ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಕೈಗಾರಿಕೆಗಳ ಬೌದ್ಧಿಕ ಆಸ್ತಿ ಹಕ್ಕು ಪ್ರಯೋಜನ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ
`ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಎಸ್‌ಇ) ಬೌದ್ಧಿಕ ಆಸ್ತಿ ಹಕ್ಕು' ಕುರಿತ ವಿಚಾರಗೋಷ್ಠಿಯಲ್ಲಿ ಮುಖ್ಯ ಭಾಷಣಕಾರನಾಗಿ ಮಾತನಾಡಲು ನನಗೆ ಇತ್ತೀಚೆಗೆ ಆಹ್ವಾನವೊಂದು ಬಂದಿತ್ತು.  `ನಿಮ್ಮ ವಹಿವಾಟಿನಲ್ಲಿ ಎಂದಾದರೂ ನಿಮಗೆ, ನೀವೆ ಹೊಸದಾಗಿ ಏನನ್ನಾದರೂ ಕಂಡು ಹಿಡಿದು ಅದನ್ನು ಕಾರ್ಯಗತಗೊಳಿಸಿದ `ಯುರೇಕಾ' ಅನುಭವ ಆಗಿದೆಯೇ ಮತ್ತು ಅಂತಹ ಹೊಸ ಸಂಗತಿ ಅಥವಾ ಸಂಶೋಧನೆಯನ್ನು ನಿಮ್ಮ ಹಿತಕ್ಕಾಗಿ ಸಂರಕ್ಷಿಸಿಕೊಳ್ಳಬೇಕೆಂಬ ಭಾವನೆ ನಿಮಗೆ ಯಾವತ್ತಾದರೂ ಬಂದಿದೆಯೇ?' ಎನ್ನುವ ಪ್ರಶ್ನೆ ಕೇಳುವುದರೊಂದಿಗೆ ನಾನು ನನ್ನ ಭಾಷಣ ಆರಂಭಿಸಿದ್ದೆ.
 
ಉದ್ದಿಮೆ ವಹಿವಾಟಿನಲ್ಲಿ ಹೊಸತನ ಕಂಡುಕೊಂಡ ಬಗ್ಗೆ ಉತ್ಸಾಹದ ಪ್ರತಿಕ್ರಿಯೆ ಸಿಕ್ಕಿತಾದರೂ, ಅದನ್ನು ರಕ್ಷಿಸಿಕೊಳ್ಳುವುದರ ಬಗ್ಗೆ ಬಹುಸಂಖ್ಯಾತರು ನಿರಾಸಕ್ತರಾಗಿರುವುದು, ಆ ಬಗ್ಗೆ ಅವರಲ್ಲಿ ತಿಳಿವಳಿಕೆಯೇ ಇಲ್ಲದಿರುವುದು ಅವರ ಮಾತಿನಿಂದ ತಿಳಿದು ಬಂದಿತು. ಒಬ್ಬರು ಮಾತ್ರ ನನ್ನ ಪ್ರಶ್ನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಇದು ನಮ್ಮ `ಎಸ್‌ಎಂಎಸ್‌ಇ' ರಂಗದಲ್ಲಿನ `ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿ) ಕುರಿತು ಇರುವ ತಿಳಿವಳಿಕೆ ಕೊರತೆಗೆ ಕನ್ನಡಿ ಹಿಡಿಯುತ್ತದೆ.
 
ದೇಶದಲ್ಲಿ `ಎಸ್‌ಎಂಎಸ್‌ಇ'ಗಳ ವ್ಯಾಪಕ ಜಾಲವೇ ಇದೆ. ಅಂದಾಜು 2 ರಿಂದ 3 ಕೋಟಿಗಳಷ್ಟು ಸಣ್ಣ ಕೈಗಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ದೇಶದ ಒಟ್ಟಾರೆ ರಫ್ತು ವಹಿವಾಟಿಗೆ ಶೇ 40ರಷ್ಟು ಮತ್ತು ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ 45ರಷ್ಟು ಕೊಡುಗೆಯನ್ನು ಈ ವಲಯ ನೀಡುತ್ತದೆ. ಅಂದಾಜು 6 ಕೋಟಿ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿರುವ ಈ ವಲಯವು 10 ಸಾವಿರದಷ್ಟು ವೈವಿಧ್ಯಮಯ ಉತ್ಪನ್ನಗಳನ್ನೂ ತಯಾರಿಸುತ್ತಿದೆ.
 
ಸಣ್ಣ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ದೇಶಿಯ ತಂತ್ರಜ್ಞಾನವನ್ನೇ ಇವು ಬಹುವಾಗಿ ನೆಚ್ಚಿಕೊಂಡಿವೆ.  ಬಹುತೇಕ `ಎಸ್‌ಎಂಎಸ್‌ಇ' ಘಟಕಗಳನ್ನು ವ್ಯಕ್ತಿಗಳೇ ಅನೌಪಚಾರಿಕ ಸಾಂಸ್ಥಿಕ ಸ್ವರೂಪದೊಂದಿಗೆ ನಿರ್ವಹಿಸುತ್ತಾರೆ. ತಂತ್ರಜ್ಞಾನ ರಂಗದಲ್ಲಿನ ಬದಲಾವಣೆ, ಹೊಸ ಹೊಸ ಸಂಶೋಧನೆಗಳ ಬಗ್ಗೆ ಇವರಿಗೆ ಹೆಚ್ಚಿನ ಅರಿವು ಇರಲಾರದು. ಇವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಅಡಚಣೆಗಳೂ ಇರುವುದಿಲ್ಲ.  ಸರಕು - ಉತ್ಪನ್ನಗಳ ತಯಾರಿಕಾ ವಿಧಾನದಲ್ಲಿ ಸುಧಾರಣೆ ತರುವ ಮತ್ತು ಸಂಶೋಧನೆ ಕೈಗೊಳ್ಳುವ  ಅನಿವಾರ್ಯತೆ ಮತ್ತು ಆಸಕ್ತಿಯೂ ಅವರಲ್ಲಿ ಕಂಡು ಬರಲಾರದು. ಹೀಗಾಗಿ `ಬೌದ್ಧಿಕ ಆಸ್ತಿ ಹಕ್ಕು'ಗಳ ಬಗ್ಗೆ ಅವರಲ್ಲಿ  ತಿಳಿವಳಿಕೆಯೇ ಕಂಡು ಬರುವುದಿಲ್ಲ.

ಇಂತಹ ಹಕ್ಕುಗಳ ಬಗ್ಗೆ, ಅವುಗಳಿಂದ ದೊರೆಯುವ ಪ್ರಯೋಜನಗಳ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿರುವುದಿಲ್ಲ.  ತಮ್ಮ ಸೀಮಿತ ಪ್ರಮಾಣದ ವಹಿವಾಟಿನಲ್ಲಿಯೇ ಅವರು ಸಂತೃಪ್ತಿ ಕಾಣುತ್ತಾರೆ. ಉದ್ದಿಮೆ ವಿಸ್ತರಿಸುವ, ಹೊಸತನ ಅಳವಡಿಸಿಕೊಳ್ಳುವ, ಹೊಸ, ಹೊಸ ವಿಧಾನಗಳನ್ನು ರಕ್ಷಿಸಿಕೊಳ್ಳುವ ಜಾಣತನವೂ ಅವರಲ್ಲಿ ಕಂಡು ಬರಲಾರದು.
 
ಮಾನವನ ಬುದ್ಧಿ ಶಕ್ತಿ ಅದರಲ್ಲೂ ವಿಶೇಷವಾಗಿ ಸಂಶೋಧನೆಗಳು, ಸಾಹಿತ್ಯ ಕೃತಿಗಳು, ವಹಿವಾಟಿನಲ್ಲಿ ಬಳಸುವ ವಿಶಿಷ್ಟ ಸಂಕೇತ, ವಿನ್ಯಾಸಗಳು `ಬೌದ್ಧಿಕ ಆಸ್ತಿ ಹಕ್ಕು'ಗಳಾಗಿರುತ್ತವೆ.  ಹಕ್ಕು ಸ್ವಾಮ್ಯ (ಪೇಟೆಂಟ್), ವ್ಯಾಪಾರ ಚಿಹ್ನೆ, ವ್ಯಾಪಾರ ರಹಸ್ಯ, ಕೈಗಾರಿಕಾ ವಿನ್ಯಾಸ, ಉತ್ಪನ್ನಗಳ ಮಾದರಿಗಳು ಮತ್ತು ಭೌಗೋಲಿಕ ವೈಶಿಷ್ಟ್ಯ ಮುಂತಾದವು`ಎಸ್‌ಎಂಎಸ್‌ಇ'ಗಳ ಪಾಲಿಗೆ ಬೌದ್ಧಿಕ ಆಸ್ತಿ ಹಕ್ಕುಗಳಾಗಿರುತ್ತವೆ. 
`ಬೌದ್ಧಿಕ ಆಸ್ತಿ'ಗೆ ಸಂಬಂಧಿಸಿದಂತೆ ಪ್ರತಿಯೊಂದು ದೇಶವು ತನ್ನದೇ ಆದ ಕಾನೂನು ಕಟ್ಟಲೆಗಳನ್ನು ಹೊಂದಿದ್ದರೂ ಅವುಗಳು `ವಿಶ್ವ ಬೌದ್ಧಿಕ ಆಸ್ತಿ ಹಕ್ಕು ಸಂಘಟನೆ (ಡಬ್ಲ್ಯುಐಪಿಒ) ವ್ಯಾಪ್ತಿಗೆ ಒಳಪಟ್ಟಿರುತ್ತವೆ.1883ರಲ್ಲಿಯೇ ನಡೆದಿದ್ದ `ಪ್ಯಾರಿಸ್ ಸಮ್ಮೇಳನ'ವು `ಬೌದ್ಧಿಕ ಆಸ್ತಿ ಹಕ್ಕು'ಗಳ ಮಹತ್ವ ಗುರುತಿಸಿ ಅವುಗಳಿಗೆ ಸಮ್ಮತಿ ನೀಡಿತ್ತು. ಇಂತಹ ಸೂಕ್ಷ್ಮ ವಿಷಯವನ್ನು  ಸಮರ್ಥವಾಗಿ ನಿಭಾಯಿಸಲು ಭಾರತವು ಕೂಡ  ಹಲವಾರು ಕಾಯ್ದೆ, ನಿಯಮಗಳನ್ನು ರೂಪಿಸಿದೆ. ಇಂತಹ `ಬೌದ್ಧಿಕ ಆಸ್ತಿ ಹಕ್ಕು'ಗಳನ್ನು ಪಡೆಯುವ ಮತ್ತು ಅವುಗಳನ್ನು ಸಂರಕ್ಷಿಸುವ ವಿಧಿ ವಿಧಾನಗಳ ಬಗ್ಗೆ ಅನೇಕ ವಿವರಗಳನ್ನು ಈ ನಿಯಮಗಳು ಒಳಗೊಂಡಿವೆ.
 
`ಬೌದ್ಧಿಕ ಆಸ್ತಿ ಹಕ್ಕು' ಸೇವೆ ಒದಗಿಸುವುದಕ್ಕೆ ಪೂರಕವಾಗಿ ಪೂರ್ಣ ಪ್ರಮಾಣದ ಕಾನೂನು ನೆರವು ವ್ಯವಸ್ಥೆಯನ್ನೂ ರೂಪಿಸಲಾಗಿದೆ. ದೇಶದ `ಎಸ್‌ಎಂಎಸ್‌ಇ' ರಂಗವು `ಬೌದ್ಧಿಕ ಆಸ್ತಿ ಹಕ್ಕು'ಗಳ ಮಹತ್ವವನ್ನು ಸರಿಯಾಗಿ ಗ್ರಹಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ.
 
`ಎಸ್‌ಎಂಎಸ್‌ಇ'ಗಳು ತಮ್ಮ `ಬೌದ್ಧಿಕ ಆಸ್ತಿ ಹಕ್ಕು'ಗಳನ್ನು ರಕ್ಷಿಸಿಕೊಳ್ಳುವುದರಿಂದ ಅನೇಕ ಆರ್ಥಿಕ ಉಪ ಪ್ರಯೋಜನಗಳನ್ನೂ ಪಡೆಯಬಹುದು. ಇದನ್ನು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವ್ಯಾಪಕವಾಗಿ ಕಾಣಬಹುದು. ಮುಂದುವರಿದ ದೇಶಗಳಲ್ಲಿನ ಯಾವುದೇ ಕಾರ್ಖಾನೆ ಅಥವಾ ತಯಾರಿಕಾ ಘಟಕಕ್ಕೆ ಭೇಟಿ ಕೊಡುವವರು ಕೂಡ, ಸ್ಥಾವರದಲ್ಲಿನ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸದ ಘೋಷಣೆಗೆ ಸಹಿ ಹಾಕಬೇಕಾಗುತ್ತದೆ. ಇಂತಹ ಕಟ್ಟುನಿಟ್ಟಿನ ಕ್ರಮಗಳಿಂದ ಯಾವುದೇ ಬಗೆಯ `ಬೌದ್ಧಿಕ ಆಸ್ತಿ' ಕದಿಯುವ, ಸೋರಿಕೆ ಯಾಗುವ ಸಾಧ್ಯತೆಗಳೇ ಅಲ್ಲಿ ಕಂಡು ಬರುವುದಿಲ್ಲ.
 
`ಬೌದ್ಧಿಕ ಆಸ್ತಿ ಹಕ್ಕು' ರಕ್ಷಣೆಯಿಂದ ತಮಗೆ ಹಲವು ಬಗೆಯಲ್ಲಿ ಪ್ರಯೋಜನಗಳು ಲಭಿಸಲಿವೆ ಎನ್ನುವುದನ್ನೂ ಉದ್ಯಮಿಗಳು ತಿಳಿದುಕೊಂಡಿರಬೇಕು. ಸ್ಪರ್ಧೆ ಎದುರಿಸಲು ಏಕಸ್ವಾಮ್ಯ, ಲೈಸನ್ಸ್ ತಂತ್ರಜ್ಞಾನ, ಹೂಡಿಕೆದಾರರು ಮತ್ತು ಸಾಲಗಾರರನ್ನು ಆಕರ್ಷಿಸಲು, ವಿಲೀನ- ಸ್ವಾಧೀನದ ಮೌಲ್ಯಮಾಪನ ಹೆಚ್ಚಿಸಲು ಮತ್ತು ವಹಿವಾಟಿನ ಒಟ್ಟಾರೆ ವರ್ಚಸ್ಸು ವೃದ್ಧಿಸಲೂ `ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆ'ಯಿಂದ ಸಾಧ್ಯವಾಗುತ್ತದೆ.
 
ಕೈಗಾರಿಕಾ ಘಟಕವೊಂದಕ್ಕೆ ಒಂದೊಮ್ಮೆ ಇಂತಹ ಪ್ರಯೋಜನಗಳ ಬಗ್ಗೆ ಮನವರಿಕೆಯಾದರೆ, ವಹಿವಾಟಿನ ಒಟ್ಟಾರೆ ಪ್ರಕ್ರಿಯೆಯಲ್ಲಿ ಸುಧಾರಣೆಗೆ   ಚಾಲನೆ ಸಿಗುವುದಲ್ಲದೇ ಸಂಶೋಧನೆಗಳಿಗೂ ಸೂಕ್ತ ಪರಿಸರ ನಿರ್ಮಾಣಗೊಳ್ಳುತ್ತದೆ. ಇದರಿಂದ ಕೈಗಾರಿಕಾ ಘಟಕದ ಸಾಂಸ್ಥಿಕ ಅಭಿವೃದ್ಧಿಯ ಚಿತ್ರಣವೂ ಬದಲಾಗುತ್ತದೆ.
 
ಇಲ್ಲಿ ಟೊಯೊಟಾ ಮೋಟಾರ್ ಕಾರ್ ಕಂಪನಿಯ ಯಶೋಗಾಥೆಯನ್ನು ಉಲ್ಲೇಖಿಸಲೇಬೇಕು. ಸಂಸ್ಥೆಯು ಅಮೆರಿಕದಲ್ಲಿ ತನ್ನ `ಲೆಕ್ಸಸ್' ಮಾದರಿಯ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂದರ್ಭದಲ್ಲಿ 1000 ಪೇಟೆಂಟ್‌ಗಳಿಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ 400ಕ್ಕೂ ಹೆಚ್ಚು ಪೇಟೆಂಟ್‌ಗಳು ದೊರೆತಿದ್ದವು. ಇದರಿಂದ ಸಂಸ್ಥೆಗೆ ಸಾಕಷ್ಟು ಪ್ರಯೋಜನಗಳು ಲಭಿಸಿದವು. `ಲೆಕ್ಸಸ್' ವಾಹನವು ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆಯಿತು.

ಕಂಪನಿಗೆ ದೊರೆತ ಆರ್ಥಿಕ ಉಪ ಫಲಗಳಿಗಂತೂ ಲೆಕ್ಕವೇ ಇರಲಿಲ್ಲ. ಸಂಸ್ಥೆಯ ಬಳಿ ಶೇಖರಣೆಯಾದ ಅಗಾಧ ಪ್ರಮಾಣದ ಸಂಪತ್ತು ಕಂಡು ಅಮೆರಿಕದ ಬಂಡವಾಳ ಪೇಟೆಯು, ಈ  ಸಂಸ್ಥೆಯನ್ನು `ಬ್ಯಾಂಕ್ ಆಫ್ ಟೊಯೊಟಾ' ಎನ್ನುವ ಅನ್ವರ್ಥನಾಮದಿಂದಲೇ ಕರೆಯಲು ಆರಂಭಿಸಿತು. ದೀರ್ಘಕಾಲದವರೆಗೆ  `ಲೆಕ್ಸಸ್', ಯಾವುದೇ ಸ್ಪರ್ಧೆ ಇಲ್ಲದೇ ಅತ್ಯಂತ ಜನಪ್ರಿಯ ಮತ್ತು ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗುವ ವಾಹನವಾಗಿ ಗಮನಸೆಳೆಯಿತು.
 
ದೇಶದ `ಎಸ್‌ಎಂಎಸ್‌ಇ'ಗಳಿಗೆ ಹೆಚ್ಚುವರಿ ರಕ್ಷಣೆಯೇನೂ ಇಲ್ಲ. ಜಾಗತೀಕರಣವು ಹೊಸ ಸವಾಲುಗಳನ್ನು ಒಡ್ಡಿದ್ದು, ವಿಶ್ವದಾದ್ಯಂತ ಸ್ಪರ್ಧಿಸಲು ಅವಕಾಶಗಳನ್ನೂ ಒದಗಿಸಿದೆ.  ಹಲವಾರು `ಎಸ್‌ಎಂಎಸ್‌ಇ'ಗಳು ತಂತ್ರಜ್ಞಾನ ಸಂಬಂಧಿ ವಹಿವಾಟು ನಡೆಸುತ್ತಿದ್ದು, ಸುಧಾರಣೆ ಮತ್ತು ಸಂಶೋಧನಾ ಕೆಲಸಗಳಿಗೆ ನಿರಂತರವಾಗಿ ಗಮನ ನೀಡಬೇಕಾಗುತ್ತದೆ.
 
ನಮ್ಮಲ್ಲಿನ ಪ್ರತಿಭಾನ್ವಿತರ ಸಂಖ್ಯೆ ಮತ್ತು ಸ್ಪರ್ಧಾತ್ಮಕ ವೆಚ್ಚದ ಕಾರಣಗಳಿಗೆ  ಸಂಶೋಧನಾ ಕೇಂದ್ರಗಳನ್ನು ಆರಂಭಿಸಲು ಭಾರತವು ಅತ್ಯುತ್ತಮ ತಾಣ ಎಂದೇ ವಿಶ್ವದಾದ್ಯಂತ ಪರಿಗಣಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಿ `ಎಸ್‌ಎಂಎಸ್‌ಇ'ಗಳು ಬೌದ್ಧಿಕ ಆಸ್ತಿ ಹಕ್ಕಿನ ಮಹತ್ವ ಪರಿಗಣಿಸಿ ತಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕಾಗಿದೆ.
 
`ಬೌದ್ಧಿಕ ಆಸ್ತಿ ಹಕ್ಕು' ಪಡೆಯುವುದು ತುಂಬ ತೊಡಕಿನ, ದುಬಾರಿ ಮತ್ತು ವಿಳಂಬದ ಪ್ರಕ್ರಿಯೆ ಎಂದು ಅನೇಕರು ಭಾವಿಸಿದ್ದಾರೆ. ಇಂತಹ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವ, ಅನುಮಾನಗಳನ್ನು ದೂರ ಮಾಡಲು ಕೇಂದ್ರ ಸರ್ಕಾರವು ಗಮನ ನೀಡಬೇಕಾಗಿದೆ. `ಎಸ್‌ಎಂಎಸ್‌ಇ'ಗಳಿಗೆ ವಿಶೇಷ ಹಣಕಾಸು ಉತ್ತೇಜನ / ನೆರವು ನೀಡುವುದರ ಬಗ್ಗೆಯೂ ಕೇಂದ್ರ ಸರ್ಕಾರ ಆಲೋಚಿಸಬೇಕಾಗಿದೆ. `ಎಸ್‌ಎಂಎಸ್‌ಇ'ಗಳಿಗೆ ಉತ್ತೇಜನ ನೀಡಲು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಆರಂಭಿಸಲು ಸದ್ಯದ ನಿಯಮಗಳನ್ನು ಸರಳೀಕರಿಸಬೇಕಾಗಿದೆ. `ಎಸ್‌ಎಂಎಸ್‌ಇ'ಗಳ ಬೌದ್ಧಿಕ ಆಸ್ತಿ ಹಕ್ಕು ರಕ್ಷಿಸಲು ಮತ್ತು ತಂತ್ರಜ್ಞಾನ ರಂಗದಲ್ಲಿನ ಪ್ರಗತಿ ಮೇಲೆ ನಿಗಾ ಇಡಲು ಸರ್ಕಾರ ವಿಶೇಷ ಕಾರ್ಯಪಡೆಯನ್ನೂ ರಚಿಸಬೇಕು.
 
ಬೌದ್ಧಿಕ ಆಸ್ತಿ ಹಕ್ಕುಗಳ ವಿವಿಧ ಪ್ರಯೋಜನಗಳ ಬಗ್ಗೆ `ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ'ಗಳಲ್ಲಿ ಅರಿವು ಮೂಡಿಸಲು ಕೇಂದ್ರ ಸರ್ಕಾರವು ಕೊನೆಗೂ ಕಾರ್ಯಪ್ರವೃತ್ತವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಉದ್ದೇಶಕ್ಕೆ ಬಜೆಟ್‌ನಲ್ಲಿ ರೂ 55 ಕೋಟಿಗಳನ್ನು ತೆಗೆದು ಇರಿಸಿದೆ. `ಬೌದ್ಧಿಕ ಆಸ್ತಿ ಹಕ್ಕಿ'ನ ವಿವಿಧ ಪ್ರಯೋಜನಗಳನ್ನು ಪಡೆಯುವ ನಿಟ್ಟಿನಲ್ಲಿ ದೇಶಿ `ಎಸ್‌ಎಂಎಸ್‌ಇ' ರಂಗವು ಸುದೀರ್ಘ ಹಾದಿ ಕ್ರಮಿಸಬೇಕಾಗಿದೆ. ಸರ್ಕಾರದ ಉತ್ತೇಜನ ಮತ್ತು ಆರ್ಥಿಕ ಲಾಭಗಳ ಕಾರಣಕ್ಕೆ `ಎಸ್‌ಎಂಎಸ್‌ಇ'ಗಳು ಈ ಮಾರ್ಗದಲ್ಲಿ ತ್ವರಿತವಾಗಿ ಸಾಗಿ ದೊರೆಯುವ ಲಾಭಗಳನ್ನೆಲ್ಲ ಬಾಚಿಕೊಳ್ಳಲಿ ಎಂದೇ ಆಶಿಸೋಣ.
(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT