ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಹೂಡಿಕೆದಾರರಿಗೆ ಎಚ್ಚರಿಕೆ!

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸರಸ್ವತಿ ಮೂಲಕ ಬಂದಂತಹ ಲಕ್ಷ್ಮಿಯು ಶಾಶ್ವತ ಎಂದು ಹಲವು ವರ್ಷಗಳ ಹಿಂದೆ ಡಾ. ಸಿ.ಎನ್‌.ಆರ್‌. ರಾವ್‌ ಸಂದರ್ಶನದಲ್ಲಿ ಹೇಳಿದ್ದರು. ಅಂದರೆ ಹಣ ಗಳಿಕೆಯು ಶ್ರಮದಿಂದ ಬಂದಲ್ಲಿ ಅದು ತೃಪ್ತಿ ತರುವುದು ಮತ್ತು ಕೈಯಲ್ಲಿ ಉಳಿಯುತ್ತದೆ. ಇಂದಿನ ಷೇರುಪೇಟೆಯ ವ್ಯವಹಾರದಲ್ಲಿ ಹೆಚ್ಚಿನ ಸಣ್ಣ ಹೂಡಿಕೆದಾರರು ಬೇರೆಯವರ ಶಿಫಾರಸುಗಳು, ಚಟುವಟಿಕೆ­ಗಳನ್ನಾ­ಧರಿಸಿ ತಮ್ಮ ವಹಿವಾಟು ನಡೆಸುವು­ದರಿಂದ ಯಶಸ್ಸು ಕಾಣುವುದು ವಿರಳ­ವಾಗಿದೆ.

ಹೆಚ್ಚಿನ ವಿಶ್ಲೇಷಣೆಗಳು ಪಾರಿಭಾಷಿಕವಾಗಿದ್ದು ಮೂಲಾಂ­ಶ­­ಗಳನ್ನು ಗಣನೆಗೆ ತೆಗೆದುಕೊಂಡಿರು­ವುದಿಲ್ಲ. ಈಗಿನ ದಿನಗಳಲ್ಲಿ ಹೆಚ್ಚಿನವರು ಹಿಂದಿನ ಹಾಗೂ ಮುಂದಿನ ಬೆಳವಣಿಗೆ­ಗಳಿಗೆ ಒತ್ತು ಕೊಟ್ಟು ವರ್ತಮಾನ ಪರಿಗಣಿಸುತ್ತಿಲ್ಲ. ಹಾಗಾಗಿ ವಿಫಲತೆ ಹೆಚ್ಚುತ್ತಿದೆ. ಉತ್ತಮ ಮೂಲಾಂಶ­ಗಳನ್ನು ಆಧರಿಸಿ, ವರ್ತಮಾನಕ್ಕೆ ತಕ್ಕಂತೆ ಮೌಲ್ಯಾಧಾರಿತ ಚಟುವಟಿಕೆ ನಡೆಸಿದರೆ ಯಶಸ್ಸು ಲಭಿಸುತ್ತದೆ.

ಹಿಂದಿನ ತಿಂಗಳು ಮುಹೂರ್ತ ವಹಿವಾಟಿನ ದಿನ ಅಂದರೆ ನವೆಂಬರ್‌ 3ರಂದು ಸಂವೇದಿ ಸೂಚ್ಯಂಕ 21,239 ಅಂಶಗಳಲ್ಲಿತ್ತು. ಶುಕ್ರವಾ­ರದ ಚಟು­ವಟಿಕೆಯಲ್ಲಿ ಅಂತಿಮವಾಗಿ 21,079 ಅಂಶಗಳಲ್ಲಿ ವಹಿವಾಟು ಕೊನೆಗೊಳಿ­ಸಿತು. ಕಳೆದ ವಾರದ ವಿಶೇಷವೆಂದರೆ ಸ್ಟ್ರೈಡ್‌್ಸ ಆರ್ಕೊಲ್ಯಾಬ್‌ ಕಂಪನಿಯು ಪ್ರಕಟಿಸಿದ್ದ ಪ್ರತಿ ಷೇರಿಗೆ ₨500 ರಂತೆ ನೀಡುವ ಲಾಭಾಂಶಕ್ಕೆ 20 ರಂದು ನಿಗದಿತ ದಿನವಾಗಿದ್ದು ಈ ಕಾರಣ ಷೇರಿನ ಬೆಲೆಯು ₨ 882 ರಿಂದ ₨ 382 ಸಮೀಪಕ್ಕೆ ಕುಸಿಯಿತು. ₨ 882 ರಲ್ಲಿದ್ದಾಗ ಕಂಪನಿಯ ಬಂಡವಾಳ ಮೌಲ್ಯ ₨5,234 ಕೋಟಿಯಷ್ಟಿತ್ತು. ಲಾಭಾಂಶದ ನಂತರ ಅಂದರೆ 20 ರಂದು ₨ 2,258 ಕೋಟಿಗೆ ಇಳಿಯಿತು. ₨ 2,976 ಕೋಟಿಯು ಷೇರುದಾರರಿಗೆ ಲಾಭಾಂಶದ ರೂಪದಲ್ಲಿ ವಿತರಣೆಯಾ­ಗಲಿ­ರುವುದು ಗಮನಾರ್ಹ ಅಂಶವಾ­ಗಿದೆ.

ಒಟ್ಟಾರೆ ವಾರದಲ್ಲಿ ಸಂವೇದಿ ಸೂಚ್ಯಂಕವು 364 ಅಂಶಗಳಷ್ಟು ಏರಿಕೆ ಪಡೆಯಿತು. ಮಧ್ಯಮ ಶ್ರೇಣಿ ಸೂಚ್ಯಂಕ 200 ಅಂಶ ಕೆಳಮಧ್ಯಮ ಶ್ರೇಣಿ ಸೂಚ್ಯಂಕವನ್ನು 100 ಅಂಶ ಜಿಗಿತ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ₨ 4,862 ಕೋಟಿ ಮೌಲ್ಯದ ಷೇರು ಖರೀದಿಸಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ₨ 928 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದವು.  ಷೇರುಪೇಟೆಯ ಬಂಡವಾಳ ಮೌಲ್ಯ ಹಿಂದಿನ ವಾರದ ₨67.76 ಲಕ್ಷ ಕೋಟಿಯಿಂದ ₨ 69.42 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಸುಧಾರಣೆ
ಅಸಹಜ ಮತ್ತು ಹಿತಾಸಕ್ತ ಚಟು­ವಟಿಕೆ ತಡೆಗಟ್ಟುವ ಉದ್ದೇಶದಿಂದ ಜಾರಿ­ಯಾಗಿದ್ದ ಈ ಪದ್ದತಿಯ ಚಟುವಟಿಕೆ­ಯಲ್ಲಿ ಹಲವಾರು ಸುಧಾರಣೆಗಳನ್ನು ‘ಸೆಬಿ’ ಜಾರಿಗೊಳಿಸಿದೆ. ಹೊಸ ಪದ್ದತಿಯಲ್ಲಿ ಹಿಂದಿನ ತ್ರೈಮಾಸಿಕದಲ್ಲಿ ದಿನಂಪ್ರತಿ ಸರಾಸರಿ  ಲಕ್ಷ ಮೌಲ್ಯಕ್ಕೂ ಹೆಚ್ಚಿನ ವಹಿವಾಟಾಗಿದ್ದ ಕಂಪನಿಗಳಿಗೆ ವಿನಾಯ್ತಿ ನೀಡಲಾಗಿದೆ. ಕಂಪನಿ ಷೇರಿನ ಬಂಡವಾಳ ಮೌಲ್ಯ ₨10 ಕೋಟಿ ಮೀರಿರುವ ಕಂಪನಿಗಳು, ಹಿಂದಿನ ಮೂರು ವರ್ಷಗಳಲ್ಲಿ ಎರಡು ವರ್ಷ ಲಾಭಾಂಶ ನೀಡಿದ ಕಂಪನಿಗಳು, ಹಿಂದಿನ ಮೂರು ವರ್ಷಗಳಲ್ಲಿ ಎರಡು ವರ್ಷ ಲಾಭ ಗಳಿಸಿದ್ದು ಪ್ರವರ್ತಕರ ಷೇರುಗಳು ಅಡವು ಇಟ್ಟಿರುವ ಪ್ರಮಾಣವು ಶೇ 20ಕ್ಕೆ ಮೀರದಿರುವ ಕಂಪನಿಗಳು ಈ ವಿಧದ ಚಟುವಟಿಕೆ­ಯಿಂದ ಹೊರಬಂದಿ­ರುವುದು ಸ್ವಾಗ­ತಾರ್ಹ. ­ಹಾಗೂ ಆರ್ಡರನ್ನು ಪ್ರತಿ ಗಂಟೆಗೊಂದು ಬಾರಿ ದಾಖಲಿಸುವು­ದನ್ನು ಬದಲಾಯಿಸಲಾ­ಗಿದ್ದು ಕನಿಷ್ಠ 2 ಬಾರಿ ಆರ್ಡರ್‌ ಮ್ಯಾಚಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಲಾಭಾಂಶವನ್ನು ಹಿಂದಿನ 3 ವರ್ಷಗಳಲ್ಲಿ ಎರಡು ವರ್ಷ ವಿತರಿಸಿರಬೇಕೆಂಬ ನಿಯಮಕ್ಕೆ ಕನಿಷ್ಠ­ಮಟ್ಟದ ಲಾಭಾಂಶ ಗೊತ್ತುಪಡಿಸಿದರೆ ಉತ್ತಮ.

ಹೊಸ ಷೇರಿನ ವಿಚಾರ
* ಸತ್ಯ ಮೈನರ್‌್ಸ ಅಂಡ್‌ ಟ್ರಾನ್‌್ಸಪೋ­ರ್ಟರ್‌್ಸ ಲಿಮಿಟೆಡ್‌ ಕೋಲ್ಕತ್ತಾ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾ­ಗುತ್ತಿ­ರುವ ಕಂಪೆನಿಯಾಗಿದ್ದು 23ನೇ ಡಿಸೆಂಬರ್‌­ನಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

* ಆರ್ನಾಲ್‌್ಡ ಹೋಲ್ಡಿಂಗ್‌್ಸ ಲಿಮಿಟೆಡ್‌, ಮುಂಬೈನ ಕಂಪೆನಿಯಾ­ಗಿದ್ದು ಕೋಲ್ಕತ್ತಾ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿದೆ. ಈ ಕಂಪೆನಿಯ ಷೇರುಗಳು 23ನೇ ಡಿಸೆಂಬ­ರ್‌­ನಿಂದ ‘ಟಿ’ ಗುಂಪಿನಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

* ಇತ್ತೀಚೆಗೆ ₨90 ರಂತೆ, ಪ್ರತಿ ಷೇರಿಗೆ, ಸಾರ್ವಜನಿಕವಾಗಿ ಪುನರ್‌ ವಿತರಣೆ ಮಾಡಿದ ಪವರ್‌ಗ್ರಿಡ್‌ ಕಾರ್ಪೊ­ರೇಷನ್‌ ಆಫ್‌ ಇಂಡಿಯಾ 60.18 ಕೋಟಿ ಷೇರುಗಳು 19 ರಿಂದ ವಹಿವಾಟಿಗೆ ಬಿಡುಗಡೆಯಾಗಿವೆ.

ಬೋನಸ್‌ ಷೇರು
* ಐಎಲ್‌ ಅಂಡ್‌ ಎಫ್‌ಎಸ್‌ ಇನ್ವೆಸ್‌್ಟ ಮ್ಯಾನೇಜರ್‌್ಸ ವಿತರಿಸಲಿರುವ 1:2ರ ಅನುಪಾತದ ಬೋನಸ್‌ಗೆ 28ನೇ ಡಿಸೆಂಬರ್‌ ನಿಗದಿತ ದಿನವಾಗಿದೆ.

* ರಾಯ್‌ಸಾಹೆಬ್‌ ರೇಖ್‌ಚಂದ್‌ ಸ್ಪಿನ್ನಿಂಗ್‌ ಅಂಡ್‌ ವೀವಿಂಗ್‌ ಲಿ. ಕಂಪನಿ 2:1ರ ಅನುಪಾತದ ಬೋನಸ್‌ ಷೇರು ಪ್ರಕಟಿಸಿದೆ.

ತೆರೆದ ಕರೆ
* ಗ್ಲಾಕ್ಸೊ ಸ್ಮಿತ್‌ ಕ್ಲೈನ್‌ ಫಾರ್ಮ­ಸ್ಯುಟಿಕಲ್‌್ಸ ಲಿ. ಕಂಪನಿಯ ಮಾತೃಸಂಸ್ಥೆ ಬ್ರಿಟನ್ನಿನ ಗ್ಲಾಕ್ಸೊ ಸ್ಮಿತ್‌ಕ್ಲೈನ್‌ ಪಿ.ಎಲ್‌.ಸಿ.ಯು. ತನ್ನ ಸಿಂಗಪುರದ ಅಂಗಸಂಸ್ಥೆಯ ಮೂಲಕ ಭಾರತೀಯ ಕಂಪನಿಯಲ್ಲಿನ 2,06,09,774 ಷೇರುಗಳನ್ನು (ಶೇ 24.33 ರಷ್ಟು) ಪ್ರತಿ ಷೇರಿಗೆ ₨3,100 ರಂತೆ ಕೊಳ್ಳಲು ತೆರೆದ ಕರೆ ನೀಡಲಿದೆ. ಈ ಕಾರಣ ಷೇರಿನ ಬೆಲೆಯು ₨ 2,427ರ ಹಂತದಿಂದ ₨ 2,960 ರವರೆಗೂ ಜಿಗಿತ ಕಂಡಿದೆ.

* ಇಗರ್ಶಿ ಮೋಟಾರ್‌್ಸ ಇಂಡಿಯಾ ಲಿ.ಕಂಪೆ­ನಿಯ 73,14,694 ಷೇರುಗಳನ್ನು, ಪ್ರತಿ ಷೇರಿಗೆ ₨65.80 ರಂತೆ ಕೊಳ್ಳಲು, ಚೆನ್ನೈನ ಎಜೈಲ್‌ ಎಲೆಕ್ಟ್ರಿಕ್‌ ಸಬ್‌ ಅಸೆಂಬ್ಲಿ ಪ್ರೈ ಲಿ., ಸಿಂಗ­ಪುರದ ಬ್ಲಾಕ್‌ ಸ್ಟೋನ್‌ ಕ್ಯಾಪಿಟಲ್‌ ಪಾರ್ಟ್‌ನರ್ಸ್ ಕೆಮನ್‌ ಐಲ್ಯಾಂಡ್‌ನ ಬಿ.ಎಫ್‌.ಐ.ಪಿ. (ಕೆಮಾನ್‌) 4 ಇಎಸ್‌ಸಿ, ಎಫ್‌ಡಿಐ  ತ್ರಿಲಿ. ಹಾಗೂ ಚೆನ್ನೈನ ಪದ್ಮನಾಭನ್‌ ಮುಕುಂದರ ಸಹಯೋಗದೊಂದಿಗೆ 23ನೇ ಡಿಸೆಂಬರ್‌ನಿಂದ 6ನೇ ಜನವರಿ 2014 ರವರೆಗೆ ತೆರೆದ ಕರೆ ನೀಡಲಿದ್ದಾರೆ.

ಬಂಡವಾಳ ಕಡಿತ
ಈ ಹಿಂದೆ ಶ್ರೀ ಶಕ್ತಿ  ಎಲ್‌ ಪಿ ಜಿ ಲಿ. ಎಂದಿದ್ದ ಶ್ರೀ ಮಾಟ್ರೆ ಪವರ್‌ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪೆನಿಯ ಷೇರು ಬಂಡವಾಳವನ್ನು ಶೇ 40 ರಷ್ಟು ಕಡಿತಗೊಳಿಸಲಾಗುವುದು. ಅಂದರೆ ₨ 10ರ ಮುಖ ಬೆಲೆಯ ಷೇರನ್ನು ₨ 6ಕ್ಕೆ ಇಳಿಸಿ ಈ ₨ 6ರ ಷೇರನ್ನು ₨ 2ರ ಮುಖ ಬೆಲೆಗೆ ಸೀಳಲಾಗುವುದು ಅಂದರೆ ಈಗಿನ ₨ 10ರ ಮುಖ ಬೆಲೆಯ ಒಂದು ಷೇರು ₨2ರ ಮುಖ ಬೆಲೆಯ 3 ಷೇರುಗಳಾ­ಗುತ್ತವೆ. ಈ ಪ್ರಕ್ರಿಯೆಗೆ 24ನೇ ಡಿಸೆಂಬರ್‌ ನಿಗದಿತ ದಿನವಾಗಿದೆ.

ಮುಖ ಬೆಲೆ ಸೀಳಿಕೆ
* ಟಿ’ ಗುಂಪಿನ ಕೆಡಿಜೆ ಹಾಲಿಡೆ ಸ್ಕೇಪ್‌್ಸ ಅಂಡ್‌ ರಿಸಾರ್ಟ್ಸ್ ಲಿಮಿಟೆಡ್‌ ಕಂಪೆನಿಯು ತನ್ನ ಷೇರಿನ ಮುಖ ಬೆಲೆಯನ್ನು  ₨ 10 ರಿಂದ ₨ 2ಕ್ಕೆ ಸೀಳಲು 27ನೇ ಡಿಸೆಂಬರ್‌ ನಿಗದಿತ ದಿನವಾಗಿದೆ.

* ಟಿ’ ಗುಂಪಿನ ಕಾನ್ಪಿಡೆನ್‌್ಸ ಟ್ರೇಡಿಂಗ್‌ ಕಂ. ಲಿಮಿಟೆಡ್‌ ಷೇರಿನ ಮುಖ ಬೆಲೆ­ಯನ್ನು ₨ 10 ರಿಂದ ₨ 1ಕ್ಕೆ ಸೀಳಲು ಡಿಸೆಂ­ಬರ್‌ 31ನ್ನು ನಿಗದಿತ ದಿನವಾಗಿಸಿದೆ.

ವಾರದ ವಿಶೇಷ
ಒಂದು ವೃತ್ತಿಯನ್ನು ನಂಬಿಕೊಂಡರೆ ಸಾಲದು, ಒಂದೇ ಸೂರಿನಡಿ ಹಲವು ಸೇವೆ ಒದಗಿಬೇಕು ಎನ್ನುವುದು ಈಗಿನ ಉದ್ಯಮ ಮಂತ್ರ. ಈ ಹವ್ಯಾಸವೇ ಈಗಿನ ಆರ್ಥಿಕ ಅಸಮತೋಲನಕ್ಕೆ ಕಾರಣವಾಗಿದೆ. ಒಂದೇ ಸೂರಿನಡಿ ಸಕಲ ಸೌಲಭ್ಯಗಳನ್ನು ಒದಗಿಸಲು ಸ್ಪರ್ಧೆ ನಡೆಯುತ್ತಿದೆ. ಹಿಂದೆ ಬ್ಯಾಂಕ್‌ಗಳೆಂದರೆ ಠೇವಣಿ ಇಡಲು, ಉಳಿತಾಯ ಮನೋ­ಭಾವನೆ ಬೆಳೆಸಲು, ಸಾಲ ಪಡೆಯಲು ಇರುವ ಸುಭದ್ರ ಸಂಸ್ಥೆ ಎಂದಿತ್ತು. ಆದರೆ ಈಗ ಬ್ಯಾಂಕ್‌ಗಳಲ್ಲಿ ಠೇವಣಿ, ಉಳಿ­ತಾಯ,  ವಿಮೆ, ಗೃಹ ಸಾಲ, ಷೇರು­ಪೇಟೆಯ ಚಟುವಟಿಕೆ, ಕ್ರೆಡಿಟ್‌ ಕಾರ್ಡ್‌, ಮರ್ಚಂಟ್‌ ಬ್ಯಾಂಕಿಂಗ್‌ ಮುಂತಾದ ವೈವಿಧ್ಯಮಯ ಸೇವೆಗಳು ಸೇರಿಕೊಂಡು ಸಂಕೀರ್ಣವಾಗಿವೆ.

ಈ ಸ್ವಭಾವವೂ ಕಾರ್ಪೊರೇಟ್‌ ವಲಯ­ದಲ್ಲೂ ಬೆಳೆದು ಅವುಗಳ ಮೂಲ ಚಟುವಟಿಕೆಗೆ ಪೆಟ್ಟಾಗಿದೆ. ಮೊದಲಿನಂತೆ ಬ್ಯಾಂಕ್‌ಗಳು ಠೇವಣಿ ಮತ್ತು ಸಾಲಗಳಿಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಮುಂದುವರಿದಿದ್ದರೆ ಧಕ್ಷತೆ ಹೆಚ್ಚಾಗಿ ಉತ್ತಮ ಫಲಿತಾಂಶ­ದಿಂದ ‘ಎನ್‌ಪಿಎ’ ಹೆಚ್ಚಾಗುತ್ತಿರಲಿಲ್ಲ. ಬ್ಯಾಂಕ್‌ಗಳು ವಿಮಾ ಕ್ಷೇತ್ರದಲ್ಲಿ ಪ್ರವೇಶ ಮಾಡಿ ಅಲ್ಲಿನ ಪ್ರತಿನಿಧಿಗಳಿಗೆ ಸವಾಲಾಗಿವೆ.

ಪ್ರತಿನಿಧಿಗಳು ವಿಮಾ ಕೆಲಸದ ಜತೆಗೆ ಜೀವನೋಪಾಯಕ್ಕೆ ಇತರೆ ಚಟುವಟಿಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ವಿಮಾ ಕ್ಷೇತ್ರದ ಧಕ್ಷತೆ ಕ್ಷೀಣಿಸುತ್ತಿದೆ. ಹಾಗೆಯೇ ಬ್ಯಾಂಕ್‌ಗಳು ಷೇರು ವಹಿವಾಟಿಗೆ ಪ್ರವೇಶಿಸಿರುವುದರಿಂದ ಓ ವಲಯದ ವೃತ್ತಿಪರರ ಜೀವನಕ್ಕೆ ಅಡ್ಡಿಯಾಗಿವೆ. 

ಒಬ್ಬ ವ್ಯಕ್ತಿಗೆ ಒಂದು ಅಧಿಕಾರ ಎಂಬಂತೆ ಒಂದು ಸಂಸ್ಥೆ ಒಂದೇ ವಲಯದ ಚಟುವಟಿಕೆ ಅಳವಡಿಸಿಕೊಂ­ಡರೆ ಎಲ್ಲಾ ರಂಗಗಳಲ್ಲೂ  ಕಾರ್ಯ ಧಕ್ಷತೆ ಹೆಚ್ಚುವುದು.  ಕಾರ್ಪೊರೇಟ್‌ ವಲಯದಲ್ಲಿ ಪ್ರವರ್ತಕರ ಆಸಕ್ತಿ ಬೇರೆ ಕಡೆಗೆ ತಿರುಗಿದ ಕಾರಣ ಮೂಲಚಟು­ವಟಿಕೆಗೆ ಹಾನಿ ಆಗಿರುವುದಕ್ಕೆ ಡೆಕ್ಕನ್‌ ಕ್ರಾನಿಕಲ್‌, ಇಂಡಿಯಾ ಸಿಮೆಂಟ್‌, ಯು ಬಿ ಸಮೂಹದ ಕಂಪೆನಿಗಳು ಉತ್ತಮ ಉದಾಹರಣೆ. ಒಂದೇ ವೃತ್ತಿಯಲ್ಲಿ ದೊರೆಯುವ ಯಶಸ್ಸು, ತೃಪ್ತಿ ಹಲವು ವೃತ್ತಿಗಳತ್ತ ತಿರುಗಿಸಿದಾಗ ಹಂಚಿ ಹೋಗುವುದರಿಂದ ಅತೃಪ್ತಿ ಹೆಚ್ಚಾಗಿ ಉತ್ತಮ ಫಲಿತಾಂಶ ದೊರೆಯದು. ಹೊಸ ಬ್ಯಾಂಕ್‌ಗಳಿಗೆ ಪರವಾ­ನಗಿ ನೀಡುವ ಸಂದರ್ಭದಲ್ಲಿ ಇಂತಹ ಚಟುವಟಿ­ಕೆಗಳಿಗೆ ಲಕ್ಷ್ಮಣ ರೇಖೆ ವಿಧಿಸುವುದು ಉತ್ತಮ.

ಮಧ್ಯಮ ವರ್ಗದವರ ಉಳಿತಾಯ­ವನ್ನು ಹಣದುಬ್ಬರದಿಂದ ರಕ್ಷಿಸಲು  ‘ಆರ್‌ಬಿಐ’ ಹಣದುಬ್ಬರ ಸೂಚ್ಯಂಕ ಆಧರಿಸಿದ ಬಾಂಡ್‌ಗಳನ್ನು ಬಿಡುಗಡೆ ಮಾಡಲಿದೆ.  ಮುಂದಿನ ದಿನಗಳಲ್ಲಿ ಸಣ್ಣ ಹೂಡಿಕೆದಾರರು ಹಣಕಾಸು ಮಾರು­ಕಟ್ಟೆಯಲ್ಲಿ ಹೆಚ್ಚಿನ ಮಹತ್ವ ಪಡೆದಲ್ಲಿ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ಕೊಡಲು ಸಾಧ್ಯ. ಈ ಸಂದರ್ಭದಲ್ಲಿ ಅವರು ನೆನಪಿಡಬೇಕಾ­ಗಿರುವ ವಿಷಯ ‘ಅರಿತು ಹೂಡಿಕೆ ಮಾಡಿ ಅನುಸರಿಸಬೇಡಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT