತು. ಈಗ ಅಂಥ ಸ್ಥಿತಿ ಇಲ್ಲ. ಸಚಿನ್ ತೆಂಡೂಲ್ಕರ್ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸಮನ್ ಆಗಿ ಬೆಳೆಯುವುದರ ಜೊತೆ ಬಹಳಷ್ಟು ದಾಖಲೆಗಳನ್ನು ತಮ್ಮ ಬುಟ್ಟಿಯಲ್ಲಿ ಹಾಕಿಕೊಂಡಿದ್ದಾರೆ.

ಆದರೆ ತಮ್ಮ  ಕ್ರಿಕೆಟ್ ಜೀವನದ ಸಂಜೆಯಲ್ಲಿರುವ ಸಚಿನ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟೆಸ್ಟ್ ಮತ್ತು ಒಂದು ದಿನದ ನಿಗದಿಯ ಓವರುಗಳ ಪಂದ್ಯ) ಯಾರೂ ಮಾಡಿರದ `ನೂರು ಶತಕ~ಗಳ ಸಾಧನೆಗಾಗಿ ಒದ್ದಾಡುತ್ತಿದ್ದಾರೆ.

ಅವರಿಗೆ ಬೇಕಿರುವುದು ಕೇವಲ ಒಂದು ಶತಕ. ಕಳೆದ ಹದಿನೈದು ಟೆಸ್ಟ್         ಇನಿಂಗ್ಸ್‌ಗಳಲ್ಲಿ ಅದು ಅವರಿಗೆ ಸಾಧ್ಯವಾಗಿಲ್ಲ. ತಂಡಕ್ಕೆ ರಾಹುಲ್ ದ್ರಾವಿಡ್     ಆಸರೆಯಾಗಿ ನಿಂತಂತೆ ಸಚಿನ್‌ಗೆ ಆಡಲಾಗುತ್ತಿಲ್ಲ. ಆದರೂ ಸಚಿನ್ ಇಲ್ಲದ ಭಾರತ ತಂಡದ ಕಲ್ಪನೆ ಮೂಡುತ್ತಿಲ್ಲ.

ವಿಶ್ವ ಕಪ್ ನಂತರ ಭಾರತ ತಂಡ ವೆಸ್ಟ್‌ಇಂಡೀಸ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಕೊಂಡಿತು. ವೆಸ್ಟ್‌ಇಂಡೀಸ್ ತಂಡ ಮೊದಲಿನಂತೆ ಇಲ್ಲದಿರುವುದರಿಂದ ದೋನಿ ನಾಯಕತ್ವದ ಭಾರತ ತಂಡಕ್ಕೆ ಸಮಸ್ಯೆಗಳೇನೂ ಎದುರಾಗಲಿಲ್ಲ.

ಆದರೆ ಭಾರತವನ್ನು ಸದೆಬಡಿಯಲು ಕಾಯುತ್ತಿದ್ದ ಇಂಗ್ಲೆಂಡ್ ತನ್ನ ಗುರಿಯನ್ನು ಭರ್ಜರಿಯಾಗಿಯೇ ತಲುಪಿತು. ಭಾರತ ತಂಡ ಒಂದೇ ಒಂದು ಪಂದ್ಯವನ್ನೂ ಗೆಲ್ಲದೇ ವಾಪಸ್ಸಾಯಿತು. ಈಗ ವೆಸ್ಟ್‌ಇಂಡೀಸ್ ತಂಡ ಭಾರತ ಪ್ರವಾಸದಲ್ಲಿದೆ.

ಮುಗಿದಿರುವ ಎರಡೂ ಟೆಸ್ಟ್‌ಗಳಲ್ಲಿ ಭಾರತ ಜಯಭೇರಿ ಬಾರಿಸಿದೆ. ಅನಿಲ್ ಕುಂಬ್ಳೆ ಮತ್ತು ಹರಭಜನ್ ಸಿಂಗ್ ಜೋಡಿಯ ನಿರ್ಗಮನದ ನಂತರ ಪ್ರಗ್ಯಾನ್ ಓಝಾ ಮತ್ತು  ಆರ್. ಅಶ್ವಿನ್ ಭಾರತದ ಸ್ಪಿನ್ ದಾಳಿಗೆ ಬಲ ತಂದುಕೊಟ್ಟಿದ್ದಾರೆ.

ಅನಿಲ್ ನಿವೃತ್ತರಾಗಿದ್ದಾರೆ. ಆದರೆ ಹರಭಜನ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಆರ್. ಅಶ್ವಿನ್ ಅವರ ಯಶಸ್ಸು ಹರಭಜನ್ ಅವರ ತಂಡಕ್ಕೆ ಮರಳುವ ಯತ್ನವನ್ನು ಪಂದ್ಯದಿಂದ ಪಂದ್ಯಕ್ಕೆ ವಿಫಲಗೊಳಿಸುತ್ತಿದೆ. ದೋನಿಗೆ ತಮ್ಮ ನೆಚ್ಚಿನ ಆಫ್ ಸ್ಪಿನ್ನರ್ ಸಹಾಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ!

ಪ್ರಸನ್ನ, ಚಂದ್ರಶೇಖರ್, ಬಿಷನ್ ಸಿಂಗ್ ಬೇಡಿ ಮತ್ತು ವೆಂಕಟರಾಘವನ್ ಆಡುವಾಗ ಮಧ್ಯಮ ವೇಗದ ಬೌಲರುಗಳು ನಾಮಕಾವಾಸ್ತೆ ಎಂಬಂತೆ ಇದ್ದರು.

ಒಮ್ಮೆ ವಿಕೆಟ್‌ಕೀಪರುಗಳಾದ ಬುಧಿ ಕುಂದರನ್ ಮತ್ತು ಫರೂಕ್ ಎಂಜಿನಿಯರ್ ಅವರಿಬ್ಬರೂ ತಂಡದಲ್ಲಿದ್ದಾಗ ನಾಯಕ ಪಟೌಡಿ ಚೆಂಡನ್ನು ಕುಂದರನ್ ಕೈಗೆ ಕೊಟ್ಟು, `ಏನು ಬೌಲ್ ಮಾಡುತ್ತೀರಿ~ ಎಂದು ಕೇಳಿದರು. ಆಗ ಕುಂದರನ್, `ನನಗೂ ಗೊತ್ತಿಲ್ಲ, ಈಗ ಬೌಲ್ ಮಾಡಿ ನೋಡಬೇಕಷ್ಟೇ~ ಎಂದು ಉತ್ತರಿಸಿದ್ದರು.

ಸ್ಪಿನ್ನರುಗಳನ್ನು ಮೂರ‌್ನಾಲ್ಕು ಓವರಗಳಾಗುವಷ್ಟರಲ್ಲಿ ದಾಳಿಗೆ ಇಳಿಸಲಾಗುತ್ತಿತ್ತು. ಚೆಂಡಿನ ಹೊಳಪನ್ನು ತೆಗೆಯಲು ಫೀಲ್ಡರುಗಳು ಚೆಂಡನ್ನು ಬೌಲರುಗಳ ಕಡೆಗೆ ಉರುಳಿಸುತ್ತಿದ್ದರು. ಈಗ ನಾಲ್ಕು ಮಂದಿ ಸ್ಪಿನ್ನರುಗಳನ್ನು ಆಡಿಸುವ ಅಗತ್ಯ ಬೀಳುತ್ತಿಲ್ಲ.

ಮೂವರು ಮಧ್ಯಮ ವೇಗದ ಬೌಲರುಗಳು ಇದ್ದೇ ಇರುತ್ತಾರೆ. ಇಬ್ಬರು ಸ್ಪಿನ್ನರುಗಳಿಗೆ ಮಾತ್ರ ಅವಕಾಶ ಸಿಗುತ್ತಿದೆ. ಹರಭಜನ್ ಸಿಂಗ್ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಉಮೇಶ್ ಯಾದವ್ ಎಂಬ ಹೊಸ ಮಧ್ಯಮ ವೇಗದ ಬೌಲರ್ ಉತ್ತಮ ಭರವಸೆ ಮೂಡಿಸಿದ್ದಾರೆ. ಜಹೀರ್ ಖಾನ್ ಆದಷ್ಟು ಬೇಗ ತಮ್ಮ ದೈಹಿಕ ತೊಂದರೆಗಳಿಂದ ಹೊರಬರದಿದ್ದರೆ ಅವರಿಗೂ ತಂಡದೊಳಗೆ ವಾಪಸ್ಸು ಬರುವುದು ಕಷ್ಟವಾಗಬಹುದು.

ವೆಸ್ಟ್‌ಇಂಡೀಸ್ ವಿರುದ್ಧದ ಗೆಲುವು, ದೋನಿಪಡೆ ಇಂಗ್ಲೆಂಡ್‌ನಲ್ಲಿ ಅನುಭವಿಸಿದ ಅವಮಾನವನ್ನು ಅಥವಾ ಹಿನ್ನಡೆಯನ್ನು ನಿಧಾನವಾಗಿ ಮರೆಸುತ್ತಿದೆ. ಸೋಲು ಅವಮಾನವಲ್ಲವಾದರೂ ಸೋಲಿನ ರೀತಿ ಆಟಗಾರರ ಮನಸ್ಸಿನ ಮೇಲೆ ಆಳವಾದ ಗಾಯವನ್ನು ಮಾಡುತ್ತದೆ.

ದೋನಿ ಅದನ್ನು ಹೇಳದಿದ್ದರೂ ಅವರ ಮುಖದ ಮೇಲಿನ ಗೆರೆಗಳು ಅವರ ನಿರಾಶೆಯನ್ನು ಹೇಳುತ್ತವೆ. ವಿಶ್ವ ಕಪ್ ಗೆದ್ದ ಕೆಲವೇ ತಿಂಗಳಲ್ಲಿ ಕೆಳಗೆ ಬಿದ್ದು ಬಡಿಸಿಕೊಳ್ಳುವುದು ರಾತ್ರೋರಾತ್ರಿ ಮರೆಯುವಂಥ ವಿಷಯವೇನಲ್ಲ.

ದೋನಿ ವಿಂಡೀಸ್ ವಿರುದ್ಧದ ಸರಣಿ ಗೆಲ್ಲುವುದು, ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕೆ ಬಹಳ ಅನುಕೂಲಕರ. ಯಾಕೆಂದರೆ ಆಸ್ಟ್ರೇಲಿಯನ್ನರೂ ಭಾರತವನ್ನು ಬಗ್ಗುಬಡಿಯಲು ಕಾಯುತ್ತಿದ್ದಾರೆ. ಅವರಿಗೂ ಭಾರತದಲ್ಲಿ ವಿಶ್ವ ಕಪ್ ಗೆಲ್ಲಲಾಗಲಿಲ್ಲ.

ಕ್ವಾರ್ಟರ್‌ಫೈನಲ್‌ನಲ್ಲೇ ಭಾರತಕ್ಕೆ ಶರಣಾಗಬೇಕಾಯಿತು. ಸದ್ಯಕ್ಕೆ ದಕ್ಷಿಣ ಆಫ್ರಿಕ ಪ್ರವಾಸದಲ್ಲಿರುವ ಆಸ್ಟ್ರೇಲಿಯ ಕೆಲವು ದಿನಗಳ ಹಿಂದೆ ನಡೆದ ಟೆಸ್ಟ್ ಪಂದ್ಯದಲ್ಲಿ ಕೇವಲ 47 ರನ್ನುಗಳಿಗೆ ಉರುಳಿದ್ದು ತೀರ ಅನಿರೀಕ್ಷಿತ ಹಾಗೂ ಆಶ್ಚರ್ಯಕರವಾಗಿತ್ತು.

ಆಸ್ಟ್ರೇಲಿಯ ತಂಡ   ವೆಸ್ಟ್‌ಇಂಡೀಸ್ ತಂಡದಷ್ಟು ದುರ್ಬಲವಾಗಿಲ್ಲವಾದರೂ ಅದರ ಮೊದಲಿನ ಗೆಲುವಿನ ಓಟಕ್ಕೆ ತಡೆ ಬಿದ್ದಿರುವುದಂತೂ ನಿಜ.

ಆದರೆ ವೆಸ್ಟ್‌ಇಂಡೀಸ್ ತಂಡ ಮಾತ್ರ ಬಹಳ ಹಿಂದೆ ಬಿದ್ದಿದೆ. ಗ್ಯಾರಿ ಸೋಬರ್ಸ್, ಕ್ಲೈವ್    ಲಾಯ್ಡ, ವಿವಿಯನ್ ರಿಚರ್ಡ್ಸ್, ಬ್ರಯಾನ್ ಲಾರಾ ಅವರಂಥ ಆಟಗಾರರು ಇಲ್ಲದಿದ್ದರೂ ವಿಂಡೀಸ್ ನಡುಗಡ್ಡೆಗಳಲ್ಲಿ ಪ್ರತಿಭಾವಂತ ಆಟಗಾರರಿಗೇನೂ ಕೊರತೆ ಇಲ್ಲ ಎಂದು ಹೇಳಲಾಗುತ್ತಿತ್ತು.

ಆದರೆ ಆ ಮಾತು ನಿಜವಾಗುತ್ತಿಲ್ಲ. ಒಂದು ಕಾಲದಲ್ಲಿ ಎಲ್ಲರಿಗೂ ದುಃಸ್ವಪ್ನವಾಗಿದ್ದ ವಿಂಡೀಸ್ ವೇಗದ ದಾಳಿ ಮೊನಚು ಕಳೆದುಕೊಂಡಿದೆ. ಪಂದ್ಯ ಗೆದ್ದುಕೊಡಬಲ್ಲ ವೇಗದ ಬೌಲರುಗಳು ಹಾಗೂ ಬ್ಯಾಟ್ಸಮನ್ನರೂ ಇಲ್ಲವೇ ಇಲ್ಲ.

ಬ್ರಯಾನ್ ಲಾರಾ ಮಾಡಿರುವ ಕೆಲವು ದಾಖಲೆಗಳನ್ನು ಸಚಿನ್ ತೆಂಡೂಲ್ಕರ್ ಅವರಿಗೂ ಮುರಿಯಲು ಸಾಧ್ಯವಿಲ್ಲ. ಕಳೆದ ಎರಡು ದಶಕಗಳಲ್ಲಿ ಲಾರಾ ಅವರಷ್ಟು ಸೊಗಸಾಗಿ ಬ್ಯಾಟ್ ಮಾಡುವ ಬ್ಯಾಟ್ಸಮನ್ ಮತ್ತೊಬ್ಬನಿರಲಿಲ್ಲ.

ಆದರೆ ಅವರ ಕಾಲದಲ್ಲೇ ತಂಡ ಕುಸಿಯತೊಡಗಿತು. ಆಟಗಾರರು ಮತ್ತು ಕ್ರಿಕೆಟ್ ಮಂಡಳಿ ನಡುವಣ ಘರ್ಷಣೆ ಮುಗಿಯುವಂತೆ ಕಾಣುವುದಿಲ್ಲ. ಈ ತಿಕ್ಕಾಟದಿಂದಾಗಿಯೇ ಕ್ರಿಸ್ ಗೇಯ್ಲನಂತಹ ಪ್ರಚಂಡ ಬ್ಯಾಟ್ಸಮನ್ ತಂಡದಲ್ಲಿಲ್ಲ.

ಇಲ್ಲಿ ಆಟಗಾರರ ತಪ್ಪೂ ಸಾಕಷ್ಟಿದೆ. ಆದರೆ ಮನರಂಜನೆಗೆ ಇನ್ನೊಂದು ಹೆಸರಾಗಿದ್ದ     ವೆಸ್ಟ್‌ಇಂಡೀಸ್ ತಂಡ ಈಗ ಎಲ್ಲರ ಕೈಲಿ ಸೋಲುತ್ತಿರುವುದು ಕ್ರಿಕೆಟ್‌ನ ದೃಷ್ಟಿಯಿಂದ ಬೇಸರ ಮೂಡಿಸುತ್ತದೆ.
 
ಯಾವುದೇ ಕ್ರೀಡೆಯಲ್ಲಿ ಸಮಬಲ ಹೋರಾಟ ಇದ್ದಾಗಲೇ ಆಟ ರೋಚಕವಾಗಲು ಮತ್ತು ಅವರಲ್ಲಿ ಯಾರು ಉತ್ತಮರು ಎಂಬುದು ಕಂಡುಬರಲು ಸಾಧ್ಯ. ಏಕಪಕ್ಷೀಯವಾಗಿ ಆಟ ನಡೆದರೆ ಆಟಗಾರರ ಸಾಧನೆಗಳಿಗೂ ತೂಕ ಇರುವುದಿಲ್ಲ.

ಆದ್ದರಿಂದಲೇ ಸಚಿನ್ ಇಂಗ್ಲೆಂಡ್‌ನಲ್ಲಿ ತಮ್ಮ ನೂರನೇ ಶತಕ ಹೊಡೆದಿದ್ದರೆ ಅದಕ್ಕೆ ದೊಡ್ಡ ಬೆಲೆ ಬರುತ್ತಿತ್ತು. ಅವರು ಆ ದಾಖಲೆಗಾಗಿಯೇ ಟೆಸ್ಟ್‌ನಲ್ಲಿ ಆಡುತ್ತಿದ್ದಾರೆ. 22 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಅವರು ಮಾನಸಿಕವಾಗಿ ಗಟ್ಟಿಯಾಗೇ ಇದ್ದರೂ ಅವರ ಕಾಲುಗಳ ಬಲ ಕಡಿಮೆಯಾಗುತ್ತ ಹೋಗುತ್ತಿದೆ.

ಇನ್ನೆಷ್ಟು ದಿನ ಅವರು ಕಾಯಬಹುದು? ಗೊತ್ತಿಲ್ಲ. ಅವರು ಇನ್ನು ನಿವೃತ್ತಿಯಾಗಬೇಕೆಂದು ಕ್ರಿಕೆಟ್‌ಪ್ರೇಮಿಗಳಿಗೂ ಅನಿಸುತ್ತಿಲ್ಲ. ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್‌ನಲ್ಲಿ ಅದನ್ನವರು ಸಾಧಿಸಿದರೆ ಟೆಸ್ಟ್‌ಗೂ ವಿದಾಯ ಹೇಳಬಹುದು.

ಇಲ್ಲದಿದ್ದರೆ ಆಸ್ಟ್ರೇಲಿಯ ಪ್ರವಾಸಕ್ಕೆ ಅವರು ಹೋಗಬಹುದು. ಅವರನ್ನು ತಂಡದಿಂದ ತೆಗೆಯುವ ಸಾಧ್ಯತೆಗಳಂತೂ ಇಲ್ಲ. ಅಂದರೆ ಆ ಧೈರ್ಯವನ್ನು ಆಯ್ಕೆದಾರರು ಹಾಗೂ ನಾಯಕ ದೋನಿ ತೋರಲಿಕ್ಕಿಲ್ಲ.

ಆಸ್ಟ್ರೇಲಿಯ ಕ್ರಿಕೆಟ್‌ನ ಪಿತಾಮಹ ಎನಿಸಿಕೊಂಡಿದ್ದ ಡಾನ್ ಬ್ರಾಡ್ಮನ್ ತಮ್ಮ ಕೊನೆಯ ಟೆಸ್ಟ್ ಇನಿಂಗ್ಸ್‌ನಲ್ಲಿ ಕೇವಲ ನಾಲ್ಕು ರನ್ ಮಾಡಿದ್ದರೆ ಅವರ ಟೆಸ್ಟ್ ಸರಾಸರಿ ಪರಿಪೂರ್ಣ ನೂರು ಆಗುತ್ತಿತ್ತು. ಆದರೆ ಬ್ರಾಡ್ಮನ್ ತಮ್ಮ ನಿವೃತ್ತಿ ನಿರ್ಧಾರವನ್ನು ಬದಲಿಸಲಿಲ್ಲ.
ಇನ್ನೊಂದು  ಟೆಸ್ಟ್‌ಗಾಗಿ ಕಾಯಲಿಲ್ಲ. ಈಗ ಸಚಿನ್ ಕೂಡ ಬಹಳ ದಿನ ಕಾಯಬಾರದು.

ನೂರಲ್ಲ ಅವರ `99~ ಸಾಧನೆಯನ್ನೇ ಮುರಿಯಲು ಮತ್ತೊಬ್ಬ ಸಚಿನ್ ಹುಟ್ಟಿ ಬರಬೇಕಾಗುತ್ತದೆ. ಆದರೆ ಸಚಿನ್ ದಾಖಲೆಗಾಗಿ ಕ್ರಿಕೆಟ್ ಜಗತ್ತು ಕಾಯುತ್ತಿದೆ. ಅವರು ಅದನ್ನು ಆಸ್ಟ್ರೇಲಿಯ ಪ್ರವಾಸದಲ್ಲಿ ಗಳಿಸಿದರೆ, ಅವರ ಆಟವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಡಾನ್ ಬ್ರಾಡ್ಮನ್ ಅವರ ಆತ್ಮವೂ ಖುಷಿಪಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT